ಬೆಂಗಳೂರು : ನವೆಂಬರ್ 1 ರಾಜ್ಯಾದ್ಯಂತ 67ನೇ ಕರ್ನಾಟಕ ರಾಜ್ಯೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗಿದೆ. ಪ್ರತಿ ಕನ್ನಡಿಗನ ಕರುನಾಡಿನ ಹೆಮ್ಮೆಯ ದಿನ. ಕರ್ನಾಟಕವನ್ನು ಮೊದಲು ಮೈಸೂರು ಪ್ರಾಂತ್ಯವಾಗಿತ್ತು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಅಂದಿನ ಮೈಸೂರು ಮಹಾರಾಜ ಒಡೆಯರ್ ಅವರು ತಮ್ಮ ರಾಜ್ಯವನ್ನು ಭಾರತ ದೇಶದೊಂದಿಗೆ ವೀಲಿನಮಾಡಲು ಒಪ್ಪಿದರು. ನಂತರ ನಡೆದ ಏಕೀಕರಣ ಚಳುವಳಿ ಮೂಲಕ ಕನ್ನಡ ಮಾತನಾಡುವ ಭಾಷಿಕರು ವಾಸಿಸುವ ಒಂದು ರಾಜ್ಯವಾಗಬೇಕೆಂದು ಕೂಗು ವ್ಯಾಪಕವಾಗಿ ಮೊಳಗಿತು.
ನಂತರ 1956ರಲ್ಲಿ ರಾಜ್ಯಗಳ ಪುನರ್ವಿಂಗಡನೆ ಕಾಯ್ದೆಯ ಜಾರಿಯೊಂದಿಗೆ ಈ ಪ್ರಕ್ರಿಯೆ ಮುಕ್ತವಾಯಿತು. ಕೂರ್ಗ್, ಮದರಾಸು, ಹೈದರಾಬಾದ್, ಮುಂಬೈ ಸಂಸ್ಥಾನದ ಕೆಲವು ಪ್ರದೇಶಗಳು ಮೈಸೂರು ರಾಜ್ಯಕ್ಕೆ ಸೇರಿಸಲಾಯಿತು.
ದಕ್ಷಿಣ ಭಾರತದಲ್ಲಿ ವಾಸವಾಗಿರುವ ಕನ್ನಡ ಭಾಷಿಕರ ಎಲ್ಲ ಪ್ರದೇಶವನ್ನು ಒಗ್ಗೂಡಿಸಿ ಮೈಸೂರು ರಾಜ್ಯವು 1956ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಕರ್ನಾಟಕದ ಹುಟ್ಟಿಗೆ ಆಲೂರು ವೆಂಕಟರಾವ್ ಅವರು ಮೊದಲಿಗೆ ಕರ್ನಾಟಕದ ಏಕೀಕರಣ ಚಳುವಳಿಯನ್ನು ಸ್ವಾತಂತ್ರ್ಯ ಪೂರ್ವವೇ 1905ರಲ್ಲಿ ಆರಂಬಿಸಿದರು. ನಂತರ ಭಾರತಕ್ಕೆ ಭಾಷೆಗಳ ಆಧಾರದ ಮೇಲೆ1956ರಲ್ಲಿ ನವೆಂಬರ್1ರಂದು ರಾಜ್ಯಗಳನ್ನು ವಿಂಗಡಿಸಿದರು.
