ಎಚ್.ಆರ್.ನವೀನ್ ಕುಮಾರ್
ಇತ್ತೀಚಿನ ದಿನಗಳಲ್ಲಿ ಹಾಸನ ಎಂದರೆ ಅದು ಕೇವಲ ರಾಜಕಾರಣದ ಚರ್ಚೆಯಾಗಿದೆ. ಅದರಲ್ಲೂ ರೇವಣ್ಣ, ಭವಾನಿ ರೇವಣ್ಣ, ಪ್ರೀತಂ ಜೆ ಗೌಡ, ಸ್ವರೂಪ್ ಪ್ರಕಾಶ್ ಹೀಗೆ ಇವರುಗಳ ಹೆಸರುಗಳ ಸುತ್ತಲೂ ಚರ್ಚೆಗಳು ಗಿರಗಿಡ್ಲೆ ಹೊಡೆಯುತ್ತಿವೆ.
ಹಾಸನ ಎಂದರೆ ಅದು ಕಲೆ, ಸಾಹಿತ್ಯ ಪರಿಸರ ಇನ್ನಿತರೆ ವಿಚಾರಗಳಿಗೆ ಹೆಸರುವಾಸಿಯಾದದ್ದು. ಇಲ್ಲಿ ಜಗದ್ ವಿಖ್ಯಾತ ಶಿಲ್ಪಕಲೆಗಳ ಬೇಲೂರು, ಹಳೇಬೀಡು, ಏಕಶಿಲಾ ವಿಗ್ರಹದ ಶ್ರವಣಬೆಳಗೊಳ. ಅಚ್ಚ ಹಸಿರಿನ ದಟ್ಟ ಕಾಡಿನ ಮಲೆನಾಡು. ಕಾಫಿ, ಮೆಣಸು, ತೆಂಗು, ಆಲೂಗಡ್ಡೆ, ರಾಗಿ, ಜೋಳ ಹೀಗೆ ವಿವಿಧ ರೀತಿಯ ಬೆಳೆಗಳು, ಇಲ್ಲಿಯ ಪೌರಾಣಿಕ ನಾಟಕಗಳು, ಜಾನಪದ ಕಲೆಗಳು ಜನರನ್ನ ಸಂಸ್ಕೃತಿಯಲ್ಲಿ ಆವರಿಸಿಕೊಂಡಿವೆ.
ಇದನ್ನು ಓದಿ: ಶಾಲೆಗಳಲ್ಲಿ ನಿಗದಿತ ಪಠ್ಯಕ್ರಮದ ಬೋಧನೆಯಾಗುತ್ತಿಲ್ಲ – ರಾಜ್ಯ ಶಿಕ್ಷಣ ಇಲಾಖೆ ಕ್ರಮ
ಹಾಸನ ಎಂದರೆ ಇವೆಲ್ಲ ನೆನಪಾಗುತ್ತಿದ್ದ ಮತ್ತು ಇವುಗಳ ಬಗ್ಗೆ ಮಾತನಾಡುತ್ತಿದ್ದ ಕಾಲವೊಂದಿತ್ತು. ಆದರೆ ಈಗ ಹಾಸನ ಎಂದರೆ ಮೂರ್ನಾಲ್ಕು ಜನ ವ್ಯಕ್ತಿಗಳ ಬಗ್ಗೆ ರಾಜಕೀಯವಾಗಿ ಮಾತನಾಡುವ ಮಟ್ಟಕ್ಕೆ ಬಂದಿದ್ದೇವೆ. ರಾಜಕೀಯದ ಬಗ್ಗೆ ಮಾತನಾಡಬಾದರು ಎಂಬುದು ನನ್ನ ಮಾತಿನ ಅರ್ಥವಲ್ಲ. ಬದಲಾಗಿ ರಾಜಕಾರಣ ಎಂದರೆ ಕೇವಲ ವ್ಯಕ್ತಿಗಳ ಸುತ್ತ ಚರ್ಚೆಯನ್ನು ಕೇಂದ್ರೀಕರಿಸುವುದಲ್ಲ ಎನ್ನುವುದು ನನ್ನ ಮಾತಿನ ತಾತ್ಪರ್ಯ.
ಇರಲಿ ಈಗ ರಾಜಕಾರಣವನ್ನೇ ಮಾತನಾಡೋಣ ಬೇರೆ ಬೇರೆ ಕಾರಣಗಳಿಂದಾಗಿ ಹಾಸನ ವಿಧಾನಸಭಾ ಕ್ಷೇತ್ರ ಈಗ ರಾಜ್ಯದ ಗಮನ ಸೆಳೆದಿದೆ. ಹಾಸನ ವಿಧಾನಸಭಾ ಕ್ಷೇತ್ರದ ಸಮಸ್ಯೆ ಎಂದರೆ ಅದು ಯಾರು ಚುನಾವಣಾ ಅಭ್ಯರ್ಥಿಗಳಾಗುತ್ತಾರೆ, ಯಾರ ಎದುರು ಯಾರು ಸ್ಫರ್ಧೆಗಿಳಿಯುತ್ತಾರೆ. ಅವರು ಇವರ ಬಗ್ಗೆ, ಇವರು ಅವರ ಬಗ್ಗೆ ಏನನ್ನು ಮಾತನಾಡುತ್ತಾರೆ, ಯಾರು ಎಷ್ಟು ಹಣ ಖರ್ಚು ಮಾಡುತ್ತಾರೆ, ಯಾರದು ಯಾವ ಜಾತಿ ಅದರಲ್ಲಿನ ಒಳಪಂಗಡ ಯಾವುದು… ಎಂಬುದೇ ಮುಖ್ಯ ವಿಷಯವಾಗಿದೆ.
ತೆಲುಗಿನ ಒಬ್ಬ ಕವಿ ಹೀಗೆ ಬರೆಯುತ್ತಾನೆ “ದೇಶ ಮಂಟೆ ಮಟ್ಟಿ ಕಾದೊ, ದೇಶ ಮಂಟೆ ಮನುಜಲು” ಇದರ ಅರ್ಥ ‘ದೇಶ ಅಂದರೆ ಮಣ್ಣಲ್ಲ, ದೇಶ ಅಂದರೆ ಜನ’. ಹಾಗೆ ಹಾಸನ ವಿಧಾನ ಸಭಾ ಕ್ಷೇತ್ರ ಎಂದರೆ ಅದು ಮೂರ್ನಾಲ್ಕು ಜನರ ವೈಯಕ್ತಿಕ ವಿಚಾರವಲ್ಲ ಬದಲಿಗೆ, ಅದು ಇಡೀ ಕ್ಷೇತ್ರ ಜನರ ವಿಚಾರ. ಅಂದರೆ ಈ ಕ್ಷೇತ್ರದ ಜನರು ಅನುಭವಿಸುತ್ತಿರುವ ಕಷ್ಟಗಳು, ಅವರ ಮುಂದಿರುವ ಸವಾಲುಗಳು, ಅವರ ಕನಸುಗಳು ಇವುಗಳು ಎಲ್ಲಿಯೂ ಸುದ್ದಿಯಾಗುತ್ತಿಲ್ಲ ಇವರ ಅಳಲುಗಳಿಗೆ ಮಾಧ್ಯಮದಲ್ಲಿ ಜಾಗ ಸಿಗುತ್ತಿಲ್ಲ. ರಾಜಕೀಯ ನಾಯಕರುಗಳ ಕೆಸರೆರಚಾಟದಲ್ಲಿ ಜನರ ನೈಜ ಬದುಕು ಮರೆಯಾಗುತ್ತಿದೆ.
ಇದನ್ನು ಓದಿ: ಆರೋಗ್ಯ ವಲಯದ ನಿರ್ಲಕ್ಷ್ಯವೂ ಸಾರ್ವಜನಿಕ ಸ್ವಾಸ್ಥ್ಯವೂ
ಈ ಕುರಿತು ಎಲ್ಲರ ಗಮನ ಸೆಳೆದು ಅದರ ಚರ್ಚೆಗೆ ತನ್ನದೇ ಆದ ಒಂದು ಜಾಗವನ್ನು ಸೃಷ್ಟಿಸಿಕೊಳ್ಳದಿದ್ದರೆ ರಾಜಕಾರಣ ಎನ್ನುವುದು ಅತ್ಯಂತ ಕೆಟ್ಟ ಮಾದರಿಗಳನ್ನು ಮುಂದುವರೆಸಿದಂತಾಗುತ್ತದೆ.
