ರಾಷ್ಟ್ರಪತಿ ಚುನಾವಣೆ: ಅಸ್ಮಿತತೆಯ ಹಿಂದಿದೆ ಮಹಾ ವಂಚನೆ

ಎಸ್.ವೈ. ಗುರುಶಾಂತ್

ಭಾರತದ 15ನೇ ರಾಷ್ಟ್ರಪತಿಯನ್ನು ಆರಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಇದೇ 2022 ಜುಲೈ 18ರಂದು ರಾಷ್ಟ್ರಪತಿ ಆಯ್ಕೆಗಾಗಿ ಚುನಾವಣೆಯು ನಡೆಯಲಿದೆ. ಸ್ಪರ್ಧಾ ಕಣದಲ್ಲಿ ಕೆಲವು ಹೆಸರುಗಳಿದ್ದರೂ ಪ್ರಮುಖವಾಗಿ ಆಡಳಿತರೂಢ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶ್ರೀಮತಿ ದ್ರೌಪದಿ ಮುರ್ಮು ಮತ್ತು ವಿರೋಧ ಪಕ್ಷಗಳ ಪ್ರಣಿತ ಅಭ್ಯರ್ಥಿ ಶ್ರೀ ಯಶ್ವಂತ್ ಸಿನ್ಹಾ ರವರ ನಡುವೆ ಹಣಾಹಣಿ ಇರುವುದು ನಿಚ್ಚಳ.

ಪ್ರಸಕ್ತವಾಗಿ ವಿವಿಧ ಪಕ್ಷಗಳ ಬಲಾಬಲಗಳ ಸಂಯೋಜನೆಯನ್ನು ಗಮನಿಸಿದಾಗ ಒಂದು ಹೆಜ್ಜೆ ಶ್ರೀಮತಿ ದ್ರೌಪದಿ ಮುರ್ಮು ಮುಂದಿರುವಂತೆ ಕಾಣುತ್ತದೆ. ಈ ಚುನಾವಣಾ ಘೋಷಣೆಯ ಪೂರ್ವದಲ್ಲಿ ಎನ್.ಡಿ.ಎ ಪಕ್ಷಗಳ ಕೂಟಕ್ಕೆ ಇದ್ದ ಮತದಾರರ ಬೆಂಬಲ ಮೌಲ್ಯ ಶೇ. 48.3 ಅಂದರೆ ಎನ್.ಡಿ.ಎ. ಯೇತರ ಎಲ್ಲ ಪಕ್ಷಗಳು ಒಗ್ಗೂಡಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರೆ ಎನ್.ಡಿ.ಎ. ಅಭ್ಯರ್ಥಿಯನ್ನು ಸೋಲಿಸಬಹುದಾಗಿತ್ತು. ಈ ಹಿನ್ನೆಲೆಯಲ್ಲಿ ಶ್ರೀಮತಿ ದ್ರೌಪದಿ ಮರ್ಮು ಅವರನ್ನು ಬಿಜೆಪಿ ಆಯ್ಕೆ ಮಾಡಿರುವುದು ಹಲವು ದಿಕ್ಕುಗಳ ಲೆಕ್ಕಾಚಾರದಿಂದ.

ಶ್ರೀಮತಿ ಮುರ್ಮು ಸಂತಾಲ ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆ ಎಂಬುದು ಒಂದು ವಿಶೇಷ ಅಂಶ. ಬ್ರಿಟಿಷ್ ವಸಾಹತುಶಾಹಿಯ ವಿರುದ್ಧ ಮಹಾ ದಂಗೆಯೆದ್ದ ತ್ಯಾಗ, ಬಲಿದಾನದ  ಪರಂಪರೆ ಈ ಸಮುದಾಯಕ್ಕೆ ಇದೆ. ಕಳೆದ ಬಾರಿ ಪರಿಶಿಷ್ಟ ಜಾತಿಗೆ ಸೇರಿದ ಶ್ರೀ ರಾಮನಾಥ್‌ ಕೋವಿಂದ ರವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದಾಗ ಇದ್ದ ಲೆಕ್ಕಚಾರ ಒಂದಾದರೆ ಈ ಬಾರಿ ಬುಡಕಟ್ಟು ಸಮುದಾಯದ ಮಹಿಳೆಯನ್ನು ಆಯ್ಕೆ ಮಾಡಿರುವುದು ವಿಶೇಷ. ಇವರು ಹಿಂದೆ ಬಿಜೆಪಿಯ ರಾಜಕಾರಣಿ, ರಾಜ್ಯಪಾಲೆ, ನಂತರ ಸಕ್ರಿಯ ರಾಜಕಾರಣದಿಂದ ಸ್ವಲ್ಪ ದೂರ ಇದ್ದವರು. ಒರಿಸ್ಸಾವನ್ನು ಒಳಗೊಂಡು ಸುತ್ತಲಿನ ವಿವಿಧ ರಾಜ್ಯಗಳ ಒಟ್ಟು ಪ್ರದೇಶದಲ್ಲಿ ಸುಮಾರು ಒಂದು ಕೋಟಿಗೂ ಅಧಿಕ ಸಂತಾಲ ಬುಡಕಟ್ಟು ಸಮುದಾಯವಿದೆ. ಅಲ್ಲದೆ ಜಾರ್ಖಂಡ್, ಒರಿಸ್ಸಾ, ಮಧ್ಯಪ್ರದೇಶ ಕಡೆಗಳಲ್ಲಿ ಇತರೆ ಬುಡಕಟ್ಟು ಸಮುದಾಯವು ಪ್ರಬಲವಾಗಿವೆ. ಹೀಗಾಗಿ ಬರುವ ಪಾರ್ಲಿಮೆಂಟಿನ ಚುನಾವಣೆಯಲ್ಲಿ ಬಿಜೆಪಿಗೆ ಇದರಿಂದ ಲಾಭವಾಗಲಿದೆ ಎನ್ನುವುದು ಬಿಜೆಪಿಯ ಕಾರ್ಯತಂತ್ರ. ಬುಡಕಟ್ಟು ಸಮುದಾಯಕ್ಕೆ ಸೇರಿದ ಒಬ್ಬ ಮಹಿಳೆಯನ್ನು ಅಭ್ಯರ್ಥಿಯನ್ನಾಗಿಸಿದಾಗ ಕೆಲವು ರಾಜಕೀಯ ಪಕ್ಷಗಳು ನಿರಾಕರಿಸಲಾಗದ ಒತ್ತಡಕ್ಕೆ ಒಳಗಾಗುತ್ತವೆ ಎಂಬುದು ಬಿಜೆಪಿ ಲೆಕ್ಕ. ಇದು ತಕ್ಷಣದಲ್ಲಿ ಫಲಿಸಿತು ಕೂಡ. ಮುರ್ಮು ಅವರು ಅಭ್ಯರ್ಥಿಯಾಗಿ ಘೋಷಿತವಾದ ಬಳಿಕ ಬಿಜು ಜನತಾ ದಳ- ಬಿಜೆಡಿ ಪಕ್ಷ ಬೆಂಬಲ ಘೋಷಿಸಿತು. ಅದರಂತೆ ವಿವಿಧ ರಾಜ್ಯಗಳಲ್ಲಿಯೂ ಕೂಡ ಇದೇ ಪ್ರತಿಕ್ರಿಯೆಗಳು ಕಂಡು ಬಂದು ಎನ್.ಡಿ.ಎ. ಅಭ್ಯರ್ಥಿಗೆ ಬೆಂಬಲ ಹೆಚ್ಚಾಯಿತು. ಹಾಗಾಗಿ ಬಿಜೆಪಿಯ ತಂತ್ರ ಈ ಮಟ್ಟದಲ್ಲಿ ಫಲಿಸಿದೆ ಕೂಡ. ಇದು ಮುಂಬರುವ ಲೋಕಸಭಾ ಚುನಾವಣೆಯ ಹೊಸ ಸಮೀಕರಣಕ್ಕೆ ಹಾದಿ ಮಾಡಿ ಕೊಡಬಲ್ಲದೇ ಎಂದು ಯೋಚಿಸಲಾಗುತ್ತಿದೆ.

ವಿಶೇಷವೆಂದರೆ, ಬಿಜೆಪಿಯು ತನ್ನ ಅಭ್ಯರ್ಥಿಯನ್ನು ಘೋಷಿಸಿದ ಬಳಿಕ ಕರ್ನಾಟಕದಲ್ಲಿನ ಜಾತ್ಯಾತೀತ ಜನತಾದಳ ಹೈಕಮಾಂಡ್ ಎಚ್.ಡಿ. ದೇವೇಗೌಡರು ಅಭ್ಯರ್ಥಿಯನ್ನು ತುಂಬು ಹೃದಯದಿಂದ ಹೊಗಳಿದರು. ಕೆಲವು ದಿನಗಳ ನಂತರದಲ್ಲಿ ಜೆಡಿಎಸ್ ಪಕ್ಷ ಬಿಜೆಪಿ ಅಭ್ಯರ್ಥಿಗೆ ಬೆಂಬಲವನ್ನು ಅಧಿಕೃತವಾಗಿ ಘೋಷಿಸಿ ಸಮರ್ಥನೆಯನ್ನೂ ಮಾಡಿಕೊಂಡಿತು. ಒಂದೆಡೆ ಬಿಜೆಪಿಯನ್ನು ಅತ್ಯಂತ ಖಡಾ ಖಂಡಿತವಾಗಿ ವಿರೋಧಿಸಿ ಹೋರಾಟ ನಡೆಸುತ್ತಿರುವುದಾಗಿ ಹೇಳುತ್ತಿರುವ ಜೆಡಿಎಸ್, ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿರುವುದು ಯಾವ ಸಂಕೇತವನ್ನು ನೀಡುತ್ತದೆ? ಈ ವಿಷಯದಲ್ಲಿ ಬಿಜೆಪಿ ವಿರುದ್ಧದ ತಮ್ಮ ಹೋರಾಟ ಬೇರೆ, ರಾಷ್ಟ್ರಪತಿ ವಿಚಾರದಲ್ಲಿ ಬೆಂಬಲಿಸಲು ಕಾರಣ ಬೇರೆ ಎಂದು ಎಚ್ ಡಿ ಕುಮಾರಸ್ವಾಮಿ ಅವರೇನೋ ಹೇಳಿದ್ದಾರೆ. ಆದರೆ ಇನ್ನೊಂದೆಡೆ ಅವರೇ ಹೇಳುವಂತೆ ಯಾವ ಪಕ್ಷಕ್ಕೂ ಕರ್ನಾಟಕದಲ್ಲಿ ಬಹುಮತ ಸಿಗದೇ ಹೋಗಿ ಪುನಃ ಜೆಡಿಎಸ್ ಪಕ್ಷದ ನಾಯಕರೇ ಮುಖ್ಯಮಂತ್ರಿ ಆಗುವುದು ಖಂಡಿತ ಎಂದು ಸಾರಿದ್ದಾರೆ. ಅವರ ಊಹೆಯಂತೆ ಜೆಡಿಎಸ್ ಪಕ್ಷ 45 ರಿಂದ 50 ರವರೆಗೆ ಸ್ಥಾನಗಳನ್ನು ಪಡೆಯಲಿದೆ. ಯಾರೇ ಸರಕಾರ ಮಾಡಬೇಕಿದ್ದರೂ ತಮ್ಮ ಬೆಂಬಲ ಇಲ್ಲದೆ ಅಸಾಧ್ಯ. ಹಾಗಾಗಿ ತಾವೇ ಕಿಂಗ್ ಮೇಕರ್ ಅಲ್ಲ ಸ್ವತಃ ಕಿಂಗ್ ಎಂದು ಪ್ರತಿಪಾದಿಸಿದ್ದಾರೆ! ಕರ್ನಾಟಕದ ಪ್ರಸ್ತುತ ರಾಜಕಾರಣದಲ್ಲಿ ತಮ್ಮದು ಮುಕ್ತ ಅವಕಾಶ ಎಂದು ಈ ಮೂಲಕ ಹೇಳಿಯಾಗಿದೆ. ಪ್ರಶ್ನೆ ಎಂದರೆ ಇಂತಹ ತಂತ್ರಗಳು ಭವಿಷ್ಯದ ಶಕ್ತಿ ರಾಜಕಾರಣದಲ್ಲಿ ಎಂತಹ ಫಲವನ್ನು ತಂದು ಕೊಡಬಲ್ಲದು ಎನ್ನುವುದರತ್ತ ಯೋಚಿಸುವುದು ಉತ್ತಮ.

