‘ಕಲ್ಯಾಣ ಪ್ರಭುತ್ವ’ ಶ್ರೀಲಂಕಾ ‘ರೋಗಿ’ ಪ್ರಭುತ್ವವಾದದ್ದು ಹೇಗೆ?

ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ. ನಾಗರಾಜ್

ನವ-ಉದಾರವಾದದ ಆಳ್ವಿಕೆಯಲ್ಲಿ, ಹೆಚ್ಚಾಗಿ ಸಣ್ಣ ಸಣ್ಣ ಅರ್ಥವ್ಯವಸ್ಥೆಗಳನ್ನು ಅತಿಯಾಗಿ ಬಾಧಿಸುವ ರೀತಿಯ ಒಂದು ಬಿಕ್ಕಟ್ಟು ಎರಗುತ್ತದೆ. ಇದು ಅದರ ಅದೃಷ್ಟವನ್ನು ಕ್ಷಣಮಾತ್ರದಲ್ಲಿ ಬದಲಿಸಬಲ್ಲದು. ಇದು ವಿಶ್ವ ಅರ್ಥವ್ಯವಸ್ಥೆಯನ್ನು ಇಡಿಯಾಗಿ ಬಾಧಿಸುವುದಿಲ್ಲ. ಅಷ್ಟೇ ಏಕೆ, ಅದರ ಒಂದು ದೊಡ್ಡ ಭಾಗವನ್ನೂ ಸಹ ಬಾಧಿಸುವುದಿಲ್ಲ. ಯಾವುದೋ ಒಂದು ನಿರ್ದಿಷ್ಟ ಸಮಯದಲ್ಲಿ ಬಿಕ್ಕಟ್ಟಿಗೆ ಸಿಕ್ಕಿಹಾಕಿಕೊಂಡ ನಿರ್ದಿಷ್ಟ ದೇಶಗಳನ್ನು ಬಾಧಿಸುತ್ತದೆ. ಈ ಬಿಕ್ಕಟ್ಟಿನ ಹೆಗ್ಗುರುತೆಂದರೆ, ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವ ಹಾಗೆ ಬಿಕ್ಕಟ್ಟು ಘಟಿಸಿದ ನಂತರವೇ ವಿವೇಕ ಮೂಡುವುದು. ಶ್ರೀಲಂಕಾದ ಬಿಕ್ಕಟ್ಟಿನ ಅನುಭವದಿಂದ ಕಲಿಯಬಹುದಾದ ಎರಡು ಸ್ಪಷ್ಟ ಪಾಠಗಳಿವೆ. ಮೊದಲನೆಯದು, ಜನಕಲ್ಯಾಣ ಕಾರ್ಯಕ್ರಮಗಳು ನವ-ಉದಾರವಾದಿ ಆಳ್ವಿಕೆಯೊಂದಿಗೆ ಪೂರ್ಣವಾಗಿ ಹೊಂದಿಕೆಯಾಗುವುದಿಲ್ಲ ಎಂಬುದು. ಎರಡನೆಯದು, ನವ-ಉದಾರವಾದದ ಆಳ್ವಿಕೆಯಲ್ಲಿ ಪ್ರತಿಯೊಂದು ದೇಶವೂ ಇಂತಹ ಬಿಕ್ಕಟ್ಟಿಗೆ ಈಡಾಗಲಿದೆ ಎಂಬುದು. ಶ್ರೀಲಂಕಾಕ್ಕೆ ಏನಾಗಿದೆಯೋ ಅದು ನವ-ಉದಾರವಾದಿ ಆಡಳಿತದಲ್ಲಿ ಸಿಲುಕಿರುವ ಯಾವುದೇ ದೇಶದಲ್ಲೂ ಸಂಭವಿಸಬಹುದು.

ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಬಂದಿರುವ ಬಹಳಷ್ಟು ಲೇಖನಗಳನ್ನು ಓದಿದ್ದೀರಿ. ಉದಾಹರಣೆಗೆ, ಫ್ರಂಟ್‌ಲೈನ್ ಏಪ್ರಿಲ್ 22 ರ ಸಂಚಿಕೆಯಲ್ಲಿ ಪ್ರಕಟವಾಗಿರುವ ಸಿ.ಪಿ. ಚಂದ್ರಶೇಖರ್ ಅವರ ಲೇಖನ (ಜನಶಕ್ತಿ, ಸಂಚಿಕೆ 18). ಹೊರಗಿನ ಸಾಲಗಳ ಬೃಹತ್ ಹೆಚ್ಚಳ; ಮೌಲ್ಯವರ್ಧಿತ ತೆರಿಗೆಗಳ ಭಾರೀ ಇಳಿಕೆ; ವಿತ್ತೀಯ ಕೊರತೆಯ ಬೃಹತ್ ಏರಿಕೆ; ತನ್ನ ಮಾಮೂಲಿ ಖರ್ಚುಗಳಿಗೂ ಸಹ ವಿದೇಶಿ ಸಾಲ ಮಾಡಬೇಕಾದ ಪರಿಸ್ಥಿತಿ; ಕೊರೊನಾದಿಂದಾಗಿ ಪ್ರವಾಸೋದ್ಯಮ ಆದಾಯದ ಕುಸಿತ; ವಿದೇಶಿ ವಿನಿಮಯ ಮೀಸಲು ಸಂಗ್ರಹದ ಕುಸಿತ; ಡಾಲರ್ ಎದುರು ಶ್ರೀಲಂಕಾ ಕರೆನ್ಸಿಯ ತೀವ್ರ ಅಪಮೌಲ್ಯ, ವಿದೇಶಗಳಲ್ಲಿರುವ ಶ್ರೀಲಂಕಾ ಮೂಲದ ಅನೇಕ ಕೆಲಸಗಾರರು ಅನೌಪಚಾರಿಕ ಹಣ ವರ್ಗಾವಣೆ ಮಾರ್ಗವನ್ನು ಅನುಸರಿಸಿದ ಕ್ರಮ; ವಿದೇಶಿ ವಿನಿಮಯದ ಕೊರತೆಯಿಂದಾಗಿ ರಾಸಾಯನಿಕ ಗೊಬ್ಬರಗಳನ್ನು ಆಮದು ಮಾಡಿಕೊಳ್ಳಲಾಗದೆ ಆಹಾರ ಧಾನ್ಯಗಳ ಉತ್ಪಾದನೆಯ ಇಳಿಕೆ; ಇತ್ಯಾದಿ.

