ನಮ್ಮ ನೈತಿಕತೆ ಪ್ರಶ್ನಿಸಬೇಡಿ : ಚರ್ಚೆಗೆ ಬನ್ನಿ ಉತ್ತರಿಸಲು ನಾವು ಸಿದ್ದರಿದ್ದೇವೆ – ರವೀಶ್ ಕುಮಾರ್ ಬಿ

ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಸಮಿತಿಯ ಸದಸ್ಯರಾಗಿದ್ದ ರವೀಶ್ ಕುಮಾರ್ ಬಿ ರವರು ರೋಹಿತ್‌ ಚಕ್ರತೀರ್ಥರವರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅದರ ಪೂರ್ಣ ಸಾರಾಂಶ ಈ ಕೆಳಗಿನಂತಿದೆ.

ಸನ್ಮಾನ್ಯ ಶ್ರೀ ರೋಹಿತ್ ಚಕ್ರತೀರ್ಥ ತೀರ್ಥ ಅವರ ಪ್ರಶ್ನೆಗಳಿಗೆ ಶ್ರೀ ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಸಮಿತಿಯ ಸದಸ್ಯನಾಗಿ ನನ್ನ ಉತ್ತರ.

ಈ ಉತ್ತರ ಪ್ರಥಮ ಭಾಷೆ ಕನ್ನಡ ಸಿರಿ ಕನ್ನಡ ಪಠ್ಯ ಪುಸ್ತಕ ಮಾತ್ರ ಅನ್ವಯಿಸುತ್ತದೆ. ಏಕೆಂದರೆ ನಾನು ಪ್ರಥಮ ಭಾಷೆ ಕನ್ನಡ ಪಠ್ಯ ಪುಸ್ತಕ ಸಮಿತಿಯ ಸದಸ್ಯ. ಬೇರೆ ವಿಷಯಗಳ ಬಗ್ಗೆ ಚರ್ಚೆ ಮಾಡುವುದಿಲ್ಲ. ನಾವು ಏಕಾಏಕಿ ಯಾವುದೇ ಪಠ್ಯವನ್ನು ಕೈಬಿಟ್ಟಿಲ್ಲ. ರಾಜ್ಯದ ಎಲ್ಲಾ ಡಯಟ್ ಗಳಿಗೆ ಯಾವ ಪಾಠವನ್ನು ಕೈ ಬಿಡಬೇಕು ಎಂದು ಕೇಳಿ, ಶಿಕ್ಷಕರ ಅಭಿಪ್ರಾಯ ಪಡೆದು ಕೊಂಡು, ಅಗತ್ಯವಾದದ್ದನ್ನು, ಉಳಿಸಿಕೊಂಡು, ಆಶಯ ಇದ್ದ ಪಾಠಗಳನ್ನು ತೆಗೆಯುವಾಗ ಆಯಾಮ ಕವಿಗಳ ಬೇರೆ ಬೇರೆ ಪಾಠಗಳನ್ನು ಹಾಕಿದ್ದೇವೆ. ಎರಡು ಮೂರು ಕಡೆ ಇದ್ದ ಒಂದೇ ಕವಿಯ ಪಾಠಗಳಲ್ಲಿ ಒಂದನ್ನು ಉಳಿಸಿಕೊಂಡು, ಬೇರೆ ಬೇರೆ ಪ್ರದೇಶದ ಕವಿಗಳಿಗೆ ಆದ್ಯತೆ ನೀಡಿದ್ದೇವೆ. ನಿಧಾನವಾಗಿ ಓದಿ, ಪ್ರತಿ ಪ್ರಶ್ನೆಗೂ ಉತ್ತರ ನೀಡಿದ್ದೇವೆ.

ಬರಗೂರು ರಾಮಚಂದ್ರಪ್ಪನವರ ಬಳಗ, ಈಗಿನ ಸಮಿತಿ ಬ್ರಾಹ್ಮಣೀಕರಣ ಮಾಡಿದೆ ಎಂಬ ವಾದವನ್ನು ಮುಂದಿಡುತ್ತಿದೆ. ಬಹಳ ಸಂತೋಷ. ಸ್ವಲ್ಪ ಫ್ಯಾಕ್ಟ್‌ ಗಳನ್ನು ಗಮನಿಸೋಣ…
ಉತ್ತರ : ನಾವು ಸಂವಿಧಾನದ ಆಶಯವಾದ ಸಾಮಾಜಿಕ ನ್ಯಾಯ, ಲಿಂಗ ಸಮಾನತೆ ಮತ್ತು ಪ್ರಾದೇಶಿಕ ಪ್ರಾತಿನಿಧ್ಯಕ್ಕೆ ಅನುಗುಣವಾಗಿ ಪರಿಷ್ಕರಣೆ ಮಾಡಿದ್ದೇವೆ. ಜಾತಿ, ಧರ್ಮದ ಆಧಾರದಲ್ಲಿ ಯಾರನ್ನು ಕೈಬಿಟ್ಟಿಲ್ಲ, ಹಿಂದಿನ ಸಮಿತಿಯು ಕಾರ್ಯವನ್ನು ಗೌರವಿಸಿ, ಎರಡು ಮೂರು ಕಡೆ ಬಂದಿದ್ದ ಕವಿಗಳಿಗೆ ಒಂದು ಅವಕಾಶವನ್ನು ಮಾತ್ರ ನೀಡಿ ಕೈಬಿಟ್ಟು, ಬೇರೆ ಕವಿಗಳನ್ನು ಸೇರಿಸಿದ್ದೇವೆ. ಜನರಿಗೆ ಪೂರ್ಣ ಸತ್ಯ ತಿಳಿಯಲಿ, ನೀವು ಅರ್ಧ ಸತ್ಯ ಮಾತ್ರ ಹೇಳುತ್ತಿದ್ದೀರಿ. ನಾವು ಶಿಕ್ಷಕರು ನಮಗೆ ಕವಿಗಳ ಜಾತಿ ಗೊತ್ತಿಲ್ಲ. ಈಗ ನೀವು ತಿಳಿಸುತ್ತದ್ದೀರಿ.
ಬ್ರಾಹ್ಮಣ ಮತ್ತು ಅಬ್ರಾಹ್ಮಣ ಕವಿಗಳು ಎಂದು ವರ್ಗಿಕರಣ. ಮಾಡಿದ್ದೀರಿ. ಇದೇ ನಿಮ್ಮ ನೀಚತನವನ್ನು ತಿಳಿಸುತ್ತದೆ. ನಾವು ಬ್ರಾಹ್ಮಣ. ಇದು ಹೇಳುವುದು ಶಿಕ್ಷಕನಾಗಿ ಇಷ್ಟವಿಲ್ಲ. ಆದರೆ ನಮ್ಮ ಪ್ರಶ್ನೆಗೆ ಉತ್ತರ ನಿಡುವ ಸಲುವಾಗಿ ಮಾತ್ರ ನೋವಿನಿಂದ ಹೇಳುತ್ತಿದ್ದೇನೆ. ನಾವು ವಿರೋಧಿಗಳಲ್ಲ. ನಿಮ್ಮ ಹಿಂದಿನ ಸರ್ಕಾರ ರಚಿಸಿದ ಸಮಿತಿ ಕೈಬಿಟ್ಟಿದ್ದ ಅನೇಕ ಜನ ಪ್ರಖ್ಯಾತ ಬ್ರಾಹ್ಮಣ ಕವಿಗಳನ್ನು ಸೇರಿ ಸೇರಿಸಿದ್ದೇವೆ. ಇದು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ? ನಮಗೆ ಇರುವುದು ಒಂದೇ ಜಾತಿ ಮಾನವ ಜಾತಿ.

