ನೂತನ ರಾಜ್ಯ ಜಲನೀತಿಯು ಅಭಿವೃದ್ಧಿಗೆ ಮಾರಕ-ನೀರಿನ ಖಾಸಗೀಕರಣಕ್ಕೆ ಪೂರಕ: ಸಿಪಿಐ(ಎಂ)

ಬೆಂಗಳೂರು: ಕರ್ನಾಟಕ ರಾಜ್ಯ ಸರಕಾರ ಮಂತ್ರಿಮಂಡಲ ಅಂಗೀಕರಿಸಿರುವ “ರಾಜ್ಯ ಜಲ ನೀತಿ-2022” ಕುಡಿಯುವ ನೀರು ಮತ್ತು ನೀರಾವರಿ ಹಾಗೂ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಒದಗಿಸುವ ನೀರನ್ನು ವ್ಯಾಪಕವಾಗಿ ಖಾಸಗೀಕರಿಸುವ ಯೋಜನೆಯಾಗಿದೆ ಎಂದು ಸಿಪಿಐ(ಎಂ) ಪಕ್ಷವು ಖಂಡಿಸಿದೆ.

ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಅವರು, ನೂತನ ಜಲನೀತಿಯು ಜನತೆಯನ್ನು ಬೆಲೆ ಏರಿಕೆಯ ಲೂಟಿಗೊಳಪಡಿಸುವ ದುರುದ್ದೇಶವಾಗಿದೆ. ಇದು ರಾಜ್ಯದ ಅಭಿವೃದ್ದಿಗೆ ಮಾರಕ. ಕೂಡಲೇ ಈ ಜಲನೀತಿಯನ್ನು ವಾಪಾಸ್ಸು ಪಡೆಯಬೇಕೆಂದು ಬಲವಾಗಿ ಒತ್ತಾಯಿಸಿದ್ದಾರೆ.

ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ ನೀಡುವುದು ಮತ್ತು ನೀರಿನ ಸಮರ್ಪಕ ಬಳಕೆಗೆ ಜಾಗೃತಿ ಮೂಡಿಸುವುದು ಇದರ ಆಶಯವೆಂದು ಹೇಳಿಕೊಂಡಿರುವ ಸರ್ಕಾರ ಕೇವಲ ಜನತೆಯನ್ನು ದಾರಿ ತಪ್ಪಿಸುವ ತಂತ್ರವಾಗಿದೆ. ಇಂತಹ ಜನತೆಗೆ ಮಾರಕವಾಗುವಂತ ನೀತಿಗಳು ರಾಜ್ಯವನ್ನು ಕಾರ್ಪೊರೇಟ್ ಕಂಪನಿಗಳ ಲೂಟಿಗೊಳಪಡಿಸುವ ದುರ್ನೀತಿಯ ಮುಂದುವರಿದ ಭಾಗವಾಗಿದೆ ಎಂದು ಸಿಪಿಐ(ಎಂ) ತಿಳಿಸಿದೆ.

ರಾಜ್ಯದಾದ್ಯಂತ ಶುದ್ಧ ಕುಡಿಯುವ ನೀರಿನ ಖಾಸಗೀಕರಣದಿಂದ ಈಗಾಗಲೇ ಜನತೆ ಬೆಲೆತೆತ್ತು ಕುಡಿಯುವ ನೀರು ಖರೀದಿಸುತ್ತಿದ್ದಾರೆ. ಈಗ ಕುಡಿಯುವ ನೀರು ಮತ್ತು ಕೃಷಿ ನೀರಿಗೆ ಮೀಟರ್ ಅಳವಡಿಸಿ ಶುಲ್ಕ ವಿಧಿಸುವುದು, ಕುಡಿಯುವ ನೀರಿನ ಬೆಲೆ ಏರಿಕೆಗೆ ಮತ್ತು ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚ ಹೆಚ್ಚಳಕ್ಕೆ ಮತ್ತು ಆ ಮೂಲಕ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಲಿದೆ.

ರಾಜ್ಯದಲ್ಲಿ ಬೀಳಾಗಿರುವ ಸುಮಾರು 50 ಲಕ್ಷ ಎಕರೆ ಜಮೀನಿನಲ್ಲಿ, ಮಳೆ ನೀರು ಸಂಗ್ರಹದ ಮೂಲಕ ಅಂತರ್ಜಲ ಹೆಚ್ಚಿಸಿಕೊಂಡು ನೀರಾವರಿಗೆ ಒಳಪಡಿಸುವ ರೈತರ ಆಶಯಕ್ಕೆ, ಈ ಅಂತರ್ಜಲ ಬಳಕೆಯ ಮೀಟರೀಕರಣ ವಿರುದ್ಧವಾಗಿದೆ.

ಅದೇ ರೀತಿ, ಅಂತರ್ಜಲದ ಮೂಲಕ ಕೃಷಿಯಲ್ಲಿ ತೊಡಗಿರುವ ದಶಲಕ್ಷಾಂತರ ರೈತಕುಟುಂಬಗಳಿಗೆ ಇದು ಮತ್ತಷ್ಠು ದುಬಾರಿಯಾಗಿಸುವುದರಿಂದ ಅವರನ್ನು ಕೃಷಿಯಿಂದ ಹೊರ ನಡೆಯುವಂತೆ ಒತ್ತಾಯಿಸುತ್ತದೆ. ರಾಜ್ಯದ ಸಾವಿರಾರು ಸಣ್ಣ ಮತ್ತು ಮದ್ಯಮ ಕೈಗಾರಿಕೆಗಳು ವಿದ್ಯುತ್ ಬೆಲೆ ಏರಿಕೆಯಿಂದ ಹಾಗೂ ಅದರ ಖಾಸಗೀಕರಣದ ನೀತಿಗಳಿಂದ ಅವು ಬಹುತೇಕ ಮುಚ್ಚುವ ಅಪಾಯದಲ್ಲಿವೆ. ಈಗ ಈ ನೀತಿ ಅದನ್ನು ಖಾತರಿಪಡಿಸಲಿದೆ. ಮಾತ್ರವಲ್ಲಾ, ದೊಡ್ಡ ಪ್ರಮಾಣದಲ್ಲಿ ಕಾರ್ಮಿಕರನ್ನು ದುಡಿಮೆಯಿಂದ ಬೀದಿಗೆ ದೂಡಲಿದೆ.

ಈ ಮೂಲಕ, ಕೃಷಿಯನ್ನು ಮತ್ತು ಕೃಷಿ ಆಧಾರಿತ ಮಾರುಕಟ್ಟೆಯನ್ನು ಹಾಗೂ ಕೈಗಾರಿಕೆಗಳನ್ನು ಮತ್ತು ಗ್ರಾಹಕ ಮಾರುಕಟ್ಟೆಯನ್ನು ಕಾರ್ಪೊರೇಟ್ ಕಂಪನಿಗಳಿಗೆ ವಹಿಸಿಕೊಡುವ ಮತ್ತು ರಾಜ್ಯವನ್ನು ಲೂಟಿಗೊಳಪಡಿಸುವ ನೀತಿಯ ಮುಂದುವರಿಕೆ ಇದಾಗಿದೆ ಎಂಬುದನ್ನು ಸಾಬೀತುಪಡಿಸುತ್ತದೆ.

ಆದ್ದರಿಂದ ರಾಜ್ಯದ ಎಲ್ಲ ರೈತರು, ಕೂಲಿಕಾರರು, ಕಾರ್ಮಿಕರು, ನಾಗರೀಕರು ಇಂತಹ ಜನ ವಿರೋಧಿ ನೀತಿಯನ್ನು ಕೈಬಿಡುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಬೇಕೆಂದು ರಾಜ್ಯದ ಜನತೆಗೆ ಸಿಪಿಐ(ಎಂ) ಕರೆ ನೀಡಿದೆ.

Donate Janashakthi Media

Leave a Reply

Your email address will not be published. Required fields are marked *