ರಸ್ತೆ ಗುಂಡಿಗೆ ಇನ್ನೆಷ್ಟು ಬಲಿ ಬೇಕು? ಸಾವುಗಳಿಗೆ ಕಾರಣ ಯಾರು?

ಬೆಂಗಳೂರು : ಸಿಲಿಕಾನ್ ಸಿಟಿಯ ರಸ್ತೆಯನ್ನು ಗುಂಡಿಮುಕ್ತ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಶತಾಯಗತಾಯ ಪ್ರಯತ್ನ ಮಾಡುತ್ತಿದೆ. ಆದರೂ ಸಹ ಉದ್ಯಾನ ನಗರಿ ರಸ್ತೆಗಳು ಗುಂಡಿ ಮುಕ್ತವಾಗಿಲ್ಲ.

ಏಷ್ಯಾದ ಅತಿ ದೊಡ್ಡ ಕೈಗಾರಿಕೆ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪೀಣ್ಯ ಕೈಗಾರಿಕಾ ಪ್ರದೇಶ ಸೇರಿದಂತೆ ದಾಸರಹಳ್ಳಿ ವಲಯದ ರಸ್ತೆಗಳಲ್ಲಿ ಗುಂಡಿಗಳ ಸಂಖ್ಯೆ ಕೇಳಿದ್ರೆ ಎದೆ ಬಡಿತ ಹೆಚ್ಚಾಗೋದು ಗ್ಯಾರಂಟಿ.

ಹೌದು, ಬಿಬಿಎಂಪಿಯ ಮಾಹಿತಿ ಪ್ರಕಾರ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಸಾವಿರಕ್ಕೂ ಅಧಿಕ ರಸ್ತೆ ಗುಂಡಿಗಳು ಎಣಿಕೆಗೆ ಸಿಕ್ಕಿವೆ. ಆದರೆ, ಎಣಿಕೆಗೆ ಸಿಗದ ಗುಂಡಿಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿವೆ ಎನ್ನಲಾಗುತ್ತದೆ.

ದಾಸರಹಳ್ಳಿ ವಲಯದ ವ್ಯಾಪ್ತಿಯಲ್ಲಿ 16 ಸಾವಿರ ಕೈಗಾರಿಕೆಗಳಿರುವ ಪೀಣ್ಯ ಕೈಗಾರಿಕಾ ಪ್ರದೇಶ ಸೇರಿದಂತೆ ಅನೇಕ ಕಡೆಗಳಲ್ಲಿ ರಸ್ತೆಗುಂಡಿಗಳಿವೆ. ಇತ್ತೀಚೆಗೆ ನಗರದಲ್ಲಿ ಸುರಿದ ಧಾರಾಕಾರ ಹಾಗೂ ವಾಡಿಕೆ ಪ್ರಮಾಣಕ್ಕಿಂತ ದ್ವಿಗುಣ ಪ್ರಮಾಣದ ಮಳೆ ಸುರಿದ ಪರಿಣಾಮ ದಾಸರಹಳ್ಳಿ ವಲಯದ ರಸ್ತೆಗಳಲ್ಲಿ ಹೆಜ್ಜೆ ಹೆಜ್ಜೆಗೂ ಗುಂಡಿಗಳಿವೆ.

