ರಾಜ್ಯ ಬಿಜೆಪಿ ಚಾಳಿ ಇಡೀ ದೇಶಕ್ಕೆ-ಭ್ರಷ್ಟಾಚಾರದ ಹಣದಿಂದ ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲ

ಮೈಸೂರು: ಭ್ರಷ್ಟಾಚಾರದ ಮೂಲಕ ಗಳಿಸಿಕೊಂಡಿರುವ ಹಣದ ಮೂಲಕವೇ ಬಿಜೆಪಿ ಪಕ್ಷವು ಇಂದು ವಿವಿಧ ರಾಜ್ಯಗಳಲ್ಲಿ ಆಡಳಿತರೂಢ ಪಕ್ಷದ ಸದಸ್ಯರನ್ನು ಸೆಳೆದುಕೊಳ್ಳುವ ಮೂಲಕ ಆಪರೇಷನ್ ಕಮಲ ನಡೆಸಲು ಮುಂದಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗುವ ಬೆಳವಣಿಗೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಮಹಾರಾಷ್ಟ್ರದ ಸರ್ಕಾರ ಪತನ ವಿಚಾರ ಸಂಬಂಧ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಬಿಜೆಪಿಯ ಚಾಳಿ ಇಡೀ ದೇಶಕ್ಕೆ ಹಬ್ಬಿದೆ. ಒಂದು ಪಕ್ಷದಿಂದ ಗೆದ್ದವರು ಮತ್ತೊಂದು ಪಕ್ಷಕ್ಕೆ ಪಕ್ಷಾಂತರ ಮಾಡದಂತೆ ತಡೆಯಬೇಕು. ಒಂದು ವೇಳೆ ಪಕ್ಷಾಂತರ ಮಾಡಿದರೆ ಅಂಥವರು 10 ವರ್ಷ ಚುನಾವಣೆಗೆ ನಿಲ್ಲದಂತೆ ಮಾಡಬೇಕು. ಪ್ರಜಾಪ್ರಭುತ್ವದ ಉಳಿವಿಗೆ ಇಂಥ ನಿಯಮಗಳ ಅವಶ್ಯಕತೆ ಇದೆ ಎಂದರು.

ಆಪರೇಷನ್ ಕಮಲ ಹುಟ್ಟು ಹಾಕಿದ್ದೇ ಬಿಜೆಪಿಯವರು. 2008ರಲ್ಲಿ ಬಿ.ಎಸ್.ಯಡಿಯೂರಪ್ಪ ಮೊದಲ ಬಾರಿಗೆ ಆಪರೇಷನ್ ಕಮಲ ಮಾಡಿದರು. ಬಹುಮತ ಸಿಗದ ರಾಜ್ಯಗಳಲ್ಲಿ ಶಾಸಕರನ್ನು ಖರೀದಿಸುವ ಮೂಲಕ ಸರ್ಕಾರ ರಚನೆ ಮುಂದಾಗುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಬಿಜೆಪಿಗೆ ಬಹುಮತ ಇಲ್ಲದಿದ್ದರೂ ಕೂಡ ಅಕ್ರಮವಾಗಿ ಎಲ್ಲಾ ಕಡೆ ಹಣ ಕೊಟ್ಟು ಶಾಸಕರನ್ನು ಖರೀದಿಸುವ ಚಾಳಿಗೆ ಬಿದ್ದಿದೆ. ಪಕ್ಷಾಂತರ ಕಾಯ್ದೆಗೆ ಸೂಕ್ತ ರೀತಿಯಲ್ಲಿ ತಿದ್ದುಪಡಿ ಮಾಡುವ ಮೂಲಕ ಈ ಪರಿಪಾಠಗಳಿಗೆ ಕಡಿವಾಣ ಹಾಕಬೇಕು ಎಂದರು.

ಪ್ರಧಾನಿ ನರೇಂದ್ರ ಮೋದಿ ರಾಜ್ಯ ಭೇಟಿ ಕುರಿತು ಪ್ರಸ್ತಾಪಿಸಿದ ಸಿದ್ಧರಾಮಯ್ಯ, ಡಬಲ್ ಎಂಜಿನ್ ಸರ್ಕಾರ ಜನರಿಗಾಗಿ ಏನು ಮಾಡಿದೆ? ಅದು ಮಾಡಿರುವ ಅಭಿವೃದ್ಧಿ ಕಾರ್ಯಗಳ ಪಟ್ಟಿ ಕೊಡಿ. ಪ್ರಧಾನಿ ಮೋದಿ ಸುಮ್ಮನೆ ಸುಳ್ಳು ಹೇಳಿ ಹೋಗಿದ್ದಾರೆ. ಅವರು, ಮೋದಿ ಏನೂ ಮಾಡುವುದಿಲ್ಲ ಎಂದು ರಾಜ್ಯ ನಾಯಕರಿಗೂ ಗೊತ್ತು. ಅದಕ್ಕೆ ಅವರು ಯಾವುದೇ ಮನವಿಯನ್ನು ನೀಡಿಲ್ಲ. ಮೋದಿ ಕಾರ್ಯಕ್ರಮಕ್ಕೆ ₹ 25 ಕೋಟಿಗಿಂತ ಹೆಚ್ಚು ಖರ್ಚು ಮಾಡಲಾಗಿದೆ. ಮೋದಿ ಬಂದಿದ್ದಕ್ಕೆ ರಸ್ತೆಗಳು ಅಭಿವೃದ್ಧಿ ಕಂಡಿವೆ. ಜನರಿಗೆ ಮೋದಿ ಭೇಟಿಯಿಂದ ಆಗಿರುವ ಲಾಭ ಅಷ್ಟೇ ಎಂದು ಹೇಳಿದರು.

ರಾಷ್ಟ್ರಪತಿ ಹುದ್ದೆಗೆ ಬುಡಕಟ್ಟು ಮಹಿಳೆ ಆಯ್ಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ಸಾಮಾಜಿಕ ನ್ಯಾಯ ಅಲ್ಲ ವಿಶೇಷವೂ ಅಲ್ಲ. ಆ ರೀತಿ ಇದ್ದರೆ ಆರ್‌ಎಸ್‌ಎಸ್ ಮುಖ್ಯ ಸಹಸಂಚಾಲಕರಾಗಿ ಆಯ್ಕೆ ಮಾಡಲಿ. ಮೋಹನ್ ಭಾಗವತ್ ಸ್ಥಾನಕ್ಕೆ ಇಂತಹ ಮಹಿಳೆಯನ್ನು ತರಲಿ ಎಂದರು.

ಆಕೆ ಬಿಜೆಪಿ ಪಕ್ಷದವರೇ, ರಾಜ್ಯಪಾಲ ಹುದ್ದೆ ಸೇರಿ ಹಲವನ್ನು ಅಲಂಕರಿಸಿದವರು. ರಾಷ್ಟ್ರಪತಿಯಾಗಿ ಸ್ವತಂತ್ರವಾಗಿ ಕೆಲಸ ಮಾಡಲು ಇವರು ಬಿಡುವುದಿಲ್ಲ. ಹಿಂದೆ ರಾಜೇಂದ್ರ ಪ್ರಸಾದ್ ಅವರು ಮಾಡಿದಂತೆ ಕೆಲಸ ಮಾಡಲು ಆಗುತ್ತಾ..?. ರಾಮನಾಥ್ ಕೋವಿಂದ್ ಕೂಡ ರಾಷ್ಟ್ರಪತಿ ಆಗಿದ್ದರು. ಅವರು ಏನು ಮಾಡಿದರು? ಇವರು, ಅವರಂತೆ ನಾಮಕವಾಸ್ತೆ ಹುದ್ದೆಯ ಸ್ಥಾನದಲ್ಲಿ ಕೂರಲಿದ್ದಾರೆ ಅಷ್ಟೇ ಎಂದರು.

Donate Janashakthi Media

Leave a Reply

Your email address will not be published. Required fields are marked *