ಮಹೇಶ ಬಳ್ಳಾರಿ, ಕೊಪ್ಪಳ
ಬದುಕ ದಾರಿಗುಂಟ ನಡೆವ ಹಾದಿಯಲ್ಲಿ ಬಂದ ಎಡರು-ತೊಡರುಗಳನ್ನು ದಿಟ್ಟವಾಗಿ ಎದುರಿಸಬೇಕೆಂಬುದನ್ನು ಕಲಿಸಿಕೊಟ್ಟ ಮಹಾತಾಯಿಯ ಕಥೆಯಿದು. ಟೀಕೆಗಳು ಅಪ್ಪಳಿಸಿ, ಎದೆಯ ಭಾರಕ್ಕೆ ಮತ್ತಷ್ಟು ತೂಕ ಹೆಚ್ಚಾದಾಗಲೂ – ತಾನು ಸೋಲುವುದಿಲ್ಲ ಎಂದು ತೋರಿಸಿಕೊಟ್ಟ ಛಲಗಾರ್ತಿಯ ಗಟ್ಟಿತನದ ನೈಜ ದೃಷ್ಟಾಂತವಿದು. ಬಿಡಿಗಾಸಿಗೂ ಪರದಾಡುತ್ತಿದ್ದ ಹೆಣ್ಣುಮಗಳೀಗ ಬರುವ ಸುದ್ದಿ ತಿಳಿದರೆ ಸಾಕು ರೆಡ್ ಕಾರ್ಪೆಟ್ ಹಾಸಿ ಸ್ವಾಗತಿಸುವಷ್ಟು ಖ್ಯಾತಿ ಪಡೆದ ಜಗತ್ತಿನ ಮೊಟ್ಟ ಮೊದಲ ಬಿಲೇನಿಯರ್ ಲೇಖಕಿಯ ಬೌದ್ಧಿಕ ಸಾಧನೆಯಿದು.
ಬರಸಿಡಿಲಿನಂತೆ ಒಂದರ ಮೇಲೊಂದು ಸರತಿ ಸಾಲಲ್ಲಿ ನಿಂತು ದುರಂತ ಪೆಟ್ಟುಗಳು ಬಂದೊದಗಿದರೂ, ತನ್ನವರೆನ್ನಿಸಿಕೊಂಡವರೆಲ್ಲ ಕೈ ಕೊಟ್ಟರೂ, ಬರವಣಿಗೆ ಮಾತ್ರ ಈಕೆಯ ಕೈ ಬಿಡಲಿಲ್ಲ. ಅವಮಾನಗಳ ಸರಣಿಯಲ್ಲಿ ಬದುಕಿನ ದಿಕ್ಕೇ ತಪ್ಪುವ ಸ್ಥಿತಿಯಲ್ಲಿ ಖಿನ್ನತೆ ಅನುಭವಿಸಿ ಆತ್ಮಹತ್ಯೆಗೆ ಯತ್ನಸಿದವಳ ಬದುಕೀಗ ಮುಟ್ಟಿದ್ದೆಲ್ಲ ಬಂಗಾರ.
ಈ ಸಾಧಕಿಯ ಹೆಸರು ಜೆ.ಕೆ. ರೌಲಿಂಗ್. ಬಹುಶಃ ಈಕೆಯ ಹೆಸರು ಗೊತ್ತಿಲ್ಲದಿದ್ದರೂ ಈಕೆ ಬರೆದ ‘ಹ್ಯಾರಿ ಪಾಟರ್’ ಬಹುತೇಕ ಚಿರಪರಿಚಿತವಾಗಿರುತ್ತೆ. ಇದು ಏಳು ವಿಭಿನ್ನ ಸೀರೀಸ್ ಗಳಲ್ಲಿ ಪ್ರಕಟಗೊಂಡ ಮಕ್ಕಳ ಫ್ಯಾಂಟಸಿ ಕಾದಂಬರಿ. ಮುಂದೆ ಇದು ಹಾಲಿವುಡ್ ನ ಹೆಸರಾಂತ ಚಲನಚಿತ್ರ ವೂ ಆಗಿ ಜಗದ ಮನೆ ಮಾತಾಯಿತು.