ಬರಗೂರು ಸಮಿತಿ ಕಯ್ಯಾರ ಕಿಞ್ಞಣ್ಣ ರೈಗಳನ್ನು ಕೈಬಿಟ್ಟಿತು. ಅವರು ಬ್ರಾಹ್ಮಣರಾ??
ಉತ್ತರ : ಶ್ರೀ ಕೈಯಾರ ಕಿಞ್ಞಣ್ಣ ರೈ ಅವರ ಕವನಗಳು ೧ ನೆಯ ತರಗತಿಯಲ್ಲಿ ಮತ್ತು 9 ನೆಯ ತರಗತಿಯಲ್ಲಿ ಎರಡು ಕಡೆ ಇತ್ತು. ಒಂದನೆಯ ತರಗತಿಯಲ್ಲಿ ಇರುವ ಕೈಯಾರ ಕಿಞ್ಞಣ್ಣ ರೈ ‘ಏರುತಿಹುದು ಹಾರುತಿಹುದು’ ಪದ್ಯ ನಮ್ಮ ನಿಮ್ಮ ಕಾಲದಿಂದಲೂ ಪಠ್ಯ ಪುಸ್ತಕದಲ್ಲಿ ಇತ್ತು. ಆದ್ದರಿಂದ ಅವರ ‘ಹೊಸಹಾಡು’ ಪದ್ಯವನ್ನು 9 ನೆಯ ತರಗತಿಯಲ್ಲಿ ಉಳಿಸಿಕೊಂಡು, 1 ನೆಯ ತರಗತಿಯಲ್ಲಿ ಕೈಬಿಟ್ಟು, ಪ್ರಾದೇಶಿಕ ಪ್ರಾತಿನಿಧ್ಯ ನೀಡುವ ಸಲುವಾಗಿ ಶ್ರೀ ಶ್ರೀ ಚಂದ್ರಕಾಂತ ಕರದಹಳ್ಳಿ ಅವರ ‘ಶಾಲೆಗೆ ಹೋಗುವೆ’ ಪದ್ಯವನ್ನು ಹಾಕಿದ್ದೇವೆ. ಕಯ್ಯಾರ ಕಿಞ್ಞಣ್ಣ ರೈ ಅವರನ್ನು ನೀವು ಎಷ್ಟು ಪ್ರೀತಿಸುತ್ತಿರೂ ಅದಕ್ಕಿಂತ ಹೆಚ್ಚಿನ ಪ್ರೀತಿ ನಮಗಿದೆ. ವಿಶಾಲವಾದ ಕರ್ನಾಟಕ ರಾಜ್ಯದಲ್ಲಿ ಹಲವಾರು ಕವಿಗಳು/ಲೇಖಕರು ಇದ್ದಾರೆ. ಒಬ್ಬರಿಗೆ ಎರಡು ಅವಕಾಶ ಕೊಡುವ ಬದಲು, ಒಬ್ಬರಿಗೆ ಒಂದು ಅವಕಾಶವನ್ನು ನೀಡುವುದು ಅನೈತಿಕವಾದ್ದದೇ? ನಮ್ಮ ಶಿಕ್ಷಕರು ಪಠ್ಯ ಪುಸ್ತಕ ಹೋಲಿಸಿ, ನೋಡಿ ತೀರ್ಮಾನ ಮಾಡಲಿ.

ಚನ್ನವೀರ ಕಣವಿಯವರನ್ನು ಕೈಬಿಟ್ಟಿತು. ಅವರು ಬ್ರಾಹ್ಮಣರಾ??
ಉತ್ತರ : ಶ್ರೀ ಚೆನ್ನವೀರ ಕಣವಿಯವರ ಎರಡು ಕವನಗಳು 1 ನೆಯ ಮತ್ತು 9 ನೆಯ ತರಗತಿಯಲ್ಲಿತ್ತು. ಒಂದನೆಯ ತರಗತಿಯಲ್ಲಿದ್ದ ‘ಮಿಂಚುಹುಳು’ ಪದ್ಯವನ್ನು ಕೈಬಿಟ್ಟು, ೯ ನೆಯ ತರಗತಿಯಲ್ಲಿದ್ದ ‘ಗೆಳೆತನ’ ಪದ್ಯವನ್ನು ಉಳಿಸಿಕೊಂಡು, ಪ್ರಾದೇಶಿಕ ಪ್ರಾತಿನಿಧ್ಯ ಹಾಗೂ ಹೆಚ್ಚು ಕವಿಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಶ್ರೀ ಎ. ಕೆ. ರಾಮೇಶ್ವರ ಅವರ ‘ತಾಯಿ’ ಪದ್ಯವನ್ನು ಸೇರಿಸಲಾಗಿದೆ. ಇದು ಅನೈತಿಕ ಕಾರ್ಯವೇ? ಪರಿಶೀಲಿಸಿ ನೋಡಿ, ಮಾತನಾಡಿ.

ಸಂಗಮೇಶ ನಿಜಗುಂಡ, ಸಿದ್ಧಯ್ಯ ಪುರಾಣಿಕ, ಎಸ್.‌ ಈ. ಮಾಲತಿ ಶೆಟ್ಟಿ, ಬಿ. ಆರ್.‌ ಪೊಲೀಸ ಪಾಟೀಲರನ್ನು ಕೈಬಿಡುತ್ತಾ ಹೋಗಿದೆ. ಅವರೆಲ್ಲ ಬ್ರಾಹ್ಮಣರಾ??

ಉತ್ತರ : ಸಂಗಮೇಶ ನಿಜಗುಂಡ ಅವರ ‘ಇನಾಮು ಪತ್ರ’ ಕೈಬಿಟ್ಟು ಆ ತರಗತಿಯಲ್ಲಿ ಜಾನಪದ ಸಾಹಿತ್ಯ ಅವಕಾಶವಿರಲಿಲ್ಲ, ಜನಪದ ಸಾಹಿತ್ಯ ಪ್ರಕಾರಕ್ಕೆ ಅವಕಾಶವನ್ನು ನೀಡುವ ಸಲುವಾಗಿ ‘ಜನಪದ ಕಥೆ’ ಸೇರಿಸಲಾಗಿದೆ. ಶ್ರೀ ಸಿದ್ಧಯ್ಯ ಪುರಾಣಿಕರ ಕೈಬಿಟ್ಟಿದ್ದೇವೆ ನಿಜ. ಆದರೆ ೫ ನೆಯ ತರಗತಿಯ ಒಂದು ಪಾಠದಲ್ಲಿ ಆಯ್ದಕ್ಕಿ ಲಕ್ಕಮ್ಮ ಮತ್ತು ಸಿದ್ಧಯ್ಯ ಪುರಾಣಿಕರ ವಚನಗಳು ಇದ್ದಿತು. ಶರಣರ ವಚನಗಳು ಮತ್ತು ಆಧುನಿಕ ವಚನಗಳನ್ನು ಮಿಶ್ರಣ ಮಾಡಲಾಗಿತ್ತು. ಇದು ಸರಿಯಲ್ಲ ಎಂದು ಭಾವಿಸಿ, ಬಸವಣ, ಅಂಬಿಗರ ಚೌಡಯ್ಯ, ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ ಅವರ ವಚನಗಳನ್ನು ಸೇರಿಸಿದ್ದೇವೆ. ಇದು ತಪ್ಪೇ? ನಾವು ಬಸವಣ್ಣ ಮತ್ತು ಶರಣರ ವಿರೋಧಿಗಳಲ್ಲ. ಇದುವರೆಗೂ ಪಠ್ಯ ಪುಸ್ತಕದಲ್ಲಿ ಮಾಡಲಾಗದ ಒಂದು ಪ್ರಯೋಗವನ್ನು ಯಶಸ್ವಿಯಾಗಿ ಮಾಡಿದ್ದೇವೆ. 5/6/7/ 8ನೇ ತರಗತಿಗಳಲ್ಲಿ ಪ್ರತಿ ತರಗತಿಯಲ್ಲಿ ನಾಲ್ಕು ಜನ ಶರಣರಂತೆ, 16 ಜನ ಶಿವಶರಣರ ವಚನಗಳನ್ನು ಸೇರಿಸಿದ್ದೇವೆ. ಇವರಲ್ಲಿ ಎಂಟು ಜನ ಪುರುಷರು ಮತ್ತು ಎಂಟು ಜನ ಮಹಿಳೆಯರು ಇದ್ದಾರೆ. ಇದನ್ನು ಸಹ ಜನರಿಗೆ ಹೇಳಿ, ಅರ್ಧ ಸತ್ಯವನ್ನು ಹೇಳಿ, ಜನರನ್ನು ಏಕೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದೀರಿ. ಇನ್ನುಳಿದಂತೆ ಶ್ರೀ ಇಸ್. ಈ. ಮಾಲತಿ ಶೆಟ್ಟಿ, ಬಿ. ಆರ್. ಪಾಟೀಲ ಅವರ ಪಾಠಗಳು ಪ್ರಥಮ ಭಾಷೆ ಕನ್ನಡ ಪಠ್ಯ ಪುಸ್ತಕದಲ್ಲಿ ಇರಲಿಲ್ಲ, ಬೇರೆ. ಇಲ್ಲಿ ಕೈಬಿಟ್ಟಾದ್ದರೆ ತಿಳಿಸಿ, ಹುಡುಕಿ ಉತ್ತರ ನೀಡುತ್ತೇನೆ.

