ರಾಜ್ಯಗಳಿಗೆ GST ದೋಖಾ : GST ಪಾಲು ದೇವರಿಗೆ ಮುಡಿಪೆ ?

  • ಜಿಎಸ್ ಟಿ ತೆರಿಗೆ ಪಾಲು ಕೊಡಲು ನಿರಾಕರಿಸಿದ ಕೇಂದ್ರ  ಸರಕಾರ
  • ರಾಜ್ಯಗಳಿಂದ ತೆರಿಗೆ ಹಕ್ಕು ಕಿತ್ತುಕೊಂಡಿದ್ದ ಮೋದಿ ಸರಕಾರ

ಒಂದು ದೇಶ, ಒಂದು ತೆರಿಗೆ ಮೂಲಕ ಸ್ವರ್ಗವನ್ನೇ ತೋರಿಸುವುದಾಗಿ  ಜಿಎಸ್ ಟಿ ಹೆಸರಿನಲ್ಲಿ ರಾಜ್ಯಗಳಿಂದ ತೆರಿಗೆ ಹಕ್ಕು ಕಿತ್ತುಕೊಂಡಿದ್ದ ಮೋದಿ ಸರಕಾರ  ಈಗ ತೆರಿಗೆ ಪಾಲು ಕೊಡಲು ಆಗುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.  ನಿಮ್ಮ ಕರ್ಚುವೆಚ್ಚಳಿಗೆ ಬೇಕಿದ್ದರೆ, ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸುತ್ತೇವೆ ಎಂದು ಮೋದಿ ಸರ್ಕಾರ ತಿಳಿಸಿದೆ. 

ಸರಕಾರದ ಈ ನಡೆಗೆ  ಬಹುತೇಕ ರಾಜ್ಯ ಸರಕಾರಗಳು ಹಾಗೂ ವಿರೋಧ ಪಕ್ಷಗಳು  ವಿರೋಧ ವ್ಯಕ್ತಪಡಿಸಿವೆ.  ರಾಜ್ಯಗಳಿಗೆ ನೀಡಬೇಕಾದ ಜಿಎಸ್ಟಿ ಪಾಲನ್ನು ನೀಡದೆ ಮೋದಿ ಸರಕಾರ ಕೈ ಎತ್ತಿದ್ದು ಯಾಕೆ?  ಆರ್ಥಿಕ ಸಂಕಷ್ಟಕ್ಕೆ ದೇವರ ಆಟವನ್ನು ಆರಂಭಿಸಿದ್ದು ಯಾಕೆ?  ಮೋದಿ ಸರ್ಕಾರದ ಮರ್ಮ ತಿಳಿದವರಿಗೆ ಗೊತ್ತು.

 ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ)ಯಲ್ಲಿ ರಾಜ್ಯಗಳ ಪಾಲನ್ನು ಕೇಂದ್ರ ಸರಕಾರ ತಕ್ಷಣ ನೀಡಬೇಕು ಎಂದು  ಸಿಪಿಐಎಂ, ಟಿಆರ್‌ಎಸ್, ಶಿವಸೇನೆ, ಡಿಎಂಕೆ ಮತ್ತು ಟಿಎಂಸಿಯ ಸಂಸತ್  ಸದಸ್ಯರು  ಕಳೆದ ಡಿಸಂಬರ್ ನಲ್ಲಿ ಸದನದಲ್ಲಿ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಜಿಎಸ್‌ಟಿಯ ಹಣವನ್ನು ಪಾವತಿಸದಿರುವುದರಿಂದ ಅಭಿವೃದ್ಧಿ ಕಾರ್ಯಗಳ ಮೇಲೆ ವ್ಯತಿರಿಕ್ತ ಪರಿಣಾಮವಾಗಲಿದೆ ಎಂದು ಪ್ರಾದೇಶಿಕ ಪಕ್ಷಗಳು ಹೇಳಿವೆ. ತಕ್ಷಣವೇ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಲಾಗಿತ್ತು. ಆದರೆ ಕೇಂದ್ರ ಸರಕಾರ ಆಗಿನಿಂದಲೂ ರಾಜ್ಯಗಳ ಜೊತೆ ಚಲ್ಲಾಟವನ್ನಾಡುತ್ತಾ ಬಂದಿದೆ.  ಜಿಎಸ್ಟಿ ಪಾಲು ನಿಡಬಹುದು ಎಂದು ನಂಬಿದ್ದ ರಾಜ್ಯಗಳಿಗೆ ಮೋದಿ ಸರಕಾರ ಕಡಿಮೆ ಬಡ್ಡಿ ದರದಲ್ಲಿ ಸಾಲದ ಪ್ರಯೋಗಕ್ಕೆ ಮುಂದಾಗಿದೆ.

  ಜಿಎಸ್ಟಿ ಕೊರತೆ ಪರಿಹಾರಕ್ಕೆ ಸಂಬಂಧಿಸಿಂತೆ  ಕೇಂದ್ರ ಸರಕಾರ  ರಾಜ್ಯಗಳ ಮುಂದೆ ಎರಡು ಬಗೆಯ ಸಾಲದ ಆಯ್ಕೆಗಳನ್ನು ಇಟ್ಟಿದೆ.  ಕೋವಿಡ್‌ 19 ಬಿಕ್ಕಟ್ಟಿನ ಪರಿಣಾಮ ಆರ್ಥಿಕತೆಗೆ ಭಾರಿ ಹೊಡೆತ ಬಿದ್ದಿದೆ. ಹೀಗಾಗಿ ಸರಕಾರ ವರ್ಷ ಭಾರಿ ಸಾಲದ ಮೊರೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು  ಕೇಂದ್ರ  ಸರಕಾರ ತಿಳಿಸಿದೆ.

ಜಿಎಸ್‌ಟಿ ಜಾರಿಯ ಪರಿಣಾಮ 2020-21ರಲ್ಲಿ ಉಂಟಾಗಲಿರುವ 97 ಸಾವಿರ ಕೋಟಿ ರೂ. ನಷ್ಟಕ್ಕೆ ಸಂಬಂಧಿಸಿ ರಾಜ್ಯಗಳು ಹಣಕಾಸು ಸಚಿವಾಲಯದ ವಿಶೇಷ ಯೋಜನೆಯ ಅಡಿಯಲ್ಲಿ(ಸ್ಪೆಷಲ್‌ ವಿಂಡೋ) ಸಾಲ ಪಡೆಯಬಹುದು. ಸಾಲದ ಬಡ್ಡಿಯನ್ನು ಜಿಎಸ್‌ಟಿ ಸೆಸ್‌ ಸಂಗ್ರಹದಿಂದ ಸಿಗುವ ಹಣದಲ್ಲಿ ಭರಿಸಲಾಗುವುದು. ಹೀಗಾಗಿ ರಾಜ್ಯಗಳಿಗೆ ಹೆಚ್ಚುವರಿ ಹೊರೆ ಇರುವುದಿಲ್ಲ ಎಂದು ಇದು ಮೊದಲ ಆಯ್ಕೆ ಎಂದು ಕೇಂದ್ರ ಸರಕಾರ ಹೇಳಿದೆ.

 ಇನ್ನೂ ಎರಡನೆಯ ಆಯ್ಕೆಯಲ್ಲಿ ರಾಜ್ಯಗಳು ಜಿಎಸ್‌ಟಿ ಅನುಷ್ಠಾನ ಮತ್ತು ಕೋವಿಡ್‌ ಬಿಕ್ಕಟ್ಟಿನ ಪರಿಣಾಮ ಉಂಟಾಗಿರುವ ನಷ್ಟಕ್ಕೆ ಮತ್ತು ಪರಿಹಾರಕ್ಕೆ 2.35 ಸಾವಿರ  ಕೋಟಿ ರೂ. ಸಾಲವನ್ನು ಮಾರುಕಟ್ಟೆಯಿಂದ ಪಡೆಯಬಹುದು. ಆದರೆ ಇದಕ್ಕೆ ತಗಲುವ ಬಡ್ಡಿಯನ್ನು ರಾಜ್ಯಗಳು ತಮ್ಮ ಸಂಪನ್ಮೂಲಗಳಿಂದ ಭರಿಸಬೇಕು ಎಂದು ಕೇಂದ್ರ ತಿಳಿಸಿದೆ. ಕೇಂದ್ರ ಸರಕಾರ ಈ ನಿರ್ಧಾರದಿಂದ ಮುಖ್ಯಮಂತ್ರಿ ಯಡಿಯೂರಪ್ಪ ನವರಿಗೆ ದಿಕ್ಕು ತೋಚಂದತಾಗಿದೆ ಎಂದು ಅವರ  ಆಪ್ತವಲಯದಲ್ಲಿ ಕೇಳಿ ಬಂದಿದೆ. ಸಾಕಷ್ಟು ತಲೆ ಬಿಸಿ ಮಾಡಿಕೊಂಡಿದ್ದ ಯಡಿಯೂರಪ್ಪ ಕೇಂದ್ರದ ನಿರ್ಧಾರಕ್ಕೆ ಮಂಡಿಯೂರಿ ಕುಳಿತಿದ್ದಾರೆ. 

 ಕೇಂದ್ರ ಸರಕಾರ ನೀಡಿರುವ ಎರಡು ಆಯ್ಕೆಯಲ್ಲಿ ಸಾಲ ಪಡೆಯುವ ಆಯ್ಕೆಯನ್ನು ಆರಿಸಿಕೊಳ್ಳಲು ರಾಜ್ಯ ಸರಕಾರ ಮುಂದಾಗಿದೆ.  ಮೊದಲನೇ ಆಯ್ಕೆಯಲ್ಲಿ ಕರ್ನಾಟಕ ಸರಕಾರ 18,289 ಕೋಟಿ ರೂ. ಜಿಎಸ್‌ಟಿ ಪರಿಹಾರಕ್ಕೆ ಅರ್ಹವಾಗಿತ್ತು. ಇದರಲ್ಲಿ 6,969 ಕೋಟಿ ರೂ. ಸೆಸ್‌ನಿಂದ ಬರಲಿದ್ದು, ಉಳಿದ 11,324 ಕೋಟಿ ರೂಪಾಯಿಗಳನ್ನು ವಿಶೇಷ ವಿಂಡೋ ಮೂಲಕ ಆರ್‌ಬಿಐನಿಂದ ಸಾಲ ಪಡೆಯಲು ಅನುವು ಮಾಡಿಕೊಡುವುದಾಗಿ ಕೇಂದ್ರ ಸರಕಾರ ಹೇಳಿತ್ತು. ಇದರ ಅಸಲು ಮತ್ತು ಬಡ್ಡಿಯನ್ನು ಪರಿಹಾರ ಸೆಸ್‌ ನಿಧಿಯಿಂದ ಪಾವತಿಸಲಾಗುತ್ತದೆ. ಇದಲ್ಲದೆ ರಾಜ್ಯ ಜಿಡಿಪಿಯ ಶೇ. 1 ರಷ್ಟು ಅಂದರೆ 18,036 ಕೋಟಿ ರೂ. ಹೆಚ್ಚುವರಿ ಸಾಲವು ಲಭ್ಯವಿದೆ ಎಂದು ಕೇಂದ್ರ ಸರಕಾರ ತಿಳಿಸಿತ್ತು. ಇದೇ ಆಯ್ಕೆಯನ್ನು ರಾಜ್ಯ ಸರಕಾರ ಆಯ್ದುಕೊಂಡಿದ್ದು 11,324 + 18,036 ಕೋಟಿ ರೂ. ಸಾಲವನ್ನು ರಿಸರ್ವ್‌ ಬ್ಯಾಂಕ್‌ನಿಂದ ಪಡೆದುಕೊಳ್ಳಲು ಮುಂದಾಗಿದೆರಾಜ್ಯಕ್ಕೆ ಸಿಗಬೇಕಾದ ಹಣವನ್ನು ಕೇಳುವ ಬದಲು ಜನರ ಮೇಲೆ ಸಾಲದ ಹೊರೆಯನ್ನು ಹೊರಿಸಿದಂತಾಗಿದೆ.

 ಮೋದಿ ಸರ್ಕಾರದ ಪ್ರಸ್ತಾಪವನ್ನು  ಕೇರಳ ಸರಕಾರ ಸಂಪೂರ್ಣವಾಗಿ ತಳ್ಳಿ ಹಾಕುತ್ತಿರುವುದಾಗಿ ಕೇರಳದ ವಿತ್ತ ಸಚಿವ ಥಾಮಸ್ ಐಸಾಕ್ ಹೇಳಿದ್ದಾರೆ. ರಾಜ್ಯಗಳು 97 ಸಾವಿರ ಕೋಟಿ ರು ಸಾಲ ಪಡೆಯಬಹುದು ಇಲ್ಲವೇ ಪೂರ್ಣ 2.35 ಲಕ್ಷ ಕೋಟಿ ರು ಸಾಲ ಹೊಂದಬಹುದು ಎಂದು ಎರಡು ಆಫರ್ ನೀಡಿದ್ದ ಕೇಂದ್ರದ ಕ್ರಮವನ್ನು ಕೇರಳ ಸರಕಾರ ಖಂಡಿಸಿದೆ.  ಆತ್ಮ ನಿರ್ಭರವಾಗಿರುವ ಸ್ವಾವಲಂಬಿ ರಾಜ್ಯಗಳು ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ಒಪ್ಪಲು ಸಾಧ್ಯವೇ ಇಲ್ಲ. ಜಿಎಸ್ಟಿ ಪರಿಹಾರ ನಮ್ಮ ಸಂವಿಧಾನ ಹಕ್ಕು ಎಂದು ಥಾಮಸ್ ಹೇಳಿದ್ದಾರೆ.

ಕೇಂದ್ರ ಸರಕಾರವು ರಾಜ್ಯಗಳಿಗೆ ಮಹಾ ದ್ರೋಹ ಎಸಗಿದೆ ಎಂದು ದೆಹಲಿ ಸರ್ಕಾರ ಹೇಳಿದೆ. ಇನ್ನೂ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿಯವರಿಗೆ ಪತ್ರವನ್ನು ಬರೆದಿದ್ದಾರೆ. ಕೇಂದ್ರ ಸರ್ಕಾರ ನಿಯಮದಂತೆ ರಾಜ್ಯಗಳಿಗೆ ನೀಡಬೇಕಾಗಿರುವ ನ್ಯಾಯಯುತವಾದ ಜಿಎಸ್‌ಟಿ ಪರಿಹಾರ ಹಣವನ್ನು ನೀಡಲು ಹಿಂದೇಟು ಹಾಕುವುದು ಸರಿಯಲ್ಲ. ಇದು ನಮ್ಮ ರಾಷ್ಟ್ರದ ’ಫೆಡರಲಿಸ್ಟ್’‌ ನೀತಿಗೆ ಅಸಹನೀಯ ಹೊಡೆತ. ಹೀಗಾಗಿ ರಾಜ್ಯಗಳಿಗೆ ಸಾಲ ನೀಡುವ ಬದಲು ಕೇಂದ್ರ ಸರ್ಕಾರವೇ ಸಾಲ ಪಡೆದು ನಮ್ಮ ಪಾಲಿನ ಪಾಲನ್ನು ನೀಡಲಿ ಎಂದು ಮಮತಾ ಬ್ಯಾನರ್ಜಿ ಪತ್ರ ಬರೆಯುವುದರ ಮೂಲಕ  ಒತ್ತಾಯವನ್ನು ಮಾಡಿದ್ದಾರೆ. 

  ಕೇಂದ್ರ ಸರಕಾರದ ಈ ನಡೆ,  ರಾಜ್ಯಗಳ ಹಕ್ಕುಗಳ  ಉಲ್ಲಂಘನೆಯಾಗಿದೆ ಎಂದು ಸಿಪಿಐಎಂ ಪೊಲಿಟ್ ಬ್ಯೋರೊ ಸದಸ್ಯರಾದ ಪ್ರಕಾಶ್ ಕಾರಟ್ ಕಿಡಿ ಕಾರಿದ್ದಾರೆ.  ಕೇಂದ್ರ ಸರಕಾರ  ಮತ್ತು  ನರೇಂದ್ರ ಮೋದಿಯವರ  ‘ಒಂದು ರಾಷ್ಟ್ರ, ಒಂದು ತೆರಿಗೆ’ ಎಂಬುದರಲ್ಲಿಯೇ ಒಕ್ಕೂಟ ತತ್ವವಿರೋಧಿ ನಿಲುವು ಅಡಕವಾಗಿದೆ.  ಇದು ವಿವಿಧ ವಲಯಗಳಲ್ಲಿ ರಾಜ್ಯಗಳ ಹಕ್ಕುಗಳನ್ನು ನಾಶಪಡಿಸುವ  ಮೋದಿ ಸರಕಾರದ ಕೇಂದ್ರೀಕರಣದ  ಧಾವಂತಕ್ಕೆ ಅನುಗುಣವಾಗಿಯೇ ಇದೆ. ಜಿಎಸ್ಟಿ,  ಕೇಂದ್ರ ಸರಕಾರದ  ವಿತ್ತೀಯ ಸರ್ವಾಧಿಕಾರಶಾಹಿಯನ್ನು ಬಲಪಡಿಸಿದೆ, ರಾಜ್ಯಗಳನ್ನು ಭಿಕ್ಷೆ ಬೇಡುವ ಮಟ್ಟಕ್ಕೆ ಇಳಿಸಿದೆ. ಇವೆಲ್ಲವೂ ಜಿಎಸ್ಟಿ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಿಸಬೇಕಾದ, ಬಹುಶಃ ಅದನ್ನು ಸಂಪೂರ್ಣವಾಗಿ ತೆಗೆದು ಹಾಕಿ ಬೇರೆ ವ್ಯವಸ್ಥೆಯನ್ನು ರೂಪಿಸುವ ಅಗತ್ಯವನ್ನು ಎತ್ತಿ ತೋರುತ್ತವೆ. ಎಂದು ಪ್ರಕಾಶ್  ಕಾರಟ್ ತಿಳಿಸಿದ್ದಾರೆ.

 ಪ್ರವಾಹ ಹಾಗೂ ಲಾಕ್ಡೌನ್ ನಿಂದ ಉಂಟಾದ ಸಂಕಷ್ಟಗಳಿಗೆ ಪರಿಹಾರ ನೀಡಲು ಹಣವಿಲ್ಲ ಎಂದು ಯಡಿಯೂರಪ್ಪನವರು ಗೋಳಾಡುತ್ತಿದ್ದಾರೆ, ಇತ್ತ ನಮಗೆ ಬರಬೇಕಾದ ನ್ಯಾಯಬದ್ಧ ಜಿಎಸ್ಟಿ ಪರಿಹಾರವನ್ನು ಕೊಡುವುದಿಲ್ಲ ಎಂದು ಮೋದಿ ಸರ್ಕಾರ ಹೇಳುತ್ತಿದೆ.  ಹಾಗಾದರೆ ರಾಜ್ಯದ ಜನ ಏನು ಮಾಡಬೇಕು? ಮಣ್ಣುತಿನ್ನಬೇಕಾ? ರಾಜ್ಯದ 25 ಜನ ಬಿಜೆಪಿ ಸಂಸದರು ಏನು ಮಾಡುತ್ತಿದ್ದಾರೆ? ಎಂದು ಕೇಂದ್ರ ಹಾಗೂ ರಾಜ್ಯ ಸರಕಾರದ  ಮೇಲೆ ಹರಿಹಾಯ್ದಿದ್ದಾರೆ.  ಇಷ್ಟೆಲ್ಲ ವಿರೋಧ ವ್ಯಕ್ತವಾಗುತ್ತಿದೆ. ಆದರೆ ಕೇಂದ್ರ ಸರಕಾರ ತನ್ನ ನಿರ್ಧಾರವನ್ನು ಬದಲಿಸಲು ಮನಸ್ಸು ಮಾಡುತ್ತಿಲ್ಲ. ಕೇಂದ್ರ ಸರಕಾರ ರಾಜ್ಯಗಳಿಗೆ ಜಿಎಸ್ಟಿ ಹೆಸರಲ್ಲಿ ದೋಖಾ ಮಾಡುತ್ತದಾ ಅಥವಾ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಾದಾ? ಇಲ್ಲವೆ ದೇವರ ಮೇಲೆ ಭಾರಿ ಹಾಕಿ ಕೈ ತೊಳೆದುಕೊಳ್ಳುತ್ತಾ ಕಾದು ನೋಡಬೇಕಿದೆ.

Donate Janashakthi Media

Leave a Reply

Your email address will not be published. Required fields are marked *