ಈಕೆ ಹುಟ್ಟಿದ್ದು ಜುಲೈ 31, 1965 ಇಂಗ್ಲೇಂಡಿನಲ್ಲಿ. ಮಧ್ಯಮ ವರ್ಗದ ಪೀಟರ್ ರೌಲಿಂಗ್, ಅನ್ನಾ ರೌಲಿಂಗ್ ದಂಪತಿಗಳ ಮಗಳು.
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಓದುವ ಮಹಾಬಯಕೆ ಹೊತ್ತು ಪ್ರವೇಶ ಪರೀಕ್ಷೆ ಬರೆದು ಅನುತ್ತೀರ್ಣಳಾದರೂ, ಎಕ್ಸಿಟೀರ್ ವಿಶ್ವವಿದ್ಯಾಲಯದಲ್ಲಿ ಶಾಸ್ತ್ರಿಯ ವಿಭಾಗದಲ್ಲಿ ಬ್ಯಾಚುಲರ್ ಪದವಿ ಹೊಂದುತ್ತಾಳೆ.
1990 ರಲ್ಲಿ ನಡೆದ ಸಾಮಾನ್ಯ ಘಟನೆ ಇದು. ಒಮ್ಮೆ ಮ್ಯಾಂಚೆಸ್ಟರ್ ನಿಂದ ಲಂಡನ್ ಗೆ ರೈಲಿನಲ್ಲಿ ಪ್ರಯಾಣಿಸುವಾಗ, ನಿಗದಿತ ಸಮಯಕ್ಕಿಂತ 4 ತಾಸು ವಿಳಂಬವಾಗಿ ರೈಲು ಲಂಡನ್ ತಲುಪಿತು. ರೈಲಿನಲ್ಲಿ 4 ತಾಸು ಹೆಚ್ಚಿಗೆ ಕಳೆಯುವುದೆಂದರೆ ಅದು ಒದ್ದಾಟವೇ ಸರಿ. ಈ ಸಂದರ್ಭದಲ್ಲಿಯೇ ಆಕೆಗೊಂದು ಅದ್ಬುತ ವಿಚಾರ ಹೊಳೆಯಿತು. ಅದುವೇ ‘ಹ್ಯಾರಿ ಪಾಟರ್’!
‘ಹ್ಯಾರಿ ಪಾಟರ್’ ನಂತಹ ಕಲ್ಪನೆಯ ಹುಟ್ಟಿನ ಇದೇ 1990 ಇಸ್ವಿ ಜೆ.ಕೆ. ರೌಲಿಂಗ್ ಬದುಕನ್ನು ಕತ್ತಲೆಗೂ ನೂಕಿತು. ತನ್ನ ಬದುಕಿನ ಬೆಂಗಾವಲ ಬೆಳಕಾಗಿದ್ದ ತಾಯಿ ಆನ್ನೆ ರೌಲಿಂಗ್ ಇದೇ ವರ್ಷದ ಕೊನೆಗೆ ಅಂದರೆ ಡಿಸೆಂಬರ್ 30 ರಂದು ತೀರಿಕೊಂಡ ನಂತರ, ಬಾಳ ನೌಕೆಯು ಪ್ರಪಾತಕ್ಕೆ ಬಿದ್ದು ಆಘಾತ ಅನುಭವಿಸುತ್ತಾಳೆ. ಅಲ್ಲಿಂದ ಆಕೆಯ ಏಕಾಂಗಿ ಹೋರಾಟ ಆರಂಭವಾಗುತ್ತೆ. ತಾಯಿಯಿಲ್ಲದ ಬಾಳಲ್ಲಿ ಕಷ್ಟ – ನಷ್ಟ – ತೊಂದರೆಗಳು ಕಾಡತೊಡಗುತ್ತವೆ. ಒಪ್ಪತ್ತಿನ ಊಟಕ್ಕೂ ಪರದಾಡುವಂತಾಗಿ, ಹೊಟ್ಟೆ ಹೊರೆಯಲು ಪೋರ್ಚುಗಲ್ ದೇಶದ ಪೋರ್ಟೋ ನಗರಕ್ಕೆ ತೆರಳಿ, ಅಲ್ಲಿ ಇಂಗ್ಲೀಷ ಭಾಷೆಯ ಶಿಕ್ಷಕಿಯಾಗಿ ಕೆಲಸಕ್ಕೆ ಸೇರುತ್ತಾಳೆ.
ಇದೇ ಸಂದರ್ಭದಲ್ಲಿ ಕೆಫೆಯೊಂದರಲ್ಲಿ ಪರಿಚಯವಾದ ತನಗಿಂತ ಎರಡು ವರ್ಷ ಸಣ್ಣವನಾದ ಅಲ್ಲಿನ ಟಿ.ವಿ. ಪತ್ರಕರ್ತನೊಬ್ಬನೊಂದಿಗೆ ಪ್ರೇಮಾಕುರವಾಗಿ, ಅವನನ್ನೇ ಮದುವೆಯಾಗುತ್ತಾಳೆ. ಅವನ ಹೆಸರು ಜಾರ್ಜ್ ಅರೇಂಟಿಸ್. ಇವರಿಗೆ ಒಂದು ಹೆಣ್ಣು ಮಗುವೂ ಹುಟ್ಟುತ್ತದೆ. ‘ಜಸ್ಸಿಕಾ’ ಎಂದು ಮಗಳಿಗೆ ಹೆಸರಿಡುತ್ತಾರೆ. ತಾಯಿಯನ್ನು ಕಳೆದುಕೊಂಡು ಕತ್ತಲಾವರಿಸಿದಾಗ ಗಂಡನ ನೆರಳಾದರೂ ಸಿಕ್ಕಿತೆಂದು ನೆಮ್ಮದಿಯ ನಿಟ್ಟುಸಿರು ಬಿಟ್ಟು ಬೆಳಕಿನ ಕರುಣೆಗೆ ಧನ್ಯವಾದ ಸಲ್ಲಿಸುತ್ತಾಳೆ. ಆದರೆ ಈಕೆ ಅಂದುಕೊಂಡತೆ ನಡೆಯುವುದಿಲ್ಲ. ಗಂಡನೊಂದಿಗೆ ನಿರಂತರ ಮನಸ್ತಾಪದಿಂದಾಗಿ ಅಕ್ಟೋಬರ್ 1992 ರಲ್ಲಿ ಆದ ಮದುವೆ ನವಂಬರ್ 1993 ರಲ್ಲಿ ಮುರಿದು ಬಿದ್ದಾಗ ಇವರ ದಾಂಪತ್ಯಕ್ಕೆ ಕೇವಲ 13 ತಿಂಗಳು ತುಂಬಿತ್ತು.
ಇದನ್ನು : ಕೌದಿಯೊಳಗಿನ ಒಂದೊಂದು ಚಿತ್ತಾರಗಳು ಒಂದೊಂದು ಕತೆ ನೆನಪಿಸುತ್ತವೆ
ಗಂಡ ಜಾರ್ಜ್ ಅರೇಂಟಿಸ್ ಮಗಳನ್ನು ಕಸಿದುಕೊಂಡು ರೌಲಿಂಗ್ ಳನ್ನು ಮನೆಯಿಂದ ಹೊರ ಹಾಕುತ್ತಾನೆ. ಆನಂತರ ಪೋಲೀಸರ ಸಹಾಯದಿಂದ ಮಗಳನ್ನು ತೆಗೆದುಕೊಂಡು ಹೊರ ಬಂದಾಗ ಈಕೆಯ ವಯಸ್ಸು ಇಪ್ಪತ್ತೇಳು ಮತ್ತು ಮಗುವಿನ ವಯಸ್ಸು ಕೇವಲ ಎರಡು ತಿಂಗಳು.
ತಾಯಿ ಇಲ್ಲದಾಗ ಬೀದಿಗೆ ಬಂದಿದ್ದ ರೌಲಿಂಗ್, ಇದೀಗ ತಾನು ತಾಯಿಯಾಗಿ ಕಂಕುಳಲ್ಲಿ ಹಸುಗೂಸು ಹೊತ್ತುಕೊಂಡು ಮತ್ತೆ ಬೀದಿಗೆ ಬರುತ್ತಾಳೆ.
ಬರಿಗೈ, ಹಸಿವಿನಿಂದ ಪರಚಾಡುವ ಹಾಲುಗಲ್ಲದ ಮಗಳು, ಕೆಲಸವಿಲ್ಲದ ಪರದಾಟ, ತನ್ನ ಹಸಿವು, ಮನೆಯಿಲ್ಲದೇ ಬೀದಿ ಬದಿ ವಾಸ .. ಹೀಗೆ ದುಗುಡಗಳ ಮಣ ಭಾರ ಹೊತ್ತು ಪೋರ್ಚುಗಲ್ ನ ರಸ್ತೆಯಲ್ಲಿ ಎಲ್ಲಿಗೆ, ಏನು ಅಂತಾ ಗೊತ್ತಿರದೇ ಸಾಗುತ್ತಿದ್ದಾಗ ಸಾಯುವ ನಿರ್ಧಾರಕ್ಕೂ ಬಂದಳು. ಆದರೆ ಅವಳಲ್ಲಿನ ಅದಮ್ಯ ಚೈತನ್ಯ, ಬಾಲ್ಯದಿಂದಲೂ ಮೈಗೂಡಿಸಿಕೊಂಡಿದ್ದ ಸೃಜನ ಶೀಲ ವೈಚಾರಿಕತೆ ಈಕೆಯನ್ನು ಗಟ್ಟಿಯಾಗಿಸಿತು. ಪೋರ್ಚುಗಲ್ ಬಿಟ್ಟು ವಾಪಸ್ ಇಂಗ್ಲೇಂಡ್ ವಿಮಾನ ಹತ್ತುವಾಗ ನಿರಂತರವಾಗಿ ಆಕೆ ಅನುಭವಿಸಿದ ಹಿಂಸೆ, ತಿರಸ್ಕಾರಗಳು ಕಣ್ಣೀರ ಮೂಲಕ ಹೊರ ಬರುತ್ತಿದ್ದವು.
ಸರಕಾರದ ಸೌಲಭ್ಯಗಳೇ ಈಕೆಯ ಜೀವನೋಪಾಯಕ್ಕೆ ಆಧಾರಗಳಾದವು. ರೌಲಿಂಗ್ ಳಲ್ಲಿ ಕಥೆಯ ಹುಚ್ಚು ಬಾಲ್ಯದಲ್ಲಿಯೇ ಮೈಗೂಡಿತ್ತು. ಆರು ವರ್ಷ ಇದ್ದಾಗಲೇ ಫ್ಯಾಂಟಸಿ ಕತೆಯೊಂದನ್ನು ಬರೆದಿದ್ದಳು ! ಸಹೋದರಿ, ತಾಯಿ ಈಕೆಯ ಕಥೆಗಳನ್ನು ಮೆಚ್ಚಿದ್ದರು.
‘ಹ್ಯಾರಿ ಪಾಟರ್’ ಕಥೆ ಹೊಳೆದಾಗ ಅಲ್ಲಲ್ಲಿ ಟಿಪ್ಪಣಿ ಮಾಡಿಕೊಳ್ಳುತ್ತಿದ್ದಳು. ‘ಹ್ಯಾರಿ ಪಾಟರ್’ ನ ಬಹುತೇಕ ಭಾಗವನ್ನು ಈಕೆ ತುಂಡು ಹಾಳೆಗಳಲ್ಲಿಯೇ ಬರೆದಿಟ್ಟುಕೊಂಡಿದ್ದಳು. ತಾಯಿ ತೀರಿ ಆರು ತಿಂಗಳ ನಂತರ ಈ ಕಾದಂಬರಿ ಬರೆಯಲು ಆರಂಭಿಸಿದ್ದಳು. 1990 ರ ನಂತರ ಬರೆಯಲು ಆರಂಭಿಸಿದ ಕಥೆ ಪೋರ್ಚುಗಲ್ ನಲ್ಲಿಯೂ ಮುಂದುವರೆದಿತ್ತು. ಈಕೆ ಪೋರ್ಚುಗಲ್ ನಿಂದ ವಾಪಸ್ ಮಗಳೊಂದಿಗೆ ಬರುವಾಗ ಆಕೆಯ ಲಗೇಜ್ ನಲ್ಲಿ ‘ಹ್ಯಾರಿ ಪಾಟರ್’ನ ಮೊದಲ ಮೂರು ಅಧ್ಯಾಯಗಳ ಹಾಳೆಗಳಿದ್ದವು!
ಇದನ್ನು ಓದಿ : ಮಣ್ಣಿನಿಂದಲೇ ಬದುಕು ಕಟ್ಟಿಕೊಂಡ ಛಲವಾದಿ ನೀಲಿ ಲೋಹಿತ್
ಮನೆಯಿಲ್ಲದೇ, ಹಣ ಇಲ್ಲದೇ ಸರಿಯಾದ ಕೆಲಸವೂ ಇಲ್ಲದೇ ಮಗಳನ್ನು ಸಲಹುತ್ತ ಜೀವನ ನಡೆಸುವುದೆಂದರೆ ಒಂದು ಹೆಣ್ಣು ಜೀವಕ್ಕೆ ಸವಾಲೇ ಸರಿ. ಸ್ನೇಹಿತರಿಂದ, ಸಂಬಂಧಿಕರಿಂದ ಅಲ್ಪ ಸ್ವಲ್ಪ ನೆರವು ದೊರೆತರೂ ಈಕೆಯ ಬದುಕ ತೇರಿನ ಗಾಲಿಗಳು ಕುಸಿಯುತ್ತಲೇ ಇದ್ದವು. ಇಷ್ಟಾದರೂ ಆಕೆ ತನ್ನ ಅದ್ಬುತ ಪರಿಕಲ್ಪನೆ ಮತ್ತು ಬರವಣಿಗೆಯನ್ನು ನಿಲ್ಲಿಸಲಿಲ್ಲ. ಅದ್ಯಾವ ಆಸೆ, ಆಕಾಂಕ್ಷೆ, ಮಹತ್ವಾಕಾಂಕ್ಷೆಗಳಿದ್ದವೋ ಆಕೆಗೆ ತನ್ನ ಬರವಣಿಗೆಯ ಮೇಲೆ !
ಕೆಲಸದ ನಡು-ನಡುವೆ, ಸಮಯ ಸಿಕ್ಕಾಗಲೆಲ್ಲ ಸ್ಕಾಟ್ಲೆಂಡ್ ನ ಈಡಿನ್ ಬರ್ಗ ನ ರಸ್ತೆಯ ಬದಿಯಲ್ಲಿ ಕುಳಿತು ಈಕೆ ಬರೆಯುವುದನ್ನು ನೋಡಿ ‘ಹುಚ್ಚಿ ಏನೋ ಬರೆಯುತ್ತಿದ್ದಾಳೆಂದು’ ಜನ ಮೂಗು ಮುರಿದರು. ಅಪಹಾಸ್ಯ ಮಾಡಿದರು. ಸಿಕ್ಕ ಸಿಕ್ಕ ತುಂಡು ಹಾಳೆಗಳ ಮೇಲೆ ಗೀಚುವುದ ಕಂಡು ಗೊಳ್ಳನೇ ನಕ್ಕರು. ಈಡಿನ್ ಬರ್ಗ್ ನ ರಸ್ತೆಯಲ್ಲಿನ ಒಂದು ಹೋಟೆಲ್ ‘ದಿ ಎಲಿಫೆಂಟ್ ಕೆಫೆ’ಯ ಹಿಂಭಾಗದ ಗೋಡೆಗೆ ಒರಗಿ ಈಕೆ ಬರೆದ ಕಾದಂಬರಿ ಇದು.
