ಗುರುರಾಜ ದೇಸಾಯಿ
ಇದು ಮುಂಗಾರು ಹಂಗಾಮಿನ ಕಾಲ, ಬಿತ್ತನೆ ಕಾರ್ಯ ಆರಂಭವಾಗಿದೆ. ರಸಗೊಬ್ಬರಗಳು ಹೆಚ್ಚು ಅಗತ್ಯವಿರುವ ಸಮಯ ಇದು. ಬಿತ್ತನೆ ಮಾಡಿದ ನಂತರ ಉತ್ತಮ ಮಳೆಯಾದಾಗ ಸಕಾಲಕ್ಕೆ ರಸಗೊಬ್ಬರ ಹಾಕಿದರೆ ಉತ್ತಮ ಫಸಲು ಸಿಗುತ್ತದೆ ಎಂಬ ನೀರೀಕ್ಷೆ ರೈತ ಸಮುದಾಯದ್ದು. ಆದರೆ, ರಸಗೊಬ್ಬರ ಪೂರೈಕೆಯಲ್ಲಿ ತೀವ್ರ ಕೊರತೆಯಾಗಿದೆ. ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂಬ ದೂರುಗಳು ರಾಜ್ಯವ್ಯಾಪಿ ಕೇಳಿ ಬರುತ್ತಿವೆ.
ಜೂನ್ ಮತ್ತು ಜುಲೈನಲ್ಲಿ ಗೊಬ್ಬರ ಬೇಡಿಕೆಯು ಅತ್ಯಧಿಕವಾಗಿರುತ್ತದೆ. ಒಂದೆಡೆ ರಸಗೊಬ್ಬರದ ದರ ಹೆಚ್ಚಳದ ಬರೆ ಒಂದೆಡೆಯಾದರೆ, ಪೊರೈಕೆಯಲ್ಲಾಗುತ್ತಿರುವ ವ್ಯತ್ಯಾಸ ರೈತರ ನಿದ್ದೆಗೆಡಿಸಿದೆ. ಹಲವೆಡೆಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಪೊರೈಕೆಯಾಗಿದ್ದ ರಸಗೊಬ್ಬರ ಬಂದಷ್ಟೆ ವೇಗದಲ್ಲಿ ಖಾಲಿಯಾಗಿದೆ. ಇನ್ನೂ ಕೆಲವೆಡೆ ದಾಸ್ತಾನುಗಳಲ್ಲಿ ಸ್ಟಾಕ್ ಇಲ್ಲ ಒಂದುವಾರ ಬಿಟ್ಟು ಬನ್ನಿ ಎಂದು ಹೇಳಲಾಗುತ್ತಿದೆ. ಇದು ಕಾಳಸಂತೆಯಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟಿದೆ. ಪೊರೈಕೆಯ ಕೊರತೆಯನ್ನು ಲಾಭವಾಗಿಸಿದ ಕೆಲ ಖಾಸಗಿ ಗೊಬ್ಬರ ಅಂಗಡಿಗಳು ಹಾಗೂ ದಲಾಲಿ ಅಂಗಡಿಗಳು ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿದ್ದಾರೆ.
ದಲಾಲಿ / ಖಾಸಗಿ ಅಂಗಂಡಿಯಲ್ಲಿ ಡಬಲ್ ದರ : ‘ರೈತರಿಗೆ ಅಗತ್ಯವಿದ್ದಾಗ ಯೂರಿಯಾ ಸಿಗಬೇಕು. ಬೇಡವಾದ ಸಮಯದಲ್ಲಿ ಬಳಸಿದರೆ ಅದು ಉಪಯೋಗಕ್ಕೆ ಬಾರದು. ಇದನ್ನೆ ದಲಾಲಿ ಹಾಗೂ ಖಾಸಗಿ ಅಂಗಡಿಗಳು ಲಾಭವಾಗಿಸಿಕೊಳ್ಳುತ್ತಿವೆ. ಸೊಸೈಟಿಯಲ್ಲಿ ಗೊಬ್ಬರ ಕೊರತೆ ಇರುವುದನ್ನು ಖಚಿತಪಡಿಸಿಕೊಂಡ ಇವರು ರೈತರಿಗೆ ದುಪ್ಪಟ್ಟು ದರದಲ್ಲಿ ಮಾರಾಟ ಮಾಡುತ್ತಾರೆ. ಉಳುಮೆಗೆ ಬೇಕಾದ ಎಲ್ಲಾ ಬೆಳೆಗಳನ್ನೂ ಇವರಲ್ಲಿಯೇ ಖರೀದಿ ಮಾಡಬೇಕು. ಬೆಳದ ಬೆಳೆಯನ್ನು ಇವರ ಅಂಗಡಿಯಲ್ಲೆ ಮಾರಾಟ ಮಾಡಬೇಕು ಎಂಬ ಮೌಖಿಕ ಷರತ್ತಿನೊಂದಿಗೆ ರಸಗೊಬ್ಬರ ನೀಡುತ್ತಿರುವ ಉದಾಹರಣೆಗಳು ಕಂಡು ಬರುತ್ತಿವೆ.
ಹೆಚ್ಚುದರ ಪಡೆದಲ್ಲಿ ಕಾನೂನು ಕ್ರಮ ಜರುಗಿಸುವುದಾಗಿ ಕೃಷಿ ಸಚಿವರು ಮತ್ತು ಕೃಷಿ ಇಲಾಖೆ ಹೇಳುತ್ತಿದೆ. ಅದು ಕಾಗದಕ್ಕೆ ಮಾತ್ರ ಸೀಮಿತವಾಗಿದೆ. ಖಾಸಗಿ ರಸಗೊಬ್ಬರ ಅಂಗಡಿಗಳು ದುಪ್ಪಟ್ಟು ಹಣ ಪಡೆಯುತ್ತಿವೆ ಎಂಬುದು ಕೃಷಿ ಸಚಿವರಿಗೂ, ಇಲಾಖೆಗೂ ಗೊತ್ತಿದೆ. ಆದರೂ ಗೊತ್ತಿಲ್ಲದವರಂತೆ ನಟಿಸುತ್ತಿದ್ದಾರೆ. ಕೃಷಿ ಚಟುವಟಿಕೆ ಚುರುಕಾಗಿರುವ ಕಾರಣ ರೈತರು ಇದ್ಯಾವುದನ್ನು ಪ್ರಶ್ನಿಸದೆ ಅನಿವಾರ್ಯವಾಗಿ ಹೆಚ್ಚುವರಿ ಹಣ ನೀಡಿ ರಸಗೊಬ್ಬರ ತರುತ್ತಿದ್ದಾರೆ. ಕೆಲ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆಯಾದರೂ ಸರಕಾರದ ಮೇಲೆ ಗಂಭೀರ ಪರಿಣಾಮ ಬೀರಿಲ್ಲ.
ರಸಗೊಬ್ಬರ ಕೊರತೆ ಇದೆ, ಇಲ್ಲ ಎಂಬ ಆಟ : ಸತತ ಮಳೆ ನಂತರ ಬೆಳೆಗಳಿಗೆ ತತಕ್ಷಣದ ಪೋಷಕಾಂಶವಾಗಿ ಯೂರಿಯಾ ಗೊಬ್ಬರ ನೀಡಬೇಕಿದೆ. ಈ ಕಾರಣಕ್ಕೆ ರೈತರು ಗೊಬ್ಬರ ಪಡೆಯಲು ಕಳೆದ ಒಂದು ವಾರದಿಂದ ಪ್ರಯತ್ನಿಸುತ್ತಿದ್ದಾರೆ. ಆದರೂ ಸಮರ್ಪಕವಾಗಿ ಗೊಬ್ಬರ ಸಿಗುತ್ತಿಲ್ಲ. ಕಳೆದು ಮೂರು ದಿನಗಳಿಂದ ಖಾಸಗಿ ಅಂಗಡಿಗಳ ಮುಂದೆ ಸರತಿ ನಿಲ್ಲುತ್ತಿರುವ ರೈತರು, ಗೊಬ್ಬರ ಬಾರದೆ ನಿರಾಸೆಯಿಂದ ಮನೆಗೆ ವಾಪಸ್ ಹೋಗಿರುವ ಘಟನೆಗಳು ನಡೆಯುತ್ತಿವೆ.
ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲ, ರೈತರು ಯಾವುದೇ ಅಪಪ್ರಚಾರಕ್ಕೆ ಒಳಗಾಗಬೇಡಿ. ಮುಂಗಾರು ಹಂಗಾಮಿಗೆ 26.76 ಲಕ್ಷ ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳ ಬೇಡಿಕೆ ಇದ್ದು, ಕೇಂದ್ರ ಸರ್ಕಾರ ಇದರ ಅನುಗುಣವಾಗಿ ಮಾಹೆವಾರು ರಾಜ್ಯಕ್ಕೆ ಹಂಚಿಕೆ ಮಾಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ. ಏಪ್ರಿಲ್ನಿಂದ ಜೂನ್‌ವರೆಗೂ ವಿವಿಧ 12.5 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರಗಳ ಬೇಡಿಕೆ ಇದ್ದು, ಇಲ್ಲಿಯವರೆಗೆ 14.51 ಲಕ್ಷ ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳ ಸರಬರಾಜಾಗಿದೆ. ಅದರಲ್ಲಿ 7.34 ಲಕ್ಷ ಮೆಟ್ರಿಕ್ ಟನ್ ವಿತರಣೆಯಾಗಿದೆ. ಜಿಲ್ಲೆಗಳಲ್ಲಿ 7.16 ಲಕ್ಷ ಮೆಟ್ರಿಕ್ ಟನ್ ವಿವಿಧ ಗ್ರೇಡ್ಗಳ ರಸಗೊಬ್ಬರ ದಾಸ್ತಾನು ಇದೆ ಎಂಬುದು ಸರಕಾರದ ವಾದ. ಆದರೆ ಗೋದಾಮುಗಳಲ್ಲಿ ಸ್ಟಾಕ್ ಇಲ್ಲ ಎಂಬ ವರದಿಗಳು ಇದೇ ವೇಳೆ ಕೇಳಿ ಬರುತ್ತಿವೆ. ಇದೆ, ಇಲ್ಲ ಎಂಬ ಆಟದ ನಡುವೆ ರೈತ ದಿನನಿತ್ಯ ರಸಗೊಬ್ಬರ ಅಂಗಡಿಗಳಿಗೆ ಅಲಿದು ಅಲಿದೂ ಸುಸ್ತಾಗುತ್ತಿದ್ದಾನೆ.
50 ಮೂಟೆ ಅವಶ್ಯವಿರುವ ರೈತರಿಗೆ 10 ಮೂಟೆ ಮಾತ್ರ ಸಿಗುತ್ತಿದೆ. ಹೀಗಾದರೆ ಕೃಷಿ ಚಟುವಟಿಕೆಗಳಲ್ಲಿ ಮುಂದುವರಿಯುವುದು ಹೇಗೆ ಎಂಬುದು ಕೊಪ್ಪಳದ ರೈತ ಏಳುಕೋಶ್‌ರವರ ಪ್ರಶ್ನೆ.ಯಾಗಿದೆ. ರೈತರಿಗೆ ಅಗತ್ಯವಿದ್ದಾಗ ಯೂರಿಯಾ ಸಿಗಬೇಕು. ಬೇಡವಾದ ಸಮಯದಲ್ಲಿ ಯೂರಿಯಾ ನೀಡಿದರೆ ಉಪಯೋಗವಿಲ್ಲ. ರೈತರಿಗೆ ಪ್ರತಿ ವರ್ಷ ಇಷ್ಟು ಗೊಬ್ಬರ ಬೇಕೆಂದು ಅಂದಾಜು ಇಟ್ಟುಕೊಂಡು ತರಿಸುವ ವ್ಯವಸ್ಥೆ ಮಾಡಬೇಕಿತ್ತು. ಮಳೆ ಕೈಕೊಡುತ್ತಿದೆ ಎಂದು ಸ್ಪ್ರಿಂಕ್ಲರ್ ಜೆಟ್ ಬಳಸಿ ಬೆಳೆಗೆ ನೀರುಣಿಸುತ್ತಿವೆ. ಕೃಷಿ ಇಲಾಖೆ ಮತ್ತು ಸರಕಾರ ರೈತರ ಜೊತೆ ಆಟವಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಸಬ್ಸಿಡಿದರದಲ್ಲಿ ರಸಗೊಬ್ಬರ ಸಿಗುತ್ತದೆ ನಿಜ, ಆದರೆ ಅಲ್ಲಿ ಸ್ಟಾಕ್ ಇರುವುದಿಲ್ಲ. ಅನಿವಾರ್ಯವಾಗಿ ಖಾಸಗಿ ಅಂಗಡಿಗಳಲ್ಲಿ ದುಪ್ಪಟ್ಟು ಹಣ ನೀಡಿ ಪಡೆಯುತ್ತಿದ್ದೇವೆ ಎಂದು ಇಲಕಲ್‌ನ ರೈತ ಸತ್ಯಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಸಾಲ ಮಾಡಿ ಬೀಜ ಹಾಕಿ ಉಳಿಮೆ ಮಾಡುತ್ತಿದ್ದೇವೆ. ಹೆಚ್ಚು ಕಡಿಮೆ ಒಂದು ತಿಂಗಳ ಅವಧಿಯ ಸೆಜ್ಜಿ, ಜೋಳ, ಹಾಗೂ ಗೋವಿನಜೋಳದ ಬೆಳೆಗಳು ಗೇಣುದ್ದ ಬೆಳೆದು ನಿಂತಿವೆ. ಬೆಳೆಯ ಕಸುವನ್ನು ಹೆಚ್ಚಿಸಲು ರಸಗೊಬ್ಬರ ನೀಡಲೇಬೇಕು. ರೈತರು ಸಾಲದ ಮೇಲೆ ಸಾಲ ಮಾಡುವ ಸ್ಥಿತಿಯನ್ನು ಸರಕಾರ ನಿರ್ಮಾಣ ಮಾಡಿದೆ. ಒಳ್ಳೆಯ ದಿನಗಳನ್ನು ಕೊಡುತ್ತೇವೆ ಎಂದವರು ಈಗ ನಮ್ಮನ್ನು ಕಷ್ಟದ ದಿನಗಳತ್ತ ತಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸಗೊಬ್ಬರವನ್ನು ಸಮರ್ಪಕವಾಗಿ ಹಂಚದೆ ಇರುವುದು ಈ ಸಮಸ್ಯೆಗೆ ಕಾರಣ ಎಂದು ರಸಗೊಬ್ಬರ ಅಂಗಡಿಯ ಮಾಲಿಕ ದೇವಪ್ಪಗೌಡ ಹೇಳುತ್ತಾರೆ. ಒಂದು ಪ್ರದೇಶದಲ್ಲಿ ಡಿಎಪಿ ಹೆಚ್ಚು ಬಳಸಿದರೆ ಇನ್ನೊಂದು ಪ್ರದೇಶದಲ್ಲಿ ಯೂರಿಯಾ ಹೆಚ್ಚು ಬಳಸುತ್ತಾರೆ. ಆದರೆ ದಾಸ್ತಾನಗಳಲ್ಲಿ ಎರಡು ಸರಿಯಾದ ಪ್ರಮಾಣದಲ್ಲಿ ಇರುವುದಿಲ್ಲ. ಕೃಷಿ ಇಲಾಖೆಯ ಅಧಿಕಾರಿಗಳು ಯಾವ ಭಾಗಕ್ಕೆ ಯಾವ ಗೊಬ್ಬರ ಹೆಚ್ಚು ಬಳಸುತ್ತಾರೆ ಎಂಬುದನ್ನು ಅರಿತು ಸರಬರಾಜು ಮಾಡುವ ಕೆಲಸ ಮಾಡಬೇಕಿದೆ. ಆನ್‌ಲೈನ್ ಲಿಂಕ್ ಮಾಡಿರುವ ಕಾರಣವೂ ಕೊರತೆ ಉಂಟಾಗುತ್ತಿದೆ ಎಂಬುದು ದೇವಪ್ಪಗೌಡರ ವಾದವಾಗಿದೆ.
ಇನ್ನಾದರೂ ಸರಕಾರ ತಾನೂ ರೈತಪರ ಎಂದು ಬಡಾಯಿ ಕೊಳ್ಳುವುದನ್ನು ನಿಲ್ಲಿಸಿ, ಅವರಿಗೆ ಅಗತ್ಯವಾಗಿ ಬೇಕಾದ ಬೀಜ, ಗೊಬ್ಬರಗಳನ್ನು ವಿತರಿಸುವ ಕೆಲಸ ಮಾಡಬೇಕಿದೆ. ರೈತ ಬೆಳದರೆ ಅನ್ನ, ಇಲ್ಲವಾದಲ್ಲ ರಾಜ್ಯದ ಜನ ಹೊಟ್ಟೆಗೆ ಮಣ್ಣು ತಿನ್ನಬೇಕಾಗುತ್ತದೆ ಎಂಬುದನ್ನು ಸರಕಾರ ಅರಿಯಬೇಕಿದೆ.
ಬಿ.ಸಿ.ಪಾಟೀಲ ಸಾಹೇಬರೇ ದಲ್ಲಾಳಿಗಳ ಅಂಗಡಿ
ಚೆಕ್ ಮಾಡೋಕೆ ಹೇಳಿ ನಿಮ್ಮ ಅಧಿಕಾರಿಗಳಿಗೆ
ರೈತರಿಗೆ ಸಿಗ್ತಾ ಇಲ್ಲ ಗೊಬ್ಬರ ನಾನು ಒಬ್ಬ ರೈತನ
ಮಗನೇ ದಲ್ಲಾಳಿಗಳ ಅಂಗಡಿಗೆ ನಿಮ್ಮ ಇಲಾಖೆ ಅಧಿಕಾರಿಗಳೆ ಲೋಡ್ ಗಟ್ಟಲೆ ಸಾಗಿಸುತ್ತಿದ್ದಾರೆ
ಕಮಿಷನ್ ಗೊಸ್ಕರ D A P ನಮಗೂ ಇನ್ನೂ
ಸಿಗ್ತಾ ಇಲ್ಲ ವಾರ ಆಗುತ್ತೆ ಬರೋಕೆ ಎಂದು ಹೇಳಿ
ಕಳಿಸುತ್ತಾರೆ. ಹೊರಗಡೆ DAPಗೆ
Rs.1650 ರಿಂದ Rs.1800 ಹೇಳ್ತಾರೆ
ರೈತರನ್ನು ಉಳಿಸಿ ಕೃಷಿ ಇಲಾಖೆ ಸಚಿವರೆ
ನಿಮ್ಮನ್ನು ಉಳಿಸಿಕೊಳ್ಳುತ್ತಾರೆ ರೈತರು.🙏
D A P ಜೊತೆಯಲ್ಲಿ ಬೆರೆ ಗೊಬ್ಬರ ತೆಗೆದುಕೊಂಡರೆ ಮಾತ್ರ D A P ಇಲ್ಲ .