ಇನ್ನು ಮುಂದೆ ದೆಹಲಿಯಲ್ಲಿ ಸರಕಾರಕ್ಕಿಂತ ಲೆಫ್ಟಿನೆಂಟ್ ಗವರ್ನರ್ ಗೆ ಹೆಚ್ಚಿನ ಅಧಿಕಾರ ಸಿಗಲಿದೆ. ಅದಕ್ಕಾಗಿ ಕೇಂದ್ರ ಸರಕಾರ ರಾಷ್ಟ್ರ ರಾಜಧಾನಿ ತಿದ್ದುಪಡಿ ಕಾಯ್ದೆಯನ್ನು ಜಾರಿ ಮಾಡಿದೆ. ಹಾಗಾದರೆ ಈ ಎನ್.ಸಿ.ಟಿ ಕಾಯ್ದೆ ಹೇಳುವುದೇನು? ಜನರಿಂದ ಚುನಾಯಿತವಾದ ಸರಕಾರದ ಆಡಳಿತವನ್ನು ನಿಯಂತ್ರಿಸುವುದು ಎಷ್ಟು ಸರಿ? ಒಕ್ಕೂಟ ವ್ಯವಸ್ಥೆ ಮೇಲೆ ಭಾರತೀಯ ಜನತಾ ಪಕ್ಷ ನಡೆಸುತ್ತಿರುವ ಗದಾಪ್ರಹಾರಕ್ಕೆ ವಿಪಕ್ಷಗಳು ಏನು ಹೇಳುತ್ತವೆ?
ರಾಷ್ಟ್ರ ರಾಜಧಾನಿಯ ಆಡಳಿತದಲ್ಲಿ ಲೆಫ್ಟಿನೆಂಟ್ ಗವರ್ನರ್ಗೆ ಹೆಚ್ಚಿನ ಅಧಿಕಾರ ನೀಡುವ ರಾಷ್ಟ್ರ ರಾಜಧಾನಿ ತಿದ್ದುಪಡಿ ಮಸೂದೆಯನ್ನು ಮಾರ್ಚ್ 15 ರಂದು ಸಂಸತ್ತಿನಲ್ಲಿ ಮಂಡಿಸಲಾಯಿತು. ಮಸೂದೆಯನ್ನು ವಿರೋಧಿಸಿ ವಿರೋಧ ಪಕ್ಷಗಳ ಸಂಸದರು ಸದನದಿಂದ ಹೊರನಡೆದರು. ಮಾರ್ಚ್ 22 ರಂದು ಈ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಯಿತು. ಮಾರ್ಚ್ 24 ರಂದು ಈ ಮಸೂದೆಯನ್ನು ರಾಜ್ಯ ಸಭೆಯಲ್ಲಿ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. 83 ಸದಸ್ಯರು ಮಸೂದೆಯ ಪರವಾಗಿದ್ದರೆ, 45 ಮಂದಿ ಮಸೂದೆಯನ್ನು ವಿರೋಧಿಸಿದರು. ಮಸೂದೆ ಅಂಗೀಕಾರಗೊಳ್ಳುವ ಮುನ್ನವೇ ವಿಪಕ್ಷಗಳು ಸದನವನ್ನು ಬಹಿಷ್ಕರಿಸಿ ಹೊರನಡೆದವು. ಈ ಮಸೂದೆಗೆ ಮಾರ್ಚ್ 28 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ರವರು ಅಂಕಿತವನ್ನು ಹಾಕವ ಮೂಲಕ ಈಗ ಕಾಯ್ದೆಯಾಗಿ ಮಾರ್ಪಟ್ಟಿದೆ.
ಇದನ್ನು ಓದಿ : ಅಸ್ಸಾಂ ಚುನಾವಣೆ: “ಬಿಜೆಪಿಗೆ ಕುರ್ಚಿ- ಕಾಂಗ್ರೆಸ್ ಗೆ ಅಸ್ತಿತ್ವದ ಚಿಂತೆ”
ಮಸೂದೆ ತಿದ್ದುಪಡಿಗೆ ಆಕ್ರೋಶ ವ್ಯಕ್ತಪಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಇದನ್ನು ‘ಪ್ರಜಾಪ್ರಭುತ್ವದ ಕರಾಳ ದಿನ’ವೆಂದು ಕಿಡಿ ಕಾರಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ‘ಎನ್‌ಸಿಟಿ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆ ಅಂಗೀಕರಿಸಿದೆ. ಇದು ಭಾರತದ ಪ್ರಜಾಪ್ರಭುತ್ವಕ್ಕೆ ಕರಾಳ ದಿನ. ಜನರಿಗೆ ಮರಳಿ ಅಧಿಕಾರ ದೊರಕಿಸಿ ಕೊಡುವ ನಿಟ್ಟಿನಲ್ಲಿ ನಾವು ಹೋರಾಡುತ್ತೇವೆ. ಏನೇ ಅಡೆತಡೆಗಳು ಇದ್ದರೂ ನಾವು ಉತ್ತಮ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ನಮ್ಮ ಕೆಲಸ ನಿಲ್ಲುವುದಿಲ್ಲ ಅಥವಾ ನಿಧಾನವಾಗುವುದಿಲ್ಲ’ ಎಂದು ಕೇಜ್ರಿವಾಲ್ ಟ್ವೀಟ್ ನ್ನು ಮಾಡಿದ್ದರು.
ರಾಷ್ಟ್ರೀಯ ರಾಜಧಾನಿ ತಿದ್ದುಪಡಿ ಕಾಯ್ದೆಯನ್ನು ಹಿಂತೆದುಕೊಳ್ಳಬೇಕು ಮತ್ತು ದೆಹಲಿ ಸರಕಾರದ ಅಧಿಕಾರವನ್ನು ಪುನಃಸ್ಥಾಪಿಸಬೇಕೆಂದು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಆಗ್ರಹಿಸಿದ್ದಾರೆ. ಇವತ್ತು ದೆಹಲಿಯಲ್ಲಿ ಎಎಪಿ ಅಧಿಕಾರದಲ್ಲಿ ಇರಬಹುದು, ನಾಳೆ ಮತ್ತೊಬ್ಬರು ಬರಬಹುದು. ಆದರೆ ಚುನಾಯಿತ ರಾಜ್ಯಗಳ ಮತ್ತು ಕೇಂದ್ರ ಪ್ರಾಂತ್ಯಗಳ ಪ್ರಜಾಪ್ರಭುತ್ವದ ಹಕ್ಕುಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಕೇಂದ್ರ ಸರಕಾರ ಈ ಮಸೂದೆಯನ್ನು ಹಿಂತೆದುಕೊಳ್ಳಬೇಕೆಂದು ಮಲ್ಲಿಕಾರ್ಜುನ್ ಖರ್ಗೆ ಆಗ್ರಹಿಸಿದ್ದಾರೆ.
ಇದನ್ನು ಓದಿ : ಉಪಚುನಾವಣೆ – ಲೆಕ್ಕಾಚಾರ ಹೇಗಿದೆ? ‘ಸಿಡಿ’ಯುತ್ತಾ ಅಸ್ತ್ರ, ಜಾತಿ, ಹಣದ್ದೆ ಕಾರ್ಬಾರು
‘ಬಿಜೆಪಿ ಚುನಾವಣೆಯಲ್ಲಿ ಎರಡು ಬಾರಿ ಸೋತಿದೆ, ಅದಕ್ಕಾಗಿ ಈ ಮಸೂದೆ ತಂದಿದೆ ಈ ಮಸೂದೆ ಪ್ರಜಾಪ್ರಭುತ್ವ ವಿರೋಧಿಯಾಗಿದೆ ಇದರ ವಿರುದ್ದ ದೆಹಲಿಯ ಎರಡು ಕೋಟಿ ಜನರು ನ್ಯಾಯಕ್ಕಾಗಿ ಎದ್ದು ನಿಂತಿದ್ದಾರೆ’ ಎಂದು ಎಎಪಿ ಸಂಸದ ಸಂಜಯ್ ಸಿಂಗ್ ಹೇಳಿದರು. ದೆಹಲಿಯಲ್ಲಿ ಇನ್ನು ಮುಂದೆ “ಸರ್ಕಾರ” ಎಂಬ ಪದವು ಲೆಫ್ಟಿನೆಂಟ್ ಗವರ್ನರ್ ಎಂದರ್ಥವಾಗುತ್ತದೆ. ದೆಹಲಿ ಸರ್ಕಾರವು ಯಾವುದೇ ಕಾರ್ಯಾಂಗೀಯ ಕ್ರಮ ತೆಗೆದುಕೊಳ್ಳುವ ಮೊದಲು ಲೆಫ್ಟಿನೆಂಟ್ ಗವರ್ನರ್ ಅಭಿಪ್ರಾಯವನ್ನು ತೆಗೆದುಕೊಳ್ಳಬೇಕಾಗಿದೆ ಎಂದು ರಾಷ್ಟ್ರೀಯ ರಾಜಧಾನಿ (ತಿದ್ದುಪಡಿ) ಮಸೂದೆ ಸ್ಪಷ್ಟಪಡಿಸುತ್ತದೆ. ಇದು ಪ್ರಜಾಪ್ರಭುತ್ವ ವಿರೋಧಿಕಾಯ್ದೆಯಾಗಿದೆ. ಒಕ್ಕೂಟ ವ್ಯವಸ್ಥೆಯ ಮೇಲೆ ಕೇಂದ್ರ ನಡೆಸುತ್ತಿರುವ ದಾಳಿಯಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮುಖಂಡ ಸುರೇಶ್ ರಾಥೋಡ್ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಆಡಳಿತಕ್ಕೆ ಒಳಪಟ್ಟಿರುವ ದೆಹಲಿ, ಅತ್ತ ಕೇಂದ್ರಾಡಳಿತ ಪ್ರದೇಶವೂ ಅಲ್ಲ, ಇತ್ತ ಪೂರ್ಣ ಪ್ರಮಾಣದ ರಾಜ್ಯವೂ ಆಗಿಲ್ಲ. ಕೇಂದ್ರಾಡಳಿತ ಪ್ರದೇಶಗಳ ಸಂಪೂರ್ಣ ಆಡಳಿತದ ಹೊಣೆಯು ಕೇಂದ್ರ ಸರ್ಕಾರಕ್ಕೆ ಸೇರಿದ್ದರೆ, ರಾಜ್ಯಗಳ ಆಡಳಿತವು ಚುನಾಯಿತ ಪ್ರತಿನಿಧಿಗಳ (ಶಾಸಕರ) ಸರ್ಕಾರದ ನಿಯಂತ್ರಣದಲ್ಲಿ ಇರುತ್ತದೆ. ದೆಹಲಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತ ಇದೆ. ಇದೇ ಕಾರಣಕ್ಕೆ ದೆಹಲಿಗೆ ಪೂರ್ಣ ಪ್ರಮಾಣದ ರಾಜ್ಯದ ಸ್ಥಾನಮಾನ ಸಿಗಬೇಕು ಎನ್ನುವ ಕೂಗು ಕೇಳಿ ಬರುತ್ತದೆ.
ಕೇಂದ್ರಾಡಳಿತ ಪ್ರದೇಶಗಳು ಸಾಮಾನ್ಯವಾಗಿ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡುವುದು ಸಾಮಾನ್ಯ. ಏಕೆಂದರೆ ಇಲ್ಲಿ ನೆಪಕ್ಕೆ ಮುಖ್ಯಮಂತ್ರಿ ಎಂಬ ಅಧಿಕಾರ ಇದ್ದಗ್ಯೂ ಆಡಳಿತ ವಿಭಾಗದ ಪ್ರಮುಖ ಶಾಖೆಗಳು ಕೇಂದ್ರ ಸರ್ಕಾರ ಮತ್ತು ಕೇಂದ್ರ ಸರ್ಕಾರ ನಿಯೋಜಿಸುವ ಗವರ್ನರ್ ಕೈಲಿರುತ್ತದೆ. ಇದಲ್ಲದೆ, ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕೇಂದ್ರಾಡಳಿತ ಪ್ರದೇಶಗಳ ಬಜೆಟ್ ಮತ್ತು ತೆರಿಗೆ ರೂಪದ ಆದಾಯ ತೀರಾ ಕಡಿಮೆ ಇರುತ್ತೆ.
ಆದರೆ ಅದೆಲ್ಲವನ್ನೂ ಮೀರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶಿಕ್ಷಣ-ಆರೋಗ್ಯ ಸೇರಿದಂತೆ ಇತರೆ ಮೂಲಭೂತ ಸೌಲಭ್ಯಗಳಿಗೆ ಒತ್ತನ್ನು ನೀಡಿದರು. ಇದೇ ಕಾರಣಕ್ಕೆ ದೆಹಲಿ ಇತರೆ ಕೇಂದ್ರಾಡಳಿತ ಪ್ರದೇಶಕ್ಕಿಂತ ಅಭಿವೃದ್ಧಿ ವಿಚಾರದಲ್ಲಿ ಭಿನ್ನವಾಗಿ ನಿಲ್ಲುತ್ತದೆ. ಆದರೆ, ಕಳೆದ 5 ವರ್ಷಗಳಿಂದ ದೆಹಲಿಗೆ ಸ್ವಾಯತ್ತ ರಾಜಸ್ವ ಬೇಕು, ಸ್ವಾತಂತ್ರ್ಯ ರಾಜ್ಯ ಎಂಬ ಸ್ಥಾನಮಾನ ಬೇಕು ಎಂಬುದು ಅರವಿಂದ ಕೇಜ್ರಿವಾಲ್ ಅವರ ಬೇಡಿಕೆ. ಇದೇ ಕಾರಣಕ್ಕಾಗಿ ಕೇಜ್ರಿವಾಲ್ ಮತ್ತು ಕೇಂದ್ರ ಸರ್ಕಾರದ ನಡುವೆ ನಿರಂತರ ಹಗ್ಗಾ ಜಗ್ಗಾಟ ನಡೆಯುತ್ತಲೇ ಇತ್ತು.
ಕಳೆದ ಬಾರಿಯ ಚುನಾವಣೆಯಲ್ಲಿ ಹೀನಾಯ ಸೋಲುಂಡಿದ್ದ ಬಿಜೆಪಿ ದೆಹಲಿ ಸರಕಾರದ ಮೇಲೆ ಕತ್ತಿ ಮಸೆಯುತ್ತಿತ್ತು. ದೆಹಲಿಯನ್ನು ತನ್ನ ನಿಯಂತ್ರಣಕ್ಕೆ ತರುವ ಪ್ರಯತ್ನಗಳನ್ನು ಮಾಡುತ್ತಿತ್ತು. ಕೃಷಿಕಾಯ್ದೆ ವಿರುದ್ಧ ರೈತರು ನಡೆಸಿದ ಹೋರಾಟದ ಸಂದರ್ಭದಲ್ಲಿ ದೆಹಲಿ ಸರಕಾರ ರೈತರ ಪರ ನಿಂತಿತ್ತು. ಇದು ಕೇಂದ್ರದ ಕಣ್ಣನ್ನು ಕೆಂಪಾಗಿಸಿತ್ತು, ರೈತರನ್ನು ಬಂಧಿಸಲು ಬೃಹತ್ ಜೈಲ್ ನಿರ್ಮಿಸುವಂತೆ ಸೂಚನೆ ನೀಡಿದ್ದ ಕೇಂದ್ರದ ಸಲಹೆಯನ್ನು ಮೂಲಾಜಿಲ್ಲದೆ ತಿರಸ್ಕಾರ ಮಾಡಿತ್ತು. ಇದೆಲ್ಲದರ ಸೇಡನ್ನು ತೀರಿಸಿಕೊಳ್ಳಲಿ ಬಿಜಿಪಿ ಈ ರೀತಿಯ ಯೋಜನೆಯನ್ನು ರೋಪಿಸಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಕಳೆದ ವರ್ಷ ಕಾಶ್ಮೀರದಲ್ಲಿ ಇದ್ದ 370 ನೇ ಕಲಂ ನ್ನು ರದ್ದು ಪಡಿಸಿ, ಪ್ರಜಾಪ್ರಭುತ್ವದ ಮೇಲೆ ದಾಳೆಯನ್ನು ನಡೆಸಿದ್ದ ಕೇಂದ್ರ ಸರಕಾರ ಈಗ ದೆಹಲಿಯನ್ನು ನಿಯಂತ್ರಣಕ್ಕೆ ಪಡೆಯುತ್ತಿದೆ. ಈ ಎಲ್ಲಾ ಕಟ್ಟಲೆಗಳನ್ನು ನೋಡಿದರೆ ಹೆಸರಿಗೆ ಮಾತ್ರ ಒಕ್ಕೂಟ ವ್ಯವಸ್ಥೆ ನಮ್ಮ ದೇಶದಲ್ಲಿದೆ ಎಂದು ಅನಸ್ತಾ ಇದೆ. ನಿಜವಾದ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ ಹೆಚ್ಚಿನ ಮತ್ತು ಸಂಪೂರ್ಣ ಅಧಿಕಾರ ಇರಬೇಕು, ತನಗೆ ಬೇಕಿರುವ ಅಥವಾ ಬೇಡದ ಕಾಯ್ದೆಗಳನ್ನು ಮಾಡಿಕೊಳ್ಳಲು ಅಥವಾ ಬದಲಾಯಿಸಲು ಅಧಿಕಾರ ಇರಬೇಕು. ಅಧಿಕಾರ ತಳಮಟ್ಟದವರೆಗೂ ಹಂಚಿಕೆಯಾಗಬೇಕು.
ಆದರೆ ಇಂದು ಕೇಂದ್ರ ಸರಕಾರ ಎಲ್ಲವನ್ನು ತನ್ನ ಕೈಯಲ್ಲಿ ಹಿಡಿದಿಟ್ಟುಕೊಂಡಿದೆ. ಕೇಂದ್ರ ಸರಕಾರ ಕೇವಲ ರಾಜ್ಯಕ್ಕೆ ಯೋಜನೆಗಳನ್ನು ಮಾಡಲು ಬೇಕಿರುವ ಸಹಾಯಕನಂತೆ ಕೆಲಸ ಮಾಡಬೇಕು. ರಾಜ್ಯದ ಆಡಳಿತದಲ್ಲಿ ತಲೆ ಹಾಕುವುದನ್ನು ಕೇಂದ್ರ ಸರಕಾರ ನಿಲ್ಲಿಸಬೇಕಿದೆ.