ಬರಗೂರು ಸಮಿತಿ ಕೈಬಿಟ್ಟವರಲ್ಲಿ ಕುವೆಂಪು ಇದ್ದಾರೆ. ಅವರ ಒಂದಲ್ಲ, ಎರಡು ಬರಹಗಳನ್ನು ಬರಗೂರು ಕೈಬಿಟ್ಟಿದ್ದಾರೆ. ಕುವೆಂಪು ಬ್ರಾಹ್ಮಣರಾ??
ಉತ್ತರ : ಕುವೆಂಪು ಅವರನ್ನು ಅವಮಾನಿಸಿದ ನೀವು ನಮಗೆ ಪ್ರಶ್ನೆ ಮಾಡಿದ್ದೀರಿ. ಸಂತೋಷ. ನಾವು ಕುವೆಂಪು ಅವರನ್ನು ಪ್ರೀತಿಸುವಷ್ಟು ನೀವು ಕುವೆಂಪು ಅವರನ್ನು ಪ್ರೀತಿಸಲಾರಿರಿ.
ಕುವೆಂಪು ಅವರ ಪಾಠಗಳು 4,7,8 ಮೂರು ತರಗತಿಯಲ್ಲಿ ಇತ್ತು.  ನಾವು 7 ನೆಯ ತರಗತಿಯಲ್ಲಿದ್ದ ‘ಅನಲೆ’ ಪಾಠವನ್ನು ಕೈಬಿಟ್ಟು, ಕನ್ನಡದ ಆಸ್ತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ‘ಯಶೋಧರೆ’ ನಾಟಕವನ್ನು ಸೇರಿಸಿ, ಅದನ್ನು ೮ ನೆಯ ತರಗತಿಗೆ ವರ್ಗಾಯಿಸಿ, ಎಂಟನೆಯ ತರಗತಿಯಲ್ಲಿದ್ದ ಕುವೆಂಪು ಅವರ ‘ಅಜ್ಜಯ್ಯನ ಅಭ್ಯಂಜನ’ ಪಾಠ ತೆಗೆದು, 10 ನೆಯ ತರಗತಿಯಲ್ಲಿ ಕುವೆಂಪು ಅವರ ‘ ಹಸುರು’ ಪದ್ಯವನ್ನು ಸೇರಿಸಿ, ಕುವೆಂಪು ಅವರನ್ನು ಮತ್ತು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರನ್ನು ಸಮಾನವಾಗಿ ಗೌರವಿಸಿದ್ದೇವೆ. ನಿಮ್ಮದೇ ಹಿಂದಿನ ಸರ್ಕಾರ ರಚಿಸಿದ ರಚನಾ ಸಮಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರಿಗೆ ಪಠ್ಯ ಪುಸ್ತಕದಲ್ಲಿ ಅವಕಾಶ ನೀಡಿರಲಿಲ್ಲ. ಈ ದೋಷವನ್ನು ಸರಿಪಡಿಸಿದ್ದು ನಾವು ಮಾಡಿದ ತಪ್ಪೇ?

ನರೇಂದ್ರ ರೈ ದೇರ್ಲ, ಸಾ. ಶಿ. ಮರುಳಯ್ಯ, ಸರ್ಪಭೂಷಣ ಶಿವಯೋಗಿ, ಏಣಗಿ ಬಾಳಪ್ಪ… ಹೀಗೆ ಸಾಲು ಸಾಲು ಅಬ್ರಾಹ್ಮಣರನ್ನು ಬರಗೂರು ಕೈಬಿಟ್ಟರು
ಉತ್ತರ : ೭ ನೆಯ ತರಗತಿಯಲ್ಲಿ ಶ್ರೀ ನರೇಂದ್ರ ರೈ ದೇರ್ಲ ಅವರ ‘ಹಳ್ಳಿಮನೆ ಆಶ್ರಯವಾಗಲಿ’ ಎನ್ನುವ ಪಾಠವನ್ನು ನಾವು ಕೈಬಿಟ್ಟಿದ್ದು ನಿಜ ಏಕೆಂದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬಹಳಷ್ಟು ಕವಿಗಳು/ಲೇಖಕರು ೧ ರಿಂದ ೧೦ ನೆಯ ತರಗತಿಗಳ ಪಠ್ಯ ಪುಸ್ತಕದಲ್ಲಿ ತುಂಬಿತುಳುಕುತ್ತಿದ್ದರು. ಆದ್ದರಿಂದ ಬೇರೆ ಬೇರೆ ಜಿಲ್ಲೆಗಳಿಗೆ ಅವಕಾಶ ನೀಡುವ ಸಲುವಾಗಿ ಕೈಬಿಟ್ಟು, ೮ ನೆಯ ತರಗತಿಯಲ್ಲಿದ್ದ ಶ್ರೀ ಕೃಷ್ಣಾನಂದ ಕಾಮತ್ ಅವರ ‘ಪರಿಸರ ಸಮತೋಲನ’ ಪಾಠವನ್ನು ಸೇರಿಸಿದ್ದೇವೆ. ಪ್ರಾದೇಶಿಕ ಪ್ರಾತಿನಿಧ್ಯ ನೀಡುವುದು ತಪ್ಪೇ? ನಿಮ್ಮ ಸರ್ಕಾರ ಹಿಂದಿನ ಸಮಿತಿಯು
ಶ್ರೀ ಸಾ. ಶಿ. ಮರುಳಯ್ಯ ಅವರ ಪಾಠವನ್ನು ಕೈಬಿಟ್ಟಿಲ್ಲ. 9 ತರಗತಿಯಲ್ಲಿ ‘ಪ್ರಜಾನಿಷ್ಠೆ’ ಮುಖ್ಯ ಪಾಠವಾಗಿ ಈಗಲೂ ಇದೆ, ಏಕೆ ಸುಳ್ಳು ಹೇಳುತ್ತೀರಿ? ಎರಡು ಕಡೆ ಶ್ರೀ ಸಾ. ಶಿ. ಮರುಳಯ್ಯ ಅವರ ಪಾಠಗಳು ಇತ್ತು, 7 ನೆಯ ತರಗತಿಯಲ್ಲಿ ಕೈಬಿಟ್ಟು, 9 ನೆಯ ತರಗತಿಯಲ್ಲಿ ಉಳಿಸಿಕೊಂಡು, ಬೇರೆ ಲೇಖಕರಿಗೆ ಅವಕಾಶ ನೀಡುವ ಸಲುವಾಗಿ ಕೈಬಿಟ್ಟಿದ್ದು ತಪ್ಪೇ? ಶ್ರೀ ಸರ್ಪಭೂಷಣ ಶಿವಯೋಗಿಗಳ ಪಾಠ ಕೈ ಬಿಟ್ಟಿದ್ದು, ನಿಜ ನೀವು ಅದನ್ನು ಸೇರಿಸಬಹುದಿತ್ತಲ್ಲ ಏಕೆ ಸೇರಿಸಲಿಲ್ಲ. ಕಾರಣ ಕೊಡಿ. ಏಣಗಿ ಬಾಳಪ್ಪ ಅವರ ಪಾಠವನ್ನು ನಾವು ಕೈಬಿಟ್ಟಿಲ್ಲ.

ಇವರು ಅಕ್ಕಮಹಾದೇವಿಯನ್ನು ಕೈಬಿಟ್ಟರು. ವಿಶ್ವವಂದ್ಯ ಬಸವಣ್ಣರನ್ನು ಕೈಬಿಟ್ಟರು. ಜೇಡರ ದಾಸಿಮಯ್ಯನನ್ನು ಕೈಬಿಟ್ಟರು. ಇವರೆಲ್ಲ ಬ್ರಾಹ್ಮಣರಾ??
ಉತ್ತರ : ಈ ಪ್ರಶ್ನೆಗೆ ಈಗಾಗಲೇ ಮೇಲೆ ಉತ್ತರ ನೀಡಿದ್ದೇವೆ. ಇರಲಿ ಇನ್ನೂ ಒಮ್ಮೆ ಹೇಳುತ್ತೇವೆ. ನಿಮ್ಮ ಸರ್ಕಾರ ರಚಿಸಿದ ಸಮಿತಿ ಕೇವಲ ಬಸವಣ್ಣನವರ ಎರಡು ವಚನಗಳನ್ನು ಮಾತ್ರ 10 ನೆಯ ಮಾತ್ರ ಸೇರಿಸಿದ್ದರು. ನಾವು ಶ್ರೀ ಎಲ್. ಬಸವರಾಜ ಅವರು ರಚಿಸಿದ ಬಸವಣ್ಣನವರನ್ನು ಪರಿಚಯಿಸುವ ಸಂಪೂರ್ಣ ಪಾಠವನ್ನು ಸೇರಿಸಿದ್ದೇವೆ. ಅಲ್ಲದೆ ಬಸವಣ್ಣ, ಅಕ್ಕಿ ಮಹಾದೇವಿ, ಜೇಡರ ದಾಸಿಮಯ್ಯ ಅವರ ಜೊತೆಗೆ ಇನ್ನೂ 13 ಜನ ಶಿವಶರಣರ ವಚನಗಳನ್ನು ಸೇರಿಸಿದ್ದೇವೆ. ಇದು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ? ಇದು ಜಾಣ ಕುರುಡು. ತಪ್ಪು ಮಾಹಿತಿ,

ಸರ್ವಜ್ಞನನ್ನೂ ಬರಗೂರು ಸಮಿತಿ ಪಠ್ಯದಿಂದ ಕೈಬಿಟ್ಟಿತು. ಸರ್ವಜ್ಞ ಬ್ರಾಹ್ಮಣನಾ??
ಉತ್ತರ : ಸರ್ವಜ್ಞನ ವಚನಗಳನ್ನು ಒಂದು ತರಗತಿಯಲ್ಲಿ ಕೈಬಿಟ್ಟು ಇನ್ನೊಂದು ತರಗತಿಯಲ್ಲಿ ಉಳಿಸಿಕೊಂಡು, ಬೇರೆ ಬೇರೆ ವಚನಕಾರರಿಗೆ ಅವಕಾಶವನ್ನು ನೀಡಲಾಗಿದೆ.
ನೀವು ಪಠ್ಯ ಪುಸ್ತಕ ನೋಡಿ, ಪರಿಷ್ಕರಣೆ ಮಾಡಿಲ್ಲ ಎನ್ನುವುದಕ್ಕೆ ಇದೆ ಸಾಕ್ಷಿ. ನಿಮಗೆ ಬೇಕಾದವರ‌ ಪಾಠವನ್ನು ಸೇರಿಸಿ, ದಲಿತರಿಗೆ, ಮಹಿಳೆಯರಿಗೆ, ಅಲ್ಪ ಸಂಖ್ಯಾತರಿಗೆ 1 ರಿಂದ 10 ನೆಯ ತರಗತಿಗಳಲ್ಲಿದ್ದ ಒಂದು ಅವಕಾಶವನ್ನು ಕಿತ್ತು, ನಿಮ್ಮವರು ಒಂದೇ ಎಂಬ ಕಾರಣಕ್ಕೆ ಸೇರಿಸಿ, ಇಂದಿನ ಆಧ್ವಾನಕ್ಕೆಲ್ಲ ಕಾರಣರಾಗಿ, ನಿಷ್ಕಾರಣವಾಗಿ, ನಮ್ಮನ್ನು ದೂಷಿಸುವ ನಿಮಗೆ ನೈತಿಕತೆ ಇದೆಯೇ?

ಇವರು ಸಬಿಹಾ ಭೂಮಿಗೌಡರನ್ನು ಕೈಬಿಡುತ್ತಾರೆ. ಅವರು ಬ್ರಾಹ್ಮಣರಾ??
ಉತ್ತರ : ನಾವು ಸಬೀಹಾ ಭೂಮಿ ಗೌಡ ಅವರನ್ನು ಕೈಬಿಟ್ಟಿರುವುದು ನಿಜ. ಅವರು ದಕ್ಷಿಣ ಕನ್ನಡ ಜಿಲ್ಲೆಯವರು ಎಂಬ ಕಾರಣಕ್ಕೆ ಕೈಬಿಟ್ಟು ಕಲ್ಯಾಣ ಕರ್ನಾಟಕ ಭಾಗದ ಶ್ರೀ ಶಾಂತರಸ ಅವರ ‘ಉರಿದ ಬದುಕು’ ಪಾಠವನ್ನು ಸೇರಿಸಿದ್ದೇವೆ. ಪ್ರಾದೇಶಿಕ ಅಸಮಾನತೆಯ ನಿವಾರಣೆ ಮಾಡುವುದು ಸಂವಿಧಾನದ ಆಶಯಗಳಿಗೆ ವಿರುದ್ಧವೇ?

ಬರಗೂರು ಸಮಿತಿ ಕೇವಲ ಪ್ರಥಮ ಭಾಷೆ ಕನ್ನಡ ಪಠ್ಯವೊಂದರಲ್ಲೇ (೧ರಿಂದ ೧೦ನೇ ತರಗತಿ) – ಒಟ್ಟು ಮೂವತ್ತಮೂರು ಅಬ್ರಾಹ್ಮಣ ಸಾಹಿತಿಗಳನ್ನು ಕೈಬಿಡುತ್ತದೆ!!
ಉತ್ತರ : ನಾವು ಪಾಠಗಳನ್ನು ಕೈಬಿಡುವಾಗ ನಿಮ್ಮಂತೆ ಬ್ರಾಹ್ಮಣ, ಅಬ್ರಾಹ್ಮಣ ಕವಿಗಳು ಎಂದು ವರ್ಗಿಕರಣ ಮಾಡಿಲ್ಲ, ನಾವು ಎಲ್ಲರನ್ನೂ ಸಮಾನವಾಗಿ ಗೌರವಿಸಿದ್ದೇವೆ.
ನಾವು ಜಾತಿ ಧರ್ಮದ ಹಿನ್ನೆಲೆಯಲ್ಲಿ ಪಠ್ಯ ಪರಿಷ್ಕರಣೆ ಮಾಡಿಲ್ಲ. ಸಾಮಾಜಿಕ ನ್ಯಾಯ, ಲಿಂಗ ಸಮಾನತೆ ಮತ್ತು ಪ್ರಾದೇಶಿಕ ಪ್ರಾತಿನಿಧ್ಯ ನೀಡುವುದಕ್ಕಾಗಿ ಕೆಲವರನ್ನು ಕೈಬಿಟ್ಟು, ಕೆಲವರನ್ನು ಸಮಾನ ಅರ್ಹತೆ ಮೇಲೆ ಆಯ್ಕೆ ಮಾಡಿದ್ದೇವೆ. ನಮಗೆ ಕವಿಗಳ ಜಾತಿ ಧರ್ಮ ಗೊತ್ತಿಲ್ಲ.

ಹಾಗೆ ಬಿಟ್ಟ ಜಾಗದಲ್ಲಿ ಮತ್ತೆ ಹೊಸದಾಗಿ 33 ಸಾಹಿತಿಗಳನ್ನು ತುಂಬಿಸಿಕೊಳ್ಳಬೇಕಲ್ಲ? ಆ33ರಲ್ಲಿ ಇಪ್ಪತ್ತೆರಡು ಮಂದಿ ಬ್ರಾಹ್ಮಣರು ಎಂದರೆ ಆಶ್ಚರ್ಯಪಡಬೇಡಿ..!!
ಉತ್ತರ : ಬ್ರಾಹ್ಮಣ ಕವಿಗಳನ್ನು ಏಕೆ ಸೇರಿಸಬಾರದು. ಅವರು ಪ್ರಖ್ಯಾತ ಕವಿಗಳಲ್ಲವೇ? ಬ್ರಾಹ್ಮಣರ ವಿರೋಧಿಗಳು ಎಂದು ಹೇಳುತ್ತೀರಿ. ಬ್ರಾಹ್ಮಣ ಕವಿಗಳನ್ನು ಸೇರಿಸಿದರೆ ಏಕೆ ಸೇರಿಸಿದ್ದೀರೀ ಎಂದು ಪ್ರಶ್ನೆ ಮಾಡುತ್ತೀರಿ. ಈ ನಿಮ್ಮ ದ್ವಂದ್ವ ನಿಲುವಿಗೆ ಕಾರಣವೇನು?

ಬಿ. ವಿ. ಕಾರಂತ, ಎಚ್.‌ ಎಸ್.‌ ವೆಂಕಟೇಶಮೂರ್ತಿ, ಕೃಷ್ಣಾನಂದ ಕಾಮತ್‌, ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ಯು. ಆರ್.‌ ಅನಂತಮೂರ್ತಿ, ಗೋಪಾಲಕೃಷ್ಣ ಅಡಿಗ, ತಿ. ತಾ. ಶರ್ಮ, ಸಿದ್ಧವನಹಳ್ಳಿ ಕೃಷ್ಣಶರ್ಮ, ಗೊರೂರು ರಾಮಸ್ವಾಮಿ ಅಯ್ಯಂಗಾರ್‌, ಸು. ರಂ. ಎಕ್ಕುಂಡಿ…. ಹೀಗೆ ಬರಗೂರು ಸಮಿತಿಯ ಪರಿಷ್ಕರಿಸಿದ ಪಠ್ಯಪುಸ್ತಕದಲ್ಲಿ ಜಾಗಪಡೆಯುವ ಮಂದಿ ಸಾಹಿತಿಗಳು ಹೌದು, ಆದರೆ ಬ್ರಾಹ್ಮಣರೂ ಆಗಿದ್ದರು ತಾನೆ..??
ಉತ್ತರ: ಮೇಲಿನ ಎಲ್ಲಾ ಸಾಹಿತಿಗಳು ಕನ್ನಡ ನಾಡಿನ ಶ್ರೇಷ್ಠ ಸಾಹಿತಿಗಳು. ಅವರು ಬ್ರಾಹ್ಮಣರು ಎನ್ನುವ ಕಾರಣಕ್ಕಾಗಿ ಸೇರಿಸಿಲ್ಲ. ಬಹುಶಃ ಈ ಪ್ರಶ್ನೆಯೇ ನಿಮ್ಮ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ.
ನಾವು ಜಾತಿ ನೋಡಿ ಪಠ್ಯ ಪರಿಷ್ಕರಣೆ ಮಾಡಿಲ್ಲ; ಸಾಹಿತ್ಯದ ಮೌಲ್ಯ ನೋಡಿ ಪರಿಷ್ಕರಣೆ ಮಾಡಿದ್ದೇವೆ. ಆದ್ದರಿಂದಲೇ ಅಷ್ಟೊಂದು ಬ್ರಾಹ್ಮಣರಿಗೆ ಅವಕಾಶವನ್ನು ಮಾಡಿಕೊಟ್ಟಿದ್ದೇವೆ.
ಇದರಲ್ಲಿ ತಪ್ಪೇನೂ ಇಲ್ಲ. ನೀವು ಶ್ರೀ ಅರವಿಂದ ಮಾಲಗತ್ತಿ, ಶ್ರೀಮತಿ ಬಿ. ಟಿ. ಲಲಿತಾ ನಾಯಕ್, ಶ್ರೀಮತಿ ಸಾರಾ ಅಬೂಬಕ್ಕರ್, ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್, ಏ. ಎನ್. ಮೂರ್ತಿ ರಾವ್, ಇನ್ನು ಮೊದಲಾದವರನ್ನು ಏಕೆ ಬಿಟ್ಟಿರಿ, ಅಬ್ರಾಹ್ಮಣ ಪ್ರೇಮಿಗಳಾದ ನೀವು ಸೇರಿಸಿರುವವರು ಯಾರು? ಸಕಾರಣವಾಗಿ ತಿಳಿಸಿ.

ಹಾಗಾದರೆ ಬರಗೂರು ಮಾಡಿದ ಕೆಲಸ ಬ್ರಾಹ್ಮಣೀಕರಣ ಆಗುವುದಿಲ್ಲ, ರೋಹಿತ್‌ ಮಾಡಿದ್ದು ಮಾತ್ರ ಬ್ರಾಹ್ಮಣೀಕರಣ ಆಗುವುದು ಹೇಗೆ..??

ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಸಮಿತಿಯು ಬ್ರಾಹ್ಮಣ, ಅಬ್ರಾಹ್ಮಣ ಕವಿಗಳು ಎಂದು ವರ್ಗಿಕರಣ ಮಾಡಿಲ್ಲ. ಅದನ್ನು ಮಾಡುತ್ತಿರುವವರು ನೀವು. ನೀವು ದಲಿತರನ್ನು, ಅಲ್ಪಸಂಖ್ಯಾತರ ಮಹಿಳೆಯನ್ನು, ಗಾಂಧೀವಾದಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರನ್ನು ಕಿತ್ತು ಹಾಕಿ, ಯಾರನ್ನು ಸೇರಿಸಿದ್ದೀರಿ. ಬ್ರಾಹ್ಮಣರಿಗೆ ಅವಕಾಶವನ್ನು ನಾವು ಹೆಚ್ಚು ಕೊಟ್ಟಿದ್ದೇವೆ ಎಂದು ಮೇಲೆ ಹೇಳಿದ ತಾವೇ ಈಗ ಇನ್ನೂ ಹೆಚ್ಚಿನ ಬ್ರಾಹ್ಮಣರನ್ನು ಏಕೆ ಸೇರಿಸಿದ್ದೀರಿ? ಅದೂ ಸಾಮಾಜಿಕ ನ್ಯಾಯ ಲಿಂಗ ಸಮಾನತೆ ಮತ್ತು ಪ್ರಾದೇಶಿಕ ಪ್ರಾತಿನಿಧ್ಯಕ್ಕೆ ವಿರುದ್ಧವಾಗಿ ಏಕೆ ಸೇರಿಸಿದ್ದೀರಿ? ನೀವಾದರೂ ನಾವು ಕೊಟ್ಟ ಬ್ರಾಹ್ಮಣ ಪ್ರಾತಿನಿಧ್ಯ ಕಡಿಮೆ ಮಾಡಬಹುದಿತ್ತಲ್ಲ. ದಲಿತರನ್ನು, ಮಹಿಳೆಯರನ್ನು, ಅಲ್ಪಸಂಖ್ಯಾತರನ್ನು ತೆಗೆದು ಹಾಕಿ, ಬ್ರಾಹ್ಮಣರನ್ನು ಸೇರಿಸು ಅಗತ್ಯವಾದರೂ ಏನಿತ್ತು? ನಾವು ಸೇರಿಸಿದ್ದ ಹೆಚ್ಚು ಬ್ರಾಹ್ಮಣರನ್ನು ತೆಗೆದು ನಿಮಗೆ ಬೇಕಾದ ಬ್ರಾಹ್ಮಣರನ್ನು ಸೇರಿಸಬಹುದಿತ್ತಲ್ಲ?

ವಿಷಯ ಸ್ಪಷ್ಟ: ಇವರಿಗೆ ಇದನ್ನು ಹೇಗಾದರೂ ಸರಿಯೆ, ಬ್ರಾಹ್ಮಣೀಕರಣವಾದ ಪಠ್ಯಪುಸ್ತಕ ಎಂದು ತೋರಿಸಬೇಕಾಗಿದೆ. ಪಠ್ಯವಿವಾದ ಎದ್ದಾಗ ಮೊದಲು ಕೇಳಿಬಂದ ಶಬ್ದ: ಕೇಸರೀಕರಣ. ಆದರೆ ಈಗ ಆ ಶಬ್ದ ನಿಧಾನವಾಗಿ ಹಿನ್ನೆಲೆಗೆ ಸರಿಯಿತು. ಮಾಧ್ಯಮಗಳು ಅಪ್ಪಿತಪ್ಪಿಯೂ ಆ ಶಬ್ದವನ್ನು ಈಗ ಬಳಸುತ್ತಿಲ್ಲ. ಈಗ ಅವರು ಹೇಳುತ್ತಿರುವುದು ಬ್ರಾಹ್ಮಣೀಕರಣವೊಂದೇ. ಹಾಗೆ ಹೇಳುವುದರಿಂದ ಬ್ರಾಹ್ಮಣರಲ್ಲದ ಎಲ್ಲರ ವಿಶ್ವಾಸವನ್ನೂ ತಮ್ಮ ಕಡೆ ತಿರುಗಿಸಿಕೊಳ್ಳಬಹುದು ಎಂಬುದು ಎದುರುಪಾಳೆಯದ ಗುಪ್ತ ಯೋಜನೆ… ನಮ್ಮ ಸಮಿತಿಯು ನಿಮ್ಮ ರೀತಿ ಗುಪ್ತವಾಗಿ, ರಹಸ್ಯವಾಗಿ ಏನೂ ಮಾಡಿಲ್ಲ, ಮೂರು ವರ್ಷಗಳ ಕಾಲ ಪ್ರತಿಯೊಂದು ಪಾಠವನ್ನು ಎರಡು ಮೂರು ಸಲ ಪರಿಷ್ಕರಣೆ ಮಾಡಿದ್ದೇವೆ. ರಾಜ್ಯದ ಶಿಕ್ಷಕರು ಡಯಟ್ ಪ್ರಶ್ನಾವಳಿಯಲ್ಲಿ ನೀಡಿದ ಸಲಹೆಯನ್ನು ಸ್ವೀಕರಿಸಿ, ಬದಲಾವಣೆ ಮಾಡಿದ್ದೇವೆ. ನಮ್ಮ ಸಮಿತಿಯಲ್ಲಿ ರಾಜ್ಯ ವಿವಿಧ ಜಿಲ್ಲೆಗಳ ೧೦ ಜನ ಸದಸ್ಯರು ಇದ್ದರು. ನಾವು ಮಾಡಿದ ಪರಿಷ್ಕರಣೆಯನ್ನು ಉನ್ನತ ಮಟ್ಟದ ಇನ್ನೊಂದು ಸಮಿತಿ ಪರಿಶೀಲನೆ ಮಾಡಿದ ನಂತರ ಮುದ್ರಣ ಮಾಡಲಾಗಿದೆ. ನಿಮ್ಮ ಸಮಿತಿಯಲ್ಲಿ ಕೇವಲ ಮೂರು ಜನ ಸದಸ್ಯರು ಇದ್ದಾರೆ. ನೀವು ಮಾಡಿದ ಪರಿಷ್ಕರಣೆಯನ್ನು ಉನ್ನತ ಮಟ್ಟದ ಸಮಿತಿಗೆ ಪರಿಶೀಲನೆಗೆ ಒಪ್ಪಿಸಿದ್ದೀರಾ? ನೀವು ಎಷ್ಟು ದಿನ ಪಠ್ಯ ಪುಸ್ತಕ ಸಂಘದಲ್ಲಿ ಸಭೆ ನಡೆಸಿದ್ದೀರಿ? ನೀವು ಎಲ್ಲೋ ಕುಳಿತು ಬರೆದುಕೊಟ್ಟ ಪಾಠಗಳಿಗೆ ಕೇವಲ ಅಭ್ಯಾಸವನ್ನು ಬರೆದುಕೊಟ್ಟ ಶಿಕ್ಷಕರು ನಮ್ಮ ಹೆಸರು ಪಠ್ಯ ಪುಸ್ತಕದಲ್ಲಿ ಸೇರಿಸಬೇಡಿ ಎಂದು ಲಿಖಿತವಾಗಿ ಬರೆದು ಕೊಡಲು ಕಾರಣವೇನು? ಅಂದರೆ ಶಿಕ್ಷಕರಿಗೆ ಇಷ್ಟವಿರಲಿಲ್ಲ, ನಿಮ್ಮ ಬಲವಂತಕ್ಕೆ ಅಭ್ಯಾಸ ಬರೆದುಕೊಟ್ಟಿದ್ದಾರೆ ಅಲ್ಲವೇ? ಭಗತ್ ಸಿಂಗ್ ಪಾಠವನ್ನು ತೆಗೆದು, ಒತ್ತಡ ಬಂದ ಮೇಲೆ ಸೇರಿಸಿ, ಶ್ರೀ ಚಕ್ರವರ್ತಿ ಸೂಲಿಬೆಲೆ ಅವರು ರಚಿಸಿದ ‘ತಾಯಿ ಭಾರತೀಯ ಸುಪುತ್ರರು’ ಪಾಠವನ್ನು ಸೇರಿಸಿದ್ದೀರಿ. ಒಂದೇ ವಿಷಯದ ಪಾಠವನ್ನು ಒಂದೇ ತರಗತಿಯ ವಿದ್ಯಾರ್ಥಿಗಳು ಓದುವುದು ಎಷ್ಟು ಸಮಂಜಸ ? ನೀವು ಪಠ್ಯ ಪುಸ್ತಕ ನೋಡಿಲ್ಲ ಎನ್ನುವುದಕ್ಕೆ ಒಂದು ಸಣ್ಣ ಉದಾಹರಣೆ. ತೆಗೆದು, ನಂತರ ಸೇರಿಸಿದ ಭಗತ್ ಸಿಂಗ್ ಪಾಠದಲ್ಲಿ 5 ನೆಯ ಪ್ರಶ್ನೆ ಭಗತ್ ಸಿಂಗ್ ಸಹಚರರು ಯಾರು? ಈಗ ಸೇರಿಸಿರುವ ಚಕ್ರವರ್ತಿ ಸೂಲಿಬೆಲೆ ಅವರ ‘ತಾಯಿ ಭಾರತಿಯ ಸುಪುತ್ರರು’
ಪಾಠದ 5 ನೆಯ ಪ್ರಶ್ನೆ ಭಗತ್ ಸಿಂಗ್ ಸಹಚರರು ಯಾರು? ಈಗ ನಿಮ್ಮ ಬಂಡವಾಳ ತಿಳಿಯಿತೇ?

ಅಚ್ಚರಿಯಾಗುತ್ತದೆ. ಶುಕನಾಸನ ಉಪದೇಶ ಕೇಳುವ ರಾಜ ಬ್ರಾಹ್ಮಣನಲ್ಲ; ಆದರೆ ಅದನ್ನು ಬರೆದ ಲೇಖಕ ಬ್ರಾಹ್ಮಣ ಎಂಬುದೇ ಇವರಿಗೆ ಸಮಸ್ಯೆ! ಆದರ್ಶರಾಜ್ಯ ಹೇಗಿರಬೇಕೆಂದು ಬೋಧಿಸಿದ ಶ್ರೀರಾಮನೂ ಬ್ರಾಹ್ಮಣನಲ್ಲ; ಕೇಳಿದ ಭರತನೂ ಬ್ರಾಹ್ಮಣನಲ್ಲ; ಆದರೆ ಆ ಕುರಿತು ಬರೆದ ಲೇಖಕರು ಬ್ರಾಹ್ಮಣ ಎಂಬುದು ಇವರಿಗೆ ಸಮಸ್ಯೆ! ರಾಣಿ ಚೆನ್ನಭೈರಾದೇವಿ ಬ್ರಾಹ್ಮಣರಲ್ಲ, ಆದರೆ ಸಮಸ್ಯೆ ಏನು ಗೊತ್ತಾ, ಆಕೆಯ ಬಗ್ಗೆ ಬರೆದ ವ್ಯಕ್ತಿ ಬ್ರಾಹ್ಮಣ! ಭಾರತೀಯತೆಶಯ ಬಗ್ಗೆ ಇರುವ ಕವಿತೆಯಲ್ಲಿ ಇವರಿಗೆ ಕೈಗೆಕಾಣಿಸದ ಬ್ರಾಹ್ಮಣ್ಯ ಆ ಕವಿತೆಯನ್ನು ಬರೆದ ಕವಿಯಲ್ಲಿ ಕಾಣುತ್ತದೆ! ಈ ರೋಗಕ್ಕೆ ಏನಾದರೂ ಮದ್ದಿದೆಯೆ?? ನೀವು ಸೇರಿಸಿದ ‘ಶುಕನಾಸನ ಕಥೆ’ ಬಗ್ಗೆ ನಮ್ಮ ವಿರೋಧವಿಲ್ಲ. ಅದು ಅನುವಾದಿತ ಲೇಖನ, ನೀವು ಕೈಬಿಟ್ಟದ್ದು, ಅಲ್ಪ ಸಂಖ್ಯಾತ ಮಹಿಳೆ ರಚಿಸಿದ ‘ಯುದ್ಧ’ ಸಣ್ಣ ಕಥೆಯನ್ನು, ನೀವು ಒಂದು ಸಣ್ಣ ಕಥೆ ಸೇರಿಸಬೇಕಾಗಿತ್ತು. ಪಠ್ಯ ವಸ್ತು ವಿನ್ಯಾಸ ಬದಲಿಸಿದಂತೆ ಆಗುವುದಿಲ್ಲವೇ? 1೦ ನೆಯ ತರಗತಿಯಲ್ಲಿರುವ ಆದಿ ಮಹಾ ಕವಿ ಪಂಪನು ರಚಿಸಿದ ‘ಕೆಮ್ಮನೆ ಮೀಸೆವೊತ್ತನೇ’ ಪದ್ಯದಲ್ಲಿರುವ ಆಶಯವೇ ನೀವು ಸೇರಿಸಿದ ‘ಶುಕನಾಸನ ಉಪದೇಶ’ ಪಾಠ ಆಶಯ ಎರಡೂ ಒಂದೇ ಅಲ್ಲವೇ? ಒಂದೇ ಆಶಯವಿರುವ ಎರಡು ಪಾಠಗಳನ್ನು ಒಂದೇ ತರಗತಿಯ ವಿದ್ಯಾರ್ಥಿಗಳು ಓದುವುದು ಎಷ್ಟು ಸಮಂಜಸ? ನೀವು ಎ. ಎನ್. ಮೂರ್ತಿ ರಾವ್ ಅವರ ಲಲಿತ ಪ್ರಬಂಧ ತೆಗೆದು ‘ನಮ್ಮ ಆದರ್ಶ ಪುರುಷ ಯಾರಾಗಬೇಕು?’ ಎನ್ನುವ ಬಿಡಿ ಲೇಖನವನ್ನು ಸೇರಿಸಿದ್ದೀರಿ. ಲಲಿತ ಪ್ರಬಂಧ ಸಾಹಿತ್ಯ ಪ್ರಕಾರಕ್ಕೆ ಇದ್ದ ಅವಕಾಶವನ್ನು ಕಿತ್ತು, ಬಿಡಿ ಬರೆಹಕ್ಕೆ ನೀಡಿದ್ದೀರಿ. ಅದೇ ರೀತಿ ಪಠ್ಯ ವಸ್ತುವಿನ ಪ್ರಕಾರ ಹಳಗನ್ನಡ ಗದ್ಯಕ್ಕೆ ಪ್ರಾಶಸ್ತ್ಯವನ್ನು ನೀಡಿ, ‘ಸುಕುಮಾರ ಸ್ವಾಮಿ ಕಥೆ’ ಸೇರಿಸಲಾಗಿತ್ತು. ಆದರೆ ನೀವು ಹಳಗನ್ನಡ ಗದ್ಯಕ್ಕೆ ನೀಡಿದ ಪ್ರಾಶಸ್ತ್ಯವನ್ನು ಕಿತ್ತು, ಶ್ರೀ ಆರ್. ಗಣೇಶ ಅವರ ‘ಶ್ರೇಷ್ಠ ಭಾರತೀಯ ಚಿಂತನೆಗಳು’ ಬಿಡಿ ಲೇಖನವನ್ನು ಸೇರಿಸಿದ್ದೀರಿ. ವಿದ್ಯಾರ್ಥಿಗಳು ಹಳಗನ್ನಡ ಗದ್ಯ ಕಾವ್ಯ ಭಾಷಾ ಸೌಂದರ್ಯ ತಿಳಿಯದಂತೆ ಮಾಡಿದ್ದೀರಿ.

ಒಂದೇ ತರಗತಿಯಲ್ಲಿ ನಾಲ್ಕು ಬಿಡಿ ಲೇಖನಗಳು ಬೇಕೇ? ಪಠ್ಯ ವಸ್ತುವಿನ ಪ್ರಕಾರ ಬೇರೆ ಬೇರೆ ಸಾಹಿತ್ಯ ಪ್ರಕಾರಗಳಿಗೆ ಆದ್ಯತೆ ನೀಡಬೇಕು ಅಲ್ಲವೇ? ನಿಮಗೆ ಪಠ್ಯ ಕ್ರಮ, ಪಠ್ಯ ವಸ್ತು ಮತ್ತು ಪಠ್ಯ ಪುಸ್ತಕ ರಚನಾ ವಿಧಾನವೇ ತಿಳಿದಿಲ್ಲ ಎಂಬುದಕ್ಕೆ ಸಾಕ್ಷಿ. ಟ್ಯೂಶನ್ ಸೆಂಟರ್ ನಲ್ಲಿ ಪಾಠ ಮಾಡುವವರು ಪಠ್ಯ ಪರಿಷ್ಕರಣೆ ಮಾಡಿದರೆ ಹೀಗೆ ಆಗುವುದು. ಒಂಬತ್ತನೆಯ ತರಗತಿಯಲ್ಲಿ ಸಂಸ್ಕೃತ ಭಾಷೆಯ ಶ್ರೇಷ್ಠ ನಾಟಕಕಾರ ಭಾಸನ ‘ಊರುಭಂಗ’ ಅನುವಾದಿತ ನಾಟಕವನ್ನು ತೆಗೆದು ಹಾಕಿ, ಚೆನ್ನಭೈರಾದೇವಿ ನಾಟಕವನ್ನು ಹಾಕಿದ್ದೀರಿ ಪಠ್ಯ ಪುಸ್ತಕ ಸುರುಳಿ ಆಕಾರದಲ್ಲಿ ರಚನೆಯಾಗಿದೆ. 8 ನೆಯ ತರಗತಿಯಲ್ಲಿ ಸೃಜನಶೀಲ ನಾಟಕವನ್ನು, ೯ ನೆಯ ತರಗತಿಯಲ್ಲಿ ಅನುವಾದಿತ ನಾಟಕವನ್ನು, 1೦ ನೆಯ ತರಗತಿಯಲ್ಲಿ ಗೀತನಾಟಕವನ್ನು ಹಾಕಬೇಕು ಎಂಬುದು ನಿಯಮ. ವಿದ್ಯಾರ್ಥಿಗಳಿಗೆ ವಿವಿಧ ಸಾಹಿತ್ಯ ಪ್ರಕಾರಗಳ ಪರಿಚಯ ಮಾಡುವುದು ಉದ್ದೇಶ. ನಿಮ್ಮ ಹಿಂದಿನ ಸರ್ಕಾರ ರಚಿಸಿದ ಸಮಿತಿ ಭಾಸನ ‘ ಮಧ್ಯಮ ವ್ಯಾಯೋಗ’ ಅನುವಾದಿತ ನಾಟಕವನ್ನು ಹಾಕಿತು. ಅದನ್ನು ತೆಗೆಯುವಂತೆ ಶಿಕ್ಷಕರು ಸಲಹೆ ನೀಡಿದ್ದರು. ಅದನ್ನು ತೆಗೆದು, ಭಾಸನ ಇನ್ನೊಂದು ನಾಟಕವನ್ನು ಸೇರಿಸುವುದು ಸರಿ ಅಲ್ಲವೇ? ಸಾಕ ಇನ್ನೂ ಬೇಕಾ ಪ್ರಶ್ನೆ ಮಾಡಿ ಉತ್ತರ ನೀಡಲು ನಮ್ಮ ಸಮಿತಿ ಸದಾಸಿದ್ಧ. ದಯವಿಟ್ಟು ನಮ್ಮ ನೈತಿಕತೆಯನ್ನು ಪ್ರಶ್ನೆ ಮಾಡಬೇಡಿ. ಮನಸ್ಸಿಗೆ ಬಹಳ ನೋವನ್ನುಂಟು ಮಾಡುತ್ತದೆ.

ಇಂತಿ ನಿಮ್ಮ ಪ್ರೀತಿಯ
ರವೀಶ್ ಕುಮಾರ್ ಬಿ.
ನಿವೃತ್ತ ಕನ್ನಡ ಭಾಷಾ ಶಿಕ್ಷಕ.
ನೀವೇ ಹೇಳುವ ಬರಗೂರು ಗ್ಯಾಂಗಿನ ಒಬ್ಬ ಸದಸ್ಯ.

Donate Janashakthi Media

One thought on “ನಮ್ಮ ನೈತಿಕತೆ ಪ್ರಶ್ನಿಸಬೇಡಿ : ಚರ್ಚೆಗೆ ಬನ್ನಿ ಉತ್ತರಿಸಲು ನಾವು ಸಿದ್ದರಿದ್ದೇವೆ – ರವೀಶ್ ಕುಮಾರ್ ಬಿ

  1. ರಾಜ್ಯದ ಶಿಕ್ಷಣ ಮಂತ್ರಿಯೇ ಹೇಳಿರುವಂತ ಒಬ್ಬ ಯಕಷ್ಚಿತ್ ಸಿ ಇ. ಟಿ ಟ್ಯೂಟರ್ಗೆ ಶಾಲಾ ಶಿಕ್ಷಣದ ಅವಶ್ಯಕ ಜ್ಞಾನಶಿಸ್ತು ಮತ್ತು ಶಿಕ್ಷಣ ಸಂಸ್ಕಾರದ ತಿಳುವಳಿಕೆಯಾದರೂ ಇರಲು ಹೇಗೆ ಸಾಧ್ಯ? ಆದರೆ ವೈಚಾರಿಕ ನಪುಂಸಕತೆ ( ಮಹಾಶಯರೊಬ್ಬರು ಹೇಳಿದ್ದಾರಲ್ಲ?) ಇವರಿಗೆ ಮತ್ತು ಈ ಅದ್ವಾನಗಳನ್ನು ಮಾಡಲು ಇವರಿಗೆ ಮಾರ್ಗದರ್ಶನ ಮಾಡಿದ ಶ್ರೇಷ್ಟಸಂತತಿಯವರಿಗೆ ಧಾರಾಳವಾಗಿ ಇರುವುದು ನಿಮ್ಮ ಸಮಜಾಯಿಷಿ ಯನ್ನು ಓದಿದ ಯಾರಿಗೂ ಅರ್ಥವಾಗುತ್ತದೆ. ಶಿಕ್ಷಣವೆನ್ನುವುದು ಯಜ್ಞದಲ್ಲಿ ಹೇಳುವ ಸುಳ್ಳು ಶ್ಲೋಕಗಳಾಗಲಿ ವಂದಿ ಮಾರ್ಗದವರ ಭೋಪರಾಕ್ ಗಳಾಗಲಿ ಅಲ್ಲವಲ್ಲ!

Leave a Reply

Your email address will not be published. Required fields are marked *