ಉಚಿತ ಪಡಿತರ ಪಡೆಯುವ 80 ಕೋಟಿ ಬಡವರಿರುವ ಮೋದಿ ಆಡಳಿತದಲ್ಲಿ ‘ಅಮೃತ ಕಾಲ’ ಯಾರಿಗೆ!!

-ಸಿ. ಸಿದ್ದಯ್ಯ
ಒಂದಡೆ ಪ್ರಧಾನಿ ನರೇಂದ್ರ ಮೋದಿಯವರು ‘ಅಮೃತ್ ಕಾಲ್’ ಬಗ್ಗೆ ಮಾತನಾಡುತ್ತಾರೆ.  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ವೇಳೆ ‘ಅಮೃತ್ ಕಾಲ್’ ಅನ್ನು ಹಲವು ಬಾರಿ ಉಲ್ಲೇಖಿಸುತ್ತಾರೆ. “ನಾವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಗುರುತಿಸುತ್ತಿದ್ದೇವೆ ಮತ್ತು ಮುಂದಿನ 25 ವರ್ಷಗಳ ಕಾಲ ಭಾರತವನ್ನು100ರ ಕಡೆಗೆ ಮುನ್ನಡೆಯುತ್ತಿರುವ ‘ಅಮೃತ್ ಕಾಲ್’ಗೆ ಪ್ರವೇಶಿಸಿದ್ದೇವೆ” ಎನ್ನುತ್ತಾರೆ. ಮತ್ತೊಂದಡೆ, “ಬಡತನ ರೇಖೆಗಿಂತ ಕೆಳಗಿನ 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಿಸುತ್ತಿದ್ದೇವೆ. ಮತ್ತೆ ಐದು ವರ್ಷಗಳ ಕಾಲ 81.35 ಕೋಟಿ ಜನರಿಗೆ ಉಚಿತ ಪಡಿತರ ವಿತರಿಸುವ ಕಾರ್ಯ ಮುಂದುವರಿಸುತ್ತೇವೆ” ಎನ್ನುತ್ತಾ, ತಮ್ಮದು ಬಡಜನರ ಪರವಾದ ಸರ್ಕಾರ, ನಾವು ಯಾರನ್ನೂ ಹಸಿವಿನಿಂದ ನರಳಲು ಬಿಡುವುದಿಲ್ಲ ಎನ್ನುತ್ತಾರೆ. 

2024ರ ಚುನಾವಣೆಗೆ ಇನ್ನು ಕೆಲವು ತಿಂಗಳು ಬಾಕಿ ಇರುವಾಗಲೇ, ಮಾಧ್ಯಮಗಳಲ್ಲಿ ದೊಡ್ಡ ದೊಡ್ಡ ಚುನಾವಣಾ ಜಾಹಿರಾತುಗಳನ್ನು ಬಿಜೆಪಿ (ಸಾರ್ವಜನಿಕರ ತೆರಿಗೆ ಹಣದಿಂದ) ನೀಡತೊಡಗಿದೆ. ಇಂತಹ ಜಾಹಿರಾತುಗಳಲ್ಲಿ “ಬಿಜೆಪಿ ಆಡಳಿತದಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) ಅಡಿಯಲ್ಲಿ ದೇಶದ 80 ಕೋಟಿಗೂ ಹೆಚ್ಚು ಬಡವರು ಮತ್ತು ದುರ್ಬಲರಿಗೆ ಆಹಾರ ಧಾನ್ಯಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ” ಎಂಬುದೂ ಒಂದು.

ಜಾಹಿರಾತುಗಳಲ್ಲದೆ, ಹಲವು ಸಭೆ, ಸಮಾರಂಭಗಳಲ್ಲಿಯೂ ಬಿಜೆಪಿ ನಾಯಕರು ಮತ್ತು ಸರ್ಕಾರ ಇದನ್ನೇ ಮತ್ತೆ ಮತ್ತೆ ಡಂಗುರ ಬಾರಿಸುತ್ತಿದ್ದಾರೆ. ಕೆಲವೊಮ್ಮೆ ಸಚಿವರುಗಳ ಮಾತುಗಳು ಹೇಗಿವೆಯೆಂದರೆ, ಪಡಿತರ ಧಾನ್ಯಗಳು ಬಿಜೆಪಿ ಬೊಕ್ಕಸದಿಂದ ಬಂದಿದೆಯೇ ಹೊರತು ತೆರಿಗೆದಾರರ ಹಣದಿಂದಲ್ಲ ಎಂಬ ಭಾವನೆಯನ್ನು ಬಿತ್ತುವಂತಿರುತ್ತದೆ. ಒಮ್ಮೆ, ಕ್ಯಾಬಿನೆಟ್ ಸಚಿವೆ ಸ್ಮೃತಿ ಇರಾನಿ “ನಾವು 80 ಕೋಟಿಗೆ ಉಚಿತ ಪಡಿತರವನ್ನು ನೀಡುತ್ತಿದ್ದೇವೆ, ನಾವು ಇನ್ನೇನು ಮಾಡಬಹುದು.” ಎನ್ನುತ್ತಾ ತುಂಬಾ ದುರಹಂಕಾರದಿಂದ ವ್ಯಂಗ್ಯವಾಡಿದ್ದನ್ನು ನೆನಪಿಸಿಕೊಳ್ಳಬಹುದು.