ಕೂಲಿಯಾಗಿ, ಶಿಕ್ಷಕಿಯಾಗಿ, ಮನೆಗೆಲಸ ಮಾಡಿ, ಹೋಟೆಲ್ ನಲ್ಲಿ ಮಾಣಿಯಾಗಿ ಕೆಲಸ ಮಾಡುತ್ತ – ಬಿಡುವಿನ ಸಮಯದಲ್ಲಿ ಅವೇ ತುಂಡು ಹಾಳೆಗಳ ಮೇಲೆ ಬರೆದು ಮುಗಿಸಿದ ಕಾದಂಬರಿಯನ್ನು ಪ್ರಕಟಿಸುವ ಇರಾದೆ ವ್ಯಕ್ತಪಡಿಸಿದಾಗಲೂ ಇದೇ ಜನತೆ ಆಕೆಯನ್ನು ಅಣಕಿಸಿತು. ‘ಕೆಲಸದಾಳು ಲೇಖಕಿಯಾಗುತ್ತಾಳಂತೆ’ ಎಂದು ಜರಿದರು.
ಇದನ್ನು ಓದಿ: ಕಡಲೆಕಾಯಿ ವ್ಯಾಪಾರ ಮಾಡಿ ಜೀವನ ಸಾಗಿಸುವ ನಿಂಗಮ್ಮ
1997 ರಲ್ಲಿ ಕಾದಂಬರಿ ಯ ಕೊನೆಯ ಭಾಗ ಮುಗಿಸಿ ಹುಚ್ಚಿಯಂತೆ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಗಳಿಗೆ ಅಲೆದಾಡಿದಳು. ಮುದ್ರಣಕ್ಕಾಗಿ ಗೋಗರೆದಳು. ಈಕೆಯ ಆಕಾರ, ಹಸ್ತಪ್ರತಿಯ ಆಕಾರ ನೋಡಿ ಒಂದಲ್ಲ – ಎರಡಲ್ಲ : ಹನ್ನೆರಡು ಪ್ರಕಾಶನ ಸಂಸ್ಥೆ ಗಳು ‘ಹ್ಯಾರಿ ಪಾಟರ್’ ನನ್ನು ತಿರಸ್ಕರಿಸಿದರು. ಕೊನೆಗೆ ಲಂಡನ್ನಿನ ‘ಬ್ಲೂಮ್ಸ್ ಬರಿ’ ಎಂಬ ಸಣ್ಣ ಪ್ರಕಾಶನದ ಸಂಸ್ಥೆಯ ಮಾಲೀಕರೊಬ್ಬರು ತಮ್ಮ ಮುದ್ದುಮಗಳ ಒತ್ತಾಯಕ್ಕಾಗಿ ಈ ಕಾದಂಬರಿ ಪ್ರಕಟಿಸಿದರು. ಹ್ಯಾರಿ ಪಾಟರ್ ನ ಫ್ಯಾಂಟಸಿ ಆ ಮಗುವಿಗೆ ಇಷ್ಟವಾಗಿತ್ತು. ಹೀಗಾಗಿ ತಂದೆಯು ಮಗಳ ಕಥಾ ಕುತೂಹಲಕ್ಕಾಗಿ ಪ್ರಕಟಿಸಲು ಒಪ್ಪಿದ್ದರು.
