ನವದೆಹಲಿ, ಜ 01 : ಕೇಂದ್ರ ಸರ್ಕಾರ ಇತ್ತೀಚೆಗೆ ತಂದಿರುವ ರೈತ ವಿರೋಧಿ ಮೂರು ಕೃಷಿ ಕಾನೂನುಗಳನ್ನು ರದ್ದು ಮಾಡಬೇಕೆಂದು ಆಗ್ರಹಿಸಿ ಕಳೆದ ನವೆಂಬರ್ 26ರಿಂದ ದೆಹಲಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 37ನೇ ದಿನಕ್ಕೆ ಕಾಲಿಟ್ಟಿದೆ. ಈಗಾಗಲೇ ರೈತ ಸಂಘಟನೆಗಳ ಪ್ರತಿನಿಧಿಗಳು ಮತ್ತು ಸರ್ಕಾರದ ನಡುವೆ 6 ಸಭೆಗಳಾಗಿದ್ದು 6 ಸಭೆಗಳೂ ವಿಫಲವಾಗಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಒಮ್ಮೆ ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಅನೌಪಚಾರಿಕ ಮಾತುಕತೆ ನಡೆಸಿದ್ದರು. ಅವರು ಕೂಡ ರೈತರ ವಿಶ್ವಾಸ ಗಳಿಸಲು ವಿಫಲರಾಗಿದ್ದರು. ಮಾತುಕತೆಗಳು ವಿಫಲವಾದದ್ದರಿಂದ ದೆಹಲಿ ಗಡಿಗಳಲ್ಲಿ ರೈತರು ಅನಿರ್ದಿಷ್ಟಾವಧಿ ಪ್ರತಿಭಟನೆ ಮುಂದುವರೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ (ಜನವರಿ 4) 7ನೇ ಸುತ್ತಿನ ಸಭೆ ಕರೆಯಲಾಗಿದೆ.
ಪಂಜಾಬ್ ಮತ್ತು ಹರ್ಯಾಣದ 1000 ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯರ್ತೆಯರು, ಮಧ್ಯಾಹ್ನದ ಬಿಸಿಯೂಟದ ಕಾರ್ಯಕರ್ತೆಯರು ಸಿಂಘು ಗಡಿ ತಲುಪಿದ್ದಾರೆ. ಇಂದು 11.30 ರಿಂದ ಗಡಿಯಲ್ಲಿ ತಮ್ಮ ಸಮವಸ್ತ್ರದಲ್ಲೇ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ದೆಹಲಿ ಹೋರಾಟದಲ್ಲಿ ಪಾಲ್ಗೊಳ್ಳಲು ರೈತರು ದಿನನಿತ್ಯ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜಮಾವಣೆಗೊಳ್ಳುತ್ತಿದ್ದಾರೆ. ದೆಹಲಿ ರೈತರ ಹೋರಾಟವನ್ನು ಬೆಂಬಲಿಸಿ ಇಂದು ಸಿಐಟಿಯು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿತ್ತು. ಕರ್ನಾಟಕದಲ್ಲಿ ಸಿಐಟಿಯುನಿಂದ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದ್ದು ಅನೇಕ ಕಡೆಗಳಲ್ಲಿ ಹೋರಾಟ ನಡೆದಿದೆ.