“5 ವರ್ಷಗಳಲ್ಲಿ 13.5 ಕೋಟಿ ಬಡವರು ಹೊಸ ಮಧ್ಯಮ ವರ್ಗವಾಗಿ…!!

ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರ್ಯ ಆಚರಣೆಯ ದಿನದಂದು ಕೆಂಪು ಕೋಟೆಯ ಮೇಲೆ ನಿಂತು ಭಾಷಣ ಮಾಡುತ್ತಾ, “ನಾವು ಮಾಡಿದ ಈ ಎಲ್ಲಾ ಪ್ರಯತ್ನಗಳ ಫಲವೆಂದರೆ ಇಂದು, ನನ್ನ ಐದು ವರ್ಷಗಳ ಅಧಿಕಾರವಧಿಯಲ್ಲಿ, ನನ್ನ 13.5 ಕೋಟಿ ಬಡ ಸಹೋದರರು ಮತ್ತು ಸಹೋದರಿಯರು ಬಡತನದ ಸರಪಳಿಗಳನ್ನು ಮುರಿದು ಹೊಸ ಮಧ್ಯಮ ವರ್ಗವಾಗಿ ಹೊರಹೊಮ್ಮಿದ್ದಾರೆ. ಜೀವನದಲ್ಲಿ ಇದಕ್ಕಿಂತ ದೊಡ್ಡ ಸಂತೃಪ್ತಿ ಬೇರೊಂದಿಲ್ಲ’ ಎಂದು ಹೇಳುತ್ತಾರೆ!!

2015-16 ಮತ್ತು 2019-21ರ ಅವಧಿಯಲ್ಲಿ ಭಾರತದ ರಾಷ್ಟ್ರೀಯ ಬಹುಆಯಾಮದ ಬಡತನ ಸೂಚ್ಯಂಕವು 24.86 ಪ್ರತಿಶತದಿಂದ 14.96 ಪ್ರತಿಶತಕ್ಕೆ ಇಳಿದಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಈ ಶೇ. 9.89 ಇಳಿಕೆ ಎಂದರೆ ಈ ಅವಧಿಯಲ್ಲಿ ಸುಮಾರು 13.5 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಯಾರಿವರು? ಬಡತನದ ಸರಪಳಿಗಳನ್ನು ಮುರಿದು ಮೇಲೆ ಬಂದವರು? ಯಾವ ಆಧಾರದ ಮೇಲೆ ಇಂತಹ ಹೇಳಿಕೆ ನೀಡುತ್ತಾರೆ?

4.5 ಕೋಟಿ ಪಡಿತರ ಚೀಟಿ ರದ್ದು ;

ಸರ್ಕಾರದ ಮಾಹಿತಿಯಂತೆ, ಮೋದಿ ಅಧಿಕಾರಕ್ಕೆ ಬಂದ ನಂತರದ 8 ವರ್ಷಗಳಲ್ಲಿ 4.5 ಕೋಟಿ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗಿದೆ. ಆ ಮೂಲಕ 8 ವರ್ಷಗಳಲ್ಲಿ 18 ಕೋಟಿ ಜನರನ್ನು ಪಡಿತರ ಸೌಲಭ್ಯದಿಂದ ಹೊರಹಾಕಲಾಗಿದೆ. ಇವುಗಳನ್ನು ಬೋಗಸ್ ಕಾರ್ಡುಗಳು, ಅನರ್ಹರು ಪಡೆದ ಕಾರ್ಡುಗಳು, ಒಂದಕ್ಕಿಂತ ಹೆಚ್ದು ಕಾರ್ಡ್ ಪಡೆದಿದ್ದವುಗಳು ಎಂದು ಸರ್ಕಾರ ಹೇಳುತ್ತದೆಯಾದರೂ, ಪಡಿತರ ಚೀಟಿ ಜೊತೆಗೆ ಆಧಾರ್ ಕಾರ್ಡ್ ಜೋಡಣೆ ಕಡ್ಡಾಯ ಮಾಡಿದ ನಂತರ,  ಕೋಟ್ಯಾಂತರ ಅರ್ಹ ಫಲಾನುಭವಿಗಳು ಪಡಿತರದಿಂದ ವಂಚಿತರಾಗಿದ್ದಾರೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಇದು ಏನೇ ಇರಲಿ, 18 ಕೋಟಿ ಜನರನ್ನು ಪಡಿತರದಿಂದ ಹೊರತಳ್ಳಿದ ನಂತರವೂ, 19.33 ಕೋಟಿ ಪಡಿತರ ಚೀಟಿಗಳೊಂದಿಗೆ 80 ಕೋಟಿ ಜನರು ಇನ್ನೂ ಪಡಿತರ ಪಡೆಯುತ್ತಿದ್ದಾರೆ. 9 ವರ್ಷಗಳ ಹಿಂದೆ ಎಷ್ಟು ಜನರು ಬಿಪಿಎಲ್ ಕಾರ್ಡ್ ಹೊಂದಿದ್ದರೋ ಅಷ್ಟೇ ಸಂಖ್ಯೆಯ ಜನರು ಇಂದಿಗೂ ಹೊಂದಿದ್ದಾರೆ. ಅಂದರೆ, 80 ಕೋಟಿ ಜನರು ಬಡತನದ ರೇಖೆಗಿಂತ ಕೆಳಗಿನ ಜೀವನ ಸಾಗಿಸುತ್ತಿದ್ದಾರೆ ಎಂದು ಸರ್ಕಾರವೇ ಒಪ್ಪಿಕೊಂಡಂತೆ ಆಗುತ್ತದೆ.

ಬಿಪಿಎಲ್ ಕಾರ್ಡ್ ಫಲಾನುಭವಿಗಳಾಗಿದ್ದ ಮತ್ತು 5 ವರ್ಷಗಳ ಹಿಂದೆ ಬಡತನದ ರೇಖೆಗಿಂತ ಕೆಳಗಿದ್ದವರು, ಬಡತನದ ಸರಪಳಿಗಳನ್ನು ಮುರಿದು ಹೊಸ ಮಧ್ಯಮ ವರ್ಗವಾಗಿ ಹೊರಹೊಮ್ಮಿದ ಕಾರಣಕ್ಕೆ ಬಿಪಿಎಲ್ ಕಾರ್ಡ್ ಗಳನ್ನು ಹಿಂಪಡೆಯಲಾಗಿದೆ  ಎಂಬ ಕಾರಣವನ್ನು ಸರ್ಕಾರ ನೀಡುತ್ತಿಲ್ಲ ಎಂಬುದನ್ನು ನಾವಿಲ್ಲಿ ಗಮನಿಸಬೇಕು.

ಉದ್ಯೋಗಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ ;

CMIE ಅಂದಾಜಿನ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಉದ್ಯೋಗಗಳ ಸಂಖ್ಯೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಕಾರ್ಮಿಕರ ತಲಾವಾರು ನೈಜ ಆದಾಯ ಹೆಚ್ಚಾಗಲಿಲ್ಲ. ಉದ್ಯೋಗಿಗಳಿಗೆ ಹೋಲಿಸಿದರೆ ನಿರುದ್ಯೋಗಿಗಳ ಅನುಪಾತ ಹೆಚ್ಚುತ್ತಿದೆ. ಕೆಲಸ ಮಾಡುವವರಲ್ಲಿ ಪೂರ್ಣಾವಧಿಯ ಉದ್ಯೋಗಿಗಳು, ತಿಂಗಳಿಗೆ ಕೆಲವೇ ಗಂಟೆಗಳು ಅಥವಾ ಕೆಲವು ದಿನಗಳು ಮಾತ್ರ ಕೆಲಸ ಹುಡುಕುವವರು, ತಮ್ಮ ಇರುವ ಕೆಲಸವನ್ನು ಕಳೆದುಕೊಳ್ಳುವವರು – ಇತ್ಯಾದಿ. ಪೂರ್ಣ ಸಮಯದ ಉದ್ಯೋಗದಲ್ಲಿರುವ ಜನರ ಸಂಖ್ಯೆ ತುಲನಾತ್ಮಕವಾಗಿ ಕಡಿಮೆ ಇರುವುದರಿಂದ ಸರಾಸರಿ ತಲಾವಾರು ಆದಾಯವು ಕುಸಿಯುತ್ತಿದೆ. ನಿಜ ಸ್ಥಿತಿ ಹೀಗಿದ್ದರೂ, ಬಹುಪಾಲು ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ಪ್ರಚಾರ ಮಾಡಲಾಗುತ್ತಿದೆ. ಜನರು ಸಂಚರಿಸುವ ರಸ್ತೆಗಳ ಸ್ಥಿತಿ ಸುಧಾರಿಸಿದೆ. ಬೀದಿ ದೀಪಗಳು ಪ್ರಕಾಶಮಾನವಾಗಿವೆ. ಆದರೆ ಅವರಿಗೆ ಮೂಲಭೂತವಾಗಿ ಅತ್ಯಗತ್ಯವಾಗಿರುವ ಆಹಾರ ಧಾನ್ಯಗಳ ಲಭ್ಯತೆ ಕಡಿಮೆಯಾಗುತ್ತಿದೆ. ಇದು ಬಡತನವನ್ನು ಹೆಚ್ಚಿಸುತ್ತದೆ.

ಬಡತನವನ್ನು ಅಳೆಯುವ ಮಾನದಂಡ ;

ನಮ್ಮ ದೇಶದಲ್ಲಿ ಬಡತನದ ಅಧ್ಯಯನವು 1973-74 ರಿಂದ ಪ್ರಾರಂಭವಾಯಿತು. ಯೋಜನಾ ಆಯೋಗವು, ಸಂಪೂರ್ಣ ಬಡತನವಿದೆ ಎಂದು ಖಚಿತಪಡಿಸಿಕೊಳ್ಳಲು ಜನರಿಗೆ ಎಷ್ಟು ಪೌಷ್ಟಿಕ ಆಹಾರ ಸಿಗುತ್ತಿದೆ ಎಂಬ ಅಳತೆಯನ್ನು ತೆಗೆದುಕೊಂಡಿದೆ. ದಿನವೊಂದಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ತಲಾ 2,200 ಕ್ಯಾಲೋರಿಗಳು ಮತ್ತು ಪಟ್ಟಣ ಪ್ರದೇಶಗಳಲ್ಲಿ 2,100 ಕ್ಯಾಲೋರಿಗಳನ್ನು ಅಳತೆಯಾಗಿ ತೆಗೆದುಕೊಳ್ಳಲಾಗಿದೆ. ಈ ಪ್ರಮಾಣದ ಕ್ಯಾಲೋರಿಗಳುಳ್ಳ ಆಹಾರ ಗಳಿಸಲಾಗದ ಕುಟುಂಬಗಳನ್ನು ಬಡತನ ರೇಖೆಗಿಂತ ಕೆಳಗಿನವರು ಎಂದು ಗುರುತಿಸಲಾಗುತ್ತದೆ. ಆ ನಂತರ  ಸರ್ಕಾರಗಳು ಮತ್ತು ವಿಶ್ವಬ್ಯಾಂಕ್‌ ನಂತಹ ಸಂಸ್ಥೆಗಳು ಈ ಮಾನದಂಡಕ್ಕೆ ಎಳ್ಳುನೀರು ಬಿಡುವ ಅನೇಕ ಷಡ್ಯಂತ್ರಗಳನ್ನು ಮಾಡುತ್ತಿವೆ. ಹಾಗಾಗಿ ದೇಶದಲ್ಲಿ ಬಡತನ ಕಡಿಮೆಯಾಗಿದೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ.

2011-12 ಕ್ಕೆ ಹೋಲಿಸಿದರೆ, 2017-18 ರ ಹೊತ್ತಿಗೆ, ಜನರ ವಿನಿಮಯ ಶಕ್ತಿಯು ಇನ್ನೂ ಶೇ. 9ರಷ್ಟು ಕಡಿಮೆಯಾಗಿದೆ. ಪರಿಣಾಮವಾಗಿ, ಕನಿಷ್ಠ ಮಟ್ಟದ ಆಹಾರ ಧಾನ್ಯಗಳನ್ನು ಪಡೆಯಲಾಗದವರು ಗ್ರಾಮೀಣ ಪ್ರದೇಶಗಳಲ್ಲಿ ಶೇಕಡಾ 80 ಕ್ಕೆ ಏರಿದ್ದಾರೆ. ಮೋದಿ ಸರ್ಕಾರವು ಈ ಅಂಕಿಅಂಶಗಳನ್ನು ಸಂಪೂರ್ಣವಾಗಿ ಬಿಡುಗಡೆ ಮಾಡದೆ ಮುಚ್ಚಿಟ್ಟಿತು. ತಾತ್ತ್ವಿಕವಾಗಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) 4 ಮತ್ತು 5 ರ ಸಮೀಕ್ಷೆಗಳನ್ನು ರಾಷ್ಟ್ರೀಯ ಮಾದರಿ ಸಮೀಕ್ಷೆಯ 75 ನೇ ಸುತ್ತಿಗೆ ಗೃಹ ಬಳಕೆ ವೆಚ್ಚವನ್ನು ಲಿಂಕ್ ಮಾಡಬೇಕು. ಆ ಸುತ್ತಿನಲ್ಲಿ ಬಡತನದ ನೈಜ ಪರಿಸ್ಥಿತಿ ಬಯಲಾಗುತ್ತಿದ್ದಂತೆ ಮೋದಿ ಸರಕಾರ ಈ ವಿಧಾನವನ್ನೇ ಕೈಬಿಟ್ಟಿತು.

ಹೀಗಾಗಿ, ವಿಶ್ವ ಹಸಿವಿನ ಸೂಚ್ಯಂಕದಲ್ಲಿ ನಮ್ಮ ದೇಶವು 125 ದೇಶಗಳಲ್ಲಿ 111 ನೇ ಸ್ಥಾನದಲ್ಲಿದ್ದರೆ ಆಶ್ಚರ್ಯವೇನಿಲ್ಲ. ಆ ಸೂಚ್ಯಂಕದಲ್ಲಿ, ನಾವು ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ನೇಪಾಳದಂತಹ ನೆರೆಯ ದೇಶಗಳಿಗಿಂತ ಹಿಂದುಳಿದಿದ್ದೇವೆ.

ಜನಸಂಖ್ಯೆ ಹೆಚ್ಚಿದೆ. ಆದರೆ…

ಇನ್ನೊಂದು ಆಯಾಮದಲ್ಲಿ ನೋಡುವುದಾದರೆ, ಕಳೆದ 10 ವರ್ಷಗಳಲ್ಲಿ ಜನಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಆದರೂ ಪಡಿತರ ಪಡೆಯುವವರ ಸಂಖ್ಯೆ ಹೆಚ್ಚಾಗಲಿಲ್ಲ ಎಂಬುದನ್ನು ಗಮನಿಸಬೇಕು. ಇದರಲ್ಲಿ 80 ಕೋಟಿ ಜನರು ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಕುಟುಂಬಗಳಿಗೆ ಸೇರಿದವರಾಗಿದ್ದರು. ಅಥವಾ ಇಷ್ಟು ಪ್ರಮಾಣದ ಜನರು ಬಿಪಿಎಲ್ ಕಾರ್ಡ್ ಪಡೆದಿದ್ದರು. ಇಂದಿಗೂ ಅಷ್ಟೇ ಪ್ರಮಾಣದ ಫಲಾನುಭವಿಗಳಿದ್ದಾರೆ. 2011 ರ ನಂತರ ಜನಗಣತಿ ನಡೆದಿಲ್ಲ. 2021 ರಲ್ಲಿ ಗಣತಿ ನಡೆದಿದ್ದರೆ, NFSA ಅಡಿಯಲ್ಲಿ ಸಹಾಯಕ್ಕೆ ಅರ್ಹರಾಗಿರುವ ಬಡವರ ಪ್ರಮಾಣವನ್ನು ನಿರ್ಣಯಿಸಲು ಸಾಧ್ಯವಾಗುತ್ತಿತ್ತು.

ಅನರ್ಹರೂ ಬಿಪಿಎಲ್ ಕಾರ್ಡ್ …

“ಇಷ್ಟೊಂದು ಪ್ರಮಾಣದಲ್ಲಿ ಬಡವರಿಲ್ಲ, ಅನರ್ಹರೂ ಬಿಪಿಎಲ್ ಕಾರ್ಡ್ ಪಡೆದಿದ್ದಾರೆ” ಎಂಬುದು ಬಿಜೆಪಿಯ ಕೆಲವು ಸಮರ್ಥಕರ ವಾದ. ಇದು ಸ್ವಲ್ಪ ಮಟ್ಟಿಗೆ ನಿಜವಾದರೂ, ಇಂತಹ ಪಡಿತರ ಪಡೆಯಲು ಅನರ್ಹರಾದ ಕುಟುಂಬಗಳ ಬಿಪಿಎಲ್ ಕಾರ್ಡ್ ಗಳನ್ನು ರದ್ದುಮಾಡಲಾಗದಷ್ಟು ಮೋದಿ ಆಡಳಿತ ನಿಷ್ಕ್ರಿಯವಾಗಿದೆ ಎಂಬುದನ್ನು ಇವರು ಒಪ್ಪಿಕೊಳ್ಳಬೇಕಾಗುತ್ತದೆ. ಎಡಪಕ್ಷಗಳ ಬಹಳ ವರ್ಷಗಳಿಂದ ಹೋರಾಟ ನಡೆಸುತ್ತಾ ಕೇಳುತ್ತಾ ಬಂದಿರುವ  ಬೇಡಿಕೆ ಏನೆಂದರೆ, ಸಾರ್ವತ್ರಿಕ ಪಡಿತರ ವ್ಯವಸ್ಥೆ ಜಾರಿಗೆ ಬರಬೇಕು. ಅಂತ್ಯೋದಯ, ಬಿಪಿಎಲ್, ಎಪಿಎಲ್ ಎಂಬ ತಾರತಮ್ಯ ಇಲ್ಲದೆ, ಮೂಲಭೂತ ಅಗತ್ಯ ವಸ್ತುಗಳನ್ನು ಬಯಸಿ ಬರುವ ಯಾವುದೇ ಕುಟಂಬಕ್ಕೂ ಪಿಡಿಎಸ್ ಮೂಲಕ ವಿತರಣೆ ಆಗಬೇಕು ಎಂಬುದು. ಇದರಿಂದ ಅರ್ಹ ಫಲಾನುಭವಿಗಳು ಪಡಿತರದಿಂದ ವಂಚಿತರಾಗುವುದನ್ನು ತಡೆಯುವುದರ ಜೊತೆಗೆ, ಆಹಾರ ಪದಾರ್ಥಗಳ ಬೆಲೆ ನಿಯತ್ರಣದಲ್ಲಿ ಇರುತ್ತದೆ ಎಂದು ಎಡಪಕ್ಷಗಳು ಹೋರಾಟ ನಡೆಸಿವೆ.

ಬಹು ಆಯಾಮದ ಬಡತನ ಸೂಚ್ಯಂಕವನ್ನು ಆಧರಿಸಿ ಬಡತನವನ್ನು ಸೋಲಿಸಿದ್ದೇವೆ ಎಂದು ಬಿಜೆಪಿ ಸರ್ಕಾರ ಹೇಳಿಕೊಳ್ಳುವುದು ಶುದ್ಧ ಉತ್ಪ್ರೇಕ್ಷೆಯಾಗಿದೆ. ಅದೇ ಸಮಯದಲ್ಲಿ ಅದು ಬಡತನವನ್ನು ಕಡಿಮೆ ಮಾಡಲು ಯಾವುದೇ ನಿರ್ಧಿಷ್ಟ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂಬ ಅಂಶವನ್ನು ಮರೆಮಾಡಲು ಪ್ರಯತ್ನಿಸುತ್ತದೆ.

ಸರ್ಕಾರದ ಮಾಹಿತಿಯಂತೆ, ಮೋದಿ ಅಧಿಕಾರಕ್ಕೆ ಬಂದ ನಂತರದ 8 ವರ್ಷಗಳಲ್ಲಿ 4.5 ಕೋಟಿ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗಿದೆ. ಆ ಮೂಲಕ 18 ಕೋಟಿ ಜನರನ್ನು ಪಡಿತರ ಸೌಲಭ್ಯದಿಂದ ಹೊರಹಾಕಲಾಗಿದೆ. ಇವರುಗಳನ್ನು ಬೋಗಸ್ ಕಾರ್ಡುಗಳು, ಅನರ್ಹರು ಪಡೆದ ಕಾರ್ಡುಗಳು, ಒಂದಕ್ಕಿಂತ ಹೆಚ್ದು ಕಾರ್ಡ್ ಪಡೆದಿದ್ದವುಗಳು ಎಂದು ಸರ್ಕಾರ ಹೇಳುತ್ತದೆಯಾದರೂ, ಪಡಿತರ ಚೀಟಿ ಜೊತೆಗೆ ಆಧಾರ್ ಕಾರ್ಡ್ ಜೋಡಣೆ ಕಡ್ಡಾಯ ಮಾಡಿದ ನಂತರ,  ಕೋಟ್ಯಾಂತರ ಅರ್ಹ ಫಲಾನುಭವಿಗಳು ಪಡಿತರದಿಂದ ವಂಚಿತರಾಗಿದ್ದಾರೆ ಎಂಬ ಆರೋಪಗಳೂ ಕೇಳಿಬರುತ್ತಿವೆ. 2011 ರ ನಂತರ ಜನಗಣತಿ ನಡೆದಿಲ್ಲ. 2021 ರಲ್ಲಿ ಗಣತಿ ನಡೆದಿದ್ದರೆ, NFSA ಅಡಿಯಲ್ಲಿ ಸಹಾಯಕ್ಕೆ ಅರ್ಹರಾಗಿರುವ ಬಡವರ ಪ್ರಮಾಣವನ್ನು ನಿರ್ಣಯಿಸಲು ಸಾಧ್ಯವಾಗುತ್ತಿತ್ತು.

