ರಸ್ತೆಯಲ್ಲಿ ಗಲೀಜು ನೀರು: ಮಂಗಳೂರು ಮಹಾನಗರ ಪಾಲಿಕೆ ಶವದ ಪ್ರತಿಕೃತಿ ತೂಗು ಹಾಕಿ ಪ್ರತಿಭಟನೆ

ಮಂಗಳೂರು:  ನಗರದಲ್ಲಿನ ಕೊಂಚಾಡಿಯ ಕೆನರಾ ಅಪಾರ್ಟ್ಮೆಂಟ್‌ನಿಂದ ಸಾರ್ವಜನಿಕ ರಸ್ತೆಗೆ ಮಲ ಮಿಶ್ರಿತ ಗಲೀಜು ನೀರನ್ನು ಬಿಡುತ್ತಿದ್ದು ಈ ಬಗ್ಗೆ ಹಲವಾರು ಬಾರಿ ದೂರು ನೀಡಿದರೂ ಸಮಸ್ಯೆ ಪರಿಹಾರವಾಗದ ಕಾರಣ ಮಂಗಳೂರು ಮಹಾನಗರ ಪಾಲಿಕೆಯ ವಿರುದ್ದ ಸಿಪಿಐಎಂ, ಡಿವೈಎಫ್‌ಐ, ದಲಿತ ಹಕ್ಕುಗಳ ಸಮಿತಿ, ಕಟ್ಟಡ ಕಾರ್ಮಿಕ ಸಂಘಟನೆ ಮನಪಾ ಶವದ ಪ್ರತಿಕೃತಿ ತೂಗು ಹಾಕುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಸುಮಾರು ಮೂರು ವರ್ಷಗಳಿಂದ ಇಲ್ಲಿನ ಕೊಂಚಾಡಿಯ ಕೆನರಾ ಅಪಾರ್ಟ್ಮೆಂಟ್‌ನಿಂದ ಕೊಳಚೆ ನೀರು ಕಾಂಕ್ರೀಟ್‌ ಮುಖ್ಯ ರಸ್ತೆ ಬದಿ ಹರಿಯುತ್ತಿದೆ. ಸಿಪಿಐಎಂ, ಡಿವೈಎಫ್‌ಐ, ದಲಿತ ಹಕ್ಕುಗಳ ಸಮಿತಿ, ಕಟ್ಟಡ ಕಾರ್ಮಿಕ ಸಂಘಟನೆಗಳು ಈ ಬಗ್ಗೆ ಹಲವಾರು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಹಾಗೆಯೇ ಮನವಿ ಪತ್ರವನ್ನು ಮಂಗಳೂರು ಮಹಾನಗರ ಪಾಲಿಕೆಗೆ ನೀಡಿದ್ದಾರೆ. ಈ ಬೆನ್ನಲ್ಲೇ 52 ಲಕ್ಷ ರೂ. ವೆಚ್ಚದ ಕಾಮಗಾರಿ ನಡೆದಿದೆ.

