ರೈತರು ರಸಗೊಬ್ಬರದ ತೀವ್ರ ಕೊರತೆಯಿಂದ ಪರದಾಡುತ್ತಿರುವಾಗ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಮಂತ್ರಿ ಮನ್ಸುಖ್ ಮಾಂಡವಿಯ ಕೊರತೆಯ ಮಾತು ಕೇವಲ “ಊಹಾಪೋಹ” ಎಂದು ನಿರಾಕರಿಸಿದ್ದಾರೆ. ಇಷ್ಟೇ ಅಲ್ಲ, ಅವರು ರೈತರನ್ನೇ ದೂಷಿಸುತ್ತ ರಸಗೊಬ್ಬರ ಕಳ್ಳ ದಾಸ್ತಾನು ಮಾಡಬೇಡಿ ಎಂದಿದ್ದಾರೆ. ಇದು ರೈತರ ಬಗ್ಗೆ ತೀವ್ರ ನಿರ್ಲಕ್ಷ್ಯದ ನಿಲುವು ಎಂದು ಅಖಿಲ ಭಾರತ ಕಿಸಾನ್ ಸಭಾ(ಎಐಕೆಎಸ್) ಇದನ್ನು ಖಂಡಿಸಿದೆ.
ತಕ್ಷಣವೇ ಸರಿಪಡಿಕೆ ಕ್ರಮಗಳನ್ನು ಕೈಗೊಳ್ಳದಿದ್ದರೆ ರೈತಾಪಿ ಜನಗಳು ಮತ್ತು ಒಟ್ಟಾರೆಯಾಗಿ ಕೃಷಿ ಗಂಭೀರ ದುಷ್ಪರಿಣಾಮಗಳನ್ನು ಎದುರಿಸಬೇಕಾಗಿ ಬರುತ್ತದೆ ಎಂದಿರುವ ಎಐಕೆಎಸ್ ತಕ್ಷಣವೇ ಕೇಂದ್ರ ಸರಕಾರ ಹೆಚ್ಚುವರಿ ರಸಗೊಬ್ಬರ ಪೂರೈಕೆಗಳನ್ನು ಪಡೆಯಲು ಮೂಲಗಳನ್ನು ಗುರುತಿಸಲು ಒಂದು ಉನ್ನತ ಮಟ್ಟದ ಕಾರ್ಯಪಡೆಯನ್ನು ರಚಿಸಬೇಕು, ಎನ್ಬಿಎಸ್ ಸ್ಕೀಮಿನ ಅಡಿಯಲ್ಲಿ ಎಲ್ಲ ರಸಗೊಬ್ಬರಗಳಿಗೆ ಬೆಲೆ ಹತೋಟಿಗಳನ್ನು ತರಬೇಕು ಹಾಗೂ ರಸಗೊಬ್ಬರಗಳ ರಾಷ್ಟ್ರೀಯ ಉತ್ಪಾದನೆಯನ್ನು ಹೆಚ್ಚಿಸಲು ಒಂದು ಮಾರ್ಗನಕಾಶೆಯನ್ನು ಮತ್ತು ರಸಗೊಬ್ಬರಗಳ ದಾಸ್ತಾನನ್ನು ಸಾಕಷ್ಟು ಪ್ರಮಾಣದಲ್ಲಿ ಖಾತ್ರಿಪಡಿಸುವ ಒಂದು ವ್ಯವಸ್ಥೆಯನ್ನು ಸಿದ್ಧಪಡಿಸಲು ಪರಿಣಿತರ ಒಂದು ಉನ್ನತ ಮಟ್ಟದ ಸಮಿತಿಯನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದೆ.