ದಾಸರಹಳ್ಳಿ ವಲಯದ ಪೀಣ್ಯ ಕೈಗಾರಿಕಾ ಪ್ರದೇಶ ವಾರ್ಡ್‌ನಲ್ಲಿ ಈವರೆಗೆ ಪತ್ತೆಯಾದ 499 ರಸ್ತೆ ಗುಂಡಿಗಳ ಪೈಕಿ 23 ಗುಂಡಿ ಮುಚ್ಚಿದ್ದು, ಇನ್ನೂ 476 ಗುಂಡಿ ಮುಚ್ಚುವುದು ಬಾಕಿ ಇದೆ. ಬಾಗಲಗುಂಟೆ ವಾರ್ಡ್‌ನಲ್ಲಿ 442 ಗುಂಡಿಗಳ ಪೈಕಿ 151 ಗುಂಡಿ ಮುಚ್ಚಿದ್ದು, ಇನ್ನೂ 291 ಮುಚ್ಚುವುದು ಬಾಕಿ ಇದೆ. ಚೊಕ್ಕಸಂದ್ರ 280 ಗುಂಡಿ ಮುಚ್ಚುವುದು ಬಾಕಿ ಇದೆ, ಶೆಟ್ಟಿಹಳ್ಳಿ ವಾರ್ಡ್‌ನಲ್ಲಿ 155, ಟಿ.ದಾಸರಹಳ್ಳಿಯಲ್ಲಿ 59, ಮಲ್ಲಸಂದ್ರವಾರ್ಡ್‌ನಲ್ಲಿ 20, ರಾಜಗೋಪಾಲ ನಗರದಲ್ಲಿ 19 ಹಾಗೂ ಹೆಗ್ಗನಹಳ್ಳಿ 17 ಗುಂಡಿ ಮುಚ್ಚುವುದು ಬಾಕಿ ಇದೆ. ವಿಶೇಷ ಎಂದರೆ ಚೊಕ್ಕಸಂದ್ರ ವಾರ್ಡ್‌ನಲ್ಲಿ ಈವರೆಗೆ ಒಂದೇ ಒಂದು ಗುಂಡಿ ಮುಚ್ಚಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.

ಬೆಂಗಳೂರಿನ ಶೇ. 17 ರಷ್ಟು ಅಪಘಾತಗಳಿಗೆ ರಸ್ತೆಗುಂಡಿಗಳೇ ಕಾರಣ!

ಬೆಂಗಳೂರಲ್ಲಿ ಟ್ರಾಫಿಕ್ ಸಮಸ್ಯೆ ಒಂದೆಡೆಯಾದ್ರೆ, ಮತ್ತೊಂದೆಡೆ ರಸ್ತೆ ಗುಂಡಿಗಳಿಂದಲೇ ಜನರಿಗೆ ಹೆಚ್ಚು ಗಂಡಾಂತರ. ಇದೇ ವರ್ಷ ಆರೇಳು ಜೀವಗಳು ರಸ್ತೆಗುಂಡಿಗಳಿಗೆ ಬಲಿಯಾಗಿದೆ. ಅಲ್ಲದೆ ಕಳೆದ ನಾಲ್ಕೈದು ವರ್ಷಗಳಲ್ಲಿ ಶೇ. 17ರಷ್ಟು ಅಪಘಾತಗಳು ರಸ್ತೆ ಗುಂಡಿಗಳಿಂದಲೇ ಆಗಿವೆ ಅಂತ ಸ್ಫೋಟಕ ವರದಿಯೊಂದು ಹೇಳುತ್ತಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಸಂಭವಿಸಿರುವ ರಸ್ತೆ ಅಪಘಾತಗಳಲ್ಲಿ 1800ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ರಸ್ತೆ ಗುಂಡಿಗಳಿಂದ ಒಂದು ವರ್ಷದ ಅವಧಿಯಲ್ಲಿ 10 ಜನರು ಪ್ರಾಣ ಕಳೆದುಕೊಂಡಿದ್ದಾರೆ. 2019 ರಲ್ಲಿ 810 ರಸ್ತೆ ಅಪಘಾತ ಸಂಭವಿಸಿದ್ದು, 832 ಜನ ಮೃತಪಟ್ಟಿದ್ದಾರೆ. 2020 ರಲ್ಲಿ 632 ಅಪಘಾತದಲ್ಲಿ 657 ಮಂದಿ ಮೃತಪಟ್ಟಿದ್ದಾರೆ. 2021 ರಲ್ಲಿ 618 ಅಪಘಾತ ಸಂಭವಿಸಿದ್ದು, 651 ಮಂದಿ ಮೃತಪಟ್ಟಿದ್ದಾರೆ. ಇನ್ನು ಪ್ರಸಕ್ತ ಸಾಲಿನ 2022 ರಲ್ಲಿ ಈವರೆಗೆ 621 ರಸ್ತೆ ಅಪಘಾತಗಳು ಸಂಭವಿಸಿದ್ದು, 656 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಶೇ 17 ರಷ್ಟು ರಸ್ತೆ ಗುಂಡಿಯಿಂದ ಅಪಘಾತ ಸಂಭವಿಸಿದ್ದು. ವರ್ಷಕ್ಕೆ ಸರಾಸರಿ 30 ಜನ ರಸ್ತೆ ಗುಂಡಿಗೆ ಬಲಿಯಾಗುತ್ತಿದ್ದಾರೆ.

ರಸ್ತೆ ನಿರ್ಮಿಸುವ ಗುತ್ತಿಗೆದಾರರೇ 5 ವರ್ಷಗಳ ಕಾಲ ರಸ್ತೆ ನಿರ್ವಹಣೆ ಮಾಡಬೇಕು ಎಂಬ ನಿಯಮವಿದೆ. ಆದರೆ, ಇದುವರೆಗೂ ಯಾರೊಬ್ಬ ಗುತ್ತಿಗೆದಾರರು ಇಂತಹ ಕೆಲಸ ಮಾಡಿಲ್ಲ. ರಸ್ತೆ ನಿರ್ಮಿಸಿ ಬಿಲ್ ಮಾಡಿಸಿಕೊಂಡರೆ ಅವರ ಕೆಲಸ ಮುಗಿಯಿತು ಎಂಬಂತೆ ಮತ್ತೆ ಅತ್ತ ತಲೆ ಹಾಕಿ ಮಲಗುತ್ತಿರಲಿಲ್ಲ.ಅಂತಹ ಗುತ್ತಿಗೆದಾರರಿಗೆ ಸ್ಥಳೀಯ ಜನಪ್ರತಿನಿಗಳ ಬೆಂಬಲವಿರುತ್ತಿದ್ದ ಕಾರಣ ಅವರನ್ನು ಯಾರು ಪ್ರಶ್ನಿಸುವಂತಿಲ್ಲ. ಇಂತಹ ಕೆಲವು ತಪ್ಪು ನಿರ್ಧಾರಗಳಿಂದಲೇ ಇಂದಿಗೂ ನಗರದ ರಸ್ತೆಗಳು ಗುಂಡಿ ಮುಕ್ತಗೊಂಡಿಲ್ಲ. ಅದರಿಂದ ಆಗುತ್ತಿರುವ ಸಾವು-ನೋವುಗಳು ತಪ್ಪುತ್ತಿಲ್ಲ ಎನ್ನುವುದು ಮಾತ್ರ ಘನ ಘೋರ ಸತ್ಯ.

ಕಳೆದ 5 ವರುಷದಲ್ಲಿ ಬರೋಬ್ಬರಿ 210 ಕೋಟಿ ರೂಪಾಯಿಯನ್ನು ರಸ್ತೆ ಗುಂಡಿ ತೇಪೆ ಹಚ್ಚಲು ಖರ್ಚು ಮಾಡಲಾಗಿದೆ. ಒಂದೊಂದು ವರ್ಷದಲ್ಲಿ 50 ಸಾವಿರ ಕೋಟಿ ಖರ್ಚು ಮಾಡುತ್ತಿದೆ. ಎಷ್ಟೇ ಹಣ ಸುರಿದರೂ ಬೆಂಗಳೂರಿನಲ್ಲಿ ಗುಂಡಿ ಮಾತ್ರ ಮಾಯವಾಗಿಲ್ಲ. ನಗರದಲ್ಲಿನ ರಸ್ತೆಗುಂಡಿಗಳಿಗೆ ಸರಣಿ ಬಲಿಗಳು ಆಗುತ್ತಲೇ ಇದೆ. ನಾವು ಗುಂಡಿ ಮುಚ್ಚೇ ಬಿಟ್ವಿ ಅಂತ ಸಬೂಬು ಹೇಳುತ್ತಲೇ ಅಮಾಯಕರ ಪ್ರಾಣವನ್ನ ಬಿಬಿಎಂಪಿ ಹಾಗೂ ಗುತ್ತಿಗೆದಾರರು ತೆಗಯುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *