ದೆಹಲಿಯ ಪಟಿಯಾಲಾ ಕೋರ್ಟ್ ನ್ಯಾಯಾಲಯದ ನ್ಯಾಯಾಧೀಶರಾದ ಧರ್ಮೇಂದ್ರ ರಾಣಾ ಅವರು ಪರಿಸರ ಕಾರ್ಯಕರ್ತೆ ದಿಶಾ ರವಿಗೆ ನೀಡಿದ ಜಾಮೀನು ಆದೇಶದ ಕೆಲ ಮಾಹಿತಿಗಳು ಇಲ್ಲಿವೆ.
ಬಹು ಚರ್ಚಿತ ಟೂಲ್ ಕಿಟ್ ನ್ನು ಕೂಲಂಕಶವಾಗಿ ಪರಿಶೀಲಿಸಿದರೆ ಅದರಲ್ಲಿ ಯಾವುದೇ ರೀತಿಯ ಹಿಂಸೆಗೆ ಕರೆ ನೀಡುವ ಯಾವುದೇ ಕರೆಯನ್ನು ನೀಡಲಾಗಿಲ್ಲ ಎಂಬುದು ಬಹಳ ಸ್ಪಷ್ಟವಾಗಿ ತಿಳಿಯುತ್ತದೆ. ಪ್ರಜಾಪ್ರಭುತ್ವ ದೇಶವೊಂದರಲ್ಲಿ ಆಳುವ ಸರ್ಕಾರದ ಅಂತಃಪ್ರಜ್ಞೆಯನ್ನು ಕಾಪಿಡುವುದು ಆ ದೇಶದ ನಾಗರಿಕ ಸಮೂಹ ಎಂಬುದು ನನ್ನ ಅಭಿಪ್ರಾಯ. ಪ್ರಭುತ್ವದ ನೀತಿ ನಿರೂಪಣೆಗಳಿಗೆ ಒಪ್ಪಿಗೆ ಸೂಚಿಸಲೊಪ್ಪದ ಏಕಮಾತ್ರ ಕಾರಣಕ್ಕೆ ಅಂತಹ ನಾಗರಿಕರನ್ನು ಜೈಲಿಗೆ ತಳ್ಳಲು ಬರುವುದಿಲ್ಲ.
ಸರ್ಕಾರಗಳ ತೋರಿಕೆಯ ಹಿರಿಮೆಗೆ ಪೆಟ್ಟು ಬಿದ್ದಿತೆಂದು ದೇಶದ್ರೋಹದ ಆರೋಪ ಹೊರಿಸಲು ಬರುವುದಿಲ್ಲ (ನಿಹಾರೆಂದು ದತ್ v/s ಎಂಪರರ್, 1942 FC22) . ಭಿನ್ನಮತ, ಅಭಿಪ್ರಾಯ ಬೇಧಗಳು ಪ್ರಭುತ್ವವು ವಸ್ತುನಿಷ್ಠ ತೀರ್ಮಾನ ಕೈಗೊಳ್ಳಲು ಸಹಕರಿಸುವ ಸಾಧನಗಳು ಎಂದು ಗುರುತಿಸಲಾಗಿದೆ. ಒಂದು ಸಮಾಜದಲ್ಲಿ ತಟಸ್ಥವಾಗಿ ಜಡ ಸ್ಥಿತಿಯಲ್ಲಿರುವ ನಾಗರಿಕ ಸಮಾಜದ ಜಾಗದಲ್ಲಿ ಒಂದು ಎಚ್ಚೆತ್ತ ಕ್ರಿಯಾಶೀಲ ನಾಗರಿಕ ಸಮಾಜವಿದ್ದರೆ ಅದು ಒಂದು ಆರೋಗ್ಯಕರ ಮತ್ತು ಸದೃಢ ಪ್ರಜಾಪ್ರಭುತ್ವದ ಲಕ್ಷಣವಾಗಿರುತ್ತದೆ.
5000 ವರ್ಷಗಳಷ್ಟು ಹಳೆಯದಾದ ನಮ್ಮ ನಾಗರಿಕತೆಯಲ್ಲಿ ಭಿನ್ನ ಭಿನ್ನ ಅಭಿಪ್ರಾಯಗಳನ್ನು ಕಡೆಗಣಿಸಲಾಗಿಲ್ಲ. ಋಗ್ವೇದದ ಸೂಕ್ತವೊಂದರಲ್ಲಿ ‘ಉದಾತ್ತ ಚಿಂತನೆಗಳು ಎಲ್ಲಾ ದಿಕ್ಕುಗಳಿಂದ ಬರಲಿ” ಎಂಬ ಮಾತಿರುವುದು ನಮ್ಮ ಸಮಾಜ ಹೇಗೆ ಭಿನ್ನ ದನಿಗಳಿಗೆ ಮುಕ್ತವಾಗಿದೆ ಎಂಬುದರ ಪ್ರತೀಕ.
ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂವಿಧಾನದ ಒಂದು ಮೂಲಭೂತ ಹಕ್ಕನ್ನಾಗಿಸುವ ಮೂಲಕ ನಮ್ಮ ರಾಷ್ಟ್ರವನ್ನು ಕಟ್ಟಿದ ಮಹನೀಯರು ಅಭಿಪ್ರಾಯಭೇಧಗಳಿಗೆ ಅವಕಾಶ ನೀಡಿದ್ದನ್ನ ಗಮನಿಸಬೇಕು. ಭಾರತದ ಸಂವಿಧಾನದ 19 ನೆಯ ವಿಧಿಯು ಭಿನ್ನಮತ ಹೊಂದುವ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತದೆ. ನನ್ನ ಖಚಿತ ಅಭಿಪ್ರಾಯವೇನೆಂದರೆ ಜಾಗತಿಕ ಮಟ್ಟದಲ್ಲಿ ಬೆಂಬಲವನ್ನು ಕೇಳುವುದು ಸಹ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿದೆ. ಸಂವಹನಕ್ಕೆ ಯಾವುದೇ ಭೌಗೋಳಿಕ ಗಡಿಗಳಿಲ್ಲ. ನಾಗರೀಕ ವ್ಯಕ್ತಿಯೊಬ್ಬ ಕಾನೂನು ಬದ್ಧ ರೀತಿಯಲ್ಲಿ ಜಗತ್ತಿನ ಯಾರೊಂದಿಗೆ ಬೇಕಾದರೂ ಸಂವಹನ ನಡೆಸುವ ಮೂಲಭೂತ ಹಕ್ಕನ್ನು ಹೊಂದಿರುತ್ತಾಳೆ/ನೆ.