ರೈತರಿಗೆ ಈಗ ದೆಹಲಿ ಲೆಕ್ಕಕ್ಕೇ ಇಲ್ಲ ಎಂದೀಗ ಮೋದಿ ಆಸ್ಥಾನಿಕರು ತಲೆ ಕೆಡಿಸಿಕೊಳ್ಳಬೇಕಾಗಿದೆ ಅವಾಯ್ ಶುಕ್ಲ

ವಿಭಜನೆ ಮಾಡಲು ಏನೂ ಇಲ್ಲದುದರಿಂದ, ಮಹಾವಿಭಜಕನಿಗೆ ಆಳಲು ಸಾಧ್ಯವಿಲ್ಲ: ಪಾಠವನ್ನು ಬ್ರಿಟಿಷರು ಬಹಳ ತಡವಾಗಿ ಕಲಿತರು. ಬಿಜೆಪಿಯು ಅದನ್ನು ಬಹಳ ಶ್ರಮಪಟ್ಟು ಕಲಿಯಬೇಕಾಗುತ್ತದೆ. ಆಟ ಬದಲಾಗಿದೆ ಆದರೆ, ಗೆದ್ದವರೇ ಎಲ್ಲವನ್ನೂ ಬಾಚಿಕೊಳ್ಳುವ ನಿಯಮ ಬದಲಾಗಿಲ್ಲ ಎಂಬುದನ್ನು ರೈತರು ಸ್ಪಷ್ಟಪಡಿಸಿದ್ದಾರೆ. ಗಾಜಿಪುರದ ರಸ್ತೆಯಲ್ಲಿ ನೆಟ್ಟ ಮೊಳೆಗಳು ಬಿಜೆಪಿಯ ಶವಪೆಟ್ಟಿಗೆಗೆ ಹೊಡೆಯುವ ಮೊಳೆಗಳಾಗಬಹುದು, ಮುದ್ದು ಮಾಡಿ ಬೆಳೆಸಿದ ಮತ್ತು ತಾತ್ಸಾರ ಮನೋಭಾವ ಹೊಂದಿರುವ ದೆಹಲಿಯ ಮೇಲ್ಮಧ್ಯಮ ವರ್ಗಗಳು ಈಗ ಶಾಂತಿಯಿಂದ ಬದುಕಬಹುದುಯುದ್ಧವನ್ನು ಅವರಿಂದ ಬೇರೆಯವರು ವಹಿಸಿಕೊಂಡಿದ್ದಾರೆ, ಅವರು ಇನ್ನು ಮುಂದೆ ಲೆಕ್ಕಕ್ಕಿಲ್ಲ ಎನ್ನುತ್ತಾರೆ ನಿವೃತ್ತ ಐಎಎಸ್ ಅಧಿಕಾರಿ ಅವಾಯ್ ಶುಕ್ಲ.

ತನ್ನ ಪರಾಕ್ರಮ-ಪ್ರತಾಪಗಳಲ್ಲೇ ಮುಳುಗಿರುವ ಸರ್ಕಾರಕ್ಕೆ ಇದೊಂದು ವಿಪರ್ಯಾಸ ಎಂಬುದೇ ಅರ್ಥವಾಗುತ್ತಿಲ್ಲ: ಟಿಕ್ರಿ, ಗಾಜಿಪುರ್ ಅಥವಾ ಸಿಂಘು ಗಡಿ ಭಾಗದ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಲು ನೆಡುತ್ತಿರುವ ಪ್ರತಿ ಮೊಳೆಯೊಂದಿಗೂ, ಈಗ ಜರುಗುತ್ತಿರುವ ಘಟನೆಗಳು ಮತ್ತು ಬಹುಶಃ ಭಾರತದಲ್ಲಿ ಭವಿಷ್ಯದಲ್ಲಿ ನಡೆಯಬಹುದಾದ ಘಟನಾವಳಿಗಳಿಗೆ ದೆಹಲಿಯು ತನ್ನನ್ನು ಕ್ರಮೇಣವಾಗಿ ತಾನೇ ಅನವಶ್ಯಕವಾಗಿಸಿಕೊಳ್ಳುತ್ತಿದೆ. ನಿಂತ ನೆಲದಡಿಯಲ್ಲೇ ನಿಧಾನವಾಗಿ ಒಂದು ಸುನಾಮಿ ನಿರ್ಮಾಣವಾಗುತ್ತಿದೆ ಎಂಬುದರ ಬಗ್ಗೆ ಅಧಿಕಾರದ ಅತಿರಥ-ಮಹಾರಥರು, ಮುದ್ದುಮಾಡಿ ಬೆಳೆಸಿದ ಮಧ್ಯಮ ವರ್ಗ ಮತ್ತು ರಾಜಧಾನಿಯ ಕುತಂತ್ರಿಗಳು ಕಿಂಚಿತ್ತೂ ಅರಿವಿಲ್ಲದವರಾಗಿದ್ದಾರೆ.

ಬದುಕುಳಿಯಲು ರೈತರಿಗೆ ದೆಹಲಿ ಬೇಕಾಗಿಲ್ಲ. ಅವರು ಮಣ್ಣಿನ ಮಕ್ಕಳು. ಅಂದರೆ, ಮಣ್ಣು, ಗಾಳಿ, ಮಳೆ, ಬಿಸಿಲು ಮುಂತಾದ ಪ್ರಾಕೃತಿಕ ಅಂಶಗಳಿಂದ ಸೃಷ್ಠಿಯಾದ ಶಿಶುಗಳು. ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವುದು ಹೇಗೆಂದು ಅವರಿಗೆ ಗೊತ್ತಿದೆ. ಮೂರು ತಿಂಗಳಿಂದಲೂ ದೆಹಲಿಯ ಗಡಿ ಭಾಗಗಳಲ್ಲಿ ಠಿಕಾಣಿ ಹೂಡಿರುವ ಅವರು, ಸಾಕಷ್ಟು ಬೈಗುಳಗಳನ್ನು ಬಿಟ್ಟರೆ, ದೆಹಲಿಯಿಂದ ಏನನ್ನೂ ಪಡೆದಿಲ್ಲ. ನೀರು ಮತ್ತು ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿರುವ ಆಳರಸರು ಕಾಶ್ಮೀರದಲ್ಲಿ ಸಿದ್ಧಿಸಿಕೊಂಡ ಇಂಟರ್ನೆಟ್ ಬಂದ್ ಮಾಡುವ ಕಲೆಯನ್ನೂ ಸಹ ಪ್ರದರ್ಶಿಸಿದ್ದಾರೆ.  ಆದರೆ, ರೈತರು ಮಾತ್ರ ಈ ಬಗ್ಗೆ ಗಲಿಬಿಲಿಗೊಂಡಿಲ್ಲ.

ನರೇಂದ್ರ ಮೋದಿ ಅವರ ಕೃಷಿ ಕಾನೂನುಗಳನ್ನು ಬೆಂಬಲಿಸುವ ಅವರ ಮಿತ್ರ-ಆರ್ಥಿಕ ತಜ್ಞರೊಬ್ಬರು ಈ ಕಾನೂನುಗಳ ಗುಟ್ಟನ್ನು ಹೊರಹಾಕಿದ್ದಾರೆ. ದೇಶವು “ಅಭಿವೃದ್ಧಿ ಹೊಂದಿದ ರಾಷ್ಟ್ರ”  ಸ್ಥಾನ  ಪಡೆಯುವಲ್ಲಿ ದೊಡ್ಡ ಪ್ರಮಾಣದ ಗ್ರಾಮೀಣ ನಿರುದ್ಯೋಗವು ಅನಿವಾರ್ಯ ಎಂದು ನನಗೆ ಅವರು ತಿಳಿಸಿದರು. ಜಿಡಿಪಿ ಮತ್ತು ಗ್ರಾಮೀಣ ನಿರುದ್ಯೋಗದ ನಡುವಿನ ಸಂಬಂಧವನ್ನು ಸ್ಪಷ್ಟೀಕರಿಸುವ ಕೆಲವು ಚಾರ್ಟ್‍ಗಳನ್ನು ಅವರು ನನಗೆ ಕಳುಹಿಸಿದರು: ಜಿಡಿಪಿಯು ಎಷ್ಟು ಹೆಚ್ಚುತ್ತದೆಯೊ, ಅದಕ್ಕನುಗುಣವಾಗಿ, ಕೃಷಿಕ ಸಮುದಾಯದ ನಿರುದ್ಯೋಗವೂ ಹೆಚ್ಚುತ್ತದೆ! ಇದುವೇ ವಿಶ್ವದ 100 ಶ್ರೀಮಂತ ಬಿಲಿಯನೇರ್‍ಗಳು ವಿಶ್ವದ ಅರ್ಧ ಭಾಗ ಜನರಿಗಿಂತಲೂ ಹೆಚ್ಚು ಸಂಪತ್ತನ್ನು ಹೊಂದುವಂತೆ ಖಾತ್ರಿಪಡಿಸಿದ ನವ ಉದಾರವಾದಿ ಆರ್ಥಿಕ ನೀತಿ. ಇದುವೇ ಐಎಂಎಫ್ ಮತ್ತು ವಿಶ್ವಬ್ಯಾಂಕ್ ಬೋಧಿಸುವ  ಸೂತ್ರ. ಅಂದರೆ, ಮೋದಿ ಅವರ ಕೃಷಿ ಕಾನೂನುಗಳು ಈ ಸೂತ್ರದ ಭಾರತೀಯ ಆವೃತ್ತಿಯಾಗಲಿದೆ.

ಕೈಗಾರಿಕೆ ಮತ್ತು ದೊಡ್ಡ ದೊಡ್ಡ ಬಂಡವಾಳಗಾರರಿಗೆ ಅಗ್ಗದ ಕಾರ್ಮಿಕರನ್ನು ಸೃಷ್ಟಿಸುವುದೇ ಈ ಮೋಸದ ಕಾನೂನುಗಳ ಉದ್ದೇಶ. ಈ ವಿದ್ಯಮಾನವು ಈಗಾಗಲೇ ಭಾರತದಲ್ಲಿ ನಡೆಯುತ್ತಿದೆ- 2004 ರಿಂದ 2012ರ ನಡುವೆ 36 ದಶಲಕ್ಷ ರೈತರು ಕೃಷಿಯನ್ನು ತೊರೆದರು. 50 ದಶಲಕ್ಷ ಮಂದಿ ರೈತರು ಮೂಲ ಸೌಕರ್ಯ-ಬಂಡವಾಳ ಯೋಜನೆಗಳಿಂದ “ಸ್ಥಳಾಂತರಿಸಲ್ಪಟ್ಟಿದ್ದಾರೆ” ಮತ್ತು ಪ್ರತಿ ವರ್ಷವೂ ಐದು ಲಕ್ಷ ಮಂದಿ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಆದಿವಾಸಿಗಳನ್ನು ಅರಣ್ಯದಿಂದ ಹೊರಹಾಕಲಾಗುತ್ತಿದೆ. ವಲಸೆ ಕಾರ್ಮಿಕರ ಸಂಖ್ಯೆಯು ಈಗಾಗಲೇ 120 ದಶಲಕ್ಷವನ್ನು ದಾಟಿದೆ. ಇದೊಂದು ವಿಷಾದಕರ ಚಿತ್ರ. ರೈತರನ್ನು ಕೃಷಿಯಿಂದ ಹೊರದಬ್ಬುವ ಪ್ರಕ್ರಿಯೆಯನ್ನು ತ್ವರಿತÀಗೊಳಿಸುವುದೇ ಈ ಕೃಷಿ ಕಾನೂನುಗಳ ಉದ್ದೇಶ. ಎಷ್ಟೇ ಅಡ್ಡಿ ಆತಂಕಗಳು ಬರಲಿ, ರಿಹಾನಾ, ಗ್ರೆಟಾ ಥುನ್‍ಬರ್ಗ್ ಮುಂತಾದವರು ಎಷ್ಟೇ ಗೊಣಗಾಡಲಿ, ಬ್ಯಾರಿಕೇಡ್‍ಗಳು ಈ ಕಾನೂನುಗಳನ್ನು ಜಾರಿಗೆ ತರಲು ನೆರವಾಗುತ್ತವೆ.

ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವವರ ಭಯ, ಅಸಾಮಥ್ರ್ಯ, ಅದಕ್ಷತೆ ಮತ್ತು ದುರುದ್ದೇಶಗಳ ಫಲವೇ ಈ ಬ್ಯಾರಿಕೇಡ್‍ಗಳು, ಸಿಂಬೆ ಸುತ್ತಿದ-ಕತ್ತಿಯ ಅಂಚಿನ-ಮುಳ್ಳು ತಂತಿಗಳು ಮತ್ತು ರಸ್ತೆಯಲ್ಲಿ ನೆಟ್ಟ ಅಡಿ-ಉದ್ದದ ಮೊಳೆಗಳು. ಗಟ್ಟಿ ಮುಟ್ಟಾದ ನಮ್ಮ ರೈತರು ಅವುಗಳಿಗೆ ಅಂಜುವುದಿಲ್ಲ. ಕಳೆದ ಆರು ತಿಂಗಳಿನಿಂದಲೂ ಅವರು ಮನವಿ ಸಲ್ಲಿಸಿದ ಪ್ರತಿಯೊಂದು ಸಂಸ್ಥೆಯೂ ಅವರನ್ನು ನಿರಾಶೆಗೊಳಿಸಿದೆ: ಸಂಸತ್ತು, ಸುಪ್ರೀಂ ಕೋರ್ಟ್, ಮಾಧ್ಯಮಗಳು ಮತ್ತು ಮುಖ್ಯಧಾರೆಯ ರಾಜಕೀಯ ಪಕ್ಷಗಳು. ಅಷ್ಟೇ ಅಲ್ಲ, ವಕೀಲರು ಮೌನವಹಿಸಿದರು. ಹಿರಿಯ ಅಧಿಕಾರಿಗಳು ತಲೆ ತಗ್ಗಿಸಿಕೊಂಡರು. ರಾಯಭಾರ ಕಚೇರಿಗಳು “ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ” ಎಂದರು. ತಮ್ಮ ಪ್ರಯತ್ನದಲ್ಲಿ ಮೋದಿ ಯಶಸ್ವಿಯಾಗುತ್ತಾರೆ ಎಂದು ಐಎಂಎಫ್ ಮತ್ತು ವಿಶ್ವಬ್ಯಾಂಕ್ ಆಶಿಸಿದವು.

ದೆಹಲಿಯು ರೈತರನ್ನು ನಿರಾಶೆಗೊಳಿಸಿದೆ. ರೈತನಿಗೆ ಭಾರತದ ರಾಜಧಾನಿಯ ಅವಶ್ಯಕತೆ ಉಳಿದಿಲ್ಲ. ಆದ್ದರಿಂದ, ರೈತನು ‘ದೆಹಲಿ’ಯನ್ನು ಬಿಟ್ಹಾಕಲು ನಿರ್ಧರಿಸಿದ್ದಾನೆ ಮತ್ತು ಆ ದೋಷವನ್ನು ಸರಿಪಡಿಸಿಕೊಳ್ಳಲು ನಿರ್ಧರಿಸಿದ್ದಾನೆ: ರಾಕೇಶ್ ಟಿಕೈತ್ ಅವರು ಫೆಬ್ರವರಿ 3ರಂದು ಜಿಂದ್‍ನಲ್ಲಿ ನಡೆದ ಮಹಾಪಂಚಾಯತ್‍ನಲ್ಲಿ ಭಾಗವಹಿಸಲು, ದೆಹಲಿಯನ್ನು ತಪ್ಪಿಸಿ, ಹರಿಯಾಣ ಮಾರ್ಗವಾಗಿ ಹೆಚ್ಚು ದೂರವನ್ನು ಕ್ರಮಿಸಿದರು. ಈ ಘಟನೆಯ ಸಾಂಕೇತಿಕತೆಯನ್ನು ಕಡೆಗಣಿಸಲಾಗದು. ಪ್ರತಿಭಟನೆಗಳನ್ನು ಭಾರತದ ಇತರ ಭಾಗಗಳಿಗೆ ಕೊಂಡೊಯ್ಯುವುದಾಗಿ ಜಿಂದ್‍ನಲ್ಲಿ ಅವರು ಘೋಷಿಸಿದರು.

ಈ ಘಟನೆಯು ಎರಡು ಚಾರಿತ್ರಿಕ ಘಟನೆಗಳನ್ನು ನೆನಪಿಸುತ್ತದೆ. ಮೊದಲನೆಯದು, ಹಿಟ್ಲರ್‍ ನ ಆಕ್ರಮಣದಿಂದ ತಪ್ಪಿಸಿಕೊಳ್ಳಲು, ಜರ್ಮನಿಯೊಂದಿಗಿನ ತನ್ನ ಗಡಿಯಲ್ಲಿ ಮ್ಯಾಜಿನೋಟ್ ರೇಖೆಯನ್ನು ಫ್ರಾನ್ಸ್ ನಿರ್ಮಿಸಿತು. ಎಷ್ಟು ಬಲವಾದ ಕೋಟೆ-ಕೊತ್ತಲಗಳನ್ನು ಅಲ್ಲಿ ಫ್ರಾನ್ಸ್ ನಿರ್ಮಿಸಿತು ಎಂದರೆ, ಅದು ಅಬೇಧ್ಯವೆಂದು ಪರಿಗಣಿಸಲ್ಪಟ್ಟಿತ್ತು. ಆದರೆ, ಸಮಯ ಬಂದಾಗ ಜರ್ಮನ್ನರು ಅದನ್ನು ಬೈಪಾಸ್ ಮಾಡಿ, ಆರ್ಡೆನ್ಸ್ ಅರಣ್ಯಗಳ ಮೂಲಕ ಯಾವುದೇ ತಡೆಯಿಲ್ಲದೆ ಫ್ರಾನ್ಸ್‍ಗೆ ನುಗ್ಗಿದರು. ಎರಡನೆಯದು, ದೆಹಲಿ ಮತ್ತು ಶಿಮ್ಲಾದಲ್ಲಿ ಬ್ರಿಟಿಷರೊಂದಿಗೆ ನಡೆದ ಮಾತುಕತೆಗಳಲ್ಲಿ ಯಾವುದೇ ಪ್ರಗತಿ ಸಾಧಿಸಲಿಲ್ಲ ಎಂಬುದನ್ನು ಮನಗಂಡ ಮಹಾತ್ಮ ಗಾಂಧಿ, ಗುಜರಾತಿನ ದಂಡಿಯಲ್ಲಿ ಒಂದು ಚಿಟಿಕೆ ಉಪ್ಪನ್ನು ಹೊಂದಲು, ಒಂದು ವಿರುದ್ಧ ದಿಕ್ಕಿನಲ್ಲಿ ಪಯಣಿಸಿದರು. ಅವರ ಈ ನಿರ್ಧಾರವು ಭಾರತದ ಉಳಿದ ಭಾಗಗಳಿಗೂ ತನ್ನ ಸಂದೇಶವನ್ನು ಪಸರಿಸಲು, ಅದನ್ನು ಸರ್ವಮಾನ್ಯಗೊಳಿಸಲು ಮತ್ತು ಅದಕ್ಕೆ ಇನ್ನಷ್ಟು ಬಲ ತುಂಬಲು ಸಹಾಯ ಮಾಡಿತು.

ರೈತರು ದೆಹಲಿಯನ್ನು ಅಕ್ಷರಶಃ ಮತ್ತು ಲಾಕ್ಷಣಿಕವಾಗಿ ಪ್ರವೇಶಿಸದಂತೆ ಮಾಡುವಲ್ಲಿ ಮೋದಿ ಮತ್ತು ಅಮಿತ್ ಶಾ ಬಹು ದೊಡ್ಡ ತಪ್ಪು ಲೆಕ್ಕಾಚಾರಮಾಡಿದ್ದಾರೆ. ರಾಕೇಶ್ ಟಿಕೈತ್ ತನ್ನ ಕಾರ್ಯತಂತ್ರವನ್ನು ಬದಲಿಸಿಕೊಳ್ಳುವಂತೆ ಅವರು ಒತ್ತಡ ಹೇರಿದರು. ಟಿಕೈತ್ ಈಗ ಮೂರು ಕಾರ್ಯಗಳಲ್ಲಿ ತೊಡಗಿದ್ದಾರೆ: (1) ಪಶ್ಚಿಮ ಉತ್ತರ ಪ್ರದೇಶವನ್ನು, ಪಂಜಾಬ್ ಅಲ್ಲ, ತಮ್ಮ ಚಳುವಳಿಯ   ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ. 2017ರಲ್ಲಿ ಉತ್ತರ ಪ್ರದೇಶದ ಅಧಿಕಾರ ಹಿಡಿಯಲು ಬಿಜೆಪಿಗೆ ಅವಕಾಶ ಮಾಡಿಕೊಟ್ಟದ್ದೇ ಈ ಪಶ್ಚಿಮ ಉತ್ತರ ಪ್ರದೇಶ. ಈ ಭಾಗದಲ್ಲಿ 100ಕ್ಕೂ ಹೆಚ್ಚು ವಿಧಾನ ಸಭಾ ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. ಜಾಟರು ಮತ್ತು ಮುಸ್ಲಿಮರ ನಡುವೆ ಕೋಮು ಗಲಭೆ ಸೃಷ್ಟಿಸುವ ಮೂಲಕ ಬಿಜೆಪಿ ಈ ಗೆಲುವು ಸಾಧಿಸಿತ್ತು (ಮುಜಫರ್ ನಗರದ ಗಲಭೆಗಳನ್ನು ನೆನಪಿಸಿಕೊಳ್ಳಿ). ಸಮುದಾಯಗಳ ನಡುವಿನ ಈ ಬಿರುಕುಗಳನ್ನು ಮುಚ್ಚುವ ಕೆಲಸವನ್ನು ಟಿಕೈತ್ ಈಗ ಮಾಡಿದ್ದಾರೆ. ಎಲ್ಲರನ್ನೂ ಸರ್ಕಾರದ ವಿರುದ್ಧ ಒಗ್ಗೂಡಿಸುವ ಮೂಲಕ, ಪಶ್ಚಿಮ ಯುಪಿಯಲ್ಲಿ ಬಿಜೆಪಿಯ ಗೆಲುವಿನ  ಸೂತ್ರವನ್ನು ಧೂಳಿಪಟ ಮಾಡಿದ್ಧಾರೆ. (2) ಹಿಂದಿ ಅಥವಾ ಹಿಂದೂ ಹೃದಯ ಭೂಮಿಯಲ್ಲಿ ಉಳಿದವರಿಗಿಂತ ಹೆಚ್ಚು ಹಿಡಿಸುವ ನಾಯಕನಾಗಿ ಟಿಕೈತ್ ಹೊರ ಹೊಮ್ಮಿರುವುದರಿಂದ, ಪ್ರತಿಭಟನೆಯನ್ನು ಅವರು ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ, ಬಿಹಾರ, ಛತ್ತೀಸ್‍ಗಢ, ಜಾಖರ್ಂಡ್ ರಾಜ್ಯಗಳಿಗೆ ಯಶಸ್ವಿಯಾಗಿ ಕೊಂಡೊಯ್ಯಲು ಸಾಧ್ಯವಾಗುತ್ತದೆ. ಈ ಪ್ರದೇಶಗಳಲ್ಲಿಯೇ ಬಿಜೆಪಿಯು ಕಳೆದ ಲೋಕಸಭಾ ಚುನಾವಣೆಯಲ್ಲಿ ಭಾರಿ ಗೆಲುವು ಸಾಧಿಸಿತ್ತು. ಹಾಗಾಗಿ, ಈ ಪ್ರದೇಶಗಳಲ್ಲಿ ರೈತರ ಪ್ರತಿಭಟನೆಯು ತೀವ್ರಗೊಂಡರೆ, ಅದು ಬಿಜೆಪಿಗೆ ಪ್ರತಿಕೂಲವಾಗಿ ಪರಿಣಮಿಸಲಿದೆ. ಪ್ರತಿಭಟನೆಗಳು ದಿಲ್ಲಿ ಮತ್ತು ಅದರ ಆಸುಪಾಸಿನ ಪ್ರದೇಶಗಳಿಗೆ ಸೀಮಿತಗೊಳ್ಳುವಂತೆ ನೋಡಿಕೊಂಡಿದ್ದರೆ ಅದು ಬಿಜೆಪಿಗೆ ಹೆಚ್ಚಿನ ಲಾಭ ತರುತ್ತಿತ್ತು. (3) ಭಾರತದಲ್ಲಿ, ರಾಜಕೀಯ ಪಕ್ಷಗಳು ತಮ್ಮ ಸಾಧನೆ ಅಥವಾ ಪ್ರಣಾಳಿಕೆಗಳ ಆಧಾರದ ಮೇಲೆ ಚುನಾವಣೆಯನ್ನು ಯಾವತ್ತೂ ಗೆದ್ದಿಲ್ಲ. ಧರ್ಮ, ಜಾತಿ, ಪ್ರದೇಶ, ಹಿಂದುಳಿದಿರುವಿಕೆ ಮುಂತಾದ ಅಸ್ಮಿತೆಗಳನ್ನು ಬಡಿದೆಬ್ಬಿಸುವ  ಮೂಲಕ ಚುನಾವಣೆಯನ್ನು ಗೆದ್ದಿವೆ. ಈ ವಿಷಯದಲ್ಲಿ ಬಿಜೆಪಿಯ ನೈಪುಣ್ಯತೆಗೆ ಸಾಟಿಯೇ ಇಲ್ಲ. ಆದರೆ, ಈಗ ರೈತ ಚಳುವಳಿಯು ಒಂದು ದೊಡ್ಡ ಉದ್ದೇಶದ ಸಲುವಾಗಿ, ಭೂಹೀನ ಕಾರ್ಮಿಕ, ಕುಶಲಕರ್ಮಿ, ಹಳ್ಳಿಯ ಅಂಗಡಿಕಾರ ಮುಂತಾದ ಉಪ-ಅಸ್ಮಿತೆಗಳನ್ನು ಅಳಿಸಿಹಾಕಿ, ರೈತ ಅಸ್ಮಿತೆಯನ್ನು ಎತ್ತಿ ನಿಲ್ಲಿಸಿದೆ. ಒಂದು ಅಸ್ಮಿತೆ, ಒಂದು ಕಾಳಜಿ ಮತ್ತು ಒಂದು ಬೇಡಿಕೆ ಈಗ ಪ್ರಾಧಾನ್ಯತೆ ಪಡೆದಿವೆ. ವಿಭಜನೆ ಮಾಡಲು ಏನೂ ಇಲ್ಲದುದರಿಂದ, ಮಹಾವಿಭಜಕನಿಗೆ ಆಳಲು ಸಾಧ್ಯವಿಲ್ಲ: ಈ ಪಾಠವನ್ನು ಬ್ರಿಟಿಷರು ಬಹಳ ತಡವಾಗಿ ಕಲಿತರು. ಬಿಜೆಪಿಯು ಅದನ್ನು ಬಹಳ ಶ್ರಮಪಟ್ಟು ಕಲಿಯಬೇಕಾಗುತ್ತದೆ.

ಆಟ ಬದಲಾಗಿದೆ. ಆದರೆ, ಗೆದ್ದವರೇ ಎಲ್ಲವನ್ನೂ ಬಾಚಿಕೊಳ್ಳುವ ನಿಯಮ ಬದಲಾಗಿಲ್ಲ ಎಂಬುದನ್ನು ರೈತರು ಸ್ಪಷ್ಟಪಡಿಸಿದ್ದಾರೆ. ದುರಹಂಕಾರಿ ಮತ್ತು ಅತಿಕ್ರಮಣ ಸ್ವಭಾವದ ಸರ್ಕಾರವು ಮಾಡಿದ ಈ ನಿಯಮವು ಅದನ್ನೇ ಮತ್ತೆ ಕಚ್ಚಬಹುದು. ಗಾಜಿಪುರದ ರಸ್ತೆಯಲ್ಲಿ ನೆಟ್ಟ ಮೊಳೆಗಳು ಬಿಜೆಪಿಯ ಶವಪೆಟ್ಟಿಗೆಗೆ ಹೊಡೆಯುವ ಮೊಳೆಗಳಾಗಬಹುದು. ಮುದ್ದು ಮಾಡಿ ಬೆಳಸಿದ ಮತ್ತು ತಾತ್ಸಾರ ಮನೋಭಾವ ಹೊಂದಿರುವ ದೆಹಲಿಯ ಮೇಲ್ಮಧ್ಯಮ ವರ್ಗಗಳು ಈಗ ಶಾಂತಿಯಿಂದ ಬದುಕಬಹುದು – ಯುದ್ಧವನ್ನು ಅವರಿಂದ ಬೇರೆಯವರು ವಹಿಸಿಕೊಂಡಿದ್ದಾರೆ, ಅವರು ಇನ್ನು ಮುಂದೆ ಲೆಕ್ಕಕ್ಕಿಲ್ಲ.

(ದಿ ವೈರ್, ಫೆಬ್ರುವರಿ 6ಸಂಗ್ರಹಾನುವಾದ: ಕೆ.ಎಂ.ನಾಗರಾಜ್)

Donate Janashakthi Media

Leave a Reply

Your email address will not be published. Required fields are marked *