ಗ್ರಾಮೀಣ ಪ್ರದೇಶದ ‘ಕಡ್ಡಾಯ’ ಮಹಿಳಾ ಕಾರ್ಮಿಕರು

ಭೂರಹಿತ ಕುಟುಂಬಗಳಿಗೆ ಸೇರಿದ ಅಥವಾ ಅಲ್ಪ ಭೂಮಿ ಹೊಂದಿರುವ ಮಹಿಳೆಯರಿಗೆ ಕೆಲಸ ಮಾಡಲು “ನಿರುತ್ಸಾಹ” ತೋರಿಸುವ ವೈಭೋಗವೇನೂ ಇಲ್ಲ, ಇವರು “ಕಡ್ಡಾಯ” ಕೆಲಸಗಾರರು. ಅವರ ಕುಟುಂಬಗಳು ಉಣ್ಣಬೇಕಾದರೆ ಇವರು ಕೆಲಸ ಮಾಡಲೇಬೇಕು.

ಒಂದು ವರ್ಷದ ಅವಧಿಯಲ್ಲಿ ಈಕೆ ಮನರೇಗ ಕೆಲಸಗಾರಳಾಗಿರುತ್ತಾಳೆ; ಕೃಷಿ ಕಾರ್ಮಿಕಳಾಗಿರುತ್ತಾಳೆ; ಕಟ್ಟಡ ಕಾರ್ಮಿಕಳಾಗಿರುತ್ತಾಳೆ; ವಲಸೆ ಕಾರ್ಮಿಕ ಳಾಗಿರುತ್ತಾಳೆ; ಸ್ವಯಂ ಉದ್ಯೋಗಿ ಬೀದಿ ವ್ಯಾಪಾರಿಯಾಗಿರುತ್ತಾಳೆ; ಟೈಲರ್, ಬೇರೆಯವರ ಮನೆಕೆಲಸದವಳು ಮತ್ತು ತನ್ನ ಹಲವಾರು ಮನೆಗೆಲಸಗಳನ್ನು ನಿಭಾಯಿಸಬೇಕಾದ ಗೃಹಿಣಿಯಾಗಿರುತ್ತಾಳೆ. ಹೀಗೆ ಈ ‘ಕಡ್ಡಾಯ’ ಮಹಿಳಾ ಕಾರ್ಮಿಕರ ಕೆಲಸ  ಎಂದಿಗೂ ಮುಗಿಯುವುದಿಲ್ಲ.

ಬೃಂದಾ ಕಾರಟ್

ಬೃಂದಾ ಕಾರಟ್

2022 ರ ಮಾರ್ಚ್ ನಲ್ಲಿ ಗ್ರಾಮೀಣ ಶ್ರಮ ಭಾಗವಹಿಸುವಿಕೆಯ ಪ್ರಮಾಣ ಪುರುಷರಲ್ಲಿ 67.24% ರಷಿದ್ದರೆ, ಗ್ರಾಮೀಣ ಮಹಿಳೆಯರಲ್ಲಿ ಅದು ಕೇವಲ 9.92% ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ವರದಿ ಮಾಡಿದೆ. ಇದು ಒಂದು ಆತಂಕದ ಸಂಗತಿ. ಸಿಎಂಐಇ ಪ್ರಕಾರ, ಲಕ್ಷಾಂತರ ಕಾರ್ಮಿಕರು “ಬಹುಶಃ ಉದ್ಯೋಗವನ್ನು ಪಡೆಯುವಲ್ಲಿನ ವೈಫಲ್ಯದಿಂದ ನಿರಾಶೆಗೊಂಡಿದ್ದಾರೆ ಮತ್ತು ಯಾವುದೇ ಉದ್ಯೋಗ ಲಭ್ಯವಿಲ್ಲ” ಎಂಬ ನಂಬಿಕೆಯ ಅಡಿಯಲ್ಲಿ” ಉದ್ಯೋಗವನ್ನು ಹುಡುಕುವುದನ್ನು ನಿಲ್ಲಿಸಿದ್ದಾರೆ. ಯುಎಸ್, ಕೆನಡಾ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಲ್ಲಿ, ಕೆಲಸ ಮಾಡಲು ಸಿದ್ಧರಿರುವ ಆದರೆ ವಿವಿಧ ಕಾರಣಗಳಿಗಾಗಿ ಕೆಲಸ ಹುಡುಕುವುದನ್ನು ಬಿಟ್ಟುಬಿಡುವ ಅಂತಹ ಕಾರ್ಮಿಕರನ್ನು ‘ನಿರುತ್ಸಾಹಗೊಂಡ ಕೆಲಸಗಾರರು’ ಎಂದು ಕರೆಯಲಾಗುತ್ತದೆ ಮತ್ತು ಅವರನ್ನು ನಿರುದ್ಯೋಗಿ ವರ್ಗಕ್ಕೆ ಸೇರಿಸಲಾಗುತ್ತದೆ. ಇಂತಹ ವಿದ್ಯಮಾನವನ್ನು ಭಾರತದಲ್ಲಿ ಯಾವುದೇ ಅಧಿಕೃತ ಕಾರ್ಮಿಕ ಸಮೀಕ್ಷೆಗಳಿಂದ ಸೆರೆಹಿಡಿಯಲಾಗಿಲ್ಲ. ಮಹಿಳೆಯರು “ಕೆಲಸ ಬಿಡುತ್ತಿದ್ದಾರೆ” ಅಥವಾ “ಕಾರ್ಮಿಕ ಮಾರುಕಟ್ಟೆಯನ್ನು ತೊರೆಯುತ್ತಿದ್ದಾರೆ” ಎಂದು ತಪ್ಪಾಗಿ ವಿವರಿಸಲಾಗಿದೆ, ಇದು ಅವರು ಮಾಡಿದ ಆಯ್ಕೆಯಾಗಿದೆ ಎಂಬ ಅಭಿಪ್ರಾಯವನ್ನು ನೀಡುತ್ತದೆ, ಆದರೆ, ವಾಸ್ತವವಾಗಿ, ಮಹಿಳೆಯರು ಉದ್ಯೋಗದಿಂದ ಹೊರಹಾಕಲ್ಪಡುತ್ತಿದ್ದಾರೆ.

ಬುಡಮಟ್ಟದ ವಾಸ್ತವಗಳು ಸಿಎಂಐಇ ಸೂಚಿಸುವ, ಆದರೆ ಸರ್ಕಾರ ನಿರಾಕರಿಸುವುದಕ್ಕಿಂತಲೂ ಕೆಟ್ಟದಾಗಿದೆ. ಭೂರಹಿತ ಕುಟುಂಬಗಳಿಗೆ ಸೇರಿದ ಅಥವಾ ಅಲ್ಪ ಭೂಮಿ ಹೊಂದಿರುವ ಮಹಿಳೆಯರಿಗೆ “ನಿರುತ್ಸಾಹ” ತೋರುವ ವೈಭೋಗವೇನೂ ಇಲ್ಲ, ಇವರು “ಕಡ್ಡಾಯ” ಕೆಲಸಗಾರರು.

ಸಂಕಟದ ಆಳ

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ (ಮನರೇಗಾ)ಯ ಕೆಲಸದ ತಾಣಗಳು ಬಹುಶಃ ಲಕ್ಷಾಂತರ ಮಹಿಳೆಯರು ಕೆಲಸ ಮಾಡಲೇಬೇಕಾಗಿರುವುದನ್ನು ಅರ್ಥಮಾಡಿಕೊಳ್ಳಲು ಅತ್ಯುತ್ತಮ ಸ್ಥಳಗಳಾಗಿವೆ. ಕರ್ನಾಟಕದ ಕಲಬುರಗಿ ಜಿಲ್ಲೆಯಲ್ಲಿನ ಯೋಜನೆಯು 200 ಕ್ಕೂ ಹೆಚ್ಚು ಜಿನುಗು ಕೊಳಗಳನ್ನು ರಚಿಸುವುದರ ಮೇಲೆ ಕೇಂದ್ರೀಕರಿಸಿದೆ. ಇದನ್ನು ಅಂತರ್ಜಲದ ಮಟ್ಟ ಕುಸಿತದ ಸಮಸ್ಯೆಯನ್ನು ಪರಿಹರಿಸಲು ಮತ್ತು ಬಾವಿಗಳ ಪುನರುಜ್ಜೀವನಕ್ಕೆ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯು ನಾಲ್ಕು ಗ್ರಾಮಗಳನ್ನೊಳಗೊಂಡು ಅಂದಾಜು 300 ಕಾರ್ಮಿಕರಿಗೆ ಕೆಲವು ದಿನಗಳ ಕೆಲಸಗಳನ್ನು ಒದಗಿಸುತ್ತದೆ. ಮಣ್ಣು ಗಟ್ಟಿಯಾಗಿರುತ್ತದೆ ಮತ್ತು ಒಣದಾಗಿರುತ್ತದೆ. ಯೋಜನೆಯು ಹಲವಾರು ಕಿಲೋಮೀಟರ್‌ಗಳಷ್ಟು ವಿಸ್ತರಿಸಿರುತ್ತದೆ. ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮಾತ್ರ ಜೋಡಿಯಾಗಿ ಕೆಲಸ ಮಾಡುತ್ತಾರೆ. ಅವರು ಮಣ್ಣು ಅಗೆದು ಎತ್ತುತ್ತಾರೆ. ಸುಡುವ ಬಿಸಿಲಿನಲ್ಲಿ, ಅವರು ಒಂದು ದಿನದಲ್ಲಿ 10x10x1 ಗುಂಡಿಯನ್ನು ಅಗೆಯಬೇಕು. ಮಣ್ಣು ಗಟ್ಟಿಯಾಗಿರುವುದರಿಂದ ಕಲ್ಲುಮಣ್ಣು ಇರುವುದರಿಂದ ದಿನಕ್ಕೆ ಸುಮಾರು 3,000 ಕೆ.ಜಿ ಮಣ್ಣು ಅಗೆದು ಎತ್ತಬೇಕಾಗುತ್ತದೆ ಎಂದು ಸಹಾಯಕ ಪ್ರಭಾರಿ ಅಧಿಕಾರಿಯ ಅಂದಾಜು. ಮಹಿಳೆಯರಲ್ಲಿ ಹೆಚ್ಚಿನವರು ಈ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗದ ಕಾರಣ, ಅವರು ನಿಗದಿ ಮಾಡಿದ ₹ 309 ದರವನ್ನು ಪಡೆಯುವುದಿಲ್ಲ; ಕೇವಲ ₹ 280 ರಿಂದ ₹ 285 ಕೂಲಿ ಸಿಗುತ್ತದೆ. ಸ್ಥಳದಲ್ಲಿ ಶಿಶುಕೇಂದ್ರ ಇರಲಿಲ್ಲ. ಅಲ್ಲಿ ನೀರು ಸಹ ಇರಲಿಲ್ಲ, ಆದ್ದರಿಂದ ಮಹಿಳೆಯರು ತಮ್ಮ ಎರಡು ಲೀಟರ್ ಬಾಟಲಿಗಳನ್ನು ತುಂಬಲು ನೀರಿನ ಮೂಲಕ್ಕೆ ಸುಮಾರು ಒಂದು ಕಿಲೋಮೀಟರ್ ನಡೆದುಕೊಂಡು ಹೋಗುತ್ತಿದ್ದಾರೆ. ಇದರಿಂದಾಗಿ ಕೈಕಾಲು ನೋಯುತ್ತದೆ ಮತ್ತು ಅನೇಕರಿಗೆ ತಲೆತಿರುಗುತ್ತಿದೆ ಎಂದು ಹೇಳಿದರು.

ಆದರೆ ಇಷ್ಟೆಲ್ಲ ಕಷ್ಟದ ಪರಿಸ್ಥಿತಿಗಳ ಹೊರತಾಗಿಯೂ, ಮನರೇಗ ಸೈಟ್‌ನಲ್ಲಿರುವ ಪ್ರತಿಯೊಬ್ಬ ಕಾರ್ಮಿಕರು ವರ್ಷದಲ್ಲಿ ಸುಮಾರು 40 ದಿನಗಳ ಕೆಲಸ ಮಾತ್ರ ಪಡೆಯುತ್ತಿದ್ದೇವೆ ಎಂದು ದೂರಿದರು. ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಕೆಲಸವನ್ನು ತಮ್ಮ ಸಂರಕ್ಷಕ ಎಂದು ಅವರು ಪರಿಗಣಿಸುವುದರಿಂದ ಇನ್ನು ಹೆಚ್ಚಿನ ದಿನ ಕೆಲಸ ಸಿಗಬೇಕೆಂದು ಬಯಸಿದರು. ಇಂತಹ ಕಠಿಣವಾದ ಕೆಲಸವನ್ನು ಅವರು ಇನ್ನಷ್ಟು ಮಾಡಲು ಬಯಸುತ್ತಿರುವುದು ಬಡ ಗ್ರಾಮೀಣ ಕುಟುಂಬಗಳ ಸಂಕಟದ ಆಳವನ್ನು ತಿಳಿಸುತ್ತದೆ.

ವ್ಯವಸಾಯದ ದಿನಗಳಲ್ಲಿ ಎಲ್ಲಾ ಮಹಿಳೆಯರು ಇತರರ ಜಮೀನುಗಳಲ್ಲಿ ಕೆಲಸ ಮಾಡುತ್ತಾರೆ, ಮನರೇಗ ಸೈಟಿï‌ನಲ್ಲಿ ಗಳಿಸಿದಷ್ಟು ಹಣ ಸಂಪಾದಿಸುತ್ತಾರೆ. ಆದರೆ ಕೃಷಿ ಕಾರ್ಯಾಚರಣೆಗಳಲ್ಲಿನ ಯಾಂತ್ರೀಕರಣದಿಂದಾಗಿ ಕೆಲಸದ ದಿನಗಳು ವರ್ಷಕ್ಕೆ ಮೂರು ತಿಂಗಳಿಗಿಂತ ಕಡಿಮೆ. ಆದ್ದರಿಂದ ಅನೇಕ ಮಹಿಳೆಯರು ಅರೆಕಾಲಿಕ ಕಟ್ಟಡ ಕಾರ್ಮಿಕರಾಗುತ್ತಾರೆ. ಗುತ್ತಿಗೆದಾರರಿಗೆ ಕೆಲಸ ಮಾಡುವ ಮೇಸ್ತ್ರಿಗಳ ಒಂದು ಜಾಲ ಅವರನ್ನು ಕೆಲಸಕ್ಕೆ ತಗೊಳ್ಳುತ್ತದೆ. ಅವರು ತಮ್ಮ ಕುಟುಂಬಗಳೊಂದಿಗೆ ಅಥವಾ ಹಳ್ಳಿಯ ಇತರ ಮಹಿಳೆಯರೊಂದಿಗೆ ಕೆಲವು ತಿಂಗಳುಗಳ ವರೆಗೆ ಕಟ್ಟಡ ನಿರ್ಮಾಣ ಸ್ಥಳಗಳಿಗೆ ವಲಸೆ ಹೋಗುತ್ತಾರೆ. ನಾನು ಭೇಟಿಯಾದ ಜನರಲ್ಲಿ ಒಬ್ಬರೂ ಸಹ ಕಟ್ಟಡ ಕಾರ್ಮಿಕರಾಗಿ ನೋಂದಾಯಿಸಿಕೊಂಡಿರಲಿಲ್ಲ. ಆದ್ದರಿಂದ ಅವರು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿAದ ಕಾನೂನಾತ್ಮಕವಾಗಿ ಸಿಗುವ ಯಾವುದೇ ಪ್ರಯೋಜನಗಳಿಗೆ ಅನರ್ಹರಾಗಿದ್ದಾರೆ. ಕಟ್ಟಡ ನಿರ್ಮಾಣ ಸ್ಥಳದಲ್ಲಿ, ಪ್ರತಿಯೊಬ್ಬರೂ ದಿನಕ್ಕೆ ಕನಿಷ್ಠ 1,000 ಇಟ್ಟಿಗೆಗಳನ್ನು ಒಯ್ಯುತ್ತಿದ್ದರು, ಇವು ಸುಮಾರು ಎರಡು ಕಿಲೋಗಳಷ್ಟು ತೂಕ ಹೊಂದಿರುತ್ತವೆ. ಇತರ ಭಾರವಾದ ನಿರ್ಮಾಣ ಸಾಮಗ್ರಿಗಳನ್ನು, ಹೊತ್ತುಕೊಂಡು ಮೊದಲ ಅಥವಾ ಎರಡನೇ ಮಹಡಿಗೆ ಏರಬೇಕಾಗುತ್ತದೆ. ಅವರಿಗೆ ಪುರುಷರಿಗಿಂತ ಕಡಿಮೆ ಅಂದರೆ ದಿನಕ್ಕೆ ₹ 300 ವೇತನ ನೀಡಲಾಗುತ್ತದೆ.

ಬಹುವಿಧ ಕೆಲಸಗಾರ್ತಿ

ಕಟ್ಟಡ ನಿರ್ಮಾಣ ಕೆಲಸಗಳು ಸಿಗದಿದ್ದಾಗ, ಮಹಿಳೆಯರು ಇತರ ಕೆಲಸವನ್ನು ಹುಡುಕುತ್ತಾರೆ. ಅವರಲ್ಲಿ ಕೆಲವರು ಬುಟ್ಟಿಗಳು ಮತ್ತು ಪೊರಕೆಗಳನ್ನು ಮಾಡುತ್ತಾರೆ. ಅವರು ಬುಟ್ಟಿಗಳನ್ನು ಮಾರಾಟ ಮಾಡಲು ಹಳ್ಳಿಯಿಂದ ಹಳ್ಳಿಗೆ ದಿನಕ್ಕೆ ಸುಮಾರು 25 ಕಿ.ಮೀ. ಓಡಾಡಬೇಕಾಗುತ್ತದೆ. 10 ಬುಟ್ಟಿಗಳನ್ನು ತಯಾರಿಸಲು ಅವರು ಎರಡು ದಿನ ತೆಗೆದುಕೊಳ್ಳುತ್ತಾರೆ. ಪ್ರತಿ ಬುಟ್ಟಿಯಿಂದ ₹ 10 ಗೆ ಮಾತ್ರ ಪಡೆಯುತ್ತಾರೆ. ಕೆಲವು ಮಹಿಳೆಯರು ತಿಂಗಳಿಗೆ ಸರಾಸರಿ ಮೂರು ಅಥವಾ ನಾಲ್ಕು ದಿನಗಳ ಕಾಲ ಭೂಹಿಡುವಳಿ ಕುಟುಂಬಗಳಿಗೆ ಸ್ವಚ್ಛಗೊಳಿಸುವ ಅಥವಾ ಬೇರೆ ಸೇವೆಗಳನ್ನು ಒದಗಿಸುತ್ತಾರೆ. ಕೆಲವರು ಬಟ್ಟೆ ಹೊಲಿಯುವ ಕೆಲಸ ಮಾಡುತ್ತಾರೆ. ಅವರು ತಮ್ಮ ಮನೆಗೆಲಸವನ್ನೂ ಮಾಡುತ್ತಾರೆ.