ಒಂದು “ಮಾದರಿ” ಕಲ್ಯಾಣ ಪ್ರಭುತ್ವ ಎನಿಸಿಕೊಂಡಿದ್ದ ಶ್ರೀಲಂಕಾ, ದಕ್ಷಿಣ ಏಷ್ಯಾದ “ರೋಗಿ-ದೇಶ”ವಾಗಿ ಬದಲಾವಣೆ ಹೊಂದಿದ ಪರಿಸ್ಥಿತಿಗೆ ಯಾರು ಹೊಣೆಗಾರರು ಎಂಬುದರ ಬಗ್ಗೆ ಸಹಮತವಿಲ್ಲ. ಶ್ರೀಲಂಕಾದ ಈ ರೀತಿಯ ಪತನದ ಹೊಣೆಯನ್ನು ರಾಜಪಕ್ಸೆ ಸರ್ಕಾರವು ಹೊರಲೇಬೇಕು ಎಂಬುದರ ಬಗ್ಗೆ ಸಹಮತ ಇದೆಯಾದರೂ, ಸರ್ಕಾರ ಎಡವಿದ್ದೆಲ್ಲಿ ಎಂಬುದರ ಬಗ್ಗೆ ಭಿನ್ನಾಭಿಪ್ರಾಯಗಳಿವೆ.

ಚೀನಾದೊಂದಿಗೆ ತನ್ನ ಆರ್ಥಿಕ ಸಂಬಂಧಗಳನ್ನು ಶ್ರೀಲಂಕಾ ಹೆಚ್ಚಿಸಿಕೊಳ್ಳುತ್ತಿರುವುದರಿಂದಾಗಿ ಬಿಕ್ಕಟ್ಟಿಗೆ ಸಿಲುಕಿದೆ ಎಂಬುದಾಗಿ ಅಮೆರಿಕದ ಆಡಳಿತ ಮತ್ತು ಅದರ ಹೊಸ ಶೀತಲ ಸಮರ ಯೋಧರು ವ್ಯಾಖ್ಯಾನಿಸುತ್ತಾರೆ. ಅವರಿಂದ ಇನ್ನೂ ಹೆಚ್ಚು ವಿವರಣೆಗಳನ್ನು ನಾವು ಮುಂದಿನ ದಿನಗಳಲ್ಲಿ ಕೇಳಲಿದ್ದೇವೆ. ಇನ್ನೂ ಕೆಲವರು, ಶ್ರೀಲಂಕಾದ ಬಾಹ್ಯ ಸಾಲಗಳು ಏರುತ್ತಿದ್ದಾಗ ಸರ್ಕಾರ ನಿದ್ರಿಸುತ್ತಿತ್ತು ಎಂಬುದಾಗಿ ಸರ್ಕಾರದ “ಬೇಜವಾಬ್ದಾರಿತನ”ವನ್ನು ದೂಷಿಸುತ್ತಾರೆ. ಭಾರತದ ಕೆಲವು ವ್ಯಾಖ್ಯಾನಕಾರರು, ಭಾರತದ ಹಲವು ರಾಜ್ಯ ಸರ್ಕಾರಗಳು ಶ್ರೀಲಂಕಾದ ದಾರಿಯಲ್ಲಿಯೇ ಸಾಗುತ್ತಿವೆ. ಆದ್ದರಿಂದ, ಇಲ್ಲಿ ಬಿಕ್ಕಟ್ಟು ತಲೆದೋರುವ ಮುನ್ನವೇ ಅವುಗಳನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಮೂರನೇ ರೀತಿಯ ಬಿಕ್ಕಟ್ಟು

