ನವದೆಹಲಿ: ಸಂಸತ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಇಂದು(ಆಗಸ್ಟ್ 04) ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದು, ‘ಈ ವರ್ಷದ ಜನವರಿ 1ರ ಮಾಹಿತಿ ಪ್ರಕಾರ ವಿವಿಧ ರಾಜ್ಯಗಳಲ್ಲಿ 1,472 ಐಎಎಸ್ ಹಾಗೂ 864 ಐಪಿಎಸ್ ಹುದ್ದೆಗಳು ಖಾಲಿ ಇವೆ’ ಎಂದು ತಿಳಿಸಿದ್ದಾರೆ.
‘ಬಸ್ವಾನ್ ಸಮಿತಿಯ ಶಿಫಾರಸ್ಸಿನಂತೆ ಪ್ರತಿ ವರ್ಷ ನಾಗರಿಕ ಸೇವಾ ಪರೀಕ್ಷೆಗಳ ಮೂಲಕ 180 ಮಂದಿಯನ್ನು ಐಎಎಸ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. 2012ರಿಂದಲೂ ಈ ಪ್ರಕ್ರಿಯೆ ನಡೆದುಕೊಂಡು ಬಂದಿದೆ. ವರ್ಷವೊಂದರಲ್ಲಿ 180ಕ್ಕೂ ಅಧಿಕ ಮಂದಿಯನ್ನು ಈ ಹುದ್ದೆಗೆ ನೇಮಿಸಿಕೊಳ್ಳುವುದು ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಂತೆ. ಅದು ಮಸ್ಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿಯ (ಎಲ್‌ಬಿಎಸ್‌ಎನ್‌ಎಎ) ಸಾಮರ್ಥ್ಯವನ್ನೂ ಮೀರಿದಂತಾಗುತ್ತದೆ. ಇದರಿಂದ ಅಭ್ಯರ್ಥಿಗಳ ತರಬೇತಿಗೂ ತೊಡಕಾಗಲಿದೆ’ ಎಂದು ತಿಳಿಸಿದ್ದಾರೆ.
‘ಹುದ್ದೆಗಳ ಭರ್ತಿಯು ನಿರಂತರವಾದ ಪ್ರಕ್ರಿಯೆಯಾಗಿದೆ. ನಾಗರಿಕ ಸೇವಾ ಪರೀಕ್ಷೆಯ ಮೂಲಕ ಭರ್ತಿ ಮಾಡಲಾಗುವ ಐಪಿಎಸ್ ಹುದ್ದೆಗಳ ಸಂಖ್ಯೆಯನ್ನು 200ಕ್ಕೆ ಹೆಚ್ಚಿಸಲಾಗಿದೆ. 2020ರಿಂದಲೇ ಇದು ಜಾರಿಯಾಗಿದೆ. ಅನುಭವದ ಆಧಾರದಲ್ಲಿ ಅಧಿಕಾರಿಗಳಿಗೆ ಪದೋನ್ನತಿ ನೀಡುವ ಬಗ್ಗೆ ಯುಪಿಎಸ್‌ಸಿ ಆಯ್ಕೆ ಸಮಿತಿಯು ರಾಜ್ಯ ಸರ್ಕಾರಗಳೊಂದಿಗೆ ಸಭೆ ನಡೆಸಿ ಚರ್ಚಿಸಲಿದೆ’ ಎಂದು ಮಾಹಿತಿ ನೀಡಿದ್ದಾರೆ.