ರಂಗಾಯಣಕ್ಕೆ ರಂಗ ಸ್ಪರ್ಶ ನೀಡಬೇಕಿದೆ

ನಾ ದಿವಾಕರ

ಕನ್ನಡ ರಂಗಭೂಮಿಯ ಮುಕುಟಮಣಿ ಎಂದೇ ಭಾವಿಸಬಹುದಾದ ನಾಟಕ-ಕರ್ನಾಟಕ ಪರಿಕಲ್ಪನೆಯ ಕೂಸು ರಂಗಾಯಣ ಇಂತಹ ಒಂದು ಪ್ರಯತ್ನದಲ್ಲಿ ಕಳೆದ ಮೂರು ದಶಕಗಳಿಂದಲೂ ಯಶಸ್ವಿಯಾಗಿ ನಡೆದುಬಂದಿದೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ದೇಶದ ಸಾಂಸ್ಕೃತಿಕ ವಾತಾವರಣವೂ ಮನ್ವಂತರದ ಹಾದಿಯಲ್ಲಿರುವ ಈ ಗಳಿಗೆಯಲ್ಲಿ ರಂಗಾಯಣ ಹಲವು ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ

ನೆಲಸಂಸ್ಕೃತಿಯ ಆಳವಾದ-ಗ್ರಹಿಕೆ ರಂಗಭೂಮಿಯ ಮುಂಚಲನೆಗೆ ಅತ್ಯವಶ್ಯ

ರಂಗಭೂಮಿ ವಿಶಾಲ ಸಮಾಜದ ಸಾಂಸ್ಕೃತಿಕ ಬದುಕಿನ ಒಂದು ಅವಿಭಾಜ್ಯ ಅಂಗವಾಗಿ ತನ್ನ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಬಂದಿರುವುದನ್ನು ಹಲವು ಶತಮಾನಗಳ ಇತಿಹಾಸವನ್ನು ಕೆದಕಿ ನೋಡಿದರೆ ಕಾಣಬಹುದು. ಯಾವುದೇ ಸಮಾಜದಲ್ಲಿ ನಿರ್ಲಕ್ಷಿಸಲ್ಪಟ್ಟ ಅಥವಾ ಅಂಚಿಗೆ ತಳ್ಳಲ್ಪಟ್ಟ ಕೆಳಸ್ತರದ ಜನಸಮುದಾಯಗಳಾಗಲೀ, ಅತ್ಯಾಧುನಿಕತೆಗೆ ಮಾರುಹೋಗಿ ತಮ್ಮ ದಂತದರಮನೆಗಳಲ್ಲಿ ವಾಸಿಸುವ ಸಿರಿವಂತರಾಗಲೀ, ಇವರ ನಿತ್ಯ ಬದುಕಿನಲ್ಲಿ ಕಾಣಬಹುದಾದ ಸಾಂಸ್ಕೃತಿಕ ಭಿನ್ನತೆ, ವೈವಿಧ್ಯತೆ, ಒಳಬಿರುಕುಗಳು ಹಾಗೂ ವ್ಯಕ್ತಿಗತ ವೈಪರೀತ್ಯಗಳನ್ನು ಚಾರಿತ್ರಿಕ-ಸಮಕಾಲೀನ ಕನ್ನಡಿಯಲ್ಲಿ ನೋಡುವ ಒಂದು ವಿಭಿನ್ನ ದೃಷ್ಟಿಕೋನವನ್ನು ರಂಗಭೂಮಿ ಅಳವಡಿಸಿಕೊಂಡೇ ಬಂದಿದೆ. ಹಾಗಾಗಿಯೇ ಜಗತ್ತಿನ ವಿಭಿನ್ನ ಸಮಾಜಗಳ ಸಾಂಸ್ಕೃತಿಕ ವೈವಿಧ್ಯತೆಗಳನ್ನು ಹಾಗೂ ಅದರೊಳಗಿನ ಸಿಕ್ಕುಗಳನ್ನು ಬಿಡಿಸಿ ನೋಡಲು ಆಯಾ ಕಾಲದ ರಂಗಭೂಮಿಯ ವಿಶಿಷ್ಟ ಪ್ರಯೋಗಗಳು ನೆರವಾಗುತ್ತವೆ. ರಂಗಸಂಸ್ಕೃತಿ ಎಂದು ಗುರುತಿಸಲ್ಪಡುವ ಒಂದು ವಿದ್ಯಮಾನವನ್ನು ಈ ದೃಷ್ಟಿಯಿಂದಲೇ ಅವಲೋಕನ ಮಾಡಬೇಕಾಗುತ್ತದೆ.

ಭಾರತದ ರಂಗಭೂಮಿಯ ಇತಿಹಾಸದಲ್ಲೇ ಈ ಒಳನೋಟ ಹಾಗೂ ಮುಂಗಾಣ್ಕೆಯ ಛಾಯೆಯನ್ನು ಎಲ್ಲ ಭಾಷೆ ಮತ್ತು ಪ್ರದೇಶಗಳಲ್ಲೂ ಗುರುತಿಸಬಹುದು. ಕರ್ನಾಟಕದ ರಂಗಭೂಮಿ ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ಕನ್ನಡ ರಂಗಭೂಮಿಯ ಮುಕುಟಮಣಿ ಎಂದೇ ಭಾವಿಸಬಹುದಾದ ನಾಟಕ-ಕರ್ನಾಟಕ ಪರಿಕಲ್ಪನೆಯ ಕೂಸು ರಂಗಾಯಣ ಇಂತಹ ಒಂದು ಪ್ರಯತ್ನದಲ್ಲಿ ಕಳೆದ ಮೂರು ದಶಕಗಳಿಂದಲೂ ಯಶಸ್ವಿಯಾಗಿ ನಡೆದುಬಂದಿದೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ದೇಶದ ಸಾಂಸ್ಕೃತಿಕ ವಾತಾವರಣವೂ ಮನ್ವಂತರದ ಹಾದಿಯಲ್ಲಿರುವ ಈ ಗಳಿಗೆಯಲ್ಲಿ ರಂಗಾಯಣ ಹಲವು ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ರಾಜಕೀಯ ಹಸ್ತಕ್ಷೇಪ, ಅಸಾಂಸ್ಕೃತಿಕ ಅಧಿಕಾರ ಕೇಂದ್ರಗಳು ಹಾಗೂ ರಂಗಸ್ಪರ್ಶವಿಲ್ಲದ ಆಡಳಿತ ವ್ಯವಸ್ಥೆ ರಂಗಾಯಣದ ಮೂಲ ಸ್ವರೂಪಕ್ಕೇ ಧಕ್ಕೆ ಉಂಟುಮಾಡಿದೆ.

ಕರ್ನಾಟಕದ ರಂಗಭೂಮಿಯ ಇತಿಹಾಸದಲ್ಲಿ ತನ್ನದೇ ಆದ ವಿಶಿಷ್ಟ ಪ್ರಯೋಗಗಳ ಮೂಲಕ ನೆಲೆಗೊಂಡಿರುವ ಮೈಸೂರು ರಂಗಾಯಣ ಕಳೆದ ಹಲವು ವರ್ಷಗಳಲ್ಲಿ ರಂಗಪ್ರಯೋಗಕ್ಕಿಂತಲೂ ಹೆಚ್ಚಾಗಿ ಸೈದ್ಧಾಂತಿಕ ಪ್ರಯೋಗಶಾಲೆಯಾಗಿ ಮಾರ್ಪಟ್ಟಿರುವುದು ಸಾಂಸ್ಕೃತಿಕವಾಗಿ ಅಪೇಕ್ಷಣೀಯ ಬೆಳವಣಿಗೆಯಲ್ಲ. ರಂಗಭೂಮಿಯನ್ನು ಒಂದು ಸಾಂಸ್ಕೃತಿಕ ಭೂಮಿಕೆಯಾಗಿ ಬೆಳೆಸಬೇಕಾದ ಯಾವುದೇ ಸಂಸ್ಥೆ ತನ್ನ ರಂಗಸ್ಪರ್ಶವನ್ನು ಕಳೆದುಕೊಂಡು,
ಸಂಸ್ಕೃತಿ-ಸಿದ್ಧಾಂತಗಳ ಹೆಸರಿನಲ್ಲಿ ರಾಜಕೀಯ ಸ್ಪರ್ಶವನ್ನು ಪಡೆದುಕೊಂಡರೆ ಏನಾಗಬಹುದು ?  ಮೈಸೂರಿನ ರಂಗಾಯಣದ ಬೆಳವಣಿಗೆಗಳು ಇದಕ್ಕೆ ಸಿದ್ದ ಉತ್ತರ ನೀಡುತ್ತವೆ. ತನ್ನ ಮೂರು ದಶಕಗಳ ನಡಿಗೆಯಲ್ಲಿ ತತ್ವ ಸಿದ್ಧಾಂತಗಳ ಗೆರೆಗಳನ್ನು ದಾಟಿ ನೆಲಸಂಸ್ಕೃತಿಯ ಒಡಲನ್ನು ಪರಿಚಯಿಸುವ ರೀತಿಯಲ್ಲಿ ರಂಗಪ್ರದರ್ಶನಗಳನ್ನು ನೀಡಿದ ಮೈಸೂರು ರಂಗಾಯಣ ರಾಜಕೀಯ ಪಂಥ-ಭೇದಗಳ ಸಂಘರ್ಷದ ನೆಲೆಯಾಗಿ ಪರಿಣಮಿಸುವುದು ಅಪೇಕ್ಷಣೀಯವಲ್ಲ. ರಾಜಕೀಯವಾಗಿ ಅಥವಾ ಸಾಮಾಜಿಕ ಪರಿಸರದಲ್ಲಿ ನಾವು ಬಳಸುವ ಎಡಪಂಥೀಯ-ಬಲಪಂಥೀಯ ವ್ಯಾಖ್ಯಾನಗಳು ರಂಗಭೂಮಿಯಲ್ಲಿ ತಮ್ಮ ಮೂಲ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತವೆ ಎನ್ನುವ ಪರಿವೆ ರಂಗಕರ್ಮಿಗಳಲ್ಲಿ ಇರಬೇಕಾಗುತ್ತದೆ.