ಈ ವಿವರಣೆಗಳಲ್ಲಿರುವ ಒಂದು ಸಮಸ್ಯೆಯೆಂದರೆ, ಶ್ರೀಲಂಕಾದಲ್ಲಿ ಸೃಷ್ಟಿಯಾದ ಬಿಕ್ಕಟ್ಟನ್ನು ತ್ವರಿತಗೊಳಿಸುವಲ್ಲಿ ನವ-ಉದಾರವಾದವು ವಹಿಸಿದ ಪಾತ್ರವನ್ನು ಈ ವಿವರಣೆಗಳು ಸಂಪೂರ್ಣವಾಗಿ ನಿರ್ಲಕ್ಷಿಸಿವೆ. ಈ ಮಾತನ್ನು ದಿನವೂ ಪಠಿಸುವ ಅದೇ ಮಂತ್ರ ಎಂಬಂತೆ ಭಾವಿಸುವಂತಿಲ್ಲ. ನವ-ಉದಾರವಾದದ ಆಳ್ವಿಕೆಯಲ್ಲಿ, ದುಡಿಯುವ ಜನರು ಅತ್ಯಂತ ಅನುಕೂಲಕರ ದಿನಗಳಲ್ಲೂ ಸಂಕಷ್ಟಗಳಿಗೆ ಒಳಗಾಗುವುದು ಒಂದು ರೀತಿಯ ಬಿಕ್ಕಟ್ಟು. ಪ್ರತಿಯೊಂದು ಅರ್ಥವ್ಯವಸ್ಥೆಯಲ್ಲೂ ಮತ್ತು ಒಟ್ಟಾರೆಯಾಗಿ ಜಾಗತಿಕ ಅರ್ಥವ್ಯವಸ್ಥೆಯಲ್ಲಿ, ಉತ್ಪಾದನೆಯ ಪ್ರಕ್ರಿಯೆಯಲ್ಲಿ ಹೆಚ್ಚುತ್ತಿರುವ ಆರ್ಥಿಕ ಮಿಗುತಾಯದ ಪಾಲಿನಿಂದ ಉದ್ಭವಿಸುವ ರಾಚನಿಕ (ಮೂಲ ರಚನೆಗೆ ಸಂಬಂಧ ಪಟ್ಟಂತಹ) ಬಿಕ್ಕಟ್ಟು ಮತ್ತೊಂದು ರೀತಿಯದು.

ಸಣ್ಣ ಸಣ್ಣ ಅರ್ಥವ್ಯವಸ್ಥೆಗಳನ್ನು ಅತಿಯಾಗಿ ಬಾಧಿಸುವ ಮೂರನೇ ರೀತಿಯ ಒಂದು ಬಿಕ್ಕಟ್ಟೂ ಇದೆ. ಈ ಮೂರನೇ ರೀತಿಯ ಬಿಕ್ಕಟ್ಟು, ಸಣ್ಣ ಸಣ್ಣ ಅರ್ಥವ್ಯವಸ್ಥೆಗಳ ಅದೃಷ್ಟವನ್ನು ಕ್ಷಣಮಾತ್ರದಲ್ಲಿ ಬದಲಿಸಬಲ್ಲದು. ಇದನ್ನು ನಾನು, ನವ-ಉದಾರವಾದವು ಹರಿಯಬಿಟ್ಟ “ಸಾಂದರ್ಭಿಕ ಬಿಕ್ಕಟ್ಟು” (contingent crisis) ಎಂದು ಕರೆಯುತ್ತೇನೆ. ಈ “ಸಾಂದರ್ಭಿಕ” ಬಿಕ್ಕಟ್ಟು, “ರಾಚನಿಕ” ಬಿಕ್ಕಟ್ಟಿಗೆ ತದ್ವಿರುದ್ಧವಾದದ್ದು. ಏಕೆಂದರೆ, ಇದು ವಿಶ್ವ ಅರ್ಥವ್ಯವಸ್ಥೆಯನ್ನು ಇಡಿಯಾಗಿ ಬಾಧಿಸುವುದಿಲ್ಲ. ಅಷ್ಟೇ ಏಕೆ, ಅದರ ಒಂದು ದೊಡ್ಡ ಭಾಗವನ್ನೂ ಸಹ ಬಾಧಿಸುವುದಿಲ್ಲ. ಯಾವುದೋ ಒಂದು ನಿರ್ದಿಷ್ಟ ಸಮಯದಲ್ಲಿ ಬಿಕ್ಕಟ್ಟಿಗೆ ಸಿಕ್ಕಿಹಾಕಿಕೊಂಡ ನಿರ್ದಿಷ್ಟ ದೇಶಗಳನ್ನು ಬಾಧಿಸುತ್ತದೆ. ಈ ಬಿಕ್ಕಟ್ಟಿನ ಹೆಗ್ಗುರುತೆಂದರೆ, ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವ ಹಾಗೆ ಬಿಕ್ಕಟ್ಟು ಘಟಿಸಿದ ನಂತರವೇ ವಿವೇಕ ಮೂಡುವುದು. ಈ ಅರ್ಥದಲ್ಲಿ, ಗ್ರೀಸ್ ದೇಶವು ಎದುರಿಸಿದ ಬಿಕ್ಕಟ್ಟು ಒಂದು “ಸಾಂದರ್ಭಿಕ” ಬಿಕ್ಕಟ್ಟಾಗಿತ್ತು. ಗ್ರೀಸ್, ಬಾಹ್ಯ ಸಾಲಗಳನ್ನು ಒಂದರ ಮೇಲೆ ಇನ್ನೊಂದರAತೆ ಅಪಾರ ಪ್ರಮಾಣದಲ್ಲಿ ಪೇರಿಸಿಕೊಳ್ಳುತ್ತಿದ್ದರೂ, ಅಷ್ಟೊಂದು ಸಾಲಗಳನ್ನು ಅದು ತೀರಿಸಬಲ್ಲದೇ ಎಂಬ ಪ್ರಶ್ನೆಯಾಗಲಿ ಅಥವಾ ವಿವೇಚನೆಯಾಗಲಿ ಮೂಡಲಿಲ್ಲ. ಈ ಸಾಲಗಳನ್ನು ತೀರಿಸಲು ಸಾಧ್ಯವಿಲ್ಲ ಎನ್ನುವ ವಿವೇಕ ಮೂಡುವ ಹೊತ್ತಿಗೆ, ಅರ್ಥವ್ಯವಸ್ಥೆಯು ಅದಾಗಲೇ ಈ ಸಾಲಗಳನ್ನು ಮನ್ನಾ ಮಾಡದ ಹೊರತು ಬದುಕುಳಿಯುವ ಹಂತವನ್ನು ಮೀರಿದ ಪರಿಸ್ಥಿತಿಯಲ್ಲಿತ್ತು. ಈ “ಸಾಂದರ್ಭಿಕ” ಬಿಕ್ಕಟ್ಟುಗಳು ಆಕಸ್ಮಿಕ ವಿದ್ಯಮಾನಗಳಲ್ಲ. ಈ ಬಿಕ್ಕಟ್ಟುಗಳು ನವ-ಉದಾರವಾದಿ ಆಳ್ವಿಕೆಯೊಂದಿಗೆ ಒಂದು ನಿಕಟ ಮತ್ತು ಜೀವಂತ ಸಂಬಂಧ ಹೊಂದಿವೆ. ಇದ್ದಕ್ಕಿದ್ದಂತೆ ಬಿಕ್ಕಟ್ಟು ಎರಗುವ ವರೆಗೂ, ಎಷ್ಟು ಪ್ರಮಾಣದ ಸಾಲವನ್ನು “ಮಿತಿಮೀರಿದ್ದು” ಎಂದು ಮುಂಚಿತವಾಗಿ ತಿಳಿದುಕೊಳ್ಳುವ ಮಾರ್ಗವಿಲ್ಲವಾದ್ದರಿಂದ ಈ ಬಿಕ್ಕಟ್ಟುಗಳು ಉದ್ಭವಿಸುತ್ತವೆ. ನವ-ಉದಾರವಾದವು ಒಂದು ಅರ್ಥವ್ಯವಸ್ಥೆಯಲ್ಲಿ, ಆನ್-ಆಫ್ ಮಾಡುವ ಸ್ವಿಚ್‌ಅನ್ನು ಒತ್ತಿದ ರೀತಿಯಲ್ಲಿ ತರುವ ಬಿಕ್ಕಟ್ಟನ್ನು, ಒಂದು “ಸಾಂದರ್ಭಿಕ ಬಿಕ್ಕಟ್ಟು” ಎಂದು ನಾನು ಕರೆಯುತ್ತೇನೆ.

ಈ ಅಭಿಪ್ರಾಯವನ್ನು ಕೆಲವರು ಅಲ್ಲಗಳೆಯುತ್ತಾರೆ, ಬಿಕ್ಕಟ್ಟು ಬರುವುದನ್ನು ಅವರು ಗ್ರಹಿಸಿದ್ದರು ಎಂಬ ನೆಲೆಯಲ್ಲಿ. ಆದರೆ ಚುನಾವಣಾ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಸರ್ಕಾರವು, ಅದೊಂದು ಪ್ರತಿಗಾಮಿ ಸರ್ಕಾರವೇ ಇರಲಿ, ಕೆಲವು ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ. ಆರಂಭದಿಂದಲೇ ಕೆಲವರು ಈ ಬಗ್ಗೆ ಕೆಲವು ಭಯಾನಕ ಮುನ್ಸೂಚನೆಗಳನ್ನು ಕೊಡಲಾರಂಭಿಸಿದರೂ ಕೂಡ, ಅಂತಹ  ಸರಕಾರಕ್ಕೂ ತನ್ನ ವೆಚ್ಚಗಳನ್ನು ಕಡಿತಗೊಳಿಸಲು, ಕಲ್ಯಾಣ ಕಾರ್ಯಕ್ರಮಗಳನ್ನು ರದ್ದು ಮಾಡಲು (ಈ ಕಾರ್ಯಕ್ರಮಗಳು ಎಷ್ಟೇ ಮಿತಿಗಳಿಂದ ಕೂಡಿದ್ದರೂ ಸಹ), ಪಿಂಚಣಿಯ ಮೊತ್ತವನ್ನು ಕಡಿತಗೊಳಿಸಲು, ಸರ್ಕಾರಿ ಕಾಲೇಜುಗಳ ಶಿಕ್ಷಕರು, ಸರ್ಕಾರಿ ಆಸ್ಪತ್ರೆಗಳ ವೈದ್ಯರೂ ಸೇರಿದಂತೆ ಸರ್ಕಾರಿ ನೌಕರರ ವೇತನವನ್ನು ತಡೆಹಿಡಿಯಲು ಸಾಧ್ಯವಾಗದು.

