ರೈತರು ಮತ್ತೊಮ್ಮೆ ಪಾಳೆಗಾರಿ ಗುಲಾಮಗಿರಿಗೆ!

ಹಿಂದೊಮ್ಮೆ ಬಡ ರೈತರು ಮತ್ತು ಭೂರಹಿತ ಕೃಷಿಕೂಲಿಕಾರರು ಹಾಗೂ ಗೇಣಿದಾರರು ಹಲವು ಹಂತದ ಹೋರಾಟ ಮಾಡಿ ಪ್ರಾಣ ಬಲಿದಾನ ಮಾಡಿ ಕ್ರೂರ ಜಮೀನ್ದಾರಿ ಪದ್ಧತಿಯನ್ನು ನಿರ್ಮೂಲನೆ ಮಾಡುವುದರಲ್ಲಿ ಯಶಸ್ವಿಯಾಗಿದ್ದರು. ಕೆಲಮಟ್ಟಿಗಾದರೂ ಭೂಮಿಯ ಸಮಾನ ಹಂಚಿಕೆ ಸಾಧ್ಯವಾಯಿತು. ಉಳುವವನೇ ಭೂಮಿಯ ಒಡೆಯನಾಗಲೂ ಸಾಧ್ಯವಾಯಿತು. ಕೆಲ ಮಟ್ಟಿಗಾದರೂ ಪಾಳೆಗಾರಿ ಗುಲಾಮಗಿರಿ ಅಂತ್ಯವಾಯಿತು. ರೈತರು ಸ್ವತಂತ್ರರಾದರು. ರೈತರ ಭೂಮಿಯನ್ನು ದುಡ್ಡು ಇರುವ ರೈತರಲ್ಲದ ಸಾಹುಕಾರರು ಕಿತ್ತು ಕೊಳ್ಳುವುದನ್ನು ಕಾನೂನಾತ್ಮಕವಾಗಿ ತಡೆಹಿಡಿಯಲಾಯಿತು.

ಭಾರತ ದೇಶದಲ್ಲಿ ಭೂಮಿಯ ಪ್ರಶ್ನೆ ಪರಿಪೂರ್ಣವಾಗಿ ಇನ್ನೂ ಇತ್ಯರ್ಥವಾಗಿಲ್ಲ. ಈ ಕಾಲ ಘಟ್ಟದಲ್ಲಿ ಒಂದು ರೈತ ಪರ ಸರ್ಕಾರ ಕೃಷಿ ಭೂಮಿಯ ಸಮಾನ ಹಂಚಿಕೆ, ಭೂಹೀನ ಬಡವರಿಗೆ, ದಲಿತರಿಗೆ ಕೃಷಿ ಭೂಮಿಯನ್ನು ವಿತರಣೆ ಮಾಡಿ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಬೇಕಾಗಿತ್ತು. ಅದರ ಬದಲಾಗಿ ಮೋದಿ ಸರ್ಕಾರವು ವ್ಯಾಪಕ ವಿರೋಧದ ನಡುವೆಯೇ ದೊಡ್ಡ ಕಾರ್ಪೊರೇಟ್ ಕಂಪನಿಗಳಿಗೆ ಕೃಷಿ ರಂಗವನ್ನು ಪ್ರವೇಶಿಸಲು ಕಾನೂನು ಅವಕಾಶ ಕಲ್ಪಿಸಲು ಮುಂದಾಗಿದೆ. ಸಂಸತ್ತಿನಲ್ಲಿ ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಅಂಗೀಕರಿಸಲಾದ ಕೃಷಿ ಹಾಗೂ ಕೃಷಿ ವ್ಯಾಪಾರದ ಮಸೂದೆಗಳನ್ನು ಗಮನಿಸಿದರೆ ರೈತರು ಮತ್ತೊಂದು ಬಾರಿಗೆ ಪಾಳೆಗಾರಿ ಗುಲಾಮಗಿರಿಗೆ ಬಲಿಯಾಗಲಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.  ಈ ಬಾರೀ ಜಮೀನ್ದಾರಿ ಗುಲಾಮಗಿರಿಯಲ್ಲ. ಅದಕ್ಕೂ ಹೆಚ್ಚು ಅಪಾಯಕಾರಿಯಾದ ಕಾರ್ಪೊರೇಟ್ ಕಂಪನಿಗಳ ಗುಲಾಮಗಿರಿಗೆ!

ಕೃಷಿ ರಂಗದಲ್ಲಿ ಸುಧಾರಣೆಗಳನ್ನು ತರುವುದೇ ಈ ಮಸೂದೆಗಳ ಉದ್ದೇಶವಾಗಿದೆ ಎಂದು ಸರ್ಕಾರ ರೈತರಿಗೆ ಹೇಳುತ್ತಿದೆ. ಈ ಮಸೂದೆಗಳನ್ನು ಕೃಷಿ ಮಾರುಕಟ್ಟೆ ಮತ್ತು ಕೃಷಿ ಉತ್ಪನ್ನಗಳ ವ್ಯಾಪಾರದ ರಂಗದಲ್ಲಿ ಬಹು ದೂರಗಾಮಿ ಪರಿಣಾಮಗಳನ್ನು ಬೀರಲಿವೆ. ಒಂದು ಸಾಮಾನ್ಯ ಮಾರುಕಟ್ಟೆ ನಿರ್ಮಾಣವಾಗಲಿದೆ.  ಎಪಿಎಂಸಿ ಅಂತಹ ಒಂದು ವ್ಯವಸ್ಥೆಯ ಅಗತ್ಯವೇ ಇಲ್ಲದಂತೆ ಮಾಡಲಿದೆ. ಕನಿಷ್ಠ ಬೆಂಬಲ ಬೆಲೆ (ಎಮ್‌ಎಸ್‌ಪಿ) ಮುಂದುವರೆಯಲಿದೆ. ಆತಂಕಬೇಡ ಎಂದು ಸರ್ಕಾರ ಹೇಳುತ್ತಿದೆ. ರೈತರಿಗೆ ಮೊದಲಿಗಿಂತಲೂ ಹೆಚ್ಚು ಸ್ವಾತಂತ್ರ್ಯ ದೊರೆಯಲಿದೆ ಎನ್ನಲಾಗುತ್ತಿದೆ. ಆದರೆ ರೈತರೊಂದಿಗೆ ಮುಕ್ತ ಚರ್ಚೆಗೆ ಸರಕಾರ ಮುಂದಾಗಲಿಲ್ಲ. ರಾಜ್ಯಗಳ ಅಭಿಪ್ರಾಯಗಳನ್ನಾಗಲಿ ಸಲಹೆಗಳನ್ನಾಗಲಿ ಕೇಳದೆ ಸಂಸತ್ತಿನಲ್ಲಿ ತಮಗೆ ಬಹುಮತವಿದೆ ಎಂಬ ಅಹಂಕಾರದಿಂದ ಕೇವಲ ಗಲಾಟೆ ಮಾಡಿಸಿ ಧ್ವನಿಮತದಿಂದ ಮಸೂದೆಗಳನ್ನು ಅಂಗೀಕರಿಸಲಾಗಿದೆ. ರೈತರಿಗೆ ಹೆಚ್ಚು ಸ್ವಾತಂತ್ರ್ಯ ದೊರೆಯಲಿದೆ ಎಂದು ಹೇಳಲಾಗುತ್ತಿದೆ. ವ್ಯಾಪಾರ ಇಬ್ಬರ ಅಸಮಾನರ ನಡುವೆ ನಡೆಯುವಾಗ, ಅಂದರೆ ದೊಡ್ಡ ಕಾರ್ಪೊರೇಟ್ ಕಂಪನಿಗಳು ಒಂದು ಕಡೆ, ಬಡ ಮಧ್ಯಮ ರೈತರು ಇನ್ನೊಂದು ಕಡೆ ಇರುವಾಗ ನ್ಯಾಯ ಯಾರ ಪರವಾಗಿ ನಿಲ್ಲುತ್ತದೆ. ಇನ್ನೂ ಕಾಲ ಮಿಂಚಿಲ್ಲ. ಸರ್ಕಾರ ಕಾರ್ಪೊರೇಟ್ ಪರವಾದ ತನ್ನ ಧೋರಣೆಯನ್ನು ಬದಲಾಯಿಸಿ ರೈತರ ಹಿತವನ್ನು ಕಾಪಾಡಲು ಮುಂದಾಗಬೇಕು. ತಪ್ಪಿದರೆ ರೈತರ ಆಕ್ರೋಶ ಮೋದಿ ಸರಕಾರವನ್ನು ಭಸ್ಮ ಮಾಡದೆ ಇರಲಾರದು.

ಸಂಸತ್ತಿನ ಈ ಬೆಳವಣಿಗೆಗಳಿಂದ ರಾಜ್ಯ ಬಿಜೆಪಿ ಸರಕಾರ ಪಾಠ ಕಲಿಯಬೇಕಾಗಿತ್ತು. ಭೂ ಸುಧಾರಣೆ ಕಾಯ್ದೆ ಹಾಗೂ ವಿದ್ಯುತ್ ಕಾಯ್ದೆಗಳಿಗೆ ತಿದ್ದುಪಡಿ ತರುವ ಸುಗ್ರೀವಾಜ್ಞೆಗಳನ್ನು ವಿಧಾನ ಮಂಡಲದಲ್ಲಿ ಮಂಡಿಸಿ ಅಂಗೀಕಾರ ಪಡೆಯಲು ಯಡಿಯೂರಪ್ಪ ಸರ್ಕಾರ ತುದಿಗಾಲ ಮೇಲೆ ನಿಂತಿದೆ. ರೈತ, ಕಾರ್ಮಿಕ, ದಲಿತ ಸಂಘಟನೆಗಳು ಸರಕಾರದ ವಿರುದ್ಧ ತೀವ್ರ ಪ್ರತಿಭಟನೆಯನ್ನು ಆರಂಭಿಸಿವೆ. ಭೂ ಸುಧಾರಣಾ ಮತ್ತು ಎಪಿಎಂಸಿ ಕಾಯ್ದೆಗಳನ್ನು ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತರಲು ರಾಜ್ಯ ಸರಕಾರ ಮುಂದಾಗಿರುವುದು ಹೋರಾಟ ನಿರತ ರೈತರ ಆಕ್ರೋಶ ಮುಗಿಲು ಮುಟ್ಟಿಸಿದೆ.

ಇತ್ತೀಚಿಗೆ ಸಂಸತ್ತಿನಲ್ಲಿ ಅಂಗೀಕರಿಸಲಾಗಿರುವ ಕೃಷಿ ಸುಧಾರಣೆ ಮತ್ತು ಕಾರ್ಮಿಕ ಕಾಯ್ದೆ ತಿದ್ದುಪಡಿ ಮಸೂದೆ ವಿರುದ್ಧ ೩೫ಕ್ಕೂ ಹೆಚ್ಚು ರೈತರ, ಕಾರ್ಮಿಕರ, ದಲಿತರ ಮತ್ತು ಕೃಷಿ ಕೂಲಿಕಾರರ ಸಂಘಟನೆಗಳು ಸೆಪ್ಟೆಂಬರ್ ೨೫ ರಂದು ಭಾರತ್ ಬಂದ್‌ಗೆ ಕರೆ ನೀಡಿದೆ. ಅಂದು ದೇಶಾದ್ಯಂತ ನೂತನ ಶಾಸನಗಳ ವಿರುದ್ಧವಾಗಿ ರೈಲು ತಡೆ, ರಸ್ತೆ ತಡೆ ಚಳವಳಿ ನಡೆಯಲಿದೆ. ಪ್ರಮುಖ ಪ್ರತಿಪಕ್ಷಗಳು `ಭಾರತ್ ಬಂದ್’ಗೆ ಬೆಂಬಲ ಘೋಷಿಸಿವೆ.

ಕರ್ನಾಟಕದಲ್ಲಿ ಮಾತ್ರ ಸೆಪ್ಟೆಂಬರ್ ೨೮ರಂದು ಈ ಚಾರಿತ್ರಿಕ ಹೋರಾಟವನ್ನು ಯಶಸ್ವಿಗೊಳಿಸಲು ತೀರ್ಮಾನಿಸಿರುವ ವಿವಿಧ ರೈತ, ಕಾರ್ಮಿಕ, ದಲಿತ ಹಾಗೂ ಕೂಲಿಕಾರ ಸಂಘಟನೆಗಳು ೨೫ ರಂದು ಬೆಂಗಳೂರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಐದು ಸಾವಿರಕ್ಕೂ ಹೆಚ್ಚು ಜನರು ಸೇರಿ ರಸ್ತೆತಡೆ ನಡೆಸಲಿದ್ದಾರೆ. ಈ  ಚಾರಿತ್ರಿಕ ಹೋರಾಟ ಯಶಸ್ವಿಯಾಗುವ ಎಲ್ಲ ಸಾಧ್ಯತೆಗಳು ಕಂಡು ಬರುತ್ತಿವೆ.

 

Donate Janashakthi Media

Leave a Reply

Your email address will not be published. Required fields are marked *