ರೇಪ್‌ ಮರ್ಡರ್‌ ಅಂಡ್ ಷೂಟೌಟ್‌ !

ಕೊಲೆಪಾತಕಿ ವಿಕೃತಕಾಮಿಯನ್ನು ಹೊಡೆದುರುಳಿಸಿದ ಲೇಡಿ ಸಿಂಗಂ ವಿರುದ್ದ ವಿಚಾರಣೆಗೆ ಆರ್ಡರ್‌ ಆಗಿದೆ. ಸುಪ್ರೀಂ ನೀಡಿರುವ ಮಾರ್ಗದರ್ಶಕ ಸೂತ್ರಗಳಂತೆ ವಿಚಾರಣೆ ನಡೆಯಲಿದೆ. ಆಕೆ ಮಾಡಿದ್ದು ಸಹ ಅಮಾನು಼ಷ ಕೊಲೆ! ಪ್ರಚಾರದ ತೆವಲಿಗಾಗಿ ತೋರಿದ Trigger happiness ! ಅಸಲಿಗೆ ಆತನೇ ರೇಪ್‌ ಅಂಡ್‌ ಮರ್ಡರ್‌ ಮಾಡಿದ್ದ ಎಂಬುದಕ್ಕೆ ಏನಿದೆ ಸಾಕ್ಷಿ? ಅವನೊಬ್ಬ ಅಮಾಯಕ ದಾರಿಹೋಕ . ಮತ್ತಾರೋ ಪ್ರಭಾವಿಯ ಮಗನನ್ನು ಬಚಾವು ಮಾಡುವ ಸಲುವಾಗಿ ಈ ದಿಕ್ಕಿಲ್ಲದ ಬಿಹಾರಿಯನ್ನು ಪೊಲೀಸರು ಬಲಿಪಶು ಮಾಡಿದರೇ? ಪೊಲೀಸರನ್ನು ನಂಬುವಂತಿಲ್ಲ. ಸಂದಿಗ್ಧ ಒದಗಿದಾಗ ತಬ್ಬಲಿಯನ್ನು ಕರೆತಂದು ತಲೆ ಬೋಳಿಸುವುದರಲ್ಲಿ ನಿಸ್ಸೀಮರು! ರೇಪ್‌
– ಜೆ.ಬಿ.ರಂಗಸ್ವಾಮಿ, ವಿಶ್ರಾಂತ ಪೊಲೀಸ್‌ ಅಧಿಕಾರಿ, ಮೈಸೂರು.

ಲೇಡಿ ಸಿಂಗಂ ಪರ ನಿನ್ನೆ ಮೊನ್ನೆ ಜೈಕಾರ ಹಾಕಿದವರೇ ಈಗ ಫೂತ್ಕರಿಸುತ್ತಿದ್ದಾರೆ. ಮಾನವ ಹಕ್ಕುಗಳ ಅಮಾನುಷ ದಮನವಾಗಿದೆ . ವಿಚಾರಣೆ ನಡೆಯಲಿ. ಅವನು ರೇಪ್‌ ಮಾಡಿ ಕೊಲೆಗೈದದ್ದು ಹತ್ತಿರದ ಯಾವುದೋ ಪಾಳು ಮನೆಯಲ್ಲಿ. ಪೊಲೀಸರು ಹತ್ತಾರು ಕಿಮೀ ದೂರದ ನಿರ್ಜನ ಪ್ರದೇಶಕ್ಕೆ ಮಹಜರಿಗಾಗಿ ಕರೆದೊಯ್ದರೆಂದು ಹೇಳುತ್ತಿದ್ದಾರೆ.

ಯಾಕಾಗಿ ಅಲ್ಲೀತನಕ ಆರೋಪಿಯನ್ನು ಕರೆದೊಯ್ದರು?

ಕೊಲೆಗಾರ ಕೃತ್ಯಕ್ಕೆ ಬಳಸಿದ್ದ ಚಾಕುವನ್ನೋ ಪಿಸ್ತೂಲನ್ನೋ ಅಡಗಿಸಿಟ್ಟಿದ್ದರೆ ವಶ ಪಡಿಸಿಕೊಳ್ಳಲು ಅಲ್ಲೀ ತನಕ ಕರೆದೊಯ್ದದಕ್ಕಾದರೂ ತಥ್ಯವಿರುತ್ತಿತ್ತು. ನಿರ್ಜನ ಜಾಗಕ್ಕೆ ಕರೆದೊಯ್ದಿರುವುದೇ ಅವನನ್ನು ಕೊಲೆಮಾಡಲು. ಅಂತಹ ಅಪಾಯಕಾರಿ ಕೊಲೆಗಾರನಿಗೆ ಕೈಕೋಳ ತೊಡಿಸಿಯೇ ಕರೆದೊಯ್ಯಬೇಕು. ಅದರಲ್ಲೂ ನಿರ್ಜನ ಸ್ಥಳದಲ್ಲಿ ಸಂಚರಿಸುವಾಗ ಅವನನ್ನು ಕರೆದೊಯ್ಯುವ ಪೊಲೀಸಪ್ಪ ಕೂಡ ಕೈಕೋಳದಿಂದ ತಾನೂ ಲಾಕ್‌ ಮಾಡಿಕೊಂಡಿರುತ್ತಾನೆ. ಕೈಕೋಳವನ್ನು ಅಪರಾಧಿಯ ಬಲಗೈಗೆ ಮತ್ತು ಪೊಲೀಸನ ಎಡಗೈಗೆ ಲಾಕ್‌ ಮಾಡಿಕೊಂಡರೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕಲ್ಲು ಬೀರಲು ಅವಕಾಶವೂ ಇರುವುದಿಲ್ಲ. ಇಂತಹ ಯಾವ ಮುಂಜಾಗ್ರತೆಯೂ ಕಾಣದಿರುವುದರಿಂದ ಅವನನ್ನು ಓಡಿಹೋಗಲು ಬಿಟ್ಟು , ನಂತರ ಕಲ್ಲು ಹೊಡೆದನೆಂಬ ನೆಪ ತೋರಿಸಿ ಗುಂಡು ಹೊಡೆದು ಕೊಲೆ ಮಾಡಿದ್ದಾರೆ. ಅವನು ತಪ್ಪಿಸಿಕೊಂಡು ಓಡುತ್ತಿದ್ದುದೇ ನಿಜವಾಗಿದ್ದರೆ ಎಷ್ಟು ದೂರ ಹಿಂದಿನಿಂದ ಗುಂಡು ಹಾರಿಸಲ್ಪಟ್ಟಿದೆ? ರೇಪ್‌

ಎದೆಗೆ ಬಿದ್ದಿರುವ ಗುಂಡು ಬೆನ್ನ ಹಿಂದಿನಿಂದ ಬಿದ್ದಿದೆಯೇ? ಅಥವಾ ನೇರ ಎದೆಗೇ ಗುಂಡಿಟ್ಟು ಸಾಯಿಸಿರುವ point blank ಫೈರಿಂಗ್‌ ಹತ್ಯೆಯೇ ?! ಇಂತಹ ನಾನಾ ಪತ್ತೆದಾರಿ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಗುಂಡು ಹೊಡೆದಷ್ಟು ಅದನ್ನು ಸಮರ್ಥಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಪ್ರತಿ ಕ್ಷಣದ ಕಾರ್ಯಾಚರಣೆಯನ್ನೂ ಕಾನೂನಾತ್ಮಕವಾಗಿಯೇ ಸಂಬಂಧಿಸಿದ ಅಧಿಕಾರಿಗಳು ವಿವರಣೆ ಕೊಡ ಬೇಕಾಗುತ್ತದೆ. ರೇಪ್‌

Was the situation so warranted to open FIRE?
ಈ ಪ್ರಶ್ನೆಗೆ ಉತ್ತರಿಸಲು ಎಂಥವರೂ ತತ್ತರಿಸಿ ಹೋಗುತ್ತಾರೆ.

ಗುಂಡು ಹಾರಿಸುವ ಸಂದರ್ಭಗಳು ಎರಡು: ತನ್ನ ಪ್ರಾಣ ರಕ್ಷಿಸಿಕೊಳ್ಳಲು ಅಥವಾ ಅನ್ಯರ ಜೀವ ಉಳಿಸಲು . ಇಲ್ಲವೇ ಅಮೂಲ್ಯ ಸಾರ್ವಜನಿಕ ಆಸ್ತಿಪಾಸ್ತಿ ಕಾಪಾಡಲು. ಹೀಗೆ ಮಾಡಲು ಗುಂಡು ಹಾರಿಸದೆ ಬೇರೆ ದಾರಿಯೇ ಇರಲಿಲ್ಲವೆಂಬುದನ್ನು ನಿರೂಪಿಸಬೇಕು.

ಆ ಸಂದಿಗ್ಧ ಸಂದರ್ಭ ಎಷ್ಟು ಗುರುತರವಾಗಿತ್ತೆಂದರೆ , ಗುಂಡು ಹಾರಿಸದೇ ಇದ್ದಿದ್ದರೆ ತನ್ನ ಪ್ರಾಣವೂ ಉಳಿಯುತ್ತಿರಲಿಲ್ಲ. ಉಳಿದವರನ್ನೂ ರಕ್ಷಿಸಲು ಸಾಧ್ಯವೇ ಇರಲಿಲ್ಲ. ಸಾರ್ವಜನಿಕ ಅಮೂಲ್ಯ ಆಸ್ತಿಪಾಸ್ತಿಗಳೂ ನಾಶವಾಗುತ್ತಿದ್ದವು. ಹೀಗಾಗಿ ಅನಿವಾರ್ಯವಾಗಿ ಗತ್ಯಂತರವಿಲ್ಲದೆ ಗುಂಡು ಹಾರಿಸಿದೆ !

ಈ ವಿವರಣೆಯ ನ್ನು ಆ ಅಧಿಕಾರಿ ಹೇಗೆ ಕೊಡುತ್ತಾರೋ ಗೊತ್ತಿಲ್ಲ. ಆ ವೇಳೆಯಲ್ಲಿ ಆಕೆಯ ಜೊತೆಯಲ್ಲಿದ್ದ ಪುರುಷ ಪೊಲೀಸ್‌ ಸಿಂಹಗಳು ಏನು ಮಾಡುತ್ತಿದ್ದವು ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಅಂತಹ ನಿರ್ಜನ ಸ್ಥಳಕ್ಕೆ ಹೋಗುವಾಗ ಇನ್ನಷ್ಟು ಪೊಲೀಸ್‌ ಸಿಬ್ಬಂದಿಯನ್ನು ಏಕೆ ಜೊತೆಗೆ ಕರೆದೊಯ್ಯಲಿಲ್ಲ? ಎಂಬ ಕರ್ತವ್ಯ ಲೋಪದ ನಾನಾ ಪ್ರಶ್ನೆಗಳನ್ನೂ ಎದುರಿಸಬೇಕಾಗುತ್ತದೆ. ಒಟ್ಟು ಕಾರ್ಯಾಚರಣೆಯನ್ನು ಸಂಪೂರ್ಣ ಕರ್ತವ್ಯ ದೃಷ್ಟಿಯಿಂದ , ಸದುದ್ದೇಶದಿಂದ ಮಾಡಿದ್ದೇ ಹೊರತು , ವೈಯಕ್ತಿಕ ರಾಗ ದ್ವೇಷಗಳೇನೂ ಇರಲಿಲ್ಲವೆಂಬುದನ್ನೂ ಕರಾರುವಾಕ್ಕಾಗಿ ನಿರೂಪಿಸಬೇಕಾಗುತ್ತದೆ.
ನಿಸ್ಪೃಹತೆಯಿಂದ ಮಾಡಿದ ನ್ಯಾಯಯುತ ಕೆಲಸಕ್ಕೂ ಎಷ್ಟೊಂದು ಉತ್ತರ ನೀಡಬೇಕು?

ಪೊಲೀಸ್‌ ಕೆಲಸವೆಂದರೆ ಅನೇಕರಿಗೆ ಹೇಗೆ ಬೇಕಾದರೂ ಸ್ವೇಚ್ಛೆಯಿಂದ ನಡೆದರೂ ಜೈಸಿಕೊಳ್ಳಬಹುದೆಂಬ ಕಲ್ಪನೆ ಇದೆ. ವಾಸ್ತವ ಹಾಗಿಲ್ಲ. ಕಣ್ಣೆದುರೇ ರಣಭೀಕರ ಘರ್ಷಣೆ ನಡೆದು ಮೂರ್ನಾಲ್ಕು ಜನ ಸತ್ತ ಕೋಮು ಗಲಭೆಯಲ್ಲಿ ಗುಂಡು ಹಾರಿಸಿದ ಪೊಲೀಸ್‌ ಅಧಿಕಾರಿ ಸಸ್ಪೆಂಡಾಗಿರುವ ಸಂದರ್ಭಗಳೂ ಇವೆ. ಅವನು ಗುಂಡು ಹಾರಿಸುವ ವೇಳೆಗೆ ಪರಿಸ್ಥಿತಿ ಶಾಂತವಾಗಿ ತಹಬಂದಿಗೆ ಬಂದಿತ್ತಂತೆ! ಹತ್ಯೆಗೂ ಗುಂಡು ಹಾರಿಸುವುದಕ್ಕೂ ಇದ್ದ ಸಮಯದ ಅಂತರ ಹತ್ತೆಂದರೆ ಹತ್ತೇ ನಿಮಿಷ ಮಾತ್ರ!

ಇನ್ನು ಮುಂದಿನ ದಿನಗಳಲ್ಲಿ ಈ ಹುಬ್ಬಳ್ಳಿ ಷೂಟೌಟ್ ಕಾರ್ಯಾಚರಣೆಯನ್ನು ವಿಚಾರಣೆ ಮಾಡುವ ಅಧಿಕಾರಿಗಳು , ಮಾನವ ಹಕ್ಕು ಆಯೋಗದವರು ಇವರೆಲ್ಲಾ ಯಾವ್ಯಾವ ದೃಷ್ಟಿಕೋನದಿಂದ ನೋಡುತ್ತಾರೋ ತಿಳಿಯದು. ಒಬ್ಬೊಬ್ಬರೂ ದೇವರಿದ್ದಂತೆ. ಒಂದು ದೇವರಿಗೆ ಬರೀ ಸೆಲ್ಯೂಟಿನ ಊದುಗಡ್ಡಿ ಬೆಳಗಿದರೆ ಸಾಕು. ಇನ್ನು ಕೆಲವು ಹಣ್ಣುಕಾಯಿ ನೈವೇದ್ಯ ಕೇಳುತ್ತವೆ. ಮತ್ತೂ ಕೆಲವಂತೂ ಕುರಿ ಕೋಣದಂತಹ ಭಾರಿ ಬಲಿಯನ್ನೇ ಬೇಡುತ್ತವೆ. ತಮ್ಮ ತಪ್ಪೇ ಇಲ್ಲದಿದ್ದರೂ ಗೋಲಿಬಾರ್‌ , ಲಾಕಪ್‌ ಡೆತ್‌ ಮುಂತಾದ ಸಾವುಗಳಿಗಾಗಿ ಮನೆ ಮಠ ಕಳೆದುಕೊಂಡು ನಿರ್ಗತಿಕರಾದವರ ಸಂಖ್ಯೆ ದೊಡ್ಡದು. ಯಾರು ಯಾರನ್ನೂ ದೂಷಿಸುವಂತಿಲ್ಲ. ಹುಲು ಮಾನವರಿರುವ ವ್ಯವಸ್ಥೆಯೇ ಹಾಗಿದೆ. ೧೯೮೫ – ೯೦ ರ ತನಕವೂ ಪೊಲೀಸ್‌ ಅಧಿಕಾರಿಗಳು ಗೋಲೀಬಾರ್‌ ಅಥವಾ ಲಾಕಪ್‌ ಸಾವಿನ ಪ್ರಕರಣಗಳು ನಡೆದರೂ ಎದೆಗುಂದದೆ ಮುನ್ನುಗ್ಗುತ್ತಿದ್ದರು.

ಅಂದಿನ ಮೇಲಧಿಕಾರಿಗಳಿಗೆ ಒಂದು ಅಂಶ ಮಾತ್ರ ಖಚಿತವಾಗಬೇಕಿತ್ತು. ಕರ್ತವ್ಯವನ್ನು ನಿಸ್ಪೃಹತೆಯಿಂದ ನಿರ್ವಹಿಸುವಾಗ ಮಾತ್ರ ಈ ಅನಾಹುತ ಜರುಗಿತೇ? ಇದರಲ್ಲಿ ಯಾವುದೇ ಭ್ರಷ್ಟತೆ ಇರಲಿಲ್ಲವೇ ? ಸದುದ್ದೇಶ ಮಾತ್ರವೇ ಇತ್ತೇ ? ಎಂಬುದು ಸ್ಪಷ್ಟವಾದರೆ ಮಾತ್ರ ಯಾವ ಹಂತಕ್ಕಾದರೂ ಹೋಗಿ ಕೈಕೆಳಗಿನ ಅಧಿಕಾರಿಗಳನ್ನು ರಕ್ಷಿಸುತ್ತಿದ್ದ ಅನೇಕ ಅಧಿಕಾರಿಗಳನ್ನು ನಾನೇ ನೋಡಿರುವೆ.

ಆಪರೇಷನ್‌ ಮಾಡುವಾಗ ಸತ್ತ ಪೇಷಂಟಿನಂತೆ ಅವರ ಲೆಕ್ಕ. ವಿವರಣೆಯನ್ನು ಇಲಾಖೆಯ morale , ನೈತಿಕ ಸ್ಥೈರ್ಯವನ್ನೂ ಕಾಪಾಡಿಕೊಳ್ಳುವ ಜವಾಬ್ದಾರಿಕೆ ಇರುತ್ತಿತ್ತು. ಈ ಭರವಸೆ ಇದ್ದುದರಿಂದ ಕೈಕೆಳಗಿನವರು ಧೈರ್ಯದಿಂದ ಮುನ್ನುಗ್ಗಿ ಕಠಿಣವಾದ ಕೇಸುಗಳನ್ನು ಪತ್ತೆ ಮಾಡುತ್ತಿದ್ದರು. Hardcore ರಣಪಾತಕಿ ಕ್ರಿಮಿನಲ್ಲುಗಳ ಮಗ್ಗಲು ಮುರಿಯುತ್ತಿದ್ದರು.

1995 ರಲ್ಲಿ ಸರಣಿ ಕೊಲೆ ದರೋಡೆ ರೇಪ್ ಮಾಡಿದ್ದ ಗ್ಯಾಂಗನ್ನು ಮೈಸೂರು ಪೊಲೀಸರು ಹಿಡಿದಿದ್ದರು. ಐದು ಜಿಲ್ಲೆಗಳಲ್ಲಿ ಕೃತ್ಯ ಎಸಗಿದ್ದ ಗ್ಯಾಂಗ್‌ ಅದು. ಐದು ದಿನ ಸತತವಾಗಿ ಪರಿಶೋಧನೆ ನಡೆಸಿ ಚಿನ್ನಾಭರಣಗಳನ್ನು ಸೀಜ್‌ ಮಾಡಿಕೊಂಡು ತನಿಖಾ ತಂಡ ಮಂಗಳೂರಿನಿಂದ ವಾಪಸಾಗುತ್ತಿತ್ತು. ಒಬ್ಬ ಕಳ್ಳನ ಮನೆ ಹುಣಸೂರು ತಾಲ್ಲೂಕಿನ ಹಳ್ಳಿಯಲ್ಲಿತ್ತು.

“ ಒಂದಷ್ಟು ಒಡವೆಗಳನ್ನು ನನ್ನ ಮನೆಯಲ್ಲಿ ಅಡಗಿಸಿಟ್ಟಿದ್ದೇನೆ. ಕರೆದುಕೊಂಡು ಹೋದರೆ ತೆಗೆದುಕೊಡುತ್ತೇನೆ ಸ್ವಾಮೀ. ಇದಿಷ್ಟು ಬಿಟ್ಟರೆ ನನ್ನ ಬಳಿ ಯಾವ ಒಡವೆಯೂ ಇಲ್ಲ. ಎಲ್ಲಾ ಕೇಸನ್ನೂ ಬಾಯಿ ಬಿಟ್ಟಿದ್ದೇನೆ. ಅಮೇಲೆ ನಂಗೆ ಸಹಾಯ ಮಾಡಿ ” ಎಂದಿದ್ದ ಕಳ್ಳ.

ಹೇಗೂ ಅದೇ ದಾರಿಯಲ್ಲಿ ಹೋಗುತ್ತಾ ಸೀಜ್‌ ಮಾಡಿಕೊಂಡು ಹೋದರಾಯಿತು ಅಂದು ಕೊಂಡರು ಇನ್ಸ್‌ ಪೆಕ್ಟರು. ಟೆಂಪೋ ಹಳ್ಳಿಯತ್ತ ಬಂದಾಗ ರಾತ್ರಿ ಎರಡು ಗಂಟೆ ಮೀರಿತ್ತು. “ ಟೆಂಪೋ ಹೋದರೆ ಸೌಂಡಾಗಿ ಜನಕ್ಕೆ ಗೊತ್ತಾಗುತ್ತೆ. ನಮ್ಮ ಮನೆಯವರ ಮರ್ಯಾದೆ ಹೋಗುತ್ತೆ. ನಡಕಂಡೇ ಹೋಗಾಣ. ಮಾಲು ತಕ್ಕೊಡುತ್ತೇನೆ.” ಕಳ್ಳ ಬೇಡಿಕೊಂಡ. ಮೂರು ಜನ ಪೊಲೀಸರೊಂದಿಗೆ ಇನ್ಸ್‌ ಪೆಕ್ಟರ್‌ ಹೆಜ್ಜೆ ಹಾಕಿದರು.
ಅದೊಂದು ಜಾಗದಲ್ಲಿ ಸರ್ರನೆ ತಪ್ಪಿಸಿಕೊಂಡು ಓಡಿದ ಕಳ್ಳ , ದೊಪ್ಪನೆ ಹಾಳು ಭಾವಿಯಲ್ಲಿ ಬಿದ್ದು ಸತ್ತೇ ಹೋದ. ಯಾವ ದೃಷ್ಟಿಯಿಂದ ನೋಡಿದರೂ ಕಸ್ಟೋಡಿಯಲ್‌ ಡೆತ್‌ ಅದು. ಅಧಿಕೃತ ಅರೆಸ್ಟ್‌ ತೋರಿಸಿದ್ದಾರೆ. ಟೆಂಪೋದಲ್ಲಿದ್ದ ಎಂಟೂಜನ ಪೊಲೀಸರೂ ಆ ಸಾವಿಗೆ ಬಾಧ್ಯಸ್ತರು. ಇಡೀ ಪರಿಸ್ಥಿತಿ ಅವಲೋಕಿಸಿದ ಅಂದಿನ ಮೇಲಧಿಕಾರಿಗಳು ಬಚಾವು ಮಾಡಲು ಎಷ್ಟೇ ಯತ್ನಿಸಿದರೂ ತನಿಖಾತಂಡದ ಅಷ್ಟೂ ಜನ ಮೂರ್ನಾಲ್ಕು ವರ್ಷ ಜೈಲು ಅನುಭವಿಸಿದರು.

ಇದನ್ನೂ ಓದಿ : ಹಾಸನ | ಅಂಗನವಾಡಿ ನೌಕರರಿಗೆ ಸಿಡಿಪಿಒನಿಂದ ಲೈಂಗಿಕ ಕಿರುಕುಳ ರೇಪ್‌

2019 ರ ಬಹು ಚರ್ಚಿತ ಹೈದ್ರಾಬಾದ್‌ ಎನ್‌ ಕೌಂಟರ್‌ ರಾಷ್ಟ್ರಾದ್ಯಂತ ಸುದ್ದಿ ಮಾಡಿತ್ತು. ಹೈದರಾಬಾದ್‌ ಸಮೀಪದ ಟೋಲ್‌ ಬಳಿ 26 ವರ್ಷದ ವೆಟರ್ನರಿ ಲೇಡಿ ಡಾಕ್ಟರೊಬ್ಬರು ತಮ್ಮ ಸ್ಕೂಟರ್‌ ನಿಲ್ಲಿಸಿ ಬರುವುದರೊಳಗೆ ಟೈರು ಪಂಕ್ಚರ್‌ ಆಗಿತ್ತು. ಆಕೆಯ ಪೇಚಾಟ ನೋಡಿದ ಇಬ್ಬರು ಲಾರಿ ಡೈವರ್‌ ಗಳು ಮತ್ತು ಅವರಿಬ್ಬರು ಅಸಿಸ್ಟೆಂಟುಗಳು ಸಹಾಯ ಮಾಡುವ ನೆಪದಲ್ಲಿ ಡಾಕ್ಟರನ್ನು ಪಕ್ಕದ ಪೊದೆಗೆ ಎಳೆದುಕೊಂಡು ಹೋಗಿ ಅಮಾನುಷವಾಗಿ ರೇಪ್‌ ಮಾಡಿದರು. ಬಿಡಿಸಿಕೊಳ್ಳಲು ಯತ್ನಿಸಿದ ಅವಳ ಬಾಯನ್ನು ಅದುಮಿ ಹಿಡಿದು ಮನಸೋ ಇಚ್ಛೆ ಹಲ್ಲೆ ನಡೆಸಿದರು . ನಂತರ ಆಕೆಯ ಹೆಣವನ್ನು ಲಾರಿಯಲ್ಲಿ ಹಾಕಿಕೊಂಡು ದೂರದಲ್ಲೆಲ್ಲೋ ಎಸೆದು ಹೋಗಿದ್ದರು.

ಸಿಸಿಟಿವಿ ಫೂಟೇಜಿನ ಮೂಲಕ ಜಾಡು ಹಿಡಿದ ಪೊಲೀಸರು ನಾಲ್ವರನ್ನೂ ಸೆರೆ ಹಿಡಿದು , ಘಟನೆಯನ್ನು ವಿವರಿಸಿದರು. ಜನ ರೊಚ್ಚಿಗೆದ್ದು ಪ್ರತಿಭಟಿಸಿತು. ಅಪರಾಧಿಗಳನ್ನು ತಮಗೊಪ್ಪಿಸಿ. ತಾವೇ ತಕ್ಕ ಶಾಸ್ತಿ ಮಾಡುತ್ತೇವೆಂದು ಹಠ ಹಿಡಿಯಿತು.

ತನಿಖೆಗೆಂದು ಹೆದ್ದಾರಿ ಬ್ರಿಡ್ಜ್‌ ಬಳಿ ಕರೆದೊಯ್ಯುತ್ತಿದ್ದಾಗ ಇಬ್ಬರು ಆರೋಪಿಗಳು ಪೊಲೀಸರ ರೈಫಲ್‌ ಗಳನ್ನೇ ಕಿತ್ತುಕೊಂಡು ಹಲ್ಲೆ ಮಾಡಿದರು. ಆ ನಾಲ್ವರು ರೇಪಿಸ್ಟರನ್ನೂ ಪೊಲೀಸರು ಎನ್‌ ಕೌಂಟರ್‌ ಮಾಡಿ ಕೆಡವಿದರು.

ರಾಷ್ಟ್ರಾದ್ಯಂತ ಪೊಲೀಸರ ಗಂಡು ಕೆಲಸಕ್ಕೆ ಶಹಭಾಸ್‌ ಗಿರಿ ಕೊಟ್ಟಿದ್ದೇ ಕೊಟ್ಟಿದ್ದು. ಆನಂತರ ಅಪಸ್ವರಗಳೆದ್ದವು. ಮಾನವ ಹಕ್ಕುಗಳ ಕ್ರೂರ ದಮನ ನಡೆದಿದೆಯೆಂದು ಕೇಸು ಸುಪ್ರೀಂನ ವರೆಗೂ ಹೋಯಿತು. ಹಾಡಿ ಹೊಗಳಿ ಅಟ್ಟಕ್ಕೇರಿಸಿದವರು ಹಾಗೇ ಅದೃಶ್ಯರಾದರು. ನಗುವಾಗ ಎಲ್ಲ ನೆಂಟರು. ಅಳುವಾಗ ಯಾರು ಇಲ್ಲಾ. ವೇದಿಕೆ ಸಜ್ಜುಗೊಳಿಸಿ ನಡೆಸಿದ ಕಗ್ಗೊಲೆ ಎಂದು ಸುಪ್ರೀಂ ಹೇಳಿತು. ತನಿಖಾ ತಂಡದ ಅಷ್ಟೂ ಪೊಲೀಸರೀಗ ಜೈಲಿನಲ್ಲಿ ಕೊಳೆಯುತ್ತಿದ್ದಾರೆ.