ನವ-ಉದಾರವಾದ ಮೂಲಕಾರಣ

ಪಾವತಿ ಶೇಷದ (ವಿದೇಶ ವ್ಯಾಪಾರದ ಬಾಕಿ ಚುಕ್ತಾ) ಸಮಸ್ಯೆಯನ್ನು ತಾತ್ಕಾಲಿಕವಾಗಿ ಎದುರಿಸುತ್ತಿರುವ ಒಂದು ಅರ್ಥವ್ಯವಸ್ಥೆಯ ಪರಿಸ್ಥಿತಿಯನ್ನು ನೋಡೋಣ. ಪಾವತಿ ಶೇಷದ ಸಮಸ್ಯೆಯನ್ನು ಆ ದೇಶವು ವಿದೇಶಿ ಸಾಲದ ಮೂಲಕ ಪರಿಹರಿಸಿಕೊಳ್ಳಬಹುದು. ಅದು ಸುಲಭ ಸಾಧ್ಯವೂ ಹೌದು. ಏಕೆಂದರೆ, ಅಲ್ಲಿಯವರೆಗೂ ಆ ದೇಶವು ಯಾವುದೇ ಬಿಕ್ಕಟ್ಟನ್ನೂ ಕಂಡಿಲ್ಲ. ಅದೂ ಅಲ್ಲದೆ, ಈ ಉದ್ದೇಶಕ್ಕಾಗಿ ಸಾರ್ವಜನಿಕ ಸೌಕರ್ಯಗಳ ಮೇಲಿನ ವೆಚ್ಚಗಳನ್ನು ಕಡಿತಗೊಳಿಸಿ ಜನರಿಗೆ ಕಷ್ಟ ಕೊಡುವುದರ ಬದಲು, ಮತ್ತು ಅದೂ ಸಾಲದು ಎಂಬಂತೆ ಒಂದು ಆರ್ಥಿಕ ಹಿಂಜರಿತವನ್ನೂ ಸಹ ಉಂಟುಮಾಡುವುದರ ಬದಲು, ಹೊರಗಿನ ಸಾಲವೇ ಒಂದು ಉತ್ತಮ ಆಯ್ಕೆಯಾಗಿ ತೋರುತ್ತದೆ. ಆದರೆ, ಈ ತಾತ್ಕಾಲಿಕ ಪಾವತಿ ಶೇಷದ ಸಮಸ್ಯೆಯು ಒಂದು ವೇಳೆ ಮೂಲತಃ ಊಹಿಸಿಕೊಂಡದ್ದಕ್ಕಿಂತ ಹೆಚ್ಚು ದಿನಗಳ ಕಾಲ ಮುಂದುವರಿದರೆ, ಆಗ ಸಾಲದ ಕಂತುಗಳನ್ನು ಕಠಿಣ ಷರತ್ತುಗಳೊಂದಿಗೆ ಮಾಡಿದ ಹೊಸ ಸಾಲಗಳ ಮೂಲಕ ತೀರಿಸಬೇಕಾಗುತ್ತದೆ. ಹೊಸ ಸಾಲಗಳ ಈ ಕಠಿಣ ಷರತ್ತುಗಳು ಶೀಘ್ರದಲ್ಲೇ ಎಷ್ಟು ಪ್ರತಿಕೂಲವಾಗಿ ಪರಿಣಮಿಸುತ್ತವೆ ಎಂದರೆ, ಬಿಕ್ಕಟ್ಟು ಬಾಗಿಲ ಬಳಿಗೇ ಬಂದಿರುತ್ತದೆ.

ಬಿಕ್ಕಟ್ಟಿನ ಈ ವಿವರಣೆಯು ರಾಜಪಕ್ಸೆ ಸರ್ಕಾರವನ್ನು ಅದು ಮಾಡಿದ ಅಪರಾಧಗಳಿಂದ ಮುಕ್ತಗೊಳಿಸುವ ಉದ್ದೇಶ ಹೊಂದಿಲ್ಲ. ಪರೋಕ್ಷ ತೆರಿಗೆ ಕಡಿತದ ಕ್ರಮಗಳು ವಿತ್ತೀಯ ಕೊರತೆಯನ್ನು ತೀವ್ರವಾಗಿ ಹೆಚ್ಚಿಸಿದವು, ನಿಜ. ಆದರೆ, ಪರೋಕ್ಷ ತೆರಿಗೆ ಕಡಿತದಿಂದ ಉಂಟಾದ ನಷ್ಟವನ್ನು ನೇರ ತೆರಿಗೆಗಳನ್ನು ಹೆಚ್ಚಿಸುವ ಮೂಲಕ ಸರಿಪಡಿಸಿಕೊಳ್ಳಲಿಲ್ಲ. ನಂತರ ಜಾರಿಗೊಳಿಸಿದ ಸಂಪತ್ತಿನ ತೆರಿಗೆಯ ಏರಿಕೆಯ ಪ್ರಮಾಣವು ಅತ್ಯಲ್ಪವೂ ಹೌದು ಮತ್ತು ತುಂಬಾ ತಡವಾಗಿ ಜಾರಿ ಮಾಡಿದ ಕ್ರಮವೂ ಹೌದು. ಹಾಗಾಗಿ ಬಿಕ್ಕಟ್ಟು ಬೃಹದಾಕಾರವಾಗಿ ಬೆಳೆಯಿತು. ಹಾಗೆಯೇ, ರಾಜಪಕ್ಸೆ ಸರ್ಕಾರದ ಅಸಂಖ್ಯಾತ ಲೋಪ-ದೋಷಗಳ ಬಗ್ಗೆ (ಅಂದರೆ, ಮಾಡಬೇಕಾದದ್ದನ್ನು ಬಿಟ್ಟು ಮಾಡಬಾರದ ಕೃತ್ಯಗಳ ಬಗ್ಗೆ) ಕಣ್ಣುಮುಚ್ಚಿಕೊಳ್ಳವುದು ಸಾಧ್ಯವಿಲ್ಲ. ಆದರೆ, ಸರ್ಕಾರದ ಲೋಪ-ದೋಷಗಳ ಬಗ್ಗೆ ಮಾತ್ರ ಗಮನವನ್ನು ಕೇಂದ್ರೀಕರಿಸಿ, ಸಂಕಷ್ಟಕ್ಕೊಳಗಾದ ಜನರು ಬೀದಿಗಿಳಿಯುವಂತೆ ಮಾಡಿದ ಶ್ರೀಲಂಕಾದ ಬಿಕ್ಕಟ್ಟು ಪ್ರಕಟಗೊಳ್ಳಲು ಮೂಲಭೂತವಾಗಿ ಕಾರಣವಾದ ನವ-ಉದಾರವಾದದ ಸಂದರ್ಭವನ್ನು ನಿರ್ಲಕ್ಷಿಸುವುದು ಬುದ್ಧಿಹೀನ ಕೃತ್ಯವಾಗುತ್ತದೆ.

