ಮೈಸೂರು : ವಿಶ್ವಮಾನ್ಯ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ(92)ಅವರು ಇಂದು (ಜೂ.11) ಸಂಜೆ 7 ಗಂಟೆಯ ಸುಮಾರಿಗೆ ನಿಧನ ಹೊಂದಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಕಳೆದ ಕೆಲ ದಿನಗಳಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕುವೆಂಪುನಗರದ ಜ್ಞಾನಗಂಗಾ ಶಾಲೆ ಬಳಿ ಇರುವ ಅವರ ಮನೆಯಲ್ಲಿ ಜೂನ್ 12ರಂದು ಬೆಳಗ್ಗೆ 9.30ರಿಂದ 11ಗಂಟೆಗೆ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಬಳಿಕ ನಗರದಲ್ಲೇ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸೇರಿದಂತೆ ಇನ್ನಿತರ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.
ಸಂಗೀತ ಲೋಕದ ಧ್ರುವತಾರೆಗಳಲ್ಲೊಬ್ಬರಾದ ರಾಜೀವ್ ತಾರಾನಾಥ್ ಅವರು ಅಕ್ಟೋಬರ್ 17, 1932 ಜನಿಸಿದರು. ವಿಶ್ವದ ಶ್ರೇಷ್ಠ ಸರೋದ್ ವಾದಕರಲ್ಲಿ ಒಬ್ಬರೆನಿಸಿರುವ ರಾಜೀವ್ ತಾರಾನಾಥರು ಅತ್ಯಂತ ಸರಳತೆ ಮತ್ತು ಶ್ರೇಷ್ಠ ಸಂಗೀತಕ್ಕೆ ಹೆಸರಾದವರು. ಮೂಲತಃ ನಮ್ಮ ಕರ್ನಾಟಕದವರೇ ಆದ ರಾಜೀವ್ ಅವರ ಸಂಗೀತಕ್ಕೆ ಮನಸೋಲದವರೇ ಇಲ್ಲ. ಒಂಬತ್ತು ವರ್ಷದವರಾಗಿದ್ದಾಗಲೇ ತಮ್ಮ ಮೊದಲ ಸಾರ್ವಜನಿಕ ಗಾಯನ ಪ್ರದರ್ಶನವನ್ನು ನೀಡಿದ್ದ ರಾಜೀವ್ ತಾರಾನಾಥ್, ತಮ್ಮ ಇಪ್ಪತ್ತು ವರ್ಷದ ಮೊದಲು ಆಕಾಶವಾಣಿಗೆ ಹಾಡುತ್ತಿದ್ದರು.
1980ರ ದಶಕದಲ್ಲಿ ಆಡೆನ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯವನ್ನು ಬೋಧನೆ ಮಾಡುತ್ತಿದ್ದರು. 1995ರಿಂದ 2005 ರವರೆಗೆ ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್‌ನ ವಿಶ್ವ ಸಂಗೀತ ವಿಭಾಗದಲ್ಲಿ ಭಾರತೀಯ ಸಂಗೀತ ಕಾರ್ಯಕ್ರಮದ ಮುಖ್ಯಸ್ಥರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.