ಎಸ್.ವೈ. ಗುರುಶಾಂತ್
- ಅವರು ಉಟ್ಟಿರುವುದು ಇಲಕಲ್ಲ ಸೀರೆ. ಅದಕ್ಕೆ ಕಸೂತಿ ಹಾಕಿರುವುದು ನವಲಗುಂದದವರು.
ಮೇಡಮ್ ನಮ್ಮ ಕಡೆಯ ಸೀರೆ ಉಟ್ಟು ಬಜೆಟ್ ಮಂಡಿಸಿದ್ದು ನಮ್ಮ ಕೆಲಸವನ್ನು ಗೌರವಿಸಿದಂತೆ ಆಗಿದೆ. (ನೇಕಾರರು-ಮಾರಾಟಗಾರರ ಮಾತು) - 156 (?) ಪುಟಗಳ ಬಜೆಟ್ ಭಾಷಣವನ್ನು 68 ನಿಮಿಷದಲ್ಲಿ ಓದಿದರು!
- ಬಜೆಟ್ ಮಂಡಿಸಿದ 68 ನಿಮಿಷದಲ್ಲಿ ಪ್ರಧಾನಿ ಮೋದಿಯವರು 124 ಬಾರಿ ಮೇಜು ಕುಟ್ಟಿದರು!
ಆಹಾ! ನಮ್ಮ ಮಾಧ್ಯಮಗಳು ಎಷ್ಟು ವೃತ್ತಿನಿಷ್ಠತೆಯಿಂದ ವರದಿ ಮಾಡುತ್ತಿವೆ! ಎಷ್ಟು ಸೂಕ್ಷ್ಮವಾಗಿ ವಿಷಯಗಳನ್ನು ಗಮನಿಸುತ್ತಿವೆ. (ಬಹುಶಃ ಪ್ರಧಾನಿ ಮೇಜು ಕುಟ್ಟುವರು ಎಂಬುದನ್ನು ಮಾಧ್ಯಮದವರಿಗೆ ಮೊದಲೇ ತಿಳಿಸಿರಬೇಕು. ಅದನ್ನೇ ಎಣಿಸಲೆಂದೇ ಒಬ್ಬನಿಗೆ ಅಸೈನ್ ಮೆಂಟ್ ಮಾಡಿರಬೇಕು!)
ಮಾಧ್ಯಮಗಳು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು ಫೆಬ್ರವರಿ 2, 2023 ರಂದು ಲೋಕಸಭೆಯಲ್ಲಿ ಮಂಡಿಸಿದ ಭಾರತ ಸರಕಾರದ 2023-24 ರ ಸಾಲಿನ ಬಜೆಟ್ ನ್ನು `ಅಮೃತ ಕಾಲದ ಮೊದಲ ಬಜೆಟ್’, ತೆರಿಗೆಗಳ ಹೊರೆ ಇಲ್ಲದ ಬಜೆಟ್, ಜನಪ್ರಿಯತೆಗಿಂತ ಜನಪರತೆಗೆ ಮಣೆ, ಇತ್ಯಾದಿ ಬಣ್ಣಿಸಿದ್ದಾರೆ. 2047 ರಲ್ಲಿ ಭಾರತ ಸ್ವಾತಂತ್ರೋತ್ಸವದ ನೂರರ ಸಂಭ್ರಮ ಆಚರಿಸುವಾಗ ವಿಶ್ವದ ಬಹು ದೊಡ್ಡ ಆರ್ಥಿಕ ಶಕ್ತಿಯಾಗಿ ಇರಲಿದೆ. ಹೀಗಾಗಿ ಈ ಬಜೆಟ್ ಅಮೃತ ಕಾಲದ ಮೊದಲ ಬಜೆಟ್ ಎಂದು ಸ್ವತಃ ಮೋದಿಯವರೇ ಹೇಳಿದ್ದಾರೆ! ಮುಂದಿನ 150 ವರ್ಷಗಳಿಗೂ ಅಡಿಪಾಯವಾಗಿರುವ ಬಜೆಟ್ ಇದು ಎಂದು ಆಡಳಿತ ಪಕ್ಷದ ಸಂಸದ ಹೇಳಿದ್ದಾನೆ! ಆಹಾ! ಇಂತಹ ‘ಮುತ್ಸದ್ದಿ’ ಅರ್ಥಶಾಸ್ತ್ರಜ್ಞ ರ ಮಾತುಗಳನ್ನು ಕೇಳಿ ಯಾರಾದರೂ ಮುಸಿ ಮುಸಿ ನಗಬೇಕಷ್ಟೇ. ಜೋರಾಗಿ ನಕ್ಕರೂ ಅದು ದೇಶದ್ರೋಹವಾದೀತು!
ಒಂದು ವೇಳೆ ಈ ಬಜೆಟ್ ಆ ಹೇಳಿಕೆಗಳಂತೆ ಅಂತಃಸತ್ವ ಹೊಂದಿದ್ದರೆ ಇಷ್ಟೊಂದು ಪುಂಗಿ ಊದಬೇಕಿತ್ತೇಕೆ ಎನ್ನುವುದು ಸಾಮಾನ್ಯ ಪ್ತಶ್ನೆ. ಇವರ ಬಜೆಟ್ ಹೇಗೇ, ಎಲ್ಲಿ ತಯಾರಾಗುತ್ತವೆ ಎನ್ನುವುದು ತಿಳಿಯದೇ?
ಇರಲಿ, ಸಶಕ್ತ ಭಾರತ ಕಟ್ಟಬೇಕು ಎನ್ನುವ ಭಾರತ ಸರ್ಕಾರ ರಾಜ್ಯಗಳ ಸಬಲೀಕರಣಕ್ಕೆ, ಸಶಕ್ತತೆಗೆ ನೀಡಿರುವ ಕೊಡುಗೆ ಏನು? ನಮ್ಮ ರಾಜ್ಯಕ್ಕೆ ನೀಡಿದ ಕೊಡುಗೆ ಏನು? ಇನ್ಮೇನು ಕೆಲವೇ ತಿಂಗಳಲ್ಲಿ ವಿಧಾನ ಸಭಾ ಚುನಾವಣೆಗೆ ಹೋಗಲಿರುವ ಕರ್ನಾಟಕಕ್ಕೆ ರಾಜಕೀಯ ಲಾಭಕ್ಲಾದರೂ ಒಂದಿಷ್ಟು ಹೊಸ ಯೋಜನೆ, ಹಣವನ್ನು ಮೀಸಲಿಟ್ಟು ಘೋಷಿಸಬಹುದು ಎನ್ನುವ ಸಾಮಾನ್ಯ ನಿರೀಕ್ಷೆಯೂ ಈ ಬಾರಿ ಸುಳ್ಳಾಗಿದೆ. ಹೇಗೂ ಕರ್ನಾಟಕದ ಜನ ನಮಗೇ ಓಟು ಹಾಕುವರು ಎಂಬ ನಂಬಿಕೆಯೇ? ಅಥವಾ ಜನಪ್ರಿಯ-ಜನಮರುಳು ಯೋಜನೆಗಳನ್ನು ರಾಜ್ಯ ಸರ್ಕಾರವೇ ತನ್ನ ಬಜೆಟ್ ನಲ್ಲಿ ಪ್ರಕಟಿಸಿ ಮುಂದೆ ಬರುವ ಯಾವ ಸರ್ಕಾರ ಬಂದರೂ ಅವರೇ ಹಣ ಹೊಂದಿಸಿಕೊಳ್ಳಲಿ, ತಾನೇನಿದ್ದರೂ ರಾಜ್ಯಗಳಲ್ಲಿ ಸಂಗ್ರಹಿಸುವ ತೆರಿಗೆ ಇಟ್ಟುಕೊಂಡರಾಯಿತು ಎನ್ನುವ ಯೋಚನೆಯೇ?
ಒಂಬತ್ತು ವರ್ಷಗಳ ದೀರ್ಘ ಮೌನ ವಹಿಸಿ ಮದ್ಯ ಕರ್ನಾಟಕದಲ್ಲಿರುವ ಭದ್ರಾ ಮೇಲ್ದಂಡೆ ಯೋಜನೆಗೆ ಕೆಂದ್ರ ಬಜೆಟ್ ನಲ್ಲಿ 5300 ಕೋಟಿ ರೂ.ಗಳನ್ನು ಘೋಷಿಸಿದ್ದು ಬಿಟ್ಟರೆ ರಾಜ್ಯದ ಆರ್ಥಿಕತೆಗೆ, ಅಭಿವೃದ್ದಿಗೆ ಆಧಾರವಾಗಬಲ್ಲ ಯಾವ ಯೋಜನೆ, ಹಣ ನೀಡಿಕೆಯೇ ಇಲ್ಲ. ನೀರಾವರಿ ಯೋಜನೆಗೆ ಹಣ ನೀಡಲಾಗಿದೆ ಎನ್ನುವುದೂ ಕೂಡ ಕೇವಲ ಭಾಗಶಃ ಅಷ್ಟೇ. ಅನೇಕ ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಮಹದಾಯಿ, ಎತ್ತಿನ ಹೊಳೆ, ಮೇಕೆದಾಟು, ಕೃಷ್ಣಾ ಮೆಲ್ದಂಡೆ ಯೋಜನೆ-3 ರ ಬಗ್ಗೆ ಚಕಾರವಿಲ್ಲ. ಭದ್ರಾದ ಯೋಜನೆ ಒಟ್ಟು 23,000 ಕೋಟಿ ರೂ.ಗಳ ಯೋಜನೆ. ಒಂದು ವೇಳೆ ಘೋಷಿಸಿದಂತೆ ಪೂರ್ಣ ಹಣ ನೀಡಿದರೂ ಅದು ಹಸಿದ ಹೊಟ್ಟಗೆ ಅರೆ ಕಾಸಿನ ಮಜ್ಜಿಗೆಯಂತೆ. ಅದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿದ್ದು ಬಿಟ್ಟರೆ ಕೃಷ್ಣಾ ಸೇರಿದಂತೆ ಉಳಿದ ಯೋಜನೆಗಳು ರಾಷ್ಟ್ರ ಯೋಜನೆಗಳಲ್ಲವೇ ಎಂಬ ಪ್ರಶ್ನೆ ಎದ್ದಿದೆ. ಈ ವಿಷಯದಲ್ಲಿ ರಾಜ್ಯದಿಂದ ಆರಿಸಿಹೋದ ಸಂಸದರು, ಪ್ರನಿಧಿಸುವ ಕೇಂದ್ರ ಸಚಿವರು ವಿಫಲರಾಗಿದ್ದಾರೆ, ಅವರಿಗೆ ಆಗ್ರಹಿಸುವ ಧೈರ್ಯವೇ ಇಲ್ಲ ಎಂಬ ಟೀಕೆಗಳೂ ವ್ಯಕ್ತವಾಗಿವೆ. ಗಂಗಾ ಅರತಿಯಂತೆ ತುಂಗಾ ಆರತಿ ಕಾರ್ಯಕ್ರಮವೂ ಸಹ ಜನರಲ್ಲಿಯ ಧಾರ್ಮಿಕ ಮನೋಭಾವದ ದುರ್ಲಾಭ ಹೊಡೆವ ಹಂಚಿಕೆ. ಭದ್ರಾ ಬಗೆಗಿನ ‘ಕಾಳಜಿ’ ಕೇವಲ ಮದ್ಯ ಕರ್ನಾಟಕದ ಜಿಲ್ಲೆಗಳ ಮತಗಳ ಮೇಲೆ ಕಣ್ಣಿರಿಸಿದ್ದು ಎನ್ನುವುದೂ ಸ್ಪಷ್ಟ. ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ತುಮಕೂರು ಪ್ರದೇಶಗಳ 2,25,515 ಹೆ. ಭೂಮಿಗೆ ಭದ್ರಾ, ತುಂಗಾಗಳಿಂದ 29.90 ಟಿ.ಎಂ.ಸಿ ನೀರುಣಿಸುವ ಯೋಜನೆ ಎಂಬುದು ನಿಜವಾದರೂ ಪೂರ್ಣ ಅನುಷ್ಠಾನ ಎಂದು?
ಕಳೆದ ಬಜೆಟ್ವನಲ್ಲಿದ್ದ ನಗರ ಸಬರ್ಬನ್ ರೈಲ್ವೇ ಯೋಜನೆಯ ಬಗ್ಗೆ ಈ ಬಾರಿ ಪ್ರಸ್ತಾಪವಿಲ್ಲ. 18,000 ಕೋಟಿ ರೂ.ಗಳ ಯೋಜನೆಗೆ ಅಲ್ಪ ಹಣ ನೀಡಿಕೆ. ಕುಡಚಿ-ಬಾಗಲಕೋಟೆ ರೈಲು ಮಾರ್ಗಕ್ಕೆ ಹಿಂದೆ 50 ಕೋಟಿ ರೂ.ಗಳು ನೀಡಿದ್ದು ಬಿಟ್ಟರೆ ಈ ಬಾರಿ ಏನೂ ಇಲ್ಲ. ಅಂದರೆ ಅದು ಅಲ್ಲೇ ತುಕ್ಕು ಹಿಡಿಯಲಿದೆ. ಇವೆಲ್ಲಾ ಗಮನಿಸಿದರೆ ರಾಜ್ಯದ ಮೂಲ ಸೌಕರ್ಯ ಅಭಿವೃದ್ದಿ ಬಗ್ಗೆ ಬಿಜೆಪಿ ಗಿರುವ ತಾತ್ಸಾರ, ನಿರ್ಲಕ್ಷ್ಯತನಗಳು ಎದ್ದು ಕಾಣುತ್ತವೆ. ಒಂದು ನಿರ್ದಿಷ್ಟ ಕಾಲಮಿತಿಯನ್ನು ಇರಿಸಿಕೊಂಡು ಅಗತ್ಯ ಹಣ ನೀಡಿ ಪೂರ್ಣಗೊಳಿಸದಿದ್ದರೆ ಅವು ನೆನೆಗುದಿಗೆ ಬೀಳುವುದು ಗ್ಯಾರಂಟಿ.