ಬೆಂಗಳೂರು: ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು)ದ ನೇತೃತ್ವದ ನಿಯೋಗವೊಂದು ನೌಕರರ ಪ್ರಮುಖ ಬೇಡಿಕೆಗಳನ್ನು ಪರಿಹರಿಸಬೇಕು ಹಾಗೂ ರಾಜ್ಯ ಬಜೆಟ್‌ನಲ್ಲಿ ನೌಕರರ ಬದುಕಿನ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂಬ ವಿವಿಧ ವಿಚಾರಗಳನ್ನು ಚರ್ಚಿಸುವುದಕ್ಕಾಗಿ ಇಂದು ಗಣಿ ಮತ್ತು ಭೂ ವಿಜ್ಞಾನ ಹಾಗು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್ ಅವರೊಂದಿಗೆ ಮಹತ್ವದ ಸಭೆಯನ್ನು ನಡೆಸಿದರು.
ಸಭೆಯಲ್ಲಿ ಭಾಗವಹಿಸಿದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯ ಅಧ್ಯಕ್ಷೆ ಎಸ್. ವರಲಕ್ಷ್ಮಿ ಅವರು, ರಾಜ್ಯದ ಮಹಿಳೆಯರು ಮತ್ತು ಮಕ್ಕಳ ಸರ್ವತೋಮುಖ ಅಭಿವೃದ್ದಿಗಾಗಿ ಅಂಗನವಾಡಿ ನೌಕರರು ದುಡಿಯುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಹೈಕೋರ್ಟಿನ ಆದೇಶದಂತೆ, ರಾಜ್ಯದ 47.37 ಲಕ್ಷ ಫಲಾನುಭವಿಗಳಿಗೆ ಪೌಷ್ಟಿಕ ಆಹಾರ ಮತ್ತು ಆರೋಗ್ಯ ಸವಲತ್ತುಗಳನ್ನು ಖಾತ್ರಿಪಡಿಸಲಾಗಿದೆ. ಕೊರೊನಾ ತಡೆಗಟ್ಟುವ ಸೇನಾನಿಗಳಾಗಿ ದುಡಿದಿದ್ದಾರೆ, ಅವರಲ್ಲಿ 59 ಜನರು ಬಲಿದಾನವಾಗಿದ್ದಾರೆ. ಮಾತ್ರವಲ್ಲದೆ, 293 ಜನರು ಕೊರೊನಾ ಸೋಂಕಿಗೊಳಗಾಗಿದ್ದಾರೆ. ಕೆಲವರು ಕುಟುಂಬದವರನ್ನು ಕಳೆದುಕೊಂಡು ಒಂಟಿಯಾಗಿದ್ದಾರೆ. ಕೊರೊನಾ ಸಂದರ್ಭದ ನಂತರದಲ್ಲಿ ಇ-ಸರ್ವೆ, ಚುನಾವಣೆಗಳು, ವ್ಯಾಕ್ಸಿನ್ ಹಾಕುವುದು ಮತ್ತು ಅದರ ಸರ್ವೆಗಳು, ಪೋಷಣ್ ಅಭಿಯಾನ, ಪೋಷಣ್ ಪಕ್ವಾಡ ಅಂತ ಆಚರಣೆಗಳು ನಿರಂತರವಾಗಿ ನಡೆಯುತ್ತಿವೆ ಎಂದು ತಿಳಿಸಿದರು.
ಒಂದೆಡೆ, ಪೆಟ್ರೋಲ್, ಡೀಸೆಲ್ ಬೆಲೆಗಳು ಹೆಚ್ಚಾಳ ಮತ್ತೊಂದೆಡೆ, ಆಹಾರ ದಾನ್ಯಗಳು ಸೇರಿದಂತೆ ಪ್ರತಿಯೊಂದು ವಸ್ತು ಮತ್ತು ಸೇವೆಯ ಬೆಲೆಗಳು ಹೆಚ್ಚಾಗಿದೆ. ಆದರೆ ಆದಾಯ ಮಾತ್ರ ಹೆಚ್ಚಳವಾಗಲಿಲ್ಲ. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನೂತನ ಶಿಕ್ಷಣ ನೀತಿ 2020(ಎನ್‌ಇಪಿ)ನ್ನು ತಂದಿದೆ. ರಾಜ್ಯದಲ್ಲಿ ಸಂಬಂಧಿಸಿದ ಸಂಘಟನೆಗಳ ಬಳಿ ಚರ್ಚಿಸದೇ ಟಾಸ್ಕ್ ಫೋರ್ಸ್ ಸಮಿತಿಯನ್ನು ಎನ್‌ಇಪಿಯ ಜಾರಿಗಾಗಿ ನೇಮಕ ಮಾಡಿದೆ. ಎನ್‌ಇಪಿಯ ದಸ್ತಾವೇಜಿನಲ್ಲಿನ ಆಶಯಗಳು ಬೆಟ್ಟದಷ್ಟಿವೆ. ಆದರೆ, ಜಾರಿಯ ಸಂದರ್ಭದಲ್ಲಿ ಸಂಪೂರ್ಣವಾಗಿ ಖಾಸಗೀಕರಣ ಮತ್ತು ವಾಣಿಜ್ಯೀಕರಣವಾಗುವ ಅಂಶಗಳೇ ಹೆಚ್ಚಾಗಿವೆ. ಐಸಿಡಿಎಸ್ ಯೋಜನೆಗೆ ಸಂಬಂಧಿಸಿ 3 ರಿಂದ 6 ವರ್ಷ ಅಂದರೆ 36 ತಿಂಗಳ ಮಗುವಿನಿಂದ 5 ವರ್ಷ 10 ತಿಂಗಳ ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ದಾಖಲಾಗುತ್ತಿದ್ದರು. ಶಿಕ್ಷಣ ಇಲಾಖೆ ಸರ್ಕಾರಿ ಶಾಲೆಗಳಲ್ಲಿ ಅನಿಯಮಿತವಾಗಿ ಎಲ್.ಕೆ.ಜಿ – ಯು.ಕೆ.ಜಿ.ಗಳನ್ನು ತೆರೆದಿದ್ದರಿಂದ ಅಂಗನವಾಡಿ ಮಕ್ಕಳನ್ನು ಅಲ್ಲಿ ದಾಖಲಾತಿ ಮಾಡುತ್ತಿರುವುದರಿಂದ, ಅಂಗನವಾಡಿ ಕೇಂದ್ರಕ್ಕೆ ಈಗಾಗಲೇ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. 5 ವರ್ಷ ತುಂಬುವುದಕ್ಕೆ ಮೊದಲು ಎನ್‌ಇಪಿಯ ಪ್ರಕಾರ ಬಾಲವಾಟಿಕಾ ಎನ್ನುವ ಪ್ರತ್ಯೇಕ ವ್ಯವಸ್ಥೆ ಮಾಡಿದರೆ ಅಂಗನವಾಡಿಗಳಲ್ಲಿ ಕೇವಲ 3 ವರ್ಷದ ಮಕ್ಕಳು ಮಾತ್ರ ಇರುತ್ತಾರೆ. ಇದರಿಂದ ಅಂಗನವಾಡಿ ಕೇಂದ್ರಗಳು ನಿಧಾನಗತಿಯಲ್ಲಿ ಮಕ್ಕಳೇ ಇಲ್ಲದ ಪರಿಸ್ಥಿತಿ ಸಂಭವಿಸುತ್ತದೆ ಎಂದು ವಿವರಿಸಿದರು.
1974 ಮಕ್ಕಳ ರಾಷ್ಟ್ರೀಯ ನೀತಿ, 1975ರ ಐಸಿಡಿಎಸ್ ಯೋಜನೆಯ ಉದ್ದೇಶ, 2002ರ ವಿಶ್ವ ಸಂಸ್ಥೆಯ ಪೋಷಣೆ 2013ರ ಮಕ್ಕಳ ರಾಷ್ಟ್ರೀಯ ನೀತಿ ಮತ್ತು ಗುರಿಗಳನ್ನು ಸಾಧಿಸಲು ಸಾಧ್ಯವಿಲ್ಲ. ಈ ಗುರಿಗಳ ಸಾಧನೆಗಾಗಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘವು ಸಚಿವರಿಗೆ ಮನವಿ ಸಲ್ಲಿಸಿದ್ದು, ಅಂಗನವಾಡಿ ಕೇಂದ್ರಗಳ ಉಳಿವಿಗಾಗಿ ಕೆಲವು ಸೂಚನೆಗಳನ್ನು ನೀಡಿದರು.
ಅಂಗನವಾಡಿ ನೌಕರರನ್ನು ಐಸಿಡಿಎಸ್‌ನ 6 ಸೇವೆಗಳಿಗೆ ಮಾತ್ರ ಸೀಮಿತ ಮಾಡಬೇಕು. ಐಸಿಡಿಎಸ್ ಯೇತರ ಕೆಲಸಗಳನ್ನು ನಿರ್ಬಂಧಿಸಬೇಕು ಹಾಗೂ ಕಾರ್ಯಕರ್ತೆಯರನ್ನು ಶಿಕ್ಷಕಿ ಎಂದು ಗುರುತಿಸಬೇಕು. ನೌಕರರಿಗೆ ತರಬೇತಿ ನೀಡಿ ಇಸಿಸಿಇ ಮಾರ್ಗದರ್ಶನ ಪ್ರಕಾರ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡಬೇಕು. ಅಂಗನವಾಡಿ ಕೇಂದ್ರಕ್ಕೆ ಹೆಚ್ಚುವರಿ ಸಹಾಯಕಿಯನ್ನು ನೇಮಕ ಮಾಡಬೇಕು. ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಮಕ್ಕಳಿಗೆ ಸಮವಸ್ತ್ರ, ಷೂಗಳು ಅಗತ್ಯವಿರುವ ವಿದ್ಯಾಭ್ಯಾಸದ ಪರಿಕರಗಳನ್ನು ಒದಗಿಸಬೇಕು. 2019 ಡಿಸೆಂಬರ್, 2020 ಫೆಬ್ರವರಿ, ಜುಲೈ, ನವೆಂಬರ್ 2021 ಮಾರ್ಚ್ 4,15, 25, ಜುಲೈ 15 ಆಗಸ್ಟ್ 16 ರಂದು ಪ್ರತಿಭಟನೆಗಳನ್ನು ಮಾಡಿ ಮನವಿಗಳನ್ನು ಕೊಡಲಾಗಿದ್ದರೂ ಅವುಗಳಲ್ಲಿ ಪ್ರಮುಖ ಬೇಡಿಕೆಗಳು ಈಡೇರಿರುವುದಿಲ್ಲ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು.
ಅಂದಿನ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಶಿಕ್ಷಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಎಲ್‌ಕೆಜಿ- ಯುಕೆಜಿ ಶಿಕ್ಷಣಕ್ಕೆ ಸಂಬಂಧಿಸಿ ವಿವರವಾದ ಪ್ರಸ್ತಾವನೆಗಳನ್ನು ಪ್ರತಿಯೊಂದು ವೃತ್ತದಲ್ಲಿಯೂ ಅಂಗನವಾಡಿ ಕೇಂದ್ರ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಬಲಪಡಿಸಲು ಒಂದು ಅಂಗನವಾಡಿ ಕೇಂದ್ರವನ್ನು ಗುರ್ತಿಸಿ 2500 ಅಂಗನವಾಡಿ ಕಾರ್ಯಕರ್ತೆಯರಿಗೆ 2500 ಮೇಲ್ವಿಚಾರಕಿಯರಿಗೆ ರಾಜ್ಯದ ಡಯಟ್ ಕೇಂದ್ರದಲ್ಲಿ ಅಧ್ಯಯನ ಪರಿಕರಗಳೊಂದಿಗೆ ಎನ್‌ಟಿಸಿ ಕೋರ್ಸ್ ನಡೆಸಬೇಕೆಂದು ಸೂಚಿಸಿದರು. ಆದರೆ, ನಂತರ ಇಲಾಖೆ ಇದರ ಬಗ್ಗೆ ಯಾವುದೇ ಗಮನ ಹರಿಸಲಿಲ್ಲ. ಈಗ ಎನ್‌ಇಪಿಯ ಪ್ರಸ್ತಾಪಗಳು ಬಂದಿವೆ. ಆದ್ದರಿಂದ ಇಲಾಖೆ ಈ ಸೂಚನೆಗಳನ್ನು ಒಪ್ಪಿ ಅದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರೂ.339 ಕೋಟಿ ಬಿಡುಗಡೆಗಾಗಿ ಆಗ್ರಹ
2017ರ ನಂತರ ಅಂಗನವಾಡಿ ನೌಕರರಿಗೆ ಕೆಲಸದ ಹೊರೆ ಹೆಚ್ಚಾಗಿದೆ. ಆದರೆ ಗೌರವಧನ ಹೆಚ್ಚಾಗಲಿಲ್ಲ. ಹಲವು ವರ್ಷಗಳ ಒತ್ತಾಯದ ನಂತರ ಇಲಾಖೆಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಸೇವಾ ಜೇಷ್ಠತೆ, ಸಹಾಯಕಿಯ ಕೆಲಸ ಮತ್ತು ಪೂರ್ಣ ಯೋಜನೆಯ ನಂತರ ಹೆಚ್ಚಾಗಿದೆ. ಕಾರ್ಯಕರ್ತೆ ಮತ್ತು ಸಹಾಯಕಿಯ ಸಂಬಳದಲ್ಲಿ 50% ರಷ್ಟು ವ್ಯತ್ಯಾಸವಿರುವುದನ್ನು ಕಡಿಮೆ ಮಾಡಲು 1750 ರೂ.ಗಳ ಹೆಚ್ಚಳ. ಮಿನಿ ಕಾರ್ಯಕರ್ತೆ, ಇಬ್ಬರ ಕೆಲಸ ಒಬ್ಬರೇ ಮಾಡಿದರೂ ಸಂಬಳ ಕಡಿಮೆಯಾಗಿರುವುದರಿಂದ 1750 ರೂ.ಗಳ ಹೆಚ್ಚಳ ಆಗಬೇಕು.
ಎನ್‌ಪಿಎಸ್ ವಂಚಿತರಾಗಿ ನಿವೃತ್ತಿಯಾದ ಅಂಗನವಾಡಿ ನೌಕರರಿಗೆ 1 ಲಕ್ಷ ಮತ್ತು 50 ರೂ.ಗಳನ್ನು ಸೇರಿಸಿ 339.48 ಲಕ್ಷ ರೂ.ಗಳನ್ನು ಇಲಾಖೆಯಿಂದ ಶಿಫಾರಸ್ಸು ಮಾಡಲಾಗಿತ್ತು. ಆದರೆ 2021ರ ಬಜೆಟ್‌ನಲ್ಲಿ ನೀಡಬೇಕಾದ ಅನುದಾನ ನೀಡಲಿಲ್ಲ. ಈ ಅನುದಾನಕ್ಕಾಗಿ 2021 ಮಾರ್ಚ್ 15, 25, ಜುಲೈ 13 ಹೋರಾಟಗಳನ್ನು ನಡೆಸಿದಾಗ 25-3-2021 ರಂದು ಇಂದಿನ ಇಲಾಖಾ ಮಂತ್ರಿಗಳಾದ ಶಶಿಕಲಾ ಜೊಲ್ಲೆಯವರು ಮೇ ತನಕ ಸಮಯ ಕೇಳಿದರು. ಹಾಲಿ ಇಲಾಖೆ ಸಚಿವರಾದ ಹಾಲಪ್ಪ ಆಚಾರ್ ಸಮ್ಮುಖದಲ್ಲಿ 24-8-2021 ರಂದು ಜಂಟಿ ಸಭೆ ನಡೆಸಿ ಸಮಯ ಕೇಳಿದ್ದರು. ಇಲಾಖಾ ಹಂತದಲ್ಲಿ ಹಲವು ಮಾತುಕತೆಗಳಾದರೂ ಯಾವುದೇ ಅನುದಾನ ಬಿಡುಗಡೆಯಾಗಲಿಲ್ಲ ಮಾತ್ರವಲ್ಲ ನಿವೃತ್ತಿಯಾದವರಿಗೆ ಇಡಗಂಟು ನೀಡಲಿಲ್ಲ ಎಂದು ಪ್ರಸ್ತಾಪಿಸಿದರು.
ಮಾರ್ಚ್ 4 ರಿಂದ ಅಂಗನವಾಡಿ ಕೇಂದ್ರಗಳು ಮುಚ್ಚಿ ಮುಖ್ಯಮಂತ್ರಿ ಮನೆ ಚಲೋ
ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಸುನಂದಾ ಅವರು ಮಾತನಾಡಿ, ಅಂಗನವಾಡಿ ನೌಕರರ ಪ್ರಮುಖ ಹಕ್ಕೊತ್ತಾಯಗಳನ್ನು ಪರಿಗಣಿಸಬೇಕು. ಈ ಸಂಬಂಧ ಮಾರ್ಚ್ 4ರಂದು ರಾಜ್ಯದ 2022-23ನೇ ಸಾಲಿನ ಆಯವ್ಯಯ ಮಂಡನೆಯಾಗುವ ದಿನದಿಂದಲೇ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಪ್ರಮುಖ ಬೇಡಿಕೆಗಳನ್ನು ಮಂಡಿಸಲಾಗುತ್ತಿದೆ ಎಂದು ತಿಳಿಸಿದರು.
ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಪಾಲನೆಯೊಟ್ಟಿಗೆ ಎಲ್.ಕೆ.ಜಿ.-ಯು.ಕೆ.ಜಿ. ಶಿಕ್ಷಣ ಜಾರಿಯ ಬಗ್ಗೆ ಹೊಸ ನೀತಿ. ಸಮಾಜ ಬದಲಾವಣೆಯನ್ನು ಬಯಸುತ್ತಿದೆ ಆದರೆ, ಅಂಗನವಾಡಿ ಕೇಂದ್ರಗಳು ಮಾತ್ರ ಹಳೆಯ ರೀತಿಯಲ್ಲಿಯೇ ಕಾರ್ಯಚರಿಸುತ್ತಿವೆ. ಬದಲಾದ ಸಮಾಜದ ರೀತಿಯಲ್ಲಿ ಅಂಗನವಾಡಿ ಕೇಂದ್ರಗಳು ಮಕ್ಕಳನ್ನು ಆಕರ್ಷಿಸುವ ಕೇಂದ್ರಗಳಾಗಬೇಕು. ಆದ್ದರಿಂದ ಅಂಗನವಾಡಿ ಕೇಂದ್ರಗಳನ್ನು ಪಾಲನಾ ಮತ್ತು ಕಲಿಕೆಯ ಕೇಂದ್ರಗಳನ್ನಾಗಿಸಬೇಕು.
ಅಂಗನವಾಡಿ ಕೇಂದ್ರ ವೇಳಾ ಪಟ್ಟಿಯಲ್ಲಿ 3 ಗಂಟೆ ಶಾಲಾಪೂರ್ವ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಕೇಂದ್ರಗಳಿಗೆ ಎಲ್ಲಾ ರೀತಿಯ ಗುಣಾತ್ಮಕ ಮೂಲಭೂತ ಸೌಲಭ್ಯಗಳನ್ನೊದಗಿಸಬೇಕು. 1995 ರಿಂದ ಪ್ರಾರಂಬವಾಗಿರುವ ಎಲ್ಲಾ ಯೋಜನೆಗಳಲ್ಲಿ ಆಯ್ಕೆಯಾಗಿರುವ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಎಸ್.ಎಸ್.ಎಲ್.ಸಿ ಪಾಸಾದವರು ಅನೇಕರು ಪಧವೀದರರು ಇರುವುದರಿಂದ ಅವರಿಗೆ ತರಬೇತಿಯನ್ನು ಕೊಟ್ಟು, ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್.ಕೆ.ಜಿ. – ಯು.ಕೆ.ಜಿ. ಶಿಕ್ಷಣ ನೀಡುವ ಹಾಗೆ ಆದ್ಯತೆಯಾಗಿಸಬೇಕು.
ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭವಾಗುತ್ತಿರುವ ಮತ್ತು ಪ್ರಾರಂಭವಾಗಿರುವ ಎಲ್.ಕೆ.ಜಿ.-ಯು.ಕೆ.ಜಿ.ಯನ್ನು ನಿಲ್ಲಿಸಬೇಕು. ನೌಕರರನ್ನು ಐಸಿಡಿಎಸ್‌ನ 5 ಉದ್ದೇಶಗಳಿಗೆ ಬಿಟ್ಟು ಉಳಿದ ಹೆಚ್ಚುವರಿ ಕೆಲಸ ನಿರ್ಬಂಧಿಸಿ ಶಾಲಾ ಪೂರ್ವ ಶಿಕ್ಷಣಕ್ಕೆ ಒತ್ತು ನೀಡಬೇಕು. ಹೊಸ ಶಿಕ್ಷಣ ನೀತಿಯ ಶಿಫಾರಸ್ಸಿನಲ್ಲಿರುವ 3 ರಿಂದ 8 ವರ್ಷದ ವರ್ಗೀಕರಣವನ್ನು ಕೈ ಬಿಟ್ಟು 3 ರಿಂದ 6 ವರ್ಷದ ಮಕ್ಕಳು ಅಂಗನವಾಡಿ ಕೇಂದ್ರದಲ್ಲಿಯೇ ಕಲಿಯುವಂತೆ ಕ್ರಮವಹಿಸಬೇಕು.
6 ವರ್ಷದೊಳಗಿನ ಮಕ್ಕಳಿಗೆ ಸಾರ್ವತ್ರಿಕ ಮತ್ತು ಉಚಿತ ಅನೌಪಚಾರಿಕ ಶಿಕ್ಷಣ ನೀಡಲು ಪ್ರತ್ಯೇಕ ಕಾಯ್ದೆಯನ್ನು ರೂಪಿಸಬೇಕು. ಶಿಶುಪಾಲನಾ ಕೇಂದ್ರಗಳನ್ನು ಅಂಗನವಾಡಿ ಕೇಂದ್ರದಲ್ಲಿ ತೆರೆಯದೆ ಪ್ರತ್ಯೇಕವಾಗಿ ತೆರೆಯಬೇಕು. ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆ ಶಿಫಾರಸ್ಸು ಮಾಡಿರುವ 339.48 ಲಕ್ಷ ಅನುದಾನ ಬಿಡುಗಡೆ ಮಾಡಬೇಕು.
ಕೊರೊನಾ ಸಂದರ್ಭದಲ್ಲಿ ನಿಧನರಾದ ಕುಟುಂಬದವರಿಗೆ ಮಗಳು ಇಲ್ಲದಿದ್ದಾಗ ಸೊಸೆಗೆ ಅವರ ಹುದ್ದೆ ಕೊಡಬೇಕು. ಅನುಕಂಪದ ಆಧಾರದಲ್ಲಿ ಕೆಲಸ ಕೊಡುವಾಗ ಮಗಳು ಬದಲಿಗೆ ಸೊಸೆಯನ್ನು ಪರಿಗಣಿಸಬೇಕು. ಕೋಳಿ ಮೊಟ್ಟೆಯನ್ನು ಆಹಾರ ಪದಾರ್ಥಗಳ ಜೊತೆಯಲ್ಲಿ ಸರಬರಾಜು ಮಾಡಬೇಕು. ತಕ್ಷಣ ಕ್ರಮಕೈಗೊಳ್ಳದಿದ್ದಲ್ಲಿ ಮಾರ್ಚ್‌ನಿಂದ ನಮ್ಮ ಹಣದಿಂದ ಮೊಟ್ಟೆ ವಿತರಿಸುವುದಿಲ್ಲ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮತ್ತು ಐಎಲ್‌ಸಿ ಶಿಫಾರಸ್ಸಿನಂತೆ ನೌಕರರಂತೆ ಗುರುತಿಸಿ ಕನಿಷ್ಟ ವೇತನ ಜಾರಿ ಮಾಡಬೇಕು. ಅಂಗನವಾಡಿ ನೌಕರರನ್ನು ಖಾಯಂ ಮಾಡಬೇಕು. ರೂ.26 ಸಾವಿರ ವೇತನ ಕೊಡಬೇಕು. ಮಿನಿ ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯರನ್ನು ನೇಮಿಸಬೇಕು, ಪೂರ್ಣಕಾರ್ಯಕರ್ತೆಯಾಗಿ ಪರಿವರ್ತಿಸಬೇಕು.
ಮುಂಬಡ್ತಿ, ವರ್ಗಾವಣೆ, ಪೌಷ್ಠಿಕ ಆಹಾರವನ್ನು ಸರಬರಾಜು ಮಾಡುವ ಎಮ್.ಎಸ್.ಪಿ.ಟಿ.ಸಿ.ಗಳಲ್ಲಿ ರಾಜಕೀಯ ಮಧ್ಯ ಪ್ರವೇಶವನ್ನು ತಡೆಯಬೇಕು. ಮುಂಬಡ್ತಿ ನೀಡುವಾಗ ಅದೇ ಕೇಂದ್ರದಲ್ಲಿ ಅರ್ಹ ಅಂಗನವಾಡಿ ಸಹಾಯಕಿ ಇದ್ದರೆ ಅವರಿಗೆ ಮೊದಲ ಆದ್ಯತೆ ನೀಡಬೇಕು ಮತ್ತು ಜಿಲ್ಲೆಯಿಂದ ಜಿಲ್ಲೆಗೆ, ತಾಲ್ಲೂಕಿನಿಂದ ತಾಲ್ಲೂಕಿಗೆ ಸ್ಥಾನ ಪಲ್ಲಟಕ್ಕೆ ಆದ್ಯತೆ ನೀಡಬೇಕು.
ಬಜೆಟ್‌ನಲ್ಲಿ ಕಡಿತವಾಗಿರುವ 8452.38 ಕೋಟಿ ಹಣ ವಾಪಸ್ ನೀಡಬೇಕು. ಐಸಿಡಿಎಸ್ ಯೋಜನೆಗೆ ಅನುದಾನವನ್ನು ಹೆಚ್ಚಳ ಮಾಡಿ ದೇಶದ ಮಕ್ಕಳ ಮತ್ತು ಮಹಿಳೆಯರನ್ನು ರಕ್ಷಿಸಬೇಕು. ಬಿಎಲ್‌ಒ ಕೆಲಸದಿಂದ ಅಂಗನವಾಡಿ ಕಾರ್ಯಕರ್ತೆಯರನ್ನು ಕೈ ಬಿಡಬೇಕು. ಅಂಗನವಾಡಿ ಕೇಂದ್ರಗಳ ಬಾಡಿಗೆಗೆ ಇರುವ ಮಾನದಂಡ ತೆಗೆಯಬೇಕು. ಆಯಾಯಾ ತಿಂಗಳಲ್ಲೇ ಬಾಡಿಗೆ ಹಣ ಬಿಡುಗಡೆ ಮಾಡಬೇಕು.
ಮಾಹಿತಿ ಹಕ್ಕಿನಲ್ಲಿ ಮಾಹಿತಿಗಳನ್ನು ಇಲಾಖೆಯಿಂದಲೇ ಒದಗಿಸಬೇಕೆಂಬ ಆದೇಶ ಇದ್ದರೂ ಜಾರಿ ಮಾಡದೆ ಆರ್‌ಟಿಐ ಹೆಸರಿಂದ ಕಾರ್ಯಕರ್ತೆಯರಿಗೆ ಆಗುತ್ತಿರುವ ದಬ್ಬಾಳಿಕೆ ನಿಲ್ಲಬೇಕು. (ಪ್ರಮುಖವಾಗಿ ಬೆಂಗಳೂರು, ಬಾಗಲಕೋಟೆ, ಹೊಸಪೇಟೆಗಳಲ್ಲಿ)
ಅಂಗನವಾಡಿ ಕೇಂದ್ರದಲ್ಲೇ ಕೊಲೆಯಾದ ತಿಪಟೂರಿನ ಹಾಲ್ಕುರಿಕೆ ಸಹಾಯಕಿ, ಭಾರತಿ ಕುಟುಂಬಕ್ಕೆ ವಿಶೇಷ ಪರಿಹಾರ ನೀಡಬೇಕು. 2021 ರಲ್ಲಿ ನೀಡಬೇಕಿದ್ದ ಬೇಸಿಗೆ ರಜೆ ನೀಡಿಲ್ಲದಿರುವುದರಿಂದ 15 ದಿನಗಳ ಹೆಚ್ಚುವರಿ ವೇತನ ನೀಡಬೇಕು. ಈಗಾಗಲೇ ಮೇಲ್ವಿಚಾರಕಿ ಹುದ್ದೆಗೆ ದಾಖಲಾತಿ ಪರಿಷ್ಕರಣೆ ಆಗಿ ಆದೇಶ ಬಾರದೇ ಇರುವವರೆಗೆ ಆದ್ಯತೆ ಮೇರೆಗೆ ಆದೇಶ ನೀಡಬೇಕು. ಕೇಂದ್ರಗಳ ಮೇಲ್ವಿಚಾರಣೆ ಗ್ರಾಮ ಪಂಚಾಯಿತಿಗಳಿಂದ ಕೈಬಿಟ್ಟು ಇಲಾಖೆಯೇ ಮೇಲ್ವಿಚಾರಣೆ ನಡೆಸಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಸಂಘಟನೆಯು ಪ್ರಸ್ತಾಪಿಸಿದೆ.