ಮುಂಬೈ: ಮಹಾರಾಷ್ಟ್ರ ಶಿವಸೇನೆಯ 37 ಶಾಸಕರು ಹಾಗೂ ಒಂಭತ್ತು ಮಂದಿ ಪಕ್ಷೇತರ ಶಾಸಕರು ಶಿವಸೇನಾ ಮುಖಂಡ ಏಕನಾಥ ಶಿಂಧೆ ಅವರ ನೇತೃತ್ವದಲ್ಲಿ ಗುವಾಹಟಿಯಲ್ಲಿದ್ದಾರೆ. ಬಂಡಾಯ ಶಾಸಕರು ಮುಂಬೈಗೆ ಮರಳಿದರೆ, ಮಹಾ ವಿಕಾಸ ಆಘಾಡಿ(ಎಂವಿಎ) ಸರ್ಕಾರದಿಂದ ಹೊರ ಬರಲು ಶಿವಸೇನಾ ಸಿದ್ಧವಿದೆ ಎಂದು ಪಕ್ಷದ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.
ಬಂಡಾಯ ಶಾಸಕರು 24 ಗಂಟೆಯೊಳಗೆ ಅಸ್ಸಾಂನಿಂದ ಮುಂಬೈಗೆ ಮರಳಿದರೆ ಸರ್ಕಾರದಿಂದ ಹೊರಬರಲು ಶಿವಸೇನೆ ಸಿದ್ಧವಿದೆ ಮತ್ತು ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ಚರ್ಚಿಸಲಾಗುವುದು ಎಂದು ಇಂದು (ಜೂನ್ 23) ಹೇಳಿದ್ದಾರೆ.
ಮುಂಬೈನಿಂದ ಹೊರಗಿರುವ ಬಂಡಾಯ ಶಾಸಕರು ಹಿಂದೂತ್ವ ವಿಚಾರವೆತ್ತಿದ್ದಾರೆ. ಒಂದು ವೇಳೆ ಶಿವಸೇನಾ ಮಹಾ ಆಘಾದಿ ಸರ್ಕಾರ ತೊರೆಯಬೇಕೆಂಬುದು ಎಲ್ಲ ಶಾಸಕರಿಗೆ ಅನಿಸಿದರೆ ಮುಂಬೈಗೆ ವಾಪಸ್ಸಾಗಿ, ನೀವು ನಿಜವಾದ ಶಿವ ಸೈನಿಕರಾದರೆ ಪಕ್ಷವನ್ನು ತೊರೆಯುವುದಿಲ್ಲ, ನಿಮ್ಮ ಬೇಡಿಕೆ ಪರಿಗಣಿಸಲು ನಾವು ಸಿದ್ಧರಿದ್ದೇವೆ. ಸಕಾರಾತ್ಮಕವಾಗಿ ಪರಿಗಣಿಸಲಾಗುವುದು, ವಾಟ್ಸಾಪ್ ಅಥವಾ ಟ್ವೀಟರ್ ನಲ್ಲಿ ಪತ್ರ ಬರೆಯಬೇಡಿ ಎಂದು ಸಂಜಯ್ ರಾವುತ್ ಪ್ರಸ್ತಾಪಿಸಿದ್ದಾರೆ.
ನಾವು ಪಕ್ಷವನ್ನು ಮತ್ತೆ ಕಟ್ಟಿದ್ದೇವೆ ಮತ್ತು ಅಧಿಕಾರಕ್ಕೆ ತಂದಿದ್ದೇವೆ. ಈಗ ಇದು ಉದ್ಧವ್ ಜಿ ಮತ್ತು ನನಗೆ ಮುಕ್ತ ಸವಾಲಿದೆ. ನಾವು ಪಕ್ಷವನ್ನು ಮತ್ತೆ ಕಟ್ಟುತ್ತೇವೆ ಮತ್ತು ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಬಾಳಾಸಾಹೇಬ್ ಠಾಕ್ರೆ ಅವರ ಕಾಲದಲ್ಲಿಯೂ ಬಹಳಷ್ಟು ಜನರು ಪಕ್ಷವನ್ನು ತೊರೆದರು ಎಂದು ಉಲ್ಲೇಖಿಸಿದರು.