ಗುಂಡಣ್ಣ ಚಿಕ್ಕಮಗಳೂರು
ಕನ್ನಡ ರಂಗಭೂಮಿಯ ಹಿರಿಯ ರಂಗ ನಿರ್ದೇಶಕ , ತನ್ನದೇ ಆದ ವಿಶಿಷ್ಟ ರೀತಿಯ ನಾಟಕಗಳಿಗೆ ಮತ್ತು ನಿರ್ದೇಶನಕ್ಕೆ ಹೆಸರಾಗಿದ್ದ ಗೋಪಾಲಕೃಷ್ಣ ನಾಯರಿ ಇಂದು(ಜನವರಿ 06) ಬೆಳಿಗ್ಗೆ 5.30ರ ಸುಮಾರಿಗೆ ನಿಧನ ಹೊಂದಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.
ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗೋಪಾಲಕೃಷ್ಣ ನಾಯರಿ, ಮಂಗಳೂರು ನಗರದ ಮಂಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಶ್ರೀಮತಿ ಸುಲೋಚನ, ಮಗಳು ಉದಾತ್ತ ಹಾಗು ಮೊಮ್ಮಗಳು ಮತ್ತು ಅಳಿಯರನ್ನಲ್ಲದೆ, ಅವಿಭಕ್ತ ಕುಟುಂಬದ ಎಲ್ಲ ಸದಸ್ಯರನ್ನೂ ಅಗಲಿದ್ದಾರೆ. ಇಂದು ಮದ್ಯಾನ್ಹ ಸಾಲಿಗ್ರಾಮ ದ ಕಾರ್ಕಡದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.
ಇದನ್ನು ಓದಿ: ಸಮುದಾಯ, ರಂಗಭೂಮಿಗಳೊಂದಿಗೆ ದಲಿತಕವಿ ಸಿದ್ಧಲಿಂಗಯ್ಯ ನಂಟು
ನಾಯರಿ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಗೆ ಹೋಗುವ ಮುನ್ನಾದಿನದಿಂದಲೂ ʻಸಮುದಾಯʼ ದೊಟ್ಟಿಗೆ ಸಂಬಂಧ ಇಟ್ಟುಕೊಂಡವರು. ಎನ್ ಎಸ್ ಡಿ ಕೇಂದ್ರದಿಂದ ಮರಳಿದ ಮೇಲೆ ಆರ್ ನಾಗೇಶ್ ನಿರ್ದೇಶನದ ತಾಮ್ರಪತ್ರ ನಾಟಕದಲ್ಲಿ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದರು. ಎನ್ ಎಸ್ ಡಿ ಯಲ್ಲಿ ಈ ನಾಟಕ ಅವರ ಮೇಲೆ ಬಹಳ ಗಂಭೀರವಾದ ಪ್ರಭಾವ ಬೀರಿದ ನಾಟಕ ಎಂದು ಹೇಳುತ್ತಿದ್ದರು.
ನಂತರ ಗಂಗಾಧರ ಸ್ವಾಮಿ ನಿರ್ದೇಶನದಲ್ಲಿ ʻಸಮುದಾಯʼದಿಂದ ಪ್ರಸ್ತುತಪಡಿಸಿದ ʻಕೊಂದು ಕೂಗಿತ್ತು ನೋಡಾʼ ನಾಟಕದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಬೆಂಗಳೂರು ಮತ್ತು ತುಮಕೂರಿನ ನಾಟಕ ಮನೆ ಜೊತೆಗೆ ಗಾಢ ಸಂಬಂಧ ಇಟ್ಟುಕೊಂಡಿದ್ದ ನಾಯರಿ, ಭಾಸ ನ ನಾಟಕಗಳಿಗೆ ಹೆಸರುವಾಸಿಯಾಗಿದ್ದರು.
ಬೆಂಗಳೂರಿನ ಎನ್ ಎಸ್ ಡಿ ಕೇಂದ್ರಕ್ಕೆ ಕೆಲವು ಕಾರ್ಯಾಗಾರಗಳನ್ನು ಮತ್ತು ನಾಟಕಗಳನ್ನೂ ನಿರ್ದೇಶನ ಮಾಡಿದ್ದರು.
ಇದನ್ನು ಓದಿ: ಕಿತ್ತೂರ ಚೆನ್ನಮ್ಮ ನಾಟಕದಲ್ಲಿ ಟಿಪ್ಪುವಿಗೆ ಅವಮಾನ
ಬಹಳ ಗಂಭೀರ ಸ್ವಭಾವದ ನಾಯರಿ, ಹಿರಿಯ ರಂಗ ವಿಮರ್ಶಕರಾದ ಕ.ವೆಂ ರಾಜಗೋಪಾಲರ ಪರಮ ಶಿಷ್ಯರು. ಅದೇ ರೀತಿ ಎಮ್ ಇ ಎಸ್ ಕಾಲೇಜಿನ ರಂಗ ಚಟುವಟಿಕೆಗಳನ್ನು ಪ್ರಾರಂಭದ ದಿನಗಳಲ್ಲಿ ಹುಟ್ಟು ಹಾಕಿದ ಸಂಸ್ಕೃತ ವಿಭಾಗದ ಅಧ್ಯಾಪಕರಾದ ಜೆ ಶ್ರೀನಿವಾಸ ಮೂರ್ತಿ ಅವರ ಅತ್ಯಂತ ಆತ್ಮೀಯರು. ರಘುನಂದನ ಅವರ ಜೊತೆಯೂ ಆತ್ಮೀಯತೆಯನ್ನು ಇಟ್ಟುಕೊಂಡಿದ್ದ ನಾಯರಿ, ಕನ್ನಡ ರಂಗಭೂಮಿಯಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದ್ದ ಒಬ್ಬ ಶ್ರೇಷ್ಟ ವ್ಯಕ್ತಿತ್ವದ ರಂಗ ನಿರ್ದೇಶಕ, ನಟ. ಇಂತಹ ತಲೆಮಾರಿನ ರಂಗಾಸಕ್ತರು ದಕ್ಕುವುದು ಬಹಳ ದುರ್ಲಭ.
ಬೆಂಗಳೂರಿನಲ್ಲಿ, ನಯನ ರಂಗಮಂದಿರದಲ್ಲಿ ಜೆ ಶ್ರೀನಿವಾಸಮೂರ್ತಿ ನಿವೃತ್ತರಾದ ನೆಪಕ್ಕೆ, ನಾಯರಿ ಆಯೋಜಿಸಿದ್ದ ಒಂದು ಕಾರ್ಯಕ್ರಮದಲ್ಲಿ ಅರ್ಧ ದಿನ ಒಟ್ಟಿಗೆ ಇದ್ದುದೇ ಕೊನೆಯ ಭೇಟಿ. ಅಂದು ಹಾಸಾಕೃ ಸಹ ನಮ್ಮ ಜೊತೆಗೆ ಇದ್ದರು. ನಂತರ ರಂಗಭೂಮಿಯ ಮಾಹಿತಿಗಾಗಿ ಊರಿನಿಂದ ಫೋನ್ ಮಾಡಿ, ಒಂದು ಅರ್ಧ ಗಂಟೆ ಮಾತನಾಡಿದ್ದೆವು. ಇಂದು ಅವರ ಫೋನಿಗೆ ಕರೆ ಮಾಡಿ, ಅವರ ಅಕ್ಕನಿಂದ ಮಾಹಿತಿ ಪಡೆಯಲು ಬಹಳ ಕಷ್ಟವೆನಿಸಿತು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಒಂದು ಗಂಭೀರ ಆಲೋಚನೆಗಳ, ಶಿಸ್ತಿನ ರಂಗಭೂಮಿ ಬದ್ದತೆಯ ಕನಸುಗಳನ್ನು ಕಂಡಿದ್ದ, ಹತ್ತು ಹಲವು ಯೋಜನೆಗಳನ್ನು ತಲೆಯಲ್ಲಿ ಭದ್ರವಾಗಿರಿಸಿಕೊಂಡಿದ್ದ, ತನ್ನ ರಂಗ ತಂಡದ ಹೆಸರನ್ನೇ ಸಮಸ್ತರು ಎಂದು ವಿಶಿಷ್ಟವಾಗಿ ಕರೆದುಕೊಂಡಿದ್ದ, ಒಂದಿಷ್ಟು ಗಂಭೀರ ರಂಗಾಸಕ್ತರನ್ನು ಹುಟ್ಟು ಹಾಕಿದ ನಾಯರಿಯವರಿಗೆ ಭಾವಪೂರ್ಣ ಶ್ರದ್ದಾಂಜಲಿ.