ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ಬಿರುಸು ಜೋರಾಗಿದ್ದು, ಬುಧವಾರದಂದು ರಾಜ್ಯದ ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಇದರಿಂದಾಗಿ ಜಲಾಶಯಗಳಿಗೆ ಒಳಹರಿವು ಹೆಚ್ಚಿದೆ. ಇನ್ನೂ ನಾಲ್ಕು ದಿನ ಮಳೆಯ ಆರ್ಭಟ ಮುಂದುವರೆಯಲಿದೆ ಎಂಬ ಮಾಹಿತಿ ಇದೆ.
ಹೆಚ್ಚು ಮಳೆ ಸುರಿಯುವ ಸಾಧ್ಯತೆಗಳು ಇರುವುದರಿಂದ ಕರಾವಳಿ ಜಿಲ್ಲೆಗಳು ಮತ್ತು ದಕ್ಷಿಣ ಒಳನಾಡಿನ ಶಿವಮೊಗ್ಗ, ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು, ಬಳ್ಳಾರಿ, ಚಾಮರಾಜನಗರಕ್ಕೆ ಏಪ್ರಿಲ್ 15 ಮತ್ತು 16ರಂದು ಎರಡು ದಿನ ಹಾಗೂ ಕೊಪ್ಪಳ ಮತ್ತು ಗದಗ ಜಿಲ್ಲೆ ಹೊರತುಪಡಿಸಿ ಉತ್ತರ ಒಳನಾಡಿನ ಎಲ್ಲ ಜಿಲ್ಲೆಗಳಿಗೆ ಏಪ್ರಿಲ್ 15ರಂದು ಮಾತ್ರ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ. ಏಪ್ರಿಲ್ 17 ಮತ್ತು 18ರಂದು ರಾಜ್ಯದ ಕೆಲವೆಡೆ ಮಾತ್ರ ತುಂತುರು ಮಳೆ ಬೀಳುವ ಸಾಧ್ಯತೆ ಇದೆ ಎಂಬ ಮಾಹಿತಿ ತಿಳಿದುಬಂದಿದೆ.
ಇದನ್ನು ಓದಿ: ವಾಯುಭಾರ ಕುಸಿತ: ರಾಜ್ಯದ 7 ಜಿಲ್ಲೆಗಳಲ್ಲಿ ಇನ್ನೆರಡು ದಿನ ಭಾರೀ ಮಳೆ
ತುಂಗ, ಭದ್ರಾ, ನೇತ್ರಾವತಿ ಸೇರಿದಂತೆ ವಿವಿಧ ನದಿಗಳಲ್ಲಿನ ನೀರಿನ ಮಟ್ಟ ಏರಿಕೆ ಕಂಡಿದೆ. ಮಲೆನಾಡು, ಕರಾವಳಿ, ಉತ್ತರ ಕರ್ನಾಟಕ ಭಾಗಗಳಲ್ಲಿಯೂ ಭಾರೀ ಮಳೆ ಸುರಿಯುತ್ತಿದೆ. ಭಾಗದಲ್ಲಿಯೂ ಮಳೆ ಜೋರಾಗಿದೆ. ಬೆಂಗಳೂರು ನಗರದಲ್ಲಿ ಕಳೆದೆರಡು ದಿನಗಳಿಂದ ಮಳೆಯಾಗುತ್ತಿದೆ. ಕೆಲವೆಡೆ ಮಧ್ಯರಾತ್ರಿ ಪ್ರಾರಂಭವಾಗುವ ಮಳೆ ಬೆಳಿಗ್ಗೆವರೆಗೂ ಮುಂದುವರೆಯಲಿದೆ. ಮಧ್ಯಾಹ್ನದಿಂದ ಸಂಜೆಯವರೆಗೆ ವಿರಾಮ ನೀಡಲಿದೆ. ನಗರದಲ್ಲಿ ಮೋಡಕವಿದ ವಾತಾವರಣ ಮುಂದುವರೆದಿದೆ.
ಬೆಳಗಾವಿ, ಧಾರವಾಡ, ಕಲಬುರಗಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ. ವಿಜಯಪುರ, ಗದಗ, ಬೀದರ್, ಹಾವೇರಿ ಜಿಲ್ಲೆಗಳಲ್ಲಿ ಕೆಲವೆಡೆ ಅಲ್ಲಲ್ಲಿ ಚದುರಿದಂತೆ ಮಳೆಯಾಗಿದೆ. ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನ ಕೆಲವು ಕಡೆಗಳಲ್ಲಿ ಮಳೆಯ ರಭಸ ಜೋರಾಗಿತ್ತು. ಉಳಿದಂತೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಭಾಗದ ಕೆಲವು ಪ್ರದೇಶಗಳಲ್ಲಿ ಅಲ್ಲಲ್ಲಿ ತುಂತುರು ಮಳೆ ಸುರಿದಿದೆ. ಮಳೆಯಿಂದ ರಾಜ್ಯದಲ್ಲಿ ಏರುಗತಿಯಲ್ಲಿದ್ದ ತಾಪಮಾನದ ಪ್ರಮಾಣ ಕುಸಿದಿದೆ.
ಕಲಬುರಗಿ, ಧಾರವಾಡ ಜಿಲ್ಲೆಯ ಕಲಘಟಗಿ, ಬೆಳಗಾವಿಯ ನಿಪ್ಪಾಣಿಯಲ್ಲಿ ತಲಾ 3 ಸೆಂ.ಮೀ., ಉತ್ತರ ಕನ್ನಡದ ಕಿರವತ್ತಿ, ಧಾರವಾಡದ ಕುಂದಗೋಳ, ಕಲಬುರಗಿ ಸೇಡಂ, ಚಿಕ್ಕಮಗಳೂರಿನ ಶಂಗೇರಿ ತಲಾ 2 ಸೆಂ.ಮೀ. ಮಳೆ ಆಗಿದೆ. ರಾಯಚೂರಿನಲ್ಲಿ (37.4 ಡಿಗ್ರಿ ಸೆಲ್ಸಿಯಸ್) ರಾಜ್ಯದ ಗರಿಷ್ಠ ತಾಪಮಾನ ಹಾಗೂ ಧಾರವಾಡದಲ್ಲಿ (18.9ಡಿ.ಸೆ.) ಕನಿಷ್ಠ ತಾಪಮಾನ ದಾಖಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯುತ್ತಿದೆ. ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯಕ್ಕೆ 33,331 ಕ್ಯುಸೆಕ್ ನೀರು ಹರಿದುಬಂದಿದ್ದು, ಜಲಾಶಯದ ನೀರಿನ ಮಟ್ಟ 1786.05 ಅಡಿಗಳಿಗೆ ತಲುಪಿದೆ.
ಭದ್ರಾ ಜಲಾಶಯಕ್ಕೆ 7,646 ಕ್ಯುಸೆಕ್ ನೀರು ಹರಿದುಬಂದಿದ್ದು, ಜಲಾಶಯದ ನೀರಿನ ಮಟ್ಟ 157.4 ಅಡಿಗಳಿಗೆ ಹೆಚ್ಚಳವಾಗಿದೆ. ತುಂಗಾ ಜಲಾಶಯಕ್ಕೆ 11,456 ಕ್ಯುಸೆಕ್ ನೀರು ಹರಿದುಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ. ಮಾಣಿ ಜಲಾಶಯಕ್ಕೆ 4,095 ಕ್ಯುಸೆಕ್ ಒಳಹರಿವು ಇದೆ.
ಕಾರವಾರ ತಾಲ್ಲೂಕಿನ ಕದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಜಲಾಶಯಕ್ಕೆ 22,111 ಕ್ಯುಸೆಕ್ ಒಳಹರಿವಿದ್ದು, ಮುನ್ನೆಚ್ಚರಿಕೆಯಿಂದಾಗಿ ಜಲಾಶಯದ ಮೂರು ಕ್ರೆಸ್ಟ್ ಗೇಟ್ಗಳನ್ನು ತೆರದು ಕಾಳಿ ನದಿಗೆ 10,050 ಕ್ಯುಸೆಕ್ ನೀರನ್ನು ಬಿಡಲಾಗಿದೆ. ವಿದ್ಯುತ್ ಉತ್ಪಾದನೆಗಾಗಿ 17,848 ಕ್ಯುಸೆಕ್ ಬಿಡಲಾಗುತ್ತಿದೆ. ಹಾರಂಗಿ ಜಲಾಶಯದ ಒಳಹರಿವು 12,282 ಕ್ಯುಸೆಕ್ಗೆ ಏರಿಕೆಯಾಗಿದ್ದು, ಜಲಾಶಯ ಭರ್ತಿಯಾಗಲು 7 ಅಡಿ ಬಾಕಿಯಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರ, ದಾಂಡೇಲಿ, ಹಳಿಯಾಳದಲ್ಲೂ ಉತ್ತಮ ಮಳೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದೆ. ಕುಮಾರಧಾರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದ್ದು, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸ್ನಾನಘಟ್ಟ ಮುಳುಗಡೆಯಾಗಿದೆ. ಕುಮಾರಧಾರಾ ನದಿ ಸೇತುವೆ ಕೆಳಭಾಗದ ಕಿಂಡಿ ಅಣೆಕಟ್ಟೆ ಕೂಡ ಮುಳುಗಡೆಯಾಗಿದೆ. ಆದಿಸುಬ್ರಹ್ಮಣ್ಯ ಬಳಿಯ ದರ್ಪಣತೀರ್ಥ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಸುಬ್ರಹ್ಮಣ್ಯ-ಬಿಸಿಲೆ-ಸಕಲೇಶಪುರ ಹೆದ್ದಾರಿಯಲ್ಲಿ ಬಿಸಿಲೆ ಸಮೀಪ ರಸ್ತೆಗೆ ಮರ ಬಿದ್ದು, ಸಂಚಾರ ಸ್ಥಗಿತಗೊಂಡಿದೆ.
ಇದನ್ನು ಓದಿ: ಮುಂಗಾರು ಆರಂಭದ ಮೊದಲ ದಿನವೇ ರಾಜ್ಯದ ವಿವಿದೆಡೆ ಭಾರೀ ಮಳೆ
ಭಾಗಮಂಡಲ ತ್ರಿವೇಣಿ ಸಂಗಮವು ಜಲಾವೃತವಾಗಿದೆ. ಲಕ್ಷ್ಮಣತೀರ್ಥ ನದಿಯಲ್ಲೂ ನೀರಿನಮಟ್ಟ ಏರಿಕೆ ಆಗಿದ್ದರಿಂದ ಹಳ್ಳ–ಕೊಳ್ಳಗಳು ತುಂಬಿ ಹರಿಯುತ್ತಿವೆ. ಭಾಗಮಂಡಲ-ತಲಕಾವೇರಿ ವ್ಯಾಪ್ತಿಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಬಲಮುರಿಯ ಕಿರುಸೇತುವೆ ಮುಳುಗಡೆಯಾಗಿದೆ. ಕಾವೇರಿ ಮತ್ತು ಉಪನದಿಗಳ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ.
ಮಡಿಕೇರಿ–ಮಂಗಳೂರು ರಸ್ತೆಯ ತಾಳತ್ತಮನೆ ಎಂಬಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕುಸಿತವಾಗಿದ್ದು, 6 ಕುಟುಂಬಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಇದೇ ಸ್ಥಳದಲ್ಲಿ 2018ರಲ್ಲೂ ಭೂಕುಸಿತವಾಗಿತ್ತು. ಅಲ್ಲಿ ತಡೆಗೋಡೆ ಕಾಮಗಾರಿ ಪ್ರಗತಿಯಲ್ಲಿದ್ದು ಮಣ್ಣು ಸಡಿಲಗೊಂಡು ಮತ್ತೆ ಕುಸಿಯುಲು ಆರಂಭಿಸಿದೆ. ಮಡಿಕೇರಿ ಆಕಾಶವಾಣಿ ಟವರ್ ಬಳಿ ಗುಡ್ಡದ ಮಣ್ಣು ಕುಸಿದಿದೆ. ಟವರ್ನಿಂದ ಸ್ವಲ್ಪವೇ ದೂರದಲ್ಲಿ ಜನವಸತಿ ಪ್ರದೇಶವಿದ್ದು, ಆತಂಕ ಎದುರಾಗಿದೆ.
ಹಾಸನ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದೆ. ಮೈಸೂರು ಜಿಲ್ಲೆಯಲ್ಲಿ ಬಹುತೇಕ ಕಡೆ ಜಿಟಿಜಿಟಿ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ, ಸುಳ್ಯ, ಬಂಟ್ವಾಳ, ಪುತ್ತೂರು, ಮಂಗಳೂರು, ಬೆಳ್ತಂಗಡಿ ತಾಲ್ಲೂಕುಗಳಲ್ಲಿ ನಿರಂತರ ಮಳೆಯಾಗುತ್ತಿದೆ. ಸುಳ್ಯ ತಾಲ್ಲೂಕಿನಲ್ಲಿ ಗರಿಷ್ಠ 8 ಸೆಂ.ಮೀ. ಮಳೆ ದಾಖಲಾಗಿದೆ. ಜಿಲ್ಲೆಯಲ್ಲಿ ಒಂದು ಮನೆಗೆ ಪೂರ್ಣ, 8 ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಹೆಚ್ಚಿದ ಮಳೆಯ ಆರ್ಭಟದಿಂದಾಗಿ ಬೆಳ್ತಂಗಡಿಯಲ್ಲಿ 67.5 ಮಿ.ಮೀ., ಬಂಟ್ವಾಳದಲ್ಲಿ 61.6ಮಿ.ಮೀ., ಮಂಗಳೂರಿನಲ್ಲಿ 56.5 ಮಿ.ಮೀ., ಪುತ್ತೂರಿನಲ್ಲಿ 71.5 ಮಿ.ಮೀ., ಸುಳ್ಯದಲ್ಲಿ 79.9 ಮಿ.ಮೀ., ಮೂಡುಬಿದಿರೆಯಲ್ಲಿ 59.6 ಮಿ.ಮೀ., ಕಡಬದಲ್ಲಿ 67.5 ಮಿ.ಮೀ. ಮಳೆ ದಾಖಲಾಗಿದೆ. ಜಿಲ್ಲೆಯಲ್ಲಿ ಒಟ್ಟು 66.3 ಮಿ.ಮೀ ಮಳೆಯಾಗಿದೆ. ವಾಡಿಕೆಯ ಮಳೆಯ ಪ್ರಮಾಣ 43.5 ಮಿ.ಮೀ ಇದೆ. ಮಳೆಯ ಕಾರಣದಿಂದ ನಾಡ ದೋಣಿ ಮೀನುಗಾರರು ಕಳೆದ ಕೆಲವು ದಿನಗಳಿಂದ ಮೀನುಗಾರಿಕೆಗೆ ಇಳಿದಿಲ್ಲ. ಈ ವಾರ ಪೂರ್ತಿ ಮಳೆಯ ಸಾಧ್ಯತೆಯಿರುವುದರಿಂದ ನಾಡದೋಣಿ ಮುಂದಿನ ವಾರದಿಂದ ಮೀನುಗಾರಿಕೆ ಇಳಿಯುವ ಸಾಧ್ಯತೆಯಿದೆ ಎಂದು ಮೀನುಗಾರ ಮುಖಂಡರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ʻಸುಮಲತಾ – ಕುಮಾರಸ್ವಾಮಿʻ ರಾಜಕೀಯ ಕೆಸರೆರಚಾಟದಲ್ಲಿ ಸ್ಪೋಟಗೊಂಡಿದ್ದು “ಅಕ್ರಮ ಗಣಿಗಾರಿಕೆ”
ಉಡುಪಿ ಜಿಲ್ಲೆಯ ನಿಟ್ಟೆ, ಗುಲ್ವಾಡಿ, ಕೆದೂರು, ಉಳ್ಳೂರು, ತಲ್ಲೂರು, ಶಿರೂರು, ಕಾರ್ಕಳ, ಹೊಸಾಳ, ಶಿವಳ್ಳಿ, ಉದ್ಯಾವರ, ಮೂಡನಿಡಂಬೂರು ಗ್ರಾಮದಲ್ಲಿ ಮನೆಗಳಿಗೆ ಹಾನಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಗಿರಿಶ್ರೇಣಿ ಭಾಗದಲ್ಲಿಮಳೆಯಿಂದಾಗಿ ಹಳ್ಳ, ಹೊಳೆಗಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ಹೊಸನಗರದಲ್ಲಿ 14.24 ಸೆಂ.ಮೀ ಮಳೆಯಾಗಿದ್ದು, ತೀರ್ಥಹಳ್ಳಿಯಲ್ಲಿ 79.68 ಮಿ.ಮೀ, ಸಾಗರದಲ್ಲಿ 70.80 ಮಿ.ಮೀ ಮಳೆ ದಾಖಲಾಗಿದೆ. ದಾವಣಗೆರೆ ಜಿಲ್ಲೆಯಲ್ಲೂ ಉತ್ತಮ ಮಳೆಯಾಗಿದೆ.
ರಾಜ್ಯದ ಜಲಾಶಯಗಳ ನೀರಿನ ಮಟ್ಟ (ಬುಧವಾರದ ದಿನದ ಅಂತ್ಯಕ್ಕೆ) ಹೀಗಿವೆ:
- ಹೇಮಾವತಿ ಜಲಾಶಯದ ಪೂರ್ಣಮಟ್ಟ 890.58 ಮೀಟರ್. ಇಂದಿನ ನೀರಿನ ಮಟ್ಟ 883.17. ಜಲಾಶಯಕ್ಕೆ 3634 ಕ್ಯುಸೆಕ್ ನೀರು ಹರಿದುಬರುತ್ತಿದೆ.
- ಲಿಂಗನಮಕ್ಕಿ ಜಲಾಶಯದ ಪೂರ್ಣಮಟ್ಟ 554.44 ಮೀಟರ್. ಇಂದಿನ ನೀರಿನ ಮಟ್ಟ 544.36. ಜಲಾಶಯಕ್ಕೆ 7083 ಕ್ಯುಸೆಕ್ ಒಳ ಹರಿವು ಇದೆ.
- ಹಾರಂಗಿ ಜಲಾಶಯದ ಪೂರ್ಣ ಮಟ್ಟ 871.38 ಮೀಟರ್. ಇಂದಿನ ನೀರಿನ ಮಟ್ಟ 868.50 ಮೀಟರ್ ಇದೆ.
- ಭದ್ರಾ ಜಲಾಶಯದ ಪೂರ್ಣ ಮಟ್ಟ 657.73 ಮೀಟರ್. ಇಂದಿನ ನೀರಿನ ಮಟ್ಟ 648.99 ಮೀಟರ್. ಜಲಾಶಯಕ್ಕೆ 3,339 ಕ್ಯುಸೆಕ್ ಒಳ ಹರಿವು. ಜಲಾಶಯದ ಒಳಹರಿವು 7,646 ಕ್ಯುಸೆಕ್ ಆಗಿದೆ.
- ಆಲಮಟ್ಟಿ ಜಲಾಶಯದ ಪೂರ್ಣ ಮಟ್ಟ 519.60 ಮೀಟರ್. ಇಂದಿನ ನೀರಿನ ಮಟ್ಟ 517.53 ಮೀಟರ್. 24,727 ಕ್ಯುಸೆಕ್ ಒಳಹರಿವು ಇದೆ.
- ಕಬಿನಿ ಜಲಾಶಯದ ಪೂರ್ಣ ಮಟ್ಟ 696.13 ಮೀಟರ್. ಇಂದಿನ ನೀರಿನ ಮಟ್ಟ 694.05 ಮೀಟರ್ ಆಗಿದೆ.
- ಕೆಆರ್ಎಸ್ ಜಲಾಶಯದ ಪೂರ್ಣಮಟ್ಟ 38.04 ಮೀಟರ್ ಇಂದಿನ ನೀರಿನ ಮಟ್ಟ 27.11 ಮೀಟರ್ ಆಗಿದೆ.
- ತುಂಗಭದ್ರಾ ಜಲಾಶಯದ ಪೂರ್ಣಮಟ್ಟ 497.71 ಮೀಟರ್. ಇಂದಿನ ಮಟ್ಟ 490.88 ಮೀಟರ್ ಆಗಿದೆ.
- ನಾರಾಯಣಪುರ ಜಲಾಶಯದ ಪೂರ್ಣಮಟ್ಟ 492.25 ಮೀಟರ್. ಇಂದಿನ ಮಟ್ಟ 491.59 ಮೀಟರ್ ಆಗಿದೆ.
- ಸೂಪಾ ಜಲಾಶಯದ ಪೂರ್ಣ ಮಟ್ಟ 564.00 ಮೀಟರ್. ಇಂದಿನ ನೀರಿನ ಮಟ್ಟ 538.36 ಮೀಟರ್. ಜಲಾಶಯಕ್ಕೆ ಒಳಹರಿವು 16,282 ಇದೆ.
- ಘಟಪ್ರಭಾ ಜಲಾಶಯದ ಪೂರ್ಣ ಮಟ್ಟ 662.91 ಮೀಟರ್. ಇಂದಿನ ನೀರಿನ ಮಟ್ಟ 651.71 ಮೀಟರ್ ಆಗಿದೆ.
- ಮಲಪ್ರಭಾ ಜಲಾಶಯದ ಪೂರ್ಣಮಟ್ಟ 633.80 ಮೀಟರ್. ಇಂದಿನ ನೀರಿನ ಮಟ್ಟ 629.05 ಮೀಟರ್ ಆಗಿದೆ.
- ಗಾಜನೂರಿನಲ್ಲಿರುವ ತುಂಗಾ ಜಲಾಶಯಕ್ಕೆ 4,842 ಕ್ಯುಸೆಕ್ ಒಳ ಹರಿವು