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ದೇಶದ ಕೃಷಿ ಮತ್ತು ಆಹಾರ ಭದ್ರತೆಗೆ ಕೊವಿಡ್-19 ಮಹಾಸೋಂಕು ಉಂಟು ಮಾಡಿರುವ ಅಡ್ಡಿ-ಆತಂಕಗಳು ಮತ್ತು ಹಾವಳಿಯನ್ನು ಸರಿಯಾಗಿ ಪರಿಗಣಿಸುತ್ತಿಲ್ಲ, ಮಹಾಸೋಂಕು ಮತ್ತು ಲಾಕ್ಡೌನ್ ಹೊರತಾಗಿಯೂ ಕೃಷಿ ರಂಗ ಬೆಳವಣಿಗೆ ಮಾಡುತ್ತಲೇ ಇದೆ ಎಂದು ರಾಗ ಹಾಡುತ್ತಿದೆ. ಈ “ಎಲ್ಲವೂ ಚೆನ್ನಾಗಿದೆ” ನಿಲುವನ್ನು ಮೂರು ದಶಕಗಳ ನವ-ಉದಾರವಾದಿ ಧೋರಣೆಗಳು ಹುಟ್ಟುಹಾಕಿರುವ ಛಿದ್ರಗಳ ಜತೆಗೆ ಅರ್ಥವ್ಯವಸ್ಥೆಯನ್ನು ನಾಶಗೊಳಿಸುತ್ತಿರುವ ತನ್ನ ಎರ್ರಾಬರ್ರಿ ಕ್ರಮಗಳು ಮತ್ತು ರೈತರ ಆರ್ಥಿಕ ಹತಾಶೆ ಮುಂದುವರೆಯುತ್ತಿರುವುದನ್ನು ಮುಚ್ಚಿ ಹಾಕಲು ಬಳಸಿಕೊಳ್ಳಲಾಗುತ್ತಿದೆ ಎಂದು ಎಐಕೆಎಸ್ ಹೇಳಿದೆ.
ಸರಕಾರಗಳ ಧೋರಣೆಗಳೇ ಕಾರಣ
ಇಂತಹ ನಿಲುವಿನಿಂದಾಗಿಯೇ ಈ ಸರಕಾರ ರೈತರಿಗೆ ಸಾಕಷ್ಟು ಪ್ರಮಾಣದಲ್ಲಿ ರಸಗೊಬ್ಬರದ ಲಭ್ಯತೆಯನ್ನು ಖಾತ್ರಿಪಡಿಸಲು ಯಾವುದೇ ಪ್ರಯತ್ನಗಳನ್ನು ಮಾಡಿಲ್ಲ. ಕಳೆದ ಮೂರು ದಶಕಗಳಲ್ಲಿ ಸತತವಾಗಿ ಸಾರ್ವಜನಿಕ ವಲಯ ಮತ್ತು ದೇಶೀ ರಸಗೊಬ್ಬರ ಉತ್ಪಾದನಾ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತಾ ಬರಲಾಗಿದೆ. ದೇಶ ರಸಗೊಬ್ಬರಕ್ಕಾಗಿ ಆಮದನ್ನೇ ಹೆಚ್ಚುಹೆಚ್ಚಾಗಿ ಅವಲಂಬಿಸುವಂತಾಗಿದೆ. 2020ರಲ್ಲಿ ಒಟ್ಟು ಪೂರೈಕೆಯಲ್ಲಿ 25% ಯೂರಿಯ, 68% ಡಿಎಪಿ ಮತ್ತು 100% ಪೊಟಾಶನ್ನು ಆಮದು ಮಾಡಿಕೊಳ್ಳಲಾಗಿದೆ. ಭಾರತದಲ್ಲಿ ತಯಾರಿಸುವ ರಸಗೊಬ್ಬರಕ್ಕೂ ಫೋಸ್ಫಾಟಿಕ್ ರಾಕ್, ಪೋಸ್ಪಾಟಿಕ್ ಆಸಿಡ್ ಮತ್ತು ನೈಸರ್ಗಿಕ ಅನಿಲದಂತಹ ಪ್ರಮುಖ ಕಚ್ಚಾವಸ್ತುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ವಿಭಿನ್ನ ಸರಕಾರಗಳು ಸಾರ್ವಜನಿಕ ವಲಯದ ರಸಗೊಬ್ಬರ ಸ್ಥಾವರಗಳನ್ನು ವ್ಯವಸ್ಥಿತವಾಗಿ ಕಳಚಿ ಹಾಕಿವೆ. ಮತ್ತು ಯೂರಿಯ ತಯಾರಿಕಾ ಘಟಕಗಳನ್ನು ಹೆಚ್ಚಿಸುವುದರ ಬಗ್ಗೆ ಗಮನ ಕೊಡಲಿಲ್ಲ. ಆಗ ವಿಪರೀತ ಅಂತರ್ರಾಷ್ಟ್ರೀಯ ಬೆಲೆಗಳ ಪರಿಣಾಮವನ್ನು ಸ್ವಲ್ಪಮಟ್ಟಿಗಾದರೂ ಸರಿಹೊಂದಿಸಲು ಸಾಧ್ಯವಾಗುತ್ತಿತ್ತು ಎಂದು ಎಐಕೆಎಸ್ ಹೇಳಿದೆ.
ಭಾರತದ ಆಹಾರ ಭದ್ರತೆಗೆ ರಸಗೊಬ್ಬರದ ಪೂರೈಕೆ ಬಹಳ ಮಹತ್ವದ್ದು. ಆದ್ದರಿಂದ ಇದರ ಪೂರೈಕೆಯ ಸರಣಿಯಲ್ಲಿ ಅಡ್ಡಿಯುಂಟಾಗದಂತೆ ನೋಡಿಕೊಳ್ಳಲು ಕೊವಿಡ್-19 ಅಥವ ಅಂತರ್ರಾಷ್ಟ್ರೀಯ ಬೆಲೆಯೇರಿಕೆಯ ದುಷ್ಪರಿಣಾಮಗಳು ಉಂಟಾಗುವುದನ್ನು ತಪ್ಪಿಸುವ ಕ್ರಮಗಳನ್ನು ಕೈಗೊಳ್ಳಬೇಕಾಗಿತ್ತು. ಆದರೆ, 2021ರಲ್ಲಿ ರಸಗೊಬ್ಬರಗಳ ಬೆಲೆಗಳು ಏರಲಾರಂಭಿಸಿದಾಗ, ಕಚ್ಚಾ ವಸ್ತುಗಳು ಮತ್ತು ರಸಗೊಬ್ಬರದ ದಾಸ್ತಾನುಗಳನ್ನು ನಿರ್ಮಿಸಲು ಕ್ರಮಗಳನ್ನು ಕೈಗೊಳ್ಳುವ ಬದಲು, ಭಾರತ ಸರಕಾರ ಹೆಚ್ಚಿದ ಉತ್ಪಾದನಾ ಖರ್ಚನ್ನು ತುಂಬಿಕೊಳ್ಳಲು ಹೆಚ್ಚುವರಿ ಸಬ್ಸಿಡಿಗಳನ್ನು ಒದಗಿಸಿತು. ಎನ್ಬಿಎಸ್ ಸ್ಕೀಮಿನ ಅಡಿಯಲ್ಲಿ ಹೆಚ್ಚಿನ ರಸಗೊಬ್ಬರಗಳ ಬೆಲೆಗಳನ್ನು ನಿಯಂತ್ರಣಹೀನಗೊಳಿಸಿರುವುದರಿಂದಾಗಿ ಸರಕಾರ ಒದಗಿಸಿದ ಸಬ್ಡಿಡಿಗಳೆಲ್ಲವೂ ರಸಗೊಬ್ಬರಗಳ ಬೆಲೆಗಳಲ್ಲಿ ಇಳಿಕೆಗಳಾಗಿ ಬಿಡುವುದಿಲ್ಲ. ವಿಧಾನಸಭಾ ಚುನಾವಣೆಗಳು ಮುಗಿಯುವ ವರೆಗೆ ರಸಗೊಬ್ಬರದ ಬೆಲೆಗಳನ್ನು ಉತ್ಪಾದಕಾ ಕಂಪನಿಗಳು ಏರಿಸದಂತೆ ಸರಕಾರ ಒತ್ತಡ ಹಾಕಿತಷ್ಟೇ. ಹೀಗೆ ಹೆಚ್ಚುವರಿ ಎನ್ಬಿಎಸ್ ಸಬ್ಸಿಡಿಗಳು ರಸಗೊಬ್ಬರ ಕಂಪನಿಗಳ ಜೇಬುಗಳಿಗೆ ಹೋದವು, ಅದರಿಂದ ರೈತರಿಗೇನೂ ಪ್ರಯೋಜನವಾಗಲಿಲ್ಲ ಎಂದು ಎಐಕೆಎಸ್ ಹೇಳಿದೆ.
ಕೇಂದ್ರ ಸರಕಾರದ ನಿಷ್ಕ್ರಿಯತೆ
ನಿರ್ದಿಷ್ಟವಾಗಿ, ಹಿಂಗಾರು ಬಿತ್ತನೆಯ ಮೊದಲು ರಸಗೊಬ್ಬರದ ಲಭ್ಯತೆ ಸಾಕಷ್ಟು ಇರುವಂತೆ ದಾಸ್ತಾನು ಮಾಡಲು ಭಾರತ ಸರಕಾರ ಏನನ್ನೂ ಮಾಡಲಿಲ್ಲ. ಈ ವರ್ಷದ ಮಾರ್ಚ್ ಮತ್ತು ಸಪ್ಟಂಬರ್ ನಡುವೆ ಡಿಎಪಿಯ ಪೂರೈಕೆ(ಉತ್ಪಾದನೆ ಮತ್ತು ಆಮದು) ಕಳೆದ ವರ್ಷ ಇದೇ ಅವಧಿಯಲ್ಲಿ ಇದ್ದುದಕ್ಕಿಂತ 31%ದಷ್ಟು ಕಡಿಮೆ ಇತ್ತು. ಅದೇ ರೀತಿ ಪೊಟಾಶ್ನ ಪೂರೈಕೆಯಲ್ಲಿ 68%ದಷ್ಟು ಇಳಿಕೆ ಇತ್ತು.
ಅಕ್ಟೋಬರ್ 31, 20201ರ ವೇಳೆಗೆ ಡಿಎಪಿ ದಾಸ್ತಾನು 14.63 ಲಕ್ಷ ಟನ್. 2020 ಮತ್ತು 2019ರಲ್ಲಿ ಇದು ಅನುಕ್ರಮವಾಗಿ 44.95ಲಕ್ಷ ಟನ್ ಮತ್ತು 64 ಲಕ್ಷ ಟನ್. ಎಂಒಪಿ ದಾಸ್ತಾನು 2020 ಮತ್ತು 2019ರಲ್ಲಿ ಅನುಕ್ರಮವಾಗಿ 21.7 ಲಕ್ಷ ಟನ್ ಮತ್ತು 21.52 ಲಕ್ಷ ಟನ್ ಇದ್ದರೆ ಈ ವರ್ಷ ಅದು 7.82 ಲಕ್ಷ ಟನ್ಗೆ ಇಳಿದಿದೆ. ಇದರೊಂದಿಗೇ ಬೆಲೆಗಳೂ ಏರಿದವು, ಏಕೆಂದರೆ ಸರಕಾರ ಸಬ್ಸಿಡಿ ಹೆಚ್ಚಳವನ್ನಾಗಲೀ, ಬೆಲೆ ನಿಯಂತ್ರಣದ ಧೋರಣೆಯನ್ನಾಗಲೀ ಪ್ರಕಟಿಸಲಿಲ್ಲ ಎಂದಿರುವ ಎಐಕೆಎಸ್ ಖಾಸಗೀಕರಣಗೊಂಡ ಮತ್ತು ಅನಿಯಂತ್ರಿತಗೊಂಡ ವ್ಯವಸ್ಥೆಯಲ್ಲಿ ದೊಡ್ಡ ಪ್ರಮಾಣದಲ್ಲಿ ರಸಗೊಬ್ಬರಗಳ ವ್ಯಾಪಕ ಕಳ್ಳದಾಸ್ತಾನು ಮತ್ತು ಕಾಳಸಂತೆ ನಡೆಯುತ್ತಿದೆ. ಇನ್ನೊಂದೆಡೆಯಲ್ಲಿ ರೈತರು ದಿನಗಟ್ಟಲೆ ಸರತಿಯ ಸಾಲುಗಳಲ್ಲಿ ನಿಂತರೂ ರಸಗೊಬ್ಬರಗಳು ಸಿಗದಂತಾಯಿತು. ಉತ್ತರಪ್ರದೇಶದ ಬುಂದೇಲಖಂಡ ಪ್ರದೇಶದಲ್ಲಿ ಎರಡು-ಮೂರು ದಿನ ಸರತಿಯ ಸಾಲಿನಲ್ಲಿ ನಿಂತು ಸುಸ್ತಾಗಿದ್ದ 5 ರೈತರು ಪ್ರಾಣ ಕಳಕೊಂಡರು ಎಂದು ವರದಿಯಾಗಿದೆ. ಮಧ್ಯಪ್ರದೇಶದಲ್ಲಿ ಒಬ್ಬ ರೈತರು ಮತ್ತು ಉತ್ತರಪ್ರದೇಶದಲ್ಲಿ ಇನ್ನೊಬ್ಬರು ಸಾಲ ತಗೊಂಡಿದ್ದವರು ರಸಗೊಬ್ಬರ ಸಿಗದ್ದರಿಂದ ಆತ್ಮಹತ್ಯೆ ಮಾಡಿಕೊಂಡರು ಎಂದೂ ವರದಿಯಾಗಿದೆ.
ಆದ್ದರಿಂದ ತಕ್ಷಣವೇ ಸರಿಪಡಿಕೆ ಕ್ರಮಗಳನ್ನು ಕೈಗೊಳ್ಳದಿದ್ದರೆ ರೈತಾಪಿ ಜನಗಳು ಮತ್ತು ಒಟ್ಟಾರೆಯಾಗಿ ಕೃಷಿ ಗಂಭೀರ ದುಷ್ಪರಿಣಾಮಗಳನ್ನು ಎದುರಿಸಬೇಕಾಗಿ ಬರುತ್ತದೆ ಎಂದಿರುವ ಅಖಿಲ ಭಾರತ ಕಿಸಾನ್ ಸಭಾ ತಕ್ಷಣವೇ ಕೇಂದ್ರ ಸರಕಾರ ಹೆಚ್ಚುವರಿ ರಸಗೊಬ್ಬರ ಪೂರೈಕೆಗಳನ್ನು ಪಡೆಯಲು ಮೂಲಗಳನ್ನು ಗುರುತಿಸಲು ಒಂದು ಉನ್ನತ ಮಟ್ಟದ ಕಾರ್ಯಪಡೆಯನ್ನು ರಚಿಸಬೇಕು, ಎನ್ಬಿಎಸ್ ಸ್ಕೀಮಿನ ಅಡಿಯಲ್ಲಿ ಎಲ್ಲ ರಸಗೊಬ್ಬರಗಳಿಗೆ ಬೆಲೆ ಹತೋಟಿಗಳನ್ನು ತರಬೇಕು ಹಾಗೂ ರಸಗೊಬ್ಬರಗಳ ರಾಷ್ಟ್ರೀಯ ಉತ್ಪಾದನೆಯನ್ನು ಹೆಚ್ಚಿಸಲು ಒಂದು ಮಾರ್ಗನಕಾಶೆಯನ್ನು ಮತ್ತು ರಸಗೊಬ್ಬರಗಳ ದಾಸ್ತಾನನ್ನು ಸಾಕಷ್ಟು ಪ್ರಮಾಣದಲ್ಲಿ ಖಾತ್ರಿಪಡಿಸುವ ಒಂದು ವ್ಯವಸ್ಥೆಯನ್ನು ಸಿದ್ಧಪಡಿಸಲು ಪರಿಣಿತರ ಒಂದು ಉನ್ನತ ಮಟ್ಟದ ಸಮಿತಿಯನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದೆ.