– ಎಚ್.ಆರ್. ನವೀನ್ ಕುಮಾರ್, ಹಾಸನ
ರಾಜ್ಯದಲ್ಲಿ ಕಳೆದ 15 ತಿಂಗಳುಗಳಿಂದ ಸುಮಾರು 1,182 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಜ್ಯ ಕೃಷಿ ಇಲಾಖೆ ಮುಖ್ಯಮಂತ್ರಿಗಳಿಗೆ ವರದಿ ನೀಡಿದೆ. ಆತ್ಮಹತ್ಯೆ ಆದ ರೈತನ ಕುಟುಂಬದವರು ಅದನ್ನು ಆತ್ಮಹತ್ಯೆ ಎಂದು ಪರಿಗಣಿಸಿ ಮೊಕ್ಕದ್ದಮ್ಮೆ ಧಾಖಲಿಸಿ, ಕೃಷಿ ಇಲಾಖೆಯಲ್ಲಿ ಧಾಖಲಾಗಿರುವ ಅಂಕಿ ಅಂಶಗಳು ಇವಾಗಿದ್ದು, ಯಾವ ಎಲ್ಲಕ್ಕೂ ಸಿಗದೆ ನಡೆದಿರುವ ಆತ್ಮಹತ್ಯೆಗಳ ಸಂಖ್ಯೆ ಎಷ್ಟಿಗೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೃಷಿ ಇಲಾಖೆ ಅಧಿಕೃತವಾಗಿ ನೀಡಿರುವ ಈ ಸಂಖ್ಯೆಯೂ ಕಡಿಮೆಯೇನಲ್ಲ. 15 ತಿಂಗಳು ಎಂದರೆ 450 ದಿನಗಳು ಅಂದರೆ ಸರಾಸರಿ ದಿನಕ್ಕೆ ಮೂವರು ರೈತರು ರಾಜ್ಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಪರಿಹಾರ ಸರಿಯಾಗಿ ತಲುಪುತ್ತಿದೆಯೋ ಇಲವೋ ಎಂದು ಅಧಿಕಾರಿಗಳ ಸಭೆಯಲ್ಲಿ ಪರಿಶೀಲನೆಯನ್ನು ನಡೆಸಿದ ಮಾನ್ಯ ಮುಖ್ಯಮಂತ್ರಿಗಳು ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಲು ಇರುವ ಮಾರ್ಗೋಪಾಯಗಳ ಕುರಿತು ಅಥವಾ ಸಂಕಷ್ಟದಲ್ಲಿರುವ ಕೃಷಿ ಮತ್ತು ರೈತರನ್ನು ಸಂಕಷ್ಟದಿಂದ ಹೊರತರುವ ನಿಟ್ಟಿನಲ್ಲಿ ಯಾವ ಚರ್ಚೆಯನ್ನು ನಡೆಸಿದಂತೆ ಕಾಣುತ್ತಿಲ್ಲ. ಇದರಿಂದ ಸ್ಪಷ್ಟವಾಗಿ ತಿಳಿಯುವ ವಿಷಯವೇನೆಂದರೆ ಆಳುವ ಪ್ರಭುತ್ವಕ್ಕೆ, ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ರೈತರ ಆತ್ಮಹತ್ಯೆಗಳನ್ನು ಶಾಶ್ವತವಾಗಿ ತಡೆಯುವ, ಅದಕ್ಕಾಗಿ ಕೃಷಿ ಮತ್ತು ರೈತ ಪರವಾದ ನೀತಿಗಳನ್ನು ರೂಪಿಸುವ ಯೋಚನೆ ಇದ್ದಂತಿಲ್ಲ. ಮಾತ್ರವಲ್ಲ ಕೇಂದ್ರ ರಾಜ್ಯ ಸರ್ಕಾರಗಳು ಇಷ್ಟು ವರ್ಷಗಳಿಂದ ಅನುಸರಿಸಿಕೊಂಡು ಬಂದಿರುವ ನೀತಿಗಳ ಪರಿಣಾಮವೇ ರೈತರ ಆತ್ಮಹತ್ಯೆಗಳ ಸಂಖ್ಯೆ ಏರುಗತಿಯಲ್ಲಿರಲು ಕಾರಣ.
ಅನ್ನದಾತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ ಎಂದರೆ ಅದು ಈ ದೇಶದ ಕೃಷಿ ಬಿಕ್ಕಟ್ಟನ್ನು ಬಿಂಬಿಸುತ್ತದೆ. ಈ ಆತ್ಮಹತ್ಯೆಗಳಿಗಿರುವ ತಾತ್ವಿಕ ಮತ್ತು ಪ್ರಾಯೋಗಿಕ ಕಾರಣಗಳನ್ನು ಹೆಕ್ಕುತ್ತಾ ಅವುಗಳಿಗೆ ಪರಿಹಾರವನ್ನು ಹುಡುಕುವ ಪ್ರಯತ್ನವನ್ನು ಮಾಡೋಣ.
ಯಾವುದೇ ಒಬ್ಬ ರೈತನಿಗೆ ಮೂಲಭೂತವಾಗಿ ಮೂರು ಹಂತದ ಸಮಸ್ಯೆಗಳು ಕೃಷಿ ಕ್ಷೇತ್ರದಲ್ಲಿ ತಲೆದೋರುತ್ತವೆ. ಮೊದಲ ಹಂತದಲ್ಲಿ ಭೂಮಿ ಮತ್ತು ಬಿತ್ತನೆಯ ಕುರಿತಾದ ಸಮಸ್ಯೆಗಳು, ಎರಡನೇ ಹಂತದಲ್ಲಿ ಬೆಳೆ ಬೆಳೆಯುವ ಸಂದರ್ಭದಲ್ಲಿನ ಸಮಸ್ಯೆಗಳು, ಮೂರನೇ ಹಂತದಲ್ಲಿ ಮಾರುಕಟ್ಟೆಯ ಸಮಸ್ಯೆ. ಈ ಮೂರು ಹಂತದ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅವುಗಳಿಗೆ ರೈತ ಪರವಾದ ಪರಿಹಾರಗಳನ್ನು ಕಂಡುಕೊಂಡರೆ ಸಾಕು. ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಬಹುದು.
ಕರ್ನಾಟಕದಲ್ಲಿ ಈಗ ಮುಂಗಾರು ಮಳೆ ಪ್ರಾರಭವಾಗಿದೆ. ಆದರೆ ಕಳೆದ 4-5 ವರ್ಷಗಳಿಂದ ರಾಜ್ಯ ಬೀಕರ ಬರಗಲವನ್ನು ಎದುರಿಸಿದೆ. ಇದರಿಂದ ರೈತ ಸಮುದಾಯ ಅತ್ಯಂತ ಹೆಚ್ಚಿನ ನಷ್ಟವನ್ನ ಅನುಭವಿಸಿದ್ದಾರೆ. ಇದರ ಹಿಂದೆ ಬರ ಪರಿಹಾರ ಸರಿಯಾಗಿ ರೈತರಿಗೆ ತಲುಪಿಲ್ಲ. ಖ್ಯಾತ ಪತ್ರಕತ್ರ ಪಿ.ಸಾಯಿನಾಥ್ ಅವರು ಹೇಳುವಂತೆ “ಬರ ಅಂದರೆ ಎಲ್ಲರಿಗೂ ಇಷ್ಟ” ಇವೆಲ್ಲವುಗ ಒಟ್ಟು ಮೊತ್ತವೇ ರೈತರ ಆತ್ಮಹತ್ಯೆಗಳು.
ಸಬ್ಸಿಡಿ ಕಡಿತ – ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳ : ಭಾರತದಲ್ಲಿನ ಕೃಷಿಯಲ್ಲಿ ದಿನದಿಂದ ದಿನಕ್ಕೆ ಕೃಷಿ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಕೃಷಿ ಲಾಗುವಾಡುಗಳಾದ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ, ಯಂತ್ರೋಪಕರಣಗಳು, ಡೀಸೆಲ್ ಇವುಗಳ ಮೇಲಿನ ಸಬ್ಸಿಡಿಗಳನ್ನು ಎಲ್ಲಾ ಸರ್ಕಾರಗಳು ಸ್ಪರ್ಧೆಗಿಳಿದಂತೆ ಕಡಿತಗೊಳಿಸುತ್ತಿರುವುದರಿಂದ ಇವುಗಳ ಮೂಲ ಬೆಲೆಗಳು ಗಗನಕ್ಕೇರುತ್ತಿವೆ. ಇದರಿಂದಾಗಿ ಕೃಷಿ ಮಾಡಲು ಸಾಲ ಮಾಡಲೇಬೇಕಾದ ಅನಿವಾರ್ಯತೆಯನ್ನು ಸೃಷ್ಠಿ ಮಾಡಲಾಗಿದೆ. ಕೃಷಿಗೆ ಅಗತ್ಯವಿರುವ ಎಲ್ಲಾ ಲಾಗುವಾಡುಗಳಿಗೆ ನೀಡುವ ಸಬ್ಸಿಡಿಯನ್ನು ಹೆಚ್ಚಿಸಿ ಅವುಗಳ ಬೆಲೆಗಳನ್ನು ಕಡಿತಗೊಳಿಸಿದರೆ ಪ್ರಾರಂಭಿಕ ಹಂತದಲ್ಲಿ ರೈತರು ಸಾಲಮಾಡುವ ಸ್ಥಿತಿ ನಿರ್ಮಾಣವಾಗುವುದಿಲ್ಲ.
ಸಾಲ ಸೌಲಭ್ಯದ ಕೊರತೆ : ಪ್ರಸ್ತುತ ಸಾಲ ಮಾಡದೇ ಕೃಷಿ ಮಾಡಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಭೂಮಿಯನ್ನು ಅತ್ಯಂತ ಭಾವನಾತ್ಮಕವಾಗಿ ಸ್ವೀಕರಿಸಿರುವ ರೈತ ಸಮುದಾಯ ಬೆಳಯನ್ನು ಬೆಳೆಯದೆ ಹೊಲವನ್ನು ಹಾಳುಬಿಡಲು ಇಚ್ಚಿಸುವುದಿಲ್ಲ. ಬದಲಾಗಿ ಅದರಿಂದ ಯಾವ ಪ್ರಮಾಣದ ಲಾಭಾಂಶ ಸಿಗುತ್ತದೆ ಎಂಬುದನ್ನು ಯೋಚಿಸುವ ಮೊದಲು ನಾನು ಬೆಳೆ ಬೆಳೆಯದಿದ್ದರೆ ರೈತನಾಗಿ ಸ್ವಾಭಿಮಾನದಿಂದ ಹಳ್ಳಿಗಳಲ್ಲಿ ನಾಲ್ಕುಜನರ ಎದುರು ಓಡಾಡುವುದಾದರೂ ಹೇಗೆ ಎಂದು ಯೋಚಿಸುತ್ತಾನೆ. ಇದರ ಪ್ರತಿಫಲವಾಗಿ ರಾಷ್ಟ್ರೀಯ ಬ್ಯಾಂಕುಗಳಲ್ಲಿ, ಕೃಷಿ ಪತ್ತಿನ ಸಹಕಾರಿ ಬ್ಯಾಂಕುಗಳಲ್ಲಿ ಸಾಲ ಸುಲಭವಾಗಿ ಸಿಗದ ಕಾರಣ ಅನಿವಾರ್ಯವಾಗಿ ರೈತರು ಖಾಸಗೀ ಲೇವಾದಾರರ ಬಳಿ ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ತರುತ್ತಾರೆ. ಅದಕ್ಕೆ ಬಡ್ಡಿ, ಚಕ್ರಬಡ್ಡಿ ಸೇರಿ ಸಾಲ ತೀರಿಸಲಾಗದೆ, ಬೆಳೆದ ಬೆಳೆಯೂ ಕೈಹಿಡಿಯದಾದಾಗ ಸಾಲಗಾರರ ಕಾಟ ತಡೆಯಲಾರದೆ, ಸ್ವಾಭಿಮಾನಕ್ಕೆ ಅಂಜಿ ಆತ್ಮಹತ್ಯೆಗೆ ಶರಣಾಗುತ್ತಾನೆ.
ಇದನ್ನು ಓದಿ : ಕೇಂದ್ರ ಬಜೆಟ್ ಬಗ್ಗೆ ಅಸಮಾಧಾನ: ನೀತಿ ಆಯೋಗದ ಸಭೆಗೆ ಸಿದ್ದು ಸೇರಿದಂತೆ 4 ರಾಜ್ಯಗಳ ಸಿಎಂಗಳು ಗೈರು
ಇವುಗಳ ಜೊತೆಗೆ ಈಗ ಮೈಕ್ರೋಫೈನಾನ್ಸ್ಗಳು, ಸ್ವಸಹಾಯ ಗುಂಪುಗಳ ಮೂಲಕ ಸಾಲ ಕೊಟ್ಟು ವಿಪರೀತ ಬಡ್ಡಿ ವಸೂಲಿ ಮಾಡಿ ಸಾಲಗಾರರಿಗೆ ಕಿರುಕುಳ ನೀಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನಲ್ಲಿ ಮೈಕ್ರೋಫೈನಾನ್ಸ್ ವ್ಯವಹಾರದಲ್ಲಿ ಸಿಲುಕಿ ಸಾಲ ತೀರಿಸಲಾಗದೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡುಕೊಂಡಿರುವ ಧಾರುಣ ಘಟನೆ ನಡೆದಿದೆ.
ಇಂತಹ ಪರಿಸ್ಥಿತಿಯಲ್ಲಿರುವಾಗ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಕಾಂಗ್ರೇಸ್ ಸರ್ಕಾರಗಳು ದೊಡ್ಡ ದೊಡ್ಡ ಉದ್ಯಮಿಪತಿಗಳ, ಕಾರ್ಪೋರೇಟ್ ಕಂಪನಿಗಳ ಸಾಲವನ್ನು ಮನ್ನಾ ಮಾಡುತ್ತದೆ, ತೆರಿಗೆಯಲ್ಲಿ ವಿನಾಯಿತಿ ತೋರುತ್ತದೆ, ಆದರೆ ದೇಶಕ್ಕೆ ಅನ್ನ ಬೆಳೆಯುವ ರೈತನ ಕೃಷಿ ಸಾಲವನ್ನು ಒಂದು ಸಾರಿ ಸಂಪೂರ್ಣ ಮನ್ನಾ ಮಾಡುವ ಋಣಮುಕ್ತ ಕಾಯ್ದೆಯನ್ನು ತರುವ ಯಾವ ಆಲೋಚನೆಗಳನ್ನು ಮಾಡುತ್ತಿಲ್ಲ.
ಮಾರುಕಟ್ಟೆಯ ಸಮಸ್ಯೆ : ಅಂತಿಮವಾಗಿ ರೈತರು ಎದುರಿಸುವ ಸಮಸ್ಯೆ ಎಂದರೆ ಅದು ಮಾರುಕಟ್ಟೆಯ ಸಮಸ್ಯೆ. ಹವಾಮಾನ ವೈಪರಿತ್ಯ, ಕಾಡುಪಾಣಿಗಳ ಹಾವಳಿ, ಅತಿವೃಷ್ಟಿ, ಅನಾವೃಷ್ಟಿಗಳಂತಹ ಪ್ರಾಕೃತಿಕ ಸವಾಲುಗಳನ್ನೆಲ್ಲಾ ಎದುರಿಸಿ ಬೆಳೆ ಬೆಳೆದು ಅದನ್ನು ಮಾರುಕಟ್ಟೆಗೆ ಕೊಂಡೊಯ್ದರೆ ಅಲ್ಲಿ ರೈತನ ಪಾಲಿಗೆ ನ್ಯಾಯಯುತವಾದ ಬೆಲೆ ಸಿಗುತ್ತಿಲ್ಲ. ಅವನ ಬೆವರಿನ ಶ್ರಮ ಸಂಪೂರ್ಣವಾಗಿ ವ್ಯರ್ಥವಾದಂತೆ ಭಾಸವಾಗುತ್ತಿದೆ. ಇದಕ್ಕಾಗಿ ಈಗಾಗಲೇ ದೇಶಾದ್ಯಂತ ಸಾಕಷ್ಟು ಅಧ್ಯಯನಗಳನ್ನು ನಡೆಸಿ ಕೃಷಿ ಬಿಕ್ಕಟ್ಟನ್ನು ತಡೆಗಟ್ಟಿ ಆ ಮೂಲಕ ರೈತರ ಆತ್ಮಹತ್ಯೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೃಷಿ ತಜ್ಞ ಡಾ.ಎಂ.ಎಸ್.ಸ್ವಾಮಿನಾಥನ್ ಆಯೋಗದ ವರದಿಯ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕು.
ಇದುವರೆಗೂ ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ, ಕಾಂಗ್ರೇಸ್ ಸರ್ಕಾರಗಳು ಪ್ರಾಮಾಣಿಕ ಈ ಪ್ರಯತ್ನವನ್ನು ಮಾಡಲಿಲ್ಲ. ಈ ಶಿಫಾರಸ್ಸಿನ ಒಂದು ಪ್ರಮುಖ ಅಂಶವೆಂದರೆ ಅದು ರೈತರು ಬೆಳೆದ ಬೆಳೆಗಳಿಗೆ ಬೆಲೆಯನ್ನು ನಿಗದಿ ಮಾಡುವ ಕುರಿತು. ಇದಕ್ಕಾಗಿ ಡಾ. ಎಂ. ಎಸ್. ಸ್ವಾಮಿನಾಥನ್ ಅವರು ಸಿ2 +50% ಎಂಬ ಸೂತ್ರವನ್ನು ನೀಡಿದ್ದಾರೆ. ಅಂದರೆ ಯಾವುದೇ ಒಂದು ಬೆಳೆಯನ್ನು ಬೆಳೆಯಲು ತಗುಲುವ ವೆಚ್ಚವನ್ನು ಲೆಕ್ಕಹಾಕಿ ಅದಕ್ಕೆ ಶೇಖಡ 50 ರಷ್ಟು ಲಾಭಾಂಶ ಸೇರಿಸಿ ಕನಿಷ್ಟ ಬೆಂಬಲ ಬೆಲೆಯನ್ನು ನಿಗದಿಮಾಡಬೇಕು. ಆದರೆ ಇಂದು ದೇಶಾದ್ಯಂತ ಮಾರುಕಟ್ಟೆ ಖಾಸಗೀ ಕಾರ್ಪೋರೇಟ್ ಕೈವಷವಾಗಿದ್ದು ಇಲ್ಲಿ ಬಡ ರೈತರಿಗೆ ನ್ಯಾಯವನ್ನು ನಿರೀಕ್ಷಿಸುವುದೇ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮುಕ್ತ ವ್ಯಾಪಾರ ಒಪ್ಪಂದದ ಭಾಗವಾಗಿ ಭಾರತದಲ್ಲಿ ಬೆಳೆಯುವ ಬಹುತೇಕ ಎಲ್ಲಾ ಕೃಷಿ ಉತ್ಪನ್ನಗಳನ್ನು ಸುಂಕರಹಿತವಾಗಿ ಅಥವಾ ಕಡಿಮೆ ಸುಂಕದಲ್ಲಿ ಭಾರತದ ಮಾರುಕಟ್ಟೆಗಳಿಗೆ ಲಗ್ಗೆ ಇಟ್ಟು ನಮ್ಮ ರೈತರು ಬೆಳೆದ ಪದಾರ್ಥಗಳು ಮಾರಾಟವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಕೃಷಿಯ ಆಧಾಯ ಕುಸಿದಿರುವುದರಿಂದ ಹೈನುಗಾರಿಕೆಯ ಮೇಲೆ ಭರವಸೆ ಇಟ್ಟು ರೈತರು ಆದಿಕ್ಕಿನಲ್ಲಿ ಹೆಜ್ಜೆಯಾಕುತ್ತಿದ್ದರೆ, ಈಗ ಡೈರಿ ಉತ್ಪನ್ನಗಳೂ ವಿದೇಶದಿಂದ ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.
ನೀತಿಗಳ ಪರಿಣಾಮ : ಕೃಷಿಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ರೈತಾಪಿ ಕೃಷಿಯನ್ನು ಬಲಪಡಿಸಲು ಆಳುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀತಿಗಳನ್ನು ರೂಪಿಸಿ ಅವುಗಳನ್ನು ಅನುಷ್ಟಾನಗೊಳಿಸಲು ರೈತ ಸಮುದಾಯವನ್ನು ಒಳಗೊಳ್ಳುವ ಯಾವ ಸೂಚನೆಗಳು ಇದುವರೆಗು ಕಂಡುಬಂದಿಲ್ಲ. 1990 ರ ನಂತರದ ಜಾಗತೀಕರಣ ನೀತಿಗಳ ಪರಿಣಾಮವಾಗಿ ಕೃಷಿಯನ್ನು ಸಂಪೂರ್ಣವಾಗಿ ಕಾರ್ಪೊರೇಟೀಕರಣ ಗೊಳಿಸಬೇಕೆನ್ನುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ. ಇದರ ಭಾಗವಾಗಿಯೇ ಸಬ್ಸಿಡಿಗಳ ಕಡಿತ, ಮೂರು ಕರಾಳ ಕೃಷಿ ಕಾಯ್ದೆಗಳನ್ನು ಯಾವುದೇ ಚರ್ಚೆಗಳಿಲ್ಲದೆ ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸುವ ಪ್ರಯತ್ನ. (ಧೀರೋದ್ದಾತ್ತ ದೆಹಲಿ ರೈತ ಚಳುವಳಿಯಿಂದಾಗಿ ಈ ನೀತಿಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಲು ಸಾಧ್ಯವಾಗಿದೆ)
ಒಟ್ಟಾರೆ ರೈತರ ಆತ್ಮಹತ್ಯೆಗಳಿಗೆ ಒಂದೆಡೆ ಆಳುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ ಕಾರ್ಪೋರೇಟ್ ಪರವಾಗ ನೀತಿಗಳು ಕಾರಣವಾದರೆ, ಮತ್ತೊಂದೆಡೆ ಹವಾಮಾನ ಬದಲಾವಣೆ ಮತ್ತು ಮಣ್ಣಿನ ಗುಣ, ನೀರಿನ ಲಭ್ಯತೆಯ ಆಧಾರದಲ್ಲಿ ಮತ್ತು ಅಗತ್ಯಕ್ಕೆ ಅನುಗುಣವಾಗಿ ಯಾವ ಬೆಳೆಯನ್ನು ಎಷ್ಟು ಬೆಳೆಯಬೇಕು ಎನ್ನುವ ಒಂದು ರಾಷ್ಟ್ರೀಯ ಯೋಜನೆ ಇಲ್ಲದಿರುವುದು. ಬಿತ್ತನೆ ಬೀಜದ ಸ್ವಾವಲಂಬನೆಯನ್ನು ಕಳೆದುಕೊಂಡಿರುವುದು ರೈತರನ್ನು ಕೃಷಿಯಿಂದು ದೂಡುವ ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದೆ.
ಇದನ್ನು ನೋಡಿ : ಕೇಂದ್ರ ಬಜೆಟ್ 2024-25 | ಬಂಡವಾಳಕ್ಕೆ ಒತ್ತು ! ಜನರ ಅನುಭೋಗಕ್ಕೆ ಕುತ್ತು!! Janashakthi Media