ರೈತರ ಹೋರಾಟದ ಬಗ್ಗೆ ಅಪಪ್ರಚಾರ ಅಡ್ಡದಾರಿಗೆಳೆಯುವ ಅಪಾಯಕಾರಿ ಪ್ರಯತ್ನ

ಪ್ರಜಾಪ್ರಭುತ್ವ ವಿರೋಧಿಯಾಗಿರುವಷ್ಟೇ ಸಂವಿಧಾನವಿರೋಧಿಯೂ ಆಗಿರುವ ರೀತಿಯಲ್ಲಿ ಮೋದಿ ಸರ್ಕಾರವು ಅಧಿಕಾರವನ್ನು ಕೇಂದ್ರೀಕರಿಸಿಕೊಂಡಿದೆ. ಕಂತೆ ಕಂತೆ ಸುಳ್ಳುಗಳ ಮೇಲೆ ಕೇಂದ್ರೀಕರಣಗಳನ್ನು ಕೈಗೊಳ್ಳುತ್ತಿದೆ. ಸಮವರ್ತಿ ಪಟ್ಟಿಯ ವಿಷಯಗಳಲ್ಲದೆ ಈಗ ರಾಜ್ಯಪಟ್ಟಿಗೇ ಕೈಹಾಕುತ್ತಿದೆ. ಕಾರ್ಯಾಂಗವನ್ನು ಪ್ರಶ್ನಿಸಲಾಗದಷ್ಟು ಪುಕ್ಕಲುತನವನ್ನು ನ್ಯಾಯಾಂಗವು ತೋರುತ್ತಿರುವುದರಿಂದ ಸರ್ಕಾರವು ತನಗೆ ಬೇಕೆಂದಾಗ ಸಂವಿಧಾನವನ್ನು ಉಲ್ಲಂಘಿಸಿ ಮುಂದುವರೆಯುವ ಧೈರ್ಯ ಮಾಡುತ್ತಿದೆ. ಹಾಗಾಗಿ, ದೇಶವು ಈಗ ತನ್ನ ಸಂವಿಧಾನವು ಸಂಪೂರ್ಣವಾಗಿ ಬುಡಮೇಲಾಗುವ ಅಪಾಯಕಾರಿ ಹಂತದಲ್ಲಿದೆ. ಸನ್ನಿವೇಶದಲ್ಲಿ ರೈತರು ಒಡ್ಡುತ್ತಿರುವ ಸವಾಲು ನಮ್ಮ ಭವಿಷ್ಯದ ದೃಷ್ಟಿಯಿಂದ ಮಹತ್ವಪೂರ್ಣವಾದದ್ದು.

ಪ್ರೊ. ಪ್ರಭಾತ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್

ರೈತ ಕೃಷಿಯನ್ನು ಕಾರ್ಪೊರೇಟ್‌ಗಳ ಕಬಳಿಕೆಗೆ ತೆರೆದಿಟ್ಟಿರುವ ಮೂರು ಕುಖ್ಯಾತ ಕೃಷಿ ಕಾಯ್ದೆಗಳ ವಿರುದ್ಧ ನಡೆಯತ್ತಿರುವ ರೈತ ಹೋರಾಟವನ್ನು ವ್ಯವಸ್ಥಿತವಾಗಿ ದಾರಿ ತಪ್ಪಿಸುವ ಪ್ರಯತ್ನದ ಭಾಗವಾಗಿ, ಕೇವಲ ಒಂದೆರಡು ರಾಜ್ಯಗಳ ರೈತರಷ್ಟೇ ಈ ಮಸೂದೆಗಳನ್ನು ವಿರೋಧಿಸುತ್ತಿದ್ದಾರೆ, ಉಳಿದ ರಾಜ್ಯಗಳ ರೈತರು ಈ ಮಸೂದೆಗಳಿಂದ ಸಂತೋಷಗೊಂಡಿದ್ದಾರೆ ಎಂಬುದಾಗಿ ಕೇಂದ್ರ ಸರ್ಕಾರವು ಹೇಳುತ್ತಿದೆ. ಈ ಹೇಳಿಕೆಯು ಎಷ್ಟು ಸುಳ್ಳಿನಿಂದ ಕೂಡಿದೆ ಎಂಬುದಕ್ಕೆ ದೂರದ ಕೇರಳ ರಾಜ್ಯವು ತನ್ನ ವಿಧಾನ ಸಭೆಯ ಒಂದು ವಿಶೇಷ ಅಧಿವೇಶನದಲ್ಲಿ ಈ ಮಸೂದೆಗಳನ್ನು ವಿರೋಧಿಸುವ ಸರ್ವಾನುಮತದ ನಿರ್ಣಯ ಕೈಗೊಂಡಿರುವುದೇ ಸಾಕ್ಷಿ.

ಇದನ್ನು ಓದಿ : ಅನ್ನದಾತರ ಹೋರಾಟಕ್ಕೆ ಹೆಚ್ಚಿದ ಸೆಲೆಬ್ರಿಟಿಗಳ ಬೆಂಬಲ

ಜೊತೆಗೆ, ತಮಿಳು ನಾಡು, ಒಡಿಶಾ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಮತ್ತು ಉತ್ತರ ಪ್ರದೇಶ ರಾಜ್ಯಗಳ ರೈತರೂ ಸಹ ದೆಹಲಿಯ ಗಡಿ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ಯಾಂಪ್ ಮಾಡಿ ಹೋರಾಡುತ್ತಿರುವ ಪಂಜಾಬ್ ಮತ್ತು ಹರ್ಯಾಣದ ರೈತರ ಹೆಗಲಿಗೆ ಹೆಗಲು ಕೊಟ್ಟು ಹೋರಾಡುತ್ತಿದ್ದಾರೆ. ಹಾಗಾಗಿ. ಈ ಕೃಷಿ ಕಾಯ್ದೆಗಳ ವಿರುದ್ಧ ನಡೆಯತ್ತಿರುವ ಪ್ರತಿಭಟನೆಯು ಕೇವಲ ಒಂದೆರಡು ರಾಜ್ಯಗಳಿಗೆ ಮಾತ್ರ ಸೀಮಿತವಾಗಿದೆ ಎಂಬ ಹೇಳಿಕೆಯು ರೈತ ಚಳುವಳಿಯ ದಿಕ್ಕು ತಪ್ಪಿಸುವ ವ್ಯರ್ಥ ಪ್ರಯತ್ನವೇ ಸರಿ.

ಆದರೆ, ಈ ಪ್ರಕ್ರಿಯೆಯಲ್ಲಿ, ಕೆಲವು ರಾಜ್ಯಗಳ ರೈತರ ಹಿತಾಸಕ್ತಿಗೆ ವಿರುದ್ಧವಾಗಿ, ಈ ರಾಜ್ಯಗಳ ಸಂಖ್ಯೆಯು ಕಡಿಮೆ ಇರುವುದರಿಂದ, ತಾನೇ ಕಾನೂನುಗಳನ್ನು ರೂಪಿಸಿ ಅವುಗಳನ್ನು ಜಾರಿಗೆ ತರುವ ಕ್ರಮವು ನ್ಯಾಯಸಮ್ಮತವಾಗುತ್ತದೆ ಎಂಬ ಸೂಚ್ಯ ಪ್ರತಿಪಾದನೆಯನ್ನು ಕೇಂದ್ರ ಸರ್ಕಾರವು ಸಾರ್ವಜನಿಕರ ಅಂಗೀಕಾರಕ್ಕಾಗಿ ಸದ್ದಿಲ್ಲದೆ ಮಂಡಿಸಿದೆ. ಇದೊಂದು ಅಪಾಯಕಾರಿ ಪ್ರತಿಪಾದನೆ. ಕೇವಲ ಕೆಲವು ರಾಜ್ಯಗಳ ರೈತರು ಮಾತ್ರ ಈ ಕಾಯ್ದೆಯನ್ನು ವಿರೋಧಿಸುತ್ತಿರುವುದರಿಂದ ಈ ಚಳವಳಿಯು ನ್ಯಾಯಬದ್ಧವಲ್ಲ ಎಂದು ಪ್ರತಿಪಾದಿಸುವುದು ತಪ್ಪು ಮಾತ್ರವಲ್ಲ, ಅತ್ಯಂತ ಅಪಾಯಕಾರಿಯೂ ಆಗುತ್ತದೆ.

ಒಂದೆರಡು ರಾಜ್ಯಗಳ ರೈತರ ಪ್ರತಿಭಟನೆಯನ್ನು ಅಥವಾ ಅವರು ದೀರ್ಘ ಚಳುವಳಿಗಳಲ್ಲಿ ತೊಡಗುವುದನ್ನು ನ್ಯಾಯಬದ್ಧವಲ್ಲ ಎಂದು ಪ್ರತಿಪಾದಿಸುವುದು ಅತ್ಯಂತ ಅಪಾಯಕಾರಿ, ಏಕೆಂದರೆ, ಯಾವುದೇ ಒಂದು ರಾಜ್ಯದ ರೈತರ ಮೇಲೆ ತನ್ನ ಇಚ್ಛೆಯನ್ನು ಹೇರುವ ಅವಕಾಶವನ್ನು ಭಾರತದ ಸಂವಿಧಾನವು ಕೇಂದ್ರ ಸರ್ಕಾರಕ್ಕೆ ಕೊಟ್ಟಿಲ್ಲ. ಕೃಷಿ ವಿಷಯವು ರಾಜ್ಯಗಳ ಅಧಿಕಾರದ ವ್ಯಾಪ್ತಿಯಲ್ಲಿ ಬರುತ್ತದೆ ಎಂಬುದನ್ನು ಸಂವಿಧಾನದಲ್ಲಿ ಸ್ಪಷ್ಟಪಡಿಸಲಾಗಿದೆ. ವಾಸ್ತವವಾಗಿ, ಪರಿಸ್ಥಿತಿಗಳು ಪ್ರತಿ ರಾಜ್ಯದಲ್ಲೂ ಭಿನ್ನ ಭಿನ್ನವಾಗಿರುತ್ತವೆ. ಆದ್ದರಿಂದ, ಆಯಾ ರಾಜ್ಯದ ಜನರಿಗೆ ನೇರ ಉತ್ತರದಾಯಿತ್ವ ಮತ್ತು ರಾಜ್ಯದ ಸ್ಪಷ್ಟ ಪರಿಸ್ಥಿತಿಗಳ ಬಗ್ಗೆ ಅರಿವಿರುವ, ಆ ರಾಜ್ಯದ ರೈತರ ಬದುಕಿನ ಮೇಲೆ ಪರಿಣಾಮ ಬೀರುವ ವಿಷಯಗಳ ಮೇಲೆ ಶಾಸನ ಮಾಡುವ ಅಧಿಕಾರವನ್ನು ರಾಜ್ಯ ಶಾಸಕಾಂಗವು ಹೊಂದಿರುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ, ಕೃಷಿಯು, ಸಂವಿಧಾನದ ಏಳನೇ ಶೆಡ್ಯೂಲ್ ಅಡಿಯಲ್ಲಿ ರಾಜ್ಯಗಳಿಗೆ ಸಂಬಂಧಪಟ್ಟ ವಿಷಯವೆಂದು ಸ್ಪಷ್ಟವಾಗಿ ಉಲ್ಲೇಖಿತವಾಗಿರುವುದರಿಂದ, ಪ್ರತಿಯೊಂದು ರಾಜ್ಯದ ರೈತರೂ ತಮಗೆ ಇಷ್ಟಬಂದಂತಹ ರೀತಿಯ ಕೃಷಿ ವ್ಯವಸ್ಥೆಯನ್ನು ಶಾಸನಬದ್ಧಪಡಿಸಿಕೊಳ್ಳುವ ಸಾಂವಿಧಾನಿಕ ಹಕ್ಕನ್ನು ಹೊಂದಿರುತ್ತಾರೆ.

ಕೃಷಿ ವಿಷಯಗಳ ಬಗ್ಗೆ ಕಾನೂನು ರೂಪಿಸುವ ಹಕ್ಕು ಕೇಂದ್ರ ಸರ್ಕಾರಕ್ಕಿಲ್ಲ. ಒಂದು ವೇಳೆ ಕೇಂದ್ರ ಸರ್ಕಾರವು, ತನ್ನ ವಿವೇಚನೆಯ ಪ್ರಕಾರ, ಕಾರ್ಪೊರೇಟ್‌ಗಳಿಗೆ ಕೃಷಿ ವಲಯವನ್ನು ತೆರೆದಿಡುವ ಅವಕಾಶ ಕಲ್ಪಿಸಿಕೊಡಬೇಕು ಎಂದು ಬಯಸಿದಲ್ಲಿ, ಮೊದಲು ಅದು ಅಂಗೀಕರಿಸಿರುವ ಮೂರು ಕಾಯ್ದೆಗಳನ್ನು ರದ್ದುಪಡಿಸಬೇಕು. ನಂತರ, ಅದು ತನ್ನ ಅಭಿಪ್ರಾಯನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗುವಂತೆ ಮಾಡುವ ಶಾಸನವನ್ನು ರೂಪಿಸುವಂತೆ ರಾಜ್ಯಗಳಿಗೆ ಸಲಹೆ ನೀಡಬಹುದು. ಕೇಂದ್ರದ ಈ ಅಭಿಪ್ರಾಯದ ಬಗ್ಗೆ ಒಲವು ಹೊಂದಿರುವ ರಾಜ್ಯಗಳು ಇಂತಹ ಕಾಯ್ದೆಯನ್ನು ಜಾರಿಗೆ ತರಬಹುದು. ಈ ಅಭಿಪ್ರಾಯಕ್ಕೆ ವಿರೋಧವಾಗಿರುವ ರಾಜ್ಯಗಳು ಅದನ್ನು ಬಿಟ್ಟು ಬಿಡಬಹುದು. ಈ ರೀತಿಯಲ್ಲಿ ಅನೇಕ ವ್ಯವಸ್ಥೆಗಳು ಇರಬಹುದು. ಅಂದರೆ, ಸಂವಿಧಾನದ ಪ್ರಕಾರ ರಾಜ್ಯಗಳ ವ್ಯಾಪ್ತಿಗೆ ಸೇರಿದ ವಿಷಯದಲ್ಲಿ ಕೇಂದ್ರವು ಮೂಗು ತೂರಿಸುವಂತಿಲ್ಲ ಮತ್ತು ತನಗೆ ‘ಸರಿ’ ಎನಿಸಿದ ವ್ಯವಸ್ಥೆಯನ್ನು ಇದೇ ಸರಿಯಾದದ್ದು ಎಂದು ರಾಜ್ಯಗಳ ರೈತರ ಗಂಟಲಲ್ಲಿ ತುರುಕುವಂತಿಲ್ಲ. ಹಾಗೆ ನೋಡಿದರೆ, ಬಿಹಾರ ರಾಜ್ಯವು ಈಗಾಗಲೇ ಇತರ ರಾಜ್ಯಗಳಿಗಿಂತ ಭಿನ್ನವಾದ ಒಂದು ವ್ಯವಸ್ಥೆಯನ್ನು ಹೊಂದಿದೆ. ಆದ್ದರಿಂದ, ಅಸ್ತಿತ್ವದಲ್ಲಿರುವ ಕೃಷಿ ವ್ಯವಸ್ಥೆಯು ಅತೃಪ್ತಿಕರವೆಂದು ಕಂಡು ಬಂದರೆ, ಪ್ರತಿಯೊಂದು ರಾಜ್ಯವೂ ತನಗೆ ಸರಿಹೊಂದುವಂತಹ ವ್ಯವಸ್ಥೆಗನುಗುಣವಾಗಿ ಕಾನೂನು ರೂಪಿಸುವ ಸ್ವಾತಂತ್ರವನ್ನು ಹೊಂದಿದ್ದರೆ, ಅದು ನೈತಿಕವಾಗಿಯೂ ಮತ್ತು ಸಾಂವಿಧಾನಿಕವಾಗಿಯೂ ಸರಿಯಾದ ಕ್ರಮವಾಗುತ್ತದೆ.


ಆದರೆ, ಕೇಂದ್ರ ಸರ್ಕಾರಕ್ಕೆ ಈ ವಿಧಾನವನ್ನು ಅನುಸರಿಸುವ ಧೈರ್ಯವಿಲ್ಲ. ಕಾರ್ಪೊರೇಟ್‌ಗಳು ರೈತ ಕೃಷಿಯನ್ನು ನುಂಗುವ ಅವಕಾಶ ಕಲ್ಪಿಸುವ ಕಾಯ್ದೆಯನ್ನು ಕೇಂದ್ರವೇ ಏಕೆ ಜಾರಿಗೆ ತಂದಿತು ಎಂದರೆ, ಸಂವಿಧಾನಾತ್ಮಕವಾಗಿ ಈ ವಿಷಯವನ್ನು ರಾಜ್ಯಗಳ ವಿವೇಚನೆಗೆ ಬಿಟ್ಟರೆ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿಯೂ ಸಹ ಇಂತಹ ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂಬ ಭಯ ಮೋದಿ ಸರ್ಕಾರವನ್ನು ಕಾಡುತ್ತಿತ್ತು. ಆದ್ದರಿಂದ, ಕೇಂದ್ರ ಸರ್ಕಾರವೇ ಈ ಕಾಯ್ದೆಗಳನ್ನು ಜಾರಿಗೊಳಿಸಿತು. ಎರಡು ಕಾರಣಗಳಿಗಾಗಿ ಈ ಕಾಯ್ದೆಗಳು ಉಂಟುಮಾಡುವ ಪ್ರತಿಕೂಲ ಪರಿಣಾಮಗಳನ್ನು ನಿಭಾಯಿಸಲು ತಾನು ಉತ್ತಮ ಸ್ಥಿತಿಯಲ್ಲಿರುವುದಾಗಿ ಅದು ನಂಬುತ್ತದೆ: ಮೊದಲನೆಯದಾಗಿ, ಬಹುತೇಕ ರಾಜ್ಯಗಳ ಒಂದೊಂದು ಬಿಡಿ ರಾಜ್ಯದ ರೈತರ ಸಂಖ್ಯೆಯು ದೇಶದ ಜನಸಂಖ್ಯೆಯ ಬಹುಪಾಲಿಗಿಂತ ಬಹಳ ಕಡಿಮೆ ಪ್ರಮಾಣದಲ್ಲಿದೆ. ಎರಡನೆಯದಾಗಿ, ಅದರ ಕೋಮು ಪ್ರವೃತ್ತಿ-ಸ್ವರೂಪವನ್ನು ಗಮನಿಸಿದರೆ, ಅದು ಸರಿಯಾದ ಸಮಯದಲ್ಲಿ ಒಂದು ಸರಿಯಾದ ಘಟನೆಯನ್ನು ಹುಟ್ಟಿಹಾಕಬಹುದು ಮತ್ತು ತನ್ನ ರೈತ ವಿರೋಧಿ ನಿಲುವನ್ನು ಹಿನ್ನೆಲೆಗೆ ಸರಿಸಿ ಕೋಮು ಧ್ರುವೀಕರಣದ ಮೂಲಕ ಚುನಾವಣೆಗಳನ್ನು ಗೆಲ್ಲಬಹುದು ಎಂದು ನಂಬುತ್ತದೆ.

ಇದನ್ನು ಓದಿ : ರೈತ ಪ್ರತಿಭಟನೆಗಳ ಮೇಲೆ ದಿಲ್ಲಿ ಪೋಲೀಸ್ ರ ಅಮಾನವೀಯ ಮುತ್ತಿಗೆ

ಈ ಕಾಯ್ದೆಗಳನ್ನು ರೂಪಿಸಿ ಜಾರಿಗೊಳಿಸುವ ಪ್ರತಿಯೊಂದು ರಾಜ್ಯವೂ “ಸರಿಯಾದ ಸಮಯದಲ್ಲಿ” ಸರಿಯಾದ ಘಟನೆಯನ್ನು ಹುಟ್ಟಿಹಾಕುವುದು ಹೆಚ್ಚು ಕಠಿಣವೂ ಮತ್ತು ಉಂಟಾಗುವ ಪರಿಣಾಮಗಳು ಅನಿಶ್ಚಿತವೂ ಆಗಿರುತ್ತವೆ. ಅಲ್ಲದೆ, ವಿದೇಶಾಂಗ ವ್ಯವಹಾರ ಮತ್ತು ರಕ್ಷಣಾ ಇಲಾಖೆಗಳು ತನ್ನ ವ್ಯಾಪ್ತಿಯಲ್ಲೇ ಇರುವುದರಿಂದ ಇಂತಹ ‘ಸರಿಯಾದ’ ಘಟನೆಗಳನ್ನು ಸೃಷ್ಟಿಸುವ ಅಥವಾ ಅವುಗಳನ್ನು ಬಳಸಿಕೊಳ್ಳುವ ಅವಕಾಶಗಳು ಕೇಂದ್ರ ಸರ್ಕಾರಕ್ಕೆ ವಿಪುಲವಾಗಿವೆ.

ತನ್ನ ಕಾರ್ಪೊರೇಟ್-ಪರ ಮತ್ತು ಸಾಮ್ರಾಜ್ಯಶಾಹಿ-ಪರ ಕಾರ್ಯಸೂಚಿಯನ್ನು (ಭಾರತವು ಆಹಾರ ಧಾನ್ಯಗಳನ್ನು ಬೆಳೆಯುವುದರ ಬದಲಾಗಿ ಹಣ್ಣು ಹಂಪಲುಗಳನ್ನು ಬೆಳೆದು ಅವುಗಳನ್ನು ಸಾಮ್ರಾಜ್ಯಶಾಹಿ ದೇಶಗಳಿಗೆ ರಫ್ತುಮಾಡಿ, ಅವರಿಂದ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳಬೇಕೆಂಬುದು ಅಮೆರಿಕ ಮತ್ತು ಯುರೋಪಿನ ಒಕ್ಕೂಟಗಳ ಬಹು ದಿನಗಳ ಬೇಡಿಕೆ) ಜಾರಿಗೆ ತರುವ ಪ್ರಕ್ರಿಯೆಯಲ್ಲಿ, ಪ್ರಜಾಪ್ರಭುತ್ವ ವಿರೋಧಿಯಾಗಿರುವಷ್ಟೇ ಸಂವಿಧಾನ-ವಿರೋಧಿಯೂ ಆಗಿರುವ ರೀತಿಯಲ್ಲಿ ಮೋದಿ ಸರ್ಕಾರವು ಅಧಿಕಾರವನ್ನು ಕೇಂದ್ರೀಕರಿಸಿಕೊಂಡಿದೆ. ರಾಜ್ಯಗಳು ಹುಸಿ ಭರವಸೆಗಳನ್ನು ನಂಬುವಂತೆ ಅವರ ತಲೆ ಸವರಿ, ಆರ್ಥಿಕ ಸಂಪನ್ಮೂಲಗಳನ್ನು ಕೇಂದ್ರೀಕೃತಗೊಳಿಸಿದ ಸರಕು ಮತ್ತು ಸೇವೆಗಳ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತಂದಿತು. ಶಿಕ್ಷಣವು ಸಂವಿಧಾನದ ಪ್ರಕಾರ ಸಮವರ್ತಿ ಪಟ್ಟಿಯಲ್ಲಿದ್ದರೂ ಸಹ, ರಾಜ್ಯಗಳೊಂದಿಗೆ ಯಾವುದೇ ಸಮಾಲೋಚನೆಯನ್ನೂ ಮಾಡದೆ, ಮೋದಿ ಸರ್ಕಾರವು ಏಕಪಕ್ಷೀಯವಾಗಿ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿತು. ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ 370 ಮತ್ತು 35 ಎ ವಿಧಿಗಳನ್ನು ಆ ರಾಜ್ಯದ ಶಾಸಕಾಂಗದೊಂದಿಗೆ ಯಾವುದೇ ಸಮಾಲೋಚನೆಯನ್ನೂ ಮಾಡದೆ (ಈ ಅನುಚ್ಛೇದಗಳಿಗೆ ಸಂಬಂಧಿಸಿದ ಸಾಂವಿಧಾನಿಕ ಏರ್ಪಾಟನ್ನು ರದ್ದುಮಾಡಲು ರಾಜ್ಯ ಶಾಸಕಾಂಗದ ಅನುಮತಿಯಷ್ಟೇ ಸಾಕಾಗುವುದಿಲ್ಲ), ರದ್ದುಗೊಳಿಸಿತು. ಈಗ ಅದು, ಸಮವರ್ತಿ ಪಟ್ಟಿಯಲ್ಲಿಯೂ ಇಲ್ಲದ, ಆದರೆ, ರಾಜ್ಯಗಳಿಗೆ ಮಾತ್ರ ಅಧಿಕಾರವಿದೆ ಎಂಬ ವಿಷಯಗಳ ಪಟ್ಟಿಯಲ್ಲಿರುವ ಮತ್ತು ದೇಶದ ಕೃಷಿ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳನ್ನು ತರುವ ವಿಷಯಕ್ಕೆ ಕೈ ಹಾಕಿದೆ. ಸಂಪನ್ಮೂಲಗಳನ್ನು ಮತ್ತು ಅಧಿಕಾರವನ್ನು ಈ ರೀತಿಯಲ್ಲಿ ಕೇಂದ್ರೀಕರಣಗೊಳಿಸುವ ಕ್ರಮಗಳಿಂದ ದೇಶದ ಪ್ರಜಾಪ್ರಭುತ್ವವು ಬರಡಾಗುತ್ತದೆ.


ಕಂತೆ ಕಂತೆ ಸುಳ್ಳುಗಳ ಮೇಲೆ ಕೇಂದ್ರೀಕರಣಗಳನ್ನು ಕೈಗೊಳ್ಳಲಾಗಿದೆ. ಜಿಎಸ್‌ಟಿ ವ್ಯವಸ್ಥೆಗೆ ಹೊರಳುವ ಸಂದರ್ಭದಲ್ಲಿ ರಾಜ್ಯಗಳಿಗೆ ಉಂಟಾಗುವ ನಷ್ಟವನ್ನು ತುಂಬಿಕೊಡುವುದಾಗಿ ಕೊಟ್ಟ ಭರವಸೆಯು ಸುಳ್ಳಾಗಿರುವುದನ್ನು ನಾವು ಈಗಾಗಲೇ ನೋಡಿದ್ದೇವೆ. ಮೂರು ಹೊಸ ಕೃಷಿ ಕಾಯ್ದೆಗಳ ಪೈಕಿ ಒಂದು ಮಸೂದೆಯ ಬಗ್ಗೆ ನಲ್ಲಿ ಚರ್ಚೆ ನಡೆದ ಸಂದರ್ಭದಲ್ಲಿ ಸರ್ಕಾರವು ಪ್ರಸ್ತಾಪಿಸಿದ ಒಂದು ವರದಿಯು ಅಸಲಿಗೆ ಅಸ್ತಿತ್ವದಲ್ಲೇ ಇರಲಿಲ್ಲ ಎಂಬ ಸತ್ಯ ಈಗ ಹೊರಬಂದಿದೆ. ಸರ್ಕಾರದ ಹೇಳಿಕೆಯ ಪ್ರಕಾರ, ನೀತಿ ಆಯೋಗದ ಸದಸ್ಯರು ಮತ್ತು ಹಲವು ಮುಖ್ಯಮಂತ್ರಿಗಳನ್ನೊಳಗೊಂಡ ಒಂದು ಸಮಿತಿಯು, ಖಾಸಗಿ ವ್ಯಾಪಾರಿಗಳು ಅಗತ್ಯ ವಸ್ತುಗಳ ದಾಸ್ತಾನನ್ನು ಇಟ್ಟುಕೊಳ್ಳಬಹುದಾದ ಮಿತಿಯ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವಂತೆ ಶಿಫಾರಸು ಮಾಡಿತ್ತು. ಆದರೆ, ಈ ಅಂಶವೇ ಸುಳ್ಳು ಮತ್ತು ಆ ವರದಿಯೇ ಒಂದು ಹಸಿ ಸುಳ್ಳು ಎಂಬುದು ಈಗ ಬಯಲಾಗಿದೆ. ಈ ಸಂಬಂಧವಾಗಿ, ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಕೇಳಲಾದ ಒಂದು ಪ್ರಶ್ನೆಗೆ, ನೀತಿ ಆಯೋಗವು, ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವ ಸಭೆಯೂ ನಡೆದಿಲ್ಲ ಮತ್ತು ಇಂತಹ ಯಾವುದೇ ವರದಿಯನ್ನೂ ಅನುಮೋದಿಸಿಲ್ಲ ಎಂಬುದಾಗಿ ಉತ್ತರ ಕೊಟ್ಟಿದೆ. ವಾಸ್ತವವಾಗಿ, ಇಂತಹ ಒಂದು ವರದಿಯು ಇರಲೇ ಇಲ್ಲ.

 

 

 

 

ಮೇಲಾಗಿ, ಖಾಸಗಿ ವ್ಯಾಪಾರಿಗಳು ಅಗತ್ಯ ವಸ್ತಗಳ ದಾಸ್ತಾನನ್ನು ಇಟ್ಟುಕೊಳ್ಳಬಹುದಾದ ಮಿತಿಯನ್ನು ನಿರ್ಧರಿಸುವ ವಿಶೇಷ ಹಕ್ಕು ರಾಜ್ಯ ಸರ್ಕಾರಗಳಿಗೆ ಮಾತ್ರ ಇದೆ. ರಾಜ್ಯಗಳು ಹೊಂದಿರುವ ಈ ವಿಶೇಷ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ ಮಾತ್ರವಲ್ಲ, ಧಾನ್ಯಗಳ ಕೊರತೆ ಉಂಟಾದ ಸಂದರ್ಭದಲ್ಲಿ, ಪರಿಸ್ಥಿತಿಯ ದುರ್ಲಾಭ ಪಡೆಯಲು ಕಾಳಸಂತೆಕೋರ ವ್ಯಾಪಾರಿಗಳಿಗೆ ಹೇಳಿಕೊಟ್ಟಂತಾಗಿದೆ.
ಈ ರೀತಿ ಮೋಸದಿಂದಲೇ ನಡೆಯತ್ತಿರುವ ಇಂತಹ ಕೇಂದ್ರೀಕರಣದ ಪ್ರಕ್ರಿಯೆಗೆ ಈಗ ಮತ್ತೊಂದು ಅಪಾಯಕಾರಿ ಆಯಾಮ ದೊರೆತಿದೆ. ಸಂವಿಧಾನವು ರಾಜ್ಯಗಳಿಗೆ ವಹಿಸಿರುವ ಪಾತ್ರವನ್ನು ಕೇಂದ್ರ ಸರ್ಕಾರವು ಕಿತ್ತುಕೊಳ್ಳುತ್ತಿದೆ ಮಾತ್ರವಲ್ಲ, ಇನ್ನೂ ಅಧಿಕವಾಗಿ, ರಾಜ್ಯಗಳು ಹೊಂದಿರುವ ಶಾಸನ ರಚಿಸುವ ಹಕ್ಕನ್ನು ಕಿತ್ತುಕೊಂಡು ರಾಜ್ಯಗಳ ಆಶೋತ್ತರಗಳಿಗೆ ವಿರುದ್ಧವಾದ ರೀತಿಯಲ್ಲಿ ಕೇಂದ್ರ ಸರ್ಕಾರವು ವರ್ತಿಸುತ್ತಿದೆ. ಕೆಲವೇ ಕೆಲವು ರಾಜ್ಯಗಳು ಮಾತ್ರ ಇಂತಹ ಕಾನೂನುಗಳನ್ನು ವಿರೋಧಿಸುವುದು ತನಗೆ ಒದಗಿದ ಒಂದು ಭಾಗ್ಯವೆಂದೇ ಅದು ಬೀಗುತ್ತದೆ.

ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸಿ ತನ್ನ ಅಧಿಕಾರವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಸಂವಿಧಾನದಲ್ಲಿ ತಿದ್ದುಪಡಿ ತರುವುದು ಬಿಜೆಪಿ ಸರ್ಕಾರಕ್ಕೆ ಅವಶ್ಯವಲ್ಲ. ತನಗೆ ಬೇಕೆಂದಾಗ ಅದು ಸಂವಿಧಾನವನ್ನು ಉಲ್ಲಂಘಿಸುತ್ತದೆ. ಕಾರ್ಯಾಂಗವನ್ನು ಪ್ರಶ್ನಿಸಲಾಗದಷ್ಟು ಪುಕ್ಕಲುತನವನ್ನು ನ್ಯಾಯಾಂಗವು ತೋರುತ್ತಿರುವುದರಿಂದ ಸರ್ಕಾರವು ಸಂವಿಧಾನವನ್ನು ಉಲ್ಲಂಘಿಸಿ ಮುಂದೆ ಹೋಗುವ ಧೈರ್ಯ ಮಾಡುತ್ತಿದೆ. ಹಾಗಾಗಿ, ದೇಶವು ಈಗ ತನ್ನ ಸಂವಿಧಾನವು ಸಂಪೂರ್ಣವಾಗಿ ಬುಡಮೇಲಾಗುವ ಅಪಾಯಕಾರಿ ಹಂತದಲ್ಲಿದೆ. ಈ ಸನ್ನಿವೇಶದಲ್ಲಿ ರೈತರು ಒಡ್ಡುತ್ತಿರುವ ಸವಾಲು ನಮ್ಮ ಭವಿಷ್ಯದ ದೃಷ್ಟಿಯಿಂದ ಮಹತ್ವಪೂರ್ಣವಾದದ್ದು.

 

Donate Janashakthi Media

Leave a Reply

Your email address will not be published. Required fields are marked *