ಹಾಸನ ವಿಧಾನಸಭೆ ಮುಖ್ಯವಾಗಿ ಹಾಸನ ನಗರ ಮತ್ತು ಗ್ರಾಮೀಣ ಪ್ರದೇಶವಾದ ಕಸಬಾ ಮತ್ತು ಸಾಲಗಾಮೆ ಹೋಬಳಿಗಳನ್ನು ಹೊಂದಿದೆ. ಹಾಸನ ನಗರದ ಜನ ಹಲವು ವರ್ಷಗಳಿಂದ ಅತ್ಯುತ್ತಮ ರಸ್ತೆಗಳಿಗಾಗಿ ಕನವರಿಸುತ್ತಿದ್ದಾರೆ. ಒಂದೆಡೆ ಗುಂಡಿ ಬಿದ್ದ ರಸ್ತೆಗಳು ಮತ್ತೊಂದೆಡೆ ಅತ್ಯಂತ ದೊಡ್ಡ ಭ್ರಷ್ಟಾಚಾರಕ್ಕೆ ಒಳಗಾದ ಕಳಪೆ ಸಿಮೆಂಟ್ ರಸ್ತೆಗಳಿಂದ ಜನರು ಬೇಸತ್ತಿದ್ದಾರೆ. ಇದರಿಂದಾಗಿ ಇಡೀ ನಗರವೇ ದೂಳಿನಿಂದ ಕೂಡಿದೆ. (ಒಂದು ಕಾಲದಲ್ಲಿ ಹಾಸನ ನಗರವನ್ನು ದೇಶದ ದೂಳು ಮುಕ್ತ ನಗರ ಎಂದು ಘೋಷಿಸಲಾಗಿತ್ತು. (ಆಗಲೂ ದೂಳು ಇರಲಿಲ್ಲ ಅಂತ ಏನು ಇಲ್ಲ. ಆದರೆ ಈಗಿನಷ್ಟು ಇರಲಿಲ್ಲ.) ಈ ದೂಳಿನ ದುಷ್ಪರಿಣಾಮವನ್ನು ಮುಂದಿನ ದಿನಗಳಲ್ಲಿ ಹಾಸನದ ಜನತೆ ಅನುಭವಿಸಬೇಕಾಗುತ್ತದೆ.
ಮತ್ತೊಂದೆಡೆ ಜಿಲ್ಲಾ ಕೇಂದ್ರ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೇ ಮೇಲ್ಸೇತುವೆ ಕಾಮಗಾರಿ ಆಮೆ ವೇಗಕ್ಕಿಂತ ನಿಧಾನವಾಗಿ ಚಲಿಸುತ್ತಿದೆ. ಅತ್ಯಂತ ಧೀರ್ಘಾವಧಿಯ ಕಾಮಗಾರಿಯ ಬಹುಮಾನವನ್ನ ಇದಕ್ಕೆ ನೀಡಬಹುದು. ಪ್ರತಿ ದಿನ ಸಾವಿರಾರು ಜನ ವಾಹನ ಸವಾರರು, ಪ್ರಯಾಣಿಕರು ಸಾರ್ವಜನಿಕರು ಈ ರಸ್ತೆಯಲ್ಲಿ ಪರದಾಡುವ ಸ್ಥಿತಿ ಮುಂದುವರೆದಿದೆ.
ಇನ್ನು ಹಾಸನ ನಗರದ ಬಹುತೇಕ ಬಡಾವಣೆಗಳ ಜನ ಶುದ್ಧ ಕುಡಿಯುವ ನೀರು, ವೈಜ್ಞಾನಿಕ ಕಸ ವಿಲೇವಾರಿ ಒಳಚರಂಡಿಯಂತಹ ಅಗತ್ಯ ಮೂಲಭೂತ ಸೌಕರ್ಯಗಳ ಕೊರತೆಗಳನ್ನು ಎದುರಿಸುದ್ದಾರೆ.
ಇದನ್ನು ಓದಿ: ಜನಪರ ನಾಯಕ ಭೀಮರಾಯಗೌಡರಿಗೆ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪಟ್ಟ
ಜಿಲ್ಲಾ ಕೇಂದ್ರವಾದ ನಗರ ಪ್ರದೇಶದ ಜನರ ಸ್ಥಿತಿಯೇ ಹೀಗಿರುವಾಗ ಇನ್ನು ಗ್ರಾಮೀಣ ಜನರ ಸ್ಥಿತಿ ಹೇಳಲೇ ಬೇಕಾಗಿಲ್ಲ. ಕೃಷಿಯನ್ನೇ ಮುಖ್ಯ ಕಸುಬನ್ನಾಗಿಸಿಕೊಂಡಿರುವ ಈ ರೈತಾಪಿ ಜನಗಳಿಗೆ ತಾವು ನಂಬಿರುವ ಕೃಷಿಯಿಂದ ಬದುಕು ನಡೆಸುವಷ್ಟು ಆಧಾಯ ಬರುವಂತೆ ಮಾಡುವ ಯಾವ ಯೋಜನೆಗಳು ಸರ್ಕಾರಕ್ಕೂ ಇಲ್ಲ, ಸ್ಥಳೀಯ ಜನಪ್ರತಿನಿಧಿಗಳಿಗೂ ಇಲ್ಲ.
ದೇಶದಲ್ಲೇ ಅತ್ಯಂತ ಪ್ರಸಿದ್ಧಿ ಪಡೆದಿದ್ದ ಆಲೂಗಡ್ಡೆ ಬೆಳೆಯನ್ನು ಕಳೆದ ಹತ್ತು ವರ್ಷಗಳಲ್ಲಿ ಅರ್ಧಕ್ಕಿಂತ ಹೆಚ್ಚು ರೈತರು ಬೆಳೆಯುವುದನ್ನೇ ನಿಲ್ಲಿಸಿದ್ದಾರೆ. ಕಾರಣವೇನೆಂದರೆ ಇದಕ್ಕೆ ತಗುಲುತ್ತಿರುವ ಮಾರಣಾಂತಕ ಹಂಗಮಾರಿ ರೋಗ. ಆದರೆ ಈ ವಿಚಾರ ಯಾವ ಪ್ರಧಾನ ರಾಜಕೀಯ ಪಕ್ಷಗಳ ಮತ್ತು ಮುಖಂಡರ ಚರ್ಚೆಯ ವಿಷಯವೇ ಅಲ್ಲ.
ಇಂತಹ ಜನರ ಸಮಸ್ಯೆಗಳ ಬಗ್ಗೆ ಪ್ರಧಾನ ಚರ್ಚೆ ನಡೆಸಿ ಅವುಗಳಿಗೆ ಜನಪ್ರತಿನಿಧಿಗಳ ಪರಿಹಾರ ಮತ್ತು ಜನಪರ ಕೆಲಸದ ಬಗ್ಗೆ (ಜನಪ್ರಿಯ ಅಲ್ಲಾ) ಗಮನ ಸೆಳೆದು ಆ ಮೂಲಕ ಅತ್ಯುತ್ತಮ ರಾಜಕೀಯ ಚರ್ಚೆ ನಡೆಸಿ ಆಮೂಲಕ ರಾಜಕಾರಣ ಎಂದರೆ ಅದು ಜನರ ಬಗ್ಗೆ ಚರ್ಚಿಸುವ ಮತ್ತು ಪರಿಹಾರಗಳನ್ನು ಕಂಡುಕೊಳ್ಳುವ ವೇದಿಕೆಯನ್ನಾಗಿ ಪರಿವರ್ಥಿಸುವ ಹೊಸ ಮಾದರಿಯನ್ನು ಹುಟ್ಟುಹಾಕಬೇಕಿದೆ.
ಈ ಕುರಿತು ಪ್ರಜ್ಞಾವಂತ ನಾಗರೀಕರು ತಮ್ಮ ಧ್ವನಿಗೂಡಿಸಬೇಕಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