ರೈತರಿಗೆ ಮತ್ತೊಮ್ಮೆ ಮೋದಿ ಸರಕಾರದ ದ್ರೋಹ- ಎಐಕೆಎಸ್ ಖಂಡನೆ

ಹೆಚ್ಚುತ್ತಿರುವ ವೆಚ್ಚವನ್ನು ಗಣನೆಗೆ ತೆಗೆದುಕೊಳ್ಳದ ಎಂಎಸ್‌ಪಿ  ಪ್ರಕಟಣೆ

2022-23ರ ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್‍ಪಿ)ಗಳನ್ನು ಪ್ರಕಟಿಸಿದ್ದು ಈ ಬಾರಿಯೂ  ಮೋದಿ ಸರಕಾರ ಮತ್ತೊಮ್ಮೆ ತನ್ನ ಪಕ್ಕಾ ರೈತ ವಿರೋಧಿ ಧೋರಣೆಯನ್ನು ಪ್ರದರ್ಶಿಸಿದೆ ಎಂದು ಅಖಿಲ ಭಾರತ ಕಿಸಾನ್‍ ಸಭಾ(ಎಐಕೆಎಸ್) ಕಟುವಾಗಿ ಟೀಕಿಸಿದೆ. ಸರ್ಕಾರ ಘೋಷಿಸಿದ ಬೆಲೆಗಳು ತುಂಬಾ ಕಡಿಮೆ ಮತ್ತು ಸ್ವಾಮಿನಾಥನ್ ಆಯೋಗವು ಶಿಫಾರಸು ಮಾಡಿದಂತೆ ‘ಸಿ2’ ವೆಚ್ಚದ ಮೇಲೆ ರೈತರಿಗೆ 50% ಪ್ರತಿಫಲವನ್ನು  ಖಂಡಿತಾ ಒದಗಿಸುವುದಿಲ್ಲ. ಎಂಎಸ್‍ಪಿಯಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ಹೇಳಿಕೊಂಡರೂ  ಈ ಹೆಚ್ಚಳ ಎಂಬುದು ಹೆಚ್ಚುತ್ತಿರುವ  ಕೃಷಿ ವೆಚ್ಚವನ್ನು ಸರಿದೂಗಿಸಲು ಅಥವಾ ರೈತರು ಖರೀದಿಸಬೇಕಾದ ಬಳಕೆಯ ವಸ್ತುಗಳ ಬೆಲೆಗಳಲ್ಲಿನ ಹಣದುಬ್ಬರವನ್ನು ಸರಿದೂಗಿಸಲು ತುಂಬಾ ಕಡಿಮೆಯಾಗಿದೆ ಎಂದು ಎಐಕೆಎಸ್ ಹೇಳಿದೆ.

ಗೋಧಿಯ ಎಂಎಸ್‌ಪಿಯನ್ನು ಕೇವಲ ಶೇ. 5.5ರಷ್ಟು ಮತ್ತು ಕಡಲೆಗೆ ಕೇವಲ ಶೇ.2ರಷ್ಟು ಹೆಚ್ಚಿಸಲಾಗಿದೆ. 2022 ರ ಹೆಚ್ಚಿನ ತಿಂಗಳುಗಳಲ್ಲಿ ಆಹಾರದ ಗ್ರಾಹಕ ಬೆಲೆಗಳಲ್ಲಿನ ಹಣದುಬ್ಬರವು ಶೇಕಡಾ 7 ಕ್ಕಿಂತ ಹೆಚ್ಚಾಗಿದೆ ಎಂದು ಎಐಕೆಎಸ್ ನೆನಪಿಸಿದೆ..

ಕಳೆದ ಒಂದು ವರ್ಷದಲ್ಲಿ ಇಂಧನ ಮತ್ತು ರಸಗೊಬ್ಬರಗಳ ಬೆಲೆಯಲ್ಲಿಯೂ ತೀವ್ರ ಏರಿಕೆಯಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಕಳೆದ ಕೆಲವು ಋತುಗಳಲ್ಲಿ ರಸಗೊಬ್ಬರಗಳ ಪೂರೈಕೆಯಲ್ಲಿನ ಕೊರತೆಯು ದೇಶದ ಅನೇಕ ಭಾಗಗಳಲ್ಲಿ ದೊಡ್ಡ ಪ್ರಮಾಣದಲ್ಲಿ ರಸಗೊಬ್ಬರಗಳ ಕಾಳಸಂತೆಗೆ ಕಾರಣವಾಗಿದೆ. ಆದಾಗ್ಯೂ, ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗವು (ಸಿಎಸಿಪಿ) ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಗಣನೆಗೇ ತೆಗೆದುಕೊಳ್ಳದೆ  ಸಾಗುವಳಿ ವೆಚ್ಚದ ಹೆಚ್ಚಳವನ್ನು ಕಡಿಮೆ ಅಂದಾಜು ಮಾಡಿದೆ. ಸಿಎಸಿಪಿ ಪ್ರಕಾರ, ಹೆಚ್ಚಿನ ಹಿಂಗಾರು ಬೆಳೆಗಳ ಕೃಷಿ ವೆಚ್ಚವು ಗೋಧಿಗೆ 3.8 %, ಕಡಲೆಗೆ 5.4% ಮತ್ತು ರೇಪ್‌ಸೀಡ್ ಮತ್ತು ಸಾಸಿವೆಗೆ 6.7% ದಷ್ಟು ಹೆಚ್ಚಾಗಿದೆ. ಇದು ಕೃಷಿ ಲಾಗುವಾಡುಗಳ ಬೆಲೆಗಳಲ್ಲಿ ಆಗಿರುವ  ಭಾರೀ ಹೆಚ್ಚಳವನ್ನು ಎಷ್ಟೊಂದು  ಕೀಳಂದಾಜು ಮಾಡಲಾಗಿದೆ ಎಂಬುದನ್ನು ತೋರಿಸುತ್ತದೆ.

ಸಿಎಸಿಪಿಯ ಈ ವೆಚ್ಚದ ಅಂದಾಜುಗಳು ನಿಜವಾದ ವೆಚ್ಚ ಹೆಚ್ಚಳಗಳನ್ನು ಬಿಂಬಿಸುತ್ತವೆ ಎಂದಿಟ್ಟುಕೊಂಡರೂ,  ವಿವಿಧ ಹಿಂಗಾರು ಬೆಳೆಗಳ ಕೃಷಿಯಿಂದ ನಿರೀಕ್ಷಿತ ಪ್ರತಿಫಲವು ಅತ್ಯಲ್ಪವಾಗಿದೆ ಮತ್ತು ಅವನ್ನು ಕಳೆದ ವರ್ಷದ ಮಟ್ಟದಲ್ಲಿಯೇ  ಇಡಲಾಗಿದೆ. ಉದಾಹರಣೆಗೆ, ಅತ್ಯಂತ ಪ್ರಮುಖ ಹಿಂಗಾರು ಬೆಳೆಯಾದ ಗೋಧಿಗೆ ಪ್ರಕಟಿಸಿರುವ ಬೆಂಬಲ ಬೆಲೆ  ಸಿಎಸಿಪಿ ಅಂದಾಜು ಮಾಡಿದ ವೆಚ್ಚದ ಆಧಾರದಲ್ಲಿ ಲೆಕ್ಕ ಹಾಕಿದ ಸಿ2 ವೆಚ್ಚಕ್ಕಿಂತ ಕೇವಲ 30%ದಷ್ಟು ಹೆಚ್ಚಿದೆ.  ಬೇಳೆಗೆ ಪ್ರತಿಫಲ ಕೇವಲ 20%.  ಈ ಸಿ2 ನ ಅಧಿಕೃತ ಅಂದಾಜು ವಾಸ್ತವ ವೆಚ್ಚಕ್ಕಿಂತ ತುಂಬಾ ಕಡಿಮೆಯಿರುವುದರಿಂದ, ನಿಜವಾದ ಪ್ರತಿಫಲ ಈ 30% ಅಥವ 20%ದಷ್ಟೂ ಆಗುವುದಿಲ್ಲ ಎಂದು ಎಐಕೆಸ್‍ ಹೇಳಿದೆ.

ಇದಲ್ಲದೆ, ಆಯ್ದ ಮುಂಗಾರು ಮತ್ತು ಹಿಂಗಾರು ಬೆಳೆಗಳಿಗೆ ಪ್ರತಿ ಆರು ತಿಂಗಳಿಗೊಮ್ಮೆ ಪ್ರಕಟಿಸುವ ಎಂಎಸ್‌ಪಿಗಳು ದೇಶದ ಹೆಚ್ಚಿನ ಭಾಗಗಳಲ್ಲಿನ ರೈತರಿಗೆ ಸಂಪೂಣ‍್ ಅರ್ಥಹೀನವಾಗಿವೆ, ಏಕೆಂದರೆ ಕೇಂದ್ರ ಸರ್ಕಾರದಿಂದ ಈ ಬೆಳೆಗಳ ಯಾವುದೇ ಸಂಗ್ರಹಣೆ/ಖರೀದಿಯ ವ್ಯವಸ್ಥೆ ಇಲ್ಲ ಎಂಬುದನ್ನು ಮತ್ತೆ ಹೇಳಬೇಕಾಗಿದೆ  ಎಂದಿರುವ  ಎಐಕೆಎಸ್, ಹೀಗಾಗಿ ರೈತರು ಸ್ಥಳೀಯ ವರ್ತಕರಿಗೆ ಎಂಎಸ್‌ಪಿಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಲೇ ಬೇಕಾಗುತ್ತದೆ ಎಂದು ಹೇಳಿದೆ.

ಹೀಗೆ ಇದು ರೈತ ವಿರೋಧಿ ಘೋಷಣೆ ಎಂದು  ಖಂಡಿಸಿರುವ ಅಖಿಲ ಭಾರತ ಕಿಸಾನ್ ಸಭಾ ಸ್ವಾಮಿನಾಥನ್ ಆಯೋಗದ ಸೂತ್ರದ ಪ್ರಕಾರವೇ ಎಂಎಸ್‌ಪಿಯನ್ನು ನಿಗದಿಪಡಿಸಬೇಕು ಎಂಬ ಬೇಡಿಕೆಯನ್ನು ಪುನರುಚ್ಚರಿಸಿದೆ ಮತ್ತು ಸಮಗ್ರ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ದರದಲ್ಲಿ ಎಂಎಸ್‌ಪಿಗೆ ಕಾನೂನು ಖಾತರಿಗಾಗಿ ತಮ್ಮ ದೇಶವ್ಯಾಪಿ ಹೋರಾಟವನ್ನು ಹೆಚ್ಚು ತೀವ್ರಗೊಳಿಸಲು ಭಾರತದ ರೈತರಿಗೆ ಅದು ಕರೆ ನೀಡಿದೆ.

Donate Janashakthi Media

Leave a Reply

Your email address will not be published. Required fields are marked *