ಮೂರು ಪಕ್ಷಗಳ ನಡುವೆ ನಾಲ್ಕನೇ ಅಭ್ಯರ್ಥಿ ಗೆಲ್ಲುವುದು ಹೇಗೆ?! ಲೆಕ್ಕಾಚಾರ ಹೇಗಿದೆ?!!

ಗುರುರಾಜ ದೇಸಾಯಿ

ರಾಜ್ಯದಲ್ಲಿ ರಾಜ್ಯಸಭೆ ಚುನಾವಣೆ ರಂಗೇರಿದೆ. ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ತಂತ್ರಗಾರಿಕೆಯಲ್ಲಿ ತೊಡಗಿವೆ. ಈ ಸಂದರ್ಭದಲ್ಲಿಯೇ ತಮ್ಮ ಅಭ್ಯರ್ಥಿಗಳ ಗೆಲುವಿದಾಗಿ ರೆಸಾರ್ಟ್ ರಾಜಕೀಯ ಆರಂಭಿಸಿವೆ.

ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಆರು ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎರಡು ಸ್ಥಾನಗಳನ್ನು ಬಿಜೆಪಿ, ಒಂದು ಸ್ಥಾನವನ್ನು ಕಾಂಗ್ರೆಸ್ ಸುಲಭವಾಗಿ ಗೆಲ್ಲಲಿದೆ. ಉಳಿದ ಒಂದು ಸ್ಥಾನಕ್ಕಾಗಿ ಮೂರು ಪಕ್ಷಗಳು ಪೈಪೋಟಿ ನಡೆಸಿವೆ.
ಸದ್ಯ ಆ ಒಂದು ಸ್ಥಾನದ ಗೆಲುವು ಯಾರಿಗೂ ಸುಲಭವಾಗಿಲ್ಲ. ಹಾಗಾಗಿ ಮೂರು ಪಕ್ಷಗಳು ತಂತ್ರಗಾರಿಕೆಯನ್ನು ಹೆಣೆಯುತ್ತಿವೆ.

ರೆಸಾರ್ಟ್‌ನತ್ತ ಶಾಸಕರು?: ರಾಜ್ಯಸಭೆ ಚುನಾವಣೆ ಮೂರು ಪಕ್ಷಗಳಿಗೆ ಈಗ ಪ್ರತಿಷ್ಠೆಯ ವಿಷಯವಾಗಿದೆ. ಹೀಗಾಗಿ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ರೆಸಾರ್ಟ್ ಮೊರೆ ಹೋಗಲಾಗುತ್ತಿದೆ. ಬಹುತೇಕ ಶಾಸಕರನ್ನು ಬುಧವಾರ ರೆಸಾರ್ಟ್ಗೆ ಶಿಫ್ಟ್‌ ಮಾಡಿರುವ ಸಾಧ್ಯತೆ ಇದೆ. ರೆಸಾರ್ಟ್‌ಗಳಲ್ಲಿಯೇ ಶಾಸಕರ ಸಭೆ ನಡೆಸಲಾಗುತ್ತದೆ. ಹೀಗೆ ಆಯಾ ಪಕ್ಷಗಳ ಶಾಸಕರು ಅಡ್ಡಮತದಾನಕ್ಕೆ ಅವಕಾಶ ನೀಡದಿರುವುದು ಮತ್ತು ಕುದುರೆ ವ್ಯಾಪಾರಕ್ಕೆ ಬಲಿಯಾಗದಂತೆ ನೋಡಿಕೊಳ್ಳುಲು ರಾಜಕೀಯ ಪಕ್ಷಗಳ ತಂತ್ರಗಾರಿಕೆ ಹೆಣೆದಿವೆ ಎಂದು ಮೂರು ಪಕ್ಷಗಳ ಪಡಸಾಲೆಯಿಂದ ಕೇಳು ಬರುತ್ತಿರುವ ಮಾತಾಗಿದೆ.

ಕುದುರೆ ವ್ಯಾಪಾರದ ಭಯ ಎಲ್ಲರನ್ನೂ ಕಾಡುತ್ತಿರುವ ಹಿನ್ನೆಲೆಯಲ್ಲಿ ಆಯಾ ಪಕ್ಷದ ಶಾಸಕರುಗಳನ್ನು ಚುನಾವಣೆ ನಡೆಯುವ ಜೂ.10ರಂದು ನೇರವಾಗಿ ವಿಧಾನಸೌಧಕ್ಕೆ ಕರೆತರಲಾಗುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಗೆಲುವಿನ‌ ಲೆಕ್ಕಾಚಾರ ಹೇಗೆ? : ಬಿಜೆಪಿಯು ಓರ್ವ ಪಕ್ಷೇತರ ಅಭ್ಯರ್ಥಿಯ ಬೆಂಬಲದೊಂದಿಗೆ 122 ಶಾಸಕರ ಮತಗಳನ್ನು ಹೊಂದಿದೆ. ಇದರಿಂದಾಗಿ ಸ್ವಂತ ಬಲದ ಮೇಲೆ ಎರಡು ಸ್ಥಾನಗಳನ್ನು ಸುಲಭವಾಗಿ ಪಡೆಯಲಿದೆ. ಕಾಂಗ್ರೆಸ್ 70 ಶಾಸಕರ ಮತಗಳನ್ನು ಹೊಂದಿದ್ದು ಸ್ವಂತ ಬಲದ ಮೇಲೆ ಒಂದು ಸ್ಥಾನವನ್ನು ಗೆಲ್ಲಲಿದೆ.ಇನ್ನು ಜೆಡಿಎಸ್ 32 ಶಾಸಕರನ್ನು ಹೊಂದಿದೆ. ಜೆಡಿಎಸ್‌ಗೆ ಸ್ವಂತ ಬಲದ ಮೇಲೆ ರಾಜ್ಯಸಭಾ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಿಲ್ಲ.

ಕರ್ನಾಟಕದಿಂದ ಈ ಬಾರಿ ನಾಲ್ವರು ಸದಸ್ಯರು ರಾಜ್ಯಸಭೆಗೆ ಆಯ್ಕೆಯಾಗಬೇಕಿದೆ. ಸದ್ಯ ಬಿಜೆಪಿಯಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್ ಹಾಗೂ ಮೂರನೇ ಅಭ್ಯರ್ಥಿಯಾಗಿ ಲೆಹರ್ ಸಿಂಗ್ ಕಣದಲ್ಲಿದ್ದಾರೆ. ಜೆಡಿಎಸ್‌ನಿಂದ ಕುಪ್ಪೇಂದ್ರ ರೆಡ್ಡಿ ಹಾಗೂ ಕಾಂಗ್ರೆಸ್‌ನಿಂದ ಮಾಜಿ ಕೇಂದ್ರ ಸಚಿವ ಜೈರಾಮ್ ರಮೇಶ್ ಹಾಗೂ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಆಲಿಖಾನ್ ನಾಮಪತ್ರ ಸಲ್ಲಿಸಿದ್ದಾರೆ.

ಮೂರನೇ ಅಭ್ಯರ್ಥಿ ಗೆಲುವು ಹೇಗೆ? 122 ಶಾಸಕರನ್ನು ಹೊಂದಿರುವ ಬಿಜೆಪಿ ಎರಡು ಸ್ಥಾನ ಸುಲಭವಾಗಿ ಗೆಲ್ಲಲಿದೆ. ಒಬ್ಬರಿಗೆ 46 ರಂತೆ ಇಬ್ಬರಿಗೆ 92 ಮತಗಳು ಖಾಲಿಯಾಗಿ 32 ಮತಗಳು ಹೆಚ್ಚುವರಿಯಾಗಿ ಉಳಿಯುತ್ತವೆ. ತನ್ನ ಅಭ್ಯರ್ಥಿ ಗೆಲ್ಲಬೇಕಾದರೆ ಬಿಜೆಪಿಗೆ 14 ಮತಗಳ ಅಗತ್ಯವಿದೆ. ಕಾಂಗ್ರೆಸ್ 70 ಸದಸ್ಯರನ್ನು ಹೊಂದಿದ್ದು ಸುಲಭವಾಗಿ ಒಂದು ಸ್ಥಾನ ಗೆಲ್ಲಲಿದೆ. 24 ಮತಗಳು ಉಳಿಯಲಿದ್ದು ಕಾಂಗ್ರೆಸ್ ಎರಡನೇ ಅಭ್ಯರ್ಥಿ ಗೆಲ್ಲಬೇಕಾದರೆ 22 ಮತಗಳ ಅಗತ್ಯವಿದೆ.
ಇನ್ನು ಜೆಡಿಎಸ್ 32 ಶಾಸಕರನ್ನು ಹೊಂದಿದೆ. ಜೆಡಿಎಸ್‌ಗೆ ಸ್ವಂತ ಬಲದ ಮೇಲೆ ರಾಜ್ಯಸಭಾ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಿಲ್ಲ. ಇದರಿಂದಾಗಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್ ಅಥವಾ ಬಿಜೆಪಿಯ ಹೆಚ್ಚುವರಿ ಮತಗಳ ಮೇಲೆ ಕಣ್ಣಿಟ್ಟಿದೆ.

ಒಬ್ಬ ಶಾಸಕರಿಗೆ ಪ್ರಥಮ-ದ್ವಿತೀಯ ಪ್ರಾಶಸ್ತ್ಯದ ಮತದಾನಕ್ಕೆ ಅವಕಾಶವಿದೆ. ಅತಿಹೆಚ್ಚು ಮೊದಲ ಪ್ರಾಶಸ್ತ್ಯದ ಹಾಗೂ ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು ಪಡೆಯುವ ನಾಲ್ಕನೇ ಅಭ್ಯರ್ಥಿಗೆ ಗೆಲ್ಲುವ ಅವಕಾಶ ಹೆಚ್ಚು. ಈ ಲೆಕ್ಕಾಚಾರದ ಪ್ರಕಾರ, ಬಿಜೆಪಿಯ ಮೂರನೇ ಅಭ್ಯರ್ಥಿ ಅಥವಾ ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಗೆಲುವಿಗೆ ಹೆಚ್ಚಿನ ಅವಕಾಶವಿದೆ. ಹೇಗೆಂದರೆ ಇಬ್ಬರ ಬಳಿಯೂ 32 ಮತಗಳು ಇವೆ. ಮೂರು ಪಕ್ಷಗಳು ವೀಪ್ ಜಾರಿ ಮಾಡಿವೆ. ಬಿಜೆಪಿ, ಕಾಂಗ್ರೆಸ್‌ನ ಶಾಸಕರು ವಿಪ್ ಉಲ್ಲಂಘಿಸುವ ಸಾಧ್ಯತೆ ಕಮ್ಮಿ, ಆದರೆ ಇದೇ ಮಾತನ್ನು ಜೆಡಿಎಸ್ಸಿಗೆ ಹೇಳುವುದು ಕಷ್ಟ. ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಜೆಡಿಎಸ್ ಶಾಸಕರನ್ನು ಸೆಳೆಯುವ ಸಾಧ್ಯತೆ ಹೆಚ್ಚಿದೆ. ಇದನ್ನೆಲ್ಲ ಗಮನಿಸಿದರೆ, ಮತ್ತು ರಾಜಕೀಯ ವಿಶ್ಲೇಷಕರ
ಲೆಕ್ಕಾಚಾರದ ಪ್ರಕಾರ, ಬಿಜೆಪಿ ಮೂರು ಸ್ಥಾನ ಗೆಲ್ಲುವ ಸಾಧ್ಯತೆ ಹೆಚ್ಚು ಇದೆ ಎಂದು ಹೇಳಲಾಗುತ್ತಿದೆ.

Donate Janashakthi Media

Leave a Reply

Your email address will not be published. Required fields are marked *