- ಜಿಟಿಜಿಟಿ ಮಳೆ ನಡುವೆಯೂ ರೈತರ ಪ್ರತಿಭಟನೆ
ಬೆಂಗಳೂರು: ಕೇಂದ್ರ ಕೃಷಿ ಕಾಯ್ದೆಗಳನ್ನ ಕೈಬಿಡುವಂತೆ ಆಗ್ರಹಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ಗೆ ರಾಜ್ಯದ ಹಲವೆಡೆ ರೈತರು ಬೆಳ್ಳಂಬೆಳಗ್ಗೆಯೇ ಬೀದಿಗಿಳಿದು ಹೋರಾಟ ಪ್ರಾರಂಭಿಸಿದ್ದಾರೆ.
ಬಹುತೇಕ ಕನ್ನಡಪರ ಸಂಘಟನೆಗಳು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಬಂದ್ನಲ್ಲಿ ಪಾಲ್ಗೊಂಡಿವೆ. ಬಂದ್ನಿಂದ ಸಾಮಾನ್ಯ ಜನರಿಗೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ಎಲ್ಲಿಯೂ ಬಲವಂತವಾಗಿ ಬಂದ್ ಮಾಡಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಾಮಾನ್ಯ ಜನಜೀವನ ಯಥಾಸ್ಥಿತಿಯಲ್ಲಿದೆ. ಕೋಲಾರ, ದಾವಣಗೆರೆ ಕೊಪ್ಪಳ, ಹುಬ್ಬಳ್ಳಿ, ಬೆಳಗಾವಿಯಲ್ಲಿ ಇಂದು ಬೆಳಗ್ಗೆ ಆರು ಗಂಟೆಗೇ ರೈತರು ಪ್ರತಿಭಟನೆ ಪ್ರಾರಂಭಿಸಿದ್ದಾರೆ. ಕೆಲವೆಡೆ ಜಿಟಿಜಿಟಿ ಮಳೆಯನ್ನೂ ಲೆಕ್ಕಿಸದೆ ಟೈರ್ಗೆ ಬೆಂಕಿ ಹಚ್ಚಿ ಮತ್ತು ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಅನೇಕ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ತಡವಾಗಿ ಆರಂಭವಾಗುವ ನಿರೀಕ್ಷೆ ಇದೆ. ಆದರೆ, ಎಲ್ಲೂ ಕೂಡ ಜನಜೀವನ ಅಸ್ತವ್ಯಸ್ತಗೊಂಡಿಲ್ಲ. ಬೆಳಗಿನ ಮಾರುಕಟ್ಟೆ ಇತ್ಯಾದಿ ವ್ಯಾಪಾರ ವಹಿವಾಟು ಎಂದಿನಂತೆ ಇದೆ. ಜನ ಸಂಚಾರದಲ್ಲೂ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ.
ಬೆಂಗಳೂರಿನಲ್ಲಿ ಬಂದ್ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದೆ. ಫ್ರೀಡಂ ಪಾರ್ಕ್, ಟೌನ್ ಹಾಲ್ ಮೊದಲಾದೆಡೆ ರೈತರು ಸೇರುವ ನಿರೀಕ್ಷೆ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗದಂತೆ ಸಂಚಾರದಲ್ಲಿ ಕೆಲ ಬದಲಾವಣೆಗಳನ್ನ ಮಾಡಲಾಗಿದೆ. ಪ್ರಮುಖ ಕೊಂಡಿ ರಸ್ತೆಯಾದ ನೃಪತುಂಗ ರಸ್ತೆಯಲ್ಲಿ ಇವತ್ತು ಒಂದು ದಿನದ ಮಟ್ಟಿಗೆ ದ್ವಿಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ವಿಧಾನಸೌಧದಲ್ಲಿ ನಡೆಯುವ ಅಧಿವೇಶನಕ್ಕೆ ತೊಂದರೆ ಆಗದ ನಿಟ್ಟಿನಲ್ಲಿ ಸುತ್ತಮುತ್ತಲ ಪ್ರದೇಶಗಳಲ್ಲಿ ಭದ್ರತೆ ಮತ್ತು ಟ್ರಾಫಿಕ್ ನಿಯಂತ್ರಣ ವ್ಯವಸ್ಥೆ ಮಾಡಲಾಗಿದೆ.
ಕರ್ನಾಟಕ ಬಂದ್ ವೇಳೆ ಕ್ರಮ ತೆಗೆದುಕೊಳ್ಳಲಾದಂತೆ ಈ ಬಂದ್ಗೂ ಭದ್ರತೆ ಬಿಗಿಗೊಳಿಸಲಾಗಿದೆ. ಬೆಳಗ್ಗೆ 10:30ಕ್ಕೆ ವಿವಿಧ ರೈತ ಸಂಘಟನೆಗಳಿಂದ ಫ್ರೀಡಂ ಪಾರ್ಕ್ ಬಳಿ ಪ್ರತಿಭಟನೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ 15 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಹೆಚ್ಚುವರಿ ಸಿಪಿಗಳು, ಡಿಸಿಪಿಗಳು ಮತ್ತು ಎಸಿಪಿಗಳ ನೇತೃತ್ವದಲ್ಲಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ. 32 ಕೆಎಸ್ಆರ್ಪಿ, 30 ಸಿಎಆರ್ ತುಕಡಿಗಳನ್ನ ನಿಯೋಜಿಸಲಾಗಿದೆ. ಮೈಸೂರು ಬ್ಯಾಂಕ್ ರಸ್ತೆ, ಟೌನ್ ಹಾಲ್, ಫ್ರೀಡಂ ಪಾರ್ಕ್ ಬಳಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಹೋಟೆಲ್ ಮಾಲೀಕರ ಸಂಘ ಸೇರಿದಂತೆ ಕೆಲವಾರು ಸಂಘಟನೆಗಳು ಇವತ್ತಿನ ಭಾರತ್ ಬಂದ್ಗೆ ನೈತಿಕ ಬೆಂಬಲ ನೀಡಿವೆ. ಕೋವಿಡ್ ಕಾರಣದಿಂದ ಆರ್ಥಿಕ ನಷ್ಟ ಆಗುತ್ತಿರುವ ಹಿನ್ನೆಲೆಯಲ್ಲಿ ಸಂಘಟನೆಗಳು ಈ ನಿರ್ಧಾರ ಮಾಡಿವೆ.
ಈ ಭಾರತ್ ಬಂದ್ನಲ್ಲಿ ಪಂಜಾಬ್ ರೈತರು ಮುಂಚೂಣಿಯಲ್ಲಿವೆ. ಕಳೆದ ಎರಡು ವಾರಗಳಿಂದಲೂ ಆ ರಾಜ್ಯದ ರೈತರು ತೀವ್ರ ಮಟ್ಟದಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಾ ಬಂದಿದ್ದಾರೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ಸೇರಿದಂತೆ ಕೇಂದ್ರ ತಂದಿರುವ ಮೂರು ಕೃಷಿ ಕಾಯ್ದೆಗಳಿಗೆ ಪಂಜಾಬ್ನಲ್ಲೇ ಅತಿ ಹೆಚ್ಚು ವಿರೋಧ ವ್ಯಕ್ತವಾಗಿದೆ. ಬೆಳೆ ವಿಚಾರದಲ್ಲಿ ಪಂಜಾಬ್ ಮತ್ತು ಹರಿಯಾಣದ ರೈತರು ಎಂಎಸ್ಪಿ ವ್ಯವಸ್ಥೆ ಮೇಲೆ ಹೆಚ್ಚು ಅವಲಂಬಿತವಾಗಿರುವುದರಿಂದ ಕೇಂದ್ರದ ಕಾಯ್ದೆಗಳ ಬಗ್ಗೆ ಅಲ್ಲಿನ ರೈತರಿಗೆ ಅತಿ ಹೆಚ್ಚು ಆತಂಕ ಇದೆ. ಕೇಂದ್ರ ಸರ್ಕಾರ ಎಂಎಸ್ಪಿಯನ್ನೇ ಮುಂದಿನ ದಿನಗಳಲ್ಲಿ ರದ್ದುಗೊಳಿಸಬಹುದು ಎಂಬ ಭಯ ಇದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ರೈತರು ಮೊದಲಿಂದಲೂ ಉಗ್ರ ಹೋರಾಟ ನಡೆಸುತ್ತಿದ್ದಾರೆ. ಈಗ ದೇಶದ ಇತರೆಡೆಯ ರೈತ ಸಂಘಟನೆಗಳೂ ಕೂಡ ಈ ಹೋರಾಟಕ್ಕೆ ಧುಮುಕಲು ಅಣಿಯಾಗಿ ಭಾರತ್ ಬಂದ್ ಆಚರಿಸುತ್ತಿವೆ.