ನವದೆಹಲಿ: ದೇಶಾದ್ಯಂತ ಕೋವಿಡ್ -19 ಚಿಕಿತ್ಸೆಗಾಗಿ ವಿವಿಧ ಮಾದರಿಯ ಚಿಕಿತ್ಸೆಗಳು ಒಳಗೊಂಡಿದ್ದು, ಸಾಂಪ್ರದಾಯಿಕ ಮಾದರಿ ಅಥವಾ ಮನೆಮದ್ದುಗಳನ್ನು ಒಂದೇ ಮಾದರಿಯಾಗಿ ಬಳಸುವಂತೆ ನಿರ್ದೇಶಿಸಲು ಆಗದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಕೊರೊನಾ ಸಾಂಕ್ರಾಮಿಕ ವೈರಸ್ ಅನ್ನು ನಿವಾರಣೆ ಮಾಡಲು ದೇಹದಲ್ಲಿನ ಪ್ರತಿರೋಧಕ ವ್ಯವಸ್ಥೆಯ ಉತ್ತೇಜನಕ್ಕಾಗಿ ‘ಕೆಂಪಿರುವೆ ಚಟ್ನಿ’ ಬಳಸಲು ನಿರ್ದೇಶಿಸಬೇಕೆಂದು ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸರ್ವೋಚ್ಛ ನ್ಯಾಯಾಲಯ ವಜಾಗೊಳಿಸಿದೆ.
ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠ ಈ ಮಹತ್ವದ ತೀರ್ಪು ನೀಡಿದೆ. ಕೋವಿಡ್‌ಗೆ ಲಸಿಕೆ ಹಾಕಿಸಿಕೊಳ್ಳುವಂತೆ ಒಡಿಶಾದ ಬುಡಕಟ್ಟು ಸಮುದಾಯದ ಅರ್ಜಿದಾರರಾದ ನಯಾಧರ್ ಪಾಧಿಯಾಲ್ ಅವರಿಗೆ ಸೂಚಿಸಿದ ಪೀಠವು ಅರ್ಜಿಯನ್ನು ವಜಾಗೊಳಿಸಿತು.
ಇದನ್ನು ಓದಿ: ಪೂರ್ವಗ್ರಹ ಮನಸ್ಥಿತಿಯಿಂದ ಹೊರಬನ್ನಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ
ನಮ್ಮಲ್ಲಿ ಸಾಕಷ್ಟು ಸಾಂಪ್ರದಾಯಿಕ ಜ್ಞಾನ ಅಡಗಿದೆ. ಆದರೆ, ಕೆಂಪಿರುವೆ ಚಟ್ನಿಯು ಕೊರೊನಾ ಗುಣವಾಗಿಸುತ್ತದೆ ಎಂದು ಎಲ್ಲರೂ ಇದನ್ನು ಬಳಸಿ ಎಂದು ತೀರ್ಪು ನೀಡಲಾಗದು. ಈ ಪರಿಹಾರಗಳು ನಿಮ್ಮ ಸ್ವಂತ ಬಳಕೆಗಾಗಿ ಇದೆ ಹಾಗೂ ಇದರ ಪರಿಣಾಮವನ್ನು ನೀವೇ ಅನುಭವಿಸಿ ಅರಿಯಬೇಕೆ ಹೊರತು, ಸಾಂಪ್ರದಾಯಿಕ ಜ್ಞಾನವನ್ನು ದೇಶಾದ್ಯಂತ ಅನ್ವಯಿಸಲು ಸಾಧ್ಯವಿಲ್ಲ. ನ್ಯಾಯಪೀಠ ಹೇಳಿದೆ.
ಕೆಂಪಿರುವೆ ಚಟ್ನಿ, ಕೆಂಪು ಇರುವೆಗಳು ಮತ್ತು ಹಸಿರು ಮೆಣಸಿನಕಾಯಿಗಳ ಮಿಶ್ರಣವಾಗಿದ್ದು, ಜ್ವರ, ಕೆಮ್ಮು, ನೆಗಡಿ, ಆಯಾಸ, ಉಸಿರಾಟದ ಸಮಸ್ಯೆ ಇತ್ಯಾದಿಗಳ ಚಿಕಿತ್ಸೆಗಾಗಿ ಒಡಿಶಾ ಮತ್ತು ಛತ್ತೀಸಗಡ ಸೇರಿದಂತೆ ದೇಶದ ಬುಡಕಟ್ಟು ವಲಯಗಳಲ್ಲಿ ಸಾಂಪ್ರದಾಯಿಕವಾಗಿ ಔಷಧವೆಂದು ಪರಿಗಣಿಸಲಾಗಿದೆ.
ಕೆಂಪಿರುವೆಯಲ್ಲಿ ರೋಗನಿರೋಧಕ ಶಕ್ತಿ ಇದ್ದು, ಅದರಿಂದ ತಯಾರಿಸಿದ ಚಟ್ನಿ ಸೇವಿಸುವುದರಿಂದ ಕೋವಿಡ್ ಸೋಂಕು ನಿಯಂತ್ರಣಿಸಬಹುದಾಗಿದೆ ಎಂಬ ಬಗ್ಗೆ ಸಂಶೋಧನೆ ನಡೆಸಬೇಕು ಎಂಬ ಕುರಿತು ಮೊದಲು ಬಾರಿಪಾದ ಎಂಜಿನಿಯರ್ ಹಾಗೂ ಸಂಶೋಧಕ ನಯಾಧರ್ ಪಾಧಿಯಾಲ್ ಜೂನ್ ತಿಂಗಳಿನಲ್ಲಿ ಪ್ರಸ್ತಾಪಿಸಿದ್ದರು ಅಲ್ಲದೆ, ಒಡಿಶಾ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಕೆಂಪಿರುವೆಯಲ್ಲಿ ಕೋವಿಡ್ ವೈರಸ್ ಕೊಲ್ಲುವ ಔಷಧ ಗುಣ ಇದೆಯೇ? ಎಂಬುದರ ಬಗ್ಗೆ ಸಂಶೋಧನೆ ಮಾಡಿ ಮೂರು ತಿಂಗಳೊಳಗೆ ವರದಿ ನೀಡುವಂತೆ ಆಯುಷ್ ಸಚಿವಾಲಯ ಹಾಗೂ ಕೌನ್ಸಿಲ್ ಆಫ್ ಮೆಡಿಕಲ್ ಆ್ಯಂಡ್ ರಿಸರ್ಚ್ಗೆ ನಿರ್ದೇಶಿಸಿತ್ತು.
ಇದನ್ನು ಓದಿ: ಕೋವಿಡ್‌ನಿಂದ ಮೃತರ ಕುಟುಂಬಗಳಿಗೆ ಪರಿಹಾರಕ್ಕೆ ಮಾರ್ಗಸೂಚಿ ರೂಪಿಸಿ: ಸುಪ್ರೀಂ ಕೋರ್ಟ್
ಕಾಲಕ್ಕೆ ತಕ್ಕಂತೆ ರೋಗ ನಿರೋಧಕ ಶಕ್ತಿ ಉತ್ಪತ್ತಿ ಮಾಡುವ ಗುಣವುಳ್ಳ ಕೆಂಪಿರುವೆಯಿಂದ ಕೋವಿಡ್‌ಗೆ ಮದ್ದು ಸಿಗಲಿದೆಯೇ? ಎಂಬ ಪ್ರಶ್ನೆ ಮೂಡಿತ್ತು. ಈ ಬಗ್ಗೆ ಸಂಶೋಧನೆ ನಡೆಸಲು ಆಯುಷ್ ಸಚಿವಾಲಯಕ್ಕೆ ಒಡಿಶಾ ಹೈಕೋರ್ಟ್ ಸೂಚನೆಯನ್ನು ನೀಡಿತ್ತು.
ಅರ್ಜಿದಾರರಾದ ನ್ಯಾಧರ್ ಪಾಧಿಯಾಲ್ ಅರ್ಜಿಯನ್ನು ಒಡಿಶಾ ಹೈಕೋರ್ಟ್ ವಜಾಗೊಳಿಸಿತ್ತು. ಇದಾದ ಬಳಿಕ ಆದೇಶವನ್ನು ಪ್ರಶ್ನಿಸಿ ಅವರು ಉನ್ನತ ನ್ಯಾಯಾಲಯದ ಮೊರೆ ಹೋಗಿದ್ದರು.
ಕೆಂಪಿರುವೆಯಲ್ಲಿ ಕ್ಯಾಲ್ಸಿಯಂ, ವಿಟಮಿನ್ ಬಿ-21, ಫಾರ್ಮಿಕ್ ಆ್ಯಸಿಡ್, ಸತ್ತು, ಕಬ್ಬಿಣಾಂಶವಿದ್ದು, ಒಟ್ಟಾರೆ ರೋಗನಿರೋಧಕ ಶಕ್ತಿ ಹೆಚ್ಚಾಗಿರುತ್ತೆ. ಹಾಗಾಗಿ ಈ ಕೆಂಪಿರುವೆ ಬುಡಕಟ್ಟು ಜನಾಂಗದ ಪ್ರಮುಖ ಆಹಾರವೂ ಆಗಿದೆ.
ಜಾರ್ಖಂಡ್, ಆಂಧ್ರಪ್ರದೇಶ, ಮಣಿಪುರ, ನಾಗಾಲ್ಯಾಂಡ್, ತ್ರಿಪುರ, ಕರ್ನಾಟಕ, ಪಶ್ಚಿಮ ಬಂಗಾಳ, ಒಡಿಶಾ, ಪಶ್ಚಿಮ ಬಂಗಾಳ ಸೇರಿದಂತೆ ಹಲವೆಡೆ ಬುಡಕಟ್ಟು ಜನಾಂಗ ಕೆಂಪಿರುವೆ ಚಟ್ನಿ ಸೇವಿಸುವುದು ಸಾಮಾನ್ಯ. ಕರ್ನಾಟಕದಲ್ಲಿ ಬುಡಕಟ್ಟು ಜನಾಂಗ ಮಾತ್ರವಲ್ಲದೆ ಮಲೆನಾಡು ಭಾಗದ ಕೆಲ ಜನರು ಕೆಂಪಿರುವೆ ಚಟ್ನಿ ಸೇವಿಸುತ್ತಾರೆ.
ಕರ್ನಾಟಕದಲ್ಲಿಯೂ ಕೆಂಪಿರುವೆಯನ್ನು ಬಳಸಿ ಚಟ್ನಿ ಮಾಡುವುದಿದೆ. ಇದಕ್ಕೆ ಚಿಗಳಿ ಎಂತಲೂ ಕರೆಯುತ್ತಾರೆ. ಕೆಂಪು ಇರುವೆಗಳನ್ನು ಬಿಡಿಸಿ, ಅದನ್ನು ಹುರಿದು ಚಟ್ನಿ ಮಾಡಿ ಸೇವಿಸುವುದು ರೂಢಿಯಲ್ಲಿದೆ.