ಜೀವನದ ಎಲ್ಲ ಘಟ್ಟಗಳಲ್ಲಿಯೂ ನೋವು, ಅಪಮಾನಗಳನ್ನು ಕಟ್ಟಿಕೊಂಡೇ ಬೆಳೆದ ರೌಲಿಂಗ್ ಳ ಹೃದಯ ನೆಮ್ಮದಿಯ ನಾಳೆಗಳಿಗಾಗಿ ಬಡಬಡಿಸುತ್ತಿತ್ತು. ತನ್ನನ್ನು ಜರಿದವರನ್ನು ಮೀರಿ ಬೆಳೆಯುವ ಹಂಬಲವಿತ್ತು.
ಅಲ್ಲಿಗೆ ಜೆ.ಕೆ. ರೌಲಿಂಗ್ ಜೊತೆಗೆ ಆ ಪ್ರಕಾಶನ ಸಂಸ್ಥೆಯ ದಿಕ್ಕೇ ಬದಲಾಯಿತು. ಸಾಮಾನ್ಯ ಮಹಿಳೆಯೊಬ್ಬಳು ಜಗತ್ತಿನ ಮೊಟ್ಟಮೊದಲ ಬಿಲೇನಿಯರ್ ಆದಳು. ಒಂದು ಸಾಮಾನ್ಯ ಪ್ರಕಾಶನ ಸಂಸ್ಥೆ ‘ಬ್ಲೂಮ್ಸ್ ಬರಿ’ ಇದೀಗ ಜಗತ್ತಿನ ಹೆಸರಾಂತ, ಶ್ರೀಮಂತ ಪ್ರಕಾಶನ ಸಂಸ್ಥೆಗಳಲ್ಲಿ ಒಂದಾಯಿತು.
‘ಹ್ಯಾರಿ ಪಾಟರ್ ಆ್ಯಂಡ್ ದ ಫಿಲಾಸಫಿಕಲ್ ಸ್ಟೋನ್’ ರೌಲಿಂಗ್ ಳ ಮೊದಲ ಮಕ್ಕಳ ಮಹಾಕೌತುಕ ಕಾದಂಬರಿಗೆ ಅದೆಷ್ಟು ಶಕ್ತಿ ಇತ್ತೆಂದರೆ ಜಗತ್ತಿನಾದ್ಯಂತ ಈ ಪುಸ್ತಕ ದಾಖಲೆಯ ಮಾರಾಟ ಕಂಡಿತು. ದಾಖಲೆಯ ಮಾರಾಟ ಎಂದರೆ ಐವತ್ತು ಕೋಟಿ ಪುಸ್ತಕಗಳು. ಹೊಸ ತಲ್ಲಣ, ಸಂಚಲನ ಸೃಷ್ಟಿಸಿದ ‘ಹ್ಯಾರಿಪಾಟರ್’ ಮೊದಲ ಸೀರೀಸ್ ಕೊಂಡುಕೊಳ್ಳಲು ಜಗತ್ತಿನ ಮೂಲೆ ಮೂಲೆಯಿಂದ ಸರದಿ ಸಾಲು ಆರಂಭವಾಯಿತು. ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಜೆ.ಕೆ. ರೌಲಿಂಗ್ ಳನ್ನು ಹುಡುಕಿಕೊಂಡು ಬಂದವು.
