ಜೈಪುರ್: ಎಂಜಿನಿಯರಿಂಗ್ ಕೋರ್ಸ್‌ನ ಪ್ರವೇಶಕ್ಕಾಗಿ ರಾಜಸ್ಥಾನ ಸರ್ಕಾರದಿಂದ ಮಾನ್ಯತೆ ಪಡೆದ ಕೋಚಿಂಗ್ ಸೆಂಟರ್‌ನ ಆನ್‌ಲೈನ್ ತರಗತಿಗಳ ಮೂಲಕ ಜೆಇಇ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ 18 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಒಂದು ವಾರದೊಳಗೆ ರಾಜ್ಯದಲ್ಲಿ ನಡೆಯುತ್ತಿರುವ ಎರಡನೇ ಘಟನೆ ಇದಾಗಿದೆ. ಕಳೆದ ವರ್ಷ ಇಲ್ಲಿ 27 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಕೋಟಾಗೆ ಜೆಇಇಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ದೇಶಾದ್ಯಂತ ಮಕ್ಕಳು ಆಗಮಿಸುತ್ತಾರೆ.
“ಮೃತ ವಿದ್ಯಾರ್ಥಿನಿ ಕೋಟಾ ಮೂಲದವರಾಗಿದ್ದು, ಬೋರೆಖೇಡ ಪೊಲೀಸ್ ಠಾಣೆ ವ್ಯಾಪ್ತಿಯ ಶಿವ ವಿಹಾರ್ ಕಾಲೋನಿಯಲ್ಲಿರುವ ಅವರ ನಿವಾಸದಲ್ಲಿ ಘಟನೆ ನಡೆದಿದೆ. ಅವರು ಜನವರಿ 30 ಅಥವಾ 31ರಂದು ನಡೆಯುವ ಜೆಇಇ ಪರೀಕ್ಷೆ ಬರೆಯಲು ಸಜ್ಜಾಗಿದ್ದರು” ಎಂದು ವೃತ್ತ ಅಧಿಕಾರಿ ಡಿಎಸ್‌ಪಿ ಧರ್ಮವೀರ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ನ್ಯಾಷನಲ್ ಕಾಲೇಜು | ದಲಿತ ಪ್ರಾಧ್ಯಾಪಕರಿಗೆ ಹಿಂಬಡ್ತಿ ನೀಡಿ ಅವಮಾನ
ವಿದ್ಯಾರ್ಥಿನಿಯ ಕೊಠಡಿಯಿಂದ ಪಡೆದ ಆತ್ಮಹತ್ಯೆ ಪತ್ರದಲ್ಲಿ ವಿದ್ಯಾರ್ಥಿನಿಯು ತಾನೊಬ್ಬಳು ಸೋಲಿನ ಹುಡುಗಿ, ತನ್ನನ್ನು ಕ್ಷಮಿಸಿ ಎಂದು ಹೆತ್ತವರಿಗೆ ಕೇಳಿಕೊಂಡಿದ್ದಾರೆ. “ಮಮ್ಮಿ ಪಾಪಾ, ನಾನು ಜೆಇಇ ಮಾಡಲು ಸಾಧ್ಯವಿಲ್ಲ. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನಾನು ಸೋಲುಗಾರ್ತಿ. ನಾನೊಬ್ಬಳು ಕೆಟ್ಟ ಮಗಳು, ಕ್ಷಮಿಸಿ ಅಮ್ಮ ಅಪ್ಪ. ನನಗೆ ಇದುವೆ ಕೊನೆಯ ಆಯ್ಕೆ” ಎಂದು ಸಂತ್ರಸ್ತೆ ತನ್ನ ಕೊನೆಯ ಟಿಪ್ಪಣಿಯಲ್ಲಿ ಹೇಳಿದ್ದಾರೆ.
ಮೃತ ವಿದ್ಯಾರ್ಥಿನಿಯು ಮೂವರು ಸಹೋದರಿಯರಲ್ಲಿ ಹಿರಿಯವರಾಗಿದ್ದು, ಅವರ ತಂದೆ ಕೋಟಾದ ಖಾಸಗಿ ಬ್ಯಾಂಕ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಮೃತ ವಿದ್ಯಾರ್ಥಿನಿಯ ಈ ಕುಟುಂಬವು ಜಲಾವರ್ ಜಿಲ್ಲೆಯ ಅಕವ್ಡಾಖುರ್ದ್ ಗ್ರಾಮದವರಾಗಿದ್ದು, ಕಳೆದ ಮೂರು ವರ್ಷಗಳಿಂದ ನಗರದಲ್ಲಿ ನೆಲೆಸಿದೆ ಎಂದು ವರದಿಯಾಗಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ವಿದ್ಯಾರ್ಥಿನಿಯ ಸೋದರ ಸಂಬಂಧಿ, ಮುಂಬರುವ ಜೆಇಇ ಪರೀಕ್ಷೆಯ ಬಗ್ಗೆ ಆಕೆ ತೀವ್ರ ಒತ್ತಡದಲ್ಲಿದ್ದರು. ಕಡಿಮೆ ಅಂಕ ಬಂದಿದ್ದರಿಂದ 12ನೇ ತರಗತಿ ಪರೀಕ್ಷೆಯನ್ನು ಮತ್ತೆ ಬರೆದಿದ್ದರು ಎಂದು ಹೇಳಿದ್ದಾರೆ.
ಸೋಮವಾರ ಬೆಳಿಗ್ಗೆ ಅವರ ಅಜ್ಜಿ ವಿದ್ಯಾರ್ಥಿನಿಯ ಕೋಣೆಯ ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ, ಅದರ ನಂತರ ಮನೆಯವರು ಬಾಗಿಲು ಒಡೆದು ನೋಡಿದಾಗ ಬಾಗಿಲಿನ ಮೇಲಿರುವ ವೆಂಟಿಲೇಶನ್ ಕಿಟಕಿಗೆ ನೇಣು ಹಾಕಿಕೊಂಡಿರುವುದು ಕಂಡುಬಂದಿದೆ ಎಂದು ವರದಿಮ ಹೇಳಿವೆ. “ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಡಿಎಸ್ಪಿ ಹೇಳಿದರು.
ಇದನ್ನೂ ಓದಿ: ರಥಯಾತ್ರೆ ನಡೆಸಿ ದೇಶವ್ಯಾಪಿ ಕೋಮು ಗಲಭೆಗೆ ಕಾರಣರಾದ ಎಲ್.ಕೆ. ಅಡ್ವಾಣಿಗೆ ಭಾರತ ರತ್ನ!
ಜನವರಿ 23 ರಂದು ಕೂಡಾ ಇಂತಹದೆ ಘಟನೆ ಕೋಟಾದಲ್ಲಿ ವರದಿಯಾಗಿತ್ತು. NEET ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ 19 ವರ್ಷದ ಉತ್ತರ ಪ್ರದೇಶ ಮೂಲದ ವಿದ್ಯಾರ್ಥಿ ಕೋಟಾದ ತನ್ನ ಹಾಸ್ಟೆಲ್ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಘಟನೆಯ ನಂತರ, ಕೋಟಾ ಜಿಲ್ಲಾಧಿಕಾರಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಹಾಸ್ಟೆಲ್ ಆಡಳಿತ ಮಂಡಳಿಗೆ ನೋಟಿಸ್ ನೀಡಿದ್ದರು. ಕಳೆದ ವರ್ಷ ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ, ಜಿಲ್ಲಾಡಳಿತವು ಆಗಸ್ಟ್ 18 ರಂದು ಎಲ್ಲಾ ಹಾಸ್ಟೆಲ್‌ಗಳು ಮತ್ತು ಪೇಯಿಂಗ್ ಗೆಸ್ಟ್ (ಪಿಜಿ) ವಸತಿಗಳನ್ನು ಕೊಠಡಿಗಳಲ್ಲಿ ಸ್ಪ್ರಿಂಗ್ ಲೋಡ್ ಮಾಡಿದ ಫ್ಯಾನ್‌ಗಳನ್ನು ಅಳವಡಿಸಲು ಆದೇಶಿಸಿತ್ತು.
ರಾಜಸ್ಥಾನದ ಕೋಟಾವು ಭಾರತದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ಪ್ರಮುಖ ಕೇಂದ್ರವಾಗಿದೆ. ಇಲ್ಲಿ ವಾರ್ಷಿಕವಾಗಿ 10,000 ಕೋಟಿ ರೂ. ಮೌಲ್ಯದ ವ್ಯವಹಾರ ನಡೆಯುತ್ತದೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ. ಹತ್ತನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ ದೇಶದಾದ್ಯಂತದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಅಧ್ಯಯನಕ್ಕಾಗಿ ಆಗಮಿಸುತ್ತಾರೆ.
ಪೊಲೀಸ್ ಅಂಕಿಅಂಶಗಳ ಪ್ರಕಾರ, ಕೋಟಾದಲ್ಲಿ 2022 ರಲ್ಲಿ 15, 2019 ರಲ್ಲಿ 18, 2018 ರಲ್ಲಿ 20, 2017 ರಲ್ಲಿ ಏಳು, 2016 ರಲ್ಲಿ 17 ಮತ್ತು 2015 ರಲ್ಲಿ 18 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2020 ಮತ್ತು 2021 ರಲ್ಲಿ ಕೋಚಿಂಗ್ ಇನ್ಸ್ಟಿಟ್ಯೂಟ್‌ನಲ್ಲಿ ಯಾವುದೇ ಆತ್ಮಹತ್ಯೆಗಳು ವರದಿಯಾಗಿಲ್ಲ. ಯಾಕೆಂದರೆ ಈ ವೇಳೆ ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣಕ್ಕೆ ಆನ್‌ಲೈನ್ ಮೋಡ್‌ನಲ್ಲಿ ತರಗತಿಗಳು ನಡೆಯುತ್ತಿದ್ದವು.
ಇದನ್ನೂ ಓದಿ: ಲಾಲ್ ಕೃಷ್ಣ ಅಡ್ವಾಣಿ | ಕೋಮು ಪ್ರಚೋದಕ-in-chief!
ಸರಣಿ ಘಟನೆಯ ನಂತರ ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗಳ ಅಧ್ಯಾಪಕರು ಯಾವುದೇ ನಿಯಮಗಳನ್ನು ಉಲ್ಲಂಘಿಸಿದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಸರ್ಕಾರ ಎಚ್ಚರಿಸಿದೆ. ಜನವರಿ 16 ರಂದು, ಕೇಂದ್ರ ಶಿಕ್ಷಣ ಸಚಿವಾಲಯವು ಕೋಚಿಂಗ್ ಸೆಂಟರ್‌ಗಳ ಕಾರ್ಯನಿರ್ವಹಣೆಗೆ ನಿರ್ದಿಷ್ಟ ಸೂಚನೆಗಳನ್ನು ಬಿಡುಗಡೆ ಮಾಡಿದೆ. ಯಾವುದೇ ನಿಯಮಗಳು ಮತ್ತು ಷರತ್ತುಗಳನ್ನು ಉಲ್ಲಂಘಿಸಿದರೆ ಸಂಸ್ಥೆಗಳಿಗೆ ₹ 1,00,000 ದಂಡ ವಿಧಿಸುವುದಾಗಿ ಎಚ್ಚರಿಸಿದೆ.
ಯಾರಾದರೂ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅಥವಾ ಆತ್ಮಹತ್ಯೆ ಮಾಡಿಕೊಳ್ಳುವ ಭಾವನೆಯಲ್ಲಿದ್ದರೆ, ಅವರಿಗೆ ದಯವಿಟ್ಟು ಸಹಾಯವನ್ನು ಒದಗಿಸಿ. ಇಂತಹ ವ್ಯಕ್ತಿಗಳಿಗೆ ಮತ್ತು ಕುಟುಂಬಗಳಿಗೆ ಭಾವನಾತ್ಮಕ ಬೆಂಬಲವನ್ನು ನೀಡುವ ಆತ್ಮಹತ್ಯೆ ತಡೆಗಟ್ಟುವಿಕೆ ಸಂಸ್ಥೆಗಳ ಕೆಲವು ಸಹಾಯವಾಣಿ ಸಂಖ್ಯೆಗಳು ಇಲ್ಲಿವೆ.
ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:
ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ
ಕರ್ನಾಟಕ ಆರೋಗ್ಯ ಸಹಾಯವಾಣಿ – 104
ವಿಡಿಯೊ ನೋಡಿ: ಮೋದಿಯವರ ‘ರೇವ್ಡಿ’ ಪ್ರಪಗಂಡಾದ ಅಸಲಿಯತ್ತೇನು? ಈ ವಾರದ ನೋಟ ಬಿ. ಶ್ರೀಪಾದ ಭಟ್ ಜೊತೆ Janashakthi Media