ಬಿಜೆಪಿ ಆದಿವಾಸಿ ಮಹಿಳೆಯನ್ನು ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯನ್ನಾಗಿಸಿರುವುದು ಹಲವಾರು ಪ್ರಗತಿಪರರಲ್ಲಿಯೂ ‘ಕಂಪನ’ ಸೃಷ್ಟಿಸಿದೆ! ಇದನ್ನು ಪ್ರಜಾಪ್ರಭುತ್ವದ ಪವಾಡ ಎಂತಲೂ ಬಣ್ಣಿಸುವವರು ಇದ್ದಾರೆ! ಇದು ಆದಿವಾಸಿ ಆಸ್ಮಿತತೆಗೆ ಸಂದ ಜಯ, ಹೀಗಾಗಿ ಬಿಜೆಪಿಯ  ರಾಜಕಾರಣ ಏನೇ ಇದ್ದರೂ ರಾಷ್ಟ್ರಪತಿಯಂತಹ ಉನ್ನತ ಹುದ್ದೆಗೆ ಆದಿವಾಸಿ ಮಹಿಳೆ ಒಬ್ಬರು ಆಯ್ಕೆಯಾಗುವುದನ್ನು ಬೆಂಬಲಿಸಬೇಕು ಎನ್ನುವವರು ಇಲ್ಲದಿಲ್ಲ. ಆದಿವಾಸಿ ಅಭ್ಯರ್ಥಿಯ ಆಯ್ಕೆಯ ಹೆಗ್ಗಳಿಕೆಯನ್ನು ಕೊಚ್ಚಿಕೊಳ್ಳುವ ಬಿಜೆಪಿ ಇಡೀ ಭಾರತ ದೇಶದ ಆದಿವಾಸಿ ಸಮುದಾಯವನ್ನು ಸರ್ವನಾಶ ಮಾಡುವ ಕ್ರಮಗಳನ್ನು ಕೈಗೊಂಡಿರುವುದನ್ನು ಮರೆಯಲಾದೀತೇ? ಗುಜರಾತಿನಲ್ಲಿ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಪುತ್ಥಳಿ ಆನಾವರಣ ಮಾಡಿದ ಪ್ರದೇಶದಲ್ಲಿ ಲಕ್ಷಾಂತರ ಆದಿವಾಸಿಗಳು ಬೀದಿ ಪಾಲಾದರು. ಜಾರ್ಖಂಡ್ ನಲ್ಲಿ ರಾಂಚಿ ಸ್ಮಾರ್ಟ್ ಸಿಟಿ ಗಾಗಿ ನಡೆಸಲಾಗುತ್ತಿರುವ ಯೋಜನೆಯಲ್ಲಿ ಸಹ ಲಕ್ಷಾಂತರ ನಿವಾಸಿಗಳ ಬದುಕು ನೇಣಿನ ಕುಣಿಕೆಯಲ್ಲಿದೆ. ಬಹುತೇಕ ಉತ್ತರ ಭಾರತ, ಈಶಾನ್ಯ ಭಾರತದಲ್ಲಿ ನೆಲೆಸಿರುವ ಆದಿವಾಸಿ ಪ್ರದೇಶಗಳು ಸಂಪತ್ ಭರಿತ ಅರಣ್ಯವಾಗಿದ್ದು ಅಲ್ಲಿಯೇ ದಟ್ಟವಾಗಿ ವಾಸಿಸುವ ಆದಿವಾಸಿಗಳನ್ನು ಒದ್ದೋಡಿಸಲಾಗುತ್ತಿದೆ. ಕನಿಷ್ಠ ಪುನರ್ ವಸತಿ ಕಲ್ಪಿಸುವ ಕಾನೂನಿನ ಅಂಶವನ್ನು ಕಾರ್ಪೋರೇಟ್ ಕಂಪನಿಗಳ ಪರ ತಿದ್ದುಪಡಿ ಮಾಡಿ ಕಾನೂನನ್ನು ಅಂಗವಿಕಲ ವನ್ನಾಗಿಸಲಾಗಿದೆ. ಆದಿವಾಸಿಗಳ ಬದುಕು ಮತ್ತು ಪಾರಂಪರಿಕ ಹಕ್ಕುಗಳು, ಸಂಸ್ಕೃತಿಯನ್ನು ಸಂರಕ್ಷಿಸುವ ಅರಣ್ಯ ಹಕ್ಕುಗಳ ಕಾಯ್ದೆಯ ಜಾರಿಯನ್ನು ನಿರರ್ಥಕಗೊಳಿಸಿದೆ. ಜನ ಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಲು ಸಿದ್ಧವಿಲ್ಲ, ಬದ್ಧವಿಲ್ಲ. ಇಂತಹ ಪಾತಕ ಕೃತ್ಯಗಳಿಗೆ ಪಶ್ಚಾತಾಪ ಎನ್ನುವಂತೆ, ಮಹಾಪರಾಧಗಳನ್ನು ಮುಚ್ಚಿಕೊಳ್ಳಲು ಗುರಾಣಿಯಂತೆ ಬುಡಕಟ್ಟು ಸಮುದಾಯದ ಆದಿವಾಸಿ ಮಹಿಳೆಯ ಆಯ್ಕೆಯೂ ಆಗಿದೆ.

ಭಾರತದ ರಾಜಕಾರಣದ ಮುಂದೆ ಭಾರತದ ಸಂವಿಧಾನ ಮತ್ತು ಬಹು ವೈವಿಧ್ಯತೆಗಳ ಸಮಾಜವನ್ನು ಈಗಿನ ಸ್ವರೂಪದಲ್ಲಿ ಉಳಿಸಿಕೊಳ್ಳುವುದು, ಒಕ್ಕೂಟದ ತತ್ವವನ್ನು ಎತ್ತಿ ಹಿಡಿದು ಮತ ನಿರಪೇಕ್ಷತೆ ಮತ್ತು ಪ್ರಜಾಪ್ರಭುತ್ವವನ್ನು ಗಟ್ಟಿ ದನಿಯಲ್ಲಿ ಪ್ರತಿಪಾದಿಸಿ ಸಂವಿದಾನದ ನೆಲೆಯಲ್ಲಿ ಸರಿ ತಪ್ಪುಗಳ ಮೌಲ್ಯಮಾಪನ ಮಾಡಿ ಹೋರಾಡ ಬಲ್ಲ ಬದ್ಧತೆಯ ರಾಷ್ಟ್ರಪತಿ ಇಂದಿನ ಅವಶ್ಯಕತೆ ಎನ್ನುವುದನ್ನು ಮರೆಸಲು ಅವರು ಬಯಸುತ್ತಾರೆ. ಬಿಜೆಪಿ ಬುಡಕಟ್ಟು ಅಸ್ಮಿತೆಯನ್ನು ಬಳಸಿ ತನಗೆ ಬೇಕಾದ ರಬ್ಬರ್ ಸ್ಟ್ಯಾಂಪ್ ರಾಷ್ಟ್ರಪತಿಯನ್ನು  ಹೊಂದಲು ಬಯಸುತ್ತಿದೆ. ತನ್ನ ಎಲ್ಲಾ ಕುಕೃತ್ಯಗಳಿಗೂ ಅಂಗೀಕಾರ ಪಡೆಯುವ ಅಗಾಧ ಕ್ರೂರ ಯೋಜನೆ ಹೊಂದಿರುವುದನ್ನು ಕೇವಲ ಅಸ್ಮಿತತೆಯ ರಾಜಕಾರಣದಲ್ಲಿ ಮರೆಮಾಚುವುದು ಮಹಾದ್ರೋಹ.

Donate Janashakthi Media

Leave a Reply

Your email address will not be published. Required fields are marked *