1997 ರ ಮೊದಲ ಸೀರಿಸ್ ಯಶಸ್ಸಿನ ನಂತರ 2007 ನೇ ಇಸವಿ ತನಕ ಜೆ.ಕೆ. ರೌಲಿಂಗ್ ‘ಹ್ಯಾರಿ ಪಾಟರ್’ ನ ಏಳು ಸೀರೀಸ್ ಗಳನ್ನು ಬರೆದರು. ಜಗತ್ತಿನ ವಿವಿಧ 70 ಕ್ಕೂ ಹೆಚ್ಚು ಭಾಷೆಗಳಿಗೆ ಈ ಕೃತಿ ಅನುವಾದವಾಯಿತು. ‘ಹ್ಯಾರಿ ಪಾಟರ್’ ಇಡೀ ಸರಣಿ ಆಕೆಯನ್ನು ಬಿಲೇನಿಯರ್ ಮಾಡಿತು. ಪೆನ್ನಿನ ಮಸಿಗಿರುವ ಸಾಮರ್ಥ್ಯ ಅರಿಯಲು ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ತೆರೆಯ ಮೇಲೆಯೂ ‘ಹ್ಯಾರಿ ಪಾಟರ್’ ಚಿತ್ರ ಯಶಸ್ಸು ಕಂಡಿತು. ವಿಡಿಯೋ ಗೇಮ್ ಮೂಲಕವೂ ‘ಹ್ಯಾರಿ ಪಾಟರ್’ ಜಗತ್ತಿನ ಮಕ್ಕಳ ಕೈಯಲ್ಲಿ ಹರಿದಾಡಿತು.
ಇದನ್ನು ಓದಿ: 5000 ಕ್ಕಿಂತಲೂ ಹೆಚ್ಚು ಅನಾಥ ಶವಗಳ ಸಂಸ್ಕಾರ ಮಾಡಿರುವ ಆಶಾ
ಬಡತನದ ಬೇಗೆಯಲ್ಲಿ ಕುದಿಯುತ್ತಿದ್ದ ಜೆ.ಕೆ. ರೌಲಿಂಗ್ ಯುನೈಟೆಡ್ ಕಿಂಗ್‍ಡಮ್ ನ 12 ನೇ ಶ್ರೀಮಂತ ಮಹಿಳೆಯಾದಳು. 2010 ರ ಸಾಲಿನ ‘ಪ್ರಭಾವಿ ಬ್ರಿಟನ್ ಮಹಿಳೆ’ ಗೌರವಕ್ಕೆ ಪಾತ್ರಳಾದಳು.
ರಸ್ತೆ ಬದಿಯಲ್ಲಿ ಕುಳಿತು ಬರೆಯುವಾಗ ಅಣಕಿಸಿದವರೆದುರು ಅದೇ ರಸ್ತೆಯಲ್ಲಿ ರೌಲಿಂಗ್ ಳಿಗೆ ಭವ್ಯ ಸ್ವಾಗತ ಕೋರುವಂತಾಯಿತು. ಆಕೆ ಕುಳಿತು ಬರೆದ ‘ದಿ ಎಲಿಫೆಂಟ್ ಕೆಫೆ’ಯ ಆ ಜಾಗ ಇದೀಗ ಐತಿಹಾಸಿಕ ಸ್ಥಳದಂತಾಗಿದೆ. ‘ಜೆ.ಕೆ. ರೌಲಿಂಗ್ – ಹ್ಯಾರಿಪಾಟರ್ ಕಾದಂಬರಿ ಬರೆದ ಜಾಗ’ ಎಂದು ದೊಡ್ಡ ಬೋರ್ಡೊಂದನ್ನು ಅಲ್ಲಿ ಹಾಕಲಾಗಿದೆ. ಆಕೆ ಕುಳಿತು ಬರೆದ ಜಾಗ ನೋಡಲಿಕ್ಕೇ ಸಾವಿರಾರು ಜನ ದಿನವೊಂದಕ್ಕೆ ಬರ್ತಾರಂತೆ ! ಇದಕ್ಕಿಂತ ಹೆಚ್ಚಿನ ಗೌರವ ಬಹುಶಃ ಇನ್ನೊಂದಿರಲಿಕ್ಕಾಗದು.
ತಿರಸ್ಕಾರದ ಬಾಣಲೆಯಲ್ಲಿ ಬೆಂದವರು ಪುರಸ್ಕಾರದ ಮಹಾಗೌರವ ಹೊಂದುತ್ತಾರೆನ್ನುವುದಕ್ಕೆ ಜೆ.ಕೆ. ರೌಲಿಂಗ್ ನಮಗೆಲ್ಲ ಮಾದರಿಯಾಗುತ್ತಾಳೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