ಪುಸ್ತಕ ವಿಮರ್ಶೆ | ಆರ್‌ ಬಿ ಮೋರೆ ಪುಸ್ತಕ ಮಥನಕ್ಕೆ ಅನವು ಮಾಡಿಕೊಡುತ್ತದೆ

ಮನಸ್ಸಿನ ಮೇಲೆ ಗಾಯ ಮಾಡುವ ಆರ್ ಬಿ ಮೋರೆ ಅವರ ಆತ್ಮಕತೆ, ಮಥನಕ್ಕೆ ಅನುವು ಮಾಡಿಕೊಡುತ್ತದೆ. ಮಾರ್ಕ್ಸ್ ವಾದ ಮತ್ತು ಅಂಬೇಡ್ಕರ್ ವಾದದ ಒಂದು ಕಾಲದ ಸಂದಿಗ್ಧತೆ ಮತ್ತು ಸಂಘರ್ಷದ ಇರುವಿಕೆಯನ್ನು ಪರೋಕ್ಷವಾಗಿ ತಿಳಿಸಿಕೊಡುತ್ತದೆ ಇದೊಂದು ಆತ್ಮಕತೆಯಾದರೂ, ವೈಚಾರಿಕ ನೆಲೆಗಟ್ಟಿನಲ್ಲಿ ತನ್ನನ್ನು ಬಿಂಬಿಸಿಕೊಳ್ಳುತ್ತದೆ. ನವೋದಯ ಪೂರ್ವದ ದಲಿತರ ಬದುಕಿಗೆ ಮಾರ್ಕ್ಸ್ ವಾದದೊಂದಿಗೆ ಇದ್ದ ಸಂಬಂಧ ಹಾಗೂ ಅದರ ವೈಚಾರಿಕತೆಯ ಪರಿಧಿಯನ್ನು ತಿಳಿಸಿಕೊಡುತ್ತದೆ. ಮಾರ್ಕ್ಸ್ ವಾದಿಗಳು ಮತ್ತು ಅಂಬೇಡ್ಕರ್ ವಾದಿಗಳು ಬಿಚ್ಚು ಮನಸ್ಸಿನಿಂದ ಓದಬಹುದಾದ ಕೃತಿ ಇದು.

-ಅರವಿಂದ್ ಮಾಲಗತ್ತಿ

ಮೊದಲ ದಲಿತ ಕಮ್ಯುನಿಸ್ಟ್ ಎಂಬ ಶೀರ್ಷಿಕೆಯೊಂದಿಗೆ ಬಂದ ಆರ್ ಬಿ ಮೋರೆ ಅವರ ಈ ಆತ್ಮಕತೆಯ ಕೆಲ ಭಾಗ ಆರ್ ಬಿ ಮೋರೆ ಅವರೇ ಬರೆದಿದ್ದರೆ, ಅವರು ಕಾಲಾಧೀನರಾದಾಗ ಉಳಿದ ಭಾಗವನ್ನು ಸತ್ಯೇಂದ್ರ ಮೋರೆ ಅವರು ಪೂರ್ಣಗೊಳಿಸಿದ್ದಾರೆ. ಈ ಕೃತಿ ಮರಾಠಿ ಮೂಲದ್ದು. ಇದನ್ನು ಇಂಗ್ಲಿಷಿಗೆ ಅನುವಾದಿಸಿದವರು ವಂದನಾ ಸೋನಾಲ್ಕರ್, ಕನ್ನಡಕ್ಕೆ ಅನುವಾದಿಸಿದವರು ಪೊ: ಅಬ್ದುಲ್ ರೆಹಮಾನ್ ಪಾಷ ಅವರು.

ಭಾರತದಂತಹ ದೇಶದಲ್ಲಿ ಆರ್ಥಿಕ ಯಾಜಮಾನ್ಯಕ್ಕಿಂತ ಧಾರ್ಮಿಕ ಯಾಜಮಾನ್ಯ ಸೂಕ್ಷ್ಮವಾದದ್ದು ಮತ್ತು ಭಿನ್ನವಾದದ್ದು. ಆರ್ಥಿಕತೆಯೇ ಸಮಸ್ಯೆಗಳ ಪರಿಹಾರದ ಮಾರ್ಗ ಎನ್ನುವುದು ಒಂದು ವಾದವಾದರೆ, ಮತ್ತೊಂದು ಅಸ್ಪೃಶ್ಯತೆಗೂ ಧಾರ್ಮಿಕತೆಗೂ ಇರುವ ನಂಟು ಆರ್ಥಿಕ ನಿಷೇಧವನ್ನು ಸಾರುವಂಥದ್ದು. ಆರ್ಥಿಕತೆಯಿಂದ ಇಂಥ ಸಮಸ್ಯೆಗಳು ಬಗೆಹರಿಯಲಾರವು ಎನ್ನುವುದು ಮತ್ತೊಂದುವಾದ. ಇವೆರಡರ ಮಧ್ಯೆ ಹಾಗೆ ಇರುವುದೇ ಸಮಾಜ. ಒಂದು ಭಾರತ ಮೂಲದ ಚಿಂತನೆಯಾದರೆ ಮತ್ತೊಂದು ಪಾಶ್ಚತ್ಯ ಮೂಲದ ಚಿಂತನೆ.