ಇದನ್ನೂ ಓದಿ : ಖಾಸಗಿ ವೈದ್ಯಕೀಯ ಲಾಬಿ ಹಾಗೂ ತನಿಖಾ ಸಮಿತಿಗಳು

ಆದರೆ ಈ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಕೊಂಚಾಡಿಯ ಕೆನರಾ ಅಪಾರ್ಟ್ಮೆಂಟ್‌ನಿಂದ ಸಾರ್ವಜನಿಕ ರಸ್ತೆಗೆ ಮಲ ಮಿಶ್ರಿತ ಗಲೀಜು ನೀರನ್ನು ಈಗಲೂ ಬಿಡಲಾಗುತ್ತಿದೆ. ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಮಂಗಳೂರು ಮಹಾನಗರ ಪಾಲಿಕೆಯ ವಿರುದ್ದ ಪ್ರತಿಭಟನೆ ನಡೆಸಿದರುವ ಸಂಘಟನೆಗಳು, ಈ ಕೊಳಚೆ ನೀರು ರಸ್ತೆಗೆ ಹರಿದು ಬರುವ ಸ್ಥಳದಲ್ಲಿ ಬ್ಯಾನರ್‌ ಒಂದನ್ನು ಹಾಕಿದ್ದು, ಆ ಬ್ಯಾನರ್‌ನ ಅಡಿ ಶವದ ಪ್ರತಿಕೃತಿಯನ್ನು ತೂಗುಹಾಕಲಾಗಿದೆ. ಹಾಗೆಯೇ ಈ ಪ್ರತಿಕೃತಿ ಮೇಲೆ ಮಂಗಳೂರು ಮಹಾನಗರ ಪಾಲಿಕೆ ಎಂದು ಬರೆಯಲಾಗಿದ್ದು ಸಮೀಪದಲ್ಲೇ ಆಂಬುಲೆನ್ಸ್‌ ನಿಲ್ಲಿಸಲಾಗಿದೆ. ಪ್ರಸ್ತುತ ಈ ದೃಶ್ಯವು ರಸ್ತೆಯಲ್ಲಿ ನಡೆದಾಡುತ್ತಿರುವವರ ಗಮನ ಸೆಳೆದಿದ್ದು, ಮನಪಾ ವಿರುದ್ದ ಆಕ್ರೋಶ ವ್ಯಕ್ತವಾಗಿದೆ.

ಸಿಪಿಐಎಂ, ಡಿವೈಎಫ್‌ಐ, ದಲಿತ ಹಕ್ಕುಗಳ ಸಮಿತಿ, ಕಟ್ಟಡ ಕಾರ್ಮಿಕ ಸಂಘಟನೆಗಳು ಜೊತೆಯಾಗಿ ನಗರಾಡಳಿತ, ಜಿಲ್ಲಾಡಳಿತ, ಜನಪ್ರತಿನಿಧಿಗಳಿಗೆ ನಿರಂತರ ಅಂಚೆ ಕಾರ್ಡ್‌ನಲ್ಲಿ ಈ ಸಮಸ್ಯೆಯ ಬಗ್ಗೆ ತಿಳಿಸಲಾಗಿದೆ. ಈಗ ನಗರ ಪಾಲಿಕೆ ನಮ್ಮ ಕಷ್ಟ ಕೇಳದೆ ಸತ್ತು ಹೋಗಿದೆ ಎಂದು ನಗರ ಪಾಲಿಕೆ ಶವ ನೇತು ಹಾಕಿ ಪ್ರತಿಭಟನೆ ನಡೆಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಈ ನಡುವೆ ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಪಾಲಿಕೆ ಅಧಿಕಾರಿಗಳು, ಈ ಬಗ್ಗೆ ಈ ಅಪಾರ್ಟ್‌ಮೆಂಟ್‌ನ ಅಸೋಸಿಯೇಶನ್‌ ಅಧ್ಯಕ್ಷರಿಗೆ ಹಲವು ಬಾರಿ ಸೂಚನೆ ನೀಡಿದ್ದೇವೆ. ಹತ್ತು ಸಾವಿರ ದಂಡವನ್ನೂ ಬರೆಯಲಾಗಿದೆ. ಆದರೆ ಅಧ್ಯಕ್ಷರು ಸಂಪರ್ಕಕ್ಕೆ ಸಿಗುತ್ತಿಲ್ಲ. ಆತನ ಖಾಯಂ ವಿಳಾಸ ತಿಳಿದಿರುವವರು ಪಾಲಿಕೆಯನ್ನು ಸಂಪರ್ಕಿಸಿ ಎಂದು ಹೇಳಿದ್ದಾರೆ.

ವರದಿ : ಮಾಧುರಿ ಬೋಳಾರ, ಮಂಗಳೂರು 

Donate Janashakthi Media

Leave a Reply

Your email address will not be published. Required fields are marked *