“ದೇಶವಾಸಿಗಳೆ, ಕೇಳಿ ನನ್ನ ‘ಮನ್ ಕಿ ಬಾತ್.’ ವಿರೋಧ ಪಕ್ಷಗಳ ಮಾತು ಕೇಳಬೇಡಿ. ಅವರು ನಿಮ್ಮ ದಾರಿ ತಪ್ಪಿಸುತ್ತಾರೆ. ನಾನು ಮತ್ತು ನನ್ನ ಸರ್ಕಾರ ರೈತರ ಪರವಾಗಿದೆ. ರೈತರಿಗೆ ಸ್ವಾತಂತ್ರ್ಯವನ್ನು ದಯಪಾಲಿಸಿದವನು. ನಾನಲ್ಲದೆ ಮತ್ತ್ಯಾರು?” ಮನ್ ಕಿ ಬಾತ್ ಹಾಗೆಯೇ ಮುಂದುವರೆಯುತ್ತದೆ.
ಅಗಸ್ಟ್ 15, 1947 ರಂದು ರೈತರಿಗೆ ಸ್ವಾತಂತ್ರ್ಯ ದೊರಕಿರಲಿಲ್ಲವಂತೆ! ರೈತರಿಗೆ ಸ್ವಾತಂತ್ರ್ಯ ದೊರಕಿದ್ದು ಈಗಷ್ಟೇಯಂತೆ! ಜೂನ್ 3, 2020ರಂದು ಸಂಸತ್ತಿನಲ್ಲಿ, ಯಾವುದೇ ಚರ್ಚೆ ಇಲ್ಲದೆ, ಕೇವಲ ದ್ವನಿಮತದ ಮೂಲಕ ಅಂಗೀಕರಿಸಲಾದ ಮೂರು ಕೃಷಿ ಮಸೂದೆಗಳ ಮೂಲಕವಷ್ಟೆ ರೈತರಿಗೆ ತಮ್ಮ ಕೃಷಿ ಉತ್ಪನ್ನಗಳನ್ನು ದೇಶದಲ್ಲಿ ಎಲ್ಲಿ ಬೇಕಾದರೂ ಮಾರಾಟ ಮಾಡುವ ಸ್ವಾತಂತ್ರ್ಯ ಲಭಿಸಿತಂತೆ. ಅಂದರೆ ಇನ್ನು ಮುಂದೆ ರೈತರು ತಮ್ಮ ಉತ್ಪನ್ನಗಳನ್ನು ಎಪಿಎಂಸಿ ಆವರಣಕ್ಕೆ ತರಬೇಕಾಗಿಲ್ಲ. ಎಪಿಎಂಸಿಗಳ ಹೊರಗೆ ಎಲ್ಲಿ ಬೇಕಾದರೆ ಅಲ್ಲಿ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಸಾಗಿಸಿ ಹೆಚ್ಚಿನ ಬೆಲೆಗೆ ಮಾರಾಟಮಾಡಿ ಲಾಭಮಾಡಿಕೊಳ್ಳಬಹುದು ಎಂಬುದು ಪ್ರಧಾನಿ ಮೋದಿ ಸಮರ್ಥಿಸುತ್ತಿರುವ ಹೊಸ ಕೃಷಿ ಕಾನೂನುಗಳ ಮೋಸ. ಇದೊಂದು ಬಾರಿ ದೊಡ್ಡ ಮೋಸ. ಎಪಿಎಂಸಿಗಳನ್ನು ಕ್ರಮೇಣ ಬಂದ್ ಮಾಡಿ ಕೃಷಿ ಮಾರುಕಟ್ಟೆಯನ್ನು ಲಾಭಕೋರ ಕಾರ್ಪೋರೇಟ್ ಕಂಪನಿಗಳಿಗೆ ಒಪ್ಪಿಸುವ ಹುನ್ನಾರ!
ಎಪಿಎಂಸಿ ಕಾಯ್ದೆ ಬಂದ ದಿನಗಳಿಂದಲೂ ರೈತರು ತಮ್ಮ ಬಹುತೇಕ ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಪ್ರಾಂಗಣದ ಹೊರಗಡೆಯೂ ಮಾರಾಟ ಮಾಡುತ್ತಾ ಬಂದಿದ್ದಾರೆ. ಆದರೆ ರೈತರ ಈ ಪ್ರಯತ್ನ ಅವರಿಗೆ ಲಾಭದಾಯಕ ಬೆಲೆ ದೊರಕಿಸಲಿಲ್ಲ. ರೈತರ ಶೋಷಣೆ ನಿಲ್ಲಲಿಲ್ಲ. ದೊಡ್ಡ ವರ್ತಕರ ಹಾಗೂ ಖರೀದಿದಾರರ ಏಕಸ್ವಾಮ್ಯವನ್ನು ತಡೆಯಲು 1960 ರ ದಶಕದಲ್ಲಿ ಎಪಿಎಂಸಿ ಕಾಯ್ದೆಯನ್ನು ತರಲಾಯಿತು. ದರ ನಿಗದಿ, ಗುಣಮಟ್ಟ ನಿರ್ಧರಿಸುವುದು, ತೂಕ ಹಾಗೂ ಪಾವತಿಯಲ್ಲಿ ರೈತರ ಶೋಷಣೆಯಾಗದಂತೆ ಖಾತರಿಪಡಿಸುವುದು ಇದರ ಉದ್ದೇಶವಾಗಿತ್ತು. ಆದರೆ ಈ ಕಾಯ್ದೆ ಸಮರ್ಪಕವಾಗಿ ಜಾರಿಯಾಗಲೇ ಇಲ್ಲ. ರೈತರ ಸುಲಿಗೆ ನಿಲ್ಲಲಿಲ್ಲ. ಆದರೆ ಎಪಿಎಂಸಿಗಳಲ್ಲಿ ಹರಾಜು ವ್ಯವಸ್ಥೆಯನ್ನು ಜಾರಿಮಾಡಿದ ಪರಿಣಾಮವಾಗಿ ಕೃಷಿ ಉತ್ಪನ್ನಗಳ ಖರೀದಿಯಲ್ಲಿ ಹೆಚ್ಚಿನ ಸ್ಪರ್ಧೆ ಉಂಟಾಯಿತು. ಇದರಿಂದ ರೈತರಿಗೆ ಸ್ವಲ್ಪ ಅನುಕೂಲವಾಯಿತು. ಆದರೆ ಎಪಿಎಂಸಿಗಳು ರೈತರಿಗೆ ಕನಿಷ್ಠ ಬೆಂಬಲ ಬೆಲೆ (MSP) ಯನ್ನು ಖಾತರಿಪಡಿಸಲಿಲ್ಲ. ಈಗ ತರಲಾದ ಹೊಸ ಕಾಯ್ದೆಯಿಂದಾಗಿ ರೈತರು ಎಪಿಎಂಸಿಗಳ ವ್ಯಾಪ್ತಿಯ ಹೊರಗೆ ಯಾರಿಗೆ ಬೇಕಾದರೂ ಮಾರಾಟ ಮಾಡಬಹುದಾಗಿದೆ. ಅಲ್ಲಿ ರೈತರು ದೊಡ್ಡ ಖರೀದಿದಾರನ್ನು ಎದುರಿಸಬೇಕಾಗುತ್ತದೆ. ಅವರು ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡುವುದನ್ನು ಕಡ್ಡಾಯಗೊಳಿಸಲಾಗಿಲ್ಲ. ಕನಿಷ್ಠ ಬೆಂಬಲಬೆಲೆ ನೀಡದಿರುವುದನ್ನು ಶಿಕ್ಷಾರ್ಹ ಅಪರಾಧ ಎಂದು ಘೋಷಿಸಲಾಗಿಲ್ಲ.
ದೆಹಲಿ ಹೋರಾಟನಿರತ ರೈತರು ಒತ್ತಾಯಿಸುತ್ತಿರುವುದು ಇದನ್ನೇ. ಮೋದಿಯವರ ಕಾನೂನಿನಲ್ಲಿ ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಭರವಸೆಯೂ ಇಲ್ಲ. ಡಾ|| ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನ ಪ್ರಕಾರ ಲಾಭದಾಯಕ ಬೆಲೆ (ಒಟ್ಟು ಖರ್ಚು ಮತ್ತು 50% ಲಾಭ) ನೀಡುವ ಭರವಸೆಯೂ ಇಲ್ಲ. ಸರ್ಕಾರ ರೈತರಿಂದ ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡುವ ಪ್ರಶ್ನೆಯೂ ಇಲ್ಲ. ಸರ್ಕಾರ ಮಾರುಕಟ್ಟೆಗೆ ಪ್ರವೇಶ ಮಾಡಿ ರೈತರ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಿದರೆ ಮಾತ್ರ ಮಾರುಕಟ್ಟೆಯಲ್ಲಿ ಸ್ಪರ್ಧೆ ನಿರ್ಮಾಣವಾಗಿ ರೈತರಿಗೆ ಒಳ್ಳೆಯ ಬೆಲೆ ಸಿಗಬಹುದಾಗಿದೆ. ಸರ್ಕಾರ ಖರೀದಿ ಮಾಡುವುದನ್ನು ನಿಲ್ಲಿಸಿದರೆ ಸಾರ್ವತ್ರಿಕ ಪಡಿತರ (ರೇಷನ್) ವ್ಯವಸ್ಥೆಯೂ ಕುಸಿದು ಬೀಳಲಿದೆ. ಮೋದಿಯವರ ಯೋಜನೆ ಪ್ರಕಾರವೇ ಎಲ್ಲವೂ ನಡೆದರೆ ಕ್ರಮೇಣ ಎಪಿಎಂಸಿ ಗಳು ಬಂದ್ ಆಗಲಿದ್ದು ರೈತರು ದೊಡ್ಡ ಖರೀದಿದಾರರು ಏಂಬ ಕಾರ್ಪೋರೇಟ್ ಕಂಪೆನಿಗಳಿಗೆ ಬಲಿಪಶುಗಳಾಗುವರು. ಎಪಿಎಂಸಿ ಬಂದ್ ಆಗುವುದರಿಂದ ಅಲ್ಲಿ ಕೆಲಸಮಾಡಿ ಜೀವನ ಸಾಗಿಸುತ್ತಿದ್ದ ಲಕ್ಷಾಂತರ ಹಮಾಲಿ ಕಾರ್ಮಿಕರು, ಇತರ ಸಿಬ್ಬಂಧಿಗಳು ಕೆಲಸ ಕಳೆದುಕೊಂಡು ಬೀದಿ ಪಾಲಾಗುವರು.
ಕಾರ್ಪೊರೇಟ್ ಕಂಪೆನಿಗಳಿಂದ ರೈತರಿಗೆ ಮೋಸ ಆಗುವುದನ್ನು ತಡೆಯಲು ಮೋದಿಯವರು ಇನ್ನೊಂದು ಕಾಯ್ದೆಯಲ್ಲಿ ಪರಿಹಾರ ಸೂಚಿಸುತ್ತಾರೆ. ಮೋದಿಯವರು ಜಾರಿಗೆ ತರಲು ಹೊರಟಿರುವ ಇನ್ನೊಂದು ಕಾಯ್ದೆಯಲ್ಲಿ ಇರುವ ಪರಿಹಾರ ರೋಗಕ್ಕಿಂತ ಭಯಾನಕವಾಗಿದೆ. ದೊಡ್ಡ ಖರೀದಿದಾರ ಕಂಪೆನಿಗಳು ರೈತರಿಗೆ ಮೋಸ ಮಾಡುವುದನ್ನು ತಡೆಯಲು ಅವರೊಂದಿಗೆ ಪೂರ್ವಭಾವಿ ಒಪ್ಪಂದ ಮಾಡಿಕೊಳ್ಳಬಹುದು. (Futures Trading) ಈ ಒಪ್ಪಂದದ ಕೃಷಿಯಲ್ಲಿ ಬೀಜ, ಗೊಬ್ಬರ, ಕ್ರಿಮಿನಾಶಕ, ತಂತ್ರಜ್ಞಾನವನ್ನು ಖರೀದಿದಾರ ಕಂಪೆನಿಯೇ ಒದಗಿಸುತ್ತದೆ. ಉತ್ಪನ್ನದ ಗುಣಮಟ್ಟ ಅವರೇ ನಿರ್ಧರಿಸುತ್ತಾರೆ. ಗುಣಮಟ್ಟ ಒಪ್ಪಂದದ ಪ್ರಕಾರ ಇಲ್ಲವೆಂದು ಉತ್ಪನ್ನವನ್ನು ಖರೀದಿ ಮಾಡಲು ಖರೀದಿದಾರ ಕಂಪೆನಿ ತಿರಸ್ಕರಿಸಬಹುದು ಅಥವ ಒಪ್ಪಂದಕ್ಕೆ ತಕ್ಕಂತೆ ಬೆಲೆ ನೀಡಲು ನಿರಾಕರಿಸಬಹುದು. ವಿವಾದಗಳನ್ನು ಇತ್ಯರ್ಥಪಡಿಸಲು ವೇದಿಕೆಯನ್ನು ಒದಗಿಸಲಾಗುವುದು. ವಿದೇಶಿ ಕಂಪನಿಯಾದರೆ ಅದು ತನ್ನ ದೇಶದ ನ್ಯಾಯಾಲಯದಲ್ಲಿ ದಾವೆ ಹೂಡಬಹುದು. ರೈತರು ನ್ಯಾಯಾಲಯಗಳಿಗೆ ಅಲೆದಾಡಿ, ಬೇಸತ್ತು ಆತ್ಮಹತ್ಯೆಯಲ್ಲಿ ಶಾಶ್ವತ ಪರಿಹಾರ ಕಾಣಬಹುದು. ಇಂತಹ ಕಾನೂನುಗಳಿಂದ ರೈತರ ಹಿತಸಾಧನೆ ಸಾಧ್ಯವೇ.
ಮೂರನೇ ಕಾನೂನೊಂದರಲ್ಲಿ ಅಗತ್ಯವಸ್ತುಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಹಿಂದಿನ ಕಾನೂನಿನಲ್ಲಿ ಆಹಾರ ಧಾನ್ಯಗಳು ಮೊದಲಾದ ಅಗತ್ಯ ವಸ್ತುಗಳನ್ನು ಬಚ್ಚಿಟ್ಟುಕೊಂಡು, ಗ್ರಾಹಕರ ಮಾರುಕಟ್ಟೆಯಲ್ಲಿ ಕೃತಕ ಅಭಾವವನ್ನು ಸೃಷ್ಠಿಸಿ ಕಾಳಸಂತೆಯಲ್ಲಿ ಬೆಲೆಗಳನ್ನು ವ್ಯಾಪಕವಾಗಿ ಏರಿಸಿ ದೇಶದ ಸಾಮಾನ್ಯ ಗ್ರಾಹಕರನ್ನು ಕೊಳ್ಳೆಹೊಡೆಯಲು ಅವಕಾಶವಿರಲಿಲ್ಲ. ಈಗ ಸದರಿ ಕಾನೂನಿಗೆ ತಿದ್ದುಪಡಿ ತಂದು ಹಿಂದಿನ ಎಲ್ಲ ನಿರ್ಬಂಧಗಳನ್ನು ಕಿತ್ತುಹಾಕಲಾಗಿದೆ. ಇದರಿಂದ ಕಪ್ಪುಹಣದ ಖದೀಮರಿಗೆ, ಅಕ್ರಮ ದಾಸ್ತಾನುದಾರರಿಗೆ, ಕಾಳಸಂತೆಕೋರರಿಗೆ ತಮ್ಮ ಲೂಟಿಯನ್ನು ನಿರಾತಂಕವಾಗಿ ಮುಂದುವರಿಸಲು ಸ್ವಾತಂತ್ರ್ಯದೊರಕಿದೆ. ರೈತರ ಪಾಲಿಗೆ ಈ ಕಾನೂನುಗಳು ಮರಣ ಶಾಸನವಾಗಲಿವೆ.
ಆದ್ದರಿಂದಲೇ ಸುಧಾರಣೆಗಳೆಂಬ ಹೆಸರಿನಲ್ಲಿ ಬರುತ್ತಿರುವ ಈ ಹೊಸ ಕೃಷಿ ಕಾನೂನುಗಳನ್ನು ಬಂಡವಾಳಗಾರರು ಮುಕ್ತ ಕಂಠದಿಂದ ಹಾಡಿ ಹೊಗಳುತ್ತಿದ್ದಾರೆ. ರೈತರು ಕೊರೆಯುವ ಚಳಿಯಲ್ಲಿ ಈ ದೇಶದ್ರೋಹಿ ಕಾನೂನುಗಳನ್ನು ಹಿಂಪಡೆಯಲು ಒತ್ತಾಯಿಸುತ್ತಿದ್ದಾರೆ. ಮೋದಿಯವರ ನಿಷ್ಠಾವಂತ ಶಿಷ್ಯ ಯಡಿಯೂರಪ್ಪ ರಾಜ್ಯದಲ್ಲಿ ಅದೇ ದಾಟಿಯ ಕಾನೂನುಗಳನ್ನು ಜಾರಿ ಮಾಡುವ ಆತುರದಲ್ಲಿದ್ದಾರೆ. ಕರ್ನಾಟಕ ಯಡಿಯೂರಪ್ಪ ರವರಿಗೆ ಪಾಠ ಕಲಿಸಲು ಸಜ್ಜಾಗುತ್ತಿದೆ.