ರಸ್ತೆ ಗುಂಡಿ ಮುಚ್ಚಲು 36 ಗಂಟೆಯೊಳಗೆ ಅಮೆರಿಕನ್‌ ಕಂಪನಿಗೆ ಕಾರ್ಯಾದೇಶ: ಬಿಬಿಎಂಪಿಗೆ ಹೈಕೋರ್ಟ್‌ ಗಡುವು

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ರಸ್ತೆ ಗುಂಡಿ ಮುಚ್ಚುವ ಕೆಲಸ ತುರ್ತಾಗಿ ಆರಂಭವಾಗುವುದಕ್ಕೆ ಸಂಬಂಧಿಸಿದಂತೆ ಅಮೆರಿಕನ್‌ ರೋಡ್‌ ಟೆಕ್ನಾಲಜಿ ಸಲ್ಯೂಷನ್‌ಗೆ (ಎಆರ್‌ಟಿಎಸ್‌) ಕಾರ್ಯಾದೇಶ ಹಾಗೂ ಸಂಬಂಧಿತ ದಾಖಲೆಗಳನ್ನು 36 ಗಂಟೆಗಳ ಒಳಗೆ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಆದೇಶ ಮಾಡಿದೆ.

ಬೆಂಗಳೂರು ನಗರದ ವ್ಯಾಪ್ತಿಯಲ್ಲಿನ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ  ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠವು ಬಿಬಿಎಂಪಿಗೆ ಖಡಕ್‌ ಎಚ್ಚರಿಕೆ ನೀಡಿದೆ.

ಇದನ್ನು ಓದಿ: ಬಾಳಿಕೆ ಬರುವಂತೆ ರಸ್ತೆ ದುರಸ್ತಿ ಮಾಡಿ-ಪರಿಶೀಲನೆ ನಡೆಸುತ್ತೇವೆ: ಹೈಕೋರ್ಟ್‌

ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್‌ ಸಂಚಾರ ದಟ್ಟಣೆ, ಮೂಲಸೌಕರ್ಯ, ಮಳೆಯನ್ನು ವರ್ಷಗಟ್ಟಲೇ ನಿಂದಿಸಿದಿರಿ, ಆಮೇಲೆ ರಸ್ತೆ ಅಗೆಯುವ ಏಜೆನ್ಸಿಗಳತ್ತ ಬೆರಳು ಮಾಡಿದಿರಿ. ಈಗ ಎಆರ್‌ಟಿಎಸ್‌ನತ್ತ ಬೆರಳು ಮಾಡುತ್ತಿದ್ದೀರಿ ಎಂದಿದೆ.

ವಿಚಾರಣೆ ಆರಂಭವಾಗುತ್ತಿದ್ದಂತೆ, ಎಆರ್‌ಟಿಎಸ್‌ ಸಂಸ್ಥೆ ಪ್ರತಿನಿಧಿಸಿದ್ದ ಹಿರಿಯ ವಕೀಲೆ ಜಯ್ನಾ ಕೊಠಾರಿ “ನಮಗೆ ಇನ್ನೂ ಕಾರ್ಯಾದೇಶ ನೀಡಲಾಗಿಲ್ಲ. ಹೀಗಾಗಿ, ಕೆಲಸ ಆರಂಭಿಸಲಾಗಿಲ್ಲ” ಎಂದು ತಿಳಿಸಲು ಮುಂದಾದರು.

ಬಿಬಿಎಂಪಿ ಪರವಾಗಿ ಹಾಜರಿದ್ದ ವಕೀಲ ವಿ ಶ್ರೀನಿಧಿ, ಕೆಲವು ವಿಚಾರಗಳಲ್ಲಿ ಲೆಕ್ಕಾಚಾರ ನಡೆಯುತ್ತಿದ್ದು, ಎಆರ್‌ಟಿಎಸ್‌ ಎರಡು ದಿನ ಕಾಲಾವಕಾಶ ನೀಡುವಂತೆ ಬಿಬಿಎಂಪಿಗೆ ಕೋರಿದೆ ಎಂದು ನನಗೆ ತಿಳಿಸಲಾಗಿದೆ. ಇದರ ಹೊರತಾಗಿ ನಾವು ರಸ್ತೆಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ಕಾರ್ಯಾದೇಶ ನೀಡಲು ಸಿದ್ಧವಾಗಿದ್ದೇವೆ. ಎರಡು ದಿನಗಳಲ್ಲಿ ಕಾರ್ಯಾದೇಶ ನೀಡುತ್ತೇವೆ ಎಂದಿದ್ದಾರೆ.

ಇದನ್ನು ಓದಿ: ಜನಶಕ್ತಿ ಮೀಡಿಯಾ ವಿಶೇಷ ವರದಿ ಪರಿಣಾಮ: ಎಚ್ಚೆತ್ತುಕೊಂಡ ಬಿಬಿಎಂಪಿ ರಸ್ತೆಗುಂಡಿ ಮುಚ್ಚಿತು

ಅಲ್ಲದೆ, ಟೆಂಡರ್‌ಗೆ ಸಂಬಂಧಿಸಿದಂತೆ, ಎಆರ್‌ಟಿಎಸ್‌ ಈಗ ಬೇರೆ ರೀತಿ ಮಾತನಾಡುತ್ತಿದ್ದಾರೆ. ನಾಡಿದ್ದು ಪ್ರಕರಣದ ವಿಚಾರಣೆ ನಡೆಸಿ, ನಾನು ಕಾರ್ಯಾದೇಶ ನೀಡಿರುವ ಬಗ್ಗೆ ನ್ಯಾಯಪೀಠಕ್ಕೆ ವರದಿ ಒಪ್ಪಿಸುತ್ತೇವೆ ಎಂದಿದ್ದಾರೆ.

ಬಿಬಿಎಂಪಿ ವಕೀಲರ ವಾದಕ್ಕೆ ನ್ಯಾಯಾಲಯವು “ರಸ್ತೆ ಗುಂಡಿ ಮುಚ್ಚುವ ಕೆಲಸ ಆರಂಭವಾಗಿದೆಯೋ, ಇಲ್ಲವೋ? ಮಳೆ ಆರಂಭವಾಗುತ್ತಿದೆ. ಏನನ್ನೂ ಮಾಡಲಾಗಿಲ್ಲ. ಅದೇ ಸ್ಥಿತಿಯಲ್ಲಿ ಇದೆ. ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ನ್ಯಾಯಾಲಯ ವಿಚಾರಣೆ ನಡೆಸುವುದಿಲ್ಲ. ಆ ಬಳಿಕ ವಿಚಾರಣೆ ನಡೆಯಲಿದೆ ಎಂಬುದು ನಿಮಗೆ (ಬಿಬಿಎಂಪಿ) ತಿಳಿದಿದೆ. ನಾವು ನಿಮಗೆ ಸಾಕಷ್ಟು ಸಮಯ ನೀಡಿದ್ದೇವೆ. ನಿಮಗೆ ಕೆಲಸ ಆರಂಭಿಸುವ ಉದ್ದೇಶವಿಲ್ಲ. ಇದು ನಿಜಕ್ಕೂ ದುರದೃಷ್ಟಕರ ವಿಚಾರ ಎಂದು ಬೇಸರ ವ್ಯಕ್ತಪಡಿಸಿದೆ.

ಹೈಕೋರ್ಟ್‌ ಕಳೆದ ವಿಚಾರಣೆಯಲ್ಲಿ “ರಸ್ತೆ ಗುಂಡಿಗಳಿಗೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಬೇಕು. ಬಳಿಕ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು ಎಂದು ನಿರ್ದೇಶಿಸಲಾಗಿತ್ತು.

Donate Janashakthi Media

Leave a Reply

Your email address will not be published. Required fields are marked *