ಎರಡು ಸ್ಪಷ್ಟ ಪಾಠಗಳು

ಶ್ರೀಲಂಕಾದ ಬಿಕ್ಕಟ್ಟಿನ ಅನುಭವದಿಂದ ಕಲಿಯಬಹುದಾದ ಎರಡು ಸ್ಪಷ್ಟ ಪಾಠಗಳಿವೆ. ಮೊದಲನೆಯದು, ಕಲ್ಯಾಣ ಕಾರ್ಯಕ್ರಮಗಳು ನವ-ಉದಾರವಾದಿ ಆಳ್ವಿಕೆಯೊಂದಿಗೆ ಪೂರ್ಣವಾಗಿ ಹೊಂದಿಕೆಯಾಗುವುದಿಲ್ಲ ಎಂಬುದು. ಕೆಲವು ವರ್ಷಗಳ ಹಿಂದೆ ಶ್ರೀಲಂಕಾವು ಮೂರನೇ ಜಗತ್ತಿನ ಸನ್ನಿವೇಶದಲ್ಲಿ ಅಸೂಯೆಪಡುವಂತಹ ಒಂದು ಕಲ್ಯಾಣ ರಾಜ್ಯವನ್ನು ನಿರ್ಮಿಸಿತ್ತು. ನವ-ಉದಾರವಾದಿಯಲ್ಲದ ಒಂದು ಆಳ್ವಿಕೆಯಲ್ಲಿ ವಿದೇಶಿ ವಿನಿಮಯ ಗಳಿಕೆಯಲ್ಲಿ ಒಂದು ವೇಳೆ ಹಠಾತ್ ಕುಸಿತವಾದರೂ ಸಹ, ಬಾಹ್ಯ ಸಾಲವನ್ನು ಹೆಚ್ಚಿಸಿಕೊಳ್ಳದೆಯೂ ಸಹ, ಅಗತ್ಯವಲ್ಲದ ಅನೇಕ ಆಮದುಗಳನ್ನು ಕಡಿತಗೊಳಿಸುವ ಮೂಲಕ, ಕಲ್ಯಾಣ ರಾಜ್ಯವನ್ನು ಉಳಿಸಿಕೊಳ್ಳಬಹುದು. ಆದರೆ, ಇದೇ ಈ ಪರಿಸ್ಥಿತಿಯಲ್ಲಿ, ನವ-ಉದಾರವಾದ ನೀತಿಯ ಸರ್ಕಾರವು ತನ್ನ ವೆಚ್ಚಗಳ ಕಡಿತದ ಮೂಲಕ ಕಲ್ಯಾಣ ಕಾರ್ಯಕ್ರಮಗಳನ್ನು ಕಡಿತಗೊಳಿಸಿ, ಒಟ್ಟಾರೆ ಬೇಡಿಕೆಯನ್ನು ತಗ್ಗಿಸಿ, ಆ ಮೂಲಕ ಆಮದುಗಳು ತಗ್ಗುವಂತೆ ನೋಡಿಕೊಳ್ಳುತ್ತದೆ. ಅಥವಾ, ಬಾಹ್ಯ ಸಾಲಗಳನ್ನು ಹೆಚ್ಚಿಸಿಕೊಳ್ಳುವ ಮೂಲಕ ಕಲ್ಯಾಣ ಕಾರ್ಯಕ್ರಮಗಳೂ ಸೇರಿದಂತೆ ತನ್ನ ಖರ್ಚು-ವೆಚ್ಚಗಳನ್ನು ಮುಂದುವರೆಸುತ್ತದೆ. ಇಂತಹ ಒಂದು ಸನ್ನಿವೇಶದಲ್ಲಿ, ವಿದೇಶಿ ವಿನಿಮಯ ಗಳಿಕೆಯ ವಸೂಲಾತಿಯಲ್ಲಿ (ರಫ್ತು ಬಾಕಿ ಪಡೆಯುವಲ್ಲಿ) ವಿಳಂಬವಾದರೆ, ಮತ್ತು ಅಂತಹ ಕಾರಣದಿಂದಾಗಿ ಸಾಲದ ಕಂತು ಕಟ್ಟುವುದು ತಡವಾದ ಸಂದರ್ಭಗಳಲ್ಲಿ, ಸಾಲದ ಕಠಿಣ ಷರತ್ತುಗಳನ್ನು ಜಾರಿಗೊಳಿಸಿದಾಗ ಬಹಳ ಬೇಗನೇ ದೇಶವು ಸಾಲದ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ. ಆಗ, ಕಲ್ಯಾಣ ಕಾರ್ಯಕ್ರಮಗಳ ಮುಂದುವರಿಕೆ ಅಸಾಧ್ಯವಾಗುತ್ತದೆ. ಇದನ್ನು ಬೇರೆ ಮಾತುಗಳಲ್ಲಿ ಹೇಳುವುದಾದರೆ, ನವ-ಉದಾರವಾದಿ ಆಳ್ವಿಕೆಯಲ್ಲಿಯೂ ಒಂದು ದೇಶವು ತನ್ನ ಕಲ್ಯಾಣ ಕಾರ್ಯಕ್ರಮಗಳನ್ನು ಮುಂದುವರೆಸುತ್ತದೆ ಎಂದು ಸ್ವಲ್ಪ ಸಮಯದವರೆಗೆ ತೋರಿಸಿಕೊಳ್ಳಬಹುದಾದರೂ, ವ್ಯವಸ್ಥೆಗೆ ಮೊದಲ ಆಘಾತ ತಾಗಿದ ಕೂಡಲೇ, ನವ-ಉದಾರವಾದಿ ಆಳ್ವಿಕೆಗೂ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೂ ಆಗಿ ಬರುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಕಲ್ಯಾಣ ಕಾರ್ಯಕ್ರಮಗಳಿಗೂ ಮತ್ತು ತನಗೂ ಆಗಿ ಬಾರದ ಅಂಶವನ್ನು ನವ-ಉದಾರವಾದಿ ಆಳ್ವಿಕೆಯು ತಾತ್ಕಾಲಿಕವಾಗಿ ಮರೆಮಾಚಿದರೂ ಸಹ, ಆಘಾತಗಳು ಅದನ್ನು ಬಹಿರಂಗಪಡಿಸುತ್ತವೆ.

ಈ ವಿದ್ಯಮಾನವು ಅನೇಕ ಅರ್ಥಶಾಸ್ತ್ರಜ್ಞರು ಮಂಡಿಸುವ ವಾದಗಳಿಗೆ ವಿರುದ್ಧವಾಗಿದೆ. ಒಂದು “ಹೂಡಿಕೆದಾರ-ಸ್ನೇಹಿ ವಾತಾವರಣ”ವನ್ನು ಸೃಷ್ಟಿಸುವ ಮೂಲಕ ನವ-ಉದಾರವಾದಿ ಆಳ್ವಿಕೆಯು ವಿದೇಶಿ ಹೂಡಿಕೆಯನ್ನು ಆಕರ್ಷಿಸುತ್ತದೆ ಮತ್ತು ದೇಶದಲ್ಲಿ ಹೂಡಿಕೆಯನ್ನು ಉತ್ತೇಜಿಸುತ್ತದೆ. ದೇಶದ ಒಟ್ಟು ಆಂತರಿಕ ಉತ್ಪನ್ನದ ಬೆಳವಣಿಗೆಯ ದರ ಉನ್ನತವಾಗುತ್ತದೆ. ಹಾಗಾಗಿ, ಕಲ್ಯಾಣ ಕಾರ್ಯಕ್ರಮಗಳ ಅಳವಡಿಕೆಯನ್ನು ಅಷ್ಟುಮಟ್ಟಿಗೆ ಸುಗಮಗೊಳಿಸುತ್ತದೆ ಎಂಬುದಾಗಿ ಈ ಅರ್ಥಶಾಸ್ತ್ರಜ್ಞರು ನಂಬುತ್ತಾರೆ. ಈ ವಾದದಲ್ಲಿ ಎರಡು ಸ್ಪಷ್ಟ ನ್ಯೂನತೆಗಳಿವೆ: ಮೊದಲನೆಯದು, ಶ್ರೀಮಂತರ ಮೇಲೆ ಸೂಕ್ತ ತೆರಿಗೆಗಳನ್ನು ವಿಧಿಸದ ಹೊರತು ಜಿಡಿಪಿ ಬೆಳವಣಿಗೆ ದರ ಹೆಚ್ಚಳವೇ ಕಲ್ಯಾಣ ಪ್ರಭುತ್ವ ನಿರ್ಮಾಣಕ್ಕೆ ಅನುವಾಗುವುದಿಲ್ಲ. ಮತ್ತು, “ಹೂಡಿಕೆಯ ವಾತಾವರಣ”ವನ್ನು ಉಳಿಸಿಕೊಳ್ಳುವ ಗೀಳಿನಲ್ಲಿ ಸರ್ಕಾರವು ಶ್ರೀಮಂತರ ಮೇಲೆ ತೆರಿಗೆಗಳನ್ನು ಹೆಚ್ಚಿಸುವುದೇ ಇಲ್ಲ. ಇದು ದೊಡ್ಡ ಪ್ರಮಾಣದ ಕಲ್ಯಾಣ ವೆಚ್ಚಗಳಿಗೆ ಅಡ್ಡಿಯಾಗುತ್ತದೆ. ಎರಡನೆಯದು, ನಾವು ಈಗಷ್ಟೇ ಚರ್ಚಿಸಿದಂತೆ, ಹಲವಾರು ವರ್ಷಗಳಿಂದಲೂ ದೇಶವು ಪರಂಪರಾಗತವಾಗಿ ಅನುಸರಿಸಿದ ಕಲ್ಯಾಣ ಕಾರ್ಯಕ್ರಮಗಳನ್ನು ಒಂದು ವೇಳೆ ನವ-ಉದಾರವಾದಿ ಆಳ್ವಿಕೆಯು ಮುಂದುವರಿಸಿ, ತನಗೂ ಮತ್ತು ಕಲ್ಯಾಣ ಪ್ರಭುತ್ವ ಪೋಷಣೆಗೂ ಸಂಘರ್ಷವಿಲ್ಲ ಎಂದು ತೋರಿಸಿಕೊಳ್ಳುತ್ತದೆ. ಆದರೆ ವ್ಯವಸ್ಥೆಗೆ ಆಘಾತ ತಾಗಿದ ಒಡನೆಯೇ ತನ್ನ ನಿಜ ರೂಪವನ್ನು ತೋರಿಸುತ್ತದೆ.

ಶ್ರೀಲಂಕಾದ ಬಿಕ್ಕಟ್ಟಿನ ಎರಡನೆಯ ಪಾಠವೆಂದರೆ, ನವ-ಉದಾರವಾದದ ಆಳ್ವಿಕೆಯಲ್ಲಿ ಪ್ರತಿಯೊಂದು ದೇಶವೂ ಇಂತಹ “ಸಾಂದರ್ಭಿಕ ಬಿಕ್ಕಟ್ಟಿಗೆ” ಈಡಾಗಲಿದೆ. ಶ್ರೀಲಂಕಾಕ್ಕೆ ಏನಾಗಿದೆಯೋ ಅದು ನವ-ಉದಾರವಾದಿ ಆಡಳಿತದಲ್ಲಿ ಸಿಲುಕಿರುವ ಯಾವುದೇ ದೇಶಕ್ಕೂ ಸಂಭವಿಸಬಹುದು. ನವ-ಉದಾರವಾದಿ ಆಳ್ವಿಕೆಯಲ್ಲಿ, ರಾಜ್ಯ ಸರ್ಕಾರಗಳನ್ನು ಭಾರತದ ಅನೇಕ ವ್ಯಾಖ್ಯಾನಕಾರರು ಒತ್ತಾಯಿಸುತ್ತಿರುವಂತೆ, ಸಾರ್ವಜನಿಕ ವೆಚ್ಚಗಳ ಕಡಿತ ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ಮೊಟಕು ಮಾಡುವುದು ಸರಿಯಾದ ಮಾರ್ಗವಲ್ಲ. ಬದಲಿಗೆ, ನವ-ಉದಾರವಾದಿ ಆಳ್ವಿಕೆಯಿಂದ ಪೂರ್ಣವಾಗಿ ಹೊರಬರುವುದೇ ಸರಿಯಾದ ಮಾರ್ಗ. ಖಚಿತವಾಗಿ ಹೇಳುವುದಾದರೆ, ನವ-ಉದಾರವಾದಿ ಆಳ್ವಿಕೆಯಿಂದ ಹೊರಬರುವುದು ಸುಲಭವಲ್ಲ. ಅದನ್ನು ಬಿಟ್ಟರೆ ಬೇರೆ ದಾರಿಯೂ ಇಲ್ಲ. ಶ್ರೀಲಂಕಾದ ಸರ್ಕಾರ ಎಡವಿದ್ದು ಎಲ್ಲಿ ಎಂದರೆ, ಆ ದೇಶವನ್ನು ನವ-ಉದಾರವಾದದ ಕಪಿಮುಷ್ಟಿಯಲ್ಲಿ ಸಿಲುಕಿಸುವಲ್ಲಿ ಎಂದೇ ಹೇಳಬಹುದು. ಸರ್ಕಾರಗಳಿಗೆ ಆಯ್ಕೆಗಳೇ ಇಲ್ಲ. ಹಾಗಾಗಿ, ಅಂತಾರಾಷ್ಟ್ರೀಯ ಹಣಕಾಸು ಬಂಡವಾಳವು ನವ-ಉದಾರವಾದಿ ಆಳ್ವಿಕೆಯನ್ನು ಅಳವಡಿಸಿಕೊಳ್ಳುವತ್ತ ದೇಶ ದೇಶಗಳನ್ನು ತಳ್ಳುತ್ತದೆ.

Donate Janashakthi Media

Leave a Reply

Your email address will not be published. Required fields are marked *