`ಸ್ವಾತಂತ್ರ್ಯ’ವೆನ್ನುವ ಪರಿಕಲ್ಪನೆ ಮತ್ತು ಪ್ರತಿಪಾದನೆಯು ಏಕರೂಪಿಯಾದುದಲ್ಲ. ಅದರಲ್ಲೂ ಜಾತಿ, ವರ್ಣ, ವರ್ಗ, ಲಿಂಗತಾರತಮ್ಯಗಳಿಂದ ತತ್ತರಿಸುತ್ತಿರುವ ಭಾರತದಲ್ಲಿ ಏಕರೂಪಿಯಾಗಿರಲು ಸಾಧ್ಯವಿಲ್ಲ. ಸ್ವಾತಂತ್ರ್ಯದ ಪ್ರತಿಪಾದನೆಯನ್ನು ಯಾರು, ಯಾವ ನೀತಿ ನಿಲುವುಗಳ ಆವರಣದಲ್ಲಿ ನಿಂತು ಮಾಡುತ್ತಾರೆಂಬ ಅಂಶ ಕೂಡ ಮುಖ್ಯವಾಗುತ್ತದೆ. ನೀತಿ ನಿಲುವುಗಳ ಆಧಾರದಲ್ಲಿ ಅದು ಯಾರ ಪರವಾದ ಸ್ವಾತಂತ್ರ್ಯವೆಂಬ ವಿಚಾರ ಸ್ಪಷ್ಟವಾಗುತ್ತದೆ. ಸ್ವಾತಂತ್ರ್ಯ ಚಳವಳಿಯ ಸಂದರ್ಭವನ್ನೇ ಗಮನಿಸಿ – ಗಾಂಧಿ, ಅಂಬೇಡ್ಕರ್ ಮತ್ತು ಕಾರ್ಲ್ ಮಾರ್ಕ್ಸ್ ಪ್ರಣೀತ ಕಮ್ಯುನಿಸ್ಟರನ್ನೂ ಒಳಗೊಂಡಂತೆ ರೈತರು, ದಲಿತರು, ಬುಡಕಟ್ಟು ಜನರು ಎಲ್ಲ ಹೋರಾಟಗಾರರೂ ತಮ್ಮದೇ ನೆಲೆಗಳಿಂದ ಸ್ವಾತಂತ್ರ್ಯದ ಪ್ರತಿಪಾದನೆಯನ್ನೇ ಮಾಡುತ್ತಿದ್ದರು. ಸ್ವಾತಂತ್ರ್ಯವೆನ್ನುವುದು ಕೆಲವೊಮ್ಮೆ ಸಾಂದರ್ಭಿಕ ಹಕ್ಕೊತ್ತಾಯವಾಗಿ, ವಿಶಾಲಾರ್ಥದಲ್ಲಿ ಸಮಗ್ರ ಸ್ವಾತಂತ್ರ್ಯದ ಮುನ್ನೋಟವಾಗಿ ಪ್ರಕಟಗೊಂಡಿತು. ಗಾಂಧಿಯವರ ವಿಚಾರವನ್ನೇ ತೆಗೆದುಕೊಳ್ಳಿ.
– ಬರಗೂರು ರಾಮಚಂದ್ರಪ್ಪ
“ಸ್ವರಾಜ್ಯದ ನನ್ನ ತಿಳಿವಳಿಕೆಯೆಂದರೆ ಪರಕೀಯ ನಿಯಂತ್ರಣದಿಂದ ನಾವು ಸಂಪೂರ್ಣವಾಗಿ ಸ್ವತಂತ್ರರಾಗಬೇಕು. ಒಂದು ತುದಿಯಲ್ಲಿ ರಾಜಕೀಯ ಸ್ವಾತಂತ್ರ್ಯ, ಇನ್ನೊಂದು ತುದಿಯಲ್ಲಿ ಆರ್ಥಿಕ ಸ್ವಾವಲಂಬನೆ – ಹೀಗೆ ಸ್ವರಾಜ್ಯವು ದ್ವಿಮುಖವಾಗಿದೆ” ಎನ್ನುತ್ತಾ, ಅದೇ ಉಸಿರಿನಲ್ಲಿ ನೈತಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯವನ್ನು ಗಾಂಧೀಜಿ ಪ್ರತಿಪಾದಿಸಿದರು. (1937) ಅಂಬೇಡ್ಕರ್ ಅವರು ಪ್ರಜಾಪ್ರಭುತ್ವವನ್ನು ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ನೆಲೆಗಳಲ್ಲಿ ವಿಂಗಡಿಸಿ, “ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತೆಗಳ ಸಾಮಾಜಿಕ ಪ್ರಜಾಪ್ರಭುತ್ವ”ವನ್ನು ಪ್ರಬಲವಾಗಿ ಪ್ರತಿಪಾದಿಸಿದರು. ಇದಕ್ಕೆ “ಆರ್ಥಿಕ ಪ್ರಜಾಪ್ರಭುತ್ವದ ಬೆಂಬಲ ಬೇಕೇ ಬೇಕು” ಎಂದರು (1949). ಕಮ್ಯುನಿಸ್ಟರು ವಿದೇಶಿ ಮತ್ತು ಸ್ವದೇಶಿ ಬಂಡವಾಳಗಾರರಿಗೆ ವಿರೋಧ ಒಡ್ಡುತ್ತಲೇ ಬ್ರಿಟಿಷ್ ವಿರೋಧಿ ಹೋರಾಟದಲ್ಲೂ ಇದ್ದರು. ಈ ಎಲ್ಲ ಪ್ರಕ್ರಿಯೆಗೆ ಪೂರಕವಾಗಿ ನೆಲ್ಸನ್ ಮಂಡೆಲಾ ಅವರ ಮುಂದಿನ ಮಾತು ಉತ್ತಮ ನಿದರ್ಶನವಾಗುತ್ತದೆ: “ನಾವು ಬಿಳಿಯರ ವಿರುದ್ಧ ಹೋರಾಡುತ್ತಿದ್ದೇವೆ; ನಿಜ. ಆದರೆ ನನ್ನ ಕನಸಿನ ಸ್ವತಂತ್ರ ದಕ್ಷಿಣ ಆಫ್ರಿಕಾದಲ್ಲಿ ಕರಿಯರೂ ಮೇಲುಗೈ ಸಾಧಿಸಬಾರದು, ಬಿಳಿಯರೂ ಮೇಲುಗೈ ಸಾಧಿಸಬಾರದು.”
ಸ್ವಾತಂತ್ರ್ಯವೆಂಬ ಪರಿಕಲ್ಪನೆಯನ್ನು ಕುರಿತ ಈ ಎಲ್ಲ ಪ್ರತಿಪಾದನೆಗಳಲ್ಲಿ ಸಮಾನತೆಯೇ ಕೇಂದ್ರಪ್ರಜ್ಞೆಯಾಗಿದೆ. ಜೊತೆಗೆ ಉಳ್ಳವರಿಂದ ವಿಮೋಚನೆಗೊಳ್ಳುವ ಒಂದು ಪರಿಕಲ್ಪನೆಯೂ ಅಂತರ್ಗತವಾಗಿದೆ. ಸ್ವಾತಂತ್ರ್ಯದ ಬಗ್ಗೆ ಇಷ್ಟೆಲ್ಲ ವಿವರಿಸಲು ಕಾರಣವಾದದ್ದು, ಇತ್ತೀಚೆಗೆ ಕೇಂದ್ರ ಮತ್ತು ನಮ್ಮ ರಾಜ್ಯ ಸರ್ಕಾರ, ಜಾರಿಗೊಳಿಸಲಿರುವ ತಿದ್ದುಪಡಿ ಕೃಷಿ ಕಾಯಿದೆಗಳ ಸ್ವರೂಪ.
ಕೇಂದ್ರ ಮತ್ತು ರಾಜ್ಯಸರ್ಕಾರ, ಜಾರಿಮಾಡುತ್ತಿರುವ ಎ.ಪಿ.ಎಂ.ಸಿ. ತಿದ್ದುಪಡಿ ಕಾಯಿದೆ, ರಾಜ್ಯದ ಭೂ ಸುಧಾರಣಾ ತಿದ್ದುಪಡಿಕಾಯಿದೆ, ಕೇಂದ್ರದ ವಿದ್ಯುಚ್ಛಕ್ತಿ ಕಾಯಿದೆ, ಕೃಷಿ ಗುತ್ತಿಗೆ ಕಾಯಿದೆ – ಇವೇ ಮುಂತಾದವು ಈಗ ವಿವಾದದ ಕೇಂದ್ರವಾಗಿವೆ. ವಿಶೇಷವಾಗಿ ಎ.ಪಿ.ಎಂ.ಸಿ ಮತ್ತು ಭೂ ಸುಧಾರಣೆ ತಿದ್ದುಪಡಿ ಕಾಯಿದೆಗಳು ಮುಂಚೂಣಿಯ ಪರ-ವಿರೋಧದ ಪ್ರತಿಪಾದನೆಗೆ ಕಾರಣವಾಗಿವೆ. ಎ.ಪಿ.ಎಂ.ಸಿ. ತಿದ್ದುಪಡಿ ಕಾಯಿದೆ ಪ್ರಕಾರ ರೈತರು ತಮ್ಮ ಬೆಳೆಯನ್ನು ಎ.ಪಿ.ಎಂ.ಸಿಯಲ್ಲಿ ಮಾರಾಟ ಮಾಡುವುದು ಕಡ್ಡಾಯವಲ್ಲ. ಭೂ ಸುಧಾರಣೆ ತಿದ್ದುಪಡಿ ಕಾಯಿದೆ ಪ್ರಕಾರ ಕೃಷಿ ಭೂಮಿಯ ಮಾರಾಟಕ್ಕಿದ್ದ, ನಿಯಂತ್ರಣವನ್ನು ಸಡಿಲಗೊಳಿಸಿದ್ದು, ಕೃಷಿ ಮಾಡದೇ ಇರುವವರು ಕೂಡ ಖರೀದಿಸಬಹುದು. ಹೀಗೆ ಖರೀದಿಸುವವರು ಹಿಂದೆ ಇದ್ದ ನಿಯಮದಂತೆ ಸರ್ಕಾರಕ್ಕೆ ಮಾಹಿತಿ ನೀಡುವ ಅಗತ್ಯವಿಲ್ಲ. ಈ ಕಾಯಿದೆಗಳಲ್ಲಿ ಇನ್ನೂ ಕೆಲವು ತಿದ್ದುಪಡಿಗಳಿದ್ದರೂ ಈ ಅಂಶಗಳು ಪ್ರಧಾನವಾಗಿ ವಿವಾದಕ್ಕೆ ಒಳಗಾಗಿವೆ.
ಪ್ರಧಾನ ಮಂತ್ರಿಗಳಾದಿಯಾಗಿ ನಮ್ಮ ಮುಖ್ಯಮಂತ್ರಿಗಳು ಸೇರಿದಂತೆ ಒಕ್ಕೊರಲಿನಿಂದ ಹೇಳುತ್ತಿರುವುದು ಈ ಕಾಯಿದೆಗಳು ರೈತರಿಗೆ ಸ್ವಾತಂತ್ರ್ಯ ಕೊಟ್ಟಿವೆ – ಎಂದು. ಅಷ್ಟೇ ಅಲ್ಲ `ಇವು ರೈತ ಸ್ವಾತಂತ್ರ್ಯದ ಐತಿಹಾಸಿಕ ಕಾಯಿದೆಗಳು’ ಎಂಬ ಪ್ರಬಲ ಪ್ರತಿಪಾದನೆಯನ್ನು ಇವರು ಮಾಡುತ್ತಲೇ ಇದ್ದಾರೆ. ಆದರೆ ಕರ್ನಾಟಕವನ್ನೂ ಒಳಗೊಂಡಂತೆ ಪಂಜಾಬ್, ಹರಿಯಾಣ ಮುಂತಾದ ರಾಜ್ಯಗಳ ರೈತರು ರೊಚ್ಚಿಗೆದ್ದು ರಸ್ತೆಗಿಳಿದು ಕಾಯಿದೆಗಳನ್ನು ವಿರೋಧಿಸುತ್ತಿದ್ದಾರೆ. ಈ ಕಾಯಿದೆಗಳು ರೈತರಿಗೆ ಸ್ವಾತಂತ್ರ್ಯ ಕೊಡುವ ಮಾತಿರಲಿ ಬದುಕನ್ನೇ ಬಲಿತೆಗೆದುಕೊಳ್ಳುವ ಭೀಕರ ಭವಿಷ್ಯಕ್ಕೆ ನಾಂದಿ ಎನ್ನುತ್ತಿದ್ದಾರೆ.
ರೈತರು ಸರ್ಕಾರ ಪ್ರತಿಪಾದಿಸುವ ಸ್ವಾತಂತ್ರ್ಯವನ್ನು ಧಿಕ್ಕರಿಸುತ್ತಿರುವುದೇಕೆ? ಉತ್ತರ ಸ್ಪಷ್ಟ; “ಈ ಸ್ವಾತಂತ್ರ್ಯ ನಮಗಲ್ಲ; ಖಾಸಗಿಯವರಿಗೆ, ಕಾರ್ಪೋರೇಟ್ ಕಂಪನಿಗಳಿಗೆ. ಅವರಿಗೆ ಅನುಕೂಲವಾಗಲೆಂದೇ ಈ ತಿದ್ದುಪಡಿ ತರಲಾಗಿದೆ. ಮೊದಲು ಆಕರ್ಷಕವಾಗಿದ್ದರೂ ಅಧಿಕೃತ ಬೆಂಬಲ ಬೆಲೆಯ ಪ್ರಸ್ತಾಪವಿಲ್ಲದ ತಿದ್ದುಪಡಿಗಳಿಂದ ಭವಿಷ್ಯದಲ್ಲಿ ರೈತರು ಬಲಿಪಶುವಾಗುತ್ತಾರೆ”.
ಇಲ್ಲಿಯೇ ಯಾರು, ಯಾವ ನೀತಿನಿಲುವುಗಳ ನೆಲೆಯಲ್ಲಿ ನಿಂತು `ಸ್ವಾತಂತ್ರ್ಯ’ದ ಮಾತಾಡುತ್ತಾರೆಂಬ ಪ್ರಶ್ನೆ ಮುಖ್ಯವಾಗುವುದು. 1991-92ರಲ್ಲಿ ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದ ಮುಕ್ತ ಆರ್ಥಿಕ ನೀತಿಯನ್ನು ಕಾಂಗ್ರೆಸ್ಸಿಗರೇ ಕಂಗಾಲಾಗುವಷ್ಟು ಆಕ್ರಮಣಶೀಲತೆಯಿಂದ ಬಿ.ಜೆ.ಪಿ ಕೇಂದ್ರ ಸರ್ಕಾರವು ಜಾರಿ ಮಾಡುತ್ತಿದೆ. ರಕ್ಷಣಾ ಕ್ಷೇತ್ರವನ್ನೂ ಒಳಗೊಂಡಂತೆ ಎಲ್ಲ ಕ್ಷೇತ್ರಗಳಿಗೂ ವಿದೇಶಿ ಬಂಡವಾಳ ತೊಡಗುವಿಕೆಗೆ ಹಿಂದೆಂದೂ ಇಲ್ಲದಷ್ಟು ಗರಿಷ್ಠ ಆದ್ಯತೆ ನೀಡುತ್ತಿದೆ. ಮುಕ್ತಮಾರುಕಟ್ಟೆಯ ನೆಲೆಯಲ್ಲಿ ನಿಂತು `ರೈತ ಸ್ವಾತಂತ್ರ್ಯ’ದ ಮಾತಾಡುತ್ತಿದೆ. ಆದ್ದರಿಂದ ಮುಕ್ತ ಮಾರುಕಟ್ಟೆಯ ಆರ್ಥಿಕ ನೀತಿಯಲ್ಲಿ ಸ್ವಾತಂತ್ರ್ಯ ಮತ್ತು ಸಮಾನತೆಗಳ ಕಲ್ಪನೆ ಹೇಗಿರುತ್ತದೆಯೆಂಬ ಪ್ರಶ್ನೆ ಇಲ್ಲಿ ಮುಖ್ಯವಾಗುತ್ತದೆ. ಅಮೇರಿಕದ ಪ್ರಖ್ಯಾತ ಚಿಂತಕ ಹರ್ಬರ್ಟ್ ಅಪ್ತೇಕರ್ ಅವರು ತಮ್ಮ `The Nature of Democracy :Freedom and Revolution’ ಎಂಬ ಗ್ರಂಥದಲ್ಲಿ ತಿಳಿಸಿರುವ ಮುಕ್ತ ಮಾರುಕಟ್ಟೆ ನೀತಿಯ ಸ್ವರೂಪದಲ್ಲಿ ಈ ಪ್ರಶ್ನೆಗೆ ಉತ್ತರವಿದೆ:
“ಮುಕ್ತ ಮಾರುಕಟ್ಟೆಯದು ಬೂಜ್ರ್ವಾ ಸ್ವಾತಂತ್ರ್ಯ”. ಇಲ್ಲಿ ಬಂಡವಾಳ ಶಾಹಿಯನ್ನು ಸರ್ಕಾರವು ನಿಯಂತ್ರಿಸುವುದಿಲ್ಲ; ಬದಲಾಗಿ ಸರ್ಕಾರವನ್ನೇ ಬಂಡವಾಳಶಾಹಿಯು ನಿಯಂತ್ರಿಸುತ್ತದೆ. ಈ ನೀತಿಯ ಪ್ರಕಾರ ಸ್ವಾತಂತ್ರ್ಯವೆನ್ನುವುದು ರಾಜಕೀಯ ವಿಧಿವಿಧಾನಕ್ಕೆ ಸಂಬಂಧಿಸಿದ್ದೇ ಹೊರತು ಆರ್ಥಿಕ ವಿಚಾರಗಳಿಗಲ್ಲ. ಆರ್ಥಿಕ ಅಸಮಾನತೆಯು ಸ್ವಾತಂತ್ರ್ಯದ ಸಹಜ ಪರಿಣಾಮ ಎಂದು ಮುಕ್ತ ಮಾರುಕಟ್ಟೆ ನೀತಿಯು ಭಾವಿಸುತ್ತದೆ”.
ಅಪ್ತೇಕರ್ ಅವರ ಈ ಅಭಿಪ್ರಾಯವನ್ನು ಸಮರ್ಥಿಸುವಂತೆ ನಮ್ಮ ಕೃಷಿ ಕ್ಷೇತ್ರದ ಸ್ಥಿತಿಯಿದೆ. 1952ರ ಮೊದಲ ಬಜೆಟ್‍ನಲ್ಲಿ ಕೃಷಿಗೆ ಶೇ. 12.5ರಷ್ಟು ಅನುದಾನವಿದ್ದದ್ದು ಈಗ ಶೇ. 4ಕ್ಕಿಂತ ಕಡಿಮೆಯಾಗಿದೆ. ಮೊದಲ ಪಂಚವಾರ್ಷಿಕ ಯೋಜನೆಯಲ್ಲಿ ಕೃಷಿಯ ಪಾಲು ಶೇ. 37.3 ಇದ್ದದ್ದು ಹತ್ತನೇ ಪಂಚವಾರ್ಷಿಕ ಯೋಜನೆ ವೇಳೆಗೆ ಶೇ. 10.6 ಕ್ಕೆ ಇಳಿದಿದೆ. ಕೃಷಿ ಸಬ್ಸಿಡಿ ಕೂಡ ಶೇ. 3 ಕ್ಕಿಂತ ಹೆಚ್ಚಿಲ್ಲ. ಹರ್ಬರ್ಟ್ ಅಪ್ತೇಕರ್ ಅವರ ವಿಚಾರ ಧಾರೆಯಲ್ಲಿ ನಮ್ಮ ರೈತರ ಅನುಮಾನ ಮತ್ತು ಪ್ರತಿರೋಧಕ್ಕೆ ಕಾರಣಗಳನ್ನು ಕಾಣಬಹುದು. ಮುಂದುವರಿದು ಅಬ್ರಾಹಂ ಲಿಂಕನ್ ಅವರು ತಮ್ಮ ಹೋರಾಟದ ಸಂದರ್ಭದಲ್ಲಿ ಹೇಳಿದ ಒಂದು ಪ್ರಸಂಗವನ್ನು ಇಲ್ಲಿ ಉಲ್ಲೇಖಿಸಿದರೆ, ಸರ್ಕಾರದ `ಸ್ವಾತಂತ್ರ್ಯ’ ಪ್ರತಿಪಾದನೆಯ ನೆಲೆ ಮತ್ತಷ್ಟು ಸ್ಪಷ್ಟವಾಗುತ್ತದೆ: “ಒಬ್ಬಾತ ಕುರಿಗಳನ್ನು ಕಾಯುತ್ತಿದ್ದ. ಒಂದು ತೋಳ ಬಂದು ಕುರಿಯನ್ನು ಕಚ್ಚಿಕೊಂಡು ಓಡಿತು. ಹಿಂದೆಯೇ ಓಡಿದ ಕುರಿಗಾಹಿ, ತೋಳದೊಂದಿಗೆ ಹೋರಾಡಿ ಕುರಿಯನ್ನು ರಕ್ಷಿಸಿದ. ಆಗ ಕುರಿಯು – ನೀನು ನನ್ನ ಬದುಕುವ ಸ್ವಾತಂತ್ರ್ಯವನ್ನು ರಕ್ಷಿಸಿದೆ, ನಿನಗೆ ನಮಸ್ಕಾರ – ಎಂದಿತು. ಆದರೆ ತೋಳವು – ನೀನು ನನ್ನ ತಿನ್ನುವ ಸ್ವಾತಂತ್ರ್ಯವನ್ನು ಕಿತ್ತುಕೊಂಡೆ; ನಿನಗೆ ಧಿಕ್ಕಾರ ಎಂದಿತು.” ಇಷ್ಟು ಹೇಳಿದ ಲಿಂಕನ್ “ಈಗ ಹೇಳಿ; ತೋಳದ ತಿನ್ನುವ ಸ್ವಾತಂತ್ರ್ಯಬೇಕೊ, ಕುರಿಯ ಬದುಕುವ ಸ್ವಾತಂತ್ರ್ಯ ಬೇಕೊ?” ಎಂದು ಜನರನ್ನು ಕೇಳಿದರು.
ಇದು, ರೈತರು ಕೇಳುತ್ತಿರುವ ಸ್ವಾತಂತ್ರ್ಯದ ಪ್ರಶ್ನೆಯೂ ಆಗಿದೆ.