ಎರಡೇ ಎರಡು ವರ್ಷಗಳಲ್ಲಿ ರೈತರ ಆದಾಯ ದ್ವಿಗುಣಗೊಳ್ಳುತ್ತದೆ ಎಂಬ ಮೋದಿ ಭವಿಷ್ಯವಾಣಿ ಈಗಾಗಲೇ ನಿಜವಾಗಿದೆ! ಏಕಾಏಕಿಯಾಗಿ ಸಾರಿದ ಲಾಕ್‌ಡೌನ್‌ನ ತೆರೆಮರೆಯಲ್ಲಿ, ರೈತರ ಆದಾಯ ದ್ವಿಗುಣಗೊಳಿಸುವ ಮೋದಿಯವರ ಭರವಸೆ ಈಡೇರಿದೆ. ಏಕೆಂದರೆ ಅಂಬಾನಿ ಮತ್ತು ಅದಾನಿ ಮಹಾಶಯರು ರೈತರಿಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ, ಅವರನ್ನು ಗೌರವ-ರೈತರೆಂದು ವರ್ಗೀಕರಿಸಿ, ಅವರ ಆದಾಯಗಳನ್ನು ಭಾರತದ ಉಳಿದ ರೈತರ ಆದಾಯಕ್ಕೆ ಸೇರಿಸಿದರೆ, ರೈತರ ಸರಾಸರಿ ಆದಾಯವು ಒಂದು ದೊಡ್ಡ ಜಿಗಿತವನ್ನು ಪಡೆಯುತ್ತದೆ! ಅದು ಖಂಡಿತಾ ದ್ವಿಗುಣಗೊಂಡಿದೆಯಲ್ಲವೇ ಎನ್ನುತ್ತಾರೆ
ಅರ್ಥಶಾಸ್ತ್ರಜ್ಞ ಪ್ರೊ. ಅಮಿತ್ ಬಾಧುರಿ
ನಮ್ಮ ಪ್ರಧಾನಮಂತ್ರಿಯವರು ಒಬ್ಬ ಗೌರವಾನ್ವಿತ ವ್ಯಕ್ತಿ. ಅವರು ಏನು ಹೇಳುತ್ತಾರೋ ಅದನ್ನು ಮಾಡುತ್ತಾರೆ. ಆದರೆ, ಅವರು ಹೇಳಿದ್ದನ್ನು ಮಾಡಿದ್ದಾರೆ ಎಂಬುದು ಕೆಲವೊಮ್ಮೆ ಜನರಿಗೆ ನಿಜಕ್ಕೂ ಅರ್ಥವೇ ಆಗುವುದಿಲ್ಲವಲ್ಲ.
ತಾವು ಕೊಟ್ಟ ಮಾತನ್ನು ಮೋದಿ ಉಳಿಸಿಕೊಳ್ಳುತ್ತಾರೆ. ಅವರು ಒಬ್ಬ ಗೌರವಾನ್ವಿತ ವ್ಯಕ್ತಿ. ಭಾರತದ ಅರ್ಥವ್ಯವಸ್ಥೆಯಲ್ಲಿ ಬೆಳೆದಿರುವ ಕಪ್ಪು ಹಣವನ್ನು ನಿರ್ಮೂಲನೆ ಮಾಡುವುದಾಗಿ ಅವರು ಮಾತು ಕೊಟ್ಟಿದ್ದರು. ಏಕಾಏಕಿಯಾಗಿ ನಡೆಸಿದ ನೋಟು ರದ್ದತಿ ಎಂಬ ಮಿಂಚಿನ ದಾಳಿಯ ಮೂಲಕ ಕಪ್ಪು ಹಣವನ್ನು ನಿರ್ಮೂಲನೆ ಮಾಡುವುದಾಗಿ ಕೊಟ್ಟಿದ್ದ ತಮ್ಮ ಮಾತನ್ನು ಮೋದಿ ಉಳಿಸಿಕೊಂಡಿದ್ದರು, ದೊಡ್ಡ ದೊಡ್ಡ ಉದ್ಯಮಿಗಳು ತಾವು ಮಾಡಿಟ್ಟುಕೊಂಡಿದ್ದ ಕಪ್ಪು ಹಣವನ್ನು ರಾತ್ರೋರಾತ್ರಿ ಬಿಳಿ ಹಣವನ್ನಾಗಿ ಬದಲಾಯಿಸಿಕೊಂಡರು, ಅತ್ತ ರಾಷ್ಟ್ರೀಕೃತ ಬ್ಯಾಂಕ್‌ಗಳು ತಮ್ಮ ಅನುತ್ಪಾದಕ ಆಸ್ತಿಗಳ(ವಸೂಲಾಗದ ಸಾಲಗಳ) ಹೊರೆಯನ್ನು ರಾತ್ರೋರಾತ್ರಿ ಹೆಚ್ಚಿಸಿಕೊಂಡವು. ನೋಟು ರದ್ದತಿಯ ಪರಿಣಾಮಗಳು ಎಲ್ಲರಿಗೂ ಹಗಲಿನಷ್ಟು ಸ್ಪಷ್ಟವಾಗಿ ಗೋಚರಿಸುತ್ತಿದ್ದವು. ಆದರೆ, ಅನೌಪಚಾರಿಕ ವಲಯದ ಅನೇಕ ಮಂದಿಗೆ ಮಾತ್ರ ಗೋಚರಿಸಲಿಲ್ಲ. ಏಕೆಂದರೆ, ಅವರು ಮಿಂಚಿನ ದಾಳಿಯಲ್ಲಿ ಸುಟ್ಟು ಬೂದಿಯಾದರು.
ಇದೇ ರೀತಿಯಲ್ಲಿ, ಇದ್ದಕ್ಕಿದ್ದಂತೆ ಒಂದು ದಿನ ರಾತ್ರಿ ಎಂಟು ಗಂಟೆಯ ಹೊತ್ತಿನಲ್ಲಿ ಕೇವಲ ನಾಲ್ಕು ಗಂಟೆಗಳ ನೋಟೀಸ್ ಕೊಟ್ಟು, ಕೊರೊನಾ ಸಾಂಕ್ರಾಮಿಕ ಹರಡುವುದನ್ನು ತಡೆಯುವ ಉದ್ದೇಶವಾಗಿ ಒಂದು ಲಾಕ್‌ಡೌನ್ ಘೋಷಣೆ ಮಾಡಿದ್ದರು. ಇದ್ದಕ್ಕಿದ್ದಂತೆ, ಮತ್ತೊಂದು ದಿನ, ರಾತ್ರಿ ಒಂಭತ್ತು ಗಂಟೆಗೆ ಸರಿಯಾಗಿ ತಮ್ಮ ತಮ್ಮ ಬಾಲ್ಕನಿಯಲ್ಲಿ ನಿಂತು, ತಟ್ಟೆ-ಲೋಟ-ಪಾತ್ರೆ-ಜಾಗಟೆ ಬಡಿದು, ನಂತರ ದೀಪ ಬೆಳಗಿಸಿದರೆ ಹದಿನೆಂಟು ದಿನಗಳಲ್ಲಿ ಕೊರೊನಾ ನಿರ್ಮೂನೆಗೊಳ್ಳುತ್ತದೆ ಎಂಬುದನ್ನು ಶಾಸ್ತ್ರೋಕ್ತವಾಗಿ ಹೇಳಿದ್ದರು.
ನಿಜ, ಸಾಕಷ್ಟು ಮಂದಿಗೆ ನಿಲ್ಲುವ ಬಾಲ್ಕನಿಯ ಮಾತಿರಲಿ, ಮಲಗಲು ಮನೆಯೂ ಇರಲಿಲ್ಲ, ಬಡಿಯಲು ತಟ್ಟೆ-ಲೋಟಗಳೂ ಕೂಡ ಇರಲಿಲ್ಲ. ಕೆಲವರು ವೈರಸ್ ವಿರುದ್ಧ ಹೋರಾಡುವ ಮೊದಲೇ ರಸ್ತೆಯ ಮೇಲೇ ಸತ್ತು ಹೋದರು. ಅವರು ತಮ್ಮ ಊರಿಗೆ ಹಿಂತಿರುಗುತ್ತಿದ್ದ ವಲಸೆ ಕಾರ್ಮಿಕರು.
ಮುಂದಿನ ಎರಡೇ ಎರಡು ವರ್ಷಗಳಲ್ಲಿ ರೈತರ ಆದಾಯ ದ್ವಿಗುಣಗೊಳ್ಳುತ್ತದೆ ಎಂದು ಮೋದಿ ಭವಿಷ್ಯವಾಣಿ ನುಡಿದಿದ್ದರು. ಈಗಾಗಲೇ ಅದು ನಿಜವಾಗಿದೆ. ಏಕಾಏಕಿಯಾಗಿ ಘೋಷಣೆ ಮಾಡಿದ ಲಾಕ್‌ಡೌನ್‌ನ ತೆರೆಮರೆಯಲ್ಲಿ, ರೈತರ ಆದಾಯ ದ್ವಿಗುಣಗೊಳಿಸುವ ಮೋದಿಯವರ ಭರವಸೆ ಈಡೇರಿದೆ. ಅವರ ಬಗ್ಗೆ ಯಾರು ಏನೇ ಹೇಳಿದರೂ ಸಹ, ನಮ್ಮ ಪ್ರಧಾನ ಮಂತ್ರಿಯವರು ಒಬ್ಬ ಆಡಂಬರವಿಲ್ಲದ ವ್ಯಕ್ತಿ. ಅವರು ಒಬ್ಬ ಗೌರವಾನ್ವಿತ ವ್ಯಕ್ತಿ. ಅವರು ತಮ್ಮ ಸಾಧನೆಗಳ ಬಗ್ಗೆ ಜಂಬಕೊಚ್ಚಿಕೊಳ್ಳಲು ಇಷ್ಟಪಡುವುದಿಲ್ಲ. ಆದರೂ, ಕೇವಲ 227 ದಿನಗಳಲ್ಲಿ ರೈತರ ಸಂಪತ್ತು ಹೇಗೆ ದ್ವಿಗುಣಗೊಂಡಿತು ಎಂಬುದು ದೇಶಕ್ಕೆ ಗೊತ್ತಾಗಬೇಕು.
ಇತ್ತೀಚಿನ ಆಕ್ಸ್‌ಫಾಮ್ ವರದಿಯ ಪ್ರಕಾರ, ಮಾರ್ಚ್ 18 ಮತ್ತು ಅಕ್ಟೋಬರ್ 31ರ ನಡುವೆ, ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿಯವರ ಸಂಪತ್ತು 36.8 ಬಿಲಿಯನ್ ಡಾಲರ್‌ಗಳಿಂದ 78.3 ಬಿಲಿಯನ್ ಡಾಲರ್‌ಗಳಿಗೆ ಏರಿಕೆಯಾಗಿದೆ.
ರಿಲೈಯನ್ಸ್ ಜಿಯೋ(ಟೆಲಿಕಮ್ಯೂನಿಕೇಷನ್), ಪೆಟ್ರೋಲಿಯಂ ಉತ್ಪನ್ನಗಳು, ಚಿಲ್ಲರೆ ವ್ಯಾಪಾರದ ಮಾಲ್‌ಗಳು ಮುಂತಾದ ಉದ್ದಿಮೆಗಳ ಸಮೂಹದ ಒಡೆತನ ಹೊಂದಿರುವ (ಅತಿ ದೊಡ್ಡ ಶೇರುದಾರರು) ಮುಕೇಶ್ ಅಂಬಾನಿ ಅವರ ಸಂಪತ್ತನ್ನು 2020ರ ಫೋರ್ಬ್ಸ್ ಶ್ರೀಮಂತರ ಪಟ್ಟಿಯು ಇನ್ನೂ ಮೇಲಕ್ಕೆ, 89 ಬಿಲಿಯನ್ ಡಾಲರ್‌ಗಳಿಗೆ ಏರಿಸುತ್ತದೆ. ಮುಕೇಶ್ ಅಂಬಾನಿ ಅವರು ಹೊಂದಿರುವ ಸಂಪತ್ತು, ಅಷ್ಟೇ ವೇಗದಿಂದ ಹಿಂಬಾಲಿಸಿದ ಭಾರತದ ಎರಡನೇ ಅತಿ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ ಅವರ ಸಂಪತ್ತಿಗಿಂತ ಸುಮಾರು ಮೂರು ಪಟ್ಟು ಹೆಚ್ಚಿಗೆ ಇದೆ. ನಮಗೆ ತಿಳಿದಿರುವಂತೆ, ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಅವರುಗಳ ಈ ಸಾಧನೆಗಳನ್ನು ಹೇಳಲು ಪ್ರಧಾನಮಂತ್ರಿಗಳು ಇಷ್ಟಪಡುವುದಿಲ್ಲ ಏಕೆಂದರೆ, ಅವರು ಒಬ್ಬ ಗೌರವಾನ್ವಿತ ವ್ಯಕ್ತಿ ಮತ್ತು ಆಡಂಬರವಿಲ್ಲದ ವ್ಯಕ್ತಿ. ಅದೇನೇ ಇರಲಿ, ಕೃಷಿ ಉತ್ಪನ್ನಗಳ ದಾಸ್ತಾನು (ಹಗೇವುಗಳು) ಮತ್ತು ಅವುಗಳ ಚಿಲ್ಲರೆ ವ್ಯಾಪಾರದಲ್ಲಿ ತೊಡಗಿರುವ ಈ ಬಿಲಿಯನೇರ್ ಜೋಡಿಯನ್ನು ಗೌರವ-ರೈತರೆಂದು ವರ್ಗೀಕರಿಸಬಹುದು.
ಮಹತ್ವದ ಕೊಡುಗೆ ನೀಡುವ ವ್ಯಕ್ತಿಗಳ ಸೇವೆಯನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಸಂಘ-ಸಂಸ್ಥೆಗಳು ಅವರಿಗೆ ಗೌರವ ಸದಸ್ಯತ್ವ ನೀಡುವ ರೀತಿಯಲ್ಲಿ, ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಮಹಾಶಯರು ರೈತರಿಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ, ಅವರನ್ನು ಗೌರವ-ರೈತರೆಂದು ವರ್ಗೀಕರಿಸಿ, ಈ ಬಿಲಿಯನೇರ್ ಜೋಡಿಯ ಆದಾಯವನ್ನು ಭಾರತದ ಉಳಿದ ರೈತರ ಆದಾಯಕ್ಕೆ ಸೇರಿಸಿದರೆ, ರೈತರ ಸರಾಸರಿ ಆದಾಯವು ಒಂದು ದೊಡ್ಡ ಜಿಗಿತವನ್ನು ಪಡೆಯುತ್ತದೆ. ಎಲ್ಲ ಕಾರ್ಪೊರೇಟ್ ಪರ ಹಾಗೂ ಮಾರುಕಟ್ಟೆ-ಒಲವಿನ ಅರ್ಥಶಾಸ್ತ್ರಜ್ಞರು – ಈ ಸಂತತಿಯ ಕೆಲವರು ಇಲ್ಲೇ ಇದ್ದಾರೆ ಮತ್ತು ಇನ್ನೂ ಕೆಲವರು ಐಎಂಎಫ್ ಮತ್ತು ವಿಶ್ವಬ್ಯಾಂಕ್‌ಗಳಲ್ಲಿದ್ದಾರೆ – ಗುಜರಾತ್‌ನ ಈ ಇಬ್ಬರು ಕಾರ್ಪೊರೇಟ್ ಸದಸ್ಯರನ್ನು ರೈತ ಸಮುದಾಯಕ್ಕೆ ಸೇರಿದವರು ಎಂದು ಪರಿಗಣಿಸಿದರೆ, ರೈತರ ಸರಾಸರಿ ಆದಾಯವು ಭಾರಿ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂಬ ಒಂದು ಅಂದಾಜನ್ನು ಈಗಾಗಲೇ ಮಾಡಿರಬಹುದು. ಬಹುಷಃ, ಈ ಸಂಖ್ಯಾಧಾರಿತ ಅಂಶದ ಬಲದಿಂದಲೇ ಅವರು ಮಾಧ್ಯಮಗಳಲ್ಲಿ ಏರಿದ ದನಿಯಲ್ಲಿ ಮಾತಾಡುತ್ತಿರುವುದು ಎಂದು ತೋರುತ್ತದೆ. ಈ ಅಂಶವನ್ನು ಪ್ರಧಾನ ಮಂತ್ರಿ ಮೋದಿ ಅವರು ಬಹುಷಃ ದೃಢೀಕರಿಸಬಲ್ಲರು. ಅಂಬಾನಿ-ಅದಾನಿ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರಿಂದಾಗಿ, ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಅನೇಕ ಒಪ್ಪಂದಗಳನ್ನು ಕುದುರಿಸಿದ್ದರು. ಈಗ ವಿಮಾನ ನಿಲ್ದಾಣಗಳ ಸಂಬಂಧಿತ ಒಪ್ಪಂದಗಳೊಂದಿಗೆ ಈ ಸಂಬಂಧ ಇನ್ನಷ್ಟು ಗಾಢವಾಗಿದೆ.
ಇಂತಹ ಸಾಧನೆಯನ್ನೇ ಈ ಮೂರೂ ಕೃಷಿ ಕಾನೂನುಗಳು ಉದ್ದೇಶಿಸಿರುವುದು. ಈ ಸರಳ ಗಣಿತವು ರೈತರಿಗೆ ಅರ್ಥವಾಗದು ಎಂದೇ ಭಾವಿಸಿದ್ದ ಭಾರತದ ಗಣ-ಮಾನ್ಯರು ಈಗ ಗೊಂದಲಕ್ಕೀಡಾಗಿದ್ದಾರೆ. ಅಷ್ಟಕ್ಕೂ, ನಿಜ ಅರ್ಥವ್ಯವಸ್ಥೆಯು ತೀವ್ರ ಕುಗ್ಗುವಿಕೆಗೆ ಒಳಗಾದ ಈ ಲಾಕ್‌ಡೌನ್ ಅವಧಿಯಲ್ಲೇ ಭಾರತದ ಬಹುತೇಕ ಶ್ರೀಮಂತರು, ಗುರುತ್ವಾಕರ್ಷಣೆಯ ನಿಯಮವನ್ನು ಧಿಕ್ಕರಿಸುವ ರೀತಿಯಲ್ಲಿ, ಇನ್ನೂ ಹೆಚ್ಚು ಶ್ರೀಮಂತರಾದರು. ಈ ಶ್ರೀಮಂತಿಕೆಯು ಹಿಗ್ಗಲು ಷೇರುಗಳ ಬೆಲೆ ಏರಿಕೆ, ಅದರಲ್ಲೂ ವಿಶೇಷವಾಗಿ ಅಂಬಾನಿ ಮತ್ತು ಅದಾನಿ ಕಂಪನಿಗಳ ಷೇರುಗಳ ಬೆಲೆ ಏರಿಕೆ ಕಾರಣವಾಗಿತ್ತು ಎಂಬುದನ್ನು ಹುರುನ್ ಇಂಡಿಯಾ, ಸ್ವಿಜರ್ಲೆಂಡ್‌ನ ಯುಬಿಎಸ್ ಮತ್ತು ಪ್ರೈಸ್ ವಾಟರ್ ಹೌಸ್ ಕೂಪ್ಸ್ ಸಂಸ್ಥೆಗಳು ಗುರುತಿಸಿವೆ. ಅಲ್ಪ ಆದಾಯಕ್ಕಾಗಿ ಹೊಲ-ಗದ್ದೆಗಳಲ್ಲಿ ಕೆಲಸ ಮಾಡುವ ಬದಲು ಇಂತಹ ಷೇರುಗಳನ್ನು ಹೊಂದುವುದು ಅದೆಷ್ಟು ಲಾಭದಾಯಕ ಎಂಬುದನ್ನು ಅರಿಯಲು ಮೊಂಡು ರೈತರು ಮಾತ್ರ ನಿರಾಕರಿಸುತ್ತಾರೆ.
ಪುಂಡ ಪೋಕರಿ ವಿದ್ಯಾರ್ಥಿಗಳು ಪಾಠ ಕಲಿಯಲು ನಿರಾಕರಿಸುವ ರೀತಿಯಲ್ಲಿ ರೈತರು ವರ್ತಿಸುವಾಗ, ಪ್ರಧಾನಿಗೆ ಇರುವ ಆಯ್ಕೆಯಾದರೂ ಯಾವುದು? ಅವರನ್ನು ಬಂಧಿಸುವ ಮೂಲಕವೇ ಪಾಠ ಕಲಿಸಬೇಕಾಗುತ್ತದೆ. ಆದ್ದರಿಂದ, ರೈತರು ಎಲ್ಲೆಲ್ಲಿ ಜಮಾಯಿಸಿದ್ದರೋ ಅಲ್ಲೆಲ್ಲ (ದೆಹಲಿಯ ಸಿಂಘು ಮತ್ತು ಇತರ ಗಡಿ ಭಾಗಗಳ ಸುತ್ತಮುತ್ತ) ಮೊಳ ಉದ್ದದ ಮೊಳೆಗಳನ್ನು ರಸ್ತೆಯಲ್ಲಿ ಜಡಿದು, ಸುತ್ತ ಮುಳ್ಳು ತಂತಿ ಬೇಲಿ ನಿರ್ಮಿಸಿ, ರಸ್ತೆಗಳಲ್ಲಿ ಕಂದಕಗಳನ್ನು ತೋಡಲಾಗಿದೆ. ಮೇಲಾಗಿ, ಇಂದಿನ ದಿನಗಳಲ್ಲಿ ಭಯೋತ್ಪಾದಕರು, ಖಲಿಸ್ತಾನಿಗಳು, ನಗರ ನಕ್ಸಲರು ಮತ್ತು ವಿದೇಶಿ ಪಿತೂರಿಗಳು, ಕೊರೊನಾಗಿಂತಲೂ ಮಾರಕ ವೈರಸ್‌ಗಳು ಎಂಬುದು ನಮ್ಮ ರಾಷ್ಟ್ರೀಯ ಗುಪ್ತಚರ ಏಜೆನ್ಸಿಗೆ ಚೆನ್ನಾಗಿ ಗೊತ್ತಿದೆ. ನಮ್ಮ ಪ್ರಧಾನ ಮಂತ್ರಿಯವರು “ವಿದೇಶಿ ವಿನಾಶಕಾರಿ ಸಿದ್ಧಾಂತ” (ಎಫ್‌ಡಿಐ) ಎಂಬ ಇನ್ನೊಂದು ವೈರಸ್ ಸಹ ಇದೆ ಎಂದು ನಮ್ಮನ್ನು ಎಚ್ಚರಿಸುವಾಗ, ಬಹುಷಃ, ಕೆಲವು ಆಪಾದಿತರ ಕಂಪ್ಯೂಟರ್‌ಗಳಲ್ಲಿ ಅಳವಡಿಸಲಾದ ಪೂರಕ ಸಾಕ್ಷ್ಯವನ್ನು ಮನಸ್ಸಿನಲ್ಲಿಟ್ಟುಕೊಂಡೇ ಹೇಳಿರಬಹುದೇನೋ. ಇಂತಹ ವಿದೇಶಿ ವಿನಾಶಕಾರಿ ಸಿದ್ಧಾಂತದ ವಾಹಕಗಳೆಂದರೆ ವಾಷಿಂಗ್ಟನ್ ಪೋಸ್ಟ್, ನ್ಯೂಯಾರ್ಕ್ ಟೈಮ್ಸ್ ನಂತಹ ಕೆಲವು ಪತ್ರಿಕೆಗಳು. ಇವೇನೂ ಸಾಮಾನ್ಯದ ಪತ್ರಿಕೆಗಳಲ್ಲ. 1970ರಲ್ಲಿ ಅಮೆರಿಕದ ಅಂದಿನ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರನ್ನು ಕೆಳಗಿಳಿಸಿದ್ದವು. ಅವು ಭೀಮಾ-ಕೋರೇಗಾಂವ್ ಪ್ರಕರಣದ ಆರೋಪಿಗಳ ಕಂಪ್ಯೂಟರ್‌ಗಳಲ್ಲಿ ಕೆಲವೊಂದು ಸುಳ್ಳು ದಾಖಲೆಗಳನ್ನು ಕಳ್ಳ ಮಾರ್ಗದಲ್ಲಿ ಅಳವಡಿಸಲಾಗಿತ್ತು ಎಂಬ ಸುದ್ದಿಯನ್ನು ಇತ್ತೀಚೆಗೆ ಪ್ರಕಟಿಸಿವೆ.
ಈ ಮೀಡಿಯಾ ವೈರಸ್‌ಗಳು ಎಷ್ಟು ಅಪಾಯಕಾರಿ ಎಂಬುದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಗೊತ್ತಿತ್ತು. ನಮ್ಮ ಪ್ರಧಾನಿಗಳೂ ಸಹ ಇಂತಹ ಅಪಾಯಗಳ ಬಗ್ಗೆ ಸದಾ ಜಾಗೃತರಾಗಿದ್ದಾರೆ. ಹಾಗಾಗಿ, ಇಂತಹ ಅಪಾಯಕಾರಿ “ಆಂದೋಲನಜೀವಿ“ ಪರಾವಲಂಬಿಗಳು, ಖಲಿಸ್ತಾನಿಗಳು, ಸಿಎಎ-ವಿರೋಧಿ ವಿದ್ಯಾರ್ಥಿಗಳು, ತುಕ್ಡೆ ತುಕ್ಡೆ ಗ್ಯಾಂಗ್‌ನ ಸದಸ್ಯರು ಮತ್ತು ನಗರ ನಕ್ಸಲರ ಬಗ್ಗೆ ಜಾಗೃತರಾಗಿರುವಂತೆ ನಮ್ಮನ್ನು ಭಾವೋದ್ವೇಗದಿಂದ ಎಚ್ಚರಿಸಿದ್ದಾರೆ ನಮ್ಮ ಪ್ರಧಾನಿ. ರೈತ ಚಳುವಳಿಯ ಒಳಗೆ ನುಸುಳುತ್ತಿರುವ ಇವರೆಲ್ಲರೂ ದೇಶವಿರೋಧಿಗಳೇ. ಸಮಸ್ಯೆ ಎಷ್ಟು ವಿಚಿತ್ರವಾಗಿದೆ ಎಂದರೆ, ರೈತ ಚಳುವಳಿಯ ಒಳಗೆ ನುಸುಳುತ್ತಿರುವ ಈ ಎಲ್ಲ ವೈರಸ್‌ಗಳೂ ಸಹ ರೈತರಂತೆಯೇ ಆಗಿ ಬಿಟ್ಟಿವೆ. ಇವರೆಲ್ಲರೂ ದೇಶ ವಿರೋಧಿಯಲ್ಲದಿದ್ದರೂ, ಸರ್ಕಾರದ ವಿರೋಧಿಗಳೇ. ಸರ್ಕಾರದ ವಿರೋಧಿಗಳಲ್ಲದಿದ್ದರೆ ಸರ್ಕಾರದ ನೀತಿಗಳ ವಿರೋಧಿಗಳಂತೂ ಖರೆ. ಇಷ್ಟೆಲ್ಲಾ ನಮ್ಮೆದುರೇ ಜರುಗುತ್ತಿದ್ದರೂ ಸಹ, ನಾವು ರಾತ್ರಿ ಹೊತ್ತು ನೆಮ್ಮದಿಯಿಂದ ಮಲಗಬಹುದು, ಏಕೆಂದರೆ, ಒಬ್ಬ ಸಂವೇದನಾಶೀಲ ಮತ್ತು ರಾಜಿ ಮಾಡಿಕೊಳ್ಳದ ವ್ಯಕ್ತಿತ್ವದ ಮತ್ತು 56 ಇಂಚಿನ ಎದೆಯ ಒಬ್ಬ ಬಲಿಷ್ಠ ಪ್ರಧಾನಿಯಿಂದ ನಾವು ರಕ್ಷಿಸಲ್ಪಡುತ್ತಿದ್ದೇವೆ.
ದೆಹಲಿಯ ಗಡಿಭಾಗದಲ್ಲಿ ಜಮಾಯಿಸಿರುವ ರೈತರನ್ನು ಅಲುಗಾಡಿಸಲಾಗುತ್ತಿದೆ. ಒಂದು ಸಣ್ಣ ಅನುಮಾನದ ಮೇಲೂ ಅವರನ್ನು ಅರೆಸ್ಟ್ ಮಾಡಬಹುದು. ರೈತರು – ಗಂಡಸರು, ಮಹಿಳೆಯರು ಮತ್ತು ಮಕ್ಕಳು – ಆಕ್ರಮಣಕಾರಿ ಮನೋಭಾವದವರಲ್ಲ, ನಿಜ. ಆದರೆ, ಅವರು ಒಡ್ಡಿರುವ ಸವಾಲನ್ನು ಎದುರಿಸಲು ಪ್ರಧಾನ ಮಂತ್ರಿ ಮತ್ತು ಪ್ರಭುತ್ವದ ಇಡೀ ಶಕ್ತಿ ಸಿದ್ಧವಾಗಿವೆ. ರೈತರ ಬಳಿ ಇರುವ ಏಕೈಕ ಅಸ್ತ್ರವೆಂದರೆ ಟ್ರ‍್ಯಾಕ್ಟರ್‌ಗಳು ಮಾತ್ರ. ಈ ಅಸಮ ಬಲದ ಹೋರಾಟದಲ್ಲಿ ರೈತರು ಗೆಲ್ಲಲಾರರು. ಆದಾಗ್ಯೂ, ಈ ಯುದ್ಧದ ಫಲಿತಾಂಶವನ್ನು ಮೊದಲೇ ಹೇಳುವುದು ದಿನಗಳೆದಂತೆ ಕಷ್ಟವಾಗಿ ಪರಿಣಮಿಸುತ್ತಿದೆ. ರೈತರು ಮೊದಲೇ ಬೆಚ್ಚಿ ಬೀಳಿಸುವವರು, ಹಠವಾದಿಗಳು. ಧೃತಿಗೆಡದ ಸಂಕಲ್ಪ ಮಾಡಿರುವವರು. ಈ ಹೋರಾಟವನ್ನು ನಡೆಸಲು ಅವರು ಒಂದು ಅಸಂಗತ ಎಂದೇ ಹೇಳಬಹುದಾದ ಮಾರ್ಗವನ್ನು ಕಂಡುಕೊಂಡಿದ್ದಾರೆ. ಅವರು ದೆಹಲಿಗೆ ಬರಲು ಆಸಕ್ತಿ ತೋರುತ್ತಿಲ್ಲ. ಭಾವೋದ್ರೇಕದ ಅದ್ಭುತ ಭಾಷಣಗಳ ಬಗ್ಗೆ ಅಥವಾ ಪ್ರಧಾನಮಂತ್ರಿಯ ‘ಮನ್ ಕಿ ಬಾತ್’ ಭಾಷಣದ ಬಗ್ಗೆಯೂ ಆಸಕ್ತಿ ತೋರುತ್ತಿಲ್ಲ. ಸರ್ಕಾರ ಅವರೊಂದಿಗೆ ಮಾತುಕತೆ ನಡೆಸಲು ನಿಜವಾದ ಆಸಕ್ತಿ ತೋರದ ಹೊರತು ಸರ್ಕಾರದೊಂದಿಗೆ ಮಾತನಾಡುವ ಆಸಕ್ತಿಯನ್ನೂ ತೋರುತ್ತಿಲ್ಲ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಸಂಸತ್ತಿನಲ್ಲಿ ಪ್ರಧಾನಿ ನೀಡಿದ ಮೌಖಿಕ ಭರವಸೆಯ ಬಗ್ಗೆಯೂ ಅವರು ಆಸಕ್ತಿ ತೋರುತ್ತಿಲ್ಲ. ಅವರು ಆಸಕ್ತಿ ಮತ್ತು ಬಯಕೆ ಏನೆಂದರೆ, ಸಂಸತ್ತು ಅದಕ್ಕಾಗಿ ಅಂಗೀಕರಿಸಿದ ಒಂದು ಕಾನೂನು, ಅಷ್ಟೇ.
ಈ ಬಗ್ಗೆ ರೈತರು ಆತುರದಲ್ಲಿಲ್ಲ, ಆತಂಕದಲ್ಲಿಲ್ಲ ಎಂಬುದನ್ನು ಅರಿತ ಸರ್ಕಾರವೇ ಆತಂಕಿತವಾಗಿದೆ. ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಮಾತ್ರವಲ್ಲ ಅಥವಾ ಸಿಖ್ ಮತ್ತು ಜಾಟ್ ಸಮುದಾಯದ ರೈತರು ಮಾತ್ರವಲ್ಲ, ಮಹಾರಾಷ್ಟ್ರ, ರಾಜಸ್ಥಾನ, ಬಿಹಾರ ಮತ್ತು ಮಧ್ಯಪ್ರದೇಶ ಸೇರಿದಂತೆ ಮಧ್ಯ ಭಾರತ ಮತ್ತು ಉತ್ತರ ಭಾರತದ ರೈತ ಸಮುದಾಯದ ಬೆಂಬಲವನ್ನು ಪಡೆಯುತ್ತಿದ್ದಾರೆ. ಜಾತಿ, ಧರ್ಮ, ವರ್ಗ ಮತ್ತು ಭಾಷಾ ಗಡಿಗಳನ್ನು ಮೀರಿದ ಮತ್ತು ಉತ್ಸಾಹದಿಂದ ಕೂಡಿದ ರೈತ-ಜನಸ್ತೋಮವನ್ನು ಮಹಾಪಂಚಾಯಿತಿಗಳು ಸೆಳೆಯುತ್ತಿವೆ. ಅಷ್ಟೊಂದು ಬೃಹತ್ ಸಂಖ್ಯೆಯಲ್ಲಿ ರೈತರು ಮಹಾಪಂಚಾಯಿತಿಗಳಲ್ಲಿ ಸೇರುತ್ತಿರುವುದು ಸರ್ಕಾರಕ್ಕೆ ಬರಲಿರುವ ಒಂದು ಕೇಡಿನ ಸ್ಪಷ್ಟ ಸೂಚನೆಯಾಗಿ ಕಾಣಿಸುತ್ತಿದೆ.
ಈ ಆಂದೋಲನವು ವಿಂಧ್ಯ ಪರ್ವತಗಳ ದಕ್ಷಿಣಕ್ಕಿರುವ ಆಂಧ್ರ, ತೆಲಂಗಾಣ, ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ದಿನದಿಂದ ದಿನಕ್ಕೆ ಹೊಸ ಚೈತನ್ಯ ಪಡೆಯುತ್ತಿದೆ. ಅಲ್ಲಿ ರೈತರು ಉತ್ಸಾಹಪೂರ್ಣ ಮೆರವಣಿಗೆ ನಡೆಸುತ್ತಿದ್ದಾರೆ. ಪೂರ್ವ ಭಾರತದಲ್ಲಿ ಚಳುವಳಿಯ ಕಾವು ಇದುವರೆಗೆ ಅಷ್ಟೊಂದು ಏರಿದಂತೆ ಕಾಣುತ್ತಿಲ್ಲವಾದರೂ, ರೈತ ಪ್ರತಿಭಟನೆಯ ಬೃಹತ್ ಅಲೆಗಳು ಒಮ್ಮೆ ಬಂಗಾಳ ಕೊಲ್ಲಿಯ ತೀರವನ್ನು ತಲುಪಿದವೆಂದರೆ, ಬಿಜೆಪಿಯ ಎಲ್ಲ ಕನಸುಗಳೂ ನುಚ್ಚು ನೂರಾಗುತ್ತವೆ. ಭಾರತದಲ್ಲಿ ಹಿಂದೆಂದೂ ಕಾಣದಷ್ಟು ಮಟ್ಟದ ಬಂಡಾಯವನ್ನು ರೈತರು ಹೂಡಿದ್ದಾರೆ. ದೆಹಲಿಯ ಗಡಿ ಭಾಗದಲ್ಲಿ ಜಮಾಯಿಸಿರುವ ರೈತರನ್ನು ಸುತ್ತುವರೆಯಬಹುದು ಎಂದು ಸರ್ಕಾರ ಬಗೆದಿತ್ತು, ಆದರೆ, ರೈತರು ತ್ವರಿತವಾಗಿ ಆ ಸರ್ಕಾರವನ್ನೇ ಸುತ್ತುವರೆದಿದ್ದಾರೆ.
ಒಂದು ಅಸಾಧಾರಣ ಸಂದರ್ಭ ಎದುರಾದಾಗ, ಸಣ್ಣ ಪುಟ್ಟ ಚುನಾವಣಾ ಲೆಕ್ಕಾಚಾರಗಳನ್ನು ಮೀರಿ, ಎದುರಾದ ಸಂದರ್ಭಕ್ಕೆ ತಕ್ಕಂತೆ ರಾಜಕೀಯ ಪಕ್ಷಗಳು ಒಂದು ಸಂಯುಕ್ತ ಶಕ್ತಿಯಾಗಿ ಆವಿರ್ಭವಿಸಿ, ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಮಾತ್ರವಲ್ಲದೆ ಅದರ ನಿರ್ಮಾತೃಗಳನ್ನೂ ರೈತರ ಬಂಡಾಯದ ಬಲದೊಂದಿಗೆ ಮುಳುಗಿಸಲು ಎದ್ದು ನಿಲ್ಲುವ ಸಾಮರ್ಥ್ಯ ಹೊಂದಿವೆಯೇ ಎಂಬುದು ಪರೀಕ್ಷೆಗೆ ಒಳಗಾಗಿದೆ.
ಅನು: ಕೆ.ಎಂ.ನಾಗರಾಜ್