- ಸರ್ಕಾರಗಳು ಹಠಮಾರಿ ಧೋರಣೆ ಕೈಬಿಡದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ
ಬೆಂಗಳೂರು: ಕೇಂದ್ರ ಸರಕಾರದ, ರೈತ ಹಾಗೂ ಕೃಷಿಕೂಲಿಕಾರರು, ಕಸುಬುದಾರರ ಆಧಾರಿತ ಕೃಷಿ ವಿರೋಧಿಯಾದ ಮತ್ತು ಕಾರ್ಪೋರೇಟ್ ಕಂಪನಿಗಳ ಪರವಾದ ಕೃಷಿ ಸಂಬAಧಿತ ಕಾಯ್ದೆಗಳನ್ನು ಕೂಡಲೇ ವಾಪಸ್ ಪಡೆಯಬೇಕು, ಕರ್ನಾಟಕ ಸರಕಾರ ಶಾಸನ ಸಭೆಗಳಲ್ಲಿ ಅಂಗೀಕಾರವಾಗದಿದ್ದರೂ ಎರಡನೇ ಬಾರಿ ಸುಗ್ರೀವಾಜ್ಞೆಗಳನ್ನು ಹೊರಡಿಸಲು ನಿರ್ಧರಿಸಿರುವುದನ್ನು ಖಂಡಿಸಿ ಮಹಾತ್ಮ ಗಾಂಧಿ ಜನ್ಮದಿನವಾದ ಅ.2ರ ಶುಕ್ರವಾರ ಇಡೀ ರಾಜ್ಯಾದ್ಯಂತ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ- ಕರ್ನಾಟಕ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ-ಹಸಿರುಸೇನೆ, ಆಲ್ ಇಂಡಿಯಾ ಕಿಸಾನ್ ಸಭಾ, ಕರ್ನಾಟಕ ಪ್ರಾಂತ ರೈತಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಸಿಐಟಿಯು, ದಲಿತ ಸಂಘಟನೆಗಳು, ವಿದ್ಯಾರ್ಥಿ-ಯುವಜನ, ಮಹಿಳಾ ಸಂಘಟನೆಗಳು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದವು.
ರಾಜ್ಯ ಸರ್ಕಾರವು ಸುಗ್ರೀವಾಜ್ಞೆ ಮೂಲಕ ಭೂಸುಧಾರಣೆ ತಿದ್ದುಪಡಿ ಕಾಯ್ದೆ- 2020 ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ- ಕಾರ್ಮಿಕ ವಿರೋಧಿ ತಿದ್ದುಪಡಿ ಕಾಯ್ದೆ ಮತ್ತು ಕೇಂದ್ರ ಸರ್ಕಾರವು ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ-2020 ಹಾಗೂ ವಿದ್ಯುಚ್ಛಕ್ತಿ ತಿದ್ದುಪಡಿ ಕಾಯ್ದೆ- 2020 ಜಾರಿಗೆ ಮುಂದಾಗಿದ್ದವು. ಇತ್ತೀಚೆಗೆ ನಡೆದ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಸುಗ್ರೀವಾಜ್ಞೆಗಳನ್ನು ಕಾಯ್ದೆಯನ್ನಾಗಿ ರೂಪಿಸಿದೆ. ಆದರೆ ರಾಜ್ಯ ಸರ್ಕಾರವು ರೈತವಿರೋಧಿ ಭೂಸುಧಾರಣೆ ತಿದ್ದುಪಡಿ ಮತ್ತು ಎಪಿಎಂಸಿ ಕಾಯ್ದೆಗೆ ವಿಧಾನಸಭೆ ಅಂಗೀಕಾರ ನೀಡಿದ್ದು, ವಿಧಾನಪರಿಷತ್ ಅಂಗೀಕಾರ ಬಾಕಿ ಇದೆ. ಕಾರ್ಮಿಕ ತಿದ್ದುಪಡಿ ಮಸೂದೆ ವಿಧಾನರಿಷತ್ನಲ್ಲಿ ತಿರಸ್ಕಾರಗೊಂಡಿದೆ. ಈ ಮೂರು ಮಸೂದೆಗಳನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಮೊನ್ನೆಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿದೆ. ಶಾಸನಸಭೆಗಳಲ್ಲಿ ತಿರಸ್ಕಾರಗೊಂಡ ಮಸೂದೆಗಳನ್ನು ಸುಗ್ರೀವಾಜ್ಞೆ ಮೂಲಕ ಪುನಃ ಜಾರಿಗೆ ಪ್ರಯತ್ನಿಸುವುದು ಸಂವಿಧಾನವಿರೋಧಿ ಕ್ರಮವಾಗಿದ್ದು, ರೈತವಿರೋಧಿ ಕಾಯಿದೆಗಳ ಜಾರಿಗೆ ರಾಜ್ಯಸರ್ಕಾರ ಹಠಮಾರಿ ಧೋರಣೆ ತಳೆದಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ಪಡಿಸಿದರು.
ಬೆಲೆ ಖಾತರಿ, ಕೃಷಿಸೇವೆಗಳ ಕುರಿತ ರೈತರ (ಸಶಕ್ತೀಕರಣ ಮತ್ತು ರಕ್ಷಣೆ) ಒಪ್ಪಂದದ ಮಸೂದೆ-೨೦೨೦ ನಮ್ಮ ದೇಶದ ಹಾಗೂ ವಿದೇಶಗಳ ಕೃಷಿ ವ್ಯಾಪಾರಿ ಸಂಸ್ಥೆಗಳು, ರಫ್ತುದಾರರು, ಸಗಟು ವರ್ತಕರು, ಚಿಲ್ಲರೆ ವ್ಯಾಪಾರದಲ್ಲಿ ತೊಡಗಿದ ದೊಡ್ಡ ಬಂಡವಾಳದಾರರು, ಕಾರ್ಪೋರೆಟ್ ಸಂಸ್ಥೆಗಳಿಗೆ ರೈತರ ಕೃಷಿ ಉತ್ಪನ್ನಗಳಾದ ಏಕದಳ, ದ್ವಿದಳ ಧಾನ್ಯಗಳು, ಎಣ್ಣೆ ಕಾಳುಗಳು, ತರಕಾರಿ, ಹಣ್ಣುಗಳು, ಕಬ್ಬು, ಮಸಾಲೆ ಪದಾರ್ಥಗಳು, ಹತ್ತಿ, ಹತ್ತಿ ಬೀಜ, ಸೆಣಬು, ಹಾಗೂ ಗೋಡಂಬಿ ಮುಂತಾದ ನಟ್ಸ್ಗಳು ಮತ್ತು ಹೈನುಗಾರಿಕೆ, ಪಶು ಆಹಾರ, ಹಾಲು ಉತ್ಪನ್ನಗಳು, ಕೋಳಿ, ಕುರಿ, ಹಂದಿ ಸಾಕಣೆ, ಮೀನುಗಾರಿಕೆಗಳ ಮುಂಗಡ ವ್ಯಾಪಾರದಲ್ಲಿ ತೊಡಗಲು ಅವಕಾಶ ನೀಡುತ್ತದೆ. ಈ ಮುಂಗಡ ವ್ಯಾಪಾರವೆಂಬುದು ಬೆಳೆ ಮತ್ತಿತರೆ ಉತ್ಪನ್ನಗಳು, ಬಿತ್ತನೆ ಹಾಗೂ ಉತ್ಪಾದಿಸಲ್ಪಡುವ ಪೂರ್ವವೇ ಇಂತಹ ಕಂಪನಿಗಳೊಂದಿಗೆ ಮಾರಾಟ ಮಾಡಿಕೊಳ್ಳುವ ಮೋಸದಿಂದ ಕೂಡಿದ ವ್ಯವಸ್ಥೆಯಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಮುಂಗಡ ವ್ಯಾಪಾರದಲ್ಲಿ ತೊಡಗುವ ದೈತ್ಯ ಕಂಪನಿಗಳ ಭಾರಿ ಬಂಡವಾಳ ಹಾಗೂ ಪ್ರಧಾನ ಮಂತ್ರಿಗಳವರೆಗಿನ ಅಧಿಕಾರಿಗಳ ಪ್ರಭಾವದೆದುರು, ಯಾವುದೇ ರೈತ ಹಾಗೂ ಕಸುಬುದಾರ ಖಂಡಿತಾ ಅವರ ಮೋಸಗಳನ್ನು ಎದುರಿಸಿ ನಿಲ್ಲಲು ಸಾಧ್ಯವಿಲ್ಲ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರ ಜೊತೆ ಸೇರಿ, ಅಂತಹ ಮೋಸಗಳಿಂದ ರೈತರನ್ನು ಹಾಗೂ ಕಸುಬುದಾರರನ್ನು ರಕ್ಷಿಸುವ ಗಂಭೀರವಾದ ಕ್ರಮಗಳೇನನ್ನೂ ಕೈಗೊಂಡಿಲ್ಲ. ಇಂತಹ ದೈತ್ಯ ಕಂಪನಿಗಳ ಲೂಟಿಗಾಗಿಯೇ ಎಪಿಎಂಸಿಗಳನ್ನು ನಾಶ ಮಾಡುವ ಮತ್ತು ಗ್ರಾಹಕರ ಅಪಾರವಾದ ಲೂಟಿಗೆ ನೆರವಾಗುವ ಇನ್ನೆರಡು ತಿದ್ದುಪಡಿ ಕಾಯ್ದೆಗಳನ್ನ ತರಲಾಗಿದೆ. ಅದೇ ರೀತಿ ಈ ಎಲ್ಲವೂಗಳು ನಮ್ಮ ಸಹಕಾರಿ ಚಳವಳಿಯನ್ನೇ ಹೊಸಕಿ ಹಾಕುತ್ತವೆ ಎಂಬ ಆತಂಕವನ್ನು ಪ್ರತಿಭಟನಾಕಾರರು ವ್ಯಕ್ತಪಡಿಸಿದರು.
ಈ ಕಾಯ್ದೆಗಳಿಂದ ಎಲ್ಲಾ ರೈತರು, ಕೃಷಿಕೂಲಿಕಾರರು, ಕಸುಬುದಾರರು, ಕೃಷಿ ಮಾರುಕಟ್ಟೆ ವರ್ತಕರು, ಅಲ್ಲಿನ ನೌಕರರು, ಕೃಷಿ ಸಂಬಂಧಿ ಹೂಡಿಕೆಗಳಾದ ಬೀಜ, ಗೊಬ್ಬರ ಕ್ರಿಮಿನಾಶಕಗಳ ವ್ಯಾಪಾರಿಗಳು, ಹಾಲು ಉತ್ಪಾದಕರು, ಎಲ್ಲಾ ಸಹಕಾರ ಸಂಘಗಳು, ಕೋಳಿ, ಕುರಿ, ಹಂದಿ ಸಾಕಣೆದಾರರು, ಈ ಉತ್ಪನ್ನಗಳನ್ನು ಆಧರಿಸಿದ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಮಾಲೀಕರು, ಅಲ್ಲಿನ ಕಾರ್ಮಿಕರು ಹಾಗೂ ಇವುಗಳನ್ನು ಆಧರಿಸಿದ ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳು, ಕುಲ ಕಸುಬುದಾರರು, ದಲಿತರು, ಮಹಿಳೆಯರು, ಒಟ್ಟಾರೇ ಸಮಸ್ಥ ಗ್ರಾಹಕ ಸಮುದಾಯಗಳು ತೀವ್ರ ರೀತಿಯಲ್ಲಿ ಬಾಧಿತರಾಗಿ ಬೀದಿ ಪಾಲಾಗಲಿದ್ದಾರೆ. ಅದೇ ರೀತಿ, ಒಂದು ವೇಳೆ ರಾಜ್ಯ ಸರಕಾರ ತನ್ನ ಹಟವನ್ನು ಮುಂದುವರಿಸಿ, ಶಾಸನಸಭೆಗಳಲ್ಲಿ ತಿರಸ್ಕಾರಗೊಂಡಿರುವ ಸುಗ್ರೀವಾಜ್ಞೆಗಳನ್ನು ಮತ್ತೆ ಹೊರಡಿಸುವುದು ಮತ್ತು ಅವುಗಳನ್ನು ಕಾಯ್ದೆಗಳನ್ನಾಗಿಸಲು ರಾಜ್ಯದಲ್ಲಿ ಕ್ರಮ ವಹಿಸಿದಲ್ಲಿ ಉಗ್ರ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿವೆ.
ಈ ಕರಾಳ ಕಾಯ್ದೆಗಳಿಂದ ಬಾಧಿತರಾಗುವ ಎಲ್ಲ ಜನ ವಿಭಾಗಗಳು ಮತ್ತು ಸಮುದಾಯಗಳು, ನಾಗರಿಕರ ಅಭಿಪ್ರಾಯಗಳನ್ನು ಗೌರವಿಸಿ ಕೇಂದ್ರ ಸರ್ಕಾರ ಅಂಗೀಕರಿಸಿರುವ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ರಾಜ್ಯ ಸರ್ಕಾರ ಕೂಡ ತನ್ನ ಹಠಮಾರಿ ಧೋರಣೆಯನ್ನು ಕೈಬಿಟ್ಟು ಸುಗ್ರೀವಾಜ್ಞೆ ಕೈಬಿಟ್ಟು ರೈತಪರವಾಗಿ ನಿಲ್ಲಬೇಕು ಎಂದು ಆಗ್ರಹಿಸಿದರು.
ರಾಜ್ಯದ ವಿವಿಧ ಕಡೆ ನಡೆದ ಪ್ರತಿಭಟನೆ