ಇಂದು ರಾಜ್ಯದ ತುಂಬೆಲ್ಲಾ ೬೭ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ
ಬೆಂಗಳೂರು: ೬೭ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕಂಠೀರವ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಕನ್ನಡ ನಾಡು ಪುಣ್ಯದ ಬೀಡು. ಅತ್ಯಂತ ಸಂಪತ್ದಬರಿತ ನಾಡು ನಮ್ಮ ನಾಡು. ಈ ನಾಡಿನಲ್ಲಿ ಹುಟ್ಟ ಬೇಕಾದರೆ ಏಳೇಳು ಜನ್ಮದ ಪುಣ್ಯ ಮಾಡಿರಬೇಕು. ಕರ್ನಾಟಕದ ಏಕೀಕರಣ ಹೋರಾಟದ ಯಾರೂ ಮರೆಯುವಂತಿಲ್ಲ. ಮದ್ರಾಸ್ ಕರಾವಳಿ ಮಧ್ಯ ಕರ್ನಾಟಕ ಅಂತ ಹಂಚಿ ಹೋಗಿತ್ತು. ಆದರೆ, ಅದನ್ನ ಆಲೂರು ವೆಂಕಟರಾಯರು ಹೋರಾಟ ಮಾಡಿ ಕರ್ನಾಟಕ ಏಕೀಕರಣ ಮಾಡಿದರು. ಇದರಲ್ಲಿ ಹಲವಾರು ಮಹನೀಯರ ಶ್ರಮ ಇದೆ. ಇದಕ್ಕೆ ರಾಷ್ಟ್ರ ಕವಿ ಕುವೆಂಪು ಕೂಡಾ ಹಿಂಪನ್ನ ನೀಡಿದ್ದರು. ಶಿಕ್ಷಣ ಆರೋಗ್ಯ, ಉದ್ಯೋಗ ಜೊತೆ ಭಾರತದ ಭವಿಷ್ಯವನ್ನೂ ನಿರ್ಮಾಣ ಮಾಡುವ ಶಕ್ತಿ ಕರ್ನಾಟಕಕ್ಕೆ ಇದೆ ಎಂದರು.
ಮಂಗಳೂರು: ಟೋಲ್ ಗೇಟ್ ತೆರವು ಅನಿರ್ಧಿಷ್ಟಾವಧಿ ಧರಣಿ ವೇದಿಕೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಧ್ವಜಾರೋಹಣ ಮಾಡುವ ಮೂಲಕ ಆಚರಣೆ ಮಾಡಲಾಯಿತು. ಹಗಲು ರಾತ್ರಿ ಧರಣಿ ಮುಂದುವರೆಸಿರುವ ಸಮಿತಿಯು ಟೋಲ್‌ಗೇಟ್ ತೆರವುಗೊಳಿಸುವವರೆಗೂ ಅನಿರ್ದಿಷ್ಟಾವಧಿ ಧರಣಿ ಮುಂದುವರೆಯಲಿದೆ ಎಂದು ಕರೆ ನೀಡಿದೆ.
ಇಂಧನ, ಕನ್ನಡ ಸಂಸ್ಕೃತ ಸಚಿವ ಸುನಿಲ್ ಕುಮಾರ್ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ಮಾಡುವ ಮೂಲಕ ಆಚರಣೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಕನ್ನಡದ ಪರಿಣಾಮಕಾರಿ ಅನುಷ್ಟಾನಕ್ಕೆ ಕನ್ನಡ ಸಮಗ್ರ ಮಸೂದೆಯನ್ನು ಡಿಸೆಂಬರ್ ನಲ್ಲಿ ಅಂಗೀಕರಿಸಿ ಜಾರಿಗೊಳ್ಳಲಿದೆ ಎಂದರು.
ನ್ಯಾಯಾಲಯದ ಎಲ್ಲ ಕಲಾಪಗಳು ಕನ್ನಡದಲ್ಲಿ ನಡೆಯಬೇಕಿದೆ. ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ಸಿಗಬೇಕಿದೆ ಸರ್ಕಾರದ ಎಲ್ಲಾ ಸುತ್ತೋಲೆಗಳು ಕನ್ನಡದಲ್ಲಿ ಇರಬೇಕು. ಈ ಉದ್ದೇಶದಿಂದ ಕನ್ನಡ ಸಮಗ್ರ ಮಸೂದೆಯನ್ನು ರೂಪಿಸಿದ್ದೇವೆ. ಈ ಕುರಿತು ಸಾರ್ವಜನಿಕರು ಅಗತ್ಯ ಸಲಹೆಯನ್ನು ನೀಡಬೇಕು ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ 275 ಕನ್ನಡದ ಶಾಲೆಗಳ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದೇವೆ. ಈ ಶಾಲೆಗಳಲ್ಲಿ ಕೊಠಡಿ ಹಾಗೂ ಶೌಚಾಲಯ ನಿರ್ಮಾಣಕ್ಕೆ ಒಟ್ಟು 39 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ ಎಂದರು.
ಈ ವೇಳೆ ಜಿಲ್ಲಾಧಿಕಾರಿ ಡಾ.ಕುಮಾರ್ ಮಂಗಳೂರು ನಗರದ ಎಸ್‌ಪಿ ಎನ್ ಶಶಿಕುಮಾರ್, ಮಂಗಳೂರು ಜಿಲ್ಲಾ ಎಸ್‌ಪಿ ಹೃಷಿಕೇಶ್ ಸೊನಾವಣೆ ಇದ್ದರು. ಕಾರ್ಯಕ್ರಮ ನಿಮಿತ್ತ 34 ಮಂದಿಗೆ ಹಾಗೂ 20 ಸಂಘಸಂಸ್ಥೆಗಳಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿಯೂ ಸಾರಿಗೆ ಇಲಾಖೆಯ ಬಸ್ಸನ್ನು ಸಂಪೂರ್ಣಾವಾಗಿ ಕನ್ನಡಮಯ ಮಾಡಿರುವುದು ಗಮನ ಸೆಳೆಯಿತು. ಕನ್ನಡದ ಕೋಶವನ್ನೇ ಹೊತ್ತು ಸಾಗುತ್ತಿರುವ ಬಸ್ ಸಂಪೂರ್ಣ ಕನ್ನಡದ ರಸದೌತಣವನ್ನು ನೀಡುತ್ತಿದೆ. ಬಸ್‌ನಲ್ಲಿ ಕನ್ನಡದ ಪರಿಚಯ, ಸಾಹಿತಿಗಳು, ಗಂಧದಗುಡಿಯ ಪೋಸ್ಟರ್‌ಗಳನ್ನು ದರ್ಶನ ಮಾಡಲಾಗಿದೆ.
ದೇವನಹಳ್ಳಿ : ಕರ್ನಾಟಕ ರಾಜ್ಯೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ದೇವನಹಳ್ಳಿ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದರು. ಪೊಲೀಸ್ ಎನ್ ಸಿ ಸಿ ಮತ್ತು ಶಾಲಾ ಮಕ್ಕಳಿಂದ ಆಕರ್ಷಕ ಪಥ ಸಂಚಲನ ನಡೆದಿದೆ. ಸ್ಥಳೀಯ ಶಾಸಕರು, ಡಿಸಿ, ಎಸ್‌ಪಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಚಿತ್ರದುರ್ಗ: ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡ ರಾಜ್ಯೋತ್ಸವ ಸಮಾರಂಭಕ್ಕೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಚಾಲನೆ ನೀಡಿದರು. ಕಾರ್ಯಕ್ರಮಕ್ಕೂ ಮುಂಚಿತವಾಗಿ ನೀಲಕಂಠೇಶ್ವರ ದೇವಾಲಯದಿಂದ ಪೊಲೀಸ್ ಕವಾಯಿತು ಮೈದಾನದವರೆಗೆ ಮೆರವಣಿಗೆ ನಡೆಯಿತು. ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಭುವನೇಶ್ವರಿ ದೇವಿಯ ಮೆರವಣಿಗೆ ನಡೆಯಿತು. 15 ಇಲಾಖೆಗಳಿಂದ ತಯಾರಿಸಲಾಗಿದ್ದ ಸ್ತಬ್ಧ ಚಿತ್ರಗಳ ಮೆರವಣಿಗೆ ನೋಡುಗರ ಆಕರ್ಷಣೀಯವಾಗಿ ಕಂಡವು.
ಬೆಳಗಾವಿ: ಕುಂದಾನಗರಿಯಲ್ಲಿ ಮಧ್ಯರಾತ್ರಿಯೇ ರಾಜ್ಯೋತ್ಸವ ಆಚರಣೆ ಮಾಡಲಾಗಿದೆ. ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡನಗಟ್ಟಿ ನೇತೃತ್ವದಲ್ಲಿ ಚೆನ್ನಮ್ಮ ವೃತ್ತದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಚೆನ್ನಮ್ಮ ವೃತಕ್ಕೆ ಆಗಮಿಸಿದ್ದ ಕರವೇ ಕಾರ್ಯಕರ್ತರು ಕೇಕ್ ಕತ್ತರಿಸಿ, ಸಿಹಿ ಹಂಚಿ, ಪಟಾಕಿ ಸಿಡಿಸಿ, ಕನ್ನಡ ಪರ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.
ರಾಜ್ಯೋತ್ಸವ ಪ್ರಯುಕ್ತ ಬೆಳಗಾವಿಯಲ್ಲಿ ನಮ್ಮ ಬಾವುಟ ನಮ್ಮ ಹೆಮ್ಮೆ ಎಂಬ ಹೆಸರಿನಡಿ ಬೃಹತ್ ಕನ್ನಡ ಬಾವುಟ ಪ್ರದರ್ಶನ ಮಾಡಲಿದ್ದಾರೆ. ‘ನಮ್ಮ ಬಾವುಟ ನಮ್ಮ ಹೆಮ್ಮೆ’ ಎಂಬ ಹೆಸರಿನಡಿ ಬೃಹತ್ ಕನ್ನಡ ಬಾವುಟ ಪ್ರದರ್ಶನ ಮಾಡುವುದರ ಮೂಲಕ ಬುಕ್ ಆಪ್ ರಿಕಾರ್ಡ್ಗೆ ಸೇರಿಸಲು ಕನ್ನಡ ಮನಸುಗಳು ಎಂಬ ಕನ್ನಡ ಸಂಘಟನೆ ಕಾರ್ಯಕರ್ತರು ಸೇರಿಗೊಂಡು ಬೆಳಗ್ಗೆ 8:45 ಗಂಟೆಗೆ ಚೆನ್ನಮ್ಮ ವೃತ್ತರಿಂದ ನಗರದಲ್ಲಿ 3 ಕಿಮೀ ದೂರದವರೆಗೆ ಕನ್ನಡ ಬಾವುಟ ಮೆರವಣಿಗೆ ನೆರವೇರಿಸಿದರು.
ಯಾದಗಿರಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು(ಕಸಾಪ) ಜಿಲ್ಲಾಧ್ಯಕ್ಷರಿಗೆ ಅಗೌರವ ತೋರಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ ಕಾರ್ಯಕ್ರಮದ ವೇದಿಕೆ ಬಳಿಯಿಂದ ಧ್ವಜಾರೋಹಣದ ನಂತರ ಹೊರ ನಡೆದ ಘಟನೆ ಜರುಗಿತು. ಸಿದ್ದಪ್ಪ ಹೊಟ್ಟಿ ಮಾತನಾಡಿ, ಕನ್ನಡದ ಮಾತೃ ಸಂಸ್ಥೆಗೆ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಆಮಂತ್ರಣ ಪತ್ರಿಕೆಯಲ್ಲೂ ಹೆಸರು ಬಳಸಿಲ್ಲ ಎನ್ನುವುದು ಗಮನಕ್ಕೆ ಬಂದನಂತರ ಕಾರ್ಯಕ್ರಮದ ವೇದಿಕೆಗೆ ಕರೆಯಲಾಗುತ್ತದೆ ಬನ್ನಿ ಎಂದು ಆಹ್ವಾನಿಸಿದ ಜಿಲ್ಲಾಡಳಿತ ಮತ್ತೇ ವೇದಿಕೆಗೆ ಕರೆಯದೆ ಅಗೌರವ ತೋರಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು
ಚಾಮರಾಜನಗರ: ರಾಷ್ಟ್ರಧ್ವಜ ಹಾಗೂ ನಾಡ ಧ್ವಜಾರೋಹಣ ನೆರವೇರಿಸಿದ ವಸತಿ ಸಚಿವ ವಿ. ಸೋಮಣ್ಣ ವಿವಿಧ ಇಲಾಖೆಗಳು ಸೇರಿದಂತೆ 19 ತುಕಡಿಗಳಿಂದ ಗೌರವ ವಂದನೆಯನ್ನು ಸ್ವೀಕರಿಸಿದರು. ಬಳಿಕ ಅವರು ಮಾತನಾಡಿದ ಅವರು, ಚಾಮರಾಜನಗರದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಜನರ ಆಸೆಯಂತೆ ನಾಡಿನ ಚೇತನ ಪುನೀತ್ ರಾಜ್‍ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದರು.
ಸಚಿವ ಸೋಮಣ್ಣ ಅವರಿಗೆ ರೈತರು ಹಾಗೂ ಯಾರಾದರೂ ಕಪ್ಪು ಬಾವುಟ ಪ್ರದರ್ಶನ ಮಾಡಬಹುದು ಎಂಬ ಆತಂಕದ ಹಿನ್ನೆಲೆ ಭಾರಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು.
ದಾವಣಗೆರೆ: ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವ ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಧ್ವಜಾರೋಹಣ ಮಾಡಿದರು. ಬಳಿಕ ತೆರೆದ ಧ್ವಜವಂದನೆ ಸ್ವೀಕರಿಸಿದರು. ಪೊಲೀಸ್, ಅರಣ್ಯ ಇಲಾಖೆ, ಎನ್‌ಸಿಸಿ, ಸ್ಕೌಟ್ಸ್, ಗೈಡ್ಸ್ ಸಹಿತ ವಿವಿಧ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.
ಕಾಗೇವಾಡ: ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಹೆಬ್ಬಾಗಿಲು ಎಂದೇ ಕರೆಯಿಸಿಕೊಳ್ಳುವ ಕಾಗವಾಡ ಪಟ್ಟಣದಲ್ಲಿ 67ನೇ ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಅಂಬಾರಿ ಹೊತ್ತ ಆನೆಯ ಮೇಲೆ ಭುವನೇಶ್ವರಿ ದೇವಿಯ ಭಾವಚಿತ್ರ ಇರಿಸಿ ಮೆರವಣಿಗೆ ಮಾಡಲಾಯಿತು. ಕಿತ್ತೂರ ಚೆನ್ನಮ್ಮ ಸರ್ಕಲ್‌ನಿಂದ ಪ್ರಾರಂಭವಾದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಸರ್ಕಲಗೆ ಬಂದು ಮುಕ್ತಾಯಗೊಂಡಿತು. ಮೆರವಣಿಗೆಯುದ್ದಕ್ಕೂ ಕನ್ನಡ ಪರ ಗೀತೆಗಳಿಗೆ ಯುವಕರು ಕನ್ನಡಾಂಬೆಗೆ ಜೈಕಾರ ಹಾಕುತ್ತಾ ನರ್ತಿಸುತ್ತಾ ತಮ್ಮ ಅಭಿಮಾನವನ್ನು ಪ್ರದರ್ಶಿಸಿದರು. ಶಾಲಾ ವಿದ್ಯಾರ್ಥಿಗಳು ಅನೇಕ ವೇಷಭೂಷಣಗಳಲ್ಲಿ ಭಾಗವಹಿಸಿ ನೋಡುಗರ ಕಣ್ಮಣ ಸೆಳೆದರು.
ವರದಿ: ಸಾಗರ್ ಕೂಡಗಿ