ಆಹಾರ ಧಾನ್ಯಗಳ ಬದಲಾಗಿ ನೇರ ನಗದು 

ಬಿಜೆಪಿ ಆಡಳಿತದಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ದೇಶದ 80 ಕೋಟಿಗೂ ಹೆಚ್ಚು ಬಡವರು ಮತ್ತು ದುರ್ಬಲರಿಗೆ ಆಹಾರ ಧಾನ್ಯಗಳನ್ನು ಉಚಿತವಾಗಿ ಒದಗಿಸುವ ಮೂಲಕ ಅವರ ಹಸಿವನ್ನು ನೀಗಿಸುತ್ತಿದೆ ಎಂದು ಮೋದಿ ಸರ್ಕಾರ ಒಂದಡೆ ಹೇಳುತ್ತಿದೆ. ಮತ್ತೊಂದಡೆ ಇದೇ ಸರ್ಕಾರ ಸದ್ದಿಲ್ಲದೆ, ಪಡಿತರ ಆಹಾರ ಧಾನ್ಯಗಳ ಬದಲು ನೇರ ನಗದು ಯೋಜನೆ (ಡಿಬಿಟಿ) ಜಾರಿಗೆ ತರುವ ನಿಟ್ಟಿನಲ್ಲಿ ದೇಶದ ಕೆಲವು ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಡಿಬಿಟಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಜನ್-ಧನ್ ಬ್ಯಾಂಕ್ ಖಾತೆಗಳು, ಆಧಾರ್ ಮತ್ತು ಮೊಬೈಲ್ ಏಕೀಕರಣದ ಅದರ JAM ಟ್ರಿನಿಟಿಯನ್ನು ಹತೋಟಿಗೆ ತರಲು, ಸರ್ಕಾರವು ಹಲವಾರು ಡಿಜಿಟಲ್-ಆಧಾರಿತ ಉಪಕ್ರಮಗಳನ್ನು ಘೋಷಿಸಿತು, ವಿಶೇಷವಾಗಿ 2015 ರ ಸುಮಾರಿಗೆ. JAM ಅನ್ನು ಅಸ್ತಿತ್ವದಲ್ಲಿರುವ ಕಲ್ಯಾಣ ಯೋಜನೆಗಳ ವಿತರಣೆ ಮತ್ತು ಗುರಿಯನ್ನು ಸುಧಾರಿಸಲು ಪ್ರಮುಖ ಆವಿಷ್ಕಾರವೆಂದು ಪರಿಗಣಿಸಲಾಗಿದೆ.

ಆಹಾರ ಸಬ್ಸಿಡಿ ಯೋಜನೆಯ ನಗದು ವರ್ಗಾವಣೆಯ ಯೋಜನೆಯನ್ನು 21.08.2015 ರಂದು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ, 2013 (NFSA) ಅಡಿಯಲ್ಲಿ ಅಧಿಸೂಚಿಸಲಾದ ಆಹಾರ ಸಬ್ಸಿಡಿ ನಿಯಮಗಳ ನಗದು ವರ್ಗಾವಣೆ, 2015 ರ ನಿಬಂಧನೆಗಳ ಪ್ರಕಾರ ಜಾರಿಗೊಳಿಸಲಾಗಿದೆ.

ಆಹಾರಧಾನ್ಯಗಳನ್ನು ಒದಗಿಸುವ ಬದಲು,  ಆಹಾರ ಸಬ್ಸಿಡಿಯನ್ನು ನೇರವಾಗಿ ಪಡಿತರ  ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮಾಡುವ ಯೋಜನೆಯನ್ನು ಈಗಾಗಲೇ ಮೂರು ಕೇಂದ್ರಾಡಳಿತ ಪ್ರದೇಶಗಳಾದ ಚಂಡೀಗಢ ಮತ್ತು ಪುದುಚೇರಿಯಲ್ಲಿ ಸೆಪ್ಟೆಂಬರ್, 2015 ರಿಂದ ಮತ್ತು ದಾದ್ರಾ ಮತ್ತು ನಗರ ಹವೇಲಿಯ ನಗರ ಪ್ರದೇಶಗಳಲ್ಲಿ ಮಾರ್ಚ್, 2016 ರಿಂದ ಪ್ರಾಯೋಗಿಕವಾಗಿ ಜಾರಿಗೆ ತಂದಿದೆ. “ಈ ಕೇಂದ್ರಾಡಳಿತ ಪ್ರದೇಶಗಳ ಫಲಾನುಭವಿಗಳು ನಗದು ವರ್ಗಾವಣೆಯನ್ನು ಸ್ವೀಕರಿಸುತ್ತಿದ್ದಾರೆ. ಆಹಾರ ಪಡಿತರ ಧಾನ್ಯಗಳ ಬದಲಿಗೆ ಅವರು ಮುಕ್ತ ಮಾರುಕಟ್ಟೆಯಿಂದ ತಮ್ಮ ಆಯ್ಕೆಯ ಆಹಾರ ಧಾನ್ಯಗಳನ್ನು ಖರೀದಿಸಲು ಬಳಸುತ್ತಾರೆ” ಎಂದು ಈ ನೇರ ನಗದು ಯೋಜನೆಯನ್ನು ಸರ್ಕಾರ ಸಮರ್ಥಿಸಿಕೊಳ್ಳುತ್ತದೆ.

ಜಾರ್ಕಂಡ್, ದೆಹಲಿ, ಪಂಜಾಬ್ ಮತ್ತು ಮಧ್ಯಪ್ರದೇಶದ ಕೆಲವು ಆಯ್ದ ಪ್ರದೇಶಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಎರಡನೇ ಹಂತಕ್ಕಾಗಿ ಹರಿಯಾಣ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ಕೇರಳವನ್ನು ಗುರುತಿಸಲಾಗಿದೆ.

ನೇರ ಲಾಭ ವರ್ಗಾವಣೆ (DBT) ಪ್ರಯೋಗವು ಫಲಾನುಭವಿಗಳಿಗೆ ತಮ್ಮ ಬಳಕೆಯ ಬುಟ್ಟಿಯನ್ನು ಆಯ್ಕೆ ಮಾಡಲು ಹೆಚ್ಚಿನ ಸ್ವಾಯತ್ತತೆಯನ್ನು ಒದಗಿಸುತ್ತದೆ, ಆಹಾರದ ವೈವಿಧ್ಯತೆಯನ್ನು ಹೆಚ್ಚಿಸುತ್ತದೆ, ಸೋರಿಕೆಯನ್ನು ಕಡಿಮೆ ಮಾಡುತ್ತದೆ, ಆರ್ಥಿಕ ಸೇರ್ಪಡೆಯನ್ನು ಉತ್ತೇಜಿಸುತ್ತದೆ ಎಂದು ಸರ್ಕಾರ ಹೇಳುತ್ತದೆ.

ಕರ್ನಾಟಕದಲ್ಲಿ ಡಿಬಿಟಿ ಜಾರಿ ;

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ಚುನಾವಣಾ ಭರವಸೆಯಲ್ಲಿ, ಬಿಪಿಎಲ್ ಕುಟುಂಬಗಳ ಸದಸ್ಯರಿಗೆ ಉಚಿತವಾಗಿ ತಲಾ ಐದು ಕೆಜಿ ಹೆಚ್ಚುವರಿಯಾಗಿ ಅಕ್ಕಿ ಕೊಡುವುದಾಗಿ ಹೇಳಿತ್ತು. ಐದು ಕೆಜಿ ಅಕ್ಕಿ ವಿತರಣೆಯ ಬದಲಿಗೆ ನಗದು ಕೊಡುತ್ತಿದೆ. ಈ ನಿರ್ಧಾರವು, ಕೇಂದ್ರ ಸರ್ಕಾರವು ತನ್ನ ನೇರ ನಗದು ವರ್ಗಾವಣೆ (ಡಿಬಿಟಿ) ಯೋಜನೆಯ ಜಾರಿಯ ಭಾಗವಾಗಿ ಕರ್ನಾಟಕವನ್ನು ಉದ್ದೇಶಪೂರ್ವಕವಾಗಿ ಈ ಯೋಜನೆಯ ಒಳಗೆ ತಳ್ಳಿದೆ.

ಮುಕ್ತ ಆರ್ಥಿಕ ನೀತಿಗಳ ಜಾರಿಯ ಭಗವಾಗಿ ಇವೆಲ್ಲವೂ ನಡೆಯುತ್ತಿದೆ ಎಂಬುದನ್ನು ಅರಿಯುವುದು ಒಳಿತು. ಇಂತಹ ಜನವಿರೋಧಿ ನವ ಉದಾರವಾದಿ ನೀತಿಗಳ ವಿರುದ್ದ ದೊಡ್ಡ ಪ್ರಮಾಣದ ದ್ವನಿ ಎತ್ತುವ ಮೂಲಕ ಇಂತಹ ಜನವಿರೋಧಿ ನೀತಿಗಳನ್ನು ತಡೆಯಬಹುದಾಗಿದೆ.

ಭಾರತ ಸರ್ಕಾರ ವಿಶ್ವ ವಾಣಿಜ್ಯ ಸಂಸ್ಥೆ(WTO) ಜೊತೆಗೆ ಮಾಡಿಕೊಂಡಿರುವ ‘ಸುಂಕಗಳು ಮತ್ತು ವ್ಯಾಪಾರಗಳ ಮೇಲಿನ ಸಾಮಾನ್ಯ ಒಪ್ಪಂದ’ (GATT)ದ ಷರತ್ತುಗಳ ಪ್ರಕಾರ, ಪಡಿತರ ವ್ಯವಸ್ಥೆಯೂ ಸೇರಿದಂತೆ, ಎಲ್ಲಾ ರೀತಿಯ ಸರಕು ಮತ್ತು ಸೇವೆಗಳನ್ನು ಮುಕ್ತ ಮಾರುಕಟ್ಟೆಗೆ ತೆರೆದಿಡಬೇಕು. ಈ ಷರತ್ತುಗಳ ಗುರಿಯನ್ನು ಪೂರೈಸುವ ಬರದಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಬಡವರಿಗೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ಆಹಾರ ಧಾನ್ಯಗಳನ್ನು ಒದಗಿಸುತ್ತಿರುವ ಪಡಿತರ ವ್ಯವಸ್ಥೆಯನ್ನು ತೆಗೆದುಹಾಕುವ ಪ್ರಯತ್ನದ ಭಾಗವಾಗಿ ಇವೆಲ್ಲವನ್ನೂ ಮಾಡುತ್ತಿದೆ.

Donate Janashakthi Media

Leave a Reply

Your email address will not be published. Required fields are marked *