ʻಸುಮಲತಾ – ಕುಮಾರಸ್ವಾಮಿʻ ರಾಜಕೀಯ ಕೆಸರೆರಚಾಟದಲ್ಲಿ ಸ್ಪೋಟಗೊಂಡಿದ್ದು “ಅಕ್ರಮ ಗಣಿಗಾರಿಕೆ”

ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಮೈಸೂರು ಜಿಲ್ಲೆಯ ಕೆಆರ್‌ಎಸ್ ಅಣೆಕಟ್ಟೆಯದ್ದೆ ಸುದ್ದಿ. ಅಲ್ಲಿ ಅಕ್ರಮ ಗಣಿಗಾರಿಕೆ ನಡೀತಾ ಇದೆ ಎಂದ ಸುಮಲತಾರ ಹೇಳಿಕೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಮಂಡ್ಯದ ಗಣಿಗಾರಿಕೆಯ ಒಳ ಹೊಕ್ಕಿ ನೋಡಿದಾಗ ಸಿಕ್ಕ ಮಾಹಿತಿಗಳು ಹುಬ್ಬೇರಿಸುತ್ತಿವೆ.  ಈ ಗಣಿಗಾರಿಕೆಯ ಹಿಂದೆ ರಾಜಕರಣಿಗಳ ಹಿಡಿತವೇ ಹೆಚ್ಚಿದೆಯಾ? ಗಣಿಗಾರಿಕೆಯಿಂದ ಕೆಎಸ್‌ಆರ್‌ ಧಕ್ಕೆ ಇದೆಯಾ?  ʻಸುಮಲತಾ – ಕುಮಾರಸ್ವಾಮಿʻ ರಾಜಕೀಯ ಕೆಸರೆರಚಾಟದಲ್ಲಿ ಸ್ಪೋಟಗೊಂಡಿದ್ದು “ಅಕ್ರಮ ಗಣಿಗಾರಿಕೆ”ಯ  ಬುತ್ತಿ ಬಿಚ್ಚಿದಾಗ ಗೊತ್ತಾದ ಸತ್ಯಗಳು ಹುಬ್ಬೇರಿಸುವಂತೆ ಮಾಡಿವೆ.

ಕಳೆದ ಕೆಲ ದಿನಗಳಿಂದ ಮಾಜಿ ಮುಖ್ಯಮಂತ್ರಿ  ಕುಮಾರಸ್ವಾಮಿ,  ಹಾಗೂ ಸಂಸದೆ ಸುಮಲತಾರವರು ಪರಸ್ಪರ ರಾಜಕೀಯ ಕೆಸರೆರಚಾಟ ನಡೆಸಿದ್ದು ನಿಮಗೆಲ್ಲ ಗೊತ್ತಿದೆ. ನಾನು ಅವರು ರಾಜಕೀಯ ಕೆಸರೆರಚಾಟದ ಬಗ್ಗೆ ಮಾತಾಡ್ತಾ ಇಲ್ಲ. ಆದರೆ ಅದರಿಂದ ಸ್ಪೋಟಗೊಂಡ ಗಣಿಗಾರಿಕೆಯ ಬಗ್ಗೆ ಅನೇಕ ಕಥಾನಕಗಳಿವೆ. ಸತ್ಯದ ಬುತ್ತಿ ಈಗ ತಾನೆಗೆ ತೆರದುಕೊಂಡಿದೆ.   ಕೆಆರ್‌ಎಸ್‌ ಜಲಾಶಯದ ಆಸುಪಾಸಿನಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ, ಸುತ್ತಮುತ್ತಲಿನ ಜನ ಬೆಚ್ಚಿ ಬಿದ್ದಿದ್ದಾರೆ.

ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆ ಆರಂಭವಾಗಿದ್ದು ಇವತ್ತು ನಿನ್ನೆಯ ವಿಚಾರ ಅಲ್ಲ, ಅದಕ್ಕೆ 50 ವರ್ಷದ ಇತಿಹಾಸ ಇದೆ.  ಶ್ರೀರಂಗಪಟ್ಟಣ ತಾಲ್ಲೂಕಿನ ಹಂಗರಹಳ್ಳಿ, ಚೆನ್ನಕೆರೆ, ಕೋಡಿಶೆಟ್ಟಿಪುರ, ಟಿಎಂ ಹೊಸರು,  ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಹಿಂದಿನಿಂದಲೂ ಗಣಿಗಾರಿಕೆ ನಡೆಯುತ್ತಿದೆ. ಇತ್ತೀಚೆಗೆ ಮೆಗ್ಗರ್‌ ಸ್ಪೋಟದಿಂದ ಗಣಿಗಾರಿಕೆಗೆ ಬಲ ಬಂದಿದೆ.  ಈ ಹಿಂದೆ ಕೂಕುಳಿಯಿಂದ  ಮೂರ್ನಾಲ್ಕು ಅಡಿ ಸ್ಪೋಟಕ ಸಿಡಿಸಿ ಜಲ್ಲಿಕಲ್ಲು ತಯಾರು ಮಾಡುತ್ತಿದ್ದರು.  ಆಗ ಯಾವುದೇ ಗಂಬೀರ ಸಮಸ್ಯೆ ಆಗುತ್ತಿರಲಿಲ್ಲ. 2010 ರ ನಂತರ ಬ್ಲಾಸ್ಟರ್‌ ಮೂಲಕ 30 ರಿಂದ 40 ಅಡಿ ಆಳದ ವರೆಗೆ ಸ್ಪೋಟ ಮಾಡುತ್ತಿರುವುದರಿಂದ ಅಪಾಯಗಳು ಆರಂಭವಾಗಿವೆ ಎನ್ನುತ್ತಾರೆ ಸುತ್ತಮುತ್ತಲಿನ ಗ್ರಾಮಸ್ಥರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಕಾರ ಪಾಂಡವಪುರ ಹಾಗೂ ಶ್ರೀರಂಗಪಟ್ಟಣದಲ್ಲಿ  ಅಕ್ರಮಗಣಿಗಾರಿಕೆ ನಡೆಯುತ್ತಿದೆ. ಸಾವಿರಕ್ಕೂ ಹೆಚ್ಚು ಗಣಿಗಳಿವೆ ಎಂಬ ಮಾಹಿತಿಯೂ ಇದೆ. ಸರಕಾರಕ್ಕೆ ಕೋಟ್ಯಾಂತರ ರೂ ಆದಾಯ ಬರುತ್ತಿರುವ ಕಾರಣ ಅವರು ಈ ಅಕ್ರಮವನ್ನು ತಡೆಯದೆ ಸುಮ್ಮನಾಗುತ್ತಿದ್ದಾರೆ. ಹಾಗಾಗಿ ಅಕ್ರಮ ಗಣಿಗಾರಿಕೆಯಲ್ಲಿ ರಾಜಕಾರಣಿಗಳ ಹಿಡಿತ ಹೆಚ್ಚಾಗುತ್ತಲೆ ಇದೆ. ಈ ಅಕ್ರಮ ಗಣಿಗಾರಿಕೆಯಿಂದ ಕೆಆರ್‌ಎಸ್‌ ಗೆ ಧಕ್ಕೆಯಾಗಲಿದೆ ಎಂಬುದು ತಜ್ಞರ ಅಬಿಪ್ರಾಯವಾಗಿದೆ.

ಸ್ಪೋಟಕ ಬಳಕೆಯಿಂದ ಕನ್ನಂಬಾಡಿ ಕಟ್ಟೆಗೆ ಅಪಾಯ ಇರುವ ಬಗ್ಗೆ ರಾಜ್ಯ ನೈಸರ್ಗಿಕ ವಿಕೋಪಗಳ ನಿರ್ವಹಣಾ ಸಂಸ್ಥೆಯ ವಿಜ್ಞಾನಿಗಳು ವರದಿ ನೀಡಿರುವ  ಉಲ್ಲೇಖಗಳಿವೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟ, ಕೆ. ಆರ್. ಪೇಟೆ, ಶ್ರೀರಂಗಪಟ್ಟಣ, ಕೆ. ಆರ್. ನಗರದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದ್ದು, ನಿಷೇಧಿತ ಸ್ಪೋಟಕಗಳನ್ನು ಬಳಕೆ ಮಾಡಿ ಗಣಿಗಾರಿಕೆ ಮಾಡುತ್ತಿರುವುದರಿಂದ ಜಲಾಶಯಕ್ಕೆ ಅಪಾಯವಿದೆ ಎಂಬುದನ್ನು ವಿವರಿಸಿದ್ದರು. ಕೆಆರ್‌ಎಸ್‌ ಜಲಾಶಯದ ಆಸುಪಾಸಿನಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ಉಂಟಾದ ನಷ್ಟದ ಅಂದಾಜು ನಡೆಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ನಡೆಸಲು ಉದ್ದೇಶಿಸಿದ್ದ ‘ಡ್ರೋಣ್‌ ಸರ್ವೆ’ ನನೆಗುದಿಗೆ ಬಿದ್ದಿದೆ.

ಅಕ್ರಮ ಗಣಿಗಾರಿಕೆಯಿಂದಾಗಿ ಬೇಬಿಬೆಟ್ಟ ದಿನೇದಿನೇ ಕರಗುತ್ತಿದೆ. ಆದರೆ, ಗಣಿ ಮಾಲೀಕರು ಉಳಿಸಿಕೊಂಡಿರುವ ರಾಜಧನ ಹಾಗೂ ದಂಡದ ಬಾಕಿ ಮೊತ್ತ ಬೆಟ್ಟಕ್ಕಿಂತ ಎತ್ತರಕ್ಕೆ ಏರತೊಡಗಿದೆ. ಬೆಟ್ಟದಲ್ಲಿ ಗಣಿ ಚಟುವಟಿಕೆ ನಡೆಸಿರುವ 30 ಕಂಪನಿಗಳು 2017ರಿಂದ ಇಲ್ಲಿವರೆಗೆ ಪರಿಸರ ಅನುಮೋದನೆ ಪಡೆಯದೆ ಲಕ್ಷಾಂತರ ಮೆಟ್ರಿಕ್‌ ಟನ್‌ ಕಲ್ಲು ಹೊರತೆಗೆದಿವೆ. ಪರಿಸರ ಅನುಮೋದನಾ ಸಮಿತಿ ನಿಗದಿಗೊಳಿಸಿದ ಮಿತಿಯಂತೆ ವರ್ಷಕ್ಕೆ ಗರಿಷ್ಠ 25 ಸಾವಿರ ಮೆಟ್ರಿಕ್‌ ಟನ್‌ ಗಣಿಗಾರಿಕೆ ನಡೆಸಬಹುದು. ಬೇಬಿಬೆಟ್ಟದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಚಟುವಟಿಕೆ ನಡೆಸುತ್ತಿದ್ದ 35ಕ್ಕೂ ಹೆಚ್ಚು ಕಂಪನಿಗಳಿಗೆ ವರ್ಷದಿಂದೀಚೆಗೆ ದಂಡ ವಿಧಿಸಲಾಗಿದೆ ಎಂದು ಕಾರ್ಮಿಕ ಮುಖಂಡ ಶಿವಕುಮಾರ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಹಾಗಾದ್ರೆ ಅಕ್ರಮಗಣಿಗಾರಿಕೆ ನಡೆಯುತ್ತಿದೆ ಎಂದಾದ ಮೇಲೆ ಅಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿರಲೇಬೇಕು ಈ ಅಂಶವನ್ನು ಬೆನ್ನು ಹತ್ತಿದಾಗ ಸಿಕ್ಕ ಮಾಹಿತಿಗಳು ಅಚ್ಚರಿ ಮೂಡಿಸುತ್ತವೆ. ಸರಕಾರಿ ಜಮೀನಿನಲ್ಲಿ 90, ಪಟ್ಟಾ ಜಮೀನಿನಲ್ಲಿ 16 ಸೇರಿದಂತೆ ಒಟ್ಟು 106 ಕಲ್ಲಕ್ವಾರಿಗಳಿಗೆ ಗಣಿಭೂವಿಜ್ಞಾನ ಇಲಾಖೆಯ ಪ್ರಕಾರ ಅನುಮತಿಯನ್ನು ನೀಡಲಾಗಿದೆ.  ಅದರಲ್ಲಿ ನಾಲ್ಕು ಕ್ವಾರಿಗಳು ಗ್ರ್ಯಾನೈಟ್‌ ಗೆ ಸೇರಿವೆ. 106 ಕಲ್ಲು ಕ್ವಾರಿಯಲ್ಲಿ ಬ್ಲಾಸ್ಟಿಂಗ್‌ ಮಾಡಲು ಅನುಮತಿ ಇರುವ ಕಲ್ಲು ಕ್ವಾರಿಗಳ ಸಂಖ್ಯೆ 46. ಉಳಿದ 60 ಕ್ವಾರಿಗಳು ಕೂಕುಳಿ ಮೂಲಕ ಕ್ವಾರಿಯನ್ನು ನಡೆಸಬೇಕು ಎಂದಿದೆ.

ಆದರೆ ಇವು ನಿಯಮಗಳನ್ನು ಉಲ್ಲಂಗಿಸಿ ಬ್ಲಾಸ್ಟಿಂಗ್‌ ವ್ಯವಸ್ಥೆ ನಡೆಸುತ್ತಿವೆ. ಸರಕಾರಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ಇದೆಲ್ಲ ಗೊತ್ತಿದ್ದರೂ ಮೌನವಹಿಸಿ ಕುಳಿತಿದೆ. ಅಕ್ರಮ ಗಣಿಗಾರಿಕೆ ನಿಲ್ಲಬೇಕಾದರೆ  ರಾಷ್ಟ್ರೀಕರಣವೇ ಇದಕ್ಕಿರುವ ದಾರಿ ಎಂದು ಕೃಷಿಕೂಲಿಕಾರ ಸಂಘಟನೆಯ ಮುಖಂಡ ಸುರೇಂದ್ರ ನರಹಳ್ಳಿ ಆಗ್ರಹಿಸಿದ್ದಾರೆ.

ಇನ್ನೊಂದು ಮಾಹಿತಿಯ ಪ್ರಕಾರ  ಮಂಡ್ಯ ಜಿಲ್ಲೆಯಲ್ಲಿ ನಡೆಸಲಾಗುತ್ತಿರುವ ಅಕ್ರಮ ಗಣಿಗಾರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಅತ್ಯಾಧುನಿಕ ಯಂತ್ರ, ಸ್ಪೋಟಕಗಳನ್ನ ಬಳಸಿ ನಿಗದಿಪಡಿಸಿದಕ್ಕಿಂತ 100 ಪಟ್ಟು ಹೆಚ್ಚು ಕಲ್ಲು ತೆಗೆದಿರುವುದು ಹಾಗೂ ಅದಕ್ಕೆ ನೂರಾರು ಕೋಟಿ ರೂಪಾಯಿ ದಂಡ ವಿಧಿಸಿರುವ ವಿಚಾರ ವರದಿಯಾಗಿದೆ. ಜಿಲ್ಲೆಯಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ ಗಣಿಗಾರಿಕೆಗಳಿಗೆ ಒಟ್ಟು 320 ಕೋಟಿ ರೂಪಾಯಿ ದಂಡ ವಿಧಿಸಲಾಗಿದ್ದು, ಈ ಪೈಕಿ ಬೇಬಿ ಬೆಟ್ಟ ವ್ಯಾಪ್ತಿಯಲ್ಲೇ ಸುಮಾರು 280 ಕೋಟಿ ರೂಪಾಯಿ ದಂಡ ಹಾಕಿರುವುದು ತಿಳಿದುಬಂದಿದೆ.

ಗಣಿ ಇಲಾಖೆಯ ಮೂಲ ರಾಜಧನ ಮೆಟ್ರಿಕ್​ ಟನ್​ಗೆ 60 ರೂಪಾಯಿಯಂತೆ ಇದ್ದು, ಅಕ್ರಮವಾಗಿ ತೆಗೆಯಲಾದ ಮೆಟ್ರಿಕ್​ ಟನ್​ ಕಲ್ಲಿಗೆ 300 ರೂಪಾಯಿ ದಂಡ ವಿಧಿಸಲಾಗಿದೆ. ಅಲ್ಲಿಗೆ ರಾಜಧನ ಹಾಗೂ ದಂಡ ಇವೆರಡನ್ನೂ ಸೇರಿಸಿದ ಮೆಟ್ರಿಕ್​ ಟನ್​ ಕಲ್ಲಿಗೆ 360 ರೂಪಾಯಿಯಂತೆ ದಂಡ ವಿಧಿಸಲಾಗಿದ್ದು, ಲಕ್ಷಾಂತರ ಟನ್​ಗೆ 320 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ಅದರಲ್ಲಿ ಬೇಬಿ ಬೆಟ್ಟವೊಂದರಲ್ಲೇ 280 ಕೋಟಿ ರೂಪಾಯಿ ದಂಡ ಹಾಕಲಾಗಿದೆ. ಆದರೆ, ಆ ಪೈಕಿ ಕೇವಲ 1.60 ಕೋಟಿ ರೂಪಾಯಿ ದಂಡ ವಸೂಲಿಯಾಗಿದೆ ಎಂದು ವಿಧಾನಸೌಧದ ದಾಖಲೆಗಳು ಹೇಳುತ್ತಿವೆ.

ಇನ್ನೂ ಅಕ್ರಮಗಣಿಗಾರಿಕೆ ವಿಚಾರವಾಗಿ ಹಿಂದೆ ಸರಿಯುವ ಮಾತೇ ಇಲ್ಲ. ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್‌ ನಿರಾಣಿ ಭೇಟಿ ಮಾಡಿ ಮಾಹಿತಿಯನ್ನು ನೀಡಿದ್ದೇನೆ, ಲೋಕಸಭೆಯಲ್ಲಿ ಈ ಕುರಿತಾಗಿ ಚರ್ಚಿಸುತ್ತೇನೆ ಎಂದು  ಸಂಸದೆ ಸಮುಲತಾರವರು ಹೇಳಿಕೆ ನೀಡುತ್ತಿದ್ದಾರೆ. ಒಂದು ರಾಜಕೀಯ ಕೆಸರೆರಚಾಟ ಅಂತಿಮವಾಗಿ ಅಕ್ರಮ ಗಣಿಗಾರಿಕೆಯನ್ನು ಸ್ಪೋಟಗೊಳಿಸಿದ್ದು ಸುಳ್ಳಂತು ಅಲ್ಲ, ಸರಕಾರ ಇನ್ನದಾರೂ ಎಚ್ಚೆತ್ತು ಕೆ.ಆರ್‌.ಎಸ್‌ ಗೆ ಹಾಗೂ ಸುತ್ತ ಮುತ್ತಲಿನ ಸಾರ್ವಜನಿಕರಿಗೆ ಆಗುವ ಅಪಾಯಗಳನ್ನು ತಪ್ಪಿಸಲು ಮುಂದಾಗಬೇಕಿದೆ.

 

Donate Janashakthi Media

Leave a Reply

Your email address will not be published. Required fields are marked *