ಪ್ರೊ. ಟಿ.ಆರ್.ಚಂದ್ರಶೇಖರ
ಕೇಂದ್ರ ಸರಕಾರ ಕಳೆದ ವಾರ ತೈಲದ ತೆರಿಗೆಗಳಲ್ಲಿ ಅಲ್ಪಕಡಿತ ಮಾಡಿ ರಾಜ್ಯಗಳೂ ತೆರಿಗೆ ಕಡಿತ ಮಾಡಬೇಕು ಎಂದು ಪ್ರಧಾನಿಗಳೇ ಹುಯಿಲೆಬ್ಬಿಸಿದರು. ಹೆಚ್ಚಿನ ರಾಜ್ಯಗಳು ಹಾಗೆ ಮಾಡಲು ಹಿಂಜರಿದವು. ಇದಕ್ಕೆ ಕಾರಣ ರಾಜ್ಯಗಳ ದುರ್ಭರ ಹಣಕಾಸಿನ ಸ್ಥಿತಿ. ಇದಕ್ಕೆ ಕೇಂದ್ರ ಸರಕಾರ ಅನುಸರಿಸುತ್ತಿರುವ ಮತ್ತು ರಾಜ್ಯಗಳ ಮೇಲೂ ಹೇರಲಾಗುತ್ತಿರುವ ನವ-ಉದಾರವಾದಿ ನೀತಿಗಳಲ್ಲದೆ, ಆರ್ಥಿಕ ಒಕ್ಕೂಟವಾದದ ನೀತಿಗಳ ತೀವ್ರ ಉಲ್ಲಂಘನೆಯಿಂದ ರಾಜ್ಯಗಳ ಸಂಪನ್ಮೂಲ ಸಂಗ್ರಹ ಮೂಲಗಳು ಕಡಿಮೆಯಾಗಿ ಬೊಕ್ಕಸ ಬರಿದಾಗುತ್ತಿರುವುದು. ಇದು ಯಾಕೆ ಹೇಗೆ ನಡೆಯುತ್ತಿದೆ ಎಂದು ಲೇಖಕರು ಕರ್ನಾಟಕದ ನಿರ್ದಿಷ್ಟ ಉದಾಹರಣೆ ಮತ್ತು ಅಂಕೆಸಂಖ್ಯೆಗಳೊಂದಿಗೆ ತಿಳಿಸಿದ್ದಾರೆ.
ನಮ್ಮದು ಒಕ್ಕೂಟ (ಫೆಡರೆಲ್) ರಾಜಕೀಯ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಎರಡೂ ಪಕ್ಷಗಳಿಗೆ – ರಾಜ್ಯಗಳು ಮತ್ತು ಒಕ್ಕೂಟ ಸರ್ಕಾರ — ಸಂವಿಧಾನದಲ್ಲಿ ಸಮಾನವಾದ ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ನೀಡಲಾಗಿದೆ. ಇವೆರಡರ ನಡುವಣ ಸಂಬಂಧದಲ್ಲಿಅತ್ಯಂತ ವಿವಾದಾತ್ಮಕವಾದುದೆಂದರೆ ಹಣಕಾಸು ಸಂಬಂಧ. ಇದು ವಿವಾದಾತ್ಮಕ, ಏಕೆಂದರೆ ಒಕ್ಕೂಟ ಸರ್ಕಾರದ ತೆರಿಗೆಗಳೆಲ್ಲ ಹೆಚ್ಚು ಉತ್ಪತ್ತಿ ನೀಡುವ ತೆರಿಗೆಗಳಾಗಿದ್ದರೆ ರಾಜ್ಯಗಳ ತೆರಿಗೆಗಳು ಕಡಿಮೆ ಉತ್ಪತ್ತಿ ನೀಡುವ ತೆರಿಗೆಗಳು. ಇದಲ್ಲದೆ 2014ರಿಂದ ಒಕ್ಕೂಟ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಸಂವಿಧಾನ ನೀಡಿರುವ ಅಧಿಕಾರಗಳನ್ನೆಲ್ಲ ತನ್ನಲ್ಲಿ ಕೇಂದ್ರೀಕರಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದೆ.
ಇದಕ್ಕೆ ಅನೇಕ ನಿದರ್ಶನಗಳಿವೆ. ಉದಾ: ಕೃಷಿ ಕಾಯಿದೆಗಳು(ಈಗ ಅವನ್ನು ಒಕ್ಕೂಟ ರದ್ದುಪಡಿಸಿದೆ, ಅದು ಬೇರೆ ವಿಚಾರ). ಸಂವಿಧಾನದ ಪ್ರಕಾರ ರಾಜ್ಯ ಪಟ್ಟಿಯಲ್ಲಿರುವ ಕೃಷಿಯ ಬಗ್ಗೆ ಕಾಯಿದೆ ರೂಪಿಸುವ ಹಕ್ಕನ್ನು ಸಂವಿಧಾನ ರಾಜ್ಯಗಳಿಗೆ ನೀಡಿದೆ. ಆದರೆ ‘ವ್ಯಾಪಾರ, ವಾಣಿಜ್ಯ ಮತ್ತು ಉತ್ಪಾದನೆ, ಪೂರೈಕೆ ಮತ್ತು ವಿತರಣೆ’ ಎಂಬುದು ಸಂವಿಧಾನದ ಸಂಯುಕ್ತ ಪಟ್ಟಿಯ 33 ನೆಯ ಕ್ರಮ ಸಂಖ್ಯೆಯಲ್ಲಿದೆ ಎಂದು ಒಕ್ಕೂಟ ಸರ್ಕಾರವು ನೆಪ ಮಾಡಿ ರಾಜ್ಯಗಳ ಅಧಿಕಾರಗಳನ್ನು ಹರಣ ಮಾಡಿ ಅವುಗಳನ್ನು ತನ್ನ ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಅನೇಕ ದಶಕಗಳಿಂದ ರಾಜ್ಯಗಳು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದ ವೈದ್ಯಕೀಯ-ದಂತ ವೈದ್ಯಕೀಯ ಪ್ರವೇಶ ಪರೀಕ್ಷೆಗಳನ್ನು ‘ನೀಟ್’ ಎಂಬ ಕ್ರಮದ ಮೂಲಕ ಒಕ್ಕೂಟ ಸರ್ಕಾರವು ನಡೆಸುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಸಂವಿಧಾನವು ತೆರಿಗೆ ವಿಧಿಸುವ ಹಕ್ಕನ್ನು ರಾಜ್ಯಗಳಿಗೂ ನೀಡಿತ್ತು. ಆದರೆ ಇದನ್ನು ‘ಒಂದು ದೇಶ-ಒಂದು ತೆರಿಗೆ’ ಎಂಬ ಘೋಷಣೆಯಡಿಯಲ್ಲಿ ಒಕ್ಕೂಟ ಸರ್ಕಾರವು ತನ್ನ ವಶ ಮಾಡಿಕೊಂಡಿದೆ. ಇಂತಹ ಅನೇಕ ಘಟನೆಗಳಿವೆ.
ಒಟ್ಟಾರೆ ಕಳೆದ 72 ವರ್ಷಗಳಿಂದ ಎಲ್ಲ ಇತಿ-ಮಿತಿಗಳ ನಡುವೆ ಒಕ್ಕೂಟ ಸಂಬಂಧವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗಿತ್ತು. ಆದರೆ 2014 ರಿಂದ ಈ ವ್ಯವಸ್ಥೆಗೆ ಅಪಾಯವುಂಟು ಮಾಡುವ ರೀತಿಯ ಬೆಳೆವಣಿಗೆಗಳು ನಿರಂತರವಾಗಿ ನಡೆಯುತ್ತಿವೆ. ಈ ಪ್ರಬಂಧದ ಮೊದಲ ಭಾಗದಲ್ಲಿ ಹೇಗೆ ಒಕ್ಕೂಟ ಸರ್ಕಾರವು 2014ರಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಮಾಡಿಕೊಂಡು ಬರುತ್ತಿದೆ ಎಂಬುದನ್ನು ಸ್ಥೂಲವಾಗಿ ವಿವರಿಸಲಾಗಿದೆ. ಎರಡನೆಯ ಭಾಗದಲ್ಲಿ ಒಕ್ಕೂಟ-ರಾಜ್ಯಗಳ ನಡುವಣ ಹಣಕಾಸು ಸಂಬಂಧವನ್ನು ಹೇಗೆ ಒಕ್ಕೂಟ ಸರ್ಕಾರ ಕೆಡಿಸುತ್ತಿದೆ ಮತ್ತು ಇದರಿಂದ ಕರ್ನಾಟಕಕ್ಕೆ ಏನೆಲ್ಲ ಅನ್ಯಾಯವಾಗುತ್ತಿದೆ ಎಂಬುದನ್ನು ಚರ್ಚಿಸಲಾಗಿದೆ.
ಒಕ್ಕೂಟ ಸರ್ಕಾರದಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ
ದಕ್ಷಿಣ ಭಾರತದ ಐದು ರಾಜ್ಯಗಳು(ಆಂಧ್ರ, ತೆಲಂಗಾಣ, ಕರ್ನಾಟಕ ತಮಿಳುನಾಡು ಮತ್ತು ಕೇರಳ) ದೇಶದ ಒಟ್ಟು ಭೌಗೋಳಿಕ ವಿಸ್ತೀರ್ಣದಲ್ಲಿ ಶೇ. 19.25 ಮತ್ತು ದೇಶದ ಜನಸಂಖ್ಯೆಯಲ್ಲಿ ಶೇ. 20.67 ಪಾಲು ಪಡೆದಿವೆ. ಆದರೆ ದೇಶದ ಜಿಡಿಪಿಗೆ ಇವುಗಳ ಕೊಡುಗೆ ಶೇ. 30.01. ಆದರೆ ಉತ್ತರ ಭಾರತದ ರಾಜ್ಯಗಳು (ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಗುಜರಾತ್ ಮತ್ತು ರಾಜಸ್ಥಾನ) ದೇಶದ ಭೌಗೋಳಿಕ ವಿಸ್ತೀರ್ಣದಲ್ಲಿ ಶೇ. 28.92ರಷ್ಟು ಮತ್ತು ದೇಶದ ಜನಸಂಖ್ಯೆಯಲ್ಲಿ ಶೇ. 38.47 ಪಾಲು ಪಡೆದಿವೆ. ಆದರೆ ದೇಶದ ಜಿಡಿಪಿಗೆ ಇವುಗಳ ಕಾಣಿಕೆ ಕೇವಲ ಶೇ. 17.30. ದೇಶದಲ್ಲಿ 2018-19ರಲ್ಲಿ ಒಟ್ಟು ಸಂಗ್ರಹವಾದ ನೇರ ತೆರಿಗೆ ರೂ.11.38 ಲಕ್ಷ ಕೋಟಿ. ಇದರಲ್ಲಿ ದಕ್ಷಿಣ ಭಾರತದ ರಾಜ್ಯಗಳ ಕೊಡುಗೆ ರೂ. 3.73 ಲಕ್ಷಕೋಟಿ (ಶೇ. 32.78). ಆದರೆ ಉತ್ತರ ಭಾರತದ ಐದು ರಾಜ್ಯಗಳ ಕಾಣಿಕೆ ರೂ.1.10 ಲಕ್ಷಕೋಟಿ (ಶೇ. 9.37). ಇದಿಷ್ಟೆ ಅಲ್ಲ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ, ತಲಾ ವರಮಾನದಲ್ಲಿ, ಆರೋಗ್ಯ ಮತ್ತು ಶೈಕ್ಷಣಿಕ ವಲಯಗಳಲ್ಲಿ ದಕ್ಷಿಣ ಭಾರತದ ರಾಜ್ಯಗಳು ಮುಂಚೂಣಿಯಲ್ಲಿವೆ. ನೀತಿ ಆಯೋಗ ಪ್ರಕಟಿಸಿರುವ ವರದಿಯ ಪ್ರಕಾರ ಬಹುಮುಖಿ ಬಡತನದ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ (ಶೇ. 25.01) ದಕ್ಷಿಣ ಭಾರತದ ರಾಜ್ಯಗಳಲ್ಲಿ ಕೆಳಮಟ್ಟದಲ್ಲಿದ್ದರೆ ಉತ್ತರ ಭಾರತದ ರಾಜ್ಯಗಳಲ್ಲಿ ಇದು ಶೇಕಡ 30ಕ್ಕಿಂತ ಅಧಿಕವಾಗಿದೆ.
ಆದರೆ ದಕ್ಷಿಣದ ರಾಜ್ಯಗಳ ಸಿದ್ಧಿ-ಸಾಧನೆಗಳನ್ನು ಇಂದಿನ ಒಕ್ಕೂಟ ಸರ್ಕಾರ ಗುರುತಿಸಲು ಸಿದ್ಧವಿಲ್ಲ. ಬದಲಾಗಿ ಇವುಗಳನ್ನು ಹೀಯಾಳಿಸಲಾಗುತ್ತಿದೆ. ಉತ್ತರ ಪ್ರದೇಶದ ಮಾದರಿ-ಗುಜರಾತ್ ಮಾದರಿಯನ್ನು ಅಳವಡಿಸಿಕೊಳ್ಳುವುದರ ಬಗ್ಗೆ ಪ್ರಧಾನಮಂತ್ರಿ-ಇತರೆ ಮಂತ್ರಿಗಳು ಅಬ್ಬರಿಸುತ್ತಿದ್ದಾರೆ. ದೇಶದ ಜಿಡಿಪಿಗೆ ದಕ್ಷಿಣದ ರಾಜ್ಯಗಳ ಕೊಡುಗೆ ಅಪಾರ. ದೇಶದ ತೆರಿಗೆ ರಾಶಿಗೆ ಇವುಗಳ ಕೊಡುಗೆ ಅಪಾರ. ಈ ರಾಜ್ಯಗಳ ಸಾಧನೆಗೆ ತಕ್ಕುದಾದ ಬೆಂಬಲವನ್ನುಒಕ್ಕೂಟ ಸರ್ಕಾರ ನೀಡುತ್ತಿಲ್ಲ. ತೆರಿಗೆ ಹಣವನ್ನು ರಾಜ್ಯಗಳಿಗೆ ಹಂಚುವುದರಲ್ಲಿ ಮತ್ತು ಸಹಾಯ ಅನುದಾನವನ್ನು ನೀಡುವಲ್ಲಿ ಒಕ್ಕೂಟ ಸರ್ಕಾರ ತಾರತಮ್ಯ ಮಾಡುತ್ತಿದೆ. ಉದಾ: ಒಕ್ಕೂಟ ತೆರಿಗೆ ರಾಶಿಯಲ್ಲಿ(ರೂ.81.66 ಲಕ್ಷಕೋಟಿ) 15ನೆಯ ಹಣಕಾಸು ಆಯೋಗದ ಶಿಫಾರಸ್ಸಿನಂತೆ 2022-23ರಲ್ಲಿ ದಕ್ಷಿಣ ಭಾರತದ ರಾಜ್ಯಗಳಿಗೆ ಒಕ್ಕೂಟದ ಹಂಚಿಕೊಳ್ಳುವ ತೆರಿಗೆ ರಾಶಿಯಿಂದ ದೊರೆಯುವ ಮೊತ್ತ 1.29 ಲಕ್ಷಕೋಟಿ(ಶೇ.15.79)ಯಾದರೆ ಉತ್ತರ ಭಾರತದ ರಾಜ್ಯಗಳಿಗೆ ದೊರೆಯುವ ಮೊತ್ತ ರೂ.3.09 ಲಕ್ಷಕೋಟಿ(ಶೇ.37.84). ಹಿಂದುಳಿದ ರಾಜ್ಯಗಳಿಗೆ ಹೆಚ್ಚು ಹೆಚ್ಚು ನೆರವು ಬೇಕು ಎಂಬುದ ಬಗ್ಗೆ ಭಿನ್ನಾಭಿಪ್ರಾಯ ಸಾಧ್ಯವಿಲ್ಲ. ಆದರೆ ದಕ್ಷಿಣ ಭಾರತದ ರಾಜ್ಯಗಳಿಗೆ ತಾರತಮ್ಯ ಮಾಡುವುದು, ಅವುಗಳನ್ನು ಹೀಯಾಳಿಸುವುದು, ಇಲ್ಲಿ ಧಾರ್ಮಿಕ ದಳ್ಳುರಿಯನ್ನು ಹಚ್ಚುವುದಕ್ಕೆ ಪ್ರಯತ್ನಿಸುವುದು ಸಲ್ಲ. ದಕ್ಷಿಣ ಭಾರತದ ಪ್ರಗತಿಪರ ಅಭಿವೃದ್ಧಿಗೆ ಅವು ಕಾಪಿಟ್ಟುಕೊಂಡು ಬರುತ್ತಿರುವ ಧಾರ್ಮಿಕ ಸಹಿಷ್ಣುತೆ, ಸಾಮಾಜಿಕ ನ್ಯಾಯದ ನೀತಿಗಳು ಮತ್ತು ಶಿಕ್ಷಣ-ಆರೋಗ್ಯಕ್ಕೆ ನೀಡುತ್ತಿರುವ ಆದ್ಯತೆ ಮುಂತಾದ ಸಂಗತಿಗಳ ಕಾಣಿಕೆ ಮಹತ್ವದ್ದಾಗಿದೆ. ಇವುಗಳಿಗೆ ವಿರುದ್ಧವಾದ ಸಂಗತಿಗಳು ಉತ್ತರ ಭಾರತದ ರಾಜ್ಯಗಳ ಹಿಂದುಳಿದಿರುವಿಕೆಗೆ ಕಾರಣವಾಗಿವೆ.
ಕರ್ನಾಟಕ ಅನುಭವಿಸುತ್ತಿರುವ ಅನ್ಯಾಯ
ಮೊದಲನೆಯದಾಗಿ 15ನೆಯ ಹಣಕಾಸು ಆಯೋಗವು ಒಕ್ಕೂಟ ತೆರಿಗೆ ರಾಶಿಯಲ್ಲಿ ಕರ್ನಾಟಕದ ಪಾಲನ್ನು ಹಿಂದಿನ ಶೇ.4.713 ರಷ್ಟಿದ್ದುದನ್ನು ಶೇ. 3.647ಕ್ಕಿಳಿಸಿದೆ. ಇಲ್ಲಿನ ಕಡಿತದ ಪ್ರಮಾಣಾಂಶ ಶೇ. (-)1.066. ದೇಶದಲ್ಲಿ ಅತಿ ಹೆಚ್ಚು ಕಡಿತಕ್ಕೆ ಕರ್ನಾಟಕ ಒಳಗಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು 15ನೆಯ ಹಣಕಾಸು ಆಯೋಗವು ಕರ್ನಾಟಕಕ್ಕೆ 2020-21ರಲ್ಲಿ ವಿಶೇಷ ಅನುದಾನ ರೂ.5495 ಕೋಟಿ ಶಿಫಾರಸ್ಸು ಮಾಡಿತ್ತು. ಈ ಶಿಫಾರಸ್ಸನ್ನು ಕರ್ನಾಟಕವನ್ನು ಪ್ರತಿನಿಧಿಸುವ ವಿತ್ತಮಂತ್ರಿ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ತಿರಸ್ಕರಿಸಿದ್ದರು. ಒಂದು ಸಂವಿಧಾನಾತ್ಮಕ ಸಂಸ್ಥೆಯ ಶಿಫಾರಸ್ಸಿನಂತೆ ತನ್ನ ಪಾಲನ್ನು ಪಡೆದುಕೊಳ್ಳುವುದು ಕರ್ನಾಟಕದ ‘ಡಬಲ್ ಎಂಜಿನ್’ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ.
ಇದಿಷ್ಟೆ ಅಲ್ಲ. ದೊಡ್ಡ ಪ್ರಮಾಣದಲ್ಲಿ ಕರ್ನಾಟಕಕ್ಕೆ ಒಕ್ಕೂಟ ಸರ್ಕಾರವು ಅನ್ಯಾಯವೆಸಗುತ್ತಿದೆ. ಒಕ್ಕೂಟ ಸರ್ಕಾರವು ರಾಜ್ಯಗಳಿಗೆ ಪ್ರತಿವರ್ಷ ತನ್ನ ಬಜೆಟ್ಟಿನಲ್ಲಿ ಎರಡು ರೀತಿಯಲ್ಲಿ ಅನುದಾನ ನೀಡುತ್ತದೆ. (1). ಒಕ್ಕೂಟ ತೆರಿಗೆ ರಾಶಿಯಲ್ಲಿ ಪಾಲು. (2). ಒಕ್ಕೂಟ ರಾಜ್ಯಗಳಿಗೆ ನೀಡುವ ಸಹಾಯಾನುದಾನ. ಕರ್ನಾಟಕದ 2009-10ರ ಒಟ್ಟು ಬಜೆಟ್ ಮೊತ್ತದಲ್ಲಿ ಒಕ್ಕೂಟ ತೆರಿಗೆ ರಾಶಿಯಲ್ಲಿನ ವರ್ಗಾವಣೆ ಪಾಲು ಶೇ. 12.13 ಮತ್ತು ಸಹಾಯಾನುದಾನದಲ್ಲಿ ವರ್ಗಾವಣೆ ಪಾಲು ಶೇ. 12.99ರಷ್ಟಿತ್ತು. ಇವೆರಡರ ಒಟ್ಟು ಪಾಲು ಶೇ. 25.12. ಇವುಗಳ ಪ್ರಮಾಣ 2022-23ರ ಬಜೆಟ್ಟಿನ ಗಾತ್ರದಲ್ಲಿ ಕ್ರಮವಾಗಿ ಶೇ. 11.21ಕ್ಕೆ ಮತ್ತು ಶೇ. 6.50ಕ್ಕಿಳಿದಿದೆ. ಒಟ್ಟು ಇಳಿಕೆ ಶೇ. 17.71. ಒಕ್ಕೂಟ ತೆರಿಗೆ ರಾಶಿಯಲ್ಲಿ ಕಡಿತವಾಗಿರುವುದರಿಂದ ಕರ್ನಾಟಕದ ಪಾಲು ಕಡಿಮೆಯಾಗಿರುವುದನ್ನು ಅರ್ಥ ಮಾಡಿಕೊಳ್ಳಬಹುದು. ಏಕೆಂದರೆ ಇದು 15ನೆಯ ಹಣಕಾಸು ಆಯೋಗವು ಒಕ್ಕೂಟ ತೆರಿಗೆ ರಾಶಿಯಲ್ಲಿ ಕರ್ನಾಟಕದ ಪಾಲನ್ನು ಶೇ. 4.713 ರಿಂದ ಶೇ. 3.647ಕ್ಕಿಳಿಸಿದೆ. ಆದರೆ ಸಹಾಯಾನುದಾನದಲ್ಲಿನ ಕಡಿತವನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಕರ್ನಾಟಕಕ್ಕೆ ಅದರ ಬಜೆಟ್ಟಿನ ಗಾತ್ರದಲ್ಲಿ ದೊರೆತಿದ್ದ ಸಹಾಯಾನುದಾನದ ಪ್ರಮಾಣ 2009-10ರಲ್ಲಿ ಶೇ. 12.99 ರಷ್ಟಿದ್ದುದು 2022-23ರಲ್ಲಿ ಶೇ. 6.50ಕ್ಕಿಳಿದಿದೆ. ಇದು ನೇರವಾಗಿ ಒಕ್ಕೂಟ ಸರ್ಕಾರ ಕರ್ನಾಟಕಕ್ಕೆ ಮಾಡಿರುವ ಅನ್ಯಾಯವಾಗಿದೆ.
ಸೆಸ್ ಮತ್ತು ಸರ್‌ಚಾರ್ಜ್ ತೆರಿಗೆಗಳಲ್ಲಿನ ಸಮಸ್ಯೆಗಳು
ಇದಲ್ಲದೆ ಒಕ್ಕೂಟ ಸರ್ಕಾರವು ಸೆಸ್ ಮತ್ತು ಸರ್‌ಚಾರ್ಜ್ ವಿಧಿಸುವುದಕ್ಕೆ ಸಂಬಂಧಿಸಿದಂತೆ ಅನುಸರಿಸುತ್ತಿರುವ ನೀತಿಯಿಂದ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ. ಏಕೆಂದರೆ ಇವುಗಳಿಂದ ಸಂಗ್ರಹವಾಗುವ ಮೊತ್ತವನ್ನು ಉಳಿದ ತೆರಿಗೆಗಳಂತೆ ರಾಜ್ಯಗಳ ಜೊತೆ ಹಂಚಿಕೊಳ್ಳುವಂತಿಲ್ಲ. ಇದರ ಎಲ್ಲ ಉತ್ಪತ್ತಿಯನ್ನು ಪೂರ್ಣವಾಗಿ ಒಕ್ಕೂಟ ಸರ್ಕಾರವು ಅನುಭವಿಸುತ್ತದೆ. ಒಕ್ಕೂಟ ಸರ್ಕಾರಕ್ಕೆ ಅದರ ಒಟ್ಟು ಸ್ವೀಕೃತಿಯಲ್ಲಿ ಸೆಸ್ ಮತ್ತು ಸರ್‌ಚಾರ್ಜ್‌ಗಳ ಪಾಲು 2011-12ರಲ್ಲಿ ಶೇ. 10.4 ರಷ್ಟಿತ್ತು. ಅಂದರೆ 2011-12ರ ಒಟ್ಟು ಸ್ವೀಕೃತಿಯಲ್ಲಿ ಇದು ರೂ.1,37,146.88ರಷ್ಟಾಗುತ್ತದೆ. ಇದೇ ರೀತಿಯಲ್ಲಿ 2020-21ರಲ್ಲಿ ಇದರ ಪ್ರಮಾಣ ಶೇ. 19.9ಕ್ಕೇರಿದೆ. ಇದು 2020-21ರ ಒಟ್ಟು ಸ್ವೀಕೃತಿಯಲ್ಲಿ ರೂ.6,86,610.69 ಕೋಟಿಯಾಗುತ್ತದೆ. ಒಕ್ಕೂಟ ಸರ್ಕಾರದ ಈ ತೆರಿಗೆಗಳ ಮೊತ್ತವಾದರೂ. 6,86,610.69 ಕೋಟಿಯನ್ನು ಒಕ್ಕೂಟದ ಹಂಚಿಕೊಳ್ಳುವ ತೆರಿಗೆ ರಾಶಿಗೆ ಸೇರಿಸಿದರೆ ಇದರಿಂದ ರಾಜ್ಯಗಳಿಗೆ ಹೆಚ್ಚಿನ ಸಂಪನ್ಮೂಲ ದೊರೆಯುತ್ತದೆ. ಈ ತೆರಿಗೆಗಳನ್ನು ಒಕ್ಕೂಟ ಹಂಚಿಕೆ ತೆರಿಗೆ ರಾಶಿಯಲ್ಲಿ ವಿಲೀನಗೊಳಿಸುವಂತೆ 15ನೆಯ ಹಣಕಾಸು ಆಯೋಗವು ಶಿಫಾರಸ್ಸು ಮಾಡಿದೆ.
ಈಗಾಗಲೆ ಹೇಳಿರುವಂತೆ ಸಂವಿಧಾನಾತ್ಮಕ ಸಂಸ್ಥೆಗಳ ಬಗ್ಗೆ ನಮ್ಮ ಇಂದಿನ ಒಕ್ಕೂಟ ಸರ್ಕಾರಕ್ಕೆ ಗೌರವವಿಲ್ಲ. ಮೇಲಾಗಿ ಸೆಸ್ ಮತ್ತು ಸರ್‌ಚಾರ್ಜ್‌ಗಳನ್ನು ಯಾವ ಉದ್ದೇಶಕ್ಕಾಗಿ ಸಂಗ್ರಹಿಸಲಾಗಿರುತ್ತದೋ ಅದೇ ಉದ್ದೇಶಕ್ಕೆ ಬಳಸಬೇಕು ಎಂಬ ನಿಯವಿದೆ. ಆದರೆ ಸಿ.ಎ.ಜಿ. ವರದಿಗಳ ಪ್ರಕಾರ ಸೆಸ್ ಮತ್ತು ಸರ್ ಚಾರ್ಜ್‌ಗಳ ಹಣವನ್ನು ಹೀಗೆ ಬಳಸುತ್ತಿಲ್ಲ. ಉದಾ: ಸಿ.ಎ.ಜಿ. ಯ 2018-19ರ ವರದಿ ಪ್ರಕಾರ 35 ಸೆಸ್‌ಗಳ ಮೂಲಕ ಸಂಗ್ರಹವಾದ ಮೊತ್ತ ರೂ. 2.74 ಲಕ್ಷಕೋಟಿ. ಇದರಲ್ಲಿ ರೂ.1.64 ಲಕ್ಷಕೋಟಿಯನ್ನು ಮಾತ್ರ ನಿದಗಿಪಡಿಸಿದ ಉದ್ದೇಶಗಳಿಗಾಗಿ ಬಳಕೆ ಮಾಡಲಾಗಿದೆ. ಉಳಿದ ರೂ.1.10 ಲಕ್ಷಕೋಟಿಯನ್ನು ನಿರ್ದಿಷ್ಟಪಡಿಸಿದ ನಿಧಿಗೆ ವರ್ಗಾಯಿಸಿಲ್ಲ. ಇದೇ ರೀತಿಯಲ್ಲಿ ಕಳೆದ ದಶಕದಲ್ಲಿ ಕ್ರೂಡ್ ಆಯಿಲ್ ಮೇಲಿನ ಸೆಸ್ ಮೂಲಕ ವಸೂಲಾದ ಮೊತ್ತ ರೂ.1.24 ಲಕ್ಷಕೋಟಿ. ಇದನ್ನು ನಿಗದಿಪಡಿಸಿರುವ ಮೀಸಲು ನಿಧಿಗೆ ಜಮಾ ಮಾಡಿಲ್ಲ. ಹೀಗೆಯೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಸಂಬಂಧಿಸಿದ ಸೆಸ್‌ಗಳನ್ನು ಯಾವ ಉದ್ದೇಶಕ್ಕಾಗಿ ಸೆಸ್ ವಿಧಿಸಲಾಗಿರುತ್ತದೊ ಅದಕ್ಕೆ ಬಳಕೆ ಮಾಡಿಲ್ಲ ಎಂಬುದು ಸಿ.ಎ.ಜಿ. ವರೆದಿಯಲ್ಲಿನ ಅಭಿಪ್ರಾಯವಾಗಿದೆ.
ಒಟ್ಟಾರೆ, ಒಕ್ಕೂಟ ಸರ್ಕಾರವು ಹಣಕಾಸು ನಿರ್ವಹಣೆ ವಿಷಯದಲ್ಲಿ ತನ್ನ ಹಿತಾಸಕ್ತಿಗಳನ್ನು ಗಮನದಲ್ಲಿ ಇಟ್ಟುಕೊಳ್ಳುತ್ತಿದೆಯೆ ವಿನಾ ಒಕ್ಕೂಟ ವ್ಯವಸ್ಥೆಯ ಭಾಗವಾದ ರಾಜ್ಯಗಳ ಹಿತಾಸಕ್ತಿಗಳನ್ನು ಅದು ಕಡೆಗಣಿಸುತ್ತಿದೆ. ಉದಾ: ಇಡೀ ಆರ್ಥಿಕತೆ ಮೇಲೆ ಪರಿಣಾಮ ಬೀರಬಲ್ಲ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ – ನೋಟು ಅಮಾನ್ಯೀಕರಣ, ದೇಶವ್ಯಾಪಿ ಲಾಕ್‌ಡೌನ್ – ಸಂದರ್ಭದಲ್ಲಿಒಕ್ಕೂಟ ಸರ್ಕಾರವು ರಾಜ್ಯಗಳ ಜೊತೆಯಲ್ಲಿ ಸಮಾಲೋಚಿಸದೆ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡಿದ್ದು ಮತ್ತು ಸಂಸತ್ತಿನಲ್ಲಿ ಚರ್ಚೆಯಿಲ್ಲದೆ, ಕಾರಣಗಳನ್ನು ವಿವರಿಸದೆ ಕೃಷಿ ಕಾಯ್ದೆಗಳನ್ನು ರದ್ದುಪಡಿಸಿದ್ದು ಮುಂತಾದವು. ಈ ರೀತಿಯ ಒಕ್ಕೂಟದ ನಡೆಯಿಂದ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ. ಈ ಎಲ್ಲ ಹಿನ್ನೆಲೆಯಲ್ಲಿ ನಮ್ಮ ದೇಶದಲ್ಲಿನ ಒಕ್ಕೂಟ ಮತ್ತು ರಾಜ್ಯಗಳ ನಡುವಣ ಸಂಬಂಧವನ್ನು, ವಿಶೇಷವಾಗಿ ಹಣಕಾಸು ಸಂಬಂಧದ ಬಗ್ಗೆ ವಿಶೇಷ ಆಯೋಗದಿಂದ ಅಧ್ಯಯನ ನಡೆಸುವ ಅಗತ್ಯವಿದೆ. ಈ ಹಿಂದೆ ನೇಮಿಸಿದ್ದ ಸರ್ಕಾರಿಯಾ ಆಯೋಗದಂತೆ ಮತ್ತೊಂದು ತಜ್ಞರ ಆಯೋಗವನ್ನು ನೇಮಿಸಿ ಬದಲಾಗುತ್ತಿರುವ ಒಕ್ಕೂಟ-ರಾಜ್ಯಗಳ ನಡುವಣ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸಂಬಂಧಗಳ ಬಗ್ಗೆ, ವಿಶೇಷವಾಗಿ ಹಣಕಾಸು ಸಂಬಂಧದ ಬಗ್ಗೆ ಅಧ್ಯಯನ ನಡೆಸಿ ವರದಿಯೊಂದನ್ನು ಪಡೆದುಕೊಳ್ಳುವುದು ಅಗತ್ಯವಿದೆ.