ಜಮ್ಮು ಮತ್ತು ಕಾಶ್ಮೀರ ಕ್ಷೇತ್ರ ಮರುವಿಂಗಡಣಾ ಆಯೋಗದ ಶಿಫಾರಸುಗಳನ್ನು ತಿರಸ್ಕರಿಸಿ – ಸಿಪಿಐ(ಎಂ) ಪೊಲಿಟ್‌ಬ್ಯುರೊ

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಕ್ಷೇತ್ರ ಮರುವಿಂಗಡಣಾ ಆಯೋಗ ತನ್ನ ಅಂತಿಮ ವರದಿಯನ್ನು ಸಲ್ಲಿಸಿರುವುದಾಗಿ ತಿಳಿದುಬಂದಿದೆ. ಅದರ ಶಿಫಾರಸುಗಳು ಸ್ಪಷ್ಟವಾಗಿಯೂ ಅಸಮರ್ಥನೀಯ ಮತ್ತು ತರ್ಕಹೀನ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‌ಬ್ಯುರೊ ವರ್ಣಿಸಿದೆ.

ಸಂಸದೀಯ ಅಥವ ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವುದು ಅಥವ ಕಡಿಮೆ ಮಾಡುವುದರ ಮೇಲೆ ಸಾಂವಿಧಾನಿಕ ಸ್ತಂಭನವಿದೆ. ಆದರೂ ಈ ಆಯೋಗ ತನ್ನ ಈ ವರದಿಯನ್ನು ಸಲ್ಲಿಸಿದೆ. ಈ ಆಯೋಗವನ್ನು ರಚಿಸಿರುವುದು 2002ರ ಕ್ಷೇತ್ರ ಮರುವಿಂಗಡಣಾ ಕಾಯ್ದೆಯ ಅಡಿಯಲ್ಲಿ. ಆದರೆ ಅದು ಸುಪ್ರಿಂ ಕೋರ್ಟಿನಲ್ಲಿ ಸವಾಲಿಗೆ ಒಳಗಾಗಿರುವ ಜಮ್ಮು ಮತ್ತು ಕಾಶ್ಮೀರ ಮರುಸಂಘಟನಾ ಕಾಯ್ದೆ, 2019ರ ಪ್ರಕಾರ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಕ್ಷೇತ್ರಗಳನ್ನು ಪುನರ‍್ರೂಪಿಸಿದೆ. ಈ ಕಾಯ್ದೆ ಜಮ್ಮು ಮತ್ತು ಕಾಶ್ಮೀರದ ಮತದಾನ ಹಕ್ಕನ್ನು ಮಾರ್ಪಡಿಸಿದೆ. ರಾಜ್ಯ ವಿಧಾನಸಭೆಗೆ ಪ್ರತಿನಿಧಿಗಳನ್ನು ಆರಿಸುವ ಮತದಾನದ ಹಕ್ಕು ಈ ಮೊದಲು ಅಲ್ಲಿನ ಖಾಯಂ ನಿವಾಸಿಗಳಿಗಷ್ಟೇ ಸೀಮಿತವಾಗಿತ್ತು. ಈ ಕಾಯ್ದೆ ಅದನ್ನು ಈ ರಾಜ್ಯಕ್ಕೆ ಸಂಬಂಧಪಡದ ನಾಗರಿಕರಿಗೂ ವಿಸ್ತರಿಸಿದೆ.

ಈಗ ರಚಿಸಿರುವ ಆಯೋಗ ಜಮ್ಮು ಪ್ರದೇಶದಲ್ಲಿ ಆರು ಸ್ಥಾನಗಳನ್ನು ಮತ್ತು ಕಾಶ್ಮೀರ ಕಣಿವೆಯಲ್ಲಿ ಕೇವಲ ಒಂದು ಸ್ಥಾನವನ್ನು ಹೆಚ್ಚಿಸಲು ಶಿಫಾರಸು ಮಾಡಿದೆ. ಪ್ರಾದೇಶಿಕ ಕ್ಷೇತ್ರಗಳ ಮರುವಿಂಗಡಣೆ ಮಾಡಲು ಆಯೋಗವು 2011ರ ಜನಗಣತಿಯನ್ನು ಪರಿಗಣಿಸಿದೆ. ಅಂತಹ ಪ್ರಕ್ರಿಯೆಯಲ್ಲಿ ಜನಸಂಖ್ಯೆಯು ಒಂದು ಬಹುಮುಖ್ಯ ಮಾನದಂಡವಾಗಿರುತ್ತದೆ. ಜನಗಣತಿಯ ಪ್ರಕಾರ ಕಾಶ್ಮೀರದ ಜನಸಂಖ್ಯೆ 68.9 ಲಕ್ಷ ಮತ್ತು ಜಮ್ಮುವಿನ ಜನಸಂಖ್ಯೆ 53.8 ಲಕ್ಷ.

ಆಯೋಗವು ಕಾಶ್ಮೀರಕ್ಕೆ 47 ಮತ್ತು ಜಮ್ಮುವಿಗೆ 43 ಸ್ಥಾನಗಳನ್ನು ಶಿಫಾರಸು ಮಾಡಿದೆ. ಜನಸಂಖ್ಯೆಯ ಆಧಾರದ ಮೇಲೆ ನ್ಯಾಯಯುತವಾದ ಮರುವಿಂಗಡಣೆಯಲ್ಲಿ ಕಾಶ್ಮೀರಕ್ಕೆ 51 ಮತ್ತು ಜಮ್ಮುವಿಗೆ 39 ಸ್ಥಾನಗಳನ್ನು ನೀಡಬೇಕಿತ್ತು. 44% ಜನಸಂಖ್ಯೆಯ ಜಮ್ಮು 48% ಸ್ಥಾನಗಳನ್ನು ಹೊಂದಿದ್ದರೆ, 56% ಪ್ರತಿಶತದಷ್ಟು ಜನಸಂಖ್ಯೆಯನ್ನು ಹೊಂದಿರುವ ಕಾಶ್ಮೀರವು ಕೇವಲ 52% ಸ್ಥಾನಗಳನ್ನು ಹೊಂದಿರುತ್ತದೆ.

ಹೀಗಾಗಿ, ಈ ಶಿಫಾರಸುಗಳು ಸ್ಪಷ್ಟವಾಗಿ ರಾಜಕೀಯ ದುರುದ್ದೇಶದಿಂದ ಕೂಡಿವೆ, ಜಮ್ಮು ಮತ್ತು ಕಾಶ್ಮೀರದ ಜನಸಂಖ್ಯಾ ಸ್ವರೂಪ ಮತ್ತು ಸಂಯೋಜನೆಯನ್ನು ಬದಲಾಯಿಸುವ ಗುರಿಯನ್ನು ಹೊಂದಿವೆ. ಆದ್ದರಿಂದ, ಈ ಶಿಫಾರಸುಗಳನ್ನು ತಿರಸ್ಕರಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯರೊ ಹೇಳಿದೆ.

Donate Janashakthi Media

Leave a Reply

Your email address will not be published. Required fields are marked *