ಒಂದು ಕಾಲದಲ್ಲಿ ಪೊಲೀಸ್‌ ನೈತಿಕತೆ ಕುಸಿಯಕೂಡದೆಂದು ಹಿರಿಯ ಅಧಿಕಾರಿಗಳು ನೆರವಿಗೆ ಬರುತ್ತಿದ್ದರು. ಈಗ ಆ ಪರಿಸ್ಥಿತಿ ಇಲ್ಲ. ಯಾರು ಯಾರನ್ನೂ ರಕ್ಷಿಸುವ ಹಂತದಲ್ಲಿ ಉಳಿದಿಲ್ಲ. ಘಟನೆಯೊಂದು ವಿತರಣೆಯನ್ನು ನಡೆದರೆ ಅದರ ಹಲವು ಹತ್ತು ಫೋಟೋಗಳು , ವೀಡಿಯೋಗಳು , ಸಂಭಾಷಣೆಗಳು ಕ್ಷಣಾರ್ಧದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತವೆ. ಕಾನೂನಿನ ನೂರೆಂಟು ಸುಧಾರಿತ ಬಿಗಿ ಬಂಧಗಳು. ನ್ಯಾಯಬದ್ಧವಾದ ಕೆಲಸ ಮಾಡಲೂ ನೂರೆಂಟು ಅಡಚಣೆಗಳು.

ಹುಬ್ಬಳ್ಳಿ ಪ್ರಕರಣದಲ್ಲಿ ಮಹಿಳಾ ಇನ್ಸ್‌ ಪೆಕ್ಟರ್‌ ಇಂಥವೆಲ್ಲಾ ಕಟ್ಟುಪಾಡುಗಳಿದ್ದರೂ ಹಿಂಜರಿಯದೆ ಶ್ಲಾಘನೀಯ ಕಾರ್ಯ ಮಾಡಿದ್ದಾರೆ. ಸಮಾಜದ ಹೀನ ಜಂತುವೊಂದನ್ನು ಕೊನೆಗಾಣಿಸಿದ್ದಾರೆ. ಅವರ ಕಾರ್ಯಾಚರಣೆ ಪ್ರಾಮಾಣಿಕ ಮತ್ತು ನಿ಼ಷ್ಠೆಯ ಬಗ್ಗೆ ಅನುಮಾನವಿಲ್ಲ. ಆದರೆ ಕಾನೂನಿನ ನಿಯಮಗಳಿಗೆ ಅನುಗುಣವಾಗಿ ನಡೆಸಿದ್ದಾರೆಯೇ ಎಂಬುದಕ್ಕೆ ಉತ್ತರ ಬೇಕು. ಯಾಕೆಂದರೆ ಸತ್ತಿರುವವನು ಪಾಖಂಡಿ ಅಪರಾಧಿಯಾಗಿದ್ದರೂ ಅವನ ಸಾವು ನಿಜವಾಗಿ ಹೇಗಾಯ್ತು ಎಂಬುದರ ಬಗ್ಗೆ ಕಾನೂನಿನ ಅಗ್ನಿಕುಂಡವನ್ನು ದಾಟಲೇ ಬೇಕು . ಅದು ಅನಿವಾರ್ಯ.

* * * *

ಇದನ್ನೂ ನೋಡಿ : ಅತ್ಯಾಚಾರ- ಕೊಲೆ ಹೇಯ ಕೃತ್ಯ ಆದರೆ ಎನ್ಕೌಂಟರ್ ಪರಿಹಾರವೇ???

 

Donate Janashakthi Media

Leave a Reply

Your email address will not be published. Required fields are marked *