ಬೆಂಗಳೂರಿನ ನ್ಯಾಷನಲ್ ಬ್ಯಾಂಕ್‌ಗೆ RBI ನಿರ್ಬಂಧ: ಆತಂಕದಲ್ಲಿ ಗ್ರಾಹಕರು

ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಜುಲೈ 24 ರಂದು ಬೆಂಗಳೂರು ಮೂಲದ ‘ದಿ ನ್ಯಾಷನಲ್‌ ಕೋ-ಆಪರೇಟೆವ್‌ ಬ್ಯಾಂಕ್‌ ಲಿಮಿಟೆಡ್‌’ಗೆ ನಿರ್ಬಂಧ ವಿಧಿಸಿದೆ. ಆರ್‌ಬಿಐ ನಿರ್ಬಂಧ ವಿಧಿಸುತ್ತಿದ್ದಂತೆ ನೂರಾರು ಠೇವಣಿದಾರರು ಕಳೆದ ಮೂರು ದಿನಗಳಿಂದ ಗಾಂಧಿ ನಗರದಲ್ಲಿರುವ ಬ್ಯಾಂಕ್‌ನ ಪ್ರಧಾನ ಕಚೇರಿಯ ಮುಂದೆ ಜಮಾಯಿಸುತ್ತಿದ್ದಾರೆ. ತಮ್ಮ ದುಡಿಮೆಯ ಹಣದ ಬಗ್ಗೆ ತೀವ್ರ ಆತಂಕಿತರಾಗಿರುವ ಅವರು ಸರ್ಕಾರ ಮಧ್ಯ ಪ್ರವೇಶಿಸಿ ಬಗೆಹರಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಬ್ಯಾಂಕ್ ಮೇಲೆ 2023ರ ಜುಲೈ 24ರಿಂದ ಆರು ತಿಂಗಳ ಅವಧಿಗೆ ವ್ಯಾಪಾರ ನಿರ್ಬಂಧಗಳನ್ನು ವಿಧಿಸಿರುವ ಆರ್‌ಬಿಐ ಪ್ರತಿ ಖಾತೆಗೆ 50,000 ರೂ.ಗೆ ಠೇವಣಿ ಹಿಂಪಡೆಯುವಿಕೆಯನ್ನು ಮಿತಿಗೊಳಿಸಿದೆ. ಬ್ಯಾಂಕಿನ ದುರ್ಬಲ ಆರ್ಥಿಕ ಸ್ಥಿತಿಯ ಕಾರಣಕ್ಕೆ ಆರ್‌ಬಿಐ ಈ ಕ್ರಮ ಕೈಗೊಂಡಿದೆ ಎಂದು ವರದಿಯಾಗಿದೆ. ಪೂರ್ವಾನುಮತಿಯಿಲ್ಲದೆ ಹೊಸ ಸಾಲಗಳನ್ನು ನೀಡಲು ಅಥವಾ ಹೊಸ ಠೇವಣಿಗಳನ್ನು ಸ್ವೀಕರಿಸಲು ದಿ ನ್ಯಾಷನಲ್‌ ಕೋ-ಆಪರೇಟೆವ್‌ ಬ್ಯಾಂಕ್‌ಗೆ ಅನುಮತಿಸಲಾಗುವುದಿಲ್ಲ ಎಂದು ಆರ್‌ಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ದುರ್ಬಲ ಆರ್ಥಿಕ ಸ್ಥಿತಿ: ಬೆಂಗಳೂರಿನ ‘ದಿ ನ್ಯಾಷನಲ್‌ ಕೋ-ಆಪರೇಟೆವ್‌ ಬ್ಯಾಂಕ್‌’ಗೆ ಆರ್‌ಬಿಐ ನಿರ್ಬಂಧ

ಠೇವಣಿದಾರರು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್‌ನಿಂದ 5 ಲಕ್ಷ ರೂ.ವರೆಗಿನ ಠೇವಣಿ ವಿಮಾ ಕ್ಲೈಮ್ ಮೊತ್ತವನ್ನು ಸ್ವೀಕರಿಸಲು ಅರ್ಹರಾಗಿರುತ್ತಾರೆ ಎಂದು ಆರ್‌ಬಿಐ ಹೇಳಿದೆ.

ಈ ಬಗ್ಗೆ ಜನಶಕ್ತಿ ಮೀಡಿಯಾ ಜೊತೆಗೆ ಮಾತನಾಡಿದ ಬ್ಯಾಂಕಿನ ಠೇವಣಿದಾರ ಸುನಿಲ್,”ನನ್ನ ಅಂಗವಿಕಲ ಮಗನ ಆರೈಕೆ ಮತ್ತು ಚಿಕಿತ್ಸೆಗಾಗಿ ಬ್ಯಾಂಕ್‌ನಲ್ಲಿ ಹಣ ಠೇವಣಿ ಇಟ್ಟಿದ್ದೆ. ಮಗನ ಔ‍‍ಷಧಿ ಖರ್ಚೆ ದಿನಕ್ಕೆ ಸಾವಿರ ರೂ. ಆಗುತ್ತವೆ. ಇದೀಗ ಪ್ರತಿ ಖಾತೆಗೆ ಕೇವಲ 50 ಸಾವಿರ ಅಷ್ಟೆ ಪಡೆಯಬಹುದು ಎಂದು ಹೇಳುತ್ತಿದ್ದಾರೆ. ಇದರಿಂದ ನಾವೇನು ಮಾಡಲು ಸಾಧ್ಯ” ಎಂದು ಪ್ರಶ್ನಿಸಿದರು. ನಮ್ಮ ಮಗನ ಭವಿಷ್ಯಕ್ಕಾಗಿ ಕೂಡಿಟ್ಟ ಹಣ ಇದೀಗ ಹೀಗಾಗಿದೆ ನಾವೇನು ಮಾಡಲಿ ಎಂದು ಅವರು ಹೇಳಿದರು.

ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಶ್ರೀನಿವಾಸ ನಗರದ ಬಾಡಿಗೆ ಮನೆಯಲ್ಲಿ ವಾಸ ಮಾಡುವ ಕೂಲಿ ಕಾರ್ಮಿಕ ನರಸಿಂಹ ಅವರು ಮಾತನಾಡಿ, “ಮಗಳ ಮದುವೆಗೆಂದು ಬ್ಯಾಂಕ್‌ನಲ್ಲಿ ಹಣ ಉಳಿತಾಯ ಮಾಡಿದ್ದೆ. ಇನ್ನು ಕೆಲವೇ ತಿಂಗಳಲ್ಲಿ ಮಗಳ ಮದುವೆಯಿದೆ. ಆದರೆ ಬ್ಯಾಂಕ್‌ನವರು ಆರು ತಿಂಗಳವರಗೆ ಕಾಯಬೇಕು, ಅಲ್ಲಿವರೆಗೆ 50 ಸಾವಿರ ಮಾತ್ರ ಪಡೆಯಬಹುದು ಎಂದು ಹೇಳುತ್ತಿದ್ದಾರೆ. 50 ಸಾವಿರದಲ್ಲಿ ಮಗಳ ಮದುವೆ ಮಾಡಿಸಲು ಸಾಧ್ಯವೆ? ನಾವೇನು ಮಾಡಲಿ?” ಎಂದು ಕಣ್ಣೀರು ಹಾಕಿದರು.

ಇದನ್ನೂ ಓದಿ: ಮಣಿಪುರ ಇಂಟರ್‌ನೆಟ್ ನಿಷೇಧ ಮುಂದುವರಿಕೆ : ಬ್ರಾಡ್‌ಬ್ಯಾಂಡ್ ಸೇವೆಗಳಿಗೆ ಷರತ್ತು

ದೇವಸ್ಥಾನದಲ್ಲಿ ಅರ್ಚಕ ವೃತ್ತಿ ಮಾಡುವ ಅಂಜನ್ ಕುಮಾರ್‌ ಮಾತನಾಡಿ, “ಮಕ್ಕಳ ಫೀಸ್‌ಗೆಂದು ಎತ್ತಿಟ್ಟಿದ್ದ ಹಣವನ್ನು ಬ್ಯಾಂಕ್‌ನವರು ನೀಡುತ್ತಿಲ್ಲ. ಮುಂದಿನ ತಿಂಗಳು ಇಬ್ಬರು ಮಕ್ಕಳ ಫೀಸ್‌ ಕಟ್ಟಬೇಕಿದೆ. ಬ್ಯಾಂಕ್‌ ವಿಚಾರ ಹೀಗಾಗಿದೆ ಎಂದು ಹೇಳಿದರೆ ಶಾಲೆಯ ಆಡಳಿತ ಮಂಡಳಿ ಕೇಳುತ್ತದೆಯೆ? ನಮಗೆ ಮಕ್ಕಳ ಶಿಕ್ಷಣದ ಬಗ್ಗೆ ಚಿಂತೆಯಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

ಲಭ್ಯವಿರುವ ಕೊನೆಯ ವಾರ್ಷಿಕ ವರದಿಯ ಪ್ರಕಾರ, ನ್ಯಾಷನಲ್ ಸಹಕಾರಿ ಬ್ಯಾಂಕ್ 2021ರ ಮಾರ್ಚ್ 31 ರಂತೆ ಒಟ್ಟು ರೂ 1,679 ಕೋಟಿ ಠೇವಣಿ ಮತ್ತು ರೂ. 1,128 ಕೋಟಿ ಸಾಲಗಳನ್ನು ಹೊಂದಿದೆ. ಆ ದಿನಾಂಕದ ನಂತರ ಮಾಹಿತಿ ಲಭ್ಯವಿಲ್ಲ ಎಂದು ಮನಿಕಂಟ್ರೋಲ್.ಕಾಮ್ ವರದಿ ಮಾಡಿದೆ. ಬೆಂಗಳೂರಿನ ವಿವಿಧ ಭಾಗಗಳಲ್ಲಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ಸುಮಾರು 13 ಶಾಖೆಗಳನ್ನು ಹೊಂದಿದೆ.

ವಿಡಿಯೊ ನೋಡಿ: ಮಂಗಳೂರು: ಹೆರಿಗೆಗೆಂದು ತೆರಳಿದ ಯುವತಿ ಮೃತ; ಎ.ಜೆ. ಆಸ್ಪತ್ರೆ ನಿರ್ಲಕ್ಷ್ಯ ಆರೋಪ Janashakthi Media

 

Donate Janashakthi Media

Leave a Reply

Your email address will not be published. Required fields are marked *