ಆದ್ದರಿಂದ, ಮನರೇಗ ಸೈಟ್‌ನಲ್ಲಿರುವ ಮಹಿಳೆಯರ ಬಗೆಗಿನ ಪುರಾವೆಗಳ ಪ್ರಕಾರ, ಒಂದು ವರ್ಷದ ಅವಧಿಯಲ್ಲಿ ಒಬ್ಬ ಮಹಿಳೆ ಮನರೇಗ ಕೆಲಸಗಾರಳಾಗಿರುತ್ತಾಳೆ, ಕೃಷಿ ಕಾರ್ಮಿಕಳಾಗಿರುತ್ತಾಳೆ, ಕಟ್ಟಡ ಕಾರ್ಮಿಕಳಾಗಿರುತ್ತಾಳೆ, ವಲಸೆ ಕಾರ್ಮಿಕಳಾಗಿರುತ್ತಾಳೆ, ಸ್ವಯಂ ಉದ್ಯೋಗಿ ಬೀದಿ ವ್ಯಾಪಾರಿಯಾಗಿರುತ್ತಾಳೆ, ಟೈಲರ್, ಬೇರೆಯವರ ಮನೆಕೆಲಸದವಳಾಗಿರುತ್ತಾಳೆ ಮತ್ತು ತನ್ನ ಹಲವಾರು ಮನೆಗೆಲಸಗಳನ್ನು ನಿಭಾಯಿಸಬೇಕಾದ ಗೃಹಿಣಿಯಾಗಿರುತ್ತಾಳೆ.

‘ಕಡ್ಡಾಯ’ ಮಹಿಳಾ ಕಾರ್ಮಿಕರ ಕೆಲಸ ಎಂದಿಗೂ ಮುಗಿಯುವುದಿಲ್ಲ. ಯಾದಗಿರಿ ಜಿಲ್ಲೆಯ 45 ವರ್ಷದ 4 ಮಕ್ಕಳ ತಾಯಿ ಸಿದ್ದಮ್ಮ ತಮ್ಮ ತೋಳುಗಳನ್ನು ಚಾಚಿ ಹೇಳಿದರು: “ನನ್ನ ತೋಳುಗಳೇ ನನ್ನ ದುಡಿಮೆ… ಇದು ನನ್ನ ಕುಟುಂಬ ಬದುಕುಳಿಯಲು ಹಣ ಸಂಪಾದಿಸಲು ನಾನು ಹೊಂದಿರುವ ಆಸ್ತಿ. ನಾನು ಕೆಲಸ ಮಾಡುವಾಗ, ಅವರು ತಿನ್ನುತ್ತಾರೆ”.

ಅಗತ್ಯ ವಸ್ತುಗಳ ಬೆಲೆಯೇರಿಕೆ ಮಹಿಳೆಯರಲ್ಲಿ ತರಕಾರಿಗಳು ಮತ್ತು ಬೇಳೆಕಾಳುಗಳ ಬಳಕೆಯಲ್ಲಿ ಭಾರಿ ಕಡಿತಕ್ಕೆ ಕಾರಣವಾಗಿದೆ. ಕೆಲಸದ ಸ್ಥಳದಲ್ಲಿ ಕೆಲವು ಮಹಿಳೆಯರು ತಮ್ಮ ಊಟದ ಬುತ್ತಿಯಲ್ಲಿ ಅನ್ನ ಅಥವಾ ರೊಟ್ಟಿಯ ಜೊತೆ ಮೆಣಸಿನಕಾಯಿ ಚಟ್ನಿ ತಂದಿದ್ದರು. ಸಹೋದರಿಯರಾದ ಶೀಲವತಿ ಮತ್ತು ಚಂದ್ರಮ್ಮ “ನಾವು ಮೆಣಸಿನಕಾಯಿ ಚಟ್ನಿ ಮಾಡಿದ ನಂತರ ನೀರು ಕುಡಿಯುತ್ತೇವೆ. ಆಗ ನಮಗೆ ಹಸಿವಾಗುವುದಿಲ್ಲ” ಎಂದರು. ಇನ್ನುಳಿದವರು ಇವರ ಮಾತಿಗೆ ಹೂಂಗುಟ್ಟಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉಚಿತ ಆಹಾರ ಧಾನ್ಯಗಳ ಕಾರ್ಯಕ್ರಮದಿಂದ ಕೊಡುವ ತಲಾ 10 ಕೆಜಿ ಧಾನ್ಯದಿಂದ ಹೆಚ್ಚಿನ ಸಹಾಯವಾಗಿದೆ. ಆದರೆ ಅದನ್ನ ಕೊಡುವುದನ್ನು ಎಲ್ಲಿ ನಿಲ್ಲಿಸಿಬಿಡುತ್ತಾರೋ ಎನ್ನುವ ಭಯ ಕಾಡುತ್ತದೆ ಎಂದು ಅವರು ಹೇಳಿದರು. ಬೆಲೆಯೇರಿಕೆ ಮತ್ತು ಕಡಿಮೆ ಆದಾಯದಿಂದಾಗಿ ಮಹಿಳೆಯರು ಎದುರಿಸುತ್ತಿರುವ ಪೋಷಕಾಂಶಗಳ ಅಭಾವವು ‘ಕಡ್ಡಾಯ’ ಮಹಿಳಾ ಕಾರ್ಮಿಕರ ಜೀವನದ ಮತ್ತೊಂದು ಆಯಾಮವಾಗಿದೆ.

ಕನಿಷ್ಠ ವೇತನ ಕೊಡಬೇಕಾಗಿದೆ

ಬಹುತೇಕ ಪ್ರತಿಯೊಬ್ಬ ಮಹಿಳೆಯೂ ಸಾಲದ ಸುಳಿಯಲ್ಲಿ ಸಿಲುಕಿರುವ ಬಗ್ಗೆ ಮಾತನಾಡಿದ್ದಾರೆ. ಯಾವುದೇ ಸ್ಥಿರವಾದ ಕೂಲಿಯಿಲ್ಲದ ಅನೇಕ ಕೆಲಸಗಳಿಂದ ಮಹಿಳೆಯರು ಗಳಿಸುವುದು, ಅವರು ಮಾಡುವ ಶ್ರಮದ ಮೊತ್ತಕ್ಕೆ ಯಾವುದೇ ರೀತಿಯಲ್ಲಿ ಸಮನಾಗಿರುವುದಿಲ್ಲ. ನಗರ ಪ್ರದೇಶಗಳಲ್ಲಿ ಕಾರ್ಮಿಕ ಕಾನೂನುಗಳನ್ನು ಕಳಚಿ ಹಾಕಿರುವುದರಿಂದ ಕಾರ್ಮಿಕ ಇಲಾಖೆಗಳು ದುರ್ಬಲಗೊಳ್ಳುತ್ತಿವೆ. ಕೃಷಿ ಕಾರ್ಮಿಕರ ಸಂಘಟನೆಗಳ ಪ್ರಬಲ ಚಳವಳಿಯಿಂದ ಮಾತ್ರ ಗ್ರಾಮೀಣ ಭಾರತದಲ್ಲಿ ಕನಿಷ್ಠ ವೇತನದ ಅನುಷ್ಠಾನವನ್ನು ಕಲ್ಪಿಸಬಹುದಾಗಿದೆ. ಭೂಮಿಯ ಒಡೆತನವಿರುವ ರೈತರಿಗೆ ವಾರ್ಷಿಕ 6000ರೂ.ಗಳ ಅಲ್ಪ ನಗದು ವರ್ಗಾವಣೆ ಕೂಡ ಭೂಹೀನ ಗ್ರಾಮೀಣ ಕಾರ್ಮಿಕರಿಗೆ ಸಿಗುವುದಿಲ್ಲ. ಅವರ ಕೂಡ ಇದೇ ರೀತಿಯ ನಗದು ವರ್ಗಾವಣೆಗೆ ಅರ್ಹರಾಗಿದ್ದಾರೆ. ಕೆಲಸದ ಸ್ಥಳಗಳನ್ನು ಹೆಚ್ಚು ಕಾರ್ಮಿಕ-ಸ್ನೇಹಿಯನ್ನಾಗಿ ಮಾಡಬೇಕು.

ಗ್ರಾಮೀಣ ಭಾರತದಲ್ಲಿ ಬಂಡವಾಳಶಾಹಿ ಪ್ರಕ್ರಿಯೆಗಳು ಆಳವಾಗಿ ನುಸುಳುತ್ತಿರುವುದರೊಂದಿಗೆ, ಜೀವನೋಪಾಯದ ಆಯ್ಕೆಗಳ ಬಿಕ್ಕಟ್ಟು ಕಂಡುಬರುತ್ತಿದೆ. ಇದನ್ನು ಎದುರಿಸಲು ಬಡ ಮಹಿಳೆಯರು ವಿವಿಧ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಈ ಬಿಕ್ಕಟ್ಟಿನ ಸರಿಯಾದ ವಿಶ್ಲೇಷಣೆ ಮಾಡಲು ಸೂಕ್ಷ್ಮ ಕಣ್ಣೋಟದ ಅಗತ್ಯವಿದೆ. ಸಮಯದ ಬಳಕೆಯ ಸಮೀಕ್ಷೆಗಳ ಮೂಲಕ ಮಹಿಳೆಯರ ಕೆಲಸದ ಅದೃಶ್ಯತೆಯ ಪ್ರಶ್ನೆಯನ್ನು ನಿಭಾಯಿಸಬಹುದು. ಉದಾಹರಣೆಗೆ ಫೌಂಡೇಶನ್ ಫಾರ್ ಅಗ್ರೇರಿಯನ್ ಸ್ಟಡೀಸ್ ಮಾಡಿದ ಗ್ರಾಮ ಮಟ್ಟದ ಸಮಯ ಬಳಕೆಯ ಸಮೀಕ್ಷೆಗಳು ಮಹಿಳೆಯರ ಕೆಲಸದ ವ್ಯಾಪ್ತಿಯನ್ನು ಪ್ರಕಟಪಡಿಸಿವೆ. ವಾಸ್ತವವಾಗಿ, ಬಡ ಗ್ರಾಮೀಣ ಮಹಿಳೆಯರ ಬಗ್ಗೆ ಮತ್ತು ಅವರು ತಮ್ಮ ಸಮಯವನ್ನು ಹೇಗೆ ಕಳೆಯುತ್ತಾರೆ ಎಂಬುದರ ವ್ಯಾಪಕ ಸಮೀಕ್ಷೆ ನಡೆಯುವುದು ತುರ್ತು ಅಗತ್ಯವಾಗಿದೆ. ಭಾರತವು ಸ್ವಾತಂತ್ರ‍್ಯದ 75 ನೇ ವರ್ಷವನ್ನು ಆಚರಿಸುತ್ತಿರುವಾಗ, ‘ಕಡ್ಡಾಯ’ ಮಹಿಳಾ ಕೆಲಸಗಾರ್ತಿಯನ್ನು ಗುರುತಿಸಬೇಕು, ಆಕೆಯನ್ನು ಆಕೆಯ ಸಮಸ್ಯೆಗಳನ್ನು ಪರಿಹರಿಸುವ ಕಾನೂನುಗಳು ಮತ್ತು ನೀತಿಗಳ ಮೂಲಕ ರಕ್ಷಿಸಬೇಕು.

ಅನು: ಲವಿತ್ರ ವಸ್ತ್ರದ (ಮೂಲ ಲೇಖನ -ಕೃಪೆ: ದಿ ಹಿಂದು)

Donate Janashakthi Media

Leave a Reply

Your email address will not be published. Required fields are marked *