ಇದನ್ನೂ ಓದಿ:ಡೇರ್ ಡೆವಿಲ್ ಮುಸ್ತಫಾ : ಚಲನ ಚಿತ್ರದ ಬಗ್ಗೆ ಒಂದಿಷ್ಟು ಅನಿಸಿಕೆ

ಎಡ-ಬಲ ಎಂಬ ಅಪ್ರಬುದ್ಧ ವಾದ

ಆದರೂ ಮೈಸೂರು ರಂಗಾಯಣ ಈ  ಎಡ-ಬಲದ ಸಿಕ್ಕುಗಳಲ್ಲಿ ಸಿಲುಕಿರುವುದು ದುರಂತ. ಮೂಲತಃ ರಾಜಕೀಯ ಅರ್ಥಕೋಶದಿಂದ ಹೊರಗಿಟ್ಟು ನೋಡಿದರೂ ಎಡಪಂಥೀಯ ಎನ್ನುವ ಒಂದು ಪರಿಕಲ್ಪನೆಯ ಹಿಂದೆ ಒಂದು ಜನಮುಖೀ ಧ್ವನಿ ಇರುವುದನ್ನು ಇತಿಹಾಸದುದ್ದಕ್ಕೂ ಗುರುತಿಸಬಹುದು. ಪ್ರಾಚೀನ ಸಮಾಜದ ಮನುಷ್ಯ ವಿರೋಧಿ ಧೋರಣೆಗಳನ್ನು, ಮೌಲ್ಯಗಳನ್ನು ಹಾಗೂ ಆಚರಣೆಗಳನ್ನು ನಿರಾಕರಿಸುತ್ತಲೇ ಆಧುನಿಕ ಸಮಾಜದ ಜನಪರ ಆಲೋಚನೆಗಳೊಡನೆ ಮುಖಾಮುಖಿಯಾಗಿಸುತ್ತಾ ಭವಿಷ್ಯದ ತಲೆಮಾರಿಗೆ ಒಂದು ಮನುಜಪರ ಸಾಂಸ್ಕೃತಿಕ ಹಾದಿಯನ್ನು ನಿರ್ಮಿಸುವ ಬೌದ್ಧಿಕ ಮಾರ್ಗವನ್ನು ಸಾಮಾನ್ಯವಾಗಿ ಎಡಪಂಥೀಯ ಎಂದು ಗುರುತಿಸಲಾಗುತ್ತದೆ. ಈ ಹಾದಿಯಲ್ಲಿ ಮೈಲಿಗಲ್ಲುಗಳನ್ನು, ನೆಲಹಾಸುಗಳನ್ನು ರೂಪಿಸಿದ ಅಸಂಖ್ಯಾತ ಚಿಂತಕರು ಶತಮಾನಗಳಿಂದ ತಮ್ಮದೇ ಆದ ವಿಶಿಷ್ಟ ತಾತ್ವಿಕ, ಸೈದ್ಧಾಂತಿಕ, ತತ್ವಶಾಸ್ತ್ರೀಯ ನೆಲೆಗಳಲ್ಲಿ ಮನುಷ್ಯ ಮನುಷ್ಯರ ನಡುವೆ ಮಾನವೀಯ ಸಂಬಂಧಗಳನ್ನು ಕಟ್ಟುವ ಮೌಲ್ಯಗಳನ್ನು ಬಿತ್ತುತ್ತಾ ಬಂದಿದ್ದಾರೆ. ಈ ಜನಮುಖಿ ತಲಸ್ಪರ್ಶಿ ಆಲೋಚನೆಗಳನ್ನೇ ರಂಗಪ್ರಯೋಗಗಳಾಗಿ ಪ್ರಸ್ತುತಪಡಿಸಿರುವುದು  ರಂಗಾಯಣದ ಹಿರಿಮೆ.

ಮೂಲತಃ ರಂಗಭೂಮಿ ಈ ಜನಪರ ಆಲೋಚನೆಯ ಒಂದು ಭೂಮಿಕೆಯಾಗಿ ಚರಿತ್ರೆ , ವರ್ತಮಾನ ಹಾಗೂ ಭವಿಷ್ಯದ ಆಲೋಚನೆಗಳನ್ನು ತನ್ನ ಒಡಲೊಳಗಿಟ್ಟುಕೊಂಡು ಪೋಷಿಸಬೇಕಾಗುತ್ತದೆ. ವರ್ತಮಾನದ ಸಾಮಾಜಿಕ ವ್ಯತ್ಯಯಗಳಿಗೆ, ಸಾಮಾನ್ಯ ಜನತೆಯ ಬದುಕಿನ ಸಿಕ್ಕುಗಳಿಗೆ, ತುಳಿಯಲ್ಪಟ್ಟ ಜನಸಮುದಾಯಗಳ ಸಂಕೀರ್ಣತೆಗಳಿಗೆ ಹಾಗೂ ನಿರ್ಲಕ್ಷಿಸಲ್ಪಟ್ಟ ತಳಸಮುದಾಯಗಳ ಸಾಮಾಜಿಕ-ಸಾಂಸ್ಕೃತಿಕ ಬಿಕ್ಕಟ್ಟುಗಳಿಗೆ ಮುಖಾಮುಖಿಯಾಗುತ್ತಲೇ ನಮಗೆ ಎದುರಾಗುವ ಒಳಬಿರುಕುಗಳನ್ನು ಸರಿಪಡಿಸುವ ತಾತ್ವಿಕ ವ್ಯಾಖ್ಯಾನಗಳನ್ನು ಜನತೆಯ ಮುಂದಿಡುವುದು ರಂಗಭೂಮಿಯ ಆದ್ಯತೆಯಾದಾಗ ಅಲ್ಲಿ ಒಂದು ಜನಸಂಸ್ಕೃತಿಯ ಹೊಸ ಆಯಾಮ ತೆರೆದುಕೊಳ್ಳುತ್ತದೆ. ಈ ಅನುಸಂಧಾನದ ಪ್ರಕ್ರಿಯೆಯನ್ನು ಎಡಪಂಥೀಯ ಎಂದು ಭಾವಿಸುವ ಅಥವಾ ಜರೆಯುವ ಮೂಲಕ ಸಮಾಜದ ಒಂದು ವರ್ಗ ಈ ಮುಖಾಮುಖಿಗೆ ತನ್ನ ವಿರೋಧವನ್ನು ವ್ಯಕ್ತಪಡಿಸುವ ವ್ಯಂಗ್ಯವನ್ನು ನಾವು ಕಾಣುತ್ತಿದ್ದೇವೆ.

ವಸ್ತುಶಃ ಈ ಅನುಸಂಧಾನ ಪ್ರಕ್ರಿಯೆಯನ್ನು ರಾಜಕೀಯ ಪರಿಭಾಷೆಯ ಎಡಪಂಥೀಯ ಎಂದು ಭಾವಿಸುವುದೇ ನಮ್ಮ ಗ್ರಹಿಕೆಯ ಕೊರತೆಯಾಗಿ ಕಾಣುತ್ತದೆ.  ರಂಗಭೂಮಿ ಸಾಂಸ್ಕೃತಿಕ ವಲಯದ ಒಂದು ವಿಶಿಷ್ಟ ಆಯಾಮವಾಗಿದ್ದು, ಸಾಹಿತ್ಯದಲ್ಲಿ ಅಭಿವ್ಯಕ್ತವಾಗಲು ಸಾಧ್ಯವಾಗದ ಕೆಲವು ಒಳಸೂಕ್ಷ್ಮಗಳನ್ನು ಅಳವಡಿಸಿಕೊಳ್ಳುವ ಅವಕಾಶವನ್ನು ಒದಗಿಸುತ್ತದೆ. ಏಕೆಂದರೆ ರಂಗಪ್ರಯೋಗಗಳ ಮೂಲಕ ನೇರವಾಗಿ ಸಮಾಜದೊಡನೆ ಸಂವಾದಿಸಲಾಗುತ್ತದೆ. ಪ್ರೇಕ್ಷಕರು ಒಂದು ಸಮಾಜ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸಿದರೂ, ಆಳದಲ್ಲಿ ಬೇರೂರಿರುವಂತಹ ಸೂಕ್ಷ್ಮ ಸಂವೇದನೆಗಳಿಂದ ದೂರವಾಗಿಯೇ ತಮ್ಮ ಬದುಕು ರೂಪಿಸಿಕೊಳ್ಳುತ್ತಿರುತ್ತಾರೆ. ಅಂತಹ ಸಂವೇದನೆಯ ತಂತುಗಳನ್ನು ಸಾಂಸ್ಕೃತಿಕ ಚೌಕಟ್ಟಿನೊಳಗಿಟ್ಟು ಸಾದರ ಪಡಿಸುವ ಪ್ರಯತ್ನವನ್ನು ರಂಗಭೂಮಿ ಮಾಡುತ್ತದೆ. ಈ ಪ್ರಯತ್ನದ ಫಲವಾಗಿಯೇ ನಮ್ಮ ನಡುವಿನ ಅನೇಕ ಶ್ರೇಷ್ಠ ಸಾಹಿತ್ಯವೂ ಸಹ ತಳಮಟ್ಟದ ಸಮಾಜವನ್ನೂ, ಅನಕ್ಷರಸ್ತ ಸಮುದಾಯಗಳನ್ನೂ ತಲುಪಲು ಸಾಧ್ಯವಾಗಿದೆ.  ಸಾಹಿತ್ಯದ ಹರವಿಗೆ ಅಕ್ಷರ ಜ್ಞಾನ ಅವಶ್ಯವಾದರೆ ರಂಗಭೂಮಿಗೆ ಮನುಷ್ಯನ ಸೂಕ್ಷ್ಮ ಗ್ರಹಿಕೆಯೊಂದೇ ಸಾಕಾಗುತ್ತದೆ.

ಈ ಸೂಕ್ಷ್ಮ ಗ್ರಹಿಕೆ ರಂಗಕರ್ಮಿಗಳಲ್ಲಿ ಇದ್ದಾಗಲೇ ರಂಗಭೂಮಿ ಸಮಾಜಮುಖಿಯಾಗಿ ಬೆಳೆಯುತ್ತದೆ. ಅಲ್ಲಿ ಎಡ-ಬಲ ಪಂಥೀಯ ಭೇದಭಾವಗಳಿಗೆ ಅವಕಾಶ ಇರುವುದಿಲ್ಲ. ಚರಿತ್ರೆಯನ್ನು ಸಮಾಜದ ಮುಂದೆ ಸಾದರಪಡಿಸುವ ಸಂದರ್ಭದಲ್ಲಿ ರಂಗಭೂಮಿಯ ಪರಿಚಾರರಿಗೆ ವರ್ತಮಾನದ ಸೂಕ್ಷ್ಮಗಳ ಅರಿವು ಇರುವಷ್ಟೇ ಭವಿಷ್ಯದ ತಲೆಮಾರುಗಳಿಗೆ ಅಗತ್ಯವಾಗುವ ಆಲೋಚನಾ ಕ್ರಮಗಳ ಅರಿವೂ ಇರಬೇಕಾಗುತ್ತದೆ. ಚಾರಿತ್ರಿಕ ಮಿಥ್ಯೆಗಳನ್ನು ವರ್ತಮಾನದ ವಾಸ್ತವಗಳ ಚೌಕಟ್ಟಿನೊಳಗಿಟ್ಟು ಭವಿಷ್ಯದ ಮುಂಗಾಣ್ಕೆಯ ಸತ್ಯದ ಹಾದಿಯನ್ನು ತೆರವುಗೊಳಿಸುವುದು ರಂಗಭೂಮಿಯ ಜವಾಬ್ದಾರಿಯಾಗಿರುತ್ತದೆ”. ಈ ಜವಾಬ್ದಾರಿಯನ್ನು ಮರೆತು ಯಾವುದೋ ಒಂದು ಸಿದ್ಧಾಂತದ ಕೊಂಡಿಗೆ ಸಿಲುಕಿದಾಗ “ಗತ ಇತಿಹಾಸದ ನಿಜಕನಸುಗಳನ್ನು ವರ್ತಮಾನದ ಮಿಥ್ಯೆಗಳನ್ನಾಗಿ ಮಾಡಿ ಭವಿಷ್ಯದ ಹಾದಿಗಳನ್ನು ಮಸುಕಾಗಿಸಿಬಿಡುವ ಸಾಧ್ಯತೆಗಳಿರುತ್ತವೆ.”. ಮೈಸೂರಿನ ರಂಗಾಯಣ ಇಂತಹ ಒಂದು ವಾತಾವರಣವನ್ನು ಎದುರಿಸಿದೆ.

ಹಾಗಾಗಿ ರಾಜ್ಯ ಸರ್ಕಾರ ರಂಗಾಯಣಕ್ಕೆ ಒಂದು ಕಾಯಕಲ್ಪ ನೀಡುವ ರೀತಿಯಲ್ಲಿ ರಂಗಸಮಾಜವನ್ನು ಪುನರ್‌ ನಿರ್ಮಿಸುವುದರೊಂದಿಗೆ ರಂಗಾಯಣವನ್ನು ನಿರ್ದೇಶಿಸುವ ಹೊಣೆಯನ್ನೂ ಹೊರಿಸಬೇಕಿದೆ. ಈ ನಿಟ್ಟಿನಲ್ಲಿ ರಾಜಕೀಯ ಸಿದ್ಧಾಂತದ ಹಿತಾಸಕ್ತಿಗಳಿಗೆ ಮಣಿಯದೆ, ವ್ಯಕ್ತಿಗತ ಫಲಾಪೇಕ್ಷೆಗಳಿಗೆ ಬಲಿಯಾಗದೆ, ಸ್ವ-ಹಿತಾಸಕ್ತಿಯ ಆಲೋಚನೆಗಳಿಲ್ಲದೆ ಇರುವಂತಹ ರಂಗಕರ್ಮಿಯನ್ನು ಈ ಸಂಸ್ಥೆಗೆ ನೇಮಿಸುವುದು ಸರ್ಕಾರದ ನೈತಿಕ ಹೊಣೆಯಾಗಿದೆ. ಕಳೆದ ಮೂರು ದಶಕಗಳಿಂದ ರಂಗಾಯಣದ ಹೆಜ್ಜೆಗಳೊಡನೆ ಹೆಜ್ಜೆಯಾಗುತ್ತಾ ತಮ್ಮ ಬದುಕನ್ನೇ ರಂಗಭೂಮಿಗೆ ಮುಡಿಪಾಗಿಟ್ಟಿರುವ ಕಲಾವಿದರಿಗೆ ಆದ್ಯತೆ ನೀಡುವ ಮೂಲಕ ರಂಗಾಯಣಕ್ಕೆ ರಂಗಸ್ಪರ್ಶ ನೀಡುವ ತಂಡವನ್ನು ಕಟ್ಟಲು ಸರ್ಕಾರ ನೆರವಾಗಬೇಕಿದೆ. ಈ ರಂಗಸ್ಪರ್ಶದ ಸಾಂಸ್ಕೃತಿಕ ಅಭಿವ್ಯಕ್ತಿಗೆ ಹೆಗಲು ನೀಡಲು ಮೈಸೂರಿನ ಸಾಹಿತ್ಯ-ಸಾಂಸ್ಕೃತಿಕ ಜಗತ್ತು ಸದಾ ಸಿದ್ಧವಾಗಿರುತ್ತದೆ. ಚೆಂಡು ಸರ್ಕಾರದ ಅಂಗಳದಲ್ಲಿರುವುದಾದರೂ, ಗೋಲ್‌ ಪೋಸ್ಟ್‌ಗಳು ಸಮಾಜದ ಮುಂದಿದೆ. ಹಾಗಾಗಿ ಇದು ನಮ್ಮ ಸಾಮಾಜಿಕ ಜವಾಬ್ದಾರಿಯೂ ಹೌದು.  

Donate Janashakthi Media

Leave a Reply

Your email address will not be published. Required fields are marked *