ರೈತರ ನ್ಯಾಯಬದ್ಧ ಶಾಂತಿಯುತ ಪ್ರತಿಭಟನೆಯ ದಮನವನ್ನು ನಿಲ್ಲಿಸಿ

ಪ್ರಧಾನ ಮಂತ್ರಿಗಳಿಗೆ ಮಹಿಳಾ ಸಂಘಟನೆಗಳ ಬಹಿರಂಗ ಪತ್ರ

 ನವದೆಹಲಿ:  ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ನಡೆಯುತ್ತಿರುವ ರೈತರ ಹೋರಾಟಗಳ ಅಮಾನುಷ ದಮನ ಮಾಡಲು  ಕೊರೆಯುವ ಚಳಿಯಲ್ಲೂ ಅಶ್ರುವಾಯು ಪ್ರಹಾರ, ಜಲಫಿರಂಗಿ ಪ್ರಹಾರ ಮಾಡಿದ ಕೇಂದ್ರ ಸರ್ಕಾರದ ಕ್ರಮವನ್ನು ಮೂರು ಅಖಿಲ ಭಾರತ ಮಹಿಳಾ ಸಂಘಟನೆಗಳು ಬಲವಾಗಿ ಖಂಡಿಸಿವೆ.

ಬಿಜೆಪಿ-ಆರೆಸ್ಸೆಸ್‍  ಕೇಂದ್ರ ಸರಕಾರ ಮತ್ತು ಬಿಜೆಪಿಯ  ಉತ್ತರಪ್ರದೇಶ ಮತ್ತು ಹರ್ಯಾಣ ರಾಜ್ಯ ಸರಕಾರಗಳು  ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ದಿಲ್ಲಿ ತಲುಪ ಬಯಸುತ್ತಿರುವ ಶಾಂತಿಯುತ ರೈತರ ಮೇಲೆ ಅಭೂತಪೂರ್ವ ಬರ್ಬರತೆಯನ್ನು ಹರಿಯ ಬಿಟ್ಟಿವೆ ಎಂದು ಬಲವಾಗಿ ಖಂಡಿಸುತ್ತ ಪ್ರಧಾನ ಮಂತ್ರಿಗಳಿಗೆ ಬಹಿರಂಗ ಪತ್ರ ಬರೆದಿವೆ.

ರೈತರ ಪ್ರತಿಭಟನೆ ನ್ಯಾಯಬದ್ಧವಾಗಿದೆ, ಶಾಂತಿಯುತವಾಗಿದೆ, ಅದರ ವಿರುದ್ಧ ದಮನಚಕ್ರವನ್ನು ನಿಲ್ಲಿಸಬೇಕು  ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘ(ಎ.ಐ.ಡಿ.ಡಬ್ಲ್ಯು.ಎ.), ರಾಷ್ಟ್ರೀಯ ಭಾರತೀಯ ಮಹಿಳಾ ಒಕ್ಕೂಟ(ಎನ್‍.ಎಫ್‍.ಐ.ಡಬ್ಲ್ಯು.) ಮತ್ತು ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘ(ಎ.ಐ.ಪಿ.ಡಬ್ಲ್ಯು.ಎ.) ಪ್ರಧಾನ ಮಂತ್ರಿಗಳನ್ನು ಆಗ್ರಹಿಸಿವೆ.

ಕೃಷಿ ವಲಯದಲ್ಲಿ ಮಹಿಳೆಯರ ಪಾತ್ರವನ್ನು ಒತ್ತಿ ಹೇಳುತ್ತ “ಮಹಿಳೆಯರನ್ನು ರೈತರು ಎಂದು ಗುರುತಿಸದಿದ್ದರೂ, ಕೃಷಿ ಕ್ರಿಯೆಗಳಲ್ಲಿ ಅವರು ಸಮಾನ ಪ್ರಮಾಣದಲ್ಲಿ ತೊಡಗಿದ್ದಾರೆ. ಈ ವಿಷಯದಲ್ಲಿ ಬಹಳಷ್ಟು ಮಹಿಳೆಯರು ಇನ್ನೂ ‘ಅದೃಶ್ಯ”ರಾಗಿಯೇ ಉಳಿದಿದ್ದಾರೆ. ಕೃಷಿ ವಲಯದಲ್ಲಿ ಮಹಿಳೆಯರ ಪಾತ್ರವನ್ನು ಉಪೇಕ್ಷಿಸುವಂತಿಲ್ಲ. ಏಕೆಂದರೆ ಅವರು ಕೃಷಿ ಕೂಲಿಕಾರರಲ್ಲಿ 33%  ಮತ್ತು ಸ್ವ-ಉದ್ಯೋಗಿ ರೈತರಲ್ಲಿ 48%” ಎಂಬ ಸಂಗತಿಯನ್ನು ಈ ಪತ್ರ ಪ್ರಧಾನಿಗಳ ಗಮನಕ್ಕೆ ತಂದಿದೆ.

ರೈತರು ಸಾಲ ಮನ್ನಾ ಮತ್ತು ಸ್ವಾಮಿನಾಥನ್‍ ಆಯೋಗದ ಶಿಫಾರಸಿನಂತೆ ಕನಿಷ್ಟ ಬೆಂಬಲ ಬೆಲೆ ಖಾತ್ರಿಪಡಿಸುವಂತೆ ಬಹಳ ಸಮಯದಿಂದ ಆಗ್ರಹಿಸುತ್ತ ಬಂದಿದ್ದಾರೆ. ಆದರೆ ಸರಕಾರ ಅವರ ಈ ಬೇಡಿಕೆಗಳನ್ನು ಈಡೇರಿಸುವ ಬದಲು ಈ ಮೂರು ಕಾಯ್ದೆಗಳನ್ನು ತಂದು ಅವರ ಸಂಕಟಗಳನ್ನು ಬಹಳಷ್ಟು ಹೆಚ್ಚಿಸಿದೆ, ರೈತ ಕುಟುಂಬಗಳನ್ನು ಕೃಷಿ ಕಾರ್ಪೊರೇಟ್‍ಗಳ ಮರ್ಜಿಗೆ ಒಳಪಡಿಸಿದೆ. ಇದರ ವಿರುದ್ಧ ಎದ್ದು ಬಂದಿರುವ ರಾಷ್ಟ್ರವ್ಯಾಪಿ ಪ್ರತಿಭಟನೆಗಳಲ್ಲಿ ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಭಾಗವಹಿಸುತ್ತಿದ್ದಾರೆ ಎಂದಿರುವ ಪತ್ರ ರೈತರ ಹೋರಾಟಕ್ಕೆ ಸೌಹಾರ್ದವನ್ನು ವ್ಯಕ್ತಪಡಿಸುತ್ತ ಈ ಕೆಳಗಿನ ಬೇಡಿಕೆಗಳನ್ನು ಪ್ರಧಾನ ಮಂತ್ರಿಗಳು ಮುಂದಿಟ್ಟಿದೆ:

  1. ರೈತರ ನ್ಯಾಯಬದ್ಧ ಮತ್ತು ಶಾಂತಿಯುತ ಪ್ರತಿಭಟನೆಗಳ ದಮನವನ್ನು ನಿಲ್ಲಿಸಬೇಕು.
  2. ಹೋರಾಟ ನಡೆಸುತ್ತಿರುವ ರೈತರು ಮತ್ತು ಅವರ ಸಂಘಟನೆಗಳ ಮುಖಂಡರ ಮೇಲೆ ಹಾಕಿರುವ ಎಲ್ಲ ಕೇಸುಗಳನ್ನು ಹಿಂದಕ್ಕೆ ಪಡೆಯಬೇಕು.
  3. ಕೊವಿಡ್ಕಾಲದಲ್ಲಿ ತಂದಿರುವ ಮೂರು ರೈತವಿರೋಧಿ ಕಾಯ್ದೆಗಳನ್ನು ರದ್ದು ಮಾಡಬೇಕು.
  4. ಗುತ್ತಿಗೆ ಬೇಸಾಯಕ್ಕೆ ಪ್ರೋತ್ಸಾಹವನ್ನು ನಿಲ್ಲಿಸಬೇಕು.
  5. ಎಲ್ಲ ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆಗಳನ್ನು ನಿಗದಿ ಮಾಡಬೇಕು ಮತ್ತು ಖಾತ್ರಿಪಡಿಸಬೇಕು.
  6. ಹಸಿವು ಮತ್ತು ಬಡತನದ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಸಾರ್ವತ್ರಿಕಗೊಳಿಸಬೇಕು.
  7. ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟವನ್ನು ಖಾತ್ರಿಪಡಿಸಬೇಕು.
  8. ರೈತರ, ವಿಶೇಷವಾಗಿ ಆತ್ಮಹತ್ಯೆ ಮಾಡಿಕೊಂಡ ರೈತರ ವಿಧವೆಯರ  ಹಾಗೂ ಕಿರುಹಣಕಾಸು ಕಂಪನಿಗಳು ಮತ್ತು ಸ್ವಸಹಾಯ ಗುಂಪುಗಳಿಂದ ಸಾಲ ಪಡೆದವರ ಸಾಲಗಳನ್ನು ಮನ್ನಾ ಮಾಡಬೇಕು.
  9. ಎಲ್ಲ ಕಷ್ದಕ್ಕೆ ಒಳಗಾಗುವ ಕುಟುಂಬಗಳಿಗೆ ಮಾಸಿಕ ಆದಾಯ ಬೆಂಬಲ ಒದಗಿಸಬೇಕು.
  10. ಆರೋಗ್ಯಪಾಲನೆ ಮತ್ತು ಶಿಕ್ಷಣಕ್ಕಾಗಿ ಸಾರ್ವತ್ರಿಕ ಸಾಮಾಜಿಕ ಭದ್ರತಾ ಬೆಂಬಲ ಒದಗಿಸಬೇಕು.

ಈ ಬಹಿರಂಗ ಪತ್ರದ ಮೂಲಕ ಮಹಿಳಾ ಸಂಘಟನೆಗಳು ಪ್ರಧಾನ ಮಂತ್ರಿಯವರಿಗೆ ಈ ಎಲ್ಲಾ ಬೇಡಿಕೆಗಳ ಈಡೇರಿಸಲು ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *