ಗುಬ್ಬಿ: ಕೃಷಿ ಪ್ರಧಾನ ದೇಶದಲ್ಲಿ ರೈತರನ್ನು ಕಡೆಗಣಿಸಿದರೆ ದೇಶ ದಿವಾಳಿಯಾಗುತ್ತದೆ. ನಮ್ಮನ್ನಾಳುವ ಸರ್ಕಾರಗಳಿಗೆ ಅರ್ಥವಾಗುತ್ತಿಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್) ರಾಜ್ಯಾಧ್ಯಕ್ಷ ಜಿ.ಸಿ ಬಯ್ಯಾರೆಡ್ಡಿ ಆತಂಕ ವ್ಯಕ್ತಪಡಿಸಿದರು.
ಅವರು ಗುಬ್ಬಿ ತಾಲ್ಲೂಕು ಸಾತೇನಹಳ್ಳಿಯಲ್ಲಿ ನಡೆದ ಕರ್ನಾಟಕ ಪ್ರಾಂತ ರೈತ ಸಂಘ, ಗುಬ್ಬಿ ತಾಲ್ಲೂಕು ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು.
ರೈತರೇ ದೇಶದ ಬೆನ್ನೆಲುಬು, ಉಳುವವನಿಗೆ ಭೂಮಿ ಮುಂತಾದ ಮಾತುಗಳಿಗೆ ಈಗ ಬೆಲೆ ಇಲ್ಲದ ಪರಿಸ್ಥಿತಿ ಉಂಟಾಗಿದೆ. ಜಾಗತೀಕರಣ ಧೋರಣೆಗಳು ಕೃಷಿ ಕ್ಷೇತ್ರವನ್ನು ಆಳವಾದ ಬಿಕ್ಕಟ್ಟಿಗೆ ನೂಕಿದ್ದು ನರೇಂದ್ರ ಮೋದಿ ಪ್ರಧಾನಿ ಆದ ನಂತರ ರೈತರ ಆತ್ಮಹತ್ಯೆಗಳು ದುಪ್ಪಾಟ್ಟಾಗಿದೆ. ಬೆಂಬಲ ಬೆಲೆ, ಉತ್ತಮವಾದ ಮಾರುಕಟ್ಟೆ, ಸುಲಭ ಸಾಲ ರೈತರಿಗೆ ಸಿಗತ್ತಿಲ್ಲ. ಬಂಡವಾಳಶಾಹಿಗಳನ್ನು ಒಲೈಸಲು ಸರ್ಕಾರಗಳ ಕಣ್ಣು ರೈತರ ಭೂಮಿ ಮೇಲೆ ಬಿದ್ದಿದೆ. ಕೃಷಿ ಭೂಮಿ ಕಬಳಿಸುವ ಉದ್ದೇಶಕ್ಕಾಗಿ ಜನ ವಿರೋಧಿ ಭೂ ಸ್ವಾಧೀನ ಕಾಯ್ದೆ, ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಕೃಷಿ ಮಾರುಕಟ್ಟೆ ತಿದ್ದುಪಡಿ ಕಾಯ್ದೆ, ಜಾನುವಾರು ರಕ್ಷಣೆ ಕಾಯ್ದೆ ತಂದಿದ್ದಾರೆ. ಈ ಕಾಯ್ದೆಗಳನ್ನು ರದ್ದುಪಡಿಸಲು ಶಾಸಕರು ಹಾಗೂ ಸಂಸದರ ಮೇಲೆ ಒತ್ತಡ ತರುವಂತಹ ಹೋರಾಟ ನಡೆಸಬೇಕೆಂದು ಕರೆ ನೀಡಿದರು.
ಸಮ್ಮೇಳನ ಉದ್ಘಾಟಿಸಿ ಮಾತಾನಾಡಿದ ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಸಹ ಕಾರ್ಯದರ್ಶಿ ಟಿ.ಯಶವಂತ ಮಾತಾನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಜೀವನಾಧಾರದ ಮೇಲೆ ಸತತ ಧಾಳಿ ನಡೆಸುತ್ತಿವೆ. ರೈತರ ಹೋರಾಟಕ್ಕೆ ಮಣಿದು ಕೇಂದ್ರ ತನ್ನ ಕೃಷಿ ಕಾಯ್ದೆಗಳನ್ನು ರದ್ದುಪಡಿಸಿದ್ದರೂ, ರಾಜ್ಯ ತನ್ನ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಳ್ಳುತ್ತಿದೆ. ರೈತರನ್ನು ಬೀದಿಗೆ ತಳ್ಳುವುದನ್ನು ಅಭಿವೃದ್ಧಿ ಎಂದು ಸರ್ಕಾರಗಳು ಭಾವಿಸುತ್ತಿರುವುದು ದುರದೃಷ್ಟಕರ. ಇದರಿಂದ ಇಡೀ ದೇಶ ಆಹಾರ ಬಿಕ್ಕಟ್ಟಿಗೆ ಸಿಲುಕಲಿದೆ. ನಮ್ಮ ನೆರೆಯ ಶ್ರೀಲಂಕಾ ಉದಾರೀಕರಣ, ಜಾಗತೀಕರಣ, ಖಾಸಗೀಕರಣ ಧೋರಣೆಗಳಿಂದಾಗಿಯೇ ಆಹಾರದ ಬಿಕ್ಕಟ್ಟನ್ನು ಅನುಭವಿಸುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ : ರೈತನ ವಿರುದ್ಧ ಅಕ್ರಮ ಜಾನುವಾರು ಸಾಗಾಣಿಕೆ ಕೇಸು
ವಿಶಾಲವಾದ ಕೃಷಿ ಭೂಮಿ ಮತ್ತು ಕಷ್ಟಪಟ್ಟು ದುಡಿಯುವ ಕೋಟ್ಯಾಂತರ ರೈತರು ಇರುವ ನಮ್ಮ ದೇಶ ಅಡುಗೆ ಎಣ್ಣೆಯ ಅಗತ್ಯಕ್ಕಾಗಿ ಇಂಡೊನೇಷ್ಯಾ, ಮಲೇಷ್ಯಾ, ಉಕ್ರೇನ್ ಗಳನ್ನು ಅವಲಂಬಿಸಿದೆ. ನಮ್ಮ ಅಂತರಿಕ ಬಳಕೆಯ ಶೇಕಡಾ 80ರಷ್ಟು ಅಡುಗೆ ಎಣ್ಣೆ ಅಮದು ಮೂಲಕ ಪೂರೈಕೆಯಾಗುತ್ತಿದೆ. ರಷ್ಯಾ ಉಕ್ರೇನ್ ಯುದ್ದದಿಂದ ಅಡುಗೆ ಎಣ್ಣೆಗೆ ಇಂಡೋನೇಷ್ಯಾ ದೇಶವನ್ನು ಅಂಗಲಾಚುತ್ತಿದೆ. ನಮ್ಮ ರೈತರಿಗೆ ಅಗತ್ಯ ಬೆಂಬಲ ನೀಡಿದ್ದರೆ ದೇಶಕ್ಕೆ ಇಂತಹ ಸ್ಥಿತಿ ಬರುತ್ತಿರಲಿಲ್ಲ ಈಗಲಾದರೂ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು ಎಂದು ಒತ್ತಾಯಿಸಿದರು.
ಸಮ್ಮೇಳನಕ್ಕೆ ಶುಭಕೋರಿ ಸಿಐಟಿಯು ಜಿಲ್ಲಾ ಮುಖಂಡ ಎನ್ ಕೆ ಸುಬ್ರಹ್ಮಣ್ಯ, ಕಟ್ಟಡ ಕಾರ್ಮಿಕರ ಸಂಘಟನೆ ರಾಜ್ಯ ಅಧ್ಯಕ್ಷ ಬಿ.ಉಮೇಶ್, ಕೆಪಿಆರ್‌ಎಸ್ ಜಿಲ್ಲಾ ಸಂಚಾಲಕ ಅಜ್ಜಪ್ಪ ಮುಂತಾದವರು ಮಾತಾನಾಡಿದರು.
ತಾಲ್ಲೂಕಿನ ವಿವಿಧ ಗ್ರಾಮಗಳ ರೈತರ ಸಮಸ್ಯೆಗಳನ್ನು ಚರ್ಚಿಸಿದ ಸಮ್ಮೇಳನವು ಮುಂದಿನ ಮೂರು ವರ್ಷಗಳ ಕಾಲ ಚಳವಳಿ ಮುನ್ನೆಡೆಸಲು ದೊಡ್ಡನಂಜಯ್ಯ ಅಧ್ಯಕ್ಷರಾಗಿ, ಬಸವರಾಜು ಪ್ರಧಾನ ಕಾರ್ಯದರ್ಶಿಯಾಗಿರುವ 40 ಜನರ ನೂತನ ತಾಲ್ಲೂಕು ಸಮಿತಿಯನ್ನು ಆಯ್ಕೆ ಮಾಡಿತು.