ಇದನ್ನೂ ಓದಿ: ದ. ಕನ್ನಡದ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಪರಿಹಾರಕ್ಕಾಗಿ ಸತೀಶ್‌ ಜಾರಕಿಹೊಳಿಯವರಿಗೆ ಪತ್ರ

ಮಾರ್ಕ್ಸ್ ವಾದ ಭಾರತದಲ್ಲಿ ಇನ್ನೂ ಭಾರತೀಕರಣಗೊಳ್ಳಬೇಕಿದೆ. ಅದು ಕೇವಲ ವೈದಿಕೀಕರಣಕ್ಕೆ ಒಳಗಾಗಿದೆ. ಎಂದರೆ ವೈದಿಕ ನೆಲೆಯಿಂದ ಮಾರ್ಕ್ಸ್ ವಾದವನ್ನು ಗ್ರಹಿಸಲಾಗಿದೆ. ಹೀಗಾಗಿಯೇ ಅದು ನಮ್ಮ ನೆಲದಲ್ಲಿ ಸಂಪೂರ್ಣವಾಗಿ ಲೀನಗೊಳ್ಳಲು ಸಾಧ್ಯವಾಗಿಲ್ಲ ಎನ್ನುವುದನ್ನು ಪರೋಕ್ಷವಾಗಿ ಈ ಕೃತಿ ಹೇಳುತ್ತದೆ. ಇಂತಹ ತಾತ್ವಿಕ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಂಡೆ ಆರ್ ಬಿ ಮೋರೆ ಅವರು ಮಾರ್ಕ್ಸ್ ವಾದಿಗಳೊಂದಿಗೆ ಒಡನಾಡಿದ್ದಾರೆ. ಮತ್ತು ಆ ಪರಿಧಿಯಲ್ಲಿಯೇ ತನ್ನ ಹೋರಾಟದ ನಲೆಗಳನ್ನು ಕಂಡುಕೊಳ್ಳಲು ಸಮಾಜದ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಸೆಣಸುವಂತಹದ್ದನ್ನು ಈ ಕೃತಿ ನಿರೂಪಿಸುತ್ತದೆ.

ಕಮ್ಯುನಿಸಂ ಭಾರತೀಕರಣ ಗೊಳ್ಳುವುದು ಎಂದರೆ, ತಳ ಸಮುದಾಯಗಳ ಮೂಲ ಸಮಸ್ಯೆಗಳನ್ನ ಅರಿತು ಅವುಗಳ ಬೇರು ಮಟ್ಟಕ್ಕೆ ಇಳಿದು, ಅವುಗಳನ್ನು ಕಿತ್ತಿಹಾಕುವ ನೆಲೆಯನ್ನು ಕೇವಲ ಆರ್ಥಿಕ ಮಾರ್ಗಗಳಿಂದ ನೋಡದೆ ಆರ್ಥಿಕೇತರಮಾರ್ಗಗಳನ್ನು ತನ್ನದಾಗಿಸಿಕೊಳ್ಳುವ ಅಗತ್ಯವಿದೆ. ಜನಮನಕ್ಕಿಳಿದು ಧಾರ್ಮಿಕ ಯಾಜಮಾನ್ಯವನ್ನು ನಿಷ್ಕ್ರಿಯಗೊಳಿಸದೆ ಈ ಸಮಸ್ಯೆ ಬಗೆಹರಿಯದು.

ದಲಿತತ್ವ ಮತ್ತು ಒಟ್ಟು ಸಮಾಜದ ಹಿನ್ನೆಲೆಯಲ್ಲಿ ಮಾರ್ಕ್ಸ್ ವಾದವನ್ನು ನಮ್ಮಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೇ ವಿಮರ್ಶಿಸುತ್ತಾ ಬರಲಾಗಿದೆ. ಅದನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಿದವರು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು.

ಆರ್ ಬಿ ಮೋರೆಯವರು ಅಂಬೇಡ್ಕರ್ ಅವರ ನಿಕಟ ಸಹವರ್ತಿಯಾಗಿದ್ದವರು ಮತ್ತು ಸಮಾಜ ಕಾರ್ಯಗಳನ್ನು ನಿರ್ವಹಿಸಿದವರು. ಕಮ್ಯುನಿಸ್ಟ್ ಪಕ್ಷ ಸೇರುವ ಅಭಿಲಾಷೆಯನ್ನು ಅವರು ಅಂಬೇಡ್ಕರ್ ಅವರಲ್ಲಿ ವ್ಯಕ್ತಪಡಿಸಿದಾಗ ಅದನ್ನು ನಕಾರಾತ್ಮಕ ವಾಗಿ ತೆಗೆದುಕೊಳ್ಳದೆ, ಆ ಬ್ರಾಹ್ಮಣರ ಪಕ್ಷದಲ್ಲಿ ನಿನ್ನ ಸ್ಥಾನವೇನು? ಎಂದು ಕೇಳುವಲ್ಲಿ ಪರೋಕ್ಷವಾದ ಸಾಧ್ಯತೆಯ ಅರಿವನ್ನೂ ಜಾಗೃತಗೊಳಿಸುತ್ತದೆ.

ವರ್ಗ ಹೋರಾಟ ಮತ್ತು ಜಾತಿ ಹೋರಾಟದ ನೆಲೆಗಳು ಭಿನ್ನವಾಗಿದ್ದರೂ ಆಶಯದ ದೃಷ್ಟಿಯಿಂದ ಹತ್ತಿರವಾಗಿವೆ. ವರ್ಗ ಹೋರಾಟ ಈ ನೆಲದ ಜಾಯಮಾನಕ್ಕೆ ದೂರ. ನಮ್ಮ ದೇಶದ ಪ್ರತಿಯೊಂದು ಜಾತಿಗಳು ಒಂದೊಂದು ವರ್ಗದ ಗುಣ ಲಕ್ಷಣಗಳನ್ನು ಪಡೆದುಕೊಂಡಿವೆ. ವರ್ಗ ಹೋರಾಟ ಎಂಬ ಸರಳ ಗ್ರಹಿಕೆ ನುಂಗಲಾರದ ತುತ್ತು. ಜಾತಿ ಕೆಲವರಿಗೆ ಲಾಭದಾಯಕ ಶಕ್ತಿಯಾದರೆ, ಇನ್ನು ಕೆಲವರಿಗೆ ಬಲ ಹೀನತೆಯ ಪ್ರತೀಕವಾಗಿದೆ. ಸುಖೀ ಜಾತಿಯವರಿಗೆ ಜಾತಿಯನ್ನೇ ಅಸ್ತ್ರವಾಗಿಸಿಕೊಂಡು ಪ್ರತಿಶಕ್ತಿಯಾಗುವ ದಾರಿ ಇದೆ ಎಂದೆನಿಸುವುದು ಸಹಜವಾದರೂ ಪರಂಪರೆಯಲ್ಲಿ ಜಾತಿಗೆ ಪ್ರತಿರೋಧ ಒಡ್ಡಿದ ಕಾಲದ ಬಿಸಿ ಕಡಿಮೆಯಾದಾಗ ಮತ್ತೆ ಸಮೀಕರಣಗೊಂಡಿದ್ದು ಗಮನಿಸುತ್ತೇವೆ. ಇಂತ ಪ್ರತಿರೋಧಗಳು ಕಾಲಿಕ ಎನಿಸಿಬಿಡುವುದೇ ಹೆಚ್ಚು. ನಿರಾಕರಣೆಯ ಅಥವಾ ತ್ಯಜಿಸುವ ಕ್ರಿಯೆ ಮುಂದಾಗುತ್ತದೆ. ಕಮ್ಯುನಿಸಮ್ ಧರ್ಮವನ್ನು ಅಧಿಕೃತವಾಗಿ ಸಮಸ್ಯೆಯ ಸೂತ್ರವನ್ನಾಗಿ ತೆಗೆದುಕೊಳ್ಳುವುದಿಲ್ಲ. ಬದಲಾಗಿ ಅದನ್ನು ದುರುಡುವುದರಲ್ಲಿಯೆ ಹಿತ ವೆಂದು ಭಾವಿಸುತ್ತದೆ.

ಮಾರ್ಕ್ಸ್ ವಾದವಾದ ಸಮಗ್ರ ಕ್ರಾಂತಿಯ ಬಗ್ಗೆ ಪೀಠಿಕೆ ಹಾಕುತ್ತದೆ. ಅಂಬೇಡ್ಕರ್ ಅವರು ಸಮಗ್ರ ಕ್ರಾಂತಿಯ ಬಗ್ಗೆ ಮಾತನಾಡದೆಯೂ ಅದನ್ನು ಕ್ರಿಯೆಯಲ್ಲಿ ಮಾಡಿ ತೋರಿದ್ದಾರೆ. ಚೌಡಾರ್ ಕೆರೆ ಪ್ರಕರಣ ಕಲಾರಾಂ ಮಂದಿರ್ ಪ್ರವೇಶ ಇಂತವುಗಳ ಅನುಭವ ಅವರಿಗೆ ಭಿನ್ನವಾದ ಮಾರ್ಗವನ್ನು ತುಳಿಯುವಂತೆ ಹೆಚ್ಚಿತು. ಹೋರಾಟದ ಪರಿಹಾರ ಮಾರ್ಗಕ್ಕಿಂತ ಕಾನೂನಿನ ಪರಿಹಾರದ ಮಾರ್ಗ ಹೆಚ್ಚು ಸಶಕ್ತವೆನಿಸಿ ಚಾರಿತ್ರಿಕವಾದ ಸಂದರ್ಭವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಾರೆ. ಸುಧಾರಣೆಯ ಮಾರ್ಗಕ್ಕೆ ಪಿಲಾಂಜಲಿಯಲ್ಲಿತ್ತು. ರಕ್ತ ಹರಿಸದೆ ಕ್ರಾಂತಿಕಾರಕ ಬದಲಾವಣೆಯ ಮಾರ್ಗವನ್ನು ಅನುಸರಿಸುತ್ತಾರೆ. ಎಂದರೆ, ಆಡಳಿತಾತ್ಮಕ ಸಂರಚನೆಯನ್ನೆ ಬದಲಾಯಿಸುವ ಗೆಲ್ಲುತ್ತಾರೆ. ಅದಕ್ಕೆ ಭಾರತದ ಸಂವಿಧಾನವೇ ಪ್ರತೀಕವಾಗುತ್ತದೆ. ಆ ಮೂಲಾಗ್ರ ಬದಲಾವಣೆ ಕಾನೂನಿನ ಮೂಲಕವೇ ಸಾಧ್ಯ ಎಂದು ನಂಬಿದ್ದರ ದೋತ್ಯಕ ಸಂವಿಧಾನದ ರಚನಾ ಕಾರ್ಯ. ಇದು ಸಾಮಾಜಿಕ ರಾಜಕೀಯ ಧಾರ್ಮಿಕ ಆರ್ಥಿಕ ಪುಟಗಳನ್ನೇ ತಿರುವಿ ಹಾಕುವ ರಕ್ತ ರಹಿತ ಸಮಗ್ರ ಕ್ರಾಂತಿಯಾಗಿದೆ. ಇಂಥ ಒಂದು ನಾಯಕತ್ವ ಸಲೀಸಾಗಿ ದಕ್ಕಿದ್ದಲ್ಲ.

ಸತ್ಯೇಂದ್ರ ಮೊರೆ ಅವರು ಬರೆದ ಭಾಗಗಳಲ್ಲಿ ಆರ್ ಬಿ ಮೊರೆ ಅವರಸಹಪಾಠಿಗಳು ಅವರ ಪತ್ರಗಳು ದೊಡ್ಡ ಆಕರಗಳಾಗಿವೆ. ಈ ಆತ್ಮಕಥೆಯನ್ನು ಓದುತ್ತಿದ್ದಂತೆ ನಿರಂಜನರ ಅವರ ಚಿರಸ್ಮರಣೆ ಕಾದಂಬರಿ ನೆನಪಾಗುತ್ತಾ ಹೋಗುತ್ತದೆ. ಭೂಗತ ಜೀವನ, ಮಾರ್ಗದರ್ಶಿ ಗುರುಗಳು ಸ್ಮೃತಿಪಟಲಲ್ಲಿ ಸುಳಿದು ಹೋಗುತ್ತಾರೆ. ಅಂಬೇಡ್ಕರ್ ಚಿಂತನೆ ಮತ್ತು ವ್ಯಕ್ತಿತ್ವದ ಜೊತೆಗೆ ಮಥಿಸುವ ವಿಚಾರಗಳು ಹಾಗೂ ಮಾರ್ಕ್ಸ್ ವಾದಿ ಚಿಂತಕರ ವಿಚಾರಗಳು, ಅವುಗಳೊಂದಿಗಿನ ಮಥನಕ್ರಿಯೆ ಹೆಚ್ಚು ಗಂಭೀರತೆಯನ್ನು ತಂದಿವೆ. ಅಲ್ಲಲ್ಲಿ ಬರುವ ದಾಖಲೆಗಳು ಆತ್ಮಕಥೆಯನ್ನು ವರದಿಯಾಗಿಸದೆ ಕುತೂಹಲ ಮತ್ತು ಲವಲವಿಕೆಯ ಸೊತ್ತಾಗಿಸಿದ್ದು ನಿರೂಪಣೆಯ ಶ್ರೇಯಸ್ಸು ಎನಿಸುತ್ತದೆ.

ಅರ್ಬಿ ಮೋರೆಯವರ ಬಿ ಆರ್ ಅಂಬೇಡ್ಕರ್ ಅವರ ವ್ಯಕ್ತಿತ್ವದ ದರ್ಶನವೂ ಪರೋಕ್ಷವಾಗಿ ನೀಡುತ್ತದೆ. ಇಂಥ ಕೃತಿಗಳು ಹೆಚ್ಚು ಬಂದಷ್ಟು ನಿಜವಾದ ಅಂಬೇಡ್ಕರ್ ಅವರ ವ್ಯಕ್ತಿತ್ವ ಅನಾವರಣವಾಗುತ್ತದೆ. ಮೋರಿಯವರ ಅಂಬೇಡ್ಕರ್ ಮುಖಿವಾದವು ಕಮ್ಯುನಿಸ್ಟರಿಗೆ ವರೆಗಲ್ಲಿನಂತೆ ಕೆಲಸ ಮಾಡಿದ್ದೂ ಕೃತಿ ಅನಾವರಣಗೊಳಿಸುತ್ತದೆ ಆದರೆ ಬದಲಾವಣೆಯ ಸಾಧ್ಯತೆಗಳು ಏನು ಎನ್ನುವುದನ್ನು ಕೃತಿ ವಾಚ್ಯ ಮಾಡುವುದಿಲ್ಲ. ಆದರೆ ಬದಲಾದ ಸಂಗತಿಗಳು ಗೋಚರವಾಗುತ್ತವೆ. ಭಾರತೀಯ ಕಮ್ಯುನಿಸಂನ ಇತಿಹಾಸವೂ ದಾಖಲಾಗುವುದರೊಂದಿಗೆ, ಭಾರತದ ಚರಿತ್ರೆಯಲ್ಲಿ 1966 ರರ ವರೆಗಿನ ಅದರ ಮೈಯೊಡ್ಡಿದ ಸ್ಟಿತ್ಯಂತರದ ಸ್ವರೂಪಗಳನ್ನು ಮುಕ್ಕಾಗದಂತೆ ತೆರೆದಿಡುತ್ತದೆ.

ಇಂದಿನಇಂದಿನ ಸಂದರ್ಭದಲ್ಲಿ ಈ ಕೃತಿ ಮಾರ್ಕ್ಸ್ ವಾದಿಗಳ ನೆಲದ ಬದುಕಿನೊಂದಿಗೆ ನೆಂಟಸ್ತಿಕೆಯನ್ನು ಸಾಧಿಸುವ ಹಂಬಲದ ಉತ್ಕಟತೆಯ ಕನ್ನಡದ ಕೃತಿಯಾಗಿ ಕಾಣುತ್ತದೆ. ಇದನ್ನು ಸಮರ್ಥವಾಗಿ ಅನುವಾದಿಸಿದ ಶ್ರೇಯಸ್ಸು ಪ್ರೊ: ಎಂ ಅಬ್ದುಲ್ ರೆಹಮಾನ್ ಪಾಷ ಅವರಿಗೆ ಸಲ್ಲುತ್ತದೆ.

ಇದನ್ನೂ ನೋಡಿ: ಕೇಂದ್ರ ಬಜೆಟ್‌ 2025 : ಬಡವರಿಗೆ ಏನೂ ಇಲ್ಲ! ಶ್ರೀಮಂತರಿಗಾಗಿ ಮಂಡಿಸಿದ ಬಜೆಟ್‌ Janashakthi Media

Donate Janashakthi Media

Leave a Reply

Your email address will not be published. Required fields are marked *