ರಾಜಕೀಯ ಪಕ್ಷಗಳ ಚುನಾವಣಾ ಆಶ್ವಾಸನೆಗಳು: ಈಡೇರಿಕೆಗೆ ದಾರಿ ಯಾವುದಯ್ಯ?

ಸಿ.ಸಿದ್ದಯ್ಯ

ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದೆ. ರಾಜಕೀಯ ಪಕ್ಷಗಳ ಭರವಸೆಗಳ ಮಹಾಪೂರವೇ ಹರಿಯುತ್ತಿವೆ. ಆದರೆ ಇದಕ್ಕೆ ಹಣ ಎಲ್ಲಿಂದ ಎನ್ನುವ ಪ್ರಶ್ನೆಗೆ ಅವರ ಉತ್ತರ ಏನು?

ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ರಾಜಕೀಯ ಪಕ್ಷಗಳ ಆಶ್ವಾಸನೆಗಳು ಜೋರಾಗಿವೆ. ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಜನತೆಗೆ ಹಲವು ರೀತಿಯ ಆಶ್ವಾಸನೆಗಳನ್ನು ನೀಡತೊಡಗಿವೆ. ಕಾಂಗ್ರೆಸ್ ‘200 ಯೂನಿಟ್ ವರೆಗಿನ ವಿದ್ಯುತ್ ಉಚಿತ, ಮಹಿಳೆಯರಿಗೆ 2,000 ರೂ.ಗಳ ಸಹಾಯ ಸೇರಿದಂತೆ ಹಲವು ಆಶ್ವಾಸನೆಗಳನ್ನು ನೀಡಿದೆ. ಜೆಡಿಎಸ್ ‘ಎಕರೆಗೆ 10,000 ರೂಪಾಯಿ ನೆರವು, ರೈತರಿಗೆ ದಿನದ 24 ಗಂಟೆ ವಿದ್ಯುತ್ ಸರಬರಾಜು, ತರಕಾರಿ ಬೆಳೆಯುವ ರೈತರಿಗೆ ಗೋದಾಮುಗಳ ನಿರ್ಮಾಣ (ಇದು ಖಾಸಗಿಯವರದೋ, ಸರ್ಕಾರದ್ದೋ ಎಂಬುದನ್ನು ಅವರು ಬಿಡಿಸಿ ಹೇಳಲಿಲ್ಲ), ವೃದ್ದರಿಗೆ 5,000 ರೂ.ಗಳು ಇತ್ಯಾದಿ ಭರವಸೆಗಳನ್ನು ನೀಡಿದೆ. ಎಲ್ಲಾ ಕ್ಷೇತ್ರಗಳನ್ನೂ ಸ್ಪರ್ಧಿಸುವುದಾಗಿ ಹೇಳಿರುವ ಆಮ್ ಆದ್ಮಿ ಪಕ್ಷ ತಮ್ಮ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಈಗಾಗಲೇ ಜಾರಿಗೆ ತಂದಿರುವ ಯೋಜನೆಗಳನ್ನು ಇಲ್ಲಿಯೂ ತರುವುದಾಗಿ ಹೇಳುತ್ತಿದೆ.  ಬಿಜೆಪಿಯಿಂದ ದೂರವಾಗಿ ಈಗ ಹೊಸದೊಂದು ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಸ್ಥಾಪಿಸಿಕೊಂಡಿರುವ, ಭೂ ಒಡಲಿನ ಅದಿರು ದೋಚಲು ರೈತರ ಸಾವಿರಾರು ಎಕರೆ ಕೃಷಿ ಭೂಮಿಯನ್ನು ಹಾಳುಮಾಡಿರುವ, ಸರ್ಕಾರಕ್ಕೆ ವಂಚಿಸಿ ಸಾವಿರಾರು ಕೋಟಿ ರೂಪಾಯಿ ಸಂಪತ್ತು ಕೂಡಿಟ್ಟಿರುವ ಜನಾರ್ಧನ ರೆಡ್ಡಿಯವರು ‘ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರೈತರ ಖಾತೆಗೆ 15 ಸಾವಿರ ಹಣ ಹಾಕುತ್ತೇವೆ’ ಎಂಬ ಆಶ್ವಾಸನೆಯೂ ಸೇರಿ ಹೊಸ ನೀರಾವರಿ ಯೋಜನೆಗಳನ್ನು ಕೈಗೊಳ್ಳುವುದಾಗಿ ಹೇಳಿದ್ದಾರೆ. ಇನ್ನು ಅಧಿಕಾರದಲ್ಲಿರುವ ಬಿಜೆಪಿಯು ಹರಿಸುವ ಭರವಸೆಗಳು, ಓಲೈಕೆಗಳು, ಇತ್ಯಾದಿಗಳಿಗೆ ಹೇಗೂ ಬಜೆಟ್ ಮಂಡನೆ ಇದೆಯಲ್ಲ! ಮೋ-ಶಾ ಗಳು ಹೋದಲ್ಲೆಲ್ಲಾ ಪ್ರಕಟಿಸುತ್ತಿರುವ ಯೋಜನೆಗಳಿಗೆ ಬ್ರೇಕ್ ಇಲ್ಲ.

ಆದರೆ, ಈ ಆಶ್ವಾಸನೆಗಳ ಈಡೇರಿಕೆಗೆ ಅವಶ್ಯಕವಾದ ಸಂಪನ್ನೂಲ ಸಂಗ್ರಹ ಹೇಗೆ ಎಂಬುದನ್ನು ಈ ಪಕ್ಷಗಳು ಹೇಳುತ್ತಿಲ್ಲ. ರಾಜ್ಯ ಈಗ ಸಾಲದ ಸುಳಿಯಲ್ಲಿ ಸಿಲುಕಿದೆ. ರಾಜ್ಯಕ್ಕೆ ಬರಬೇಕಾದ ತೆರಿಗೆ ಆದಾಯ ಕಡಿಮೆಯಾಗಿದೆ. ಕೇಂದ್ರ ಸರ್ಕಾರದ ಅನುದಾನಗಳ  ಕಡಿತವಾಗಿದೆ. ಜಿ.ಎಸ್.ಟಿ ವ್ಯವಸ್ಥೆ ಬಂದ ನಂತರವಂತೂ ರಾಜ್ಯದಲ್ಲಿ ಸಂಗ್ರಹವಾಗುವ ತೆರಿಗೆಯ ಆದಾಯದ ಬಹುಪಾಲು ಒಕ್ಕೂಟ ಸರ್ಕಾರದ ಪಾಲಾಗುತ್ತಿದೆ. ಜಿ.ಎಸ್.ಟಿ. ಜಾರಿ ಸಂದರ್ಭದಲ್ಲಿ ಒಕ್ಕೂಟ ಸರ್ಕಾರ ರಾಜ್ಯಗಳಿಗೆ ಕೊಟ್ಟ ಆಶ್ವಾಸನೆಯಂತೆ ರಾಜ್ಯಗಳಿಗೆ ಕೊಡಬೇಕಾದ ಪಾಲನ್ನು ಕೊಡುತ್ತಿಲ್ಲ. ರಾಜ್ಯಗಳ ಪಾಲು ಕೊಡದಿರುವುದಕ್ಕೆ ಒಕ್ಕೂಟ ಸರ್ಕಾರ ನಾನಾ ಕಾರಣಗಳನ್ನು ಹೇಳುತ್ತಿದೆ. ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲನ್ನು ಪಡೆದುಕೊಳ್ಳುವಲ್ಲಿ ರಾಜ್ಯದ ಬಿಜೆಪಿ ಆಡಳಿತ ವಿಫಲವಾಗಿದೆ.

ಇದನ್ನು ಓದಿ: ಚುನಾವಣೆ ವೇಳೆ ‘ಉಚಿತ ವಸ್ತುಗಳ ಆಶ್ವಾಸನೆ: ಕೇಂದ್ರ-ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್

ಮಿತಿ ಮೀರಿದ ರಾಜ್ಯದ ಸಾಲ

2022-23ರ ಬಜೆಟ್‌ನಲ್ಲಿ, ಒಟ್ಟಾರೆ ಅಂದಾಜು ಸಾಲ ಆರ್ಥಿಕ ವರ್ಷದ ಕೊನೆಯಲ್ಲಿ ಸುಮಾರು 5.2 ಲಕ್ಷ ಕೋಟಿ ರೂ.ಗಳು. ಆದಾಗ್ಯೂ, ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಪೂರಕ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ, ಸದನದ ದಾಖಲೆಗಳು ರಾಜ್ಯದ ಒಟ್ಟು ಸಾಲ 5.4 ಲಕ್ಷ ಕೋಟಿ ರೂ.ಗಳನ್ನು ದಾಟಿದೆ ಎಂದು ತೋರಿಸುತ್ತವೆ.

ರಾಜ್ಯದ ಸಾಲ ಕಳೆದ 71 ವರ್ಷಗಳಲ್ಲಿ 2.4 ಲಕ್ಷ ಕೋಟಿ ರೂಪಾಯಿಗಳು. ಆದರೆ 2018 ರಿಂದ 2023ರ ವರೆಗೆ ಕೇವಲ ಐದು ವರ್ಷಗಳಲ್ಲಿಯೇ 3 ಲಕ್ಷ ಕೋಟಿ ರೂ. ಅಧಿಕವಾಗಿ ಸಾಲ ಮಾಡಲಾಗಿದೆ. 2020-21 ರಲ್ಲಿ 84,528 ಕೋಟಿ ರೂಪಾಯಿ, 2021-22 ರಲ್ಲಿ 67,332 ಕೋಟಿ ರೂ. ಸಾಲ ಪಡಿದಿದ್ದರೆ, 2022-23 ರಲ್ಲಿ 72,000 ಕೋಟಿ ರೂ ಸಾಲವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಅಂದಾಜಿಸಿದೆ.

ಸಾಲ ಹೆಚ್ಚಾದರೆ ಪಾವತಿಸಬೇಕಾದ ಬಡ್ಡಿ ಹೆಚ್ಚಳವಾಗುತ್ತದೆ.  2022-23ರಲ್ಲಿ ಅಂದಾಜು 43,580 ಕೋಟಿ ರೂ.ಗಳಷ್ಟು ಹಣ ಸಾಲ ಕಟ್ಟಲು ಪಾವತಿಯಾಗಿದೆ. ಇದರಲ್ಲಿ 29,397 ಕೋಟಿ ರೂ. ಕೇವಲ ಬಡ್ಡಿಗೆ ಪಾವತಿಯಾಗಿದೆ. ಸದನದಲ್ಲಿ ಕಾಂಗ್ರೆಸ್ ಶಾಸಕರು ನೀಡಿದ ಮಾಹಿತಿಯ ಪ್ರಕಾರ 2023-24ರಲ್ಲಿ 35,090 ಕೋಟಿ ಮತ್ತು 2024-25ರಲ್ಲಿ 38,629 ಕೋಟಿ ಮತ್ತು 2025-26ರಲ್ಲಿ 47,899 ಕೋಟಿ ರೂ.ಗಳ ಹಣವನ್ನು ಕೇವಲ ಸಾಲದ ಮೇಲಿನ ಬಡ್ಡಿಗೆ ತೆರಬೇಕಾಗುತ್ತದೆ.

ಮತದಾರರು ಪರ್ಯಾಯ ನೀತಿಗಳೇ ಇಲ್ಲದ ಇಂತಹ ರಾಜಕೀಯ ಪಕ್ಷಗಳು ನೀಡುವ ಇಂತಹ ಪೊಳ್ಳು ಆಶ್ವಾಸನೆಗಳಿಗೆ ಮತ್ತು ಅಲ್ಪಕಾಲದ ಕೊಡುಗೆಗಳಿಗೆ ಮರುಳಾಗಬಾರದು.

ಮುಕ್ತ ಆರ್ಥಿಕ ನೀತಿಗಳನ್ನು ಒಪ್ಪಿಕೊಂಡಿರುವ ಪಕ್ಷಗಳಿವು

ಇಲ್ಲಿ ಪ್ರಸ್ತಾಪಿಸಿರುವ ಎಲ್ಲಾ ಪಕ್ಷಗಳ ಆರ್ಥಿಕ ನೀತಿಗಳು ಒಂದೇ ಎಂಬುದನ್ನು ನಾವಿಲ್ಲಿ ಗಮನಿಸಬೇಕು. 1991ರಲ್ಲಿ ಅಂದಿನ ಪಿ.ವಿ. ನರಸಿಂಹರಾವ್ ನೇತೃತ್ವದ ಒಕ್ಕೂಟ ಸರ್ಕಾರ ಮುಕ್ತ ಆರ್ಥಿಕ ನೀತಿಗಳನ್ನು ಒಪ್ಪಿಕೊಂಡು, ಅದನ್ನು ಜಾರಿಗೆ ತರಲು ಮುಂದಾಯಿತು. ಇವೇ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ(ಎಲ್‌ಪಿಜಿ) ನೀತಿಗಳನ್ನು ಇಂದು ಬಿಜೆಪಿ ಆಡಳಿತ ವೇಗವಾಗಿ ಜಾರಿಗೆ ತರುತ್ತಿದೆ. ಇದರಲ್ಲಿ ಬಹಳಷ್ಟು ಯಶಸ್ವಿಯೂ ಆಗಿದೆ. ಅಂದರೆ ಈ ಎರಡೂ ಪ್ರಮುಖ ರಾಜಕೀಯ ಪಕ್ಷಗಳ ಆರ್ಥಿಕ ನೀತಿಗಳು ಒಂದೇ ಎಂಬುದು ಸ್ಪಷ್ಟ. ಇನ್ನು ಜೆಡಿಎಸ್ ಪಕ್ಷವಾಗಲೀ, ಆಮ್ ಆದ್ಮಿ ಪಕ್ಷವಾಗಲೀ ಈ ಎಲ್.ಪಿ.ಜಿ. ನೀತಿಗಳನ್ನು ಎಂದೂ ವಿರೋಧಿಸಿಲ್ಲ. ಈ ನೀತಿಗಳ ವಿರುದ್ಧ ಚಳುವಳಿ ನಡೆಸಲಿಲ್ಲ.

ಇದನ್ನು ಓದಿ: “ಮಾದರಿ ನೀತಿ ಸಂಹಿತೆಗೆ ಪ್ರಸ್ತಾವಿತ ತಿದ್ದುಪಡಿ ಅನಗತ್ಯ-ಅನಪೇಕ್ಷಣೀಯ”

ನಿರುದ್ಯೋಗ, ಶಿಕ್ಷಣ ಮತ್ತು ಆರೋಗ್ಯ ವಲಯದ ಖಾಸಗೀಕರಣ, ಈ ಕಾರಣದಿಂದ ದುಬಾರಿಯಾಗುತ್ತಿರುವ ಶಿಕ್ಷಣ ಮತ್ತು ಆರೋಗ್ಯ, ಉದ್ಯೋಗದ ಅಭದ್ರತೆ, ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಕಾರ್ಮಿಕರಿಗಿದ್ದ ಹಕ್ಕುಗಳನ್ನು ಕಿತ್ತುಹಾಕಿದ್ದು, ಕೃಷಿಯನ್ನು ಕಾರ್ಪೊರೇಟೀಕರಣ ಮಾಡಲು ಮುಂದಾಗಿರುವುದು, ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಸಿಗದಿರುವುದು, ಅಡುಗೆ ಅನಿಲ, ಪೆಟ್ರೋಲ್, ಡೀಸಲ್ ಮೇಲಿದ್ದ ಸಬ್ಸಿಡಿಗಳನ್ನು ಸಂಪೂರ್ಣವಾಗಿ ತೆಗೆದುಹಾಕಿದ್ದು, ಹಳೆಯ  ಪಿಂಚಣಿ  ಪದ್ದತಿ ತೆಗೆದುಹಾಕಿ ಹೊಸ ಪಿಂಚಣಿ ವ್ಯವಸ್ಥೆ ಜಾರಿಗೆ ತಂದಿದ್ದು, ಜನಸಾಮಾನ್ಯರು ಬಳಕೆ ಮಾಡುವ ಪದಾರ್ಥಗಳ ಮೇಲಿನ ತೆರಿಗೆ ವಿಪರೀತವಾದ ಹೆಚ್ಚಳ, ಈ ಎಲ್ಲಾ ವಸ್ತುಗಳ ಬೆಲೆಯೇರಿಕೆ, ಹೆಚ್ಚುತ್ತಿರುವ ಕಾರ್ಪೊರೇಟ್ ಭ್ರಷ್ಟಾಚಾರ, ಇಂತಹ ಇಂದಿನ ಬಹುತೇಕ ಸಮಸ್ಯೆಗಳಿಗೆ ಈ ಎಲ್‌ಪಿಜಿ ನೀತಿಗಳೇ ಕಾರಣ ಎಂಬುದಂತೂ ಸ್ವಷ್ಟ.

ವ್ಯಂಗ್ಯಚಿತ್ರಕೃಪೆ: ಸತೀಶ ಆಚಾರ್ಯ, ಮೊಲಿಟಿಕ್ಸ್.ಇನ್

ಈ ಪಕ್ಷಗಳು ನೀಡಿರುವ ಆಶ್ವಾಸನೆಗಳ ಕಡೆಗೆ ಒಮ್ಮೆ ನೋಡೋಣ

ಉಚಿತ ಶಿಕ್ಷಣ: ಸರಕು, ಸೇವೆ ಎಲ್ಲವನ್ನೂ ಖಾಸಗೀಕರಣ ಮಾಡುವ ಮೂಲಕ ಎಲ್ಲವನ್ನೂ ಮುಕ್ತ ಮಾರುಕಟ್ಟೆಗೆ ತೆರೆದಿಡುವುದೇ ಮುಕ್ತ ಆರ್ಥಿಕ ನೀತಿಯ ಗುರಿ. ಇದರ ಭಾಗವಾಗಿ ಶಿಕ್ಷಣ ಕ್ಷೇತ್ರವನ್ನೂ ಖಾಸಗೀಕರಣ ಮಾಡಲಾಗುತ್ತದೆ. ಸರ್ಕಾರದ ಈ ನೀತಿಯೇ ಇಂದು ಶಿಕ್ಷಣ ದುಬಾರಿಯಾಗಲು ಕಾರಣ. ಶಿಕ್ಷಣದ ಖಾಸಗೀಕರಣವನ್ನು ಈ ಪಕ್ಷಗಳು ವಿರೋಧಿಸಿವೆಯೇ? ಇದರ ವಿರುದ್ದ ಪ್ರತಿಭಟನೆ ನಡೆಸಿದ್ದಾರೆಯೇ? ಇಂತಹ ನೀತಿಯನ್ನು ವಿರೋಧಿಸದೇ ಉಚಿತ ಶಿಕ್ಷಣ ನೀಡುತ್ತೇವೆ ಎಂದೋ, ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುತ್ತೇವೆ ಎಂದೋ ಆಶ್ವಾಸನೆ ನೀಡದರೆ ನಂಬಲಾದೀತೆ? ಎಎಪಿ ತಾನು ಅಧಿಕಾರ ನಡೆಸುತ್ತಿರುವ ಎರಡು ರಾಜ್ಯಗಳಲ್ಲಿ ಸರ್ಕಾರಿ ಶಾಲೆಗಳನ್ನು ಉತ್ತಮ ಪಡಿಸಿದ್ದೇವೆ, ಒಂದು ಹಂತದವರೆಗೆ ಉಚಿತ ಶಿಕ್ಷಣ ನೀಡುತ್ತಿದ್ದೇವೆ ಎಂದು ಹೇಳುತ್ತದೆಯಾದರೂ, ಒಕ್ಕೂಟ ಸರ್ಕಾರದ ಶಿಕ್ಷಣದ ಖಾಸಗೀಕರಣ ನೀತಿಗಳ ಜಾರಿಯನ್ನು ತಡೆಯಲಾದೀತೆ? ಒಕ್ಕೂಟ ಸರ್ಕಾರದ ನೀತಿಗಳನ್ನು ಎದುರಿಸಿ ಎಷ್ಟು ಕಾಲ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಉಳಿಸಿಕೊಳ್ಳಲು ಸಾಧ್ಯ? ಇನ್ನೂ ಒಂದು ವಿಷಯವನ್ನು ಇಲ್ಲಿ ಪ್ರಸ್ತಾಪಿಸಲೇ ಬೇಕಿದೆ. ಈ ಎಲ್ಲಾ ರಾಜಕೀಯ ಪಕ್ಷಗಳಲ್ಲಿನ ಜನಪ್ರತಿನಿಧಿಗಳಲ್ಲಿ ಶಿಕ್ಷಣ ಸಂಸ್ಥೆಗಳ ಮಾಲೀಕರೂ ಇದ್ದಾರೆ. ಇವರು ತಮ್ಮ ಉದ್ಯಮಕ್ಕೆ/ವ್ಯವಹಾರಕ್ಕೆ ನಷ್ಟವಾಗುವ ಯಾವುದಾದರೂ ಯೋಜನೆಗಳನ್ನು ಜಾರಿಗೆ ತರುತ್ತಾರೆಯೇ?

200 ಯೂನಿಟ್ ಉಚಿತ ವಿದ್ಯುತ್: ಉಚಿತ ಕುಡಿಯುವ ನೀರು

ಮುಕ್ತ ಆರ್ಥಿಕ ನೀತಿಗಳ ಭಾಗವಾಗಿ ನೀರು ಸರಬರಾಜು ಮತ್ತು ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಲಾಗುತ್ತಿದೆ. ದೇಶದ ಹಲವು ಭಾಗಗಳಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಖಾಸಗಿ ಬಂಡವಾಳಗಾರರು ತೊಡಗಿಸಿಕೊಂಡಿದ್ದಾರೆ. ಒರಿಸ್ಸಾ ರಾಜ್ಯದಲ್ಲಿ ವಿದ್ಯುತ್ ಸರಬರಾಜು ಮತ್ತು ವಿತರಣೆಯಲ್ಲಿ ಖಾಸಗೀಯರಿಗೆ ಅವಕಾಶ ಕೊಡಲಾಗಿದೆ. ಮಹಾರಾಷ್ಟ್ರದಲ್ಲಿ ಅಲ್ಲಿನ ಸರ್ಕಾರಿ ವಿದ್ಯುತ್ ನೌಕರರು ಒಗ್ಗಟ್ಟಿನ ಹೋರಾಟದ ಮೂಲಕ ಖಾಸಗೀಕರಣವನ್ನು ತಡೆದಿದ್ದಾರೆ. ಕರ್ನಾಟಕದಲ್ಲಿಯೂ ವಿದ್ಯುತ್ ಖಾಸಗೀಕರಣ ಮಾಡುವತ್ತ ಸರ್ಕಾರ ದಾಪುಗಾಲು ಹಾಕುತ್ತಿದೆ. ಇದರ ಭಾಗವಾಗಿ ಮೊದಲು ಪಾವತಿ ಮಾಡುವ (ಪ್ರಿಪೇಯ್ಡ್) ಮೀಟರ್ ಅಳವಡಿಸುವ ಯೋಜನೆ ಭರದಿಂದ ಸಾಗುತ್ತಿದೆ. ಈಗ ಉಚಿತವಾಗಿ ವಿದ್ಯುತ್ ಪಡೆಯುತ್ತಿರುವ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಮತ್ತು ಕೃಷಿ ಪಂಪ್ ಸೆಟ್ ಗಳ ಫಲಾನುಭವಿಗಳಿಗೆ ಇರುವ ಸೌಲಭ್ಯ ಕಳೆದುಕೊಳ್ಳುವ ಆತಂಕ ಇದೆ.

ಇದನ್ನು ಓದಿ: ಕಲ್ಯಾಣ-ಪ್ರಭುತ್ವದ ಕ್ರಮಗಳು ʻʻಜನರಂಜನೆʼʼಗಾಗಿ ಎಂದು ಹೀನಾಯಗೊಳಿಸುವ ನವ-ಉದಾರವಾದ

ವಿದ್ಯುತ್ ಖಾಸಗೀಕರಣ ವಿರುದ್ದ, ಪ್ರಿಪೇಯ್ಡ್ ಮೀಟರ್ ಅಳವಡಿಕೆ ವಿರುದ್ದ ಈ ರಾಜಕೀಯ ಪಕ್ಷಗಳು ಎಂದಾದರೂ ದ್ವನಿ ಎತ್ತಿವೆಯೇ? ಇದರ ವಿರುದ್ದ ಹೋರಾಟ ನಡೆಸಿವೆಯೇ? ಇದರರ್ಥ ಈ ಪಕ್ಷಗಳೂ ವಿದ್ಯುತ್ ಖಾಸಗೀಕರಣದ ಪರ, ಪ್ರಿಪೇಯ್ಡ್ ಮೀಟರ್ ಪರ ಎಂದಾಗುವುದಿಲ್ಲವೇ? ಹಾಗಾದರೆ, ಉಚಿತ ವಿದ್ಯುತ್ ಎಂಬುದು ಒಂದು ವಂಚನೆಯ ಆಶ್ವಾಸನೆ ಎಂದಾಗುತ್ತದಲ್ಲವೆ?

ನೀರು ಸರಬರಾಜು ವ್ಯವಸ್ಥೆಯನ್ನು ಖಾಸಗಿಯವರಿಗೆ ಒಪ್ಪಿಸುವ ಪ್ರಕ್ರಿಯೆಯನ್ನು ತಡೆಯುವ ಯಾವ ಪ್ರಯತ್ನವನ್ನೂ ಇವರು ಮಾಡುವುದಿಲ್ಲ. ವಿದ್ಯುತ್ ಮತ್ತು ನೀರು ಸರಬರಾಜು ವ್ಯವಸ್ಥೆ ಖಾಸಗಿಯವರ ಪಾಲಾದರೆ, ಖಾಸಗಿಯವರಿಗೆ ಸರ್ಕಾರ ಹಣ ಕೊಟ್ಟು ಇವುಗಳನ್ನು ಖರೀದಿಸಿ ಸಾರ್ವಜನಿಕರಿಗೆ ಕೊಡುತ್ತದೆಯೇ? ಇದರ ಖರೀದಿ ವೆಚ್ಚಕ್ಕೆ ಹಣ ಎಲ್ಲಿಂದ ಬರುತ್ತದೆ?

10 ಕೆಜಿ ಉಚಿತ ಅಕ್ಕಿ

ಪಡಿತರ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹಿಂಪಡೆಯಬೇಕು. ಆಹಾರ ಪದಾರ್ಥಗಳನ್ನೂ ಮುಕ್ತ ಮಾರುಕಟ್ಟೆಗೆ ತೆರೆದಿಡಬೇಕು ಎಂಬುದು ಮುಕ್ತ ಆರ್ಥಿಕ ನೀತಿಗಳಲ್ಲಿನ ಒಂದು ಅಂಶ. ಭಾರತ ಸರ್ಕಾರ ವಿಶ್ವ ವಾಣಿಜ್ಯ ಸಂಸ್ಥೆಯ ಜೊತೆಗಿನ ಗ್ಯಾಟ್ ಒಪ್ಪಂದ (ಸರಕು ಮತ್ತು ಸೇವೆಗಳ ಮೇಲಿನ ಸಾಮಾನ್ಯ ಒಪ್ಪಂದ)ದ ತಿರುಳೂ ಇದೇ ಆಗಿದೆ. ಪಡಿತರ ವ್ಯವಸ್ಥೆಯನ್ನು ಹಿಂಪಡೆಯುವ ಪ್ರಯತ್ನದ ಭಾಗವಾಗಿ ಪಡಿತರ ಆಹಾರ ದಾನ್ಯಗಳ ವಿತರಣೆ ಬದಲಾಗಿ ನೇರನಗದು ಯೋಜನೆ ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಒಂದಷ್ಟು ನಗದು ಹಾಕುವ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಮುಂದಾಗಿತ್ತು. ಕೊರೋನಾ ಸಾಂಕ್ರಾಮಿಕ ಸರ್ಕಾರದ ಈ ಯೋಜನೆಯ ಜಾರಿಗೆ ಅಡ್ಡಿಯಾಯಿತು.

ಕೊರೋನಾ ಕಾರಣದಿಂದ ಮೋದಿ ಸರ್ಕಾರ ಇಷ್ಟು ದಿನಗಳವರೆಗೂ ಈ ಪಡಿತರ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಬಂದಿದೆ. ದಿಢೀರ್ ಲಾಕ್ ಡೌನ್, ಇದರಿಂದ ದೇಶಾದ್ಯಂತ ಕೋಟ್ಯಾಂತರ ಜನರು ಹಸಿವಿನಿಂದ ನರಳಿದ್ದು, ಸರ್ಕಾರಿ ಗೋದಾಮುಗಳಲ್ಲಿ ಲಕ್ಷಾಂತರ ಟನ್ ಆಹಾರ ಧಾನ್ಯಗಳ ದಾಸ್ತಾನಿದ್ದರೂ ಅದನ್ನು ಹಸಿದವರಿಗೆ ಹಂಚಿಕೆ ಮಾಡದ ಮೋದಿ ಸರ್ಕಾರದ ವಿರುದ್ದ ಲಾಕ್ ಡೌನ್ ದಿಕ್ಕರಿಸಿ ದೇಶದ ಹಲವೆಡೆ ನಡೆದ ಜನರ ಪ್ರತಿಭಟನೆಗಳು, ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿಂದ ಛೀಮಾರಿ, ಈ ಕಾರಣದಿಂದ ಒತ್ತಡಕ್ಕೆ ಮಣಿದ ಸರ್ಕಾರ ಬಿಪಿಎಲ್ ಕುಟುಂಬಗಳಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಿಸಲು ಮುಂದಾಯಿತು. ಕಳೆದ ತಿಂಗಳು ದಾನ್ಯಗಳ ಪ್ರಮಾಣವನ್ನು ಕಡಿತ ಮಾಡಲಾಗಿದೆಯಾದರೂ, ಇದರಲ್ಲಿ ಆಳುವ ಪಕ್ಷಕ್ಕೆ ಚುನಾವಣಾ ಭಯ, ಲಾಭವು ಇರುವ ಕಾರಣ ಇದನ್ನು ಸಂಪೂರ್ಣವಾಗಿ ಹಿಂಪಡೆದಿಲ್ಲ.

ಇದನ್ನು ಓದಿ: ನ್ಯಾಯ ವ್ಯವಸ್ಥೆಯನ್ನೂ ಬೆದರಿಸುವ ಭ್ರಷ್ಟಾಚಾರದ ಪೆಡಂಭೂತ

ಪಡಿತರ ವ್ಯವಸ್ಥೆಯೇ ನಾಶವಾಗುವ ಈ ಮುಕ್ತ ಆರ್ಥಿಕ ನೀತಿಗಳ ವಿರುದ್ದ ಈ ಪಕ್ಷಗಳು ಎಂದಾದರೂ ದ್ವನಿ ಎತ್ತಿ ಪ್ರತಿಭಟನೆ ಮಾಡಿವೆಯೇ? ಇಲ್ಲ ಎಂಬುದೇ ಸತ್ಯ. ಹೀಗಿರುವಾಗ ಇವರು ಉಚಿತವಾಗಿ ಅಕ್ಕಿ ಕೊಡಲು ಹೇಗೆ ಸಾಧ್ಯ? ಕೊಟ್ಟರೂ ಎಷ್ಟು ಕಾಲ ಕೊಡಲಾದೀತು?

ಮಹಿಳೆಯರಿಗೆ 2000 ರೂಪಾಯಿ ನೆರವು

ಇದಕ್ಕೆ ಸಂಪನ್ನೂಲ ಎಲ್ಲಿಂದ ಎಂಬ ಪ್ರಶ್ನೆ ಬದಿಗಿಡೋಣ. ಸರ್ಕಾರಗಳು ಮತ್ತಷ್ಟು ಸಾಲ ಮಾಡಿಯಾದರೂ ಇಂತಹ ನೆರವು ನೀಡಬಹುದು. ಇಂದು ಗೃಹಿಣಿಯರು ಅನುಭವಿಸುತ್ತಿರುವ ನೋವಿಗೆ ಕಾರಣಗಳು ಹಲವು. ಕುಟುಂಬದ ವಯಸ್ಕ ಸದಸ್ಯರಿಗೆ ಉದ್ಯೋಗ ಸಿಗದಿರುವುದು, ಬದುಕಲು ಅವಶ್ಯಕವಾದ ಕನಿಷ್ಟ ಕೂಲಿ ನಿಗದಿ ಇಲ್ಲದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆ, ತೆರಿಗೆ ಹೆಚ್ಚಳ, ದುಬಾರಿ ಶಿಕ್ಷಣ ಮತ್ತು ಆರೋಗ್ಯ ಸೇವೆ ಇತ್ಯಾದಿ. ಅಡುಗೆ ಅನಿಲದ ಮೇಲಿನ ಸಬ್ಸಿಡಿ ಹಿಂಪಡೆದು ಅದರ ಬೆಲೆ ಮೂರು ಪಟ್ಟು ಅಧಿಕವಾಗಿರುವುದು ಮತ್ತೊಂದು ಕಾರಣ. ತಿಂಗಳಿಗೆ 12 ಸಿಲಿಂಡರ್ ಬಳಕೆ ಮಾಡಿದರೆ, ಸಬ್ಸಿಡಿ ಕಡಿತದ ಮುನ್ನ ಮತ್ತು ನಂತರದ ವ್ಯಾತ್ಯಾಸ ಅಂದಾಜು ವರ್ಷವೊಂದರಲ್ಲಿ 7,000 ರೂಪಾಯಿಗಳಷ್ಟು ಅಧಿಕ ಹಣವನ್ನು ಕೇವಲ ಅಡುಗೆ ಅನಿಲದ ಖರೀದಿಗೆ ವೆಚ್ಚ ಮಾಡುತ್ತಿದ್ದಾರೆ. ಇನ್ನು ಪೆಟ್ರೋಲ್, ಡೀಸಲ್, ಅಡುಗೆ ಎಣ್ಣೆ ಸೇರಿದಂತೆ ಇತರೆ ಅಗತ್ಯ ವಸ್ತುಗಳ ಮೇಲಿನ ತೆರಿಗೆ ಹೆಚ್ಚಳದಿಂದ ಇವರು ತಮ್ಮ ಆದಾಯದ ಬಹುಪಾಲನ್ನು ಕಳೆದುಕೊಳ್ಳುತ್ತಿದ್ದಾರೆ.

ಅಡುಗೆ ಅನಿಲದ ಸಬ್ಸಿಡಿಯನ್ನು ಮತ್ತೆ ತರುತ್ತೇವೆ, 400 ರೂ.ಗಳಿಗೆ ಸಿಲಿಂಡರ್ ಸಿಗುವ ವ್ಯವಸ್ಥೆ ಮಾಡುತ್ತೇವೆ ಎಂದು ಈ ಯಾವುದಾದರೂ ಪಕ್ಷಗಳು ಆಶ್ವಾಸನೆ ಕೊಡುತ್ತವೆಯೇ? ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಮೇಲೆ ಹೆಚ್ಚಿಸಿರುವ ತೆರಿಗೆ ಹಿಂಪಡೆಯುತ್ತೇವೆ, ಅಗತ್ಯ ವಸ್ತುಗಳ ಬೆಲೆ ನಿಯಂತ್ರಣ ಮಾಡುತ್ತೇವೆ, ನಿರುದ್ಯೋಗ ಸಮಸ್ಯೆ ಬಗೆಹರಿಸುತ್ತೇವೆ, ಉದ್ಯೋಗ ಭದ್ರತೆ ನೀಡುತ್ತೇವೆ, ಕನಿಷ್ಟ ಕೂಲಿ ಹೆಚ್ಚಳ ಮಾಡುತ್ತೇವೆ, ಕೃಷಿ ಉತ್ಪನ್ನಗಳಿಗೆ ತಗುಲುವ ವೆಚ್ಚದ ಶೇಕಡಾ 50 ಸೇರಿಸಿ ಬೆಂಬಲ ಬೆಲೆ ನಿಗದಿ ಮಾಡುತ್ತೇವೆ, ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಬಲಪಡಿಸುತ್ತೇವೆ, ಟೋಲ್ ಸುಂಕ ಇಲ್ಲದ ಉತ್ತಮ ರಸ್ತೆ ನಿರ್ಮಾಣ ಮತ್ತು ಅಭಿವೃದ್ಧಿ ಮಾಡುತ್ತೇವೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಲಪಡಿಸುತ್ತೇವೆ….. ಇತ್ಯಾದಿ ಆಶ್ವಾಸನೆಗಳನ್ನು ಇವರಿಂದ ನಿರೀಕ್ಷಿಸಲಾದಿತೇ? ಪರ್ಯಾಯವೇ ಇಲ್ಲದ ಅವಕ್ಕೆ ಆಶ್ವಾಸನೆಗಳನ್ನು ನೀಡಲು ಏನಾದರೂ ಒಂದು ಮಿತಿ ಇವೆಯೇ?

ಮತದಾರರು ಪರ್ಯಾಯ ನೀತಿಗಳೇ ಇಲ್ಲದ ಇಂತಹ ರಾಜಕೀಯ ಪಕ್ಷಗಳು ನೀಡುವ ಇಂತಹ ಪೊಳ್ಳು ಆಶ್ವಾಸನೆಗಳಿಗೆ ಮತ್ತು ಅಲ್ಪಕಾಲದ ಕೊಡುಗೆಗಳಿಗೆ ಮರುಳಾಗಬಾರದು. ಇಂತಹ ಕೊಡುಗೆಗಳಿಂದ ಜನತೆಯ ಮತ್ತು ದೇಶದ ಇಂದಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಾರದು. ಮಾತ್ರವಲ್ಲ, ಸಮಸ್ಯೆಗಳು ಮತ್ತಷ್ಟು ಉಲ್ಬಣಗೊಳ್ಳುತ್ತವೆ. ಜನತೆ ಪರ್ಯಾಯ ನೀತಿಗಳ ಕುರಿತು ಚಿಂತಿಸುವ ಅವಶ್ಯಕತೆ ಇದೆ. ಮತ್ತು ನೈಜ ಪರ್ಯಾಯ ನೀತಿಗಳುಳ್ಳ ರಾಜಕೀಯ ಪಕ್ಷಗಳು ಹಾಗೂ ಶಕ್ತಿಗಳನ್ನು (ಅವು ಎಷ್ಟೇ ಸಣ್ಣ ಪ್ರಮಾಣದಲ್ಲಿದ್ದರೂ) ಬೆಂಬಲಿಸಿ ಬೆಳೆಸುವ ಅವಶ್ಯಕತೆ ಇದೆ. ಭವಿಷ್ಯದ ಹಿತದೃಷ್ಟಿಯಿಂದ ಇದರ ಅಗತ್ಯವಿದೆ.

ಇದನ್ನು ಓದಿ: ಚುನಾವಣೆ ಆಯೋಗವನ್ನು ಬುಡಮೇಲು ಮಾಡುವ ಕೃತ್ಯ

ಸಂಪನ್ಮೂಲದ ಕ್ರೋಡೀಕರಣ ಹೇಗೆ?

ಸಾಲದ ಕಂತು ಪಾವತಿಸಲು ಹಣ ಬೇಕು. ಸಾಲದ ಮೇಲಿನ ಬಡ್ಡಿ ಪಾವತಿಗೆ ಹಣ ಬೇಕು. ರಾಜ್ಯದ ಅಭಿವೃದ್ಧಿಗೆ ಹಣ ಬೇಕು. ಜನಪರವಾದ ಕಲ್ಯಾಣ ಕಾರ್ಯಕ್ರಮಗಳಿಗೆ ಹಣ ಬೇಕು. ಸರ್ಕಾರದ ನಿರ್ವಹಣೆಗೆ ಹಣ ಬೇಕು. ಈಗಾಗಲೇ ಜಾರಿಯಲ್ಲಿರುವ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಹಣ ಬೇಕು. ರಾಜಕೀಯ ಪಕ್ಷಗಳು ಈಗ ನೀಡುತ್ತಿರುವ ಆಶ್ವಾಸನೆಗಳನ್ನು ಪೂರೈಸಲು ಮತ್ತಷ್ಟು ಹಣ ಬೇಕು. ಹೀಗೆ ಅವಶ್ಯಕವಿರುವ ಹಣವನ್ನು ಹೇಗೆ ಕ್ರೋಡಿಕರಿಸುತ್ತೇವೆ ಎಂಬ ನಿರ್ದಿಷ್ಟ ಯೋಜನೆಗಳನ್ನು ಈ ಯಾವ ಪಕ್ಷಗಳೂ ಹೇಳುತ್ತಿಲ್ಲ.

ರಾಜ್ಯದ ಮೇಲಿನ ಈ ಬೃಹತ್ ಪ್ರಮಾಣದ ಸಾಲ ಕಡಿಮೆ ಮಾಡಿಕೊಳ್ಳಲು ತಮ್ಮ ಬಳಿ ಯಾವ ಮಾರ್ಗಗಳಿವೆ? ಸಾಲದ ಮೇಲಿನ ಬಡ್ಡಿ ಹೊರೆ ಕಡಿಮೆ ಮಾಡಿಕೊಳ್ಳುವುದು ಹೇಗೆ? ಭಾರತದ ಒಕ್ಕೂಟ ಸರ್ಕಾರದಿಂದ ಬರಬೇಕಾದ ರಾಜ್ಯದ ತೆರಿಗೆ ಪಾಲನ್ನು ಪಡೆಯಲು ಒಕ್ಕೂಟ ಸರ್ಕಾರದ ಮೇಲೆ ಹೇಗೆ ಒತ್ತಡ ತರುತ್ತೇವೆ?  ರಾಜ್ಯದ ಆದಾಯ ಹೆಚ್ಚಿಸಲು ತಮ್ಮ ಬಳಿ ಯಾವ ಯೋಜನೆಗಳಿವೆ? ಈ ಪ್ರಶ್ನೆಗಳಿಗೆ ಈ ರಾಜಕೀಯ ಪಕ್ಷಗಳ ಬಳಿಯೂ ಉತ್ತರಗಳಿಲ್ಲ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *