ರಾಜ್ಯ ಬಜೆಟ್: 2021-22 : ಸಾಲದ ಬಲೆಯಲ್ಲಿ ಕರ್ನಾಟಕ

ಕರ್ನಾಟಕದ 2021-22ರ ಬಜೆಟ್ ಬಗ್ಗೆ ‘ತೆರಿಗೆ ಮುಕ್ತ ಬಜೆಟ್’ ಎಂದು ಮತ್ತು ಇದೊಂದು ದೊಡ್ಡ ಸಾಧನೆ ಎನ್ನುವ ರೀತಿಯಲ್ಲಿ ಅದನ್ನು ವರ್ಣಿಸಲಾಗುತ್ತಿದೆ. ಇಲ್ಲಿರುವ ತಮಾಷೆಯನ್ನು ನಾವು ಅರ್ಥಮಾಡಿಕೊಳ್ಳಬೇಕು. ಜಿ.ಎಸ್.ಟಿ. ಅಸ್ತಿತ್ವಕ್ಕೆ ಬಂದ ಮೇಲೆ ತೆರಿಗೆ ವಿಧಿಸುವ ಅಥವಾ ತೆರಿಗೆ ದರಗಳನ್ನು ಬದಲಾಯಿಸುವ ಅಧಿಕಾರವನ್ನೇ ರಾಜ್ಯ ಸರ್ಕಾರಗಳು ಕಳೆದುಕೊಂಡಿವೆ.

ಒಟ್ಟಾರೆ ಕರ್ನಾಟಕದ ಬಜೆಟ್ ದುರ್ಬಲವಾಗಿದ್ದರೆ, ಅಭಿವೃದ್ಧಿ ಕುಂಟಿತಗೊಂಡಿದ್ದರೆ ಇದಕ್ಕೆ ಕೋವಿಡ್ ಮಹಾಸೋಕು ಕಾಲು ಭಾಗ ಕಾರಣವಾಗಿದ್ದರೆ, ಒಕ್ಕೂಟ ಸರ್ಕಾರವು ಮಾಡುತ್ತಿರುವ ಅನ್ಯಾಯ ಉಳಿದ ಮುಕ್ಕಾಲು ಭಾಗಕ್ಕೆ ಕಾರಣವಾಗಿದೆ. ಕರ್ನಾಟಕದ 2021-22ರ ಬಜೆಟ್ ಸಂವಿಧಾನಬದ್ಧ ಒಕ್ಕೂಟ ತತ್ವವನ್ನು ಭಾರತ ಸರ್ಕಾರ ಹೇಗೆ ಧಿಕ್ಕರಿಸುತ್ತಿದೆ ಎಂಬ ಪ್ರಶ್ನೆಯನ್ನು ನಮ್ಮ ಮುಂದಿಡುತ್ತದೆ. ಈ ಬಗ್ಗೆ ರಾಜ್ಯದಲ್ಲಿ ಹೆಚ್ಚಿನ ಚರ್ಚೆಯಾಗುವ ಅಗತ್ಯವಿದೆ. ‘ಒಂದು ದೇಶ-ಒಂದು ಚುನಾವಣೆ’ಗಿಂತ ನಿಜಕ್ಕೂ ವಿಧಾನಸಭೆಯಲ್ಲಿ ಚರ್ಚೆಯಾಗಬೇಕಾಗಿರುವ ರಾಜ್ಯದ ಜ್ವಲಂತ ಸಮಸ್ಯೆಯೆಂದರೆ ಭಾರತ ಸರ್ಕಾರದ ಒಕ್ಕ್ಕೂಟ ವಿರೋಧಿ ನೀತಿ.

– ಪ್ರೊ. ಟಿ. ಆರ್. ಚಂದ್ರಶೇಖರ

ಬಜೆಟ್ ಎನ್ನುವುದು ಒಂದು ಆರ್ಥಿಕತೆಯ ಆಯ-ವ್ಯಯಗಳ ವಿವರವಾದ ಪಟ್ಟಿ ಮಾತ್ರವಲ್ಲ. ಒಂದು ಆರ್ಥಿಕತೆಯಲ್ಲಿ ಅಭಿವೃದ್ಧಿಯ ದಿಕ್ಕು-ದಿಶೆಗಳನ್ನು ಅದು ನಿರ್ಧರಿಸುತ್ತದೆ. ಆರ್ಥಿಕತೆಯ ಸ್ಥಿತಿಗತಿ ಬಗ್ಗೆ ವಿವರಗಳನ್ನು ಅದು ಒಳಗೊಂಡಿರುತ್ತದೆ. ಅಭಿವೃದ್ಧಿ ಏಕೆ, ಎಲ್ಲಿ ಕುಂಟುತ್ತಿದೆ ಎಂಬುದರ ಸೂಚನೆಯನ್ನು ಅದು ನೀಡುತ್ತದೆ. ಆದರೆ ಮಾಧ್ಯಮಗಳು ಮತ್ತು ವ್ಯಾಪಾರಿ-ವಾಣಿಜ್ಯ ಸಂಸ್ಥೆಗಳು ಬಜೆಟ್ ಕುರಿತ ಚರ್ಚೆಯಲ್ಲಿ ತೆರಿಗೆಗಳಿಗೆ ಸಂಬಂಧಿಸಿದ ವಿವರಗಳ ಬಗ್ಗೆ ಮಾತ್ರ ಹೆಚ್ಚು ಮಹತ್ವ ನೀಡುತ್ತವೆ. ಉದಾ: ಕರ್ನಾಟಕದ 2021-22ರ ಬಜೆಟ್ ಬಗ್ಗೆ ‘ತೆರಿಗೆ ಮುಕ್ತ ಬಜೆಟ್’ ಎಂದು ಮತ್ತು ಇದೊಂದು ದೊಡ್ಡ ಸಾಧನೆ ಎನ್ನುವ ರೀತಿಯಲ್ಲಿ ಅದನ್ನು ವರ್ಣಿಸಲಾಗುತ್ತಿದೆ. ಇಲ್ಲಿರುವ ತಮಾಷೆಯನ್ನು ನಾವು ಅರ್ಥಮಾಡಿಕೊಳ್ಳಬೇಕು. ಜಿ.ಎಸ್.ಟಿ. ಅಸ್ತಿತ್ವಕ್ಕೆ ಬಂದ ಮೇಲೆ ತೆರಿಗೆ ವಿಧಿಸುವ ಅಥವಾ ತೆರಿಗೆ ದರಗಳನ್ನು ಬದಲಾಯಿಸುವ ಅಧಿಕಾರವನ್ನೇ ರಾಜ್ಯ ಸರ್ಕಾರಗಳು ಕಳೆದುಕೊಂಡಿವೆ. ತೈಲದ ಮೇಲಿನ ತೆರಿಗೆಗಳು ಜಿಎಸ್‌ಟಿಯ ವ್ಯಾಪ್ತಿಯಲ್ಲಿ ಇಲ್ಲದ ಕಾರಣ ಅವುಗಳ ಮೇಲೆ ಮಾತ್ರ ರಾಜ್ಯ ಸರ್ಕಾಗಳು ತೆರಿಗೆ ವಿಧಿಸಬಹುದು.

ಕರ್ನಾಟಕದ ಒಟ್ಟು ರಾಜ್ಯ ಆಂತರಿಕ ಉತ್ಪನ್ನ (ಜಿ.ಎಸ್.ಡಿ.ಪಿ) ಹಾಗೂ ಕಳೆದ ಮೂರು ವರ್ಷಗಳ ಅದರ ಬೆಳವಣಿಗೆಯ ದರವನ್ನು ಹೀಗೆ ಕೊಡಲಾಗಿದೆ.

ಕೋಷ್ಟಕ 1

ಕರ್ನಾಟಕದ ಒಟ್ಟು ರಾಜ್ಯ ಆಂತರಿಕ ಉತ್ಪನ್ನ (ಜಿಎಸ್‌ಡಿಪಿ) ಹಾಗೂ ಅದರ ಬೆಳವಣಿಗೆಯ ದರ

  • ವರ್ಷ                                             2018-19    2019-20    2020-21     2021-22*
  • ಜಿ.ಎಸ್.ಡಿ.ಪಿ (ಲಕ್ಷ ಕೋಟಿಗಳಲ್ಲಿ)    14.08          16.98           18.05          17.02
  • ವಾರ್ಷಿಕ ಬೆಳವಣಿಗೆ (ಶೇಕಡ)               —             20.59          6.3                (-)5.7

* ಬಜೆಟ್ ಅಂದಾಜು
ಮೂಲ: ಕರ್ನಾಟಕ ಸರ್ಕಾರ, ಬಜೆಟ್ ಸಂಪುಟಗಳು

ಮಾನ್ಯ ಮುಖ್ಯಮಂತ್ರಿಗಳು ಒಪ್ಪಿಕೊಂಡಿರುವಂತೆ 2020-21ರಲ್ಲಿದ್ದ ರೂ. 18.05 ಲಕ್ಷ ಕೋಟಿಯಷ್ಟಿದ್ದ ಒಟ್ಟು ರಾಜ್ಯ ಆಂತರಿಕ ಉತ್ಪನ್ನವು 2021-22ರಲ್ಲಿ ರೂ. 17.02 ಲಕ್ಷ ಕೋಟಿಗೆ ಕುಸಿಯಲಿದೆ ಎಂದು ಬಜೆಟ್ಟಿನಲ್ಲಿ ಅಂದಾಜಿಸಲಾಗಿದೆ. ಇಲ್ಲಿನ ಕುಸಿತದ ಪ್ರಮಾಣ ಶೇ.(-)5.7. ಇದನ್ನು ಸರಿಪಡಿಸುವಲ್ಲಿ 2021-22ರ ಬಜೆಟ್ಟಿನಲ್ಲಿ ಏನು ಪ್ರಯತ್ನ ನಡೆಸಲಾಗಿದೆ ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ.

  • ಮೊದಲನೆಯದಾಗಿ ಈ ಸರ್ಕಾರವು 2021-22ರಲ್ಲಿ ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸುವಲ್ಲಿ ಪೂರ್ಣವಾಗಿ ಎಡವಿದೆ. ಬಜೆಟ್ ಕುರಿತ ಚರ್ಚೆಯಲ್ಲಿ ಮುಖ್ಯವಾಗಿ ಪರಿಗಣಿಸಬೇಕಾದ ಸಂಗತಿಯೆಂದರೆ ಅಲ್ಲಿನ ಸಾರ್ವಜನಿಕ ವೆಚ್ಚ. ಇದರ ಬೆಳವಣಿಗೆಯು 2016-17 ರಿಂದಲೂ ಸರಾಸರಿ ಶೇ. 10ಕ್ಕಿಂತ ಅಧಿಕವಿತ್ತು. ಆದರೆ 2020-21 ರಿಂದ 2021-22ರಲ್ಲಿ ಇದರ ಬೆಳವಣಿಗೆಯು ಶೇ. 3.79ಕ್ಕಿಳಿದಿದೆ. ಈ ಸಾರ್ವಜನಿಕ ವೆಚ್ಚದ ಕನಿಷ್ಟ ಬೆಳವಣಿಗೆಯಿಂದ ಆರ್ಥಿಕ ಪುನಶ್ಚೇತನ ಹೇಗೆ ನಡೆಯಬಹುದು ಎಂಬುದನ್ನು ಯಾರೂ ಊಹಿಸಿಕೊಳ್ಳಬಹುದು. ಆರ್ಥಿಕ ಪುನಶ್ಚೇತನ ಯಾತನಮಯವಾಗಲಿದೆ.
  • ನಮ್ಮ ರಾಜ್ಯದಲ್ಲಿ ಸನಾತನ ಅಸಮಾನತೆಯಿಂದ ಮತ್ತು ಚಾರಿತ್ರಿಕವಾಗಿ ಕಳಂಕ ಹೊತ್ತುಕೊಂಡು ದುಸ್ಥಿತಿ ಅನುಭವಿಸುತ್ತಿರುವ ಪ(ರಿಶಿಷ್ಟ) ಜಾ.(ತಿ) ಮತ್ತು ಪ. ಪಂ.(ಗಡ) ಸಮುದಾಯಗಳ ಪ್ರಮಾಣ ಒಟ್ಟು ಜನಸಂಖ್ಯೆಯಲ್ಲಿ ಶೇ.24.1 ರಷ್ಟಿದೆ(ಜನಗಣತಿ 2011). ಈ ವರ್ಗದ ಅಭಿವೃದ್ಧಿಗಾಗಿ ಚಾಲ್ತಿಯಲ್ಲಿರುವ ಕಾರ್ಯಕ್ರಮಗಳು ಪ. ಜಾ. ಮತ್ತು ಬುಡಕಟ್ಟು ಉಪಯೋಜನೆಗಳು. ಇದಕ್ಕೆ 2017-18ರಲ್ಲಿ ರೂ. 28,703 ಕೋಟಿ, 2019-20ರಲ್ಲಿ ರೂ. 30,444 ಕೋಟಿ ನೀಡಲಾಗಿತ್ತು. ಆದರೆ ಬಿ.ಎಸ್.ಯಡಿಯೂರಪ್ಪ ಸರ್ಕಾರವು ಈ ಉಪಯೋಜನೆಗಳಿಗೆ 2020-21ರಲ್ಲಿ ನೀಡಿದ್ದ ಮೊತ್ತ 27,699 ಕೋಟಿಗೆ ಕಡಿತ ಮಾಡಿದ್ದರೆ ಈಗ 2021-22ರಲ್ಲಿ ರೂ. 26,004 ಕೋಟಿ ಗೆ ಕಡಿತಗೊಳಿಸಿದೆ. ಈ ವರ್ಗದ ಜನರ ಬದುಕನ್ನು ಉತ್ತಮಪಡಿಸದೆ ಆರ್ಥಿಕ ಅಭಿವೃದ್ಧಿ ಸಾಧ್ಯವೆ? ಏಕೆಂದರೆ ರಾಜ್ಯದ ಕೃಷಿಯ ನಿಜದುಡಿಮೆಯ ಮೂಲ ಇವರಾಗಿದ್ದಾರೆ. ಏಕೆಂದರೆ ರಾಜ್ಯದಲ್ಲಿನ ಒಟ್ಟು ಭೂರಹಿತ ದಿನಗೂಲಿ ದುಡಿಮೆಗಾರರಲ್ಲಿ(71.55 ಲಕ್ಷ) ಇವರ ಪ್ರಮಾಣ ಶೇ. 41.5(29.91 ಲಕ್ಷ). ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರಿದ್ದಾರೆ. ಈ ದುಡಿಮೆಗಾರರ ಬದುಕು ಉತ್ತಮವಾಗದಿದ್ದರೆ ಆರ್ಥಿಕತೆಯಲ್ಲಿ ಅಭಿವೃದ್ಧಿ ಕುಂಟುತಗೊಳ್ಳುತ್ತದೆ. ಈ ಬಜೆಟ್ಟಿನಲ್ಲಿ ಪ. ಜಾ. ಮತ್ತು ಪ. ಪಂ. ಉಪಯೋಜನೆಗಳಿಗೆ ಅನುದಾನವನ್ನು ಕಡಿತ ಮಾಡಿ ಅಭಿವೃದ್ಧಿಗೆ ಕಂಟಕವನ್ನುಂಟು ಮಾಡಲಾಗಿದೆ.
  • ರಾಜ್ಯದಲ್ಲಿ ಮಹಿಳೆಯರನ್ನು ಮತ್ತು ಮಕ್ಕಳನ್ನು ಕಾಡುತ್ತಿರುವ ಅಪೌಷ್ಟಿಕತೆಯ ಪ್ರಮಾಣ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 4ನೆಯ(2015-16) ಮತ್ತು 5ನೆಯ ಸುತ್ತುಗಳಲ್ಲಿ(2019-2020) ಏರಿಕೆಯಾಗಿರುವುದನ್ನು ಸರ್ಕಾರವು ಗಮನಿಸಿಲ್ಲ. ಈ ಬಜೆಟ್ಟಿನಲ್ಲಿ ಅಪೌಷ್ಟಿಕತೆ ನಿವಾರಣೆ ಬಗ್ಗೆ ನಿರ್ದಿಷ್ಟ ಕಾರ್ಯಕ್ರಮಗಳಿಲ್ಲ. ಕಳೆದ 5 ವರ್ಷಗಳಲ್ಲಿ 6 ರಿಂದ 59 ತಿಂಗಳು ವಯೋಮಾನದ ಒಟ್ಟು ಮಕ್ಕಳಲ್ಲಿ ಅನಿಮಿಯ ಎದುರಿಸುತ್ತಿರುವ ಮಕ್ಕಳ ಪ್ರಮಾಣ 2015-16ರಲ್ಲಿ ಶೇ. 60.9 ರಷ್ಟಿದ್ದುದು 2019-2020ರಲ್ಲಿ ಶೇ. 65.5 ಕ್ಕೇರಿದ್ದರೆ 15 ರಿಂದ 49 ವರ್ಷಗಳ ವಯೋಮಾನಮದ ಒಟ್ಟು ಮಹಿಳೆಯರಲ್ಲಿ ಅನಿಮಿಯ ಪ್ರಮಾಣವು ಕಳೆದ ಐದು ವರ್ಷಗಳಲ್ಲಿ ಶೇ. 44.8 ರಿಂದ ಶೇ. 47.8 ಕ್ಕೇರಿದೆ. ಇದಕ್ಕಿಂತ ಆಘಾತಕಾರಿ ಸಂಗತಿಯೆಂದರೆ ರಾಜ್ಯದಲ್ಲಿನ ಅತೀ ಹಿಂದುಳಿದ ಕಲಬುರಗಿ(ಶೇ.75.1), ರಾಯಚೂರು(ಶೇ.73.6), ಯಾದಗಿರಿ(ಶೇ.76), ಕೊಪ್ಪಳ(ಶೇ.70) ಜಿಲ್ಲೆಗಳಲ್ಲಿ ಶೇ.75 ರಷ್ಟು ಮಕ್ಕಳು ಅನಿಮಿಯ ಎದುರಿಸುತ್ತಿದ್ದಾರೆ. ಇದರ ಬಗ್ಗೆ ಬಜೆಟ್ 2021-22ರಲ್ಲಿ ವಿಶೇಷ ಕಾರ್ಯಕ್ರಮಗಳಿಲ್ಲ. ಈ ಜಿಲ್ಲೆಗಳನ್ನೊಳಗೊಂಡ ಪ್ರದೇಶಕ್ಕೆ ‘ಕಲ್ಯಾಣ ಕರ್ನಾಟಕ’ ಎಂಬ ಹೆಸರಿಡಲಾಗಿದೆ. ಆದರೆ ಅಲ್ಲಿನ ಮಕ್ಕಳ ಕಲ್ಯಾಣ ಕೇವಲ ಗಗನಕುಸಮವಾಗಿದೆ. ಮಹಿಳಾ ಬಜೆಟ್ ಎಂಬುದು ಕೇವಲ ಅಲಂಕಾರಕ್ಕಿದ್ದಂತೆ ಕಾಣುತ್ತದೆ. ಈ ಬಜೆಟ್ಟಿನಲ್ಲಿ ನಗರ ಪ್ರದೇಶದ, ಉನ್ನತ ವರಮಾನದ, ಉದ್ಯಮ ನಡೆಸಬಲ್ಲ ಮಹಿಳೆಯರಿಗಾಗಿ ವಿಶೇಷ ಯೋಜನೆಗಳನ್ನು ಘೋಷಿಸಲಾಗಿದೆ. ಆದರೆ ರಾಜ್ಯದಲ್ಲಿನ ಸಾಗುವಳಿ ಮಾಡುವ ಮತ್ತು ಭೂರಹಿತ ಕೃಷಿ ದಿನಗೂಲಿ ಮಾಡಿ ಬದುಕುತ್ತಿರುವ 56 ಲಕ್ಷ ಮಹಿಳೆಯರಿಗೆ ಬಜೆಟ್ಟಿನಲ್ಲಿ ಯಾವ ಕಾರ್ಯಕ್ರಮಗಳೂ ಇಲ್ಲ. ಇದು ಈ ಬಜೆಟ್ಟಿನ ದೊಡ್ಡ ವೈಫಲ್ಯವಾಗಿದೆ.
  • ಈ ಬಜೆಟ್ಟಿನಲ್ಲಿ ಸರ್ಕಾರ ಎತ್ತುತ್ತಿರುವ ಸಾಲ ರೂ. 71,331 ಕೋಟಿ. ಇದು ಒಟ್ಟು ಸಾರ್ವಜನಿಕ ವೆಚ್ಚವಾದ ರೂ. 2,46,207 ಕೋಟಿಯಲ್ಲಿ ಶೇ. 28.97 ರಷ್ಟಾಗುತ್ತದೆ. ಸಾರ್ವಜನಿಕ ಹಣಕಾಸು ಶಾಸ್ತ್ರದಲ್ಲಿನ ಮೊದಲ ಪಾಠವೆಂದರೆ ಸರ್ಕಾರಕ್ಕೆ ಸಂಪನ್ಮೂಲದ ಪ್ರಮುಖ ಮೂಲ ತೆರಿಗೆಗಳು. ಆದರೆ ಒಕ್ಕೂಟ(ಭಾರತ) ಸರ್ಕಾರದ ವಿತ್ತಮಂತ್ರಿಗಳು ತಮ್ಮ 2021-22ರ ಬಜೆಟ್ ಭಾಷಣದಲ್ಲಿ ನಾವು ಇಂದು ಸಂಪನ್ಮೂಲಕ್ಕೆ ತೆರಿಗೆಗಳನ್ನು ಅವಲಂಬಿಸದೆ ಸಾಲ ಮತ್ತು ಆಸ್ತಿ ಮಾರಾಟವನ್ನು (ಮಾನಿಟೈಸೇಶನ್ ಆಪ್ ಅಸೆಟ್ಸ್), ನೆಚ್ಚಿಕೊಂಡಿದ್ದೇವೆ ಎಂದು ಹೇಳಿದ್ದಾರೆ (ಒಕ್ಕೂಟ ಬಜೆಟ್ 2021-22 ಭಾಷಣ. ಪ್ಯಾರ 141) ಅದರಂತೆ ಬಿಎಸ್.ವೈ ಅವರು ಕೂಡ ತಮ್ಮ ಬಜೆಟ್ಟಿನಲ್ಲಿ ಸಂಪನ್ಮೂಲಕ್ಕೆ ಸಾಲದ ಮೊರೆ ಹೋಗಿದ್ದಾರೆ.
  • ಹಣಕಾಸು ನಿರ್ವಹಣೆಯಲ್ಲಿ ಶಿಸ್ತನ್ನು ಸಾಧಿಸಿಕೊಳ್ಳುವುದಕ್ಕಾಗಿ ರಾಜ್ಯವು 2002 ರಲ್ಲಿ ಕರ್ನಾಟಕ ವಿತ್ತೀಯ ಜವಾಬ್ದಾರಿ ಕಾಯಿದೆಯನ್ನು(ಕೆ.ಎಫ್.ಆರ್.ಎ) ಜಾರಿಗೆ ತಂದಿತು. ಅದರಲ್ಲಿನ ಸಾರ್ವಜನಿಕ ಹಣಕಾಸಿಗೆ ಸಂಬಂಧಿಸಿದ ಮೂರು ಷರತ್ತುಗಳೆಂದರೆ ರೆವಿನ್ಯೂ ಖಾತೆಯಲ್ಲಿ ಆಧಿಕ್ಯವನ್ನು ಕಾಯ್ದುಕೊಳ್ಳಬೇಕು. ಕೊರತೆ ಕಾಣಬಾರದು. ಎರಡನೆಯದು ವಿತ್ತೀಯ ಕೊರತೆಯು ಜಿ.ಎಸ್.ಡಿ.ಪಿ.ಯ ಶೇ.3ನ್ನು ಮೀರಬಾದರು. ಮೂರನೆಯದಾಗಿ ಒಟ್ಟು ಸಾರ್ವಜನಿಕ ಋಣವು ಜಿ.ಎಸ್.ಡಿ.ಪಿ.ಯ ಶೇ. 25ನ್ನು ಮೀರಬಾರದು. ಈ ಮೂರು ಮಾನದಂಡಗಳನ್ನು ಕರ್ನಾಟಕವು ಜತನದಿಂದ ಪಾಲಿಸುತ್ತಾ ಬಂದಿತ್ತು. ಆದರೆ 2021-22ರಲ್ಲಿ ಮೂರರಲ್ಲಿಯೂ ಕರ್ನಾಟಕ ವೈಫಲ್ಯವನ್ನು ಅನುಭವಿಸಿದೆ. ಒಟ್ಟಾರೆ ಒಂದು ಬಗೆಯ ಕಳಂಕವನ್ನು ಹೊತುಕೊಳ್ಳುವಂತಾಗಿದೆ. ಕಳೆದ 18 ವರ್ಷಗಳಿಂದ ಸತತವಾಗಿ ರಾಜ್ಯವು ರೆವಿನ್ಯೂ ಖಾತೆಯಲ್ಲಿ ಕೊರತೆಯುಂಟಾಗದಂತೆ ಹಣಕಾಸನ್ನು ನಿರ್ವಹಿಸುತ್ತಾ ಬಂದಿದೆ. ಆದರೆ 2020-21ರಲ್ಲಿ ರೆವಿನ್ಯೂ ಕೊರತೆ ಜಿ.ಎಸ್.ಡಿ.ಪಿ ಯ ಶೇ. 1.08 ರಷ್ಟಾಗಿದೆ. ಇದೇ ರೀತಿಯಲ್ಲಿ ವಿತ್ತೀಯ ಕೊರತೆಯನ್ನು ರಾಜ್ಯವು ಜಿ.ಎಸ್.ಡಿ.ಪಿ ಯ ಶೇ. 3 ರೊಳಗೆ ಕಾಯ್ದುಕೊಂಡು ಬಂದಿತ್ತು. ಆದರೆ 2021-22ರಲ್ಲಿ ಇದು ಶೇ. 3.23 ರಷ್ಟಾಗಿದೆ. ಎಲ್ಲಕ್ಕಿಂತ ಆತಂಕಕಾರಿ ಕಳಂಕವೆಂದರೆ ಸಾರ್ವಜನಿಕ ಋಣ ಮಿತಿಮೀರಿ ಬೆಳಯುತ್ತಿರುವುದು. ಸಾರ್ವಜನಿಕ ಋಣವು 2019-20ರಲ್ಲಿ ಜಿಎಸ್‌ಡಿಪಿಯ ಶೇ. 15.90 ರಷ್ಟಿತ್ತು. ಇದು 2020-21ರಲ್ಲಿ ಶೇ. 21.07ಕ್ಕೇರಿ 2021-22ರಲ್ಲಿ ಇದು ಶೇ. 25.85 ರಷ್ಟಾಗುತ್ತದೆ. ಮೂರು ಮಾನದಂಡಗಳಲ್ಲಿಯೂ ಕರ್ನಾಟಕವು ವಿಫಲವಾಗಿದೆ. ಇದೇ ಏನು ರಾಜ್ಯದ ಸಾಧನೆ!?

* ಕರ್ನಾಟಕದ ಆರ್ಥಿಕ ಮತ್ತು ಬಜೆಟ್ ಸಂಬಂಧ ಹಣಕಾಸಿನ ನಿರ್ವಹಣೆಯಲ್ಲಿನ ವೈಫಲ್ಯಕ್ಕೆ ಕೋವಿಡ್ ಮಹಾಸೋಂಕು ಎಷ್ಟು ಕಾರಣವೋ ಒಕ್ಕೂಟ(ಭಾರತ) ಸರ್ಕಾರವು ರಾಜ್ಯದ ಬಗ್ಗೆ ತೋರುತ್ತಿರುವ ಮಲತಾಯಿ ಧೋರಣೆಯೂ ಅಷ್ಟೇ ಕಾರಣ. ಉದಾ: ಒಕ್ಕೂಟ ಸರ್ಕಾರದಿಂದ ತೆರಿಗೆ ವರ್ಗಾವಣೆ ಮತ್ತು ಸಹಾಯಾನುದಾನಗಳ ಮೂಲಕ ರಾಜ್ಯಕ್ಕೆ 2018-19ರಲ್ಲಿ ದೊರೆತ ಹಣ ರೂ. 54,814 ಕೋಟಿ. ಆದರೆ ಇದು 2020-21ರಲ್ಲಿ ರೂ. 34,197 ಕೋಟಿಗಿಳಿದು 2021-22ರಲ್ಲಿ ರೂ. 39,810 ಕೋಟಿಗೆರಿದೆ. ಈ ವರ್ಗಾವಣೆಯು ರಾಜ್ಯದ 2018-19ರಲ್ಲಿ ಜಿ.ಎಸ್.ಡಿ.ಪಿ ಯ ಶೇ. 3.89 ರಷ್ಟಿತ್ತು. ಇದು 2021-22ರಲ್ಲಿ ಶೇ. 2.33ಕ್ಕಿಳಿದಿದೆ.

  • ರಾಜ್ಯವು ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟು ಮತ್ತು ಬಜೆಟ್ ಹಣಕಾಸು ದುಸ್ಥಿತಿಗೆ ಮತ್ತೊಂದು ಕಾರಣವೆಂದರೆ 15ನೆಯ ಹಣಕಾಸು ಆಯೋಗವು ರಾಜ್ಯಕ್ಕೆ ತನ್ನ ಶಿಫಾರಸ್ಸಿನಲ್ಲಿ ಮಾಡಿರುವ ಅನ್ಯಾಯ. ಉದಾ. 14ನೆಯ ಹಣಕಾಸು ಆಯೋಗವು ಒಕ್ಕೂಟದ ಹಂಚಬಹುದಾದ ತೆರಿಗೆ ರಾಶಿಯಲ್ಲಿ ರಾಜ್ಯದ ಪಾಲನ್ನು ಹಿಂದಿನ ಶೇ. 4.713 ರಿಂದ ಶೇ. 3.646 ಕ್ಕಿಳಿಸಿದೆ. 14ನೆಯ ಹಣಕಾಸು ಆಯೋಗವು 2015-16 ರಿಂದ 2019-2020ರ ಐದು ವರ್ಷಗಳಿಗೆ ರಾಜ್ಯಕ್ಕೆ ಒಕ್ಕೂಟದ ಹಂಚಬಹುದಾದ ತೆರಿಗೆ ರಾಶಿಯಲ್ಲಿ ಮಾಡಿದ್ದ ಹಣ ರೂ. 1.86 ಲಕ್ಷ ಕೋಟಿ(ವಾರ್ಷಿಕ ರೂ. 37,215 ಕೋಟಿ). ಆದರೆ 15ನೆಯ ಆಯೋಗದ ಶಿಫಾರಸ್ಸಿನ ಪ್ರಕಾರ 2021-22 ರಿಂದ 2025-26ರವರೆಗೆ ದೊರೆಯುವ ಮೊತ್ತ ರೂ. 1.54 ಲಕ್ಷ ಕೋಟಿ (ವಾರ್ಷಿಕ ರೂ. 30,815 ಕೋಟಿ). ಆಯೋಗಗಳು ಅನುಸರಿಸುವ ಸಾಮಾನ್ಯ ನೀತಿಯೆಂದರೆ ರಾಜ್ಯಗಳು ಹಿಂದಿನ ವರ್ಷಗಳಲ್ಲಿ ಪಡೆಯುತ್ತಿದ್ದ ಅನುದಾನಕ್ಕಿಂತ ಮುಂದಿನ ವರ್ಷಗಳಲ್ಲಿನ ಪಡೆಯುವ ಅನುದಾನ ಕಡಿಮೆಯಾಗಬಾರದು ಎಂಬುದಾಗಿದೆ. ಆದರೆ 15ನೆಯ ಹಣಕಾಸು ಆಯೋಗವು ಇದನ್ನು ಪಾಲಿಸಿಲ್ಲ. ಇದರಿಂದ ರಾಜ್ಯಕ್ಕೆ ದೊಡ್ಡ ಅನ್ಯಾಯವಾಗಿದೆ.

ಪೆಟ್ರೋಲ್-ಡೀಸೆಲ್ ಮೇಲಿನ ತೆರಿಗೆಗಳಲ್ಲಿಯೂ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ. ಈ ತೆರಿಗೆ ಜಿ.ಎಸ್.ಟಿ. ವ್ಯಾಪ್ತಿಯಲ್ಲಿ ಇಲ್ಲದ ಕಾರಣ ಅದರ ಸಂಗ್ರಹವನ್ನು ರಾಜ್ಯಗಳ ಜೊತೆ ಒಕ್ಕೂಟ (ಭಾರತ) ಸರ್ಕಾರವು ಕೇಂದ್ರವು ಹಂಚಿಕೊಳ್ಳುತ್ತಿಲ್ಲ. ಈ ತೆರಿಗೆ ಮೂಲಕ ಅದು ಅತಿದೊಡ್ಡ ಪ್ರಮಾಣದಲ್ಲಿ ರೆವಿನ್ಯೂ ಪಡೆಯುತ್ತಿದೆ.

ಒಟ್ಟಾರೆ ಕರ್ನಾಟಕದ ಬಜೆಟ್ ದುರ್ಬಲವಾಗಿದ್ದರೆ, ಅಭಿವೃದ್ಧಿ ಕುಂಟಿತಗೊಂಡಿದ್ದರೆ ಇದಕ್ಕೆ ಕೋವಿಡ್ ಮಹಾಸೋಂಕು ಕಾಲು ಭಾಗ ಕಾರಣವಾಗಿದ್ದರೆ, ಒಕ್ಕೂಟ ಸರ್ಕಾರವು ಮಾಡುತ್ತಿರುವ ಅನ್ಯಾಯ ಉಳಿದ ಮುಕ್ಕಾಲು ಭಾಗ ಕಾರಣವಾಗಿದೆ. ಕರ್ನಾಟಕದ 2021-22ರ ಬಜೆಟ್ ಸಂವಿಧಾನಬದ್ಧ ಒಕ್ಕೂಟ ತತ್ವವನ್ನು ಭಾರತ ಸರ್ಕಾರ ಹೇಗೆ ಧಿಕ್ಕರಿಸುತ್ತಿದೆ ಎಂಬ ಪ್ರಶ್ನೆಯನ್ನು ನಮ್ಮ ಮುಂದಿಡುತ್ತದೆ. ಈ ಬಗ್ಗೆ ರಾಜ್ಯದಲ್ಲಿ ಹೆಚ್ಚಿನ ಚರ್ಚೆಯಾಗುವ ಅಗತ್ಯವಿದೆ. ‘ಒಂದು ದೇಶ-ಒಂದು ಚುನಾವಣೆ’ಗಿಂತ ನಿಜಕ್ಕೂ ವಿಧಾನಸಭೆಯಲ್ಲಿ ಚರ್ಚೆಯಾಗಬೇಕಾಗಿರುವ ರಾಜ್ಯದ ಜ್ವಲಂತ ಸಮಸ್ಯೆಯೆಂದರೆ ಭಾರತ ಸರ್ಕಾರದ ಒಕ್ಕ್ಕೂಟ ವಿರೋಧಿ ನೀತಿ. ಈ ನನ್ನ ಲೇಖನವು ಇಂತಹ ಒಕ್ಕೂಟ ತತ್ವದ ವೈಫಲ್ಯದ ಹಿನ್ನೆಲೆಯಲ್ಲಿ ಕೆಲವು ಪ್ರಶ್ನೆಗಳನ್ನು ಚರ್ಚೆಯ ದೃಷ್ಟಿಯಿಂದ ಇಲ್ಲಿ ಎತ್ತಲಾಗಿದೆ.

 

Donate Janashakthi Media

Leave a Reply

Your email address will